spot_img
Tuesday, September 17, 2024
spot_imgspot_img
spot_img
spot_img

ಕೃಷಿ ಇವರಿಗೆ ಜೀವನೋಪಾಯ ಅಲ್ಲ, ನೆಮ್ಮದಿಯ ತಪಸ್ಸು!

“ಕೃಷಿ ಮಾಡಿ, ನಿಮ್ಮ ಆಹಾರ ನೀವೇ ಬೆಳೆಸಿ” ಎಂದಾಗ, ಹಲವರು “ಅದೆಲ್ಲ ಆಗೋದಿಲ್ಲ” ಅಂತಾರೆ. ಯಾಕೆ? ಎಂದು ಪ್ರಶ್ನಿಸಿದರೆ, ಅವರು ಪಟ್ಟಿ ಮಾಡುವ ಕಾರಣಗಳು: ಜಮೀನು ಇಲ್ಲ; ಮಣ್ಣು ಚೆನ್ನಾಗಿಲ್ಲ; ಗೊಬ್ಬರ ಇಲ್ಲ; ದೈಹಿಕ ಕೆಲಸ ಮಾಡಿ ಅಭ್ಯಾಸವಿಲ್ಲ; ಕೆಲಸಕ್ಕೆ ಜನ ಸಿಗೋದಿಲ್ಲ; ಹೆಚ್ಚುವರಿ ಫಸಲಿಗೆ ಮಾರುಕಟ್ಟೆ ಇಲ್ಲ; ಸಮಯವಿಲ್ಲ ಇತ್ಯಾದಿ.

ಈ ಎಲ್ಲ ಕಾರಣಗಳನ್ನು ಮೆಟ್ಟಿ ನಿಂತು ಕೃಷಿ ಮಾಡುತ್ತಿದ್ದಾರೆ ಶ್ರೀಧರ ಕಾರಂತ್. ವಯಸ್ಸು 60 ದಾಟಿದ್ದರೂ ಲವಲವಿಕೆಯಿಂದ ತರಕಾರಿಗಳನ್ನು ವರುಷವಿಡೀ ಬೆಳೆಸುತ್ತಿದ್ದಾರೆ! ಮಳೆಗಾಲದಲ್ಲಿ ಸಸಿ ನಾಟಿ ಮಾಡಿ ಭತ್ತವನ್ನೂ ಬೆಳೆಸುತ್ತಿದ್ದಾರೆ!

ಶ್ರೀಧರ ಕಾರಂತರ ಬಳಿ “ಜಮೀನು ಇಲ್ಲ” ಎಂಬ ನೆವನವಿಲ್ಲ. ಕೇರಳದ ಉತ್ತರದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಕಣ್ವತೀರ್ಥ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ಅವರ ವಾಸ. (ಮಂಗಳೂರಿನಿಂದ ಕಣ್ವತೀರ್ಥಕ್ಕೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ವಾಹನದಲ್ಲಿ ಅರ್ಧ ಗಂಟೆಯ ಪ್ರಯಾಣ.) ಅಲ್ಲೇ ಸುತ್ತಮುತ್ತಲು ಐದು ಜನರ ತಲಾ ಸುಮಾರು ಒಂದೆಕೆರೆ ಜಮೀನು ಲೀಸಿಗೆ ಪಡೆದು ತರಕಾರಿ ಕೃಷಿ: ಟೊಮೆಟೋ, ಎಲೆಕೋಸು, ಅಲಸಂಡೆ, ಕೆಂಪು ಬೆಂಡೆಕಾಯಿ, ಹಸುರು ಬೆಂಡೆಕಾಯಿ, ಬದನೆ, ಸೌತೆ, ಮುಳ್ಳುಸೌತೆ, ಚೀನಿಕಾಯಿ, ಕುಂಬಳಕಾಯಿ, ಇಬ್ಬಡ್ಲ, ಹರಿವೆ, ಗೆಣಸು, ಮೆಣಸು.

ಮಣ್ಣು ಚೆನ್ನಾಗಿಲ್ಲ ಎಂಬ ನೆವನವೂ ಕಾರಂತರ ಬಳಿ ಇಲ್ಲ. ಅವರು ತರಕಾರಿ ಬೆಳೆಸುವುದು ಸಮುದ್ರದ ಹತ್ತಿರದ ಜಮೀನುಗಳಲ್ಲಿ. ಅಲ್ಲಿನದು ಮರಳುಮಣ್ಣು ಅಂದರೆ ನಿಸ್ಸಾರವಾದ ಮಣ್ಣು. ಅಂತಹ ಫಲವತ್ತತೆಯೇ ಇಲ್ಲದ ಜಮೀನಿನಲ್ಲಿ ಬಾವಿಯಿಂದ ನೀರು ಹಾಯಿಸಿ, ಉತ್ತಮ ತರಕಾರಿ ಫಸಲು ಪಡೆಯುತ್ತಿರುವ ಶ್ರೀಧರ ಕಾರಂತರದು ಸಾಹಸವೇ ಸೈ. ಒಬ್ಬರು ಭೂಮಾಲೀಕರಿಗೆ ಕಾರಂತರು ವರುಷಕ್ಕೆ ಪಾವತಿಸುವ ಜಮೀನಿನ ಬಾಡಿಗೆ ರೂ.25,000. ಉಳಿದ ನಾಲ್ವರಿಗೆ ಪಾವತಿಸುವ ಜಮೀನಿನ ಬಾಡಿಗೆ ವರುಷಕ್ಕೆ ತಲಾ ರೂ.5,000.

“ಗೊಬ್ಬರ ಇಲ್ಲ” ಎಂಬ ನೆವನ ಶ್ರೀಧರ ಕಾರಂತರು ಹೇಳೋದಿಲ್ಲ. ತರಕಾರಿ ಸಸಿಗಳಿಗೆ ಪೋಷಕಾಂಶ ಒದಗಿಸಲು ಅವರು ಹಾಕುವುದು ಜೀವಾಮೃತ. ಅವರು ಸಾಕುವ 60 ದೇಸಿ ದನಗಳ ಸೆಗಣಿಯಿಂದ ಜೀವಾಮೃತ ತಯಾರಿ. ಆ ದನಗಳನ್ನು ಅವರು ಸಾಕುತ್ತಿರುವುದು ಹಾಲಿಗಾಗಿ ಅಲ್ಲ, ಸೆಗಣಿಗಾಗಿ! ಕಾರಂತರು ದನಗಳ ಹಾಲು ಕರೆಯೋದೇ ಇಲ್ಲ ಎಂದರೆ ನಂಬುತ್ತೀರಾ? ದನದ ಹಾಲೆಲ್ಲ ಅದರ ಕರುವಿಗೆ ಎಂಬುದು ಅವರ ನಂಬಿಕೆ.


ತರಕಾರಿ ಫಸಲಿಗೆ ಮಾರುಕಟ್ಟೆ ಇಲ್ಲ ಎಂಬ ತಕರಾರನ್ನೂ ಶ್ರೀಧರ ಕಾರಂತರು ಎತ್ತೋದಿಲ್ಲ. ತಾವು ಬೆಳೆಸಿದ ತರಕಾರಿಗಳನ್ನು ಕೆಲವೊಮ್ಮೆ ಅವರು ಹತ್ತಿರದ ಕೆಲವು ಅಂಗಡಿಗಳಿಗೆ ಮಾರೋದುಂಟು. ಮುಖ್ಯವಾಗಿ ಅವರ ತರಕಾರಿ ಮಾರಾಟ ಮಂಗಳೂರಿನಲ್ಲಿ – ಅಲ್ಲಿನ ಪಂಜೆ ಮಂಗೇಶ ರಾವ ರಸ್ತೆ ಪಕ್ಕದಲ್ಲಿ “ಸಾವಯವ ಕೃಷಿಕ ಗ್ರಾಹಕ ಬಳಗ (ರಿ.)” ಪ್ರತಿ ಭಾನುವಾರ ಮುಂಜಾನೆ 6ರಿಂದ 9 ಗಂಟೆ ಅವಧಿಯಲ್ಲಿ ಸಂಘಟಿಸುವ ಸಾವಯವ ಸಂತೆಯಲ್ಲಿ. ಅವರು ಬೆಳೆಸುವುದೆಲ್ಲ ಸಾವಯವ ತರಕಾರಿಗಳು; ಹಾಗಾಗಿ ಸಂತೆಯಲ್ಲಿ ಆ ತರಕಾರಿಗಳಿಗೆ ಭಾರಿ ಬೇಡಿಕೆ.

“ಇದಕ್ಕೆಲ್ಲ ಸಮಯ ಹೇಗೆ ಹೊಂದಿಸಿಕೊಳ್ಳುತ್ತೀರಿ, ಕಾರಂತರೇ?” ಎಂದು ಕೇಳಿದಾಗ ಆ ವೃದ್ಧರು ಮುಗುಳ್ನಗುತ್ತಾ ಉತ್ತರಿಸುತ್ತಾರೆ, “ನಮಗೆ ಪ್ರತಿ ದಿನವೂ 24 ಗಂಟೆ ಇದೆಯಲ್ಲ…” ಮಳೆಗಾಲ ಬಂತೆಂದರೆ, ಅದೇ ಜಮೀನಿನಲ್ಲಿ ಬೀಜ ಬಿತ್ತಿ ಭತ್ತ ಬೆಳೆಸುವ ಕಾಯಕ ಅವರದು.

ಶ್ರೀಧರ ಕಾರಂತರಿಗೆ ಕೃಷಿಯೇ ತಪಸ್ಸು. ಈ ತಪಸ್ಸಿಗೆ ಮಾರ್ಗದರ್ಶನ ಸ್ವಾಮಿ ಮಂಗಳತೀರ್ಥ ಅವರದು. ಕಳೆದ 18 ವರುಷಗಳಿಂದ ಲಕ್ನೋ ಮೂಲದ ಇವರ ವಾಸ ಕಣ್ವತೀರ್ಥದಲ್ಲಿ. ಮೊದಲ 6 ವರುಷ ಮೌನ ಸಾಧನೆ ಮಾಡಿದ ಸ್ವಾಮಿಗಳು ಮುಂದಿನ 6 ವರುಷ ಅಧ್ಯಯನದಲ್ಲಿ ನಿರತರಾದರು. ಅಧ್ಯಾತ್ಮದ ಬಗ್ಗೆ ಹಲವಾರು ಗ್ರಂಥಗಳನ್ನು ಓದಿ ಅರ್ಥ ಮಾಡಿಕೊಂಡರು. ಅಧ್ಯಾತ್ಮದ ಸಾಧನೆಗೆ ಕೃಷಿ ಪೂರಕ ಎಂದು ಅವರಿಗೆ ತಿಳಿಯಿತು. ಅಲ್ಲಿಂದೀಚೆಗೆ, ಸಮಾಜಕ್ಕೆ ತಾನು ಹೇಗೆ ಸೇವೆ ಸಲ್ಲಿಸಬಹುದೆಂದು ಪ್ರಯೋಗಗಳಲ್ಲಿ ತೊಡಗಿದರು. ಈ ಹಂತದಲ್ಲಿ ಅವರಿಗೆ ಶ್ರೀಧರ ಕಾರಂತರ ಪರಿಚಯ. ಈಗ ಇಬ್ಬರೂ ಜೊತೆಗೂಡಿ ಸಾವಯವ ಕೃಷಿಯ ಸಾಧನೆಯಲ್ಲಿ ತೊಡಗಿದ್ದಾರೆ. ಜನರಿಗೆ ವಿಷಮುಕ್ತ ಅನ್ನ-ಆಹಾರ ಒದಗಿಸುವ ಪುಣ್ಯದ ಕಾಯಕವೇ ಜನಸೇವೆ ಎಂದು ನಂಬಿ ನಡೆಯುತ್ತಿದ್ದಾರೆ.

ಹೀಗಿರುವ ತಮಗೂ ಮೋಸ ಮಾಡುವ ಜನರಿದ್ದಾರೆ ಎಂದು ಶ್ರೀಧರ ಕಾರಂತರು ಸಂಕಟದಿಂದ ಹೇಳುತ್ತಾರೆ. “ಭಾನುವಾರದ ಸಂತೆಯಲ್ಲಿ ಕೆಲವರು ತರಕಾರಿಗಳನ್ನು ತಮ್ಮ ಚೀಲಕ್ಕೆ ಹಾಕಿಕೊಂಡು ಹಣ ಪಾವತಿಸದೆ ಹೋಗಿ ಬಿಡುತ್ತಾರೆ. ಒಂದು ಭಾನುವಾರ ನನಗೆ 800 ರೂಪಾಯಿಗಳಷ್ಟು ಮೋಸವಾಯಿತು” ಎನ್ನುವಾಗ ಅವರ ಮುಖದಲ್ಲಿತ್ತು ನೋವು.

ಇತ್ತೀಚೆಗೆ ಕಣ್ವತೀರ್ಥಕ್ಕೆ ಸಾವಯವ ಕೃಷಿಕ ಗ್ರಾಹಕ ಬಳಗದ ಪದಾಧಿಕಾರಿಗಳೊಂದಿಗೆ ಹೋಗಿ, ಶ್ರೀಧರ ಕಾರಂತರ ತರಕಾರಿ ಕೃಷಿಯನ್ನು ಕಣ್ಣಾರೆ ನೋಡಿದೆ. ಆ ಮರಳುಮಣ್ಣಿನ ಕಣಕಣ, ಅಲ್ಲಿ ಬೆಳೆಸಿದ ಗಿಡಬಳ್ಳಿಗಳು, ತರಕಾರಿಗಳು ಇದು ಕೇವಲ ಕೃಷಿಯಲ್ಲ, ನೆಮ್ಮದಿಯ ತಪಸ್ಸು ಎಂದು ಸಾರಿ ಹೇಳುತ್ತಿದ್ದವು.

-ಅಡ್ಡೂರು ಕೃಷ್ಣ ರಾವ್
spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group