ಕರಾವಳಿ ಭಾಗದಲ್ಲಿ ಎಲ್ಲೆಂದರಲ್ಲಿ ಕಣ್ಣಿಗೆ ಕಾಣುವಷ್ಟು ದೂರ ಹಸಿರು ಹೊದ್ದು ಅಥವಾ ಬಂಗಾರದ ಬಣ್ಣ ಮೆತ್ತಿಕೊಂಡಿದ್ದ ಭತ್ತದ ಗದ್ದೆಗಳಿದ್ದವು. ಈಗ ಹೆಚ್ಚಿನ ಭತ್ತದ ಗದ್ದೆಗಳು ಕ್ಷೀಣಿಸುತ್ತಾ ಬಂದಿವೆ. ಕೆಲವು ಭಾಗಗಳಲ್ಲಿ ಗದ್ದೆಗಳು ಅಡಿಕೆ, ತೆಂಗು ಮೊದಲಾದ ತೋಟಗಾರಿಕಾ ಬೆಳೆಗಳಿಗೆ ಮಾರ್ಪಟ್ಟಿವೆ. ಮತ್ತೆ ಕೆಲವೆಡೆ ಭತ್ತದ ಬೇಸಾಯ ಲಾಭದಾಯಕವಲ್ಲ ಎಂಬ ಭಾವನೆ ಮೂಡಿ ಮನೆಯ ಬಳಕೆಗೆ ಬೇಕಾದಷ್ಟು ಬೆಳೆದು ಕೊಳ್ಳಲು ಸೀಮಿತವಾಗಿಬಿಟ್ಟಿದೆ. ಯುವಸಮದಯಗಳು ಉದ್ಯೋಗ ಅವಕಾಶಗಳನ್ನು ಅರಸಿ ಪಟ್ಟಣ ಸೇರುತ್ತಿರುವುದಿಂದ, ಕೃಷಿಕಾರ್ಮಿಕರ ಸಮಸ್ಯೆ ನಿಭಾಯಿಸಲಾಗದೆ ಭತ್ತದ ಭೂಮಿ ಪಾಳು ಬೀಳಲಾರಂಭಿಸಿದೆ.
ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಬಹಳಷ್ಟು ರೈತರು ಭತ್ತದ ಕೃಷಿಯನ್ನೇ ಅವಲಂಭಿಸಿದವರು. ಅಡಿಕೆ, ತೆಂಗು ಹಾಗೂ ಕಾಳುಮೆಣಸು ಕೊಕ್ಕೋ ಮೊದಲಾದ ತೋಟಗಾರಿಕೆ ಬೆಳೆಗಳು ಇವೆಯಾದರೂ ಭತ್ತದ ಬೆಳೆಯನ್ನು ಬಿಟ್ಟವರಲ್ಲ. ಆದರೆ ಇತ್ತೀಚಿನ ವರ್ಷಗಳಲ್ಲಿ ನಾನಾ ಕಾರಣಗಳಿಂದ ಭತ್ತದ ಕೃಷಿ ನೆಲಕಚ್ಚುವ ಹಂತಕ್ಕೆ ಬಂದು ತಲುಪಿತ್ತು. ಇದನ್ನು ಮನಗಂಡು ಭತ್ತದ ಕೃಷಿ ಉಳಿಸಿ ಬೆಳೆಸಬೇಕೆಂಬ ಸಮಾನ ಮನಸ್ಕ ರೈತಾಪಿ ವರ್ಗದ ಆಶಯದೊಂದಿಗೆ ಹುಟ್ಟಿದ ಸಂಸ್ಥೆ ಶ್ರೀ ಮೂಕಾಂಬಿಕಾ ಭತ್ತ ಬೆಳೆಗಾರರ ಒಕ್ಕೂಟ.
ಬೈಂದೂರು ತಾಲೂಕಿನ ಉಪ್ಪುಂದ ಗ್ರಾಮದ ನಾಯಕನ ಕಟ್ಟೆಯಲ್ಲಿ ಕೇಂದ್ರ ಕಚೇರಿಯನ್ನು ಈ ಒಕ್ಕೂಟವು ಹೊಂದಿದೆ. ಈ ಒಕ್ಕೂಟದಲ್ಲಿ ತಾಲೂಕಿನ ಬಡಾಕೆರೆ, ಹಕ್ಲಾಡಿ, ಹೇರಂಜಾಲು, ನಾಡ, ನಾಗೂರು, ಸೇನಾಪುರ, ಬಸ್ರೂರು, ತಾರಿಬೇರು, ಕೊಡೇರಿ, ಕೊಂಕಿ, ಕೆರ್ಗಾಲು, ಹೊಸೂರು, ಹೊಸಾಡು, ಹೆರೂರು, ಖಂಬದ ಕೋಣೆ, ಮೊವಾಡಿ, ಅಸ್ಲಾಡಿ ಮೊದಲಾದ ಗ್ರಾಮಗಳ ಭತ್ತದ ಕೃಷಿಕರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಒಕ್ಕೂಟವು ತನ್ನದೇ ಆದ ಯೋಜನೆಗಳನ್ನು ರೂಪಿಸಿಕೊಂಡು ಯಶಸ್ಸಿನ ಪಥವನ್ನು ಕಂಡಿದೆ. ಈ ತಾಲೂಕಿನಲ್ಲಿ ವಾರ್ಷಿಕವಾಗಿ ಒಂದು ಅಥವಾ ಎರಡು ಬೆಳೆ ತೆಗೆವ ಬೇಸಾಯಗಾರರು, ಮಳೆಯಾಶ್ರಿತ ಬೇಸಾಯ ನೆಚ್ಚಿಕೊಂಡವರು. ಶೇಕಡ ೮೦ಕ್ಕೂ ಹೆಚ್ಚು ಸಣ್ಣ ಮತ್ತು ಅತಿ ಸಣ್ಣ ರೈತರು. ಭತ್ತದ ಕೃಷಿಯಿಂದ ದೂರ ಸರಿಯುತ್ತಿರುವವರನ್ನು ಒಕ್ಕೂಟದ ತೆಕ್ಕೆಗೆ ಸೆಳೆದುಕೊಂಡು ಭತ್ತ ಮತ್ತೆ ಬೆಳೆಯುವುದಕ್ಕೆ ಪ್ರೋತ್ಸಾಹಿಸಿದೆ.
ರೈತರ ಒಕ್ಕೂಟಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಉತ್ತೇಜನ ನೀಡಿತು. ನಬಾರ್ಡ್ ಆರ್ಥಿಕ ನೆರವಿತ್ತು ಪ್ರೋತ್ಸಾಹಿಸಿತು. ೨೦೧೪ರಲ್ಲಿ ಆರಂಭವಾದ ಈ ಒಕ್ಕೂಟವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಈ ಉದ್ಘಾಟಿಸಿದ್ದರು. ಈಗ ಯಶಸ್ಸಿನ ಹತ್ತು ಹೆಜ್ಜೆಗಳನ್ನಿಟ್ಟ ಈ ಒಕ್ಕೂಟ ಬೆಳೆಗಾರರಲ್ಲಿ ಆತ್ಮವಿಶ್ವಾಸವನ್ನು ತುಂಬಿದೆ. ಗ್ರಾಮೀಣ ಪ್ರದೇಶದಲ್ಲಿ ಕೃಷಿಕರನ್ನು ಸಂಘಟನೆಯಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸಿದೆ. ಕರಾವಳಿ ಜಿಲ್ಲೆಯಲ್ಲಿ ಭತ್ತದ ಬೆಳೆಗೆಂದೇ ಹುಟ್ಟಿಕೊಂಡ ಏಕೈಕ ಒಕ್ಕೂಟವೆಂಬ ಹೆಗ್ಗಳಿಕೆ ಪಡೆದಿದೆ. ಬೈಂದೂರು ತಾಲೂಕಿನ ಗ್ರಾಮಗಳನ್ನೇ ವ್ಯಾಪ್ತಿಯನ್ನಾಗಿರಿಸಿಕೊಂಡ ಒಕ್ಕೂಟದಲ್ಲಿ ೭೫೦ಕ್ಕೂ ಹೆಚ್ಚು ಮಂದಿ ಭತ್ತದ ಬೆಳೆಗಾರ ಸದಸ್ಯರಿದ್ದಾರೆ. ಹತ್ತು ವರ್ಷ ತುಂಬಿರುವ ಈ ಒಕ್ಕೂಟವು ತನ್ನ ಕಾರ್ಯ ಚಟುವಟಿಕೆಗಳನ್ನು ಹೆಚ್ಚಿಸಿಕೊಳ್ಳುತ್ತಾ ಹೋಗಿದೆ
ಗ್ರಾಮೀಣ ಅಭಿವೃದ್ಧಿ ಕೃಷಿಯನ್ನೇ ಅವಲಂಭಿತವಾದುದು. ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿ ಕೂಡ ಕೃಷಿಯನ್ನು ಅವಲಂಬಿಸಿ ಬೆಳೆದಿದೆ. ಬೆಳೆಯುತ್ತಿದೆ. ಆಧುನಿಕ ತಂತ್ರಜ್ಞಾನ, ಗುಣಮಟ್ಟದ ಕೃಷಿ ಸಾಮಾಗ್ರಿ, ಹಣಕಾಸು ಸೌಲಭ್ಯ ಹಾಗೂ ಮಾನವ ಸಂಪನ್ಮೂಲ, ಮಾರುಕಟ್ಟೆ ಅತೀ ಅವಶ್ಯಕವಾಗಿದೆ ಈ ಸಂಪನ್ಮೂಲದ ಕೊರತೆಯನ್ನು ಎದುರಿಸುತ್ತಿರುವ ಸಣ್ಣ ಮತ್ತು ಅತೀ ಸಣ್ಣ ಕೃಷಿಕರಿಗೆ ಇದರಿಂದ ಪ್ರಯೋಜನವಾಗಿದೆ. ಗ್ರಾಮ ಮಟ್ಟದಲ್ಲಿ ರೈತ ಪರ ಸಂಘಟನೆ ಹುಟ್ಟಿಕೊಂಡಾಗ ಅನ್ನದಾತನ ಕನಸುಗಳಿಗೆ ಜೀವಂತಿಕೆ ಪಡೆಯಲು ಸಾಧ್ಯವಾಗುತ್ತದೆ. ಈ ಕೆಲಸದಲ್ಲಿ ಒಕ್ಕೂಟ ಶ್ರಮಿಸುತ್ತಿದೆ.
ಒಕ್ಕೂಟದಲ್ಲಿ ೩೬ ರೈತ ಗುಂಪುಗಳಿದ್ದು ಭತ್ತ ಬೇಸಾಯಗಾರರ ಸಂಪರ್ಕ ಜಾಲಗಳನ್ನು ವಿಸ್ತರಿಸಲು ಅನುಕೂಲವಾಗಿದೆ. ಯಾಂತ್ರೀಕರಣ, ತಾಂತ್ರಿಕ ಮಾಹಿತಿ, ಕೃಷಿಗೆ ಬೇಕಾದ ಒಳಸುರಿಗಳು, ಮಾರುಕಟ್ಟೆ ವ್ಯವಸ್ಥೆ ಮತ್ತು ರೈತರ ಸಾಮಾಜಿಕ ಆರ್ಥಿಕ ಅಭಿವೃದ್ಧಿಯನ್ನು ಮೂಲ ಮಂತ್ರವಾಗಿರಿಸಿಕೊಂಡ ಒಕ್ಕೂಟವು. ಕೇಂದ್ರ ಹಾಗೂ ರಾಜ್ಯ ಸರಕಾರದ ಯೋಜನೆಗಳು ಭತ್ತ ಬೆಳೆಗಾರರಿಗೆ ಸಿಗುವಂತೆ ಮಾಡುವಲ್ಲಿ ಮುತುವರ್ಜಿ ವಹಿಸಿದೆ.
—ರೈತರು ಬೆಳೆದ ಭತ್ತವನ್ನು ತಾವೇ ಖರೀದಿಸಿ ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸುವುದು, ರೈತರಿಗೆ ಎಲ್ಲಾ ರೀತಿಯ ಸಹಕಾರ ನೀಡುವ ಉದ್ದೇಶ ಹೊಂದಿದೆ. ರೈತರಿಗೆ ನ್ಯಾಯವಾದ ಲಾಭಾಂಶ ದೊರಕಿಸಿ ಕೊಡುವುದಕ್ಕೆ ಒಕ್ಕೂಟ ಶ್ರಮಿಸುತ್ತಿದೆ. ರೈತರು ಬೆಳೆದ ಉತ್ಪನ್ನಗಳ ಮಾರಾಟ ಮಾರುಕಟ್ಟೆ ವರೆಗೆ ಮುತುವರ್ಜಿ ವಹಿಸುವುದಲ್ಲದೆ ರೈತರಿಗೆ ಬೇಕಾದ ಕೃಷಿ ಯಂತ್ರೋಪಕರಣಗಳು ಗೊಬ್ಬರ ಎಲ್ಲವನ್ನು ಅತ್ಯಂತ ಕಡಿಮೆ ಬೆಲೆಗೆ ರೈತರಿಗೆ ದೊರಕಿಸಿ ಕೊಡುವ ಒಕ್ಕೂಟವು ಪ್ರಸಕ್ತ ವರ್ಷ ಎರಡು ಕೋಟಿ ವ್ಯವಹಾರ ಮಾಡಿದೆ. ಮುಂದಿನ ಸಾಲಿನಲ್ಲಿ ಮೂರು ಕೋಟಿ ವ್ಯವಹಾರ ನಡೆಸುವ ಗುರಿ ಹೊಂದಿದೆ. 4೦೦ ಟನ್ ಭತ್ತ ಈ ಬಾರಿ ಖರೀದಿಸಿದೆ. ಮುಂದಿನ ವರ್ಷ 5೦೦ ಟನ್ ಗುರಿ ಇರಿಸಲಾಗಿದೆ ಎನ್ನುತ್ತಾರೆ ಅಧ್ಯಕ್ಷ ಚಂದ್ರ ಪೂಜಾರಿ ಹಕ್ಲಾಡಿ—–
ಭತ್ತದ ಬೆಳೆಗಾರರಲ್ಲಿ ನವ ಚೈತನ್ಯ
ಈ ಒಕ್ಕೂಟದ ಪ್ರೇರಣೆಯಿಂದ ಬಹಳಷ್ಟು ಭತ್ತದ ಬೇಸಾಯಗಾರರು ನವ ಚೈತನ್ಯ ಪಡೆದುಕೊಂಡಿದ್ದಾರೆ. ಕೂಲಿಯಾಳುಗಳ ಸಮಸ್ಯೆಯಿಂದ ಕೃಷಿ ಮುಂದುವರಿಸಲಾಗದ ಹಿರಿಯರು, ದೂರದ ಊರಿನಲ್ಲಿ ಉದ್ಯಮ ವ್ಯವಹಾರ ನಡೆಸುವವರು ಕೂಡ ತಮ್ಮ ಜಾಗದಲ್ಲಿ ಭತ್ತ ಬೆಳೆಯುವ ಉತ್ಸಾಹ ತೋರುತ್ತಿದ್ದಾರೆ. ಭತ್ತದ ಬೆಲೆ ಮಾರುಕಟ್ಟೆಯಲ್ಲಿ ಕುಸಿದರೆ ನಿಗದಿತವಾದ ಬೆಂಬಲ ಬೆಲೆ ಇದೆ. ಆದರೆ ಬೆಂಬಲ ಬೆಲೆಯಲ್ಲಿ ಅದರದೇ ಆದ ಮಾನದಂಡಗಳಿವೆ. ಸಾಮಾನ್ಯ ರೈತರಲ್ಲಿ ಬೆಂಬಲ ಬೆಲೆ ಬರುವಾಗ ಉತ್ಪನ್ನಗಳಿರುವುದಿಲ್ಲ. ಬೆಳಯಿರುವಾಗ ಬೆಲೆ ಇರುವುದಿಲ್ಲ. ಇದು ಎಲ್ಲಾ ಕಡೆ ರೈತರು ಎದುರಿಸುತ್ತಿರುವ ಸಮಸ್ಯೆ. ಆದರೆ ಒಕ್ಕೂಟ ಮಾತ್ರ ಮಾರುಕಟ್ಟೆ ದರಕಿಂತ ಉತ್ತಮ ಬೆಲೆ ನೀಡುತ್ತಾ ಬಂದಿದೆ
ಹಡಿಲು ಭೂಮಿಯಲ್ಲಿ ಭತ್ತ ಬೇಸಾಯ
ಭತ್ತ ಬೇಸಾಯ ಲಾಭದಾಯಕವಲ್ಲ ಎಂಬ ಭಾವನೆ ಮತ್ತು ನಾನಾ ಕಾರಣಗಳಿಂದ ಭತ್ತದ ಗದ್ದೆಗಳು ಪಾಳು ಬೀಳುತ್ತಿವೆ. ಇಂತಹ ಪಾಳು ಬಿದ್ದ ಗದ್ದೆಗಳಿಗೆ ಕಾಯಕಲ್ಪ ನೀಡುವ ಉದ್ದೇಶದಿಂದ ಒಕ್ಕೂಟವು ಶ್ರಮಿಸುತ್ತಿದೆ. ಬೈಂದೂರಿನ ಸೇನಾಪುರದ ಬಳಿ ಹಡಿಲು ಬಿಟ್ಟಿದ್ದ ಐದು ಎಕ್ರೆ ಜಾಗವನ್ನು ಗೇಣಿಗೆ ಪಡೆದು ಒಕ್ಕೂಟವು ಕಳೆದ ಎರಡು ವರ್ಷದಿಂದ ಭತ್ತ ಬೇಸಾಯ ಮಾಡುತ್ತಿದೆ. ಈ ಬೇಸಾಯದ ಉಸ್ತುವಾರಿಯನ್ನು ಕಳೆದ ಎರಡು ವರ್ಷಗಳಿಂದ ನಾಡದ ಗಣೇಶ ಅವರು ನೋಡಿಕೊಳ್ಳುತ್ತಿದ್ದಾರೆ ಸ್ವಲ್ಪ ನೀರಿನ ಸಮಸ್ಯೆಯಿಂದ ಕಾರ್ತಿ ಬೆಳೆ ಮಾತ್ರವಷ್ಟೇ ಮಾಡಲಾಗುತ್ತದೆ. ಇನ್ನು ಮುಂದಕ್ಕೆ ಕಲ್ಲಂಗಡಿ ಬೆಳೆಯ ಯೋಚನೆ¬ದೆ. ರೈತರಿಗೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಹಡಿಲು ಭೂಮಿಯಲ್ಲಿ ಭತ್ತದ ಬೇಸಾಯವನ್ನು ಮಾಡಲಾಗುತ್ತದೆ. ಕೃಷಿ ಭೂಮಿಯನ್ನು ಪಾಳು ಬಿಡಬಾರದು ಎಂಬುದೇ ಇದರ ಹಿಂದಿರುವ ಉದ್ದೇಶವಾಗಿದೆ. ಗದ್ದೆಗಳು ಪಾಳು ಬಿದ್ದವೆಂದರೆ ಭತ್ತದ ಕೃಷಿಯಷ್ಟೇ ಇಲ್ಲವಾಗುವುದಿಲ್ಲ. ಅದನ್ನು ಆಶ್ರಯಿಸಿಕೊಂಡು ಬದುಕುವ ಜೀವರಾಶಿಗಳಿಗೆ ಆಹಾರದ ಕೊಂಡಿ ಇಲ್ಲವಾಗುತ್ತದೆ. ಭತ್ತದ ಕೃಷಿಯ ಹಿಂದಿನ ಸಂಸ್ಕೃತಿ ಆಚರಣೆಗಳು ಮಾಯವಾಗುತ್ತವೆ.
ಬೇಸಾಯ ನಿರಾಳ
ಒಕ್ಕೂಟವು ತನ್ನ ೭೫೦ ಸದಸ್ಯರನ್ನು ಭತ್ತ ಬೆಳೆಯಲು ಪ್ರೋತ್ಸಾಹಿಸುತ್ತಾ ಬಂದಿದೆ. ಬೀಜ ಬಿತ್ತಿ ಬೆಳೆದು ಕಟಾವು ಮಾಡಿ ಮನೆ ತಲುಪಿಸುವ ತನಕ ಎಲ್ಲ ಕೆಲಸಗಳನ್ನು ಒಕ್ಕೂಟದ ಮೂಲಕವೇ ನಿರ್ವಹಿಸಲಾಗುತ್ತದೆ. ರೈತರು ಇದರ ಖರ್ಚು ವೆಚ್ಚಗಳನ್ನು ಭರಿಸಿದರಾಯಿತು.
ಭತ್ತ ಕಟಾವು ಆಯಿತೆಂದರೆ ಒಣಗಿಸಿ ಮಾರುಕಟ್ಟೆಗೆ ಕೊಂಡೊಯ್ಯುವವರೆಗೆ ರೈತರು ಮಾಡಬೇಕಾದ ಕೆಲಸಗಳನ್ನು ಒಕ್ಕೂಟವು ಕಡಿಮೆ ಮಾಡಿದೆ. ಯಂತ್ರದ ಮೂಲಕ ಕಟಾವು ಮಾಡಿದ ಭತ್ತವನ್ನು ಚೆನ್ನಾಗಿ ಒಣಗಿಸಿದರಾಯಿತು. ಒಕ್ಕೂಟದ ವತಿಯಿಂದ ಮನೆ ಬಾಗಿಲಿಗೆ ಟೆಂಪೋ ಬರುತ್ತದೆ. ಅಲ್ಲಿಯೇ ತೂಕ ಮಾಡಿ ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿರುವ ದರಕಿಂತ ಸ್ವಲ್ಪ ಜಾಸ್ತಿಯೇ ನೀಡಿ ಖರೀದಿಸುತ್ತದೆ. ರೈತರು ಮಾರುಕಟ್ಟೆಗೋ ಮಿಲ್ಲುಗಳಿಗೆ ಅಲೆಯಬೇಕಾಗಿಲ್ಲ. ಊಟಕ್ಕೆ ಬೇಕಾದಷ್ಟು ಅಕ್ಕಿ ಬೇಕೆಂದಾದರೆ ಉತ್ತಮ ಗುಣಮಟ್ಟದ ಕಜೆ ಅಕ್ಕಿಯನ್ನು ತಯಾರಿಸಿ ಮನೆ ಬಾಗಿಲಿಗೆ ತಂದು ಕೊಡಲಾಗುತ್ತದೆ
ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿ
ಒಕ್ಕೂಟದ ವ್ಯವಸ್ಥೆಯಿಂದ ಗ್ರಾಮೀಣ ಭಾಗದಲ್ಲಿ ಆರ್ಥಿಕ ಚಟುವಟಿಕೆಗಳು, ಹಡಿಲು ಭೂಮಿಯಲ್ಲಿ ಉತ್ಪಾದನೆ ಮಾಡಲು ತೊಡಗಿರುವುದರಿಂದ ಜನರಲ್ಲಿ ಒಂದಿಷ್ಟು ಆರ್ಥಿಕ ಚಟುವಟಿಕೆ ವೃದ್ಧಿಯಾಗಿದೆ. ಇದರೊಂದಿಗೆ ಯಂತ್ರೋಪಕರಣಗಳ ಉಪಯೋಗ ಹಾಗೂ ನಿರ್ವಹಣೆ, ಹಂತದಲ್ಲಿ ಉದ್ಯೋಗ ಅವಕಾಶಗಳಾಗಿವೆ. ರೈತರಿಗೆ ಬೇಕಾದ ಚಾಪೆ ನೇಜಿ ನರ್ಸರಿ, ಭತ್ತ ಶೇಖರಣೆಗೆ ಬೇಕಾದ ಗೋಣಿಚೀಲಗಳು, ಬೇಸಾಯಕ್ಕೆ ಬೇಕಾದ ಯಂತ್ರೋಪಕರಣಗಳನ್ನು ಅತಿ ಕಡಿಮೆ ಬೆಲೆಯಲ್ಲಿ ಒಕ್ಕೂಟವೇ ಪೂರೈಸುತ್ತದೆ.
ಗೃಹ ಉದ್ಯಮಕ್ಕೆ ಪ್ರೋತ್ಸಾಹ
ತಾಲೂಕಿನ ಕೃಷಿಕರ ಗೃಹ ಉದ್ಯಮಗಳ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುತ್ತಿರುವ ಒಕ್ಕೂಟ ಗೃಹ ಉದ್ಯಮದ ಚೇತರಿಕೆ ಬೆಂಬಲ ನೀಡುತ್ತಾ ಬಂದಿದೆ.. ರೈತರಿಂದ ಖರೀದಿಸಿದ ಭತ್ತದಿಂದಲೇ ಉತ್ತಮ ಗುಣಮಟ್ಟದ ಕಜೆ ಅಕ್ಕಿಯನ್ನು ಮಾರುಕಟ್ಟೆಗೆ ಪರಿಚಯಿಸಿದೆ. ೫ ಕೆಜಿಯಿಂದ ೨೫ ಕೆಜಿಯ ವರೆಗೆ ಒಕ್ಕೂಟದ ಮಳಿಗೆಯಲ್ಲಿ ಲಭ್ಯವಿದೆ. ಅದಲ್ಲದೆ ಮೂಕಾಂಬಿಕಾ ಬ್ರಾಂಡಿನ ಚಾ ಪುಡಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಗ್ರಾಮೀಣ ಭಾಗದಲ್ಲಿ ಗ್ರಹ ಉದ್ಯಮವನ್ನು ತೊಡಗಿಸಿ ಕೊಂಡವರಿಗೆ ಮಾರುಕಟ್ಟೆ ಅರಸಿ ಹೋಗುವ ಚಿಂತೆ ಇಲ್ಲ. ಅಗರಬತ್ತಿ ಸಾಬೂನು, ಆಹಾರ ಉತ್ಪನ್ನಗಳನ್ನು ಒಕ್ಕೂಟವೇ ಖರೀದಿಸಿ ಸದಸ್ಯರಿಗೆ ನೀಡುತ್ತದೆ. ಮನೆ ಬಳಕೆ ವಸ್ತುಗಳನ್ನು ರೈತರು ಇಲ್ಲಿಂದಲೇ ಖರೀದಿಸಬಹುದು. ಅದಲ್ಲದೆ ಕೃಷಿ ಚಟುವಟಿಕೆಗೆ ಬೇಕಾದ ವಸ್ತುಗಳಿವೆ.
ಬೀಜದಿಂದ ಉತ್ಪನ್ನಗಳನ್ನು ಮಾರುಕಟ್ಟೆಗೆ ತಲುಪಿಸುವವರೆಗೆ ರೈತರಿಗೆ ಏನೆಲ್ಲಾ ಅವಶ್ಯಕತೆ ಇದೆಯೋ ಆ ನೆರವನ್ನು ಒಕ್ಕೂಟವು ಒದಗಿಸುತ್ತದೆ. ಅಲ್ಲದೆ ಭತ್ತದ ಕೃಷಿಕರು ಭತ್ತ ಬೇಸಾಯದಿಂದ ದೂರವಾಗದಂತೆ ಎಲ್ಲಾ ರೀತಿಯೂ ಸಹಾಯ ಮಾಡುತ್ತಿದೆ ಎನ್ನುತ್ತಾರೆ ಒಕ್ಕೂಟದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜೇಂದ್ರ ಜಿ.ಎನ್
ಭತ್ತ ತೇವಾಂಶ ಪತ್ತೆ ಉಪಕರಣ
ಒಕ್ಕೂಟವು ಖರೀದಿ ಮಾಡಿದ ಭತ್ತದ ಗುಣಮಟ್ಟ ಕಂಡುಹಿಡಿಯಲು ತೇವಾಂಶ ಪತ್ತೆ ಉಪಕರಣವನ್ನು ಬಳಸಿಕೊಳ್ಳಲಾಗುತ್ತದೆ ಈ ಮಾಪಕವು ಭತ್ತದಲ್ಲಿನ ತೇವಾಂಶವನ್ನು ತಿಳಿಸುತ್ತದೆ. ಇದರಲ್ಲಿ ಸಿರಿಧಾನ್ಯ ಸೇರಿ ಕೆಲವು ಆಹಾರ ಧಾನ್ಯಗಳಲ್ಲಿರುವ ತೇವಾಂಶವನ್ನು ಪತ್ತೆಹಚ್ಚಿಸಲು ಸುಲಭವಾಗುತ್ತದೆ. ಕೆಲವೊಮ್ಮೆ ಹೆಚ್ಚು ತೇವಾಂಶವಿದ್ದರೆ ಇನ್ನಷ್ಟು ಒಣಗಿದ ನಂತರ ಕೊಡಿ ಎಂದು ಸಲಹೆ ನೀಡಿ ಸರಿಯಾಗಿ ಒಣಗಿದ ನಂತರವೇ ಖರೀದಿಸಲಾಗುತ್ತದೆ. ಸರಿಯಾದ ಅಂಗಳವಿಲ್ಲದವರು ನೇರವಾಗಿಯೂ ಮಾರಾಟ ಮಾಡುತ್ತಿದ್ದಾರೆ ಎನ್ನುತ್ತಾರೆ ಪ್ರಬಂಧಕ ಕಿರಣ್ ಕೆ.ವಿ
ಭತ್ತ ಬೇಸಾಯಕ್ಕೆ ಕೂಲಿಗಳನ್ನು ನೆಚ್ಚಿಕೊಳ್ಳಬೇಕಾಗಿತ್ತು. ಕೂಲಿ ಆಳುಗಳ ಅಲಭ್ಯತೆಯಿಂದ ಸಮಯಕ್ಕೆ ಸರಿಯಾಗಿ ಬೇಸಾಯ ಸಾಧ್ಯವಾಗುತ್ತಿರಲಿಲ್ಲ. ಇದರಿಂದ ಹೆಚ್ಚಿನ ಬೆಳೆಗಾರರು ನಷ್ಟಕ್ಕೀಡಾಗುತಿದ್ದರು. ಯಾಂತ್ರೀಕರಣದ ಕೃಷಿಯನ್ನು ನಮ್ಮ ಪರಿಸರದಲ್ಲಿ ಪರಿಚಯಿಸಿದ ಮೇಲೆ ಇಳುವರಿ ಜಾಸ್ತಿಯಾಗಿದೆ. ಬಹುತೇಕ ಸಣ್ಣ ಹಿಡುವಳಿದಾರರು ಯಾಂತ್ರೀಕರಣದಿAದಲೇ ಗದ್ದೆ ಕೆಲಸಗಳನ್ನು ಮಾಡುವುದರಿಂದ ಲಾಭದಾಯಕವಾಗಿದೆ. ಎನ್ನುತ್ತಾರೆ ಒಕ್ಕೂಟದ ಕಾರ್ಯದರ್ಶಿ ರವಿರಾಜ್
ಒಕ್ಕೂಟದ ಆಡಳಿತ ಮಂಡಳಿ
ಒಕ್ಕೂಟದ ಅಧ್ಯಕ್ಷರಾಗಿ ಚಂದ್ರ ಪೂಜಾರಿ ಹಕ್ಲಾಡಿ ಸಾರಥ್ಯ ವಹಿಸಿದ್ದಾರೆ. ಉಪಾಧ್ಯಕ್ಷರಾಗಿ ಮಂಜಯ್ಯ ಶೆಟ್ಟಿ ಹೊಸೂರು, ಕಾರ್ಯದರ್ಶಿಗಳಾಗಿ ರವಿರಾಜ್ ಕೊಡೇರಿ ಕೋಶಾಧಿಕಾರಿಯಾಗಿ ಶಿವರಾಂ ಶೆಟ್ಟಿ ಹಾಗೂ ಕಿರಣ್ ಪೂಜಾರಿ ಕುಂದಪುರ, ಸುರೇಂದ್ರ ನಾಯ್ಕ್ ಹೇರೂರು, ರಾಜು ಪೂಜಾರಿ ನಾಯಕನ ಕಟ್ಟೆ, ಗೀತಾ ಬಡಕೆರೆ, ಲಲಿತ ನಾಗೂರು ನಿರ್ದೇಶಕರಾಗಿದ್ದಾರೆ. ಒಕ್ಕೂಟದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ರಾಜೇಂದ್ರ ಜಿ.ಎನ್ ಹಾಗೂ ಪ್ರಬಂಧಕರಾಗಿ ಕಿರಣ್ ಕೆ ವಿ ಅವರು ಸೇವೆ ಸಲ್ಲಿಸುತ್ತಿದ್ದಾರೆ
–ರಾಧಾಕೃಷ್ಣ ತೊಡಿಕಾನ
-ಚಿತ್ರ : ರಾಮ್ ಅಜೆಕಾರ್