spot_img
Saturday, July 27, 2024
spot_imgspot_img
spot_img
spot_img

ಕಾಂಪೋಸ್ಟ್ ಬಗ್ಗೆ ನೀವು ತಿಳಿದುಕೊಳ್ಳಲೇಬೇಕಾದ ಒಂದಷ್ಟು ವಿಷಯಗಳಿವು!

ಬರಹ: ಎಂ.ಟಿ. ಶಾಂತಿಮೂಲೆ ಪೈಲಾರ್

ಸ್ನೇಹಿತರು ಹೇಳುವಂತೆ ಕೃಷಿ ಒಂದು ತಪಸ್ಸು. ರೈತ ಪರಾವಲಂಬಿಯಾದರೆ ಅವನ ಬದುಕೇ ಅನ್ಯರನ್ನು ಖುಷಿ ಪಡಿಸುವುದಕ್ಕೆ ಸೀಮಿತ. ವ್ಯಾಪಾರಿಗಳು ಶ್ರೀಮಂತರಾಗುತ್ತಾರೆ. ರೈತ ನಿತ್ಯಗೊಬ್ಬರಕ್ಕೆ, ಕೀಟನಾಶಕಗಳಿಗೆ ಅಲೆಯುವುದರಲ್ಲೇ ಅರ್ಧ ಆಯುಷ್ಯ ವಾಗಿರುತ್ತದೆ. ಕೃಷಿಕ ಅರಿತು ಕೃಷಿ ಮಾಡಬೇಕು. ಆತ ಸ್ವಾವಲಂಬಿಯಾಗಿ ತಾನು ತನ್ನವರನ್ನು ಪೋಷಿಸುವ ವ್ಯಕ್ತಿಯಾಗಬೇಕು. ಕೃಷಿಕನಿಗೆ ಬೇಕಾದ್ದೆಲ್ಲವೂ ಕಾಲಬುಡದಲ್ಲೇ ಇದೆ. ಯಾವುದಕ್ಕೂ ಅಂಗಡಿಗೆ ಅಲೆಯಬೇಕಿಲ್ಲ. ತನಗೆ ಬೇಕಾದ ಗೊಬ್ಬರ ತಾನೇ ತಯಾರಿಸಬೇಕು. ಕೀಟ ನಿಯಂತ್ರಣ ತಾನೇ ಮಾಡಬೇಕು. ಈ ನಿಟ್ಟಿನಲ್ಲಿ ಈ ಲೇಖನದಲ್ಲಿ ಕಾಂಪೋಸ್ಟ್ ಗೊಬ್ಬರದ ಬಗ್ಗೆ ಒಂದಿಷ್ಟು ಬೆಳಕು ಚೆಲ್ಲುತ್ತೇನೆ

ನಮ್ಮ ಪರಿಸರದಲ್ಲಿ ಸಾಕಷ್ಟು ಹಸಿರೆಲೆ, ಒಣ ಎಲೆ, ಕಳೆ ಹುಲ್ಲು ಮುಂತಾದವು ಇದ್ದೇ ಇವೆ. ಅವುಗಳನ್ನು ಸಂಗ್ರಹಿಸಿದರೆ ಗೊಬ್ಬರಕ್ಕೆ ಮೂಲ ದ್ರವ್ಯ ಸಿಕ್ಕಿದಂತೆಯೇ. ನೆರಳಿನಲ್ಲಿರುವ ಜಾಗದಲ್ಲೇ ಕಾಂಪೋಸ್ಟ್ ತಯಾರಿಸಬೇಕು. ಕಾಂಪೋಸ್ಟ್ ತಯಾರಿಸುವ ಜಾಗಕ್ಕೆ ನೀರು ಪೂರೈಸುವ ವ್ಯವಸ್ಥೆ ಅತೀ ಅಗತ್ಯ. ಬೇಸಿಗೆಯ ಸಮಯದಲ್ಲಿ ಗುಂಡಿ ಪದ್ಧತಿ, ಮಳೆ ಬೀಳುವ ಕಾಲದಲ್ಲಿ ಏರು ವಿಧಾನ ಅನುಸರಿಸುವುದು ಅಗತ್ಯ. ಕಾಂಪೋಸ್ಟ್ ತಯಾರಾಗಲು ಬೇಕಾಗಿರುವುದು ಮೂರು ತಿಂಗಳು. ಈ ಅವಧಿಯನ್ನು ಅನುಸರಿಸಿ ನಮ್ಮ ತಯಾರಿ ವಿಧಾನವನ್ನು ಬದಲಾಯಿಸಿಕೊಳ್ಳಬೇಕು ಮಳೆಗಾಲದಲ್ಲಿ ಗುಂಡಿ ಪದ್ಧತಿ ಸಾಧ್ಯವಿಲ್ಲ ಎನ್ನುವುದು ಇಲ್ಲಿ ಗಣನೆ ತೆಗೆದುಕೊಳ್ಳಬೇಕಾದ ವಿಚಾರ. ಆದರೆ ಏರು ವಿಧಾನದಲ್ಲಿ ಯಾವಾಗ ಬೇಕಾದರೂ ಕಾಂಪೋಸ್ಟ್ ಸಿದ್ಧಪಡಿಸಬಹುದು

ಗುಂಡಿ ಪದ್ಧತಿ

ಸ್ಥಳಾವಕಾಶ ನೋಡಿಕೊಂಡು ಎರಡುವರೆಯಿಂದ ಮೂರು ಅಡಿ ಆಳದ ಗುಂಡಿ ಸಿದ್ಧಪಡಿಸಿ ಒಣ ಎಲೆ, ಹುಲ್ಲು ಕುಂಬಾದ ಮರದ ಕೊಂಬೆಗಳ ತುಂಡುಗಳನ್ನು ರಾಶಿ ಮಾಡಿಕೊಳ್ಳಿ. ಮೊದಲು ಮರದ ಕೊಂಬೆಗಳನ್ನು ತಳಪಾಯಕ್ಕೆ ಐದು ಇಂಚು ದಪ್ಪಕ್ಕೆ ಹರಡಿಕೊಂಡು ಮೇಲಿಂದ ತೆಳ್ಳಗೆ ಕಾಡು ಮಣ್ಣು ಹಾಕಿ ಮುಚ್ಚಿ. ಅದರ ಮೇಲೆ ಐದು ಇಂಚು ದಪ್ಪದಲ್ಲಿ ಒಣ ತ್ಯಾಜ್ಯಗಳನ್ನು ಹಾಕಿ ಹಿಂದಿನಂತೆ ತ್ಯಾಜ್ಯವನ್ನು ಮಣ್ಣಿನಿಂದ ಮುಚ್ಚಿ. ಅದರ ಮೇಲೆ ಹಸಿರು ಎಲೆಗಳನ್ನು ಕೊಂಬೆಯಿAದ ಕಿತ್ತು ಐದು ಇಂಚು ದಪ್ಪ ಹರಡಿಕೊಂಡು ಮುಚ್ಚಿ ಬಿಡಲು ಮಣ್ಣು ಹಾಕಿ. ಪುನ: ಒಣ ಎಲೆ ಐದು ಇಂಚು, ಹಸಿರೆಲೆ ಐದು ಇಂಚು ಹಾಕುತ್ತಾ ಗುಂಡಿಯ ಮೇಲ್ಭಾಗಕ್ಕೆ ಬಂದಾಗ ಮಧ್ಯಭಾಗಕ್ಕೆ ಮಾತ್ರ ತುಂಬಿಸಿ ಗೋಪುರಾಕಾರ ಮಾಡಿ. ಪ್ರತಿ ಬಾರಿ ಮಣ್ಣು ಹಾಕಿದಾಗಲೂ ನೆನೆಯುವಷ್ಟು ನೀರು ಸಿಂಪಡಿಸಿ. ಸೆಗಣಿ ತ್ಯಾಜ್ಯ, ಗೋಬರ್ ಗ್ಯಾಸ್ ಸ್ಲರಿ ಇದ್ದರೆ ನೀರಿಗೆ ಮಿಶ್ರಮಾಡಿ ಹಾಕುವುದು ಶ್ರೇಷ್ಠ.

ಅಡುಗೆ ಮನೆಯಲ್ಲಿ ಸಿಗುವ ಅಕ್ಕಿ ತೊಳೆದ ನೀರು, ಗಂಜಿ ತಿಳಿ ಕೂಡ ಉಪಯೋಗಿಸಬಹುದು. ಇದನ್ನು ಡ್ರಮ್ಮುಗಳಲ್ಲಿ ಶೇಖರಿಸಿ ಬಾಯಿ ಮುಚ್ಚಿ ಇಟ್ಟುಕೊಂಡರೆ ಬೇಕಾದಾಗ ನೀರು ಸೇರಿಸಿ ಹಾಕಬಹುದು. ಮಳೆಗಾಲವಾದ್ದರಿಂದ ಮತ್ತೆ ನೀರು ಹಾಕುವ ಅಗತ್ಯ ಇರುವುದಿಲ್ಲ. ಮೂರು ತಿಂಗಳಲ್ಲಿ ಉತ್ತಮ ಕಾಂಪೋಸ್ಟ್ ಸಿಗುತ್ತದೆ. ಇದನ್ನು ಶೇಕಡ ೨೦ರಷ್ಟು ತೇವಾಂಶ ಇರುವಾಗ ಜರಡಿಯಾಡಿಸಿ ಗೋಣಿ ಚೀಲಗಳಲ್ಲಿ ತುಂಬಿ ಇಡಬಹುದು. ಬೇಕಾದಾಗ ಬೇಕಾದಲ್ಲಿಗೆ ಈ ಗೊಬ್ಬರ ಉಪಯೋಗಿಸಬುದು. ಉಪಯೋಗಕ್ಕೆ ಮೊದಲು ಒಲೆ ಬೂದಿ ತೆಳ್ಳಗೆ ಹಾಕಿಕೊಂಡು ಮತ್ತೆ ವಾರಬಿಟ್ಟು ಕಾಂಪೋಸ್ಟ್ ನೀಡುವುದು ಒಳ್ಳೆಯದು. ಮಳೆಗಾಲದಲ್ಲಿ ತೆಂಗಿನ ತ್ಯಾಜ್ಯಗಳನ್ನು ಬಚ್ಚಲು ಮನೆಗೆ ಒಲೆ ಉರಿಸಲು ಉಪಯೋಗಿಸುತ್ತೇವೆ. ಈ ಬೂದಿ ಹೆಚ್ಚು ಕ್ಷಾರಯುಕ್ತವಾಗಿರುವುದರಿಂದ ಕಾಂಪೋಸ್ಟಿಗೆ ಮಿಶ್ರ ಮಾಡುವುದು ಸೂಕ್ತವಲ್ಲ.

ಕಾಂಪೋಸ್ಟಿಗೆ ಉಪಯೋಗಿಸುವ ಹಸಿರೆಲೆಗಳಲ್ಲಿ ದ್ವಿದಳ ಧಾನ್ಯಗಳ, ಗ್ಲಿರಿಸೀಡಿಯಾ ಎಲೆಗಳು ಹೆಚ್ಚು ಸಾರಜನಕ ಹೊಂದಿರುತ್ತವೆ. ಇದರಿಂದಾಗಿ ಕೊಳೆಯುವುದು ಬೇಗ. ಕೊಳೆಯಿಸುವ ಕ್ರಿಯೆಗೆ ಆರಂಭದಲ್ಲಿ ಉಷ್ಣವನ್ನು ತಡೆದುಕೊಳ್ಳುವ ಸೂಕ್ಷ್ಮಾಣುಗಳು ಸಹಕರಿಸುತ್ತವೆ. ಉಷ್ಣತೆ ಕಡಿಮೆಯಾದಾಗ ನೀವು ಬದುಕುವುದಿಲ್ಲ. ಆಗ ಶೀತ ವಾತಾವರಣದ ಸೂಕ್ಷ್ಮಾಣುಗಳು ಶತಪದಿಗಳಂತ ಜೀವಿಗಳು ಗೊಬ್ಬರವಾಗಿಸುವ ಕ್ರಿಯೆಯಲ್ಲಿ ಸಹಕರಿಸುತ್ತವೆ. ಓಡು ಹುಳಗಳಂತಹ ಜೀವಿಗಳು ಕೂಡ ಆಹಾರಕ್ಕಾಗಿ ಕೊಳೆತ ವಸ್ತುಗಳನ್ನು ಆಶ್ರಯಿಸುತ್ತವೆ. ಶತಪದಿಗಳು ಗಂಗೆ, ಬಾವಡೆ, ಚೇರಟೆಗಳು ಹೆಚ್ಚು ಸಹಕಾರ ನೀಡುತ್ತವೆ. ಮಳೆಗಾಲದಲ್ಲಿ ಇವು ಅಲ್ಲಲ್ಲಿ ಕಂಡುಬರುತ್ತವೆ. ನೆಲದಲ್ಲಿ ಬಿದ್ದ ಒಣ ತ್ಯಾಜ್ಯಗಳ ತಳ ಭಾಗದಲ್ಲಿ ಆಹಾರಕ್ಕಾಗಿ ಒಣ ಕೊಳೆತ ಎಲೆಗಳ ಮೇಲೆ ಹರಿದಾಡುವುದನ್ನು ಕಾಣಬಹುದು. ಇದೆಲ್ಲವೂ ನೈಸರ್ಗಿಕ ಕ್ರಿಯೆ. ಇಲ್ಲಿ ಮನುಷ್ಯ ಪ್ರಯತ್ನ ಬಹಳ ಕಡಿಮೆ ಆತ ಕೇವಲ ಉಸ್ತುವಾರಿ

ಏರು ವಿಧಾನ

ನೆಲವನ್ನು ಸಮತಳ ಮಾಡಿಕೊಂಡು ಅಗಲಕ್ಕೆ ಹಿಂದಿನ ವಿಧಾನದಲ್ಲೇ ತ್ಯಾಜ್ಯಗಳನ್ನು ತುಂಬಬೇಕಿದೆ. ಈ ವಿಧಾನದಲ್ಲಿ ತ್ಯಾಜ್ಯ ತುಂಬಲು ಕಲ್ಲಿನ ತೊಟ್ಟಿ ಅಥವಾ ಬಿದಿರು, ಅಡಿಕೆ ಮರ ಮುಂತಾದವಸ್ತುಗಳನ್ನು ತೊಟ್ಟಿ ನಿರ್ಮಿಸಲು ಬಳಸಬಹುದು. ಈ ತೊಟ್ಟಿಗಳ ಅಗಲ ಐದು ಅಡಿ, ಉದ್ದ ಜಾಗ ಇದ್ದಷ್ಟು (ಹತ್ತು-ಹನ್ನೆರಡು ಅಡಿ) ಬಳಸಬಹುದು.ತೊಟ್ಟಿಯ ಎತ್ತರ ಗರಿಷ್ಟ ೩.೫ಅಡಿ ಮೀರಬಾರದು. ತೊಟ್ಟಿಗಳನ್ನು ತ್ಯಾಜ್ಯ ಲಭ್ಯತೆಯ ಮೇಲೆ ಜಾಗವಿರುವಷ್ಟು ಸಂಖ್ಯೆಯಲ್ಲಿ ರಚಿಸಬಹುದು. ತೊಟ್ಟಿಯ ತಳಭಾಗಕ್ಕೆ ಸೆಗಣಿ ಸಾರಿಸಿಕೊಂಡು ಪೂರ್ತಿ ಒಣಗುವ ಮೊದಲೇ ತ್ಯಾಜ್ಯ ವಸ್ತುಗಳನ್ನು ಗುಂಡಿ ಪದ್ಧತಿಯಲ್ಲೇ ತುಂಬಿಸಿ ೩.೫ ಅಡಿ ಎತ್ತರಕ್ಕೆ ಗೋಪುರಾಕೃತಿ ಬರುವಂತೆ ಸೆಗಣಿ ಮಿಶ್ರ ಮಣ್ಣಿನಿಂದ ಎರಡು ಇಂಚು ದಪ್ಪಕ್ಕೆ ಮುಚ್ಚಿಗೆ ಮಾಡಬೇಕು. ತ್ಯಾಜ್ಯಗಳನ್ನು ತುಂಬುವಾಗಲೇ ನೀರು ಸಿಂಪಡಿಸಬಹುದು.

ಆರಂಭದ ಹಂತದಲ್ಲಿ ತ್ಯಾಜ್ಯ ಕಳಿಯುವಾಗ ಬಿಸಿಯಾಗುತ್ತದೆ ಎಂದು ತಿಳಿಸಿದ್ದೆ. ಪರೀಕ್ಷಿಸಲು ಬೇಕಿದ್ದರೆ ನೀರಿನ ಪೈಪಲ್ಲಿ ನೀರಿರುವಂತೆ ನೋಡಿಕೊಂಡು ತ್ಯಾಜ್ಯದ ಒಳಗೆ ಮೊದಲೇ ಹರಡಿಕೊಂಡರೆ ಪೈಪಿನಿಂದ ಹೊರಬರುವ ನೀರು ಬಿಸಿಯಾಗಿರುವುದನ್ನು ನೋಡಬಹುದು. ಸ್ಥಾನಕ್ಕೂ ಇದನ್ನು ಉಪಯೋಗಿಸಬಹುದು. ಏರು ವಿಧಾನದಲ್ಲಿ ಪ್ರತಿದಿನ ನೀರು ಸಿಂಪಡಿಸುತ್ತಿರಬೇಕು. ತೇವಾಂಶ ಆರದಂತೆ ನೋಡಿಕೊಳ್ಳುವುದು ಮುಖ್ಯ. ಮೂರು ತಿಂಗಳ ಬಳಿಕ ಈ ಗೊಬ್ಬರ ಉಪಯೋಗಿಸಲು ಸಿದ್ಧ. ಹಿಂದಿನಂತೆಯೇ ಇದನ್ನು ಪಾಲಿಥೀನ್ ಚೀಲಗಳಲ್ಲಿ ಸಂಗ್ರಹಿಸಿಟ್ಟು (ನೆರಳಲ್ಲಿ) ಉಪಯೋಗಿಸಬಹುದು. ಕಾಂಪೋಸ್ಟ್ ಗೊಬ್ಬರ ತಯಾರಿಸಲು ಅತ್ಯಂತ ಸರಳ ವಿಧಾನ ಎರೆಗೊಬ್ಬರ ತಯಾರಿ. ಇದನ್ನು ಈ ಮೊದಲೇ ಕ್ರಷಿಬಿಂಬ ಪತ್ರಿಕೆಯಲ್ಲಿ ಪ್ರಕಟಿಸಿದ್ದು ಓದಿ ತಿಳಿಯದ ಮಂದಿ ಹಳೆಯ ಪತ್ರಿಕೆ ಓದಿ ಮುಂದುವರಿಯಬಹುದು. ಪತ್ರಿಕೆ ಲಭ್ಯವಿಲ್ಲದಿದ್ದರೆ ನನ್ನನ್ನು ಸಂಪರ್ಕಿಸಬಹುದು. ಸೀಮಿತ ಸಂಖ್ಯೆಯಲ್ಲಿ ಪ್ರಕಟಿತ ಎರೆಗೊಬ್ಬರ ತಯಾರಿ ಪುಸ್ತಕಗಳಿವೆ.

ಕೃಷಿ ಒಂದು ಕಲೆ. ಕೃಷಿಕ ವಿಜ್ಞಾನಿಯಾಗಬೇಕು. ಆಗ ಎಲ್ಲ ವಿಚಾರಗಳು ಅರಿವಿಗೆ ಬರುತ್ತವೆ. “ಅರಿವೇ ಗುರು” ಅದುವೇ ಸತ್ಯ ಎನ್ನುವ ಮಾತಿನಂತೆ ನಾವು ಕೃಷಿಯಲ್ಲಿ ತೊಡಗಿದರೆ ಕೃಷಿ ಒಂದು ದೊಡ್ಡ ವಿಷಯವೇ ಅಲ್ಲ. ನಾವು ಏನು ಮಾಡಬೇಕು; ಯಾವಾಗ ಬಿತ್ತನೆ ಮಾಡಬೇಕು, ಗಿಡ ನಾಟಿ ಮಾಡಬೇಕು, ಸೂಕ್ತ ಸಮಯ ಯಾವಾಗ, ಯಾವಾಗ ಗಿಡಮರಗಳಿಗೆ ಎಲ್ಲಿಗೆ ಗೊಬ್ಬರ ನೀಡಬೇಕು ಇತ್ಯಾದಿ ಸರಿಯಾಗಿ ತಿಳಿಯಲು ಆಸಕ್ತಿಯಿಂದ ಪರಿಶೀಲಿಸಿ ಮುಂದೆ ಸಾಗಿದರೆ ಕೃಷಿ ನಮ್ಮ ಕೈ ಹಿಡಿಯುತ್ತದೆ.

ಯಾರೋ ಏನೋ ಹೇಳಿದರೆಂದು ಮಾರುಕಟ್ಟೆ ವ್ಯಾಪಾರಿಗಳ ಹೊಟ್ಟೆ ತುಂಬಿಸಲು ಹೋದರೆ ನಮ್ಮ ಮಕ್ಕಳು ಮರಿ ಮಕ್ಕಳು ಬೇರೆ ಉದ್ಯೋಗದ ಹಾದಿ ಹಿಡಿದರೆ ತಪ್ಪು ಅವರದಲ್ಲ. ನಾವು ಚೆನ್ನಾಗಿ ಬದುಕಿ ತೋರಿಸಿದರೆ, ಜೈವಿಕ ಕೃಷಿಯನ್ನು ಅವರೇ ಮೆಚ್ಚಿ ಇನ್ನಷ್ಟು ಸಂಶೋಧನೆಗಳಾಗಿ ಮತ್ತಷ್ಟು ಮಂದಿಗೆ ತಲೆಗೆ ಕೈಗೆ ಕೆಲಸ ಸಿಕ್ಕಿ ಆರೋಗ್ಯವಂತರಾಗಿ ಜೀವಿಸಬಹುದು ಮುಂದಿನ ವರ್ಷ ಸಹಸ್ರ ಚಂದ್ರ ದರ್ಶನಕ್ಕೆ ಕಾಲಿರಿಸುತ್ತಿದ್ದೇನೆ. ನನ್ನ ಅರವತ್ತು ಸಂವತ್ಸರದ ಜೀವಿತಾವಧಿಯಲ್ಲಿ ಕೃಷಿಕ, ಅಧ್ಯಾಪಕ ಎರಡೂ ವೃತ್ತಿ ಪಾಲಿಸಿದ್ದೇನೆ. ನನ್ನಂತೆಯೇ ಬದುಕಿ. ಮುಂದಿನ ಪೀಳಿಗೆಗೆ ದಾರಿ ದೀಪವಾಗಿ

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group