– ನವಜಾತ ಕಾರ್ಕಳ
ಕಾಡು ನಾಡಿನ ಒಡನಾಡಿಗಳಾದ ಜೇನುನೊಣಗಳು ಪರೋಪಕಾರಿ ಜೀವಿಗಳು. ಪ್ರಕೃತಿಯಲ್ಲಿ ನಡೆಯುವ ಪರಾಗ ಸ್ಪರ್ಶ, ಗಿಡಮರಗಳ ಫಲವಂತಿಕೆಯ ರಾಯಬಾರಿಗಳು. ಕಾಡಿನ ಹಾಗೂ ಕೃಷಿಕರ ಬೆಳೆಗಳ ಮಕರಂದವನ್ನು ಹೀರಿ ಸಂಗ್ರಹಿಸಿದ ಮಧುವನ್ನು ಪರರಿಗೆ ನೀಡಿ ಧನ್ಯತೆಯನ್ನು ಕಂಡುಕೊಳ್ಳುವ ಜೇನು ನೊಣಗಳ ಬದುಕಿನ ಒಳನೋಟ ಅಚ್ಚರಿ ಮೂಡಿಸುತ್ತದೆ. ಜಮೀನು ಇರುವವರು, ಇಲ್ಲದವರು, ಉದ್ಯೋಗದಲ್ಲಿರುವವರು, ನಿವೃತ್ತರು, ನಿರುದ್ಯೋಗಿಗಳು ಆಸಕ್ತಿಯಿದ್ದರೆ ಯಾರೂ ಬೇಕಾದರೂ ಮಾಡಬಹುದಾದ ಉಪಕಸುಬು ಅಥವಾ ಸ್ವ ಉದ್ಯೋಗ ಜೇನು ಕೃಷಿ
ಉದ್ಯೋಗದಿಂದ ನಿವೃತ್ತಿಯಾದರೆ ಬಹುತೇಕ ಮಂದಿಗೆ ನಗರದಲ್ಲೊಂದು ಮನೆ ಮಾಡಿ ಬದುಕುವ ಆಸೆ. ಹಳ್ಳಿಯಲ್ಲಿ ಕೃಷಿ ಭೂಮಿಯಿದ್ದರೆ ಅದನ್ನು ಮಾರಾಟ ಮಾಡಿ ಪೇಟೆ ಪಟ್ಟಣ ಸೇರಿದವರಿದ್ದಾರೆ. ಇನ್ನು ಕೆಲವರು ನಿವೃತ್ತಿಯ ನಂತರ ಹಳ್ಳಿಗಳಿಗೆ ತೆರಳಿ ಕೃಷಿಯಲ್ಲಿ ತೊಡಗಿಕೊಂಡು ಖುಷಿಪಡುತ್ತಾರೆ. ಕಾನಗೋಡಿನ ಮಾರುತಿ ನಾಗು ಬರ‍್ಕರ್ ಅವರು ನಿವೃತ್ತಿಯ ನಂತರ ಹೋದದ್ದು ತನ್ನ ಹಳ್ಳಿಗೆ. ಸ್ವ ಉದ್ಯೋಗವನ್ನಾಗಿ ಆಯ್ದುಕೊಂಡದ್ದು ಜೇನು ಕೃಷಿ. ಕಳೆದ ಹತ್ತು ವರ್ಷಗಳಿಂದ ಜೇನುಕೃಷಿಯಲ್ಲೇ ತೊಡಗಿ ಯಶಸ್ಸಿನ ಮೆಟ್ಟಿಲೇರಿದವರು. ನಿವೃತ್ತಿಯ ನಂತರ ಜೇನಿನ ಸವಿಯುಣಿಸುತ್ತಲೇ ಸಂತೃಪ್ತಿ ಕಂಡಿದ್ದಾರೆ
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕಾನಗೋಡಿನ ಮಾರುತಿ ನಾಗು ಬರ‍್ಕರ್ ಪಿಯುಸಿ ವಿದ್ಯಾಭ್ಯಾಸ ಮುಗಿಸಿದ ನಂತರ 1976 ರಲ್ಲಿ ಸಾರಿಗೆ ಇಲಾಖೆಯ ಭದ್ರತಾ ವಿಭಾಗದಲ್ಲಿ ಉದ್ಯೋಗಕ್ಕೆ ಸೇರಿದರು. 38ವರ್ಷಗಳ ಕಾಲ ವಿವಿಧ ಹುದ್ದೆಗಳನ್ನು ನಿರ್ವಹಿಸುತ್ತಾ ೨೦೧೪ರಲ್ಲಿ ಶಿರಸಿಯಲ್ಲಿ ನಿವೃತ್ತರಾದರು. ಆನಂತರ ಮಾರುತಿ ನಾಗು ಬೋರ್ಕರ್ ತಮ್ಮ ಹಳ್ಳಿಗೆ ಬಂದು ಕೃಷಿಯಲ್ಲಿ ತೊಡಗಿಕೊಂಡರು. ಆ ಸಂದರ್ಭದಲ್ಲಿ ಜೇನು ಕೃಷಿಯತ್ತ ಹುಟ್ಟಿದ ಆಸಕ್ತಿಯಿಂದಾಗಿ ಇಲಾಖೆಯವರನ್ನು ಸಂಪರ್ಕಿಸಿದರು. ಎರಡು ಪೆಟ್ಟಿಗೆಗಳನ್ನು ತೋಟಗಾರಿಕೆ ಇಲಾಖೆಯಿಂದ ಪಡೆದು ಮನೆ ಹತ್ತಿರ ತೋಟದಲ್ಲಿ ಇರಿಸಿದರು. ಇಲ್ಲಿಂದ ಅವರ ನಿವೃತ್ತ ಜೀವನದ ಮತ್ತೊಂದು ಮಗ್ಗಲು ತೆರೆದುಕೊಂಡಿತು. ಜೇನು ಕೃಷಿಯೇ ಆಪ್ತವಾಯಿತು. ಪ್ರಧಾನವಾಯಿತು.
ಈ ಹತ್ತು ವರ್ಷಗಳಲ್ಲಿ ಇನ್ನೂರಕ್ಕೂ ಹೆಚ್ಚು ಪೆಟ್ಟಿಗೆಗಳನ್ನಿರಿಸಿ ಜೇನು ಕೃಷಿ ಮಾಡಿದ್ದಾರೆ. ಅವರಿಗೀಗ 71 ವರ್ಷ. ಜೇನು ಕೃಷಿ ಅವರ ಲವಲವಿಕೆಯನ್ನು ಹೆಚ್ಚಿಸಿದೆ. ಸದ್ಯ ಅವರಲ್ಲಿ 160 ಪೆಟ್ಟಿಗೆಗಳಿವೆ. ವರ್ಷಕ್ಕೆ ಏಳೆಂಟು ಕ್ವಿಂಟಾಲ್ ಜೇನು ಪಡೆಯುತ್ತಾರೆ.
ಜೇನು ತುಪ್ಪ, ಮೇಣ ಹಾಗೂ ಇತರ ಉತ್ಪನ್ನಗಳನ್ನು ಪಡೆಯುವ ಅವರು ಎಲ್ಲಾ ಕಾಲಕ್ಕೂ ಒಂದೇ ರೀತಿಯ ಜೇನು ಇಳುವರಿ ತೆಗೆಯಲಾಗುವುದಿಲ್ಲ. ಆಯಾ ಋತುಮಾನಕ್ಕೆ ಅನುಗುಣವಾಗಿ ಗಿಡಮರಗಳಲ್ಲಿ ಬಿಡುವ ಹೂಗಳಿಂದ ಮಕರಂದದ ಲಭ್ಯತೆಗೆ ಅನುಗುಣವಾಗಿ 1 ಕೆಜಿಯಿಂದ 1೦ ಕೆಜಿವರೆಗೂ ಒಂದು ಜೇನು ಪೆಟ್ಟಿಗೆಯಿಂದ ಇಳುವರಿ ಪಡೆಯಬಹುದು ಎನ್ನುತ್ತಾರೆ ಮಾರುತಿಯವರು. ಕೆಜಿಗೆ ರೂ. 6೦೦ ರಂತೆ ಮಾರಾಟ ಮಾಡುತ್ತರೆ.
ರಾಜ್ಯ ತೋಟಗಾರಿಕಾ ಇಲಾಖೆಯ ಮಾನ್ಯತೆ ಅಡಿಯಲ್ಲಿ ಜೇನು ಸಂತತಿ ಅಭಿವೃದ್ಧಿ ಪಡಿಸಿ 4500 ಕ್ಕೂ ಹೆಚ್ಚು ಕುಟುಂಬಗಳನ್ನು ಮಾರಾಟ ಮಾಡಿರುವುದು ಅವರ ಜೇನು ಕೃಷಿಯಾಸಕ್ತಿ, ಶ್ರದ್ಧೆ. ಕಠಿನ ಶ್ರಮಕ್ಕೆ ಸಾಕ್ಷಿಯಾಗಿದೆ. ಶಾಲಾ ಕಾಲೇಜು ವಿದ್ಯಾರ್ಥಿಗಳು ಇವರಲ್ಲಿ ತರಬೇತಿ ಪಡೆದು ಜೇನು ಕೃಷಿ ಆಸಕ್ತಿ ಬೆಳೆಸಿಕೊಂಡಿದ್ದಾರೆ. ರೈತರಿಗೆ, ಸ್ವದ್ಯೋಗ ಬಯಸುವ ಮಹಿಳೆಯರಿಗೆ, ನೌಕರಿಯಲ್ಲಿದ್ದರೂ ಹವ್ಯಾಸಕ್ಕಾಗಿ ಜೇನು ಕೃಷಿ ಮಾಡುವವರಿಗೆ ತರಬೇತಿಯಿತ್ತು ಜೇನು ಕೃಷಿ ಕೈಗೊಳ್ಳಲು ಪ್ರೇರೇಪಣೆ ನೀಡಿದ್ದಾರೆ.
ವಸ್ತು ಪ್ರದರ್ಶನ ಮತ್ತು ಮಾರಾಟ ಮಳಿಗೆಗಳಲ್ಲಿ ಜೇನಿನ ಮಾರಾಟ ಮಾಡುತ್ತಾರಾದರೂ ಮಾರುಕಟ್ಟೆಯನ್ನು ಹುಡುಕಿ ಹೋಗುವುದಿಲ್ಲ. ಇವರ ಜೇನಿನ ಗುಣಮಟ್ಟವನ್ನು ನೋಡಿ ಮನೆಗೆ ಬಂದು ಜೇನು ಖರೀದಿಸುತ್ತಾರೆ. ಜೇನಿಗೆ ಬೇಡಿಕೆಯಿದೆ.. ಆದರೆ ಕೆಲವೊಮ್ಮೆ ಅಷ್ಟು ಉತ್ಪನ್ನ ತನ್ನಲ್ಲಿರುವುದಿಲ್ಲ. ಎಂದು ಅವರು ಹೇಳುತ್ತಾರೆ. ಸ್ವಂತ ಜಮೀನು ಇಲ್ಲದವರು, ನೀರಾಶ್ರಯವಿಲ್ಲದ ಜಮೀನು ಇರುವವರೂ ಜೇನು ಕೃಷಿಯಿಂದ ಸಂಪಾದನೆ ಮಾಡಬಹುದು. ಜೇನು ಸಾಕಾಣೆಯಿಂದ ಜೇನಿನ ಉತ್ಪನ್ನಗಳಷ್ಟೇ ಅಲ್ಲದೆ ಪರೋಕ್ಷ ಪ್ರಯೋಜನಗಳು ಹೆಚ್ಚು. ಪರಾಗ ಸ್ಪರ್ಶದಿಂದ ಬೆಳೆಗಳಲ್ಲಿ ಅಧಿಕ ಇಳುವರಿಯನ್ನು ಪಡೆಯಲು ಸಾಧ್ಯ.
ಜೇನು ಕೃಷಿಕರಿಗೆ ಮಾತ್ರವಲ್ಲ. ರೈತರಿಗೂ ಆದಾಯ ಹೆಚ್ಚಿ ಇದರ ಪ್ರಯೋಜನವಾಗುತ್ತದೆ. ಜೇನು ಕುಟುಂಬಗಳನ್ನು ಸ್ಥಳಾಂತರ ಮಾಡುವುದರಿಂದ ಪರಿಸರ ಅಭಿವೃದ್ಧಿ, ಬೆಳೆಗಳ ಸಮೃದ್ಧಿ, ಜೇನು ಸಂತತಿ ಅಭಿವೃದ್ಧಿ ಪಡಿಸಿದ ಸಂತೃಪ್ತಿ ಮಾರುತಿ ಬರ‍್ಕರ್ ಹೊಂದಿದ್ದಾರೆ. ಅವರು ತನ್ನ ಜೀವನ ಪೂರ್ತಿ ಜೇನು ಕೃಷಿಯಲ್ಲೇ ತೊಡಗಿಕೊಳ್ಳುವುದಲ್ಲದೆ ಸ್ವ ಉದ್ಯೋಗ ಕೈಗೊಳ್ಳುವವರಿಗೆ ಮಾಹಿತಿಯನ್ನು ನೀಡುತ್ತೇನೆ. ಜೇನು ಸಂತತಿ ಹೆಚ್ಚಿಸುವುದರೊಂದಿಗೆ ನಾಡಿನ ಬೆಳೆಯನ್ನು ಅಭಿವೃದ್ಧಿ ಪಡಿಸೋಣ ಎನ್ನುವ ಆಶಯ ಮಾರುತಿ ಅವರದಾಗಿದೆ.
ತೋಟಗಾರಿಕೆ ಇಲಾಖೆಯಲ್ಲಿ ರೈತರಿಗೆ ಮಾಹಿತಿ ನೀಡಿರುವುದಲ್ಲದೆ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ, ಕುಮುಟಾ ರುಡ್ಸೆಟ್ ತರಬೇತಿ ಕೇಂದ್ರದಲ್ಲಿ ಹಾಗೂ ತನ್ನ ಜೇನು ಸಾಕಾಣೆ ಘಟಕಕ್ಕೆ ಬಂದ ಸಾವಿರಾರು ಮಂದಿಗೆ ಮಾಹಿತಿ ಮಾರ್ಗದರ್ಶನ ನೀಡಿದ್ದಾರೆ. ಇವರ ಪ್ರೇರಣೆಯಿಂದ ಅದೆಷ್ಟೋ ಮಂದಿ ಜೇನು ಕೃಷಿಕರಾಗಿ ರೂಪುಗೊಂಡಿದ್ದಾರೆ.
ಉದ್ಯೋಗದಲ್ಲಿದ್ದಾಗಲೂ ದಕ್ಷ ಕಾರ್ಯನಿರ್ವಹಣೆಗೆ ಅವರು ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಜೇನು ಕೃಷಿ ಸಾಧನೆಗಾಗಿ ಈ ಹತ್ತು ವರ್ಷಗಳಲ್ಲಿ ಹಲವು ಪ್ರಶಸ್ತಿಗಳು ಅವರನ್ನು ಅರಸಿ ಬಂದಿವೆ. ದೆಹಲಿಯ ನೇಶನಲ್ ಬೀ ಬೋರ್ಡ್, ತೋಟಗಾರಿಕಾ ಇಲಾಖೆ, ಜಿ.ಕೆ.ವಿ.ಕೆ ಬೆಂಗಳೂರು ಸೇರಿದಂತೆ 13 ಕ್ಕೂ ಸಂಸ್ಥೆಗಳು ಅವರನ್ನು ಗುರುತಿಸಿ ಗೌರವಿಸಿವೆ. ಮಾಹಿತಿಗೆ ಮೊ.9731014449