ಸಂಕಲನ : ಡಾ. ಶಶಿಕುಮಾರ್ ಎಸ್
ಪ್ರಾಧ್ಯಾಪಕರು ಹಾಗೂ ಸಂಪಾದಕರು ಸಂವಹನ ಕೇಂದ್ರ, ತೋಟಗಾರಿಕೆ ವಿ.ವಿ ಬಾಗಲಕೋಟೆ
ಡಾ. ಉಮಾ ಅಕ್ಕಿ ಸಹಾಯಕ ಪ್ರಾಧ್ಯಾಪಕರು
ಕೃಷಿಯಿಂದ ಗಳಿಸಿ ಉಳಿಸುವುದು, ಬದುಕು ಸಾಗಿಸುವುದೇ ಕಷ್ಟ ಎಂಬ ಭಾವನೆ ಬಲವಾಗುತ್ತಿರುವ ಇಂದು ಕೃಷಿಯಿಂದಲೇ ಕೋಟ್ಯಾಧಿಪತಿಯಾಗಬಹುದು, ಸರಕಾರಿ ಅಥವಾ ಖಾಸಗಿ ನೌಕರಿಗಿಂತ ಹೆಚ್ಚು ಆದಾಯವನ್ನು ಯಾರ ಹಂಗಿಲ್ಲದೆ ಗೌರವಯುತವಾಗಿ ಸಂಪಾದಿಸಬಹುದೆಂಬುದನ್ನು ಕೆಲ ರೈತರು ಸಾಧಿಸಿ ತೋರಿಸಿದ್ದಾರೆ. ‘ಕೋಟಿ ವಿದ್ಯೆಯಲ್ಲಿ ಮೇಟಿ ವಿದ್ಯೆಯೇ ಮೇಲು’ ಎಂಬುದನ್ನು ಮನಗಂಡು ಕೃಷಿ ಚಟುವಟಿಕೆಯಲ್ಲೇ ತನ್ನನ್ನು ತಾನು ತೊಡಗಿಸಿಕೊಂಡ ಕಾಯಕ ಯೋಗಿ ಬೀರಪ್ಪ ವಗ್ಗಿ ಕೋಟಿಪತಿ ರೈತನೆಂಬ ಹೆಗ್ಗಳಿಕೆ ಪಡೆದವರು. ಕೃಷಿ ಮೂಲದಿಂದಲೇ ಕೋಟಿ ಸಂಪಾದನೆ ಮಾಡುತ್ತಿರುವ ಬೀರಪ್ಪ ವಗ್ಗಿ ರಾಷ್ಟ್ರ ಮಟ್ಟದ ಪ್ರಶಸ್ತಿಗೆ ಪಾತ್ರರಾದವರು
ಬಯಲು ಸೀಮೆಯ ಹಳ್ಳಿ ಮೂಲೆಯೊಂದರ ಬರಡು ಭೂಮಿಯನ್ನು ತನ್ನ ಸಹೋದರರೊಂದಿಗೆ ಸೇರಿ ಹಸಿರಿನಿಂದ ನಳ ನಳಿಸುವಂತೆ ಮಾಡಿದ ಬೀರಪ್ಪ ವಗ್ಗಿ ಅವರ ಸಾಧನೆ, ಭಗೀರಥ ಪ್ರಯತ್ನ ಕೃಷಿಕ್ಷೇತ್ರಕ್ಕೆ ಕಾಲಿಡಲು ಬಯಸುವ ಯುವ ಸಮುದಾಯಕ್ಕೆ ಪ್ರೇರಣೆದಾಯಕವಾದುದು. ಅನಕ್ಷರಸ್ಥರಿಂದ ಅಕ್ಷರವಂತನವರೆಗೂ ಹಲವು ಉದ್ಯೋಗ ಸೃಷ್ಟಿಸಬಲ್ಲ, ಬದುಕು ಕಟ್ಟಿಕೊಡುವ ಕೃಷಿಕ್ಷೇತ್ರದಲ್ಲಿ ಕಾಯಕ ಜ್ಞಾನದ ಮೂಲಕ ವಗ್ಗಿ ಕೃಷಿ ಪಂಡಿತರಾದರು. ಕೃಷಿಯಿಂದ ಕೃಶವಾಗುವುದಲ್ಲ; ಖುಷಿಯಾಗಿ ಬಾಳುವುದು ಎಂಬುದನ್ನು ಸಾರಿದ್ದಾರೆ, ಸಾಧಿಸಿ ತೋರಿಸಿದ್ದಾರೆ.
ಅವಿಭಕ್ತ ಕುಟುಂಬದ ಮೂರು ಎಕರೆ ಜಮೀನಿನಿಂದ 125 ಎಕರೆ ವರೆಗೆ ವಿಸ್ತರಿಸಿಕೊಂಡ ಕೃಷಿಯ ಹಿಂದಿರುವುದು ಬೀರಪ್ಪ ವಗ್ಗಿ ಮತ್ತು ಸಹೋದರರ ಬೆವರಿನ ಫಲ. ರಟ್ಟೆಯ ಬಲ. ವಾರ್ಷಿಕ ಆದಾಯ 150 ಲಕ್ಷ ಮಿಕ್ಕಿದ್ದರೂ, ಬೇಕಾದಷ್ಟು ಅನುಕೂಲತೆಯಿದ್ದರೂ ಐಷಾರಾಮಿ ಜೀವನವನ್ನು ನಡೆಸದೆ ಹಳ್ಳಿಯ ಸೊಗಡನ್ನು ಸವಿಯುತ್ತ ಸರಳ ಆದರ್ಶವಾದ ಬದುಕು ಕಟ್ಟಿಕೊಂಡಿರುವುದು ಅನುಕರಣೀಯ.
ವಿಜಯನಗರ ಜಿಲ್ಲೆಯ ಇಂಡಿ ತಾಲೂಕಿನ ತಾಂಬಾ ಗ್ರಾಮದ ಬೀರಪ್ಪ ಚಿನ್ನಪ್ಪ ವಗ್ಗಿ ಅವರದು ಅವಿಭಕ್ತ ಕುಟುಂಬ. ಈ ಕುಟುಂಬಕ್ಕಿದ್ದುದು ಮೂರು ಎಕರೆ ಜಮೀನು, ಇದಕ್ಕೂ ನೀರಿನ ಸಮಸ್ಯೆ ಇತ್ತು. ಒಂದು ಬಾವಿಯಿಂದಲೇ ಐದು ಕುಟುಂಬಗಳು ಪಾಳಿಯಲ್ಲಿ ತಮ್ಮ ಜಮೀನುಗಳಿಗೆ ನೀರುಣಿಸಬೇಕಾಗಿತ್ತು. ಸಂಪ್ರದಾಯಿಕ ಬೆಳೆಗಳಿಗಷ್ಟೇ ವಗ್ಗಿ ಕುಟುಂಬದ ಕೃಷಿ ಸೀಮಿತವಾಗಿತ್ತು. ಏಳು ಮಂದಿ ಸಹೋದರರು, ಇಬ್ಬರು ಸಹೋದರಿಯರಿದ್ದ ತುಂಬು ಕುಟುಂಬ. ಆರ್ಥಿಕ ಪರಿಸ್ಥಿತಿ ಚೆನ್ನಾಗಿರದ ಕಾಲವದು. ಅಂತಹ ಸಂದರ್ಭದಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಕೃಷಿಯಲ್ಲಿ ಬೀರಪ್ಪ ವಗ್ಗಿ ತೊಡಗಿಕೊಳ್ಳಬೇಕಾದ ಅನಿವಾರ್ಯತೆ ಅವರದಾಯಿತು. ಬೀರಪ್ಪ ಅವರು ಒಕ್ಕಲುತನ ಜವಾಬ್ದಾರಿ ವಹಿಸಿದ ಮೇಲೆ ಈ ಕುಟುಂಬದ ಚಹರೆಯೇ ಬದಲಾಯಿತು. ಆಸುಪಾಸಿನ ಜಮೀನುಗಳನ್ನು ಖರೀದಿಸಿ ಕೃಷಿಯನ್ನು ವಿಸ್ತರಿಸಿಕೊಂಡ ವಗ್ಗಿ ಕುಟುಂಬ ಈಗ 125 ಎಕರೆ ಕೃಷಿ ಭೂಮಿಯನ್ನು ಹೊಂದಿದೆ. ಅದರಲ್ಲಿ 7೦ ಎಕರೆ ಭೂಮಿ ನೀರಾವರಿಯಾದ್ದಾಗಿದ್ದರೆ 55 ಎಕರೆ ಒಣಬೇಸಾಯದ ಭೂಮಿಯಾಗಿದೆ.
ಕೋಟಿ ಆದಾಯ ತಂದ ಲಿಂಬೆ:
ಲಿಂಬೆಯ ಮಹತ್ವ ಎಲ್ಲರಿಗೆ ತಿಳಿದಿದೆ. ಮಾರುಕಟ್ಟೆಯಲ್ಲಿ ಲಿಂಬೆಗೆ ಬಹುಬೇಡಿಕೆಯಿದೆ. ಲಾಭದಾಯಕವಾದ ಬೆಳೆಯೂ ಆಗಿದೆ. ಇದನ್ನರಿತ ವಗ್ಗಿ ಲಿಂಬೆ ಬೆಳೆಯತ್ತ ಗಮನ ಹರಿಸಿದರು. ಲಿಂಬೆಯಿಂದಲೇ ಕೋಟಿಗೂ ಮಿಕ್ಕಿ ಆದಾಯ ರೈತನೊಬ್ಬ ಪಡೆಯಬಲ್ಲನೆಂದರೆ ಆಶ್ಚರ್ಯವಾಗಬಹುದು. ಬೀರಪ್ಪ ವಗ್ಗಿ ಲಿಂಬೆ ಬೆಳೆದು ಅದರಿಂದಲೇ ಕೋಟಿ ಪತಿಯಾದರು. ತನ್ನ ಜಮೀನಲ್ಲಿ 16 ಎಕ್ರೆಯಲ್ಲಿ ಲಿಂಬೆಯನ್ನು ಬೆಳೆಸಿದ್ದು ಸುಮಾರು 1400 ಲಿಂಬೆ ಗಿಡಗಳಿವೆ. ಇವರ ತೋಟದ ಗಿಡವೊಂದು 12೦೦-14೦೦ರವರೆಗೆ ಲಿಂಬೆಕಾಯಿಗಳನ್ನು ಬಿಡುತ್ತಿವೆ. ವರ್ಷವಿಡೀ ಫಸಲು ದೊರೆಯುತ್ತದೆ. ನಿಂಬೆ ಮಾತ್ರವಲ್ಲ ನಿಂಬೆ ಗಿಡಗಳನ್ನು ತಯಾರಿಸಿ ಮಾರಾಟ ಮಾಡುತ್ತಾರೆ. ಉತ್ತರ ಕರ್ನಾಟಕದ ೭-೮ ಜಿಲ್ಲೆಗಳಲ್ಲಿ ಇವರ ಲಿಂಬೆ ಸಸಿಗಳಿಗೆ ಬೇಡಿಕೆಯಿದೆ. ಮಾತ್ರವಲ್ಲ ಹೊರ ರಾಜ್ಯಗಳಿಂದಲೂ ಬಂದು ರೈತರು ಸಸಿಗಳನ್ನು ಕೊಂಡೊಯ್ಯುತ್ತಾರೆ. ಕಾಗ್‌ಜಿ ತಳಿಯ ನಿಂಬೆ ಬೆಳೆಯುತ್ತಿದ್ದು ಗುಣಮಟ್ಟದಲ್ಲೂ ಉತ್ತಮವಾಗಿದೆ. ಲಿಂಬೆಯನ್ನು ಗಾತ್ರ ಹಾಗು ಗುಣಮಟ್ಟಕ್ಕನುಗುಣವಾಗಿ ಶ್ರೇಣೀಕರಿಸಿ ಮಾರಾಟ ಮಾಡಲಾಗುತ್ತದೆ. ಇದರಿಂದ ಉತ್ತಮ ಬೆಲೆಯೂ ದೊರೆತ್ತಿದೆ. ಬೇಡಿಕೆಯೂ ಹೆಚ್ಚಿದೆ ಎನ್ನುತ್ತಾರೆ ಬೀರಪ್ಪ ವಗ್ಗಿ.
ಕೊಟ್ಟಿಗೆ ಗೊಬ್ಬರ, ಕಾಂಪೋಸ್ಟ್ ಗೊಬ್ಬರ, ಜೀವಾಮೃತ ಮೊದಲಾದವುಗಳನ್ನು ಬಳಸಿ ಸಂಪೂರ್ಣವಾಗಿ ಸಾವಯವದಲ್ಲಿ ಲಿಂಬೆ ಬೆಳೆಯಲಾಗುತ್ತಿದೆ. ಈ ತೋಟಕ್ಕೆ ಹನಿ ನೀರಾವರಿ ಅಳವಡಿಸಿರುವುದರಿಂದ ನೀರಿನ ಮಿತ ಬಳಕೆಗೂ ಪ್ರಾಮುಖ್ಯತೆ ನೀಡಲಾಗಿದೆ. ಉತ್ತರ ಕರ್ನಾಟಕವಲ್ಲದೆ ಹೊರ ರಾಜ್ಯಗಳಿಂದಲೂ ಲಿಂಬೆಗೆ ಬೇಡಿಕೆಯಿದ್ದು ವಗ್ಗಿ ಲಿಂಬೆಯೆಂದರೆ ಹೆಸರುವಾಸಿ.
ಮೌಲ್ಯವರ್ಧಿತ ಒಣ ದ್ರಾಕ್ಷಿ
ಲಿಂಬೆಯ ನಂತರ ಹೆಚ್ಚು ಆದಾಯ ತಂದು ಕೊಡುವ ಬೆಳೆ ದ್ರಾಕ್ಷಿ, ಅಕಾಲಿಕ ಮಳೆ, ಪ್ರತಿಕೂಲ ಹವಾಮಾನಗಳನ್ನು ಹೊರತುಪಡಿಸಿದರೆ ದ್ರಾಕ್ಷಿ ಲಾಭದಾಯಕವಾದ ಬೆಳೆ. ಉತ್ತಮ ಮಾರುಕಟ್ಟೆ ಧಾರಣೆಯಿದೆ. ದ್ರಾಕ್ಷಿ ಹಣ್ಣಾದರೂ, ಒಣಗಿಸಿದರೂ ಅದರ ಮೌಲ್ಯ ಹಿಗ್ಗುವುದಲ್ಲದೆ ಕುಗ್ಗುವುದಿಲ್ಲ. ವಗ್ಗಿ ಸಹೋದರರ ಜಮೀನಿನಲ್ಲಿ ಒಂಬತ್ತು ಎಕರೆ ಪ್ರದೇಶ ದ್ರಾಕ್ಷಿ ತೋಟ ಆವರಿಸಿಕೊಂಡಿದೆ. ಗೊಂಚಲು ಗೊಂಚಲಾಗಿ ತೊನೆದಾಡುವ ದ್ರಾಕ್ಷಿ ಬೇಡಿಕೆಯಿದ್ದಾಗ ಮಾರಾಟ. ಹೆಚ್ಚಾಗಿ ದ್ರಾಕ್ಷಿಯನ್ನು ಮೌಲ್ಯವರ್ಧನೆಗೊಳಿಸಿ ಒಣದ್ರಾಕ್ಷಿ ಮಾರಾಟ ಮಾಡುತ್ತಾರೆ. ಇದಕ್ಕೆ ಬೆಲೆಯೂ ಹೆಚ್ಚು ಬಾಳಿಕೆಯೂ ಹೆಚ್ಚು.
ಲಿಂಬು, ದ್ರಾಕ್ಷಿಯ ನಂತರ ಹೆಚ್ಚು ಆದಾಯ ತಂದು ಕೊಡುವ ಬೆಳೆ ಅಂದರೆ ಕಬ್ಬು, ಇದರಿಂದಲೂ ಉತ್ತಮ ಆದಾಯವಿದೆ. ಹಣ್ಣುಗಳ ರಾಜ ಮಾವು. 4೦ಕ್ಕಿಂತ ಹೆಚ್ಚಿನ ಮಾವಿನ ತಳಿ ಇವರಲ್ಲಿದೆ. ಮಾವು ಮಾರಾಟಕ್ಕಾಗಿ ಮಾರುಕಟ್ಟೆಗೆ ಹೋಗಬೇಕಾಗಿಲ.್ಲ ಮನೆಗೆ ಬಂದು ಮಾವು ಖರೀದಿಸುತ್ತಾರೆ. ಇದರಿಂದಾಗಿ ಉತ್ತಮ ದರವೂ ದೊರೆಯುತ್ತದೆ. ಇದಲ್ಲದೆ ವಿವಿಧ ತಳಿಯ ತೆಂಗು, ಬಾಳೆ, ಗೋಡಂಬಿ, ಸೀತಾಫಲ, ರಾಮಫಲ, ಚಿಕ್ಕು, ಬಾರೆ ಮೊದಲಾದ ಹಣ್ಣು ಹಂಪಲುಗಳಿವೆ. ಒಣ ಬೇಸಾಯ ಪದ್ಧತಿಯಲ್ಲಿ ತೊಗರಿ, ಕಡಲೆ, ಜೋಳ, ಗೋಧಿ, ಹತ್ತಿಯನ್ನು ಬೆಳೆಯಲಾಗುತ್ತದೆ. ಅಲ್ಲದೆ ಕಣ್ಮರೆಯಾಗುತ್ತಿರುವ ಸಿರಿಧಾನ್ಯದಲ್ಲಿ ಒಂದಾದ ನವಣೆಯನ್ನು ಉಳಿಸಿ ಬೆಳೆಸುತ್ತಿರುವುದು ಹೆಗ್ಗಳಿಕೆ.
ಜೋಳ, ಗೋದಿಯಲ್ಲೂ ಹಲವು ತಳಿಗಳನ್ನು ಸಂರಕ್ಷಿಸಿಕೊಂಡು ಬಂದಿದ್ದಾರೆ.
ತರಕಾರಿ ಬೆಳೆಗಳಿಂದಲೇ ಆರಂಭದಲ್ಲಿ ಬದುಕು ಕಟ್ಟಿಕೊಂಡ ವಗ್ಗಿ ಸಹೋದರರರು ವಿವಿಧ ತರಕಾರಿಗಳನ್ನು ಈಗಲೂ ಬೆಳೆಸುತ್ತಿದ್ದಾರೆ. ತಪ್ಪಲು ಪಲ್ಯಗಳು, ಕುಂಬಳಕಾಯಿ, ಬದನೆಕಾಯಿ, ಚೌಳಿಕಾಯಿ, ಬೆಂಡೆಕಾಯಿ, ಹಾಗಲಕಾಯಿ ಮುಂತಾದವುಗಳನ್ನು ಬೆಳೆಯುತ್ತಾರೆ. ಇದಲ್ಲದೆ ಮಸಾಲೆ ಪದಾರ್ಥದ ಬೆಳೆಗಳಾದ ಕಾಳು ಮೆಣಸು, ದಾಲ್ಚಿನ್ನಿ, ಚಕ್ರಮೊಗ್ಗು ಏಲಕ್ಕಿ, ಲವಂಗ ಮೊದಲಾದವುಗಳು ಇವರ ಜಮೀನಿನಲ್ಲಿ ಸ್ಥಾನ ಪಡೆದಿವೆ. ಔಷಧೀಯ ಸಸ್ಯಗಳಾದ ಅಶ್ವಗಂಧ, ಶತಾವರಿ, ಈಶ್ವರ ಬಳ್ಳಿ, ಶಂಖಪುಷ್ಪ, ಆಡುಸೋಗೆ, ಒಳಮುಚುಕ, ಹೊರಮುಚುಕ, ಕೆಂಪು, ಕರಿ, ಬಿಳಿ ಮತ್ತು ಬಟ್ಟು ಗುಲಗಂಜಿ ಮುಂತಾದ ಔಷಧೀಯ ಸಸ್ಯವಿದೆ.
ಪಶು ಸಂಗೋಪನೆ
ಕೃಷಿಗೆ ಪಶುಸಂಗೋಪನೆ ಪೂರಕ. ಕೃಷಿಗೆ ಬೇಕಾದ ಗೊಬ್ಬರದ ಮೂಲ ಜಾನುವಾರು. ಎಮ್ಮೆ, ಹಸು, ಎತ್ತುಗಳನ್ನು ಸಾಕಿದ್ದಾರೆ. ಹಿಂದೆ ಉಳುಮೆಗೆ ಎತ್ತುಗಳು ಹೆಚ್ಚು ಬಳಕೆ ಇದ್ದವು. ಈಗ ಹಾಗಿಲ್ಲ. ಯಾಂತ್ರಿಕರಣಕರಣದಿಂದ ಉಳುಮೆ ಮಾಡಲಾಗುತ್ತದೆ. ಎತ್ತುಗಳನ್ನು ಉಳಿಸಿಕೊಂಡಿದ್ದಾರೆ. ಎತ್ತಿನ ಗಾಡಿಯಿದೆ. ವಿವಿಧ ತಳಿಯ ಸುಮಾರು 3೦ ಆಕಳುಗಳಿವೆ. ಇದಲ್ಲದೆ 8 ಎಮ್ಮೆ, 5೦ ಮೇಕೆಗಳಿವೆ. ಟರ್ಕಿ, ಖಡಕ್‌ನಾಥ್ ಸೇರಿದಂತೆ ಐದಾರು ತಳಿಯ ಕೋಳಿಗಳನ್ನು ಸಾಕಿದ್ದಾರೆ. ದನಕರುಗಳ ಸಗಣಿ ಮತ್ತು ಕೃಷಿತ್ಯಾಜ್ಯಗಳನ್ನು ಕಂಪೋಸ್ಟ್ ಗೊಬ್ಬರ ತಯಾರಿಸಲಾಗುತ್ತದೆ. ಜಾನುವಾರುಗಳ ಮೇವಿಗಾಗಿ ಎರಡು ಮೂರು ಎಕರೆ ಹಸಿರು ಮೇವು ಬೆಳೆದಿದ್ದಾರೆ. ಜೋಳದ ದಂಟು, ಕಬ್ಬಿನ ತ್ಯಾಜ್ಯಗಳು ಮೇವಾಗಿ ಬಳಕೆಯಾಗುತ್ತದೆ. ಅಲ್ಲದೆ ಗೋಮೂತ್ರವನ್ನು ಬಳಸಿ ಜೀವಾಮೃತ, ಗೋಕೃಪಾಮೃತಗಳನ್ನು ಬಳಸುವುದರಿಂದ ಸಾವಯವ ಕೃಷಿಗೆ ಅನುಕೂಲವಾಗಿದೆ. ರಾಸಾಯನಿಕ ಗೊಬ್ಬರಕ್ಕಾಗಿ ಮಾಡಬೇಕಾದ ವೆಚ್ಚ ಕಡಿತವಾಗಿದೆ.
ಬೃಹತ್ ಬಾವಿ
ಆರಂಭದಲ್ಲಿ ಕೃಷಿಗೆ ನೀರಿನ ಸಮಸ್ಯೆಯಿತ್ತು. ಕೊಳವೆ ಬಾವಿಗಳನ್ನು ತೋಡಿಸಿದರೂ ಪ್ರಯೋಜನಕ್ಕೆ ಬರಲಿಲ್ಲ. ಭಗೀರಥ ಪ್ರಯತ್ನ ಮಾಡಿ 11೦ ಅಡಿ ಉದ್ದ ಅಗಲದ ಮತ್ತು 6೦ ಅಡಿ ಆಳದ ಬೃಹತ್ ಬಾವಿಯನ್ನು ತೋಡಿಸಿ ನೀರಿನ ಸಮಸ್ಯೆ ನೀಗಿಸಿಕೊಂಡರು. ಇದರೊಂದಿಗೆ ಮೀನು ಸಾಕಾಣೆಯೂ ಆದಾಯಕ್ಕೊಂದು ಮೂಲವಾಯಿತು.
ಕೃಷಿ ಚಟುವಟಿಕೆಗೆ ಬಹುತೇಕವಾಗಿ ಯಂತ್ರೋಪಕರಣಗಳ ಬಳಕೆಯಿಂದ ಕೃಷಿಕಾರ್ಮಿಕರ ಅವಲಂಬನೆ ಕಡಿಮೆಯಾಗಿದೆ. ಅವಿಭಕ್ತ ಕುಟುಂಬವಾದರಿಂದ ಕೃಷಿ ಕಾರ್ಯಗಳನ್ನು ಕುಟುಂಬದ ಸದಸ್ಯರೇ ನಿಭಾಯಿಸುವುರಿಂದ ಸಕಾಲದಲ್ಲಿ ಕೃಷಿಚಟುವಟಕೆಗಳನ್ನು ನಿರ್ವಹಿಸಲು ಅನುಕೂಲವಾಯಿತು. ಬೀರಪ್ಪ ವಗ್ಗಿಯವರ ಇಬ್ಬರು ಸಹೋದರರು ಅವರೊಂದಿಗೆ ಕೃಷಿಕ್ಷೇತ್ರದಲ್ಲಿ ಕೈಜೋಡಿಸಿದರೆ ಉಳಿದ ನಾಲ್ಕು ಮಂದಿ ಶಿಕ್ಷಣ, ಪತ್ರಿಕಾರಂಗ ಹಾಗೂ ಖಾಸಗಿ ವಲಯದಲ್ಲಿ ದುಡಿಯುತ್ತಿದ್ದಾರೆ.
ಸಾಧನೆಗೆ ಪ್ರಶಸ್ತಿಗಳ ಗರಿ
ಬೀರಪ್ಪ ವಗ್ಗಿ ಮತ್ತು ಸಹೋದರರು ಮಾಡಿರುವ ಕೃಷಿ ಸಾಧನೆಯನ್ನು ಗುರುತಿಸಿ ಸರಕಾರ, ಸಂಘ ಸಂಸ್ಥೆಗಳು ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಿವೆ. ಭಾರತ ಸರಕಾರ ರಾಷ್ಟ್ರ ಮಟ್ಟದ ಬಿಲಿನಿಯರ್ ಆಪ್ ಇಂಡಿಯಾ 2023 ಪ್ರಶಸ್ತಿಯನ್ನು ನೀಡಿದೆ. ಕರ್ನಾಟಕ ಸರಕಾರದ ಕೃಷಿ ಪಂಡಿತ ಪ್ರಶಸ್ತಿ, ವಿಜಯ ಕರ್ನಾಟಕ ಸೂಪರ್ ಸ್ಟಾರ್ ಪ್ರಶಸ್ತಿ, ತೋಟಗಾರಿಕೆ ಹಾಗೂ ಕೃಷಿ ವಿವಿಗಳ ಪ್ರಶಸ್ತಿ, ಸಾವಯವ ಕೃಷಿ ಪ್ರಶಸ್ತಿ, ಕರ್ನಾಟಕ ಕೃಷಿ ಚೇತನ ಪ್ರಶಸ್ತಿ ಮುಂತಾದ ಹಲವಾರು ಪ್ರಶಸ್ತಿಗಳ ಸರದಾರರು.
ಕೃಷಿ ವಿವಿ ಧಾರವಾಡ, ಕೃಷಿ ಮಹಾ ವಿದ್ಯಾಲಯ ವಿಜಯಪುರ, ತೋಟಗಾರಿಕೆ ವಿವಿ ಬಾಗಲಕೋಟೆ, ಲಿಂಬು ಅಭಿವೃದ್ಧಿ ಮಂಡಳಿ, ದ್ರಾಕ್ಷಿ ಬೆಳೆಗಾರರ ಸಂಘ ವಿಜಯಪುರ ಮೊದಲಾದ ಸಂಸ್ಥೆಗಳು, ಸಹಕಾರಿ ಸಂಘ, ಹಣಕಾಸು ಸಂಸ್ಥೆಗಳು ಸಹಕಾರ ನೀಡಿ ಪ್ರೋತ್ಸಾಹಿಸಿವೆ. ಇವರಲ್ಲದೆ ಕುಟುಂಬದ ಹಿತೈಷಿಗಳು ಸಹಕಾರ ನೀಡಿರುವುದನ್ನು ವಗ್ಗಿ ಸಹೋದರರು ನೆನಪಿಸಿಕೊಳ್ಳುತ್ತಾರೆ. ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು, ವಿದ್ಯಾರ್ಥಿಗಳು, ಕೃಷಿಯಾಸಕ್ತರು, ರೈತರು ವಗ್ಗಿ ಕೃಷಿಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದಾರೆ.
ಮಾಹಿತಿಗೆ ಮೊ. 9449610084
ನಿರೂಪಣೆ : ರಾಧಾಕೃಷ್ಣ ತೊಡಿಕಾನ