–ಡಾ| ಕೇಶವ ಭಟ್ ಸರ್ಪಂಗಳ
ಸಂಯೋಜಕರು,
ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ (ಎ ಆರ್ ಡಿ ಎಫ್)
ಮಂಗಳೂರು
ಭಾರತದಲ್ಲಿ ಪುರಾತನ ಕಾಲದಿಂದಲೆ ಅಡಿಕೆಗೆ ಒಂದು ವಿಶಿಷ್ಟ ಸ್ಥಾನಮಾನವಿದೆ. ಧಾರ್ಮಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಗಳಲ್ಲಿ ಅಡಿಕೆಯ ಬಳಕೆ ಸಾಮಾನ್ಯ. ಅಡಿಕೆ ಜನಮಾನಸದಲ್ಲಿ ಮತ್ತು ಜನಜೀವನದಲ್ಲಿ ಹಾಸುಹೊಕ್ಕಾಗಿದೆ. ಊಟದ ನಂತರ ಅಡಿಕೆಯನ್ನು ವೀಳ್ಯದೆಲೆ, ಸುಣ್ಣ ಮತ್ತು ಕೆಲವು ಸುಗಂಧ ವಸ್ತುಗಳೊಂದಿಗೆ ತಾಂಬೂಲ (ಬೀಡಾ) ರೂಪದಲ್ಲಿ ಜಗಿಯುವುದರಿಂದ ಜೀರ್ಣಕ್ಕೆ ಸಹಕಾರಿ ಎಂದು ನಂಬಿದ್ದೇವೆ. ಇಷ್ಟೇ ಅಲ್ಲ ಅಡಿಕೆಯೊಳಗೆ ಹಲವಾರು ಔಷಧೀಯ ಗುಣಗಳೂ ಇವೆ ಎಂಬುದಾಗಿ ಸಂಶೋಧನೆ ಮೂಲಕ ಪ್ರಚುರವಾದ ವೈಜ್ಞಾನಿಕ ಲೇಖನಗಳು ಬಿಂಬಿಸಿವೆ.
ಇತ್ತೀಚೆಗೆ ಅಡಿಕೆಯನ್ನು ಬೇರೆ ಹಲವು ಸುವಾಸನೆಯುಕ್ತ ವಸ್ತುಗಳೊಂದಿಗೆ ಪುಡಿಮಾಡಿ ಪಾನ್‌ಮಸಾಲ ರೂಪದಲ್ಲಿ ಜಗಿಯುವುದೂ ಕಂಡುಬರುತ್ತಿದೆ. ಎಷ್ಟೋ ಸಲ ಇಂತಹ ಜಗಿಯುವ ಪಾನ್ ಒಳಗೆ ತಂಬಾಕನ್ನೂ ಸೇರಿಸುತ್ತಾರೆ. ತಂಬಾಕು ಕ್ಯಾನ್ಸರ್‌ಕಾರಕ ಎಂಬುದನ್ನು ಅನೇಕ ಸಂಶೋಧನೆಗಳು ದೃಡಪಡಿಸಿವೆ. ಇದರ ಜೊತೆಗೆ ಕೆಲವು ಸಂಶೋಧನೆಗಳು ಅಡಿಕೆ ಕೂಡ ಕ್ಯಾನ್ಸರ್‌ಕಾರಕ ಎಂಬ ಅಂಶಕ್ಕೆ ಹೆಚ್ಚು ಒತ್ತು ಕೊಡಲು ಪ್ರಯತ್ನಿಸಿವೆ. ಅಡಿಕೆ ಕ್ಯಾನ್ಸರ್‌ಕಾರಕವೆ ಅಥವ ಅಲ್ಲವೆ ಎಂಬುದನ್ನು ತಿಳಿಯಲು ಮೂಷಿಕಗಳ ಮೇಲೆ ಪ್ರಯೋಗಗಳನ್ನು ಮಾಡಲಾಗಿದೆ. ಈ ರೀತಿ ಪ್ರಯೋಗಗಳನ್ನು ಮಾಡುವಾಗ ಹೆಚ್ಚಿನ ಕಡೆ ಅಡಿಕೆಯನ್ನು ಮಿತಿಗಿಂತ ಹೆಚ್ಚು ಪ್ರಮಾಣದಲ್ಲಿ ಬಳಕೆ ಮಾಡಲಾಗಿದೆ. ಅಡಿಕೆಯನ್ನು ಹಿತಮಿತವಾಗಿ ಬಳಸಿದಲ್ಲಿ ಅಡಿಕೆ ಅಥವ ತಂಬಾಕುರಹಿತ ಬೀಡಾ ಮತ್ತು ಪಾನ್‌ಮಸಾಲ ಕ್ಯಾನ್ಸರ್‌ಕಾರಕವಲ್ಲ ಎಂಬುದನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವೈಜ್ಞಾನಿಕ ಸಂಶೋಧನೆಗಳು ದೃಡಪಡಿಸಿವೆ. ಅದರ ಸಾರಾಂಶವನ್ನು ನಿರೂಪಿಸುವುದೇ ಈ ಬರಹದ ಉದ್ದೇಶ.
ಅಡಿಕೆಯ ಮಿತ ಬಳಕೆ ಕ್ಯಾನ್ಸರ್‌ಕಾರಕವಲ್ಲ- ಮೂಷಿಕಗಳ ಮೇಲೆ ಪ್ರಯೋಗ
ತಂಬಾಕುರಹಿತ ಬೀಡಾ ಕ್ಯಾನ್ಸರಿಗೆ ಕಾರಣವಲ್ಲ ಎಂದು 1962 ರಲ್ಲೇ ಡಾ| ದುನ್‌ಹಾಮ್ ಮತ್ತು ಡಾ| ಹೆರಾಲ್ಡ್ ಎಂಬ ವಿಜ್ಞಾನಿಗಳು ಹಾಮ್‌ಸ್ಟರ್ ಜಾತಿಯ ಮೂಷಿಕಗಳ ಮೇಲೆ ಪ್ರಯೋಗ ಮಾಡಿ ಹೇಳಿದ್ದರು. ಅವರು ಅಮೇರಿಕಾದ ಮೇರಿಲ್ಯಾಂಡ್‌ನಲ್ಲಿ ಸಿಗುವ ತಂಬಾಕುರಹಿತ ವಿವಿಧ ತರದ ಬೀಡಾಗಳನ್ನು 375 ಹಾಮ್‌ಸ್ಟರ್‌ಗಳ ಬಾಯಿಯೊಳಗಿನ ತೆಳುವಾದ ಚರ್ಮದೊಳಗೆ ದೀರ್ಘ ಸಮಯ ಇರಿಸಿ ಈ ಪ್ರಯೋಗಗಳನ್ನು ಮಾಡಿದ್ದರು. ಪ್ರಯೋಗಕ್ಕೆ ಒಳಗಾದ ಹಾಮ್‌ಸ್ಟರ್‌ಗಳಲ್ಲಿ ಯಾವುದೇ ಕ್ಯಾನ್ಸರ್ ಲಕ್ಷಣಗಳು ಕಂಡುಬರಲಿಲ್ಲ.
ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಡಾ| ಲಲಿತಕುಮಾರಿ ಮತ್ತು ಇತರ ವಿಜ್ಞಾನಿಗಳು 1974 ರಲ್ಲಿ ಚಿಕ್ಕಿಲಿಗಳ ಮೇಲೆ ಅಡಿಕೆಯ ಸತ್ವವನ್ನು ಪ್ರಯೋಗಮಾಡಿದ್ದರು. ಶೇಕಡಾ ೧ರ ಪ್ರಮಾಣದಲ್ಲಿ ಅಡಿಕೆಯ ಸತ್ವ ತೆಗೆದು 0.1 ಮಿ.ಲೀ. ನಷ್ಟು ಮತ್ತು ಶೇಕಡಾ 2 ರ ಪ್ರಮಾಣದಲ್ಲಿ ತಂಬಾಕುರಹಿತ ಬೀಡಾದ ಸತ್ವವನ್ನು 0.1 ಮಿ. ಲೀ. ನಷ್ಟು ಚಿಕ್ಕಿಲಿಗಳ ಮೇಲೆ ಪ್ರಯೋಗಮಾಡಿದಾಗ ಅದು ಕ್ಯಾನ್ಸರ್‌ಕಾರಕವಲ್ಲ ಎಂಬುದನ್ನು ಸಾಬೀತುಪಡಿಸಿದ್ದರು. ಅವರು ಇಂತಹ ಸತ್ವವನ್ನು ಸತತ ಎರಡು ವರ್ಷಗಳ ಕಾಲ ಸಾಧಾರಣ ಮತ್ತು ರೋಗವನ್ನು ತಡೆಯುವ ಶಕ್ತಿ ಇಲ್ಲದ ಚಿಕ್ಕಿಲಿಗಳ ಬೆನ್ನಿನ ಚರ್ಮದ ಮೇಲೆ ಹಚ್ಚಿ ಈ ಪ್ರಯೋಗಮಾಡಿದ್ದರು. ಚಿಕ್ಕಿಲಿಗಳ ಮೇಲೆ ಪ್ರಯೋಗಮಾಡಿದ ಅಡಿಕೆಯ ಪ್ರಮಾಣವು ಒಂದು ಕೆ.ಜಿ. ದೇಹದ ತೂಕಕ್ಕೆ ಸಾಧಾರಣ 3.3 ಗ್ರಾಂನಿದ 6.6 ಗ್ರಾಂ ನಷ್ಟು ಆಗುತ್ತದೆ.
ಡಾ| ರಣದಿವೆ ಮತ್ತು ಇತರ ವಿಜ್ಞಾನಿಗಳು 1976 ರಲ್ಲಿ ಅಡಿಕೆಯ ಪೇಸ್ಟನ್ನು ಹಾಮ್‌ಸ್ಟರ್‌ಗಳ ಬಾಯಿಯೊಳಗಿನ ತೆಳುವಾದ ಚರ್ಮದ ಪದರಕ್ಕೆ ಒಂದು ಕೆ.ಜಿ. ದೇಹದ ತೂಕಕ್ಕೆ 1.5 ಗ್ರಾಂ ನಷ್ಟು ಜೀವನಪರ್ಯಂತ ನಿತ್ಯ ಹಚ್ಚಿದಾಗಲೂ ಕ್ಯಾನ್ಸರ್ ಕಾಣಿಸಲಿಲ್ಲ. ಅದೇ ರೀತಿ ಚಿಕ್ಕಿಲಿಗಳ ಚರ್ಮದ ಮೇಲೆ ಒಂದು ಕೆ.ಜಿ. ದೇಹದ ತೂಕಕ್ಕೆ ಐದು ಗ್ರಾಂನಷ್ಟು ಅಡಿಕೆಯ ಪೇಸ್ಟನ್ನು ಹಚ್ಚಿದಾಗಲೂ ಕ್ಯಾನ್ಸರ್ ಕಾಣಿಸಲಿಲ್ಲ.
ಡಾ| ರಮೇಶ್ ರಾವ್ ಮತ್ತು ಡಾ| ಪದ್ಮಾದಾಸ್ ಎಂಬ ವಿಜ್ಞಾನಿಗಳು 1989 ರಲ್ಲಿ ಒಂದು ಅಧ್ಯಯನದಿಂದ “ಒಬ್ಬ ವ್ಯಕ್ತಿಯು ಒಂದು ದಿವಸ ಹೆಚ್ಚೆಂದರೆ ಅವನ ಒಂದು ಕೆ.ಜಿ. ತೂಕಕ್ಕೆ ಹೋಲಿಸಿದಾಗ 0.5 ಗ್ರಾಂ ನಷ್ಟು ಅಡಿಕೆಯನ್ನು ಬೇರೆ ಬೇರೆ ಸಾಮಾಗ್ರಿಗಳೊಂದಿಗೆ ಜಗಿಯುತ್ತಾನೆ” ಎಂಬುದಾಗಿ ಲೆಕ್ಕ ಹಾಕಿದ್ದಾರೆ. ಹೀಗಾದಾಗ 60 ಕೆ.ಜಿ. ತೂಕದ ಒಬ್ಬ ವ್ಯಕ್ತಿಯು ಹೆಚ್ಚೆಂದರೆ ೩೦ ಗ್ರಾಂನಷ್ಟು ಅಡಿಕೆಯನ್ನು ದಿನಾಲೂ ಜಗಿಯುತ್ತಾನೆ ಎಂದಾಯಿತು. ಅವರು ಮಂಗಳೂರು ಚಾಲಿ ಅಡಿಕೆ ಮತ್ತು ಮಲೆನಾಡಿನ ಕೆಂಪು ಅಡಿಕೆಗಳ ಹುಡಿಗಳನ್ನು ಒಂದು ಕೆ.ಜಿ. ದೇಹದ ತೂಕಕ್ಕೆ ಒಂದು ಗ್ರಾಂನಷ್ಟು ಆಹಾರದೊಂದಿಗೆ ಮಿಶ್ರಮಾಡಿ ಸತತವಾಗಿ 12 ತಿಂಗಳುಗಳ ಕಾಲ ಚಿಕ್ಕಿಲಿಗಳಿಗೆ ಕೊಟ್ಟಾಗಲೂ ಕ್ಯಾನ್ಸರಿನ ಲಕ್ಷಣಗಳು ಗೋಚರಿಸಲಿಲ್ಲ.
ತೈವಾನ್ ದೇಶದಲ್ಲಿ ಬೀಡಾದೊಂದಿಗೆ ತಂಬಾಕನ್ನು ಸೇರಿಸುವ ಅಭ್ಯಾಸವಿಲ್ಲ. ಬದಲಾಗಿ ಅಲ್ಲಿ ಎಳೆಅಡಿಕೆಯನ್ನು ಎರಡಾಗಿ ಸೀಳಿ ಅದರೊಳಗೆ ವೀಳ್ಯದೆಲೆಯ ಬದಲಾಗಿ ಅದರ ಹೂವು ಅಥವ ಕೋಡನ್ನು ಮತ್ತು ಸುಣ್ಣವನ್ನು ಸೇರಿಸಿ ಜಗಿಯುತ್ತಾರೆ. ಡಾ| ಲಿನ್ ಮತ್ತು ಇತರ ವಿಜ್ಞಾನಿಗಳು 1997 ರಲ್ಲಿ ತೈವಾನ್‌ನಲ್ಲಿ ಬಳಸುವ ಬೀಡಾವನ್ನು ರುಬ್ಬಿ ಪೇಸ್ಟನ್ನಾಗಿ ಮಾಡಿ ಹಾಮ್‌ಸ್ಟರ್‌ಗಳ ಬಾಯಿಯೊಳಗಿನ ತೆಳುವಾದ ಚರ್ಮದ ಮೇಲೆ 14 ತಿಂಗಳುಗಳ ಕಾಲ ಸತತವಾಗಿ ಉಜ್ಜಿದಾಗಲೂ ಕ್ಯಾನ್ಸರ್ ಕಾಣಿಸಲಿಲ್ಲ.
ಪಾನ್ ಮಸಾಲದಿಂದ ತಯಾರಿಸಿದ ಸತ್ವವನ್ನು ಡಾ| ಆಶಾ ರಾಮ್‌ಚಂದಾನಿ ಮತ್ತು ಇತರ ವಿಜ್ಞಾನಿಗಳು 1998 ರಲ್ಲಿ ಚಿಕ್ಕಿಲಿಗಳ ಮೇಲೆ 4ವಾರಗಳ ಕಾಲ ಪ್ರಯೋಗಮಾಡಿ “ಪಾನ್ ಮಸಾಲದ ಸತ್ವವನ್ನು 50 ಮಿ. ಗ್ರಾಂ. ವರೆಗೆ ಚಿಕ್ಕಿಲಿಗಳ ಬೆನ್ನಿನ ಚರ್ಮಕ್ಕೆ ಅಷ್ಟೂ ಸಮಯ ಹಚ್ಚಿದಾಗಲೂ ಕ್ಯಾನ್ಸರ್ ಕಾಣಿಸಲಿಲ್ಲ” ಎಂದು ಹೇಳಿದ್ದಾರೆ. ಹಾಗೆಯೇ ಪಾನ್ ಮಸಾಲ ಸತ್ವವನ್ನು ಆರು ತಿಂಗಳವರೇಗೆ ದಿನಾಲೂ ಚಿಕ್ಕಿಲಿಗಳ ಜಠರಕ್ಕೆ ಪೈಪಿನ ಮೂಲಕ ಸೇರಿಸಿದಾಗಲೂ ಕ್ಯಾನ್ಸರ್ ಕಾಣಿಸಲಿಲ್ಲ. ಚಿಕ್ಕಿಲಿಗಳಿಗೆ 50 ಮಿ.ಗ್ರಾಂ. ಎಂದರೆ ಒಂದು ಕೆ.ಜಿ. ದೇಹದ ತೂಕಕ್ಕೆ 1.61 ಗ್ರಾಂ ಮತ್ತು 60 ಕೆ.ಜಿ. ದೇಹದ ತೂಕಕ್ಕೆ 1೦೦ಗ್ರಾಂ ನಷ್ಟು ಪಾನ್ ಮಸಾಲ ಆಗುತ್ತದೆ.
ಅಡಿಕೆಯು ಕ್ಯಾನ್ಸರ್ ಬೆಳವಣಿಗೆಯನ್ನು ತಡೆಯುತ್ತದೆ:
ಅಡಿಕೆಯು ಕ್ಯಾನ್ಸರ್ ಬೆಳವಣಿಗೆಯನ್ನು ಕೂಡ ತಡೆಯುತ್ತದೆ ಎಂದು ಹಲವಾರು ವೈಜ್ಞಾನಿಕ ವರದಿಗಳಿವೆ. ಲಲಿತ ಕುಮಾರಿ ಮತ್ತು ಇತರರು 1974 ರಲ್ಲಿ ಚಿಕ್ಕಿಲಿಗಳ ಮೇಲೆ ನಡೆಸಿದ ಪ್ರಯೋಗಗಳಲ್ಲಿ ಇದು ಸಂಶಯಾತೀತವಾಗಿ ಸಾಬೀತಾಗಿದೆ. ಚಿಕ್ಕಿಲಿಗಳ ರ‍್ಮದ ಮೇಲೆ ಕ್ಯಾನ್ಸರ್ ಕಾರಕವಾದ 3:4 ಬೆಂಜ್ಪೈರೀನ್ ಲೇಪಿಸಿದಾಗ 33 ನೇ ವಾರಗಳಿಂದ ಕ್ಯಾನ್ಸರ್ ಗೆಡ್ಡೆಗಳು ಬೆಳವಣಿಗೆಯಾಗಲು ಪ್ರಾರಂಭಿಸಿ 39 ನೇ ವಾರದಲ್ಲಿ ಎಲ್ಲಾ ಪ್ರಾಣಿಗಳಲ್ಲಿ ಗೋಚರಿಸಿದವು. ಆದರೆ ಅಡಿಕೆ ಸಾರದೊಂದಿಗೆ ಪಡೆದ ಚಿಕ್ಕಿಲಿಗಳಲ್ಲಿ ಅಂತಹ ಗೆಡ್ಡೆಗಳು ಕಂಡುಬರಲಿಲ್ಲ ಎಂದು ಅವರು ಪ್ರಚುರಪಡಿಸಿದ್ದರು.
ಅಡಿಕೆಯು ಬಾಯಿ ಕ್ಯಾನ್ಸರ್ ವಿರುದ್ಧ ಕೂಡ ಪರಿಣಾಮಕಾರಿ. ಅಡಿಕೆ ಸಾರವು ಮಾನವನ ಬಾಯಿ ಕ್ಯಾನ್ಸರ್ ಕೋಶಗಳ ಜೀವಕೋಶಗಳನ್ನು ಕೊಲ್ಲುತ್ತದೆ ಆದರೆ ಸಾಮಾನ್ಯ ಜೀವಕೋಶಗಳನ್ನು ಅಲ್ಲ ಎಂಬುದು ಸಾಬೀತಾಗಿದೆ. ಅಡಿಕೆಯನ್ನು ಮಾನವನ ಬಾಯಿ ಕ್ಯಾನ್ಸರ್ ಕೋಶಗಳ ವಿರುದ್ಧ ಕೀಮೋಥೆರಪಿಟಿಕ್ ಏಜೆಂಟ್ ಆಗಿ ಬಳಸಬಹುದು ಮತ್ತು ಸಾಂಪ್ರದಾಯಿಕ ಕೀಮೋ ರೇಡಿಯೋಥೆರಪಿಯ ಅಡ್ಡ ಪರಿಣಾಮಗಳನ್ನು ಸರ‍್ಥವಾಗಿ ಕಡಿಮೆ ಮಾಡಬಹುದು ಎಂದು ಪ್ರತಿಪಾದಿಸಿದ್ದಾರೆ.
ಇದಲ್ಲದೆ ಮಾನವನ ಸ್ತನದ ಕ್ಯಾನ್ಸರ್ ಕೋಶಗಳನ್ನು ಕೊಲ್ಲುವ ಗುಣ ಅಡಿಕೆಯ ಸತ್ವಕ್ಕೆ ಇದೆ ಎಂಬುದಾಗಿ ಅನಜ್‌ವಾಲ ಮತ್ತು ಇತರರು ೨೦೧೦ರಲ್ಲಿ ಹಾಗೂ ಹೊಟ್ಟೆಯ ಮತ್ತು ಪಿತ್ತಕೋಶದ ಕ್ಯಾನ್ಸರ್ ಕೋಶಗಳನ್ನು ಕೊಲ್ಲುವ ಗುಣ ಇದೆ ಎಂದು ಕ್ಸಿಯಾಂಗ್ ಮತ್ತು ಇತರರು ಅದೇ ವರ್ಷ ಹೇಳಿದ್ದಾರೆ. ತೈವಾನಿನ ತೈಪೆ ವೈದ್ಯಕೀಯ ವಿಶ್ವವಿದ್ಯಾಲಯದ ವೀ ಮತ್ತು ಇತರರು ಕೂಡ ೨೦೨೧ರ ಸಂಶೋಧನೆಯಲ್ಲಿ ಅಡಿಕೆ ಪಿತ್ತಕೋಶದ ಕ್ಯಾನ್ಸರ್ ಬೆಳವಣಿಗೆಯನ್ನು ತಡೆಯುತ್ತೆ ಎಂಬುದಾಗಿ ಹೇಳಿದ್ದಾರೆ. ಪಿತ್ತಕೋಶದ ಕಾನ್ಸರ್ ತಗಲಿದ ಚಿಕ್ಕಿಲಿಗಳಲ್ಲಿ ಅಡಿಕೆ ಸಾರವನ್ನು ಕೊಟ್ಟಾಗ ಕ್ಯಾನ್ಸರ್ ಗಡ್ಡೆಗಳ ಬೆಳವಣಿಗೆ ಮತ್ತು ಗಾತ್ರದಲ್ಲಿ ಅಡಿಕೆ ಸಾರ ಕೊಡದ ಚಿಕ್ಕಿಲಿಗಳಲ್ಲಿರುವ ಕ್ಯಾನ್ಸರ್ ಗಡ್ಡೆಗಳಿಗಿಂತ ಶೇ ೫೦ ಕ್ಕಿಂತಲೂ ಕಡಿಮೆ ಆಗಿತ್ತು ಎಂದು ಅವರು ಹಳಿದ್ದಾರೆ. ಮೇಲಾಗಿ ಅಡಿಕೆ ಸಾರದ ಸುಧರ‍್ಘ ಬಳಕೆಯಿಂದ ದೇಹದ ಒಳಗಿನ ಪ್ರಮುಖ ಅಂಗಗಳಾದ ಪಿತ್ತಕೋಶ, ಹೃದಯ, ಶ್ವಾಸಕೋಶ, ಕಿಡ್ನಿ, ಮೊದಲಾದವುಗಳಲ್ಲಿ ಯಾವುದೇ ರೀತಿಯ ವೈಫಲ್ಯ ಕಂಡುಬರಲಿಲ್ಲ ಎಂಬುದು ಅವರ ಹೇಳಿಕೆ. ಈ ಅನ್ವೇಷಣೆಯ ಪ್ರಕಾರ ಅಡಿಕೆಯ ಸಾರವನ್ನು ಪಿತ್ತಕೋಶದ ಕ್ಯಾನ್ಸರ್ ತಡೆಯಲು ಒಂದು ಉಪಯುಕ್ತ ಚಿಕಿತ್ಸಾ ಪದ್ದತಿಯಾಗಿ ಬಳಸಬಹುದು ಎಂಬುದು ಈ ವಿಜ್ಞಾನಿಗಳ ಅನಿಸಿಕೆ.
ಅಡಿಕೆಯ ಅರೆಕೊಲಿನ್ ಅಂಶ ಕೂಡ ಕ್ಯಾನ್ಸರ್ ಬೆಳವಣಿಗೆಯನ್ನು ತಡೆಯುತ್ತದೆ ಎಂಬುದಾಗಿ ಫಾನ್ ಮತ್ತು ಇತರ ವಿಜ್ಞಾನಿಗಳ ಸಮೂಹ ಇಲಿಗಳ ಮೇಲೆ ನಡೆಸಿದ ಮತ್ತೊಂದು ಅಧ್ಯಯನದಲ್ಲಿ ದೃಢೀಕರಿಸಿದ್ದಾರೆ.
‘ಅತಿಯಾದರೆ ಅಮೃತವೂ ವಿಷ’ ಎನ್ನುವುದು ಜಗಜ್ಜಾಹೀರಾದ ಸಂಗತಿ. ಅಡಿಕೆ ಎಂಬ ಹೆಸರು ಕೇಳಿದೊಡನೆ ಅದಕ್ಕೆ ಕ್ಯಾನ್ಸರ್‌ಕಾರಕ ಎಂಬ ಹಣೆಪಟ್ಟಿ ಕಟ್ಟುವ ಜಾಯಮಾನ ಸರಿಯಲ್ಲ. ಪರಂಪರಾಗತವಾಗಿ ಭಾರತೀಯ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿರುವ ಅಡಿಕೆ ಅನೇಕ ಕುಟುಂಬಗಳ ಜೀವನಾಧಾರ ಕೂಡ.
-ಸಹಕಾರ:
ಶಂ. ನಾ. ಖಂಡಿಗೆ
ಉಪಾಧ್ಯಕ್ಷರು,
ಕ್ಯಾಂಪ್ಕೊ,
ಮಂಗಳೂರು