ಬರಹ: ಡಾ| ಶಶಿಕುಮಾರ್ ಎಸ್
ಡಾ|ಉಮಾ ಅಕ್ಕಿ
ನಿರೂಪಣೆ : ರಾಧಾಕೃಷ್ಣ ತೊಡಿಕಾನ
ಕಠಿಣ ದುಡಿಮೆ ಮತ್ತು ಪರಿಶ್ರಮ, ಬೆಳೆಗಳ ಆಯ್ಕೆ,ವ್ಯವಹಾರಿಕ ಜಾಣತನ ಮೊದಲಾದುವುಗಳಿಂದ ಕೃಷಿ ವಲಯದಲ್ಲಿ ಯಶಸ್ಸಿನ ಹಾದಿಯನ್ನು ಕಂಡವರು ಮುಪ್ಪಿನಾರ್ಯ ಮುದ್ಲಿಂಗಪ್ಪ ಧುಳೆಹೊಳಿ. ಅವರು ಕೃಷಿಕ್ಷೇತ್ರಕ್ಕೆ ಕಾಲಿಟ್ಟಾಗ ಹಲವಾರು ಸವಾಲುಗಳಿದ್ದವು. ಅವೆಲ್ಲವನ್ನು ಎದುರಿಸಿ ಸಮ್ಮಿಶ್ರ ಕೃಷಿ ಮತ್ತು ಬೀಜೋತ್ಪಾದನೆಯಲ್ಲಿ ತೊಡಗಿಕೊಂಡು ಅವರು ಪ್ರಗತಿಪರ ರೈತನಾಗಿ, ಕೃಷಿಯಿಂದಲೇ ಆರ್ಥಿಕ ಶಕ್ತಿಯನ್ನು ರೂಪಿಸಿಕೊಂಡಿರುವುದು ಸಾಧನೆಗೊಂದು ಗರಿ.
ಕೃಷಿಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಳ್ಳಲು ಆರಂಭಿಸಿದಾಗ ಅವರಿಗೆ ಮೊದಲು ಎದುರಾದುದು ಕಠಿಣ ಆರ್ಥಿಕ ಪರಿಸ್ಥಿತಿ. ಬಿತ್ತಿ ಬೆಳೆದು ಸಾಧನೆ ಮಾಡುವುದಕ್ಕೆ ಅವರ ಅವಿಭಕ್ತ ಕುಟುಂಬಕ್ಕೆ 15 ಎಕರೆ ಭೂಮಿಯಿತ್ತಾದರೂ ಅದು ಕೃಷಿಗೆ ಅನುಕೂಲವಲ್ಲದ ಒಣಭೂಮಿ. ಕಲ್ಲು ಮುಳ್ಳ ಪೊದರುಗಳು ತುಂಬಿದ್ದ ಬೆಳೆಗಳನ್ನು ಬೆಳೆಯಲು ಯೋಗ್ಯವಲ್ಲದ ಜಮೀನು, ನೀರಿಗಾಗಿ ಮಳೆಯನ್ನೇ ಆಶ್ರಯಿಸಬೇಕಾದ ಪರಿಸ್ಥಿತಿ ಅವರಿಗಿತ್ತು. ಆದರೂ ಎದೆಗುಂದದೆ ಕೃಷಿ ಕ್ಷೇತ್ರಕ್ಕೆ ಇಳಿದ ಮುಪ್ಪಿನಾರ್ಯ ಯಶಸ್ಸಿನ ಮೆಟ್ಟಿಲೇರಿದರು.
ಸಾಂಪ್ರದಾಯದಂತೆ ನಡೆದು ಬಂದ ಏಕ ಬೆಳೆ ಪದ್ಧತಿಯ ಬದಲಾಗಿ ಮಿಶ್ರಬೆಳೆ ಪದ್ಧತಿಯನ್ನು ಅನುಸರಿಸಿದರು. ಹೆಚ್ಚು ಲಾಭದಾಯಕ ಬೆಳೆಗಳಾದ ಟೊಮೆಟೊ, ಮೆಣಸಿನಕಾಯಿ, ಹಾಗಲಕಾಯಿ, ಸೌತೆ, ಹೂವಿನ ಬೆಳೆಗಳು ಅವರ ಹಣಕಾಸಿನ ಬವಣೆಯನ್ನು ನೀಗಿಸಲು ಸಹಕಾರಿಯಾದವು.
ಹಾವೇರಿ ಜಿಲ್ಲೆಯ ರಾಣೆಬೆನ್ನೂರ ತಾಲೂಕಿನ ಚಳಗೆರಿಯ ಮುಪ್ಪನಾರ್ಯ ಧುಳೆಹೊಳಿ ಡಿ ಫಾರ್ಮ ಶಿಕ್ಷಣ ಪಡೆದರೂ ಸಹ ಕುಟುಂಬದ ಜವಾಬ್ದಾರಿ ಅವರನ್ನು ಕೃಷಿ ಕ್ಷೇತ್ರದಲ್ಲಿ ಉಳಿಸಿಬಿಟ್ಟಿತು. ಸತತ ಪರಿಶ್ರಮ, ಕುಟುಂಬ ಸದಸ್ಯರ ಸಹಕಾರದಿಂದ ತಮ್ಮಲ್ಲಿರುವ 15 ಎಕರೆ ಬರಡು ಭೂಮಿಯನ್ನು ಹಸಿರಾಗಿಸಿದ್ದಲ್ಲದೆ ಮತ್ತಷ್ಟು ಹಿಡುವಳಿಯನ್ನು ವಿಸ್ತರಿಸಿಕೊಳ್ಳುವಲ್ಲಿ ಸಫಲತೆ ಕಂಡರು. ಈಗಿರುವ 32 ಎಕರೆ ಭೂಮಿಯಲ್ಲಿ 18 ಎಕರೆ ನೀರಾವರಿಯಾದರೆ 14 ಎಕರೆ ಒಣ ಭೂಮಿ. ಐದು ಎಕರೆ ಜಮೀನಿನಲ್ಲಿ ತೋಟಗಾರಿಕೆ ಬೆಳೆಗಳಾದ ಅಡಿಕೆ, ತೆಂಗು, ಪೇರಳೆ, ಬಾಳೆ ಮತ್ತು ಕಾಳು ಮೆಣಸು ಮೊದಲಾದ ಮಿಶ್ರ ಬೆಳೆಯಿದೆ. ಉಳಿದಂತೆ ಗೋವಿನ ಜೋಳ, ಸೋಯಾಬಿನ್, ತರಕಾರಿ ಹಣ್ಣು ಹಂಪಲಿನ ಬೆಳೆ ಮಾಡಿದ್ದಾರೆ. ವೀಳ್ಯದೆಲೆ, ರೇಷ್ಮೆಯೂ ಆಸರೆಯಾಗಿ ಬೆಳೆದಿದೆ. ಮಿಶ್ರ ಬೆಳೆ ಅನುಸರಿಸಿ ವರ್ಷವಿಡೀ ಆದಾಯದ ದಾರಿ ಕಂಡುಕೊಂಡಿದ್ದಾರೆ. ಅಡಿಕೆಯನ್ನು ಏಕಬೆಳೆಯಾಗಿ ಬೆಳೆಸದೆ ಅದರಲ್ಲೂ ಸೋಯಾ ಅವರೆ, ಮೆಕ್ಕೆಜೋಳ ಬೆಳೆದಿದ್ದಾರೆ.
ನೀರು ನಿರ್ವಹಣೆ
ಕೃಷಿಯಲ್ಲಿ ನೀರು ಮತ್ತು ಅದರ ನಿರ್ವಹಣೆ ಪ್ರಮುಖವಾದುದು. ಕಡಿಮೆ ನೀರು ಬಳಸಿ ಹೆಚ್ಚು ಬೆಳೆ ಬೆಳೆಯುವುದೇ ಅವರ ಗುರಿಯಾಗಿತ್ತು, ಆದುದರಿಂದ ನೀರು ಹಾಯಿಸುವ ಪದ್ಧತಿಯನ್ನು ನಿಲ್ಲಿಸಿ ಹನಿ ನೀರಾವರಿ, ತುಂತುರು ನೀರಾವರಿಯನ್ನು ಅಳವಡಿಸಿಕೊಂಡರು. ಈ ಅನುಕೂಲತೆಯಿಂದ ಹೆಚ್ಚು ಹೆಚ್ಚು ಬೆಳೆ ಬೆಳೆಯಲು ಸಾಧ್ಯವಾಯಿತು. ಕೃಷಿ ಉತ್ಪನ್ನಗಳು, ಇಳುವರಿ ಹೆಚ್ಚಾಯಿತು.
ಹೈನುಗಾರಿಕೆ
ಕೃಷಿಕರಿಗೆ ದನ ಸಾಕಾಣೆಯ ಮೌಲ್ಯದ ಅರಿವಾಗುತ್ತದೆ. ಬಹಳಷ್ಟು ಮಂದಿಗೆ ಹೈನುಗಾರಿಕೆ ಹೊರೆಯಾದಂತಾಗಿ ರಾಸಾಯನಿಕ ಗೊಬ್ಬರಕ್ಕೆ ಮೊರೆ ಹೋಗುತ್ತಾರೆ. ಆದರೆ ಧುಳೆಹೊಳಿ ಹೈನುಗಾರಿಕೆಯನ್ನು ನೆಚ್ಚಿಕೊಂಡಿದ್ದುದರಿಂದ ಕೃಷಿಗೆ ಬೇಕಾದ ಕೊಟ್ಟಿಗೆ ಗೊಬ್ಬರ, ಎರೆ ಗೊಬ್ಬರ, ಕಾಂಪೋಸ್ಟ್ ಗೊಬ್ಬರ, ಜೀವಾಮೃತ ತಯಾರಿಗೆ ಸಹಾಯಕವಾಯಿತು. ಇದರಿಂದ ರಸಗೊಬ್ಬರಕ್ಕೆ ವೆಚ್ಚ ಮಾಡುವುದನ್ನು ಕಡಿಮೆ ಮಾಡಿದೆ. ಅಧಿಕ ಪ್ರಮಾಣದಲ್ಲಿ ಹಸಿರೆಲೆ ಗೊಬ್ಬರ, ಸಾವಯುವ ಗೊಬ್ಬರ ಮತ್ತು ಜೈವಿಕಗಳ ಪೀಡೆನಾಶಕಗಳ ಬಳಕೆಯಿಂದ ಭೂಮಿಯ ಆರೋಗ್ಯ ಮತ್ತು ಉತ್ಪಾದಕತೆ ಪ್ರಮಾಣವೂ ಹೆಚ್ಚಿದೆ. ಹೈನುಗಾರಿಕೆಯಿಂದ ವಾರ್ಷಿಕವಾಗಿ ಸುಮಾರು 2 ಲಕ್ಷ ಆದಾಯ ಪಡೆಯುತ್ತಿದ್ದು ಹೈನುಗಾರಿಕೆ ಮಹತ್ವವನ್ನು ಸಾರಿದೆ.
ಬೀಜೋತ್ಪಾದನೆ ಉದ್ಯಮ
ತೋಟಗಾರಿಕೆ, ದವಸಧಾನ್ಯ, ತರಕಾರಿಯ ಬೆಳೆಯೊಂದಿಗೆ ಅವರಿಗೆ ವರವಾಗಿ ಪರಿಣಮಿಸಿರುವುದು ಬೀಜೋತ್ಪಾದನಾ ಉದ್ಯಮ. ಟೊಮೆಟೊ, ಹಾಗಲಕಾಯಿ ಬೀಜೋತ್ಪಾದನೆಯನ್ನು ಕಂಪೆನಿಗಳ ಒಪ್ಪಂದದೊಂದಿಗೆ ಪ್ರಾರಂಭಸಿದ್ದರು. ಗುಣಮಟ್ಟದ ಬೀಜೋತ್ಪಾದನೆ ಅವರ ಆರ್ಥಿಕ ಚೈತನ್ಯವನ್ನು ಹೆಚ್ಚಿಸಿತು.
ಯಾವುದೇ ಬೆಳೆ ಇರಲಿ ಆಧುನಿಕ ತಾಂತ್ರಿಕತೆ, ವೈಜ್ಞಾನಿಕ ರೀತಿಯನ್ನು ಅಳವಡಿಸಿಕೊಂಡು ಕೃಷಿ ಮಾಡುತ್ತಿರುವ ಅವರು ಆಳುಗಳನ್ನು ಹೆಚ್ಚು ಅವಲಂಭಿಸದೆ ಯಾಂತ್ರೀಕರಣ ಅಲ್ಲದೆ ಕುಟುಂಬದ ಸದಸ್ಯರು ಕೃಷಿಕೆಲಸ ಕಾರ್ಯ ನಿರ್ವಹಿಸುತ್ತಾರೆ. ಮುಪ್ಪಿನಾರ್ಯ ಅವರ ಕೃಷಿ ಕ್ಷೇತ್ರದ ಯಶಸ್ಸಿಗೆ ಧಾರವಾಡ ಕೃಷಿ ವಿಶ್ವವಿದ್ಯಾಲಯ, ತೋಟಗಾರಿಕಾ ವಿಜ್ಞಾನಗಳು ವಿಶ್ವವಿದ್ಯಾಲಯ, ಬಾಗಲಕೋಟೆ, ಕೃಷಿ ಸಂಶೋಧನಾ ಕೇಂದ್ರ ಹನುಮನಹಟ್ಟಿ, ತೋಟಗಾರಿಕಾ ಸಂಶೋಧನೆ ಕೇಂದ್ರ ದೇವಿಹೊಸೂರ, ನಾಮಧಾರಿ ಸೀಡ್ಸ್ ಲಿಮಿಟೆಡ್ ಬೆಂಗಳೂರು, ಸೂಪರ್ ಮಾರ್ಕೆಟ್ ಬೆಂಗಳೂರು, ಕೃಷಿ ಮತ್ತು ತೋಟಗಾರಿಕೆ ಇಲಾಖೆ ರಾಣಿಬೆನ್ನೂರು ಮಾಹಿತಿ ಮಾರ್ಗದರ್ಶನ ನೀಡಿದೆ. ಬಹುತೇಕ ರೈತರಿಗೆ ಬೆಳೆದಾಗ ಕೊಳ್ಳುವರಿಲ್ಲದೆ ನಷ್ಟ ಅನುಭವಿಸುತ್ತಾರೆ. ಆದರೆ ಮುಪ್ಪಿನಾರ್ಯ ಆವರ ಮಾರುಕಟ್ಟೆಯ ಜಾಣ್ಮೆ ಇತರರಿಗಿಂತ ಭಿನ್ನವಾಗಿಸಿದೆ.
ಇವರ ಕ್ಷೇತ್ರವನ್ನು ವೀಕ್ಷಣೆಗಾಗಿ ವಿ.ವಿ ವಿದ್ಯಾರ್ಥಿಗಳು, ವಿವಿಧ ಕಂಪನಿಗಳ ಪ್ರತಿನಿಧಿಗಳು ಶೈಕ್ಷಣಿಕ ಪ್ರವಾಸದ ಮೂಲಕ ಕ್ಷೇತ್ರ ಭೇಟಿಗೆ ರೈತರು ಬರುತ್ತಿದ್ದಾರೆ. ಇವರ ಸಾಧನೆಯನ್ನು ಗುರುತಿಸಿ ತೋಟಗಾರಿಕೆ ವಿ. ವಿ ಹಾವೇರಿ ಜಿಲ್ಲೆಯ ಶ್ರೇಷ್ಠ ತೋಟಗಾರಿಕೆ ರೈತ ಪ್ರಶಸ್ತಿ ನೀಡಿದೆ. ಸಂಘ ಸಂಸ್ಥೆಗಳು ಗೌರವಿಸಿವೆ
ಮಾಹಿತಿಗೆ 9900759221