-ಪ್ರಬಂಧ ಅಂಬುತೀರ್ಥ
ಮೊನ್ನೆ ನನ್ನ ಆತ್ಮೀಯ ಸ್ನೇಹಿತರೊಬ್ಬರ ಜೊತೆಗೆ ಮಾತನಾಡುತ್ತಿದ್ದೆ. ಅವರು ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಸಮೀಪದ ಊರಿನ ಕೃಷಿಕರು. ಸಾಕಷ್ಟು ವೈವಿಧ್ಯಮಯ ಬೆಳೆ ಬೆಳೆವ ದೊಡ್ಡ ಜಮೀನ್ದಾರರು. ಈ ಕೃಷಿಯ ಜೊತೆಗೆ ಒಂದು ಒಂದಷ್ಟು ದೇಸಿ ತಳಿ ಮಲೆನಾಡು ಗಿಡ್ಡ ಹಸುಗಳನ್ನೂ ಸಾಕಿ ಸಂವರ್ಧನೆ ಮಾಡುತ್ತಿರುವವರು. ಯಾಕೋ ಈ ಸರ್ತಿ ಅವರು ಕೃಷಿ ಯಲ್ಲಿ ತೀವ್ರ ನಿರಾಶರಾಗಿದ್ದಾರೆ…!! ಗದ್ದೆ ಬೇಸಾಯದಲ್ಲಿ ಈ ಬಾರಿ ಅವರಿಗೆ ತೀರಾ ಕಡಿಮೆ ಇಳುವರಿ ಬಂದಿದೆ…!!ಅಡಿಕೆಯ ಇಳುವರಿಯೂ ಈ ವರ್ಷ ಕಡಿಮೆ ವಿವಿಧ ಹಣ್ಣಿನ ಬೆಳೆಗಳು ಈ ಉಷ್ಣತೆ ಹೆಚ್ಚಳದ ಕಾರಣಕ್ಕೆ ಹೂವೇ ಉದುರಿ ಹೋಗಿದೆ. ಬೇಸಿಗೆಯ ಈ ತಾಪಕ್ಕೆ ಅಡಿಕೆ ಹರಳು ಉದುರಿ ಹೋಗುತ್ತಿದೆ. ಈ ಬೇಸಿಗೆಯಲ್ಲಿ ಹಲಸಿನ ಕಾಯಿ ಹಣ್ಣಾದರೂ ಬಿಸಿಲ ತಾಪಕ್ಕೆ ರುಚಿಯಿಲ್ಲಿ ವ್ಯತ್ಯಾಸವಾಗಿದೆ.
ಇದು ಹಲಸು ಅಂತಲ್ಲ ಈ ಕಾಲದಲ್ಲಿ ಹಣ್ಣಾಗುತ್ತಿರುವ ಎಲ್ಲಾ ಬಗೆಯ ಹಣ್ಣಿನ ಬೆಳೆಯ ಮೇಲೂ ಉಷ್ಣತೆ ಯ ದುಷ್ಪರಿಣಾಮ ಹೀಗೆಯೇ ಇದೆ.
ಸಂಪೂರ್ಣ ಸಾವಯವ ಎಂಬ ಆಶಯಕ್ಕೆ ಅವರು ಪ್ರೀತಿಯಿಂದ ಸಾಕಿ ಸಲಹುತ್ತಿರುವ ಗೋವುಗಳ ವಿಚಾರದಲ್ಲೂ ನೌಕರರ ಸಂಬಳವನ್ನು ಹೊಂದಿಸಲು ಕಷ್ಟ ಆಗುತ್ತಿದೆ ಎಂದರು. ಅವರು ಗೋಪಾಲನೆಗೆ ಉತ್ತರ ಭಾರತೀಯ ಮೂಲದ ನೌಕರರನ್ನು ಅವಲಂಬಿಸಿದ್ದಾರೆ. ಆ ಉತ್ತರ ಭಾರತೀಯ ನೌಕರರು ಆರು ಆರು ತಿಂಗಳಿಗೆ ಊರಿಗೆ ಹೋಗಿ ಅಲ್ಲಿಂದ ಇಲ್ಲಿಗೆ ಮರಳುವಾಗ ದಿನದ ಸಂಬಳದಲ್ಲಿ ಐವತ್ತು – ನೂರು ರೂಪಾಯಿ ಏರಿಸಿಕೊಳ್ಳುತ್ತಿದ್ದಾರೆ. “ಈ ಉತ್ತರ ಭಾರತೀಯ ನೌಕರರಿಗೆ ನಾವು ಅನಿವಾರ್ಯ ವಾಗಿ ಅವಲಂಬಿಸಿದ್ದೇವೆ. ಈಗ ಅವರಿಲ್ಲದೇ ನಮ್ಮ ರಥ ಸಾಗುವುದಿಲ್ಲ ಅಂತಾಗಿದೆ. ಹೀಗೆ ಹೆಚ್ಚು ಹೆಚ್ಚು ಸಂಬಳ ಕೊಟ್ಟು ಗೋಪಾಲನೆ ಕಷ್ಟ ವಾಗುತ್ತಿದೆ. ಹಾಗಾಗಿ ನಾನು ಮುಂದಿನ ದಿನಗಳಲ್ಲಿ ಗೋವುಗಳ ಸಂಖ್ಯೆ ಯನ್ನೂ ಕಡಿಮೆ ಮಾಡಿಕೊಳ್ಳಲು ನಿರ್ಧರಿಸಿದ್ದೇನೆ'” ಎಂದು ಹತಾಶರಾಗಿ ನುಡಿದರು.
ಅಡಿಕೆ ಗೆ ವರ್ಷ ವರ್ಷವೂ ಎಲೆಚುಕ್ಕಿ ರೋಗ ವ್ಯಾಪಿಸುತ್ತಿದೆ…!! ತೆಂಗಿಗೆ ಮಂಗ ,ಅಳಿಲು, ಕೆಂಜಳಿಲಿನ ವಿಪರೀತ ಕಾಟ. ಇದೆಲ್ಲಾ ನೋಡಿದರೆ ಯಾವುದಾದರೂ ಕಾಡು ಬೆಳೆಗೆ ಹೋಗುವುದು ಒಳ್ಳೆಯದು ಎನಿಸುತ್ತಿದೆ. ಎಂದ ಅವರು ಅಭಿಪ್ರಾಯಪಟ್ಟರು.
ಮಲೆನಾಡು ಕರಾವಳಿ ಕೃಷಿ ಪ್ರದೇಶದಲ್ಲಿ ಕಾಡು ಪ್ರಾಣಿಗಳಿಂದ ಆರಂಭಿಸಿ ಕಣ್ಣಿಗೆ ಕಾಣದ ಶಿಲೀಂದ್ರ ದ ತನಕ ಪ್ರತಿ ಜೀವಿಯೂ ಮನುಷ್ಯನ ಕೃಷಿ ಪ್ರಯತ್ನ ವನ್ನು ಮಣ್ಣು ಮಾಡಲು ಪಣತೊಟ್ಟಂತೆ ಕಾಣಿಸುತ್ತಿದೆ. ಈ ಬೇಸಿಗೆಯಲ್ಲಿ ಬಿಸಿಲು ಮತ್ತು ಅತಿ ಉಷ್ಣತೆ ಕೃಷಿಕ ನ ಕೃಷಿ ಯನ್ನು ಕರಟಿಸುತ್ತಿದೆ.. ಕೇವಲ ಇಪ್ಪತ್ತೈದು ವರ್ಷಗಳ ಹಿಂದೆ ಋತುಮಾನ ಗಳು ಹೀಗಿರಲಿಲ್ಲ. ಆಗ ಒಂದೊಂದು ಋತುಮಾನಕ್ಕೂ ಪರಸ್ಪರ ತಾಳಮೇಳ ವಿರುತ್ತಿತ್ತು. ಆ ವರ್ಷ ಅತಿ ಚಳಿ ಇದ್ದರೆ ನಮ್ಮ ಹಿರಿಯರು ಈ ವರ್ಷ ಮಳೆಗಾಲದಲ್ಲಿ ಕಂಡಾಪಟ್ಟೆ ಮಳೆ ಎಂಬ ಭವಿಷ್ಯ ನುಡಿ ಯುತ್ತಿದ್ದರು. ಆ ಭವಿಷ್ಯ ನಿಜವೂ ಆಗುತ್ತಿತ್ತು. ಈಗ ಮಳೆಗಾಲ ಚಳಿಗಾಲ ಬೇಸಿಗೆಕಾಲ ಯಾವುದಕ್ಕೂ ಒಂದಕ್ಕೊಂದು ಸಂಬಂಧ ವೇ ಇಲ್ಲ.
ಈ ವರ್ಷ ಮಳೆಗಾಲದಲ್ಲಿ ಆ ಪರಿ ಮಳೆ ಬಂದು ನದಿಗಳಿಗೆ ದಾಖಲೆಯ ಮಹಾ ಪೂರವಾಗಿತ್ತು. ಆದರೆ ಮಳೆಗಾಲ ಮುಗಿದ ಎರಡೇ ಎರಡು ತಿಂಗಳಲ್ಲಿ ನಮ್ಮ ಪಶ್ಚಿಮ ಘಟ್ಟಗಳ ವ್ಯಾಪ್ತಿಯ ನದಿಗಳು ಅತ್ಯಂತ ಕ್ಷೀಣವಾಗಿ ಹರಿಯತೊಡಗಿದ್ದವು.
ಈಗ ಎಪ್ರಿಲ್ ತಿಂಗಳು. ಮಲೆನಾಡಿನ ಬಹುತೇಕ ಬಾವಿಗಳು ಬತ್ತಿ ಹೋಗಿದೆ. ಕಳೆದ ಕೆಲವು ವರ್ಷಗಳಿಂದ ಏಷ್ಯಾದಲ್ಲೇ ಅತಿ ಹೆಚ್ಚು ಮಳೆ ಬೀಳುವ ಆಗುಂಬೆ ಭಾಗದಲ್ಲಿ ಏಪ್ರಿಲ್ ಮೇ ತಿಂಗಳಲ್ಲಿ ಕುಡಿಯುವ ನೀರಿನ ಕೊರತೆ ದಾಖಲಾಗಿ ಸುದ್ದಿಯಾಗಿತ್ತು.ಹಾಗಾದರೆ ಮಳೆಗಾಲದಲ್ಲಿ ಬಂದ ಮಹಾ ಮಳೆ ಎಲ್ಲಿ ಹೋಯಿತು…? ಅಷ್ಟು ಮಳೆ ಬಂದರೂ ಮಲೆನಾಡಿನ ನದಿ ಕೆರೆ ಬಾವಿಗಳೆಲ್ಲಾ ಏಪ್ರಿಲ್ ಹೊತ್ತಿಗೆ ಬತ್ತಿಹೋಗುವುದು ಏಕೆ….?
ಇತ್ತೀಚಿಗೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ದಲ್ಲಿ ಉಷ್ಣತೆ ನಲವತ್ತು ಡಿಗ್ರಿ ದಾಟಿತ್ತು ಹೀಗಾದಲ್ಲಿ ನೆಲದಾಳದ ನೀರು ಮೊಗೆದು ತಂದು ಕೃಷಿ ಯ ಬುಡ ತಂಪಾಗಿಸಬಹುದು. ಆದರೆ ಐವತ್ತು ಅರವತ್ತು ಅಡಿ ಎತ್ತರದ ಮರಗಳ ಮೇಲಿನ ಎಳೆ ಫಸಲನ್ನು ಉಷ್ಣತೆಯ ಪ್ರಕೋಪದಲ್ಲಿ ಉಳಿಸಿಕೊಳ್ಳೋದು ಹೇಗೆ?
ಮಲೆನಾಡು ಕರಾವಳಿಯ ವಾತಾವರಣ ಸಂಪೂರ್ಣವಾಗಿ ಬದಲಾಗಿದೆ. ಇದೀಗ ಮಳೆಗಾಲ ಮತ್ತು ಅತಿ ಮಳೆಗಾಲ. ಬೇಸಿಗೆಕಾಲ ಮತ್ತು ಅತಿಬೇಸಿಗೆ ಕಾಲ. ಒಂದು ಚಳಿಗಾಲ ದ ಬದಲಾಗಿ ಎರಡು ಹೊಸ ಕಾಲಗಳು ಆರಂಭವಾಗಿದೆ. ಈ ಎರಡು ಅತಿ ಯನ್ನು ಈ ಪಶ್ಚಿಮ ಘಟ್ಟಗಳ ಭಾಗದ ಕೃಷಿ ಸುಧಾರಣೆ ಮಾಡಿ ಕೊಳ್ಳುತ್ತಿಲ್ಲ. ನಮ್ಮ ಭಾಗದ ಕೃಷಿ ಬೆಳೆಗಳು ಅತಿ ಮಳೆ ಮತ್ತು ಅತಿ ಬಿಸಿಲನ್ನ ತಾಳಿ ಕೊಳ್ತಿಲ್ಲ. ಈ ಮದ್ಯೆ ನಿಸರ್ಗದ ಹಲವಾರು ಚಟುವಟಿಕೆಗಳ ಕೇಂದ್ರಬಿಂದುವಾದ “ಚಳಿಗಾಲ ” ಕರಾವಳಿಯಿಂದ ಬಹುತೇಕ ಕಾಣೆಯಾದರೆ ಮಲೆನಾಡಿನಲ್ಲಿ ಎಲ್ಲೋ ಅತ್ಯಲ್ಪ ಪ್ರಮಾಣದಲ್ಲಿ ಕಾಣಿಸುತ್ತಿದೆ.
ಈ ಬದಲಾದ ವಾತಾವರಣದ ಪರಿಣಾಮ ಮಲೆನಾಡು ಮತ್ತು ಕರಾವಳಿಯ ಕೃಷಿ ಮತ್ತು ಜನ ಜೀವನದ ಮೇಲೆ ಆಗುತ್ತಿದೆ. ಮಲೆನಾಡಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಅತಿಯಾಗಿ ಕಾಡು ಪ್ರಾಣಿಗಳಿಂದ ಕೃಷಿ – ಕೃಷಿಕರ ಮೇಲೆ ದಾಳಿ ಪ್ರಸಂಗ ಎದುರಾಗುತ್ತಿದೆ. ಎಲೆಚುಕ್ಕಿ ಯಂತಹ ಶಿಲೀಂದ್ರ ಬದಲಾವಣೆ ಆದ ಋತುಮಾನದ ಕಾರಣ ಯಾವುದೇ ಶಿಲೀಂದ್ರ ನಾಶಕಕ್ಕೂ ಬಗ್ಗುತ್ತಿಲ್ಲ. ಮಲೆನಾಡಿನಲ್ಲಿ ಎಲ್ಲಾ ಬಗೆಯ ಕೃಷಿ ಬೆಳೆಗಳ ಇಳುವರಿ ಗಮನಾರ್ಹವಾಗಿ ಕಡಿಮೆಯಾಗಿದೆ.
ನಾನು ಕರಾವಳಿ ಭಾಗದಲ್ಲಿ ಸಂಚಿರಿಸುತ್ತಿದ್ದಾಗ ಅಲ್ಲೊಂದು ಕಡೆಯಲ್ಲಿ ಸಮುದ್ರ ದಂಡೆ ಯ ಸಮೀಪದಲ್ಲಿ ನಿಂತು ಸುಮ್ಮನೆ ಎವೆಯಕ್ಕದೇ ಆ ಅಗಾಧವಾದ ನೀಲ ಸಾಗರ ವನ್ನು ನೋಡುತ್ತಾ ನಿಂತೆ. ನನಗೆ ಆ ಅಗಾಧ “ನೀಲ ಸಾಗರ ” ನಾವೆಷ್ಟು ಕುಬ್ಜರು ” ಎಂಬ ಭಾವನೆ ಒಂದು ಕ್ಷಣಕ್ಕೆ ಮೂಡಿಸಿತು.
ಆದರೆ ಮನುಷ್ಯ ಖಂಡಿತವಾಗಿಯೂ ಕುಬ್ಜನಲ್ಲ, ಕೇವಲ ಮೂವತ್ತು ವರ್ಷಗಳಲ್ಲೇ ಕರಾರುವಾಕ್ಕಾಗಿದ್ದ ಮಳೆಗಾಲ ಚಳಿಗಾಲ ಬೇಸಿಗೆಕಾಲ ವನ್ನೇ ಅಯೋಮಯ ಮಾಡಿಬಿಟ್ಟಿದ್ದಾನೆ. ಈ ವ್ಯತ್ಯಯಕ್ಕೆ ನೇರವಾಗಿ ಮನುಷ್ಯ ನೇ ಕಾರಣ. ಮನುಷ್ಯ ಏನೋ ಪಡೆಯಲು ಹೋಗಿ ಒಂದು ಅತ್ಯಂತ ಸೂಕ್ಷ್ಮ ಪ್ರದೇಶ ಮತ್ತು ಅತ್ಯಂತ ಮುಖ್ಯವಾದ ವಾತಾವರಣವನ್ನೇ ನಾಶ ಮಾಡಿದ್ದಾನೆ. ಇದೆಲ್ಲಾ ಸರಿಯಾಗಲು ಇನ್ನೊಂದೆರೆಡು ಮೂರು ಶತಮಾನಗಳೇಬೇಕಾಗಬಹದು. ಆಗ ಪಶ್ಚಿಮ ಘಟ್ಟಗಳ ಈ ಮಲೆನಾಡು, ಕರಾವಳಿಯ ಪ್ರದೇಶ ಹೇಗಿರುತ್ತದೋ, ಏನೋ ಅಲ್ವಾ…?