-ಪ್ರಬಂಧ ಅಂಬುತೀರ್ಥ
“ಅಡಿಕೆ” ಎಂದರೆ ಅಪಾಯಕಾರಿ ಕ್ಯಾನ್ಸರ್ ಕಾರಕ ಎಂದಾಗಿದೆ…!! ಅಡಿಕೆ ಯ ಬಗ್ಗೆ ಮಾತನಾಡಲೇ ಮುಜುಗರ ಪಡುವಷ್ಟು ಅಡಿಕೆ ಮರ್ಯಾದೆ ಕಳೆದುಕೊಂಡಿದೆ. ಈ ಬೆಳವಣಿಗೆ ವಿಶೇಷವಾಗಿ ಲಗಾಯ್ತಿನಿಂದ ಅಡಿಕೆ ಬೆಳೆದು ಜೀವಿಸಿದ ಸಾಂಪ್ರದಾಯಿಕ ಅಡಿಕೆ ಬೆಳೆಗಾರರಿಗೆ ಇದು ಅತ್ಯಂತ ಅವಮಾನಕರ ಬೆಳವಣಿಗೆಯಾಗಿದೆ…!!
ಇಡೀ ದೇಶದಾದ್ಯಂತ ಸಾವಿರಾರು ವರ್ಷಗಳಿಂದ ಅಡಿಕೆ ಬಳಕೆಯಲ್ಲಿದ್ದು ಅದೀಗ ದಿಡೀರಾಗಿ ಹಾನಿಕಾರಕ ಆಗಿರುವುದು ಆಘಾತಕಾರಿ ಅಚ್ಚರಿ ಯ ವಿಚಾರ…!!
ಈಗ್ಗೆ ಇಪ್ಪತ್ತೈದು ಮೂವತ್ತು ವರ್ಷಗಳ ಹಿಂದೆ ಮಲೆನಾಡಿನ ಯಾರದ್ದೇ ಮನೆಗೆ ಹೋದರೂ ಉಬಯ ಕುಶಲೋಪರಿಯ ನಂತರ ಎಲೆಡಿಕೆ (ತಾಂಬೂಲ – ಕವಳ) ನೀಡದೇ ಅಥವಾ ಹಾಕದೇ ಕಳಿಸುತ್ತಿರಲಿಲ್ಲ.
ಹಿರಿಯರು ಒಂದು ಚಿಕ್ಕ ಬಟ್ಟೆ ಯ ಚೀಲದಲ್ಲಿ ಸುಣ್ಣ ಹೊಗೆಸೊಪ್ಪಿನ ಡಬ್ಬಿ ಮತ್ತು ಅಡಿಕೆ ಕತ್ತರಿಸುವ ಕತ್ತರಿ, ಒಂದಷ್ಟು ಅಡಿಕೆ ಮತ್ತು ವೀಳ್ಯದೆಲೆ ಇಟ್ಟುಕೊಳ್ತಿದ್ದರು. ಕೆಲವರು ದೂರದೂರಿಗೆ ಸಂಚರಿಸುವಾಗ ಎಲೆ ಅಡಿಕೆ ಸಂಬಂಧಿಸಿದ ಒಂದು ಕಿರು ಪೆಟ್ಟಿಗೆ ಇಟ್ಟುಕೊಳ್ತಿದ್ದರು. ನಾನು ಜೀವನ ಪರ್ಯಂತ ಎಲೆ ಅಡಿಕೆ ಹಾಕಿ ತೊಂಬತ್ತು ನೂರು ವರ್ಷಗಳ ಕಾಲ ಯಾವುದೇ ಖಾಯಿಲೆ ಇಲ್ಲದೇ ಸತ್ತ ಹಿರಿಯರನ್ನ ನೋಡಿದ್ದೇನೆ.
ನನ್ನ ದೊಡ್ಡಪ್ಪ ನವರು ಎಲೆ ಅಡಿಕೆ ಹೊಗೆ ಸೊಪ್ಪು ಹಾಕಿ ತೊಂಬತ್ತಾರು ವರ್ಷಗಳ ತುಂಬು ಜೀವನ ನೆಡೆಸಿ ನಿರ್ಗಮಿಸಿದ್ದು ಕಣ್ಣಾರೆ ನೋಡಿದ್ದೇನೆ. ಇವತ್ತು ಕರಾವಳಿ ಮತ್ತು ಮಲೆನಾಡಿನ ಮನೆಗಳಲ್ಲಿ ಎಲೆ ಅಡಿಕೆ ಹಾಕುವವರು ಕಡಿಮೆ ಆಗಿದ್ದಾರೆ. ಆದರೆ ಸಾಗರ ಶಿರಸಿ ಸಿದ್ದಾಪುರ ಭಾಗದಲ್ಲಿ ಮೊದಲಿನಷ್ಟು ಅಲ್ಲದಿದ್ದರೂ ಎಲೆಡಿಕೆ ಮೆಲ್ಲುವವರು ವ್ಯಾಪಕವಾಗಿ ಕಾಣಸಿಗುತ್ತಾರೆ. ಇಡೀ ದೇಶದಾದ್ಯಂತ ಎಲ್ಲಾ ಬಗೆಯ ಪೂಜೆ ಸಂಪ್ರದಾಯ ಗಳಿಗೆ ಅಡಿಕೆ ಅತ್ಯಂತ ಪೂಜನೀಯ ವಸ್ತು.
ಯಾವ ಯಾವ ವಸ್ತು ಅತ್ಯಂತ ಆರೋಗ್ಯಕರ , ಔಷಧೀಯ ಎಂಬುದನ್ನು ಹಿಂದಿನವರು ಯಾವುದೇ ಸಂಶೋಧನೆ ಗಳಿಲ್ಲದೇ ಕಂಡುಕೊಳ್ಳುವ ಶಕ್ತಿ ಹೊಂದಿ ದ್ದರು. ಅದರಿಂದ ಭಾರತೀಯ ವೈದ್ಯಕೀಯ ಪರಂಪರೆಯಲ್ಲಿ ಅದ್ಬುತ ವಾದ “ಆಯುರ್ವೇದ” ಬಂದದ್ದು.
ಹೀಗಿರುವಾಗ, ಸಾವಿರಾರು ವರ್ಷಗಳಿಂದ ಅಡಿಕೆ ಬಳಕೆ ಮಾಡಿ ತಲೆಮಾರುಗಳ ತುಂಬು ಜೀವನ ಗಳನ್ನೇ ಕಳೆದು ಬಂದವರಿಗೆ ಈಗ ಇದ್ದಕ್ಕಿದ್ದಂತೆ ಅಡಿಕೆ ಯೊಳಗಿನ ” ಕಾರ್ಸಿನೋಜಿನ್ ” ಎಂಬ ಅಂಶ ಕ್ಯಾನ್ಸರ್ ನ್ನ ಉತ್ತೇಜಿಸುತ್ತದೆ ಎಂಬ ಸುದ್ದಿ ಬಂದಿದೆ. ನಿಜಕ್ಕೂ ಇದು ಯಾವ ಮಾದರಿಯ, ಎಲ್ಲಿಯ ಅಡಿಕೆ ಯಲ್ಲಿ ಕಂಡು ಬಂದಿದೆ…? ಈ ಕಾರ್ಸಿನೋಜಿನ್ ಅಂಶ ಯಾವ ಸಂಧರ್ಭದಲ್ಲಿ ವಿಷಕಾರಿ ಯಾಗಿ ಪರಿಣಮಿಸುತ್ತದೆ..?
ತುಂಬಾ ಗಮನಾರ್ಹ ವಿಚಾರವೇನೆಂದರೆ ನಮ್ಮ ದಕ್ಷಿಣ ಭಾರತದ ಸಂಶೋಧನಾ ಸಂಸ್ಥೆ ಗಳಲ್ಲಿ “ಅಡಿಕೆ ಸಂಶೋಧನೆ” ಆದಾಗಲೆಲ್ಲಾ ” ಅಡಿಕೆ ಆರೋಗ್ಯಕರ ” ಎಂದೇ ವರದಿ ಬರುತ್ತಿದೆ. ಆದರೆ ಉತ್ತರ ಭಾರತದ ವೈದ್ಯಕೀಯ ಸಂಶೋಧನಾ ಸಂಸ್ಥೆ ಯಲ್ಲಿ ಮಾತ್ರ ಯಾಕೆ ಅಡಿಕೆ ಕ್ಯಾನ್ಸರ್ ಉತ್ತೇಜಿಸುತ್ತದೆ…? ಎಂಬ ವರದಿ ಹೊರ ಬರುತ್ತದೆ..? ಇಲ್ಲೇನೋ ಹುನ್ನಾರ ಮೋಸ ಇದೆಯ…?ಅಡಿಕೆ ಆರೋಗ್ಯಕರ ಎಂಬುದಕ್ಕೆ ಭಾರತೀಯರು ಪುರಾತನ ಕಾಲದಿಂದಲೂ ಅಡಿಕೆ ಯನ್ನು ಬಳಸುವುದಲ್ಲದೇ ಅದಕ್ಕೆ ಪೂಜನೀಯ ಸ್ಥಾನವನ್ನು ನೀಡಿರುವುದು ಸಾಕ್ಷಿ.
ಮೊದಲು ಮಲೆನಾಡು ಕರಾವಳಿಯ ಸಾಂಪ್ರದಾಯಿಕ ತಯಾರಿಕೆಯ ಅಡಿಕೆ ಯನ್ನು ಪ್ರತ್ಯೇಕ ಪ್ರತ್ಯೇಕ ಹಂತದಲ್ಲಿ ಸಂಶೋಧನೆ ಮಾಡಿದಲ್ಲಿ ಅಡಿಕೆ ಯ ನಿಜ ಹೂರಣ ಮೌಲ್ಯ ಹೊರಬರುತ್ತದೆ. ಸರ್ಕಾರಗಳು ಮತ್ತು ಸಂಶೋಧನಾ ಸಂಸ್ಥೆ ಗಳು ಈ ನಿಟ್ಟಿನಲ್ಲಿ ಮುಂದುವರಿದು ಅಡಿಕೆ ಯ ಮರ್ಯಾದೆ ಯನ್ನು ಹೆಚ್ಚಿಸ ಬೇಕು.