spot_img
Sunday, September 8, 2024
spot_imgspot_img
spot_img
spot_img

“ಸಸ್ಯ ತಳಿ ರಕ್ಷಕ ಕೃಷಿಕ” ಬಿ. ಕೆ. ದೇವರಾಯರ ಭತ್ತದ ತಳಿರಕ್ಷಣೆ ತಪಸ್ಸು

ಬರಹ: ಅಡ್ಡೂರು ಕೃಷ್ಣ ರಾವ್

ದಕ್ಷಿಣ ಕನ್ನಡದ ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮದ ಬಿ. ಕೆ. ದೇವರಾಯರು 13 ಸಪ್ಟಂಬರ್ 2023ರಂದು ನವದೆಹಲಿಯಲ್ಲಿ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ “ಸಸ್ಯ ತಳಿ ರಕ್ಷಕ ಕೃಷಿಕ” ಪ್ರಶಸ್ತಿ ಸ್ವೀಕರಿಸಿದ್ದು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಯಿತು. ಯಾಕೆಂದರೆ, ಮೊಟ್ಟಮೊದಲ ಕೃಷಿಕರ ಹಕ್ಕುಗಳ  ಗ್ಲೋಬಲ್ ಸಿಂಪೋಸಿಯಮ್‌ನಲ್ಲಿ ಆ ಪ್ರತಿಷ್ಠಿತ ಪ್ರಶಸ್ತಿ ಸ್ವೀಕರಿಸಿದ 16 ಕೃಷಿಕರಲ್ಲಿ ಅವರೊಬ್ಬರು.

ಆ ಸುದ್ದಿ ತಿಳಿದಾಗ ನಮ್ಮ ಜಿಲ್ಲೆಯ “ಭತ್ತದ ತಳಿ ರಕ್ಷಕ ತಪಸ್ವಿ” ಇಂತಹ ಸಮ್ಮಾನಕ್ಕೆ ಪಾತ್ರರಾದ ಸಂತಸ. ಜೊತೆಗೆ ಮಂಗಳೂರಿನ “ಸಾವಯವ ಕೃಷಿಕ ಗ್ರಾಹಕ ಬಳಗ (ರಿ.)” ಸದಸ್ಯರ ಜೊತೆಗೆ ಅವರ ಜಮೀನಿಗೆ ಭೇಟಿಯಿತ್ತಾಗ ಅವರು ನಮಗೆ ಹಾಕಿದ್ದ ಸವಾಲು ನೆನಪಾಯಿತು: “ನನ್ನಷ್ಟು ಶ್ರೀಮಂತ ಯಾರೂ ಇಲ್ಲ ಅಂತೇನೆ. ಯಾಕಂದ್ರೆ ನನ್ನ ಉಗ್ರಾಣ ತುಂಬಿದೆ – ಭತ್ತದ ಗೋಣಿಗಳಿಂದ. ಅದೆಲ್ಲ ನಾನೇ ಬೆಳೆಸಿದ ಭತ್ತ. ಅದ್ರಿಂದ ಅಕ್ಕಿ ಮಾಡಿ ವರ್ಷಗಟ್ಟಲೆ ಊಟ ಮಾಡಬಹುದು. ಇಂತಹ ಶ್ರೀಮಂತಿಕೆ ಯಾರಿಗುಂಟು ಹೇಳಿ!”

ದೇವರಾಯರು (79) ಸಂರಕ್ಷಿಸಿರುವುದು ಒಂದೆರಡಲ್ಲ, 240 ಭತ್ತದ ತಳಿಗಳನ್ನು. ಅವುಗಳಲ್ಲಿ ಬಹುಪಾಲು ದೇಸಿ ಭತ್ತದ ತಳಿಗಳು. ಜೀರ್-ಸಾಲೆ, ಗಂಧಸಾಲೆ, ಪೀಟ್-ಸಾಲೆ, ಕಯಮೆ, ಕುಟ್ಟಿಕಯಮೆ, ರಾಜಕಯಮೆ, ಸುಗ್ಗಿಕಯಮೆ, ಅತಿಕರಾಯ, ಸಣ್ಣ-ಅತಿಕರಾಯ, ಉಬರಮುಂಡ ಇತ್ಯಾದಿ. ಪ್ರತಿ ವರುಷ 240 ವಿವಿಧ ಭತ್ತದ ತಳಿ ಬೀಜಗಳನ್ನು ಪುಟ್ಟಪುಟ್ಟ ತಾಕುಗಳಲ್ಲಿ ತಾವೇ ಬಿತ್ತಿ ಬೆಳೆದು ಅವುಗಳ ಬೀಜಗಳ ಜೀವಚೈತನ್ಯ ಉಳಿಸಿಕೊಳ್ಳುತ್ತಾರೆ ದೇವರಾಯರು. ಆ ಸಾಧನೆಯನ್ನು ಗುರುತಿಸಿ, ಅಹ್ಮದಾಬಾದಿನ ಸೃಷ್ಠಿ ಫೌಂಡೇಷನಿನಿಂದ ಅವರಿಗೆ 2017ರ ರಾಷ್ಟ್ರಮಟ್ಟದ “ಸೃಷ್ಠಿ ಸಮ್ಮಾನ” ಹಾಗೂ 2 ನವಂಬರ್ 2019ರಂದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ.

ಪಿಯುಸಿ ಶಿಕ್ಷಣ ಮುಗಿಸಿದ ದೇವರಾಯರು ಸುಲಭವಾಗಿ ಯಾವುದಾದರೂ ಉದ್ಯೋಗಕ್ಕೆ ಸೇರಿಕೊಳ್ಳ ಬಹುದಾಗಿತ್ತು. ಆದರೆ, ಯಾರದೋ ಕೈಕೆಳಗೆ ಕೆಲಸ ಮಾಡುವುದು ಅವರ ಜಾಯಮಾನವೇ ಅಲ್ಲ. ಅಪ್ಪಟ ಸ್ವಾಭಿಮಾನಿ ದೇವರಾಯರನ್ನು ಕೈಬೀಸಿ ಕರೆದದ್ದು ಅವರ ತಂದೆಯವರ 20 ಎಕ್ರೆ ಜಮೀನು. ಅಲ್ಲಿ ಭತ್ತ ಬೆಳೆಸಲು ಶುರು ಮಾಡಿದಾಗ ದೇವರಾಯರಿಗೆ 20 ವರುಷ ವಯಸ್ಸಿನ ಏರು ಜವ್ವನ. ಕಳೆದ ಆರು ದಶಕಗಳ ಉದ್ದಕ್ಕೂ ಒಂದು ತಪಸ್ಸಿನಂತೆ ಆ ಕಾಯಕ ಮುಂದುವರಿಸಿಕೊಂಡು ಬಂದದ್ದೇ ಅವರ ಸಾಧನೆ.

ಸುಬ್ರಹ್ಮಣ್ಯದಲ್ಲಿ 5 ಜೂನ್ 2018ರಂದು ಜರಗಿದ್ದ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ದೇವರಾಯರೂ ನಾನೂ ಸಂಪನ್ಮೂಲ ವ್ಯಕ್ತಿಗಳಾಗಿ ಆಮಂತ್ರಿತರಾಗಿದ್ದೆವು. ಅವತ್ತು ನಾವಿಬ್ಬರೂ ಅಲ್ಲೇ ಉಳಿದಿದ್ದಾಗ ಅವರೊಂದಿಗೆ ಮುಕ್ತವಾಗಿ ಮಾತನಾಡುವ ಅವಕಾಶ ಲಭಿಸಿದ್ದು ಒಂದು ಯೋಗಾಯೋಗ.
ಆ ಸಂದರ್ಭದಲ್ಲಿ ಮಾತಾಡುತ್ತಾ ಗತಕಾಲಕ್ಕೆ ಜಾರಿದ್ದ ದೇವರಾಯರು, ಅಂದಿನ ದಿನಗಳನ್ನು ಹೀಗೆ ನೆನೆದಿದ್ದರು, “ವರುಷದಲ್ಲಿ ನಾಲ್ಕು ಭತ್ತದ ಬೆಳೆ ಬೆಳೆದದ್ದೂ ಇದೆ – ಏಣಿಲು, ಪಟ್ಲ, ಸುಗ್ಗಿ ಮತ್ತು ಕೊಳಕೆ. ಏಣಿಲು ಮಳೆಗಾಲದ ಬೆಳೆಯಾದರೆ, ಕೊಳಕೆ ಬೇಸಗೆಯ ಬೆಳೆ. ಇವೆರಡರ ನಡುವೆ, ಏಣಿಲು ಕಟಾವಿನ ದಿನ ಹತ್ತಿರ ಬರುತ್ತಿದ್ದಂತೆ ಪಟ್ಲ ಬೆಳೆಗೆ ಬೀಜ ಬಿತ್ತುತ್ತಿದ್ದೆ – ಆಗಸ್ಟ್ ತಿಂಗಳಿನಲ್ಲಿ. ಪಟ್ಲ ಬೆಳೆಗೆ ಬಂಬುಚ್ಚಿ (ಕೀಟ) ಕಾಟ. ನಮ್ಮ ಬಯಲಿನ ಎಲ್ಲಾ ಬಂಬುಚ್ಚಿಗಳೂ ನಮ್ಮ ಗದ್ದೆಗೆ ಬಂದರೆ ಏನಾದೀತು ಹೇಳಿ. ಯಾಕಂದ್ರೆ ಆಗ ನಮ್ಮ ಗದ್ದೆಯಲ್ಲಿ ಮಾತ್ರ ಭತ್ತದ ಬೆಳೆ. ನನಗೆ ಬಂಬುಚ್ಚಿ ಕಾಟದಿಂದ ಸಾಕಾಗಿ ಹೋಯ್ತು. ಕೊನೆಗೆ ಪಟ್ಲ ಬೆಳೆ ಮಾಡೋದನ್ನೇ ಬಿಟ್ಟು ಬಿಟ್ಟೆ.”

“ನೀವು ಭತ್ತದ ಬೆಳೆಗೆ ರಾಸಾಯನಿಕ ಗೊಬ್ಬರ ಹಾಕಲೇ ಇಲ್ಲವೇ?” ಎಂಬ ನನ್ನ ಪ್ರಶ್ನೆಗೆ ದೇವರಾಯರ ಉತ್ತರ: “ಹಾಕಿದ್ದೆ ಮಾರಾಯರೇ. ಸುಮಾರು ಹತ್ತು ವರುಷ ಯೂರಿಯಾ, ಡಿಎಪಿ ಭತ್ತದ ಗದ್ದೆಗೆ ಹಾಕಿದ್ದೆ. ಫಸಲೂ ಚೆನ್ನಾಗಿತ್ತು. ಆಗ 1989ರಲ್ಲಿ ಫರ್ಟಿಲೈಸರ್ ಹಾಕೋದನ್ನು ಒಮ್ಮೆಲೇ ನಿಲ್ಲಿಸಿ ಬಿಟ್ಟೆ. ಹಾಗೆ ಮಾಡಿದ್ದರಿಂದ, ಮಣ್ಣಿನಲ್ಲಿ ಪೋಷಕಾಂಶ ಒಮ್ಮೆಲೇ ಕಡಿಮೆಯಾಗಿ, ಸಸಿಗಳಿಗೆ ಷಾಕ್. ಆ ವರುಷ ಭತ್ತದ ಫಸಲು ಅರ್ಧಕ್ಕರ್ಧ ಕಡಿಮೆ ಆಯ್ತು. ಆದರೆ ನಾನು ಮತ್ತೆ ಗದ್ದೆಗೆ ರಾಸಾಯನಿಕ ಗೊಬ್ಬರ ಹಾಕಲೇ ಇಲ್ಲ. ಅದಾಗಿ ಎರಡು ವರುಷದಲ್ಲಿ ನನ್ನ ಜಮೀನಿನ ಮಣ್ಣು ಸುಧಾರಿಸಿತು; ಫಸಲೂ ಹೆಚ್ಚಾಯಿತು.”

“ನಮ್ಮ ಜಮೀನಿನಲ್ಲಿ ಭತ್ತದ ಬೇಸಾಯಕ್ಕೆ ಬೇಕಾದಷ್ಟು ನೀರುಂಟು – ಬೆಟ್ಟದಿಂದ ಇಳಿದು ಬರುವ ತೊರೆಯಿಂದ. ವರುಷವಿಡೀ ಆ ನೀರು ಹರಿದು ಬರ್ತಾ ಇರ್ತದೆ. ಹಿರಿಯರಿಂದ ಬಂದ ಜಮೀನಿದೆ. ಒಳ್ಳೇ ಭತ್ತದ ಬೀಜಗಳುಂಟು. ಮತ್ತೆ ಭತ್ತ ಬೆಳೆಸಲಿಕ್ಕೆ ಏನು ಕಷ್ಟವಿದೆ?” ಎಂದು ಕೇಳುತ್ತಾರೆ ಭತ್ತದ ಕೃಷಿಯಿಂದಲೇ ಬದುಕು ಕಟ್ಟಿಕೊಂಡ ದೇವರಾಯರು. ಅದೇ ಉಸಿರಿನಲ್ಲಿ ಅವರು ಪ್ರಶ್ನಿಸುತ್ತಾರೆ, “ಆದರೆ ಬಹಳ ಜನ ಭತ್ತ ಬೆಳೆಯೋದನ್ನು ನಿಲ್ಲಿಸಿದ್ದಾರೆ. ಭತ್ತದ ಗದ್ದೆಗಳನ್ನು ಹಡಿಲು ಬಿಟ್ಟಿದ್ದಾರೆ. ಹೆಚ್ಚಿನವರು ಭತ್ತದ ಗದ್ದೆಗಳಲ್ಲಿ ಅಡಿಕೆ ತೋಟ ಮಾಡಿದ್ದಾರೆ. ಅಡಿಕೆಯನ್ನು ಅನ್ನದ ಹಾಗೆ ಉಣ್ಣಲಿಕ್ಕೆ ಆಗ್ತದಾ? ಅವರೆಲ್ಲ ಈಗ ಎಲ್ಲಿಯೋ ಬೆಳೆದ ಭತ್ತದ ಅಕ್ಕಿಯ ಅನ್ನ ಉಣ್ಣುತ್ತಾರೆ. ಅವರಿಗೇನು ಗೊತ್ತು, ನಮ್ಮ ಅಕ್ಕಿ ನಾವೇ ಬೆಳೆದು ಅದನ್ನು ಉಣ್ಣುವ ಸುಖ?”

ಸರಳ ಬದುಕು ಎಂದರೇನೆಂದು ದೇವರಾಯರನ್ನು ನೋಡಿ ಕಲಿಯಬೇಕು. ಅವರು ಬರಿಗಾಲಿನಲ್ಲೇ ನಡೆಯುವವರು; ಚಪ್ಪಲಿ ಹಾಕಿಕೊಳ್ಳೋದೇ ಇಲ್ಲ. ನಡೆಯುವಾಗ ನಮ್ಮ ಪಾದಗಳು ಮಣ್ಣಿಗೆ ತಾಗುತ್ತಿರುವುದು ಆರೋಗ್ಯಕ್ಕೆ ಒಳ್ಳೆಯದು ಎಂಬುದು ಅವರ ನಂಬಿಕೆ. ಪಂಚೆ ಮತ್ತು ಷರಟು (ಅಥವಾ ಹೆಗಲಿಗೆ ಶಲ್ಯ) ಅವರ ಸರಳ ಉಡುಪು. “ನನ್ನ ಅಕ್ಕಿ ನಾನೇ ಬೆಳೀತೇನೆ. ನನ್ನ ತರಕಾರಿ ನಾನೇ ಬೆಳೀತೇನೆ. ಸೌತೆ, ಬೆಂಡೆ, ಬದನೆ, ಬಸಳೆ, ಕುಂಬಳಕಾಯಿ ಎಲ್ಲ ನಮ್ಮಲ್ಲಿ ಉಂಟು. ಮಧ್ಯಾಹ್ನ ನನ್ನದು ಗಂಜಿಯೂಟ. ಊಟಕ್ಕೆ ಏನಾದರೂ ತರಕಾರಿ ಇದ್ದರಾಯಿತು. ಚೆನ್ನಾಗಿ ಬದುಕಲಿಕ್ಕೆ ಇನ್ನೇನು ಬೇಕು?” ಎಂಬ ಅವರ ನೇರ ಪ್ರಶ್ನೆಗೆ ಉತ್ತರ ಕೊಡುವುದು ಸುಲಭವಲ್ಲ.


ಬೆಳಗ್ಗೆ ಐದು ಗಂಟೆಗೆ ಏಳುವುದು ದೇವರಾಯರ ಅಭ್ಯಾಸ. ಆ ಮುಂಜಾವಿನಲ್ಲಿ ಅರ್ಧ ತಾಸು ಯೋಗಾಸನ ಅವರ ದಿನನಿತ್ಯದ ಸಾಧನೆ. ಅದರಿಂದಾಗಿಯೇ ಅವರ ನಡಿಗೆಯ ವೇಗ ಹಾಗೂ ಕೆಲಸದ ಚುರುಕು ಸರಿಗಟ್ಟಲು ಯುವಕರಿಗೂ ಕಷ್ಟ. ಯೋಗಾಸನದ ನಂತರ ದೇವರ ಪೂಜೆ. ಅಲ್ಲಿಯ ವರೆಗೆ ಒಂದು ತೊಟ್ಟು ನೀರನ್ನೂ ಅವರು ಕುಡಿಯೋದಿಲ್ಲ. ಅನಂತರ ಜಮೀನಿನತ್ತ ನಡೆಯುವ ದೇವರಾಯರದು ದಿನವಿಡೀ ಬಿಡುವಿಲ್ಲದ ಕೃಷಿಕಾಯಕ. “ಹಾಗಾಗಿಯೇ ನನಗೆ ರಾತ್ರಿ ಮಲಗಿದ ಕೂಡಲೇ ನಿದ್ದೆ ಬರುತ್ತದೆ” ಎನ್ನುವಾಗ ಅವರ ಮುಖದಲ್ಲಿ ಸಂತೃಪ್ತ ನಗು.ಯಾರಾದರೂ ಬಂದು ಯಾವುದೋ ಭತ್ತದ ತಳಿಯ ಬೀಜ ಕೇಳಿದರೆ, ಒಂದು ಮುಷ್ಟಿ ಬೀಜ ಕೊಡುವ ದೇವರಾಯರು, ಅದಕ್ಕೆ ಹಣ ಪಡೆಯೋದಿಲ್ಲ. ಬದಲಾಗಿ “ಇದನ್ನು ಬಿತ್ತಿ ಬೆಳೆದು ಎರಡು ಮುಷ್ಟಿ ಬೀಜ ತಂದು ಕೊಡಿ” ಎಂದು ಷರತ್ತು.

ದೇವರಾಯರ ಭತ್ತದ ತಳಿರಕ್ಷಣೆಯ ಮಹಾನ್ ಕಾಯಕದಲ್ಲಿ ಬೆಂಬಲಕ್ಕೆ ನಿಂತವರು ಅವರ ಪತ್ನಿ ಶಾರದಾ, ಮಗಳು ಮತ್ತು ಮಗ ಪರಮೇಶ್ವರ ರಾವ್. ಇಂಜಿನಿಯರಿಂಗ್ ಕಲಿತಿರುವ ಪರಮೇಶ್ವರ ರಾವ್, ತಮ್ಮ ಉದ್ಯೋಗ ತೊರೆದು ಬಂದು ನೆಲೆಸಿದ್ದು ಹಳ್ಳಿಯಲ್ಲಿ. ತಂದೆಯವರ ಎಲ್ಲ ಕೆಲಸಗಳಿಗೂ ಇವರ ಒತ್ತಾಸೆ.

ತಮ್ಮ ಜಮೀನಿನ ಎಲ್ಲ ಮರಗಳನ್ನೂ ಹಾಗೆಯೇ ಉಳಿಸಿಕೊಂಡಿದ್ದಾರೆ ದೇವರಾಯರು. “ನನ್ನಲ್ಲಿ 22 ಜಾತಿಯ ಮಾವಿನ ಮರಗಳುಂಟು. ಬೇಸಗೆಯಲ್ಲಿ ನಮಗೆ ಬೇಕಾದಷ್ಟು ಮಾವಿನ ಹಣ್ಣು. ಹಳೆಯ ಹಲಸಿನ ಮರಗಳಿಂದ ನೂರಾರು ಹಲಸಿನ ಹಣ್ಣು. ಇದಕ್ಕಿಂತ ದೊಡ್ದ ಸಂಭ್ರಮ ಏನುಂಟು?” ಎಂಬ ದೇವರಾಯರ ಪ್ರಶ್ನೆಗೆ ಉತ್ತರವಿದೆಯೇ?

ಮುಂದಿನ ತಲೆಮಾರುಗಳಿಗಾಗಿ ಭತ್ತದ ತಳಿಗಳ ಸಂರಕ್ಷಣೆ ದೇವರಾಯರ ಬದುಕಿನ ತಪಸ್ಸು. ಇದು ಯಾವುದೇ ವಿಶ್ವವಿದ್ಯಾಲಯ ಮಾಡಲಾಗದ ಮಹಾನ್ ಕಾರ್ಯ. ಎಲ್ಲ ಆಮಿಷಗಳನ್ನು ಮೀರಿ ನಿಂತು, ಭತ್ತದ ಕೃಷಿಯಲ್ಲೇ ಖುಷಿ ಕಂಡುಕೊಂಡ ಸಂತ ದೇವರಾಯರು. ಮಿತ್ತಬಾಗಿಲಿನ ಅವರ ಕರ್ಮಭೂಮಿಯಲ್ಲಿ ಅವರೊಂದಿಗೆ ಹೆಜ್ಜೆ ಹಾಕುವಾಗ, ನಮಗೆ ಹೆಜ್ಜೆಹೆಜ್ಜೆಗೂ ಅನ್ನದಾತರೊಬ್ಬರ ಬದುಕಿನ ದರ್ಶನ. ಆ ಉದಾತ್ತ ಬದುಕಿಗೆ, ಮಹಾನ್ ತಪಸ್ಸಿಗೆ ನಮೋ.

 

 

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group