spot_img
Wednesday, January 8, 2025
spot_imgspot_img
spot_img
spot_img

ಕಸದಿಂದ ರಸ: ಇಲ್ಲಿದೆ ಜೋಳದ ಸಿಪ್ಪೆಯಿಂದ ದೊನ್ನೆ ತಯಾರಿ ಯಂತ್ರ: ವಿದ್ಯಾರ್ಥಿಯಿಂದ ಗಮನ ಸೆಳೆಯೋ ಸಾಧನೆ

ರಾಧಾಕೃಷ್ಣ ತೊಡಿಕಾನ

ಅಡಿಕೆ ತೋಟಗಳಲ್ಲಿ ತ್ಯಾಜ್ಯವಾಗಬಹುದಾದ ಹಾಳೆಗಳಿಂದ ಊಟದ ಬಟ್ಟಲುಗಳಾಗುತ್ತವೆ. ತಿಂಡಿ ತಿನಿಸುಗಳ ತಟ್ಟೆಗಳಾಗುತ್ತಿದೆ. ಮೆಕ್ಕೆಜೋಳದ ಸಿಪ್ಪೆಯಿಂದಲೂ ಆಕರ್ಷಕವಾದ ತಟ್ಟೆ, ದೊನ್ನೆ, ಗ್ಲಾಸುಗಳು  ಮಾರುಕಟ್ಟೆ ಗೆ ಬರಬಹುದು.

ಮೂಡಬಿದಿರೆಯ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಕೃಷಿ ತಂತ್ರಜ್ಞಾನ ವಿಭಾಗದ ಅಂತಿಮ ಪದವಿಯ ವಿದ್ಯಾರ್ಥಿ ಚಂದನ್ ಬಿ.ಎಮ್. ಅವರು ಜೋಳದ ಸಿಪ್ಪೆಯನ್ನೇ ಬಳಸಿ ದೊನ್ನೆ ತಯಾರಿಸಬಹುದಾದ ಯಂತ್ರವನ್ನು ಅಭಿವೃದ್ಧಿಪಡಿಸಿದ್ದಾರೆ ಅಡಿಕೆ ಹಾಳೆ ತಟ್ಟೆ, ಕಾಗದದ ತಟ್ಟೆ ಯಂತ್ರದ ಮಾದರಿಯನ್ನು  ಆಧರಿಸಿ ಅದರಲ್ಲಿ  ಸುಧಾರಣೆ ಮಾಡಿ ಜೋಳದ ಸಿಪ್ಪೆಯಿಂದ ದೊನ್ನೆಗಳ ತಯಾರಿಕೆಗೆ ಅನುಕೂಲವಾಗುವಂತೆ ಯಂತ್ರವನ್ನು ರೂಪಿಸಿದ್ದಾರೆ.

ಜೋಳದ ಸಿಪ್ಪೆ: ತ್ಯಾಜ್ಯದಿಂದ ಉಪಯುಕ್ತ ಉತ್ಪನ್ನ

ಮೆಕ್ಕೆ ಜೋಳ, ಮುಸುಕಿನ ಜೋಳ, ಗೋವಿನ ಜೋಳ ಎಂದು ಕರೆಯುವ ಕೊಳ್ಳುವ ಜೋಳ ಸಿರಿಧಾನ್ಯಗಳಲ್ಲಿ ಒಂದು. ಜನಸಾಮಾನ್ಯರ ಆಹಾರ ಧಾನ್ಯ. ಜೋಳವನ್ನು ಸಂಸ್ಕರಣೆ ಮಾಡುವ ಸಂದರ್ಭದಲ್ಲಿ ಅದರ ಮೇಲಿನ ಸಿಪ್ಪೆಯನ್ನು  ಹೊಲಗದ್ದೆ ಅಥವಾ  ರಸ್ತೆ ಬದಿಗಳಲ್ಲಿ ರಾಶಿ ಹಾಕಲಾಗುತ್ತದೆ. ಸಿಪ್ಪೆ ಬಹುತೇಕ ತ್ಯಾಜ್ಯವಾಗುತ್ತದೆ. ಜಾನುವಾರು ಸಾಕಾಣೆ ಇರುವವರು ಪಶು ಆಹಾರವಾಗಿ ಇದನ್ನು ಬಳಸುತ್ತಾರೆ. ಬಹುತೇಕ ಕಡೆಗಳಲ್ಲಿ ಈ ತ್ಯಾಜ್ಯವನ್ನು  ಬೆಂಕಿ ಹಚ್ಚಿ ಸುಡಲಾಗುತ್ತದೆ.

ಪ್ರತೀ ವರ್ಷ ಸುಮಾರು ೧೨ -೧೪ ಮಿಲಿಯನ್ ಟನ್ ಜೋಳದ  ಸಿಪ್ಪೆ   ಸುಟ್ಟು ಬೂದಿಯಾಗುತ್ತದೆ. ಜೊತೆಗೆ  ಪರಿಸರ ಮಾಲಿನ್ಯವು  ಉಂಟಾಗುಗುತ್ತದೆ. ಅಡಿಕೆ ಹಾಳೆ, ಕಾಗದದ ತಟ್ಟೆ ತಯಾರಿಸಿದಂತೆ ಜೋಳದ ಸಿಪ್ಪೆಯಿಂದಲೂ ತಟ್ಟೆ, ದೊನ್ನೆ ತಯಾರಿಸಲು ಸಾಧ್ಯವಾದರೆ ತ್ಯಾಜ್ಯವೆಂದು ಕಡೆಗಣಿಸುವ ಸಿಪ್ಪೆಗೂ ಮೌಲ್ಯ ಬರುತ್ತದೆ. ಈ ಹಿನ್ನಲೆಯಲ್ಲಿ ಹಾಳೆ ತಟ್ಟೆ ತಯಾರಿಕೆಯನ್ನು   ಮಾದರಿಯನ್ನಾಗಿಸಿರಿಸಿಕೊಂಡು  ಜೋಳದ ಸಿಪ್ಪೆಯನ್ನು ಪರಿಇಸರ ಸ್ನೇಹಿ ತಟ್ಟೆ ಹಾಗೂ ಕಪ್‌ಗಳನ್ನಾಗಿ ಪರಿವರ್ತಿಸಿಸುವುದೇ ಚಂದನ್ ಅವರ ಅವಿಷ್ಕಾರ.

ಕೃಷಿ ತಂತ್ರಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ. ಕೆ.ವಿ. ಸುರೇಶ್ ಆಚಾರ್ಯ ಮತ್ತು ಕೃಷಿ ವಿಜ್ಞಾನ ವಿಭಾಗದ ವಿನುತಾ ಎಂ. ಬೆಟ್ಟಗೇರಿ ಅವರ ಮಾರ್ಗದರ್ಶನದಲ್ಲಿ ಜೋಳದ ಕಪ್ ತಯಾರಿಗೆ  ಪೂರಕವಾಗುವಂತೆ ಯಂತ್ರವನ್ನು ಅಭಿವೃದ್ಧಿಪಡಿಸಿದರು.

ಯಂತ್ರದ ವೈಶಿಷ್ಟ್ಯತೆಗಳು:

ಈ ಯಂತ್ರದ ತಯಾರಿಕೆಯಲ್ಲಿ ಆಧುನಿಕ ತಂತ್ರಜ್ಞಾನವನ್ನೇ ಬಳಸಿಕೊಳ್ಳಲಾಗಿದೆ. ನ್ಯೂಮೆಟಿಕ್ ಸಿಸ್ಟಮ್ ಅಳವಡಿಸಲಾಗಿದೆ.. ಗಾಳಿಯ ಒತ್ತಡದಿಂದ ಡೈ ಮೇಲೆ ಕೆಳಗೆ  ಚಲನೆಯಾಗುತ್ತದೆ. ಈ ಯಂತ್ರದಲ್ಲಿ ಹೀಟಿಂಗ್ ಕಾಯಿಲ್ ಬಳಸಲಾಗಿದ್ದು 60-70 ಡಿಗ್ರಿ ಸೆಲ್ಸಿಯಸ್  ತಾಪಮಾನದಲ್ಲಿ ಜೋಳದ ಸಿಪ್ಪೆ ತಟ್ಟೆ, ಕಪ್‌ಗಳಾಗಿ ರೂಪಾಂತರಗೊಳ್ಳುತ್ತದೆ.

ವಿದ್ಯುತ್ ಚಾಲಿತ ಅಥವಾ ಮಾನವ ಚಾಲಿತ ಹಾಳೆ ತಟ್ಟೆ ಯಂತ್ರಕ್ಕಿಂತ ಶೇ.5೦ರಷ್ಟು ಕಡಿಮೆ ವೆಚ್ಚದಲ್ಲಿ ಬಳಸಿಕೊಳ್ಳಬಹುದು.  30-40  ಸೆಕೆಂಡಿಗೆ ಒಂದು ತಟ್ಟೆ ಅಥವಾ ದೊನ್ನೆ ತಯಾರಿಸಬಹುದು.  ತಟ್ಟೆ, ಬಟ್ಟಲು ಗಾತ್ರ ಅನುಕೂಲಕ್ಕೆ ತಕ್ಕಂತೆ ಹೆಚ್ಚಿಸಿಕೊಳ್ಳಬೇಕಾದರೆ ಡೈಯನ್ನು ಬದಲಾಯಿಸಿಕೊಳ್ಳಬಹುದು. ತಯಾರಾದ ಉತ್ಪನ್ನಗಳನ್ನು ಸೂರ್ಯನ ಬೆಳಕಿನಲ್ಲಿ ಒಣಗಿಸಿದರೆ ಆಯ್ತು. ಬಳಕೆಗೆ ಸಿದ್ಧ.

ಸ್ಥಳಾಂತರಕ್ಕೆ ಸುಲಭ

ಈ ಯಂತ್ರವನ್ನು ಎಲ್ಲಿ ಬೇಕಾದರೂ ಕೊಂಡೊಯ್ಯಬಹುದು. ಸ್ಥಳಾಂತರಕ್ಕೆ ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಮತ್ತು ಸ್ಥಳದಲ್ಲಿ ಕೆಲಸ ಮಾಡಬಹುದು. ಆಧಾರ ಸ್ತಂಭಗಳಿಲ್ಲದೆಯೂ ಬಳಸಬಹುದು. ವಿದ್ಯುತ್ ಇರುವ ಸ್ಥಳದಲ್ಲಿ 230 ವೋಲ್ಟ್ ವಿದ್ಯುತ್ ಮೂಲಕ ಅಥವಾ ವಿದ್ಯುತ್ ಇಲ್ಲದ ಪ್ರದೇಶದಲ್ಲಿ 12 ವೋಲ್ಟಿನ ಬ್ಯಾಟರಿಯಿಂದ ಕಾರ್ಯ ನಿರ್ವಹಿಸಬಹುದು. ಯಂತ್ರದ ಬೆಲೆ 3,500 ರೂಪಾಯಿ.

ಈ ಯಂತ್ರವು ಗ್ರಾಮೀಣ ಮಹಿಳೆಯರ ಸ್ವ ಉದ್ಯೋಗ ಮತ್ತು ಆರ್ಥಿಕ ಸಬಲೀಕರಣಕ್ಕೆ ಸಹಕಾರಿ.  ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವ ದಾರಿ ತೋರಲಿದೆ. ಪರಿಸರ ಮಾಲಿನ್ಯ ತಡೆ ಅನುಕೂಲವಾಗಲಿದೆ. ಎನ್ನುತ್ತಾರೆ ಈ ಯಂತ್ರವನ್ನು ಅಭಿವೃದ್ಧಿಪಡಿಸಿದ  ಚಂದನ್

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group