-ರಾಧಾಕೃಷ್ಣ ತೊಡಿಕಾನ | ರಾಮ್ ಅಜೆಕಾರ್
ಹಸಿರು ಉಡುಗೆ ತೊಟ್ಟ ಕಾಡಿನೊಳಗೆ, ಹೆಬ್ಬಾವಿನಂತೆ ಮರ-ಗಿಡಗಳನ್ನು ಸುತ್ತಿಕೊಂಡು ಮೇಲೇರಿದ ಬೀಳು ಬಳ್ಳಿಗಳು ಜೀವಂತ ಕಲೆಯ ಹಾದಿಯಂತೆ ಕಾಣಿಸುತ್ತವೆ. ಕಲ್ಲುಮುಳ್ಳು, ಗಿಡಗಂಟಿಗಳ ಅಡೆತಡೆಗಳನ್ನು ಮೀರಿ ಆ ಬೀಳುಗಳನ್ನು ಆಯ್ದು ತರುವುದು ಒಂದು ಸಾಹಸ. ನಂತರ ಅವುಗಳನ್ನು ಹದಗೊಳಿಸಿ ಆಕಾರ ನೀಡುವುದು — ಇದೇ ಒಂದು ಬದುಕಿನ ದಾರಿ. ಪ್ರಾಕೃತಿಕವಾಗಿ ದೊರೆಯುವ ಕಚ್ಚಾ ವಸ್ತುಗಳಿಂದ ಜನರಿಗೆ ಉಪಯುಕ್ತವಾದ ನಿತ್ಯ ಬಳಕೆಯ ವಸ್ತುಗಳನ್ನು ತಯಾರಿಸುವ ಕರಕುಶಲತೆಯೇ ಈ ಕಲೆಗಾರರ ಹಿರಿಮೆ. ಕಾಡುಮೇಡುಗಳನ್ನು ಅಲೆದು ಬೀಳುಗಳನ್ನು ಸಂಗ್ರಹಿಸಿ ಅದಕ್ಕೆ ರೂಪ ಕೊಡುವ ಇಂತಹ ಕರಕುಶಲ ಕಾರ್ಮಿಕರು ಗ್ರಾಮೀಣ ಸಂಸ್ಕೃತಿಯ ಜೀವಂತ ಕೊಂಡಿಗಳು.
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕಡ್ತಲ ಗ್ರಾಮದ ಗೋಳಿಪಲ್ಕೆ ಬಾಬು ಅವರಿಗೆ ಬೀಳುಗಳೇ ಆಸ್ತಿಪಾಸ್ತಿ. ಪರಂಪರೆಯಿಂದ ಕಲಿತ ಬುಟ್ಟಿ ಹೆಣೆಯುವ ಕಲೆ ಅವರ ಜೀವನಾಧಾರ. ಕಾಡಿನಿಂದ ಬೀಳುಗಳನ್ನು ತಂದು ಬುಟ್ಟಿಗಳನ್ನು ತಯಾರಿಸುವುದೇ ಅವರ ದಿನಚರಿ. ಸುಮಾರು 25–3೦ ವರ್ಷಗಳಿಂದ ಕಾಡಿನ ಹಾದಿ ಹಿಡಿದು ಬೀಳುಗಳ ಹುಡುಕಾಟ ನಡೆಸುತ್ತಿರುವ ಬಾಬು ಕೆಲವೊಮ್ಮೆ ಬೀಳುಗಳು ಸಿಗದೆ ನಿರಾಶೆ ಆಗುವುದಿದೆ. ಆದರೆ ಬದುಕಿನ ಬುತ್ತಿಯನ್ನೇ ನೀಡಿದ ಈ ಕಲೆಯಿಂದ ಹಿಂದೆ ಸರಿದಿಲ್ಲ.
ನಾನಾ ವಿಧದ ಬುಟ್ಟಿಗಳು: ತಂದೆ ಕೆಂಪ ಅವರಿಂದ ಬುಟ್ಟಿ ಹೆಣೆಯುವ ಕಲೆ ಕಲಿತ ಬಾಬು ಅವರು ಕಳೆದ ೨೦ ವರ್ಷಗಳಿಂದ ಈ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ.ದೇವರ ಪೂಜೆಗೆ ಹಣ್ಣು, ಕಾಯಿಗಳು ಕೊಂಡೊಯ್ಯುವ ಬುಟ್ಟಿ, ಗೂಡಿನ ಬುಟ್ಟಿ,ಹೂವಿನ ಬುಟ್ಟಿ, ತಿಂಡಿ ತಿನಿಸು ಇಡುವ ಬುಟ್ಟಿ,ಎಲೆ–ಅಡಿಕೆ ಬುಟ್ಟಿ, ಭತ್ತ, ಅಕ್ಕಿ ಮೊದಲಾದ ಕೃಷಿ ಉತ್ಪನ್ನಗಳ ಬುಟ್ಟಿ, ತಟ್ಟೆಯಾಕಾರದ ದೊಡ್ಡ ಗೆರಸೆ (ತಡ್ಪೆ)
ಗ್ರಾಹಕರ ಬೇಡಿಕೆಗೆ ತಕ್ಕಂತೆ ಬುಟ್ಟಿಗಳನ್ನು ಹೆಣೆದು ಕೊಡುತ್ತಾರೆ. ಸರಿಯಾದ ಪ್ರತಿಫಲ ಸಿಕ್ಕರೂ ಅಥವಾ ಸಿಕ್ಕದಿದ್ದರೂ, ಈ ಬುಟ್ಟಿಗಳೇ ಬಾಬು ಅವರ ಬದುಕಿನ ಬುತ್ತಿಯಾಗಿದೆ. ಕೃಷಿಕರಿಗೆ ಬೆಸಾಯದ ಕಾಲದಲ್ಲಿ ಉಪಯೋಗವಾಗುವ ಬುಟ್ಟಿಗಳು, ಇತರ ಸಂದರ್ಭಗಳಿಗೆ ಬೇಡಿಕೆಯಾದ ಬೇರೆ ಮಾದರಿಯ ಬುಟ್ಟಿಗಳೂ ತಯಾರಾಗುತ್ತವೆ. ಬಾಬು ಅವರ ಪತ್ನಿ ಅಮ್ಮಿ ಬೀಳುಗಳನ್ನು ಆಯ್ದು ತರುವುದು ಮತ್ತು ಬುಟ್ಟಿ ಹೆಣೆಯುವ ಪ್ರಕ್ರಿಯೆಯಲ್ಲಿ ಸಹಭಾಗಿಯಾಗಿದ್ದಾರೆ. ಈ ಕಲೆ ಮುಂದುವರಿಯಲೆಂದು ತಮ್ಮ ಮಕ್ಕಳಿಗೂ ಕಲಿಯಲು ಪ್ರೇರೇಪಿಸುತ್ತಿದ್ದಾರೆ. ಬುಟ್ಟಿಗಳು ಸ್ಥಳೀಯವಾಗಿ ಮಾತ್ರವಲ್ಲದೆ ಮುನಿಯಾಲು, ಕಾರ್ಕಳ, ಉಡುಪಿ ಪ್ರದೇಶಗಳ ಅಂಗಡಿಗಳಲ್ಲಿಯೂ ಮಾರಾಟವಾಗುತ್ತವೆ. ಕೃಷಿಮೇಳಗಳು ಮತ್ತು ಹೋಂ ಸ್ಟೇ, ಅರ್ಗ್ಯಾನಿಕ್ ಉತ್ಪನ್ನ ಸಂಪ್ರದಾಯದ ಪ್ರಚಾರವು ಇತ್ತೀಚಿನ ದಿನಗಳಲ್ಲಿ ಈ ಬುಟ್ಟಿಗಳ ಬೇಡಿಕೆಯನ್ನು ಹೆಚ್ಚಿಸಿದೆ.
ಇತಿಹಾಸ ಮತ್ತು ಪ್ರಸಿದ್ಧಿ
19ನೇ ದಶಕದಲ್ಲಿ ಮಲ್ಪೆ ಮೀನುಗಾರಿಕೆಯ ಸಮಯದಲ್ಲಿ, ಮೀನುಗಳನ್ನು ದೋಣಿಯಿಂದ ಸಾಗಿಸಲು ಈ ಬುಟ್ಟಿಗಳನ್ನು ವ್ಯಾಪಕವಾಗಿ ಬಳಸಲಾಗುತ್ತಿತ್ತು. ಗೋಳಿಪಲ್ಕೆ ಬುಟ್ಟಿಗಳು ಅಂದಿನ ಕಾಲದಲ್ಲಿ ಬಹಳ ಪ್ರಸಿದ್ಧಿ ಹೊಂದಿದ್ದವು. ಬಾಬು ಕೊರಗರ ಪೂರ್ವಜರೂ ಈ ಕಲೆ ಮೂಲಕ ಜೀವನ ಸಾಗಿಸಿದ್ದರು. ಆದರೆ ಪ್ಲಾಸ್ಟಿಕ್ ಫೈಬರ್ ಬುಟ್ಟಿಗಳು ಬಂದ ಮೇಲೆ ಈ ಬಳ್ಳಿ ಬೀಳಿನ ಬುಟ್ಟಿಗಳು ಕಡಿಮೆಯಾಗಿವೆ.
ಹಳ್ಳಿಗಿಂತಲೂ ಹಸನಾದ ಜೀವನದ ಹಾದಿ
ಹೆಚ್ಚು ಬಂಡವಾಳವಿಲ್ಲದೆ ಶ್ರಮ, ಆಸಕ್ತಿ, ನಿಷ್ಠೆ ಮತ್ತು ಕಲಾ ನೈಪುಣ್ಯತೆಯೇ ಮುಖ್ಯವಾದ ಇಂತಹ ಸ್ವ ಉದ್ಯೋಗಗಳು ಹಳ್ಳಿಯ ಬದುಕಿಗೆ ಚೈತನ್ಯ ತರುತ್ತವೆ. ಪರಿಸರ ಸ್ನೇಹಿ ವಸ್ತುಗಳಿಂದ ಮಾಡಿದ ಈ ಕರಕುಶಲ ಉತ್ಪನ್ನಗಳು ಜನರ ದಿನನಿತ್ಯದ ಅಗತ್ಯವನ್ನು ಪೂರೈಸುತ್ತವೆ ಹಾಗೂ ಕಲೆಗಾರರಿಗೆ ಆದಾಯವನ್ನು ತರುತ್ತವೆ. ಉದ್ಯೋಗದ ಮೂಲಗಳನ್ನು ಹಳ್ಳಿಗಳಲ್ಲೇ ಕಂಡುಕೊಳ್ಳುವ ಸಾಧ್ಯತೆಗಳಿದ್ದರೆ, ಪಟ್ಟಣದತ್ತ ವಲಸೆ ಕಡಿಮೆಯಾಗುವುದು. ಸ್ವ ಉದ್ಯೋಗದಿಂದ ಸ್ವಾವಲಂಬನೆಯ ಬದುಕು ಕಟ್ಟಿಕೊಂಡಿರುವ ಬಾಬು ಅವರಂಥ ಕಸುಬುದಾರರಿಗೆ ಸರಕಾರದ ಸಹಾಯ ದೊರೆತರೆ ಅವರ ಜೀವನಮಟ್ಟವು ಮತ್ತಷ್ಟು ಸುಧಾರಿಸಲಿದೆ. ಮಾಹಿತಿಗೆ: 8105307574