spot_img
Thursday, April 3, 2025
spot_imgspot_img

ಒತ್ತಡ ಅಥವಾ ಆತಂಕ ನಿವಾರಿಸುತ್ತಂತೆ ಅಡಿಕೆ! ಅಡಿಕೆಯ ಕುರಿತು ನಾವು ತಿಳಿದಿರದ ವಿಶೇಷ ಸಂಗತಿಗಳಿವು

ಡಾ. ಸರ್ಪಂಗಳ ಕೇಶವ ಭಟ್

ಒತ್ತಡ ಅಥವಾ ಆತಂಕ ಎನ್ನುವುದು ಒಂದು ರೀತಿಯ ಮನೋವ್ಯಾಧಿ.  ಮಾನವನಲ್ಲಿ  ಇದು ಅವನ              ದುರ್ಬಲ ಮನಸ್ಥಿತಿಯನ್ನು ತೋರಿಸುತ್ತದೆ ಮತ್ತು ಅವನ ದೈನಂದಿನ ಚಟುವಟಿಕೆಯ ಮೇಲೆ ಹಲವಾರು ರೀತಿಯ ದುಷ್ಪರಿಣಾಮವನ್ನು ಬೀರುತ್ತದೆ. ಏಕಾಗ್ರತೆ ಕಡಿಮೆಯಾಗಿ ಅವನ ನಡವಳಿಕೆಯಲ್ಲಿ ಬಹಳಷ್ಟು ಸಮಸ್ಯೆ  ತೋರಿಸುವುದೇ ಈ ಅಸ್ವಸ್ಥತೆಯ ಪ್ರಮುಖ ಲಕ್ಷಣ.  ಹತಾಶೆ, ನಿಷ್ಪ್ರಯೋಜಕತೆ, ಅಸಹಾಯಕತೆ, ದು:ಖ, ಸಿಡುಕಿನ ಸ್ವಭಾವ ಮೊದಲಾದವುಗಳು ಇದರ ಇತರ ಲಕ್ಷಣಗಳು.

ಆತಂಕ ತೀವ್ರಗತಿಯಲ್ಲಿದ್ದರೆ ಅದು ತುಂಬಾ ಅಪಾಯಕಾರಿಯಾಗಿ ರೋಗಿಯ ಮನಸ್ಥಿತಿಯನ್ನು ಬದಲಾಯಿಸಿ ಆತ್ಮಹತ್ಯೆಗೂ ಕಾರಣವಾಗಬಹುದು.  ಪ್ರಸ್ತುತ, ಕೆಲವು ಆತಂಕ ವಿರೋಧಿ (anti depressant) ಔಷಧಿಗಳ ಮೂಲಕ ಈ ಮನೋವ್ಯಾಧಿಗೆ ಚಿಕಿತ್ಸೆ ನೀಡುತ್ತಾರೆ. ಆದರೆ, ಅಂತಹ  ರಾಸಾಯನಿಕ ಔಷಧಿಗಳ ದೀರ್ಘಕಾಲ ಸೇವನೆ ಹಲವಾರು ಅಡ್ಡ ಪರಿಣಾಮ (side effects) ಗಳಿಗೆ  ಕಾರಣವಾಗಬಹುದು. ಆದುದರಿಂದ ಇಂತಹ ರಾಸಾಯನಿಕ ಔಷಧಿಗಳ ಬದಲಿಗೆ ಹೆಚ್ಚು ಸುರಕ್ಷಿತವಾದ, ಸಸ್ಯ ಆಧಾರಿತ, ಆತಂಕವನ್ನು ಕಡಿಮೆಮಾಡಲು ಸಹಕರಿಸುವ ಕೆಲವು ಉಪಯುಕ್ತ ಔಷಧಿಗಳ ಬಗ್ಗೆ ಸಂಶೋಧನೆಗಳು ನಿರಂತರವಾಗಿ ನಡೆಯುತ್ತಿವೆ.  ಅದರಲ್ಲಿ ಅಡಿಕೆಯ ಬಳಕೆ ಕೂಡ ಒಂದು.

ಈಗಾಗಲೇ ಮೂಷಿಕಗಳ ಮೇಲೆ ನಡೆದ ಹಲವಾರು ಸಂಶೋಧನೆಗಳು ಅಡಿಕೆಯಲ್ಲಿ ಆತಂಕ ನಿವಾರಕ ಗುಣವಿದೆ ಎಂಬುದನ್ನು ಸಾಬೀತುಪಡಿಸಿರುವುದು ಅಡಿಕೆ ಕೃಷಿಕರ ಪಾಲಿಗೆ ಸಂತೋಷದ ವಿಚಾರ.  ಅಂಥಹ ಸಂಶೋಧನಾ ಫಲಿತಾಂಶಗಳು ಬೇರೆ ಬೇರೆ ಕಡೆಗಳಲ್ಲಿ ಹಂಚಿ ಹೋಗಿರುವುದರಿಂದ ಅವುಗಳನ್ನು ಸಂಗ್ರಹಿಸಿ   ಒಂದೆಡೆ ಸಿಗುವಂತೆ ಮಾಡಿ ಅದರ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆಗೆ  ಉತ್ತೇಜಿಸುವುದೇ ಈ ಲೇಖನದ ಮುಖ್ಯ ಉದ್ದೇಶ.

ಇಲಿಗಳ ಮೇಲೆ ಮಾಡಿದ ಪ್ರಯೋಗಗಳು:

ಇಲಿಗಳ ಮೇಲೆ ಮಾಡಿದ ಪ್ರಯೋಗಗಳಿಂದ ಅಡಿಕೆ ಸಾರದ ಜಲೀಯ ಭಾಗವು (aqueous fraction) ಮೆದುಳಿನಲ್ಲಿರುವ ಆತಂಕಕ್ಕೆ ಕಾರಣವಾಗುವ ಮೊನೋ ಅಮೈನ್ ಆಕ್ಸಿಡೇಸ್ (MAO) ಎನ್ನುವ ಕಿಣ್ವದ ಕಾರ್ಯವನ್ನು ಸಮರ್ಪಕವಾಗಿ ತಡೆಹಿಡಿಯುತ್ತದೆ ಮತ್ತು ಅದು ಅಡಿಕೆಯ  ಹೆಕ್ಸೆನ್  (hexane) ಸಾರಕ್ಕಿಂತಲೂ ಉತ್ತಮವಾಗಿದೆ ಎಂಬುದಾಗಿ ಡಾ. ದಾರ್ ಮತ್ತು ಅವರ ಬಳಗ 1997 ರ ಫೈಟೋ ಮೆಡಿಸಿನ್ ಎಂಬ ನಿಯತಕಾಲಿಕದಲ್ಲಿ ಪ್ರಕಟಿಸಿದ್ದಾರೆ.  ಅದಲ್ಲದೆ, ಅಡಿಕೆ ಸಾರದ ಜಲೀಯ ಭಾಗವು ಮೊನೋ ಅಮೈನ್ ಆಕ್ಸಿಡೇಸ್ ನ ಕಾರ್ಯವನ್ನು ತಡೆಯುವ ‘ಕ್ಲೋರ್ಗಿಲೈನ್’ (clorgyline) ಎನ್ನುವ ಔಷಧಿಯಷ್ಟೇ ಪರಿಣಾಮಕಾರಿಯಾಗಿದೆ ಎಂಬುದಾಗಿಯೂ ಅವರು ಕಂಡುಕೊಂಡಿದ್ದಾರೆ.

ಅಡಿಕೆ ಸಾರದ ಡೈಕ್ಲೋರೋಮೀಥೆನ್ ಭಾಗವು ಕೂಡ ಮೊನೋ ಅಮೈನ್ ಆಕ್ಸಿಡೇಸ್ ನ ಕಾರ್ಯವನ್ನು ತಡೆಯುತ್ತದೆ ಎಂಬುದಾಗಿ ಡಾ. ದಾರ್ ಮತ್ತು ಅವರ ಬಳಗ 2000 ನೇ ಇಸವಿಯಲ್ಲಿ ಇಲಿಗಳ ಮೇಲೆ ಮಾಡಿದ ಇನ್ನೊಂದು ಪ್ರಯೋಗದಲ್ಲಿ ಕಂಡುಕೊಂಡಿದ್ದಾರೆ ಮತ್ತು ಆ ವಿವರವನ್ನು ಫಾರ್ಮಕಾಲಜಿ, ಬಯೋಕೆಮಿಸ್ಟ್ರಿ ಮತ್ತು ಬಿಹೇವಿಯರ್ ಎನ್ನುವ ನಿಯತಕಾಲಿಕದಲ್ಲಿ ಪ್ರಕಟಿಸಿದ್ದಾರೆ.  ಅಲ್ಲದೆ, ಇಲಿಗಳಲ್ಲಿ ಅಂತಹ ಅಡಿಕೆ ಸಾರವು ಒಂದು ಮಿಲಿ ಲೀ ಗೆ 665 ಮೈಕ್ರೋ ಗ್ರಾಂ ಪ್ರಮಾಣದಲ್ಲಿ ಶೇಕಡಾ 50 ರಷ್ಟು ಆತಂಕವನ್ನು ನಿಯಂತ್ರಿಸಿದೆ ಎಂಬುದಾಗಿಯು ಅವರು ಪ್ರಕಟಿಸಿದ್ದಾರೆ. ಇನ್ನೂ ಮುಂದುವರಿದು, ಅಡಿಕೆಯಲ್ಲಿರುವ ಅರೆಕೊಲೈನ್, ಅರೆಕಾಡಿನ್ ಮೊದಲಾದ ಆಲ್ಕಲೋಯ್ಡ್ಸ್ ಗಳು ಮೊನೋ ಅಮೈನ್ ಆಕ್ಸಿಡೇಸ್ ನ ಕಾರ್ಯವನ್ನು ತಡೆಯುವುದರಲ್ಲಿ ಸಹಕಾರಿಯಲ್ಲ ಎಂಬುದಾಗಿಯೂ ಅವರು ಪ್ರಕಟಿಸಿದ್ದಾರೆ.

ಡಾ. ಖಾನ್ ಮತ್ತು ಅವರ ಬಳಗ 2014 ರಲ್ಲಿ ಅಡಿಕೆ ಸಾರದ ಡೈಕ್ಲೋರೋಮೀಥೆನ್ ಭಾಗವನ್ನು ಒಂದು ಕೆಜಿ ದೇಹದ ತೂಕಕ್ಕೆ 7 ಮಿಲಿ ಗ್ರಾಂ ಪ್ರಮಾಣದಲ್ಲಿ ಇಲಿಗಳಿಗೆ ಚುಚ್ಚಿದಾಗ ಅವುಗಳ ಮಿದುಳಿನಲ್ಲಿರುವ ಆತಂಕ ವಿರೋಧಿ ರಾಸಾಯನಿಕ ‘ಸೆರಟೋನಿನ್’ (serotonin) ನ ಪ್ರಮಾಣವು ಶೇಕಡಾ 50 ರಷ್ಟು ಹೆಚ್ಚಾಗಿತ್ತು ಎಂಬುದಾಗಿ  ಪಾಕಿಸ್ತಾನ್ ಜರ್ನಲ್ ಆಫ್ ಫಾರ್ಮಸಿಟಿಕಲ್ ಸೈನ್ಸಸ್ ಎನ್ನುವ ನಿಯತಕಾಲಿಕದಲ್ಲಿ ಪ್ರಕಟಿಸಿದ್ದಾರೆ.

ಬೇರೆ ಬೇರೆ ದ್ರಾವಕಗಳನ್ನು ಉಪಯೋಗಿಸಿ ತೆಗೆದ ಅಡಿಕೆ ಸಾರವನ್ನು ಇಲಿಗಳ ಮೇಲೆ ಪ್ರಯೋಗಿಸಿದಾಗ ‘ಅಡಿಕೆ ಸಾರದ ಜಲೀಯ ಭಾಗವು ಮಾತ್ರ ಒಳ್ಳೆಯ ರೀತಿಯಲ್ಲಿ ಆತಂಕ ವಿರೋಧಿ ಗುಣವನ್ನು ತೋರಿಸಿದೆ’ ಎಂಬುದಾಗಿ ಡಾ. ಅಬ್ಬಾಸ್ ಮತ್ತು ಅವರ ಬಳಗ 2013 ರ ಫೈಟೋಥೆರಪಿ ರಿಸರ್ಚ್ ಎನ್ನುವ ನಿಯತಕಾಲಿಕದಲ್ಲಿ ಪ್ರಕಟಿಸಿದ್ದಾರೆ. ಅಂತಹ ಸಾರವನ್ನು ಬಳಸಿದಾಗ ಇಲಿಗಳ ಮೆದುಳಿನಲ್ಲಿ ಆತಂಕ ವಿರೋಧಿ ರಾಸಾಯನಿಕವಾದ ‘ಸೆರಟೋನಿನ್’ ನ ಪ್ರಮಾಣ ಹೆಚ್ಚಾಗಿತ್ತು ಎಂಬುದಾಗಿ ಅವರು ಹೇಳಿರುತ್ತಾರೆ.  ಅಡಿಕೆ ಸಾರದ ಜಲೀಯ ಭಾಗವನ್ನು ಒಂದು ಕೆಜಿ ದೇಹದ ತೂಕಕ್ಕೆ 20 ಮಿಲಿ ಗ್ರಾಂ ನಂತೆ  ಚುಚ್ಚಿದಾಗ  ಅಂತಹ ಇಲಿಗಳ ಮೆದುಳಿನಲ್ಲಿ ಅಡಿಕೆ ಸಾರ ಚುಚ್ಚದ ಇಲಿಗಳಿಗೆ ಹೋಲಿಸಿದಾಗ ಸೆರಟೋನಿನ್ ಅಂಶ ಶೇಕಡಾ 35 ರಷ್ಟು ಹೆಚ್ಚಾಗಿತ್ತು ಎಂಬುದಾಗಿ ಅವರು ಹೇಳಿದ್ದಾರೆ.

ಇನ್ನೂ ಮುಂದುವರಿದು ಅಡಿಕೆ ಸಾರದ ಜಲೀಯ ಭಾಗ ಹೆಚ್ಚು ಕಮ್ಮಿ ಆತಂಕ ನಿವಾರಣೆಗೆ ವೈದ್ಯರು ಶಿಫಾರಸು ಮಾಡುವ ‘ಫೇನೆಲ್ಜೈನ್’ (phenelzyne) ಎನ್ನುವ ಔಷಧಿಯಷ್ಟೇ ಪರಿಣಾಮಕಾರಿಯಾಗಿದೆ ಎಂಬುದಾಗಿ ಅವರು ಕಂಡುಕೊಂಡಿದ್ದಾರೆ.   ಫೇನೆಲ್ಜೈನ್ ನನ್ನು ಒಂದು ಕೆಜಿ ದೇಹದ ತೂಕಕ್ಕೆ 20 ಮಿಲಿ ಗ್ರಾಂ ನಂತೆ ಚುಚ್ಚಿದಾಗ ಅಂತಹ ಇಲಿಗಳ ಚಲನವಲನದಲ್ಲಿ ಶೇಕಡಾ 60 ರಷ್ಟು ಹೆಚ್ಚಾಗಿತ್ತು. ಹಾಗೆಯೇ ಅದೇ ಪ್ರಮಾಣದಲ್ಲಿ ಅಡಿಕೆ ಸಾರವನ್ನು ಚುಚ್ಚಿದಾಗ ಇಲಿಗಳ  ಚಲನವಲನದಲ್ಲಿ  ಸ್ವಲ್ಪ ಕಡಿಮೆ ಆದರೂ ಚುಚ್ಚಿಸದ ಇಲಿಗಳಿಗಿಂತ  ಶೇಕಡಾ 48 ರಷ್ಟು ಹೆಚ್ಚಾಗಿತ್ತು ಎಂಬುದಾಗಿ ಅವರು ಕಂಡುಕೊಂಡಿದ್ದಾರೆ. 

ಅಡಿಕೆ ಸಾರದ ಜಲೀಯ ಭಾಗದಲ್ಲಿರುವ ಸಸ್ಯ ಸಂಯುಕ್ತಗಳನ್ನು (phytochemicals) ವಿಶ್ಲೇಷಿಸಿದಾಗ ಅದರಲ್ಲಿ ಯಾವುದೇ ಅಲ್ಕಲಾಯ್ಡ್ ಗಳು ಕಂಡುಬರಲಿಲ್ಲ, ಬದಲಾಗಿ ಪಾಲಿಫಿನಾಲ್ ಗಳಾದ  ಸಫೋನಿನ್ ಮತ್ತು ಟಾನಿನ್ ಗಳು ಹೆಚ್ಚಾಗಿ ಕಂಡು ಬಂತು ಎಂಬುದಾಗಿ ಡಾ. ಅಬ್ಬಾಸ್ ಮತ್ತು ಅವರ ಬಳಗ ಅದೇ ಅಧ್ಯಯನದಲ್ಲಿ ಕಂಡುಕೊಂಡಿದ್ದಾರೆ. ಹಾಗಾಗಿ ಅಡಿಕೆಯ ಆತಂಕ ವಿರೋಧಿ ಗುಣಕ್ಕೆ ಕಾರಣ ಅದರಲ್ಲಿರುವ ಸಪೋನಿನ್ ಮತ್ತು ಟಾನಿನ್ ಗಳಾಗಿವೆ ಎಂಬುದಾಗಿ ಅವರು ವಿಶ್ಲೇಷಿಸಿದ್ದಾರೆ.

ಅಡಿಕೆ ಸಾರವನ್ನು ಚುಚ್ಚುವ ಮೂಲಕ ಅಲ್ಲದೆ, ಬಾಯಿಯ ಮೂಲಕ ಸೇವಿಸಿದಾಗಲೂ ಅದು ಆತಂಕ ನಿವಾರಿಸುವ ಗುಣವನ್ನು ತೋರಿಸಿದೆ ಎಂಬುದಾಗಿ  2016 ರಲ್ಲಿ ಡಾ. ಬೆಂಡೆ ಮತ್ತು ಅವರ ಬಳಗ ಇಲಿಗಳ ಮೇಲೆ ಮಾಡಿದ ಪ್ರಯೋಗಗಳಿಂದ ಕಂಡುಕೊಂಡಿದ್ದಾರೆ. ಅವರು ಈ ವಿಚಾರವನ್ನು ಇಂಟರ್ನ್ಯಾಷನಲ್ ಜರ್ನಲ್ ಆಫ್ ಬೇಸಿಕ್ ಅಂಡ್ ಕ್ಲಿನಿಕಲ್ ಫಾರ್ಮಸಿ ಯಲ್ಲಿ ಪ್ರಚುರಪಡಿಸಿದ್ದಾರೆ. ಒಂದು ಕೆಜಿ ದೇಹದ ತೂಕಕ್ಕೆ 50 ಮಿಲಿ ಗ್ರಾಂ ಪ್ರಮಾಣದಲ್ಲಿ ಇಥನಾಲ್ ಉಪಯೋಗಿಸಿ ತೆಗೆದ ಅಡಿಕೆ ಸಾರವನ್ನು ಇಲಿಗಳು ಸೇವಿಸಿದಾಗ ಅವುಗಳ ಚಲನವಲನ ಅಡಿಕೆ ಸಾರ ಸೇವಿಸದ ಇಲಿಗಳಿಗಿಂತ ಶೇ 28 ರಷ್ಟು ಹೆಚ್ಚಾಯಿತು ಎಂಬುದಾಗಿತ್ತು ಅವರ ರಿಪೋರ್ಟ್.

ಚಿಕ್ಕಿಲಿಗಳ ಮೇಲೆ ನಡೆಸಿದ ಪ್ರಯೋಗಗಳು:

ಆತಂಕ ವಿರೋಧಿ ಔಷಧಿಯಾದ ಇಮಿಪ್ರಮೈನ್ (imipramine) ಒಂದು ಕೆಜಿ ದೇಹದ ತೂಕಕ್ಕೆ 10 ಮಿಲಿ ಗ್ರಾಂ ನಂತೆ ಚಿಕ್ಕಿಲಿಗಳಿಗೆ 10 ದಿವಸಗಳವರೆಗೆ ಚುಚ್ಚಿದಾಗ ಅಂತಹ ಚಿಕ್ಕಿಲಿಗಳಲ್ಲಿ ಆತಂಕ ವಿರೋಧಿ ಗುಣ ಇಮಿಪ್ರಮೈನ್ ಚುಚ್ಚದ ಚಿಕ್ಕಿಲಿಗಳಿಗೆ ಹೋಲಿಸಿದಾಗ ಶೇಕಡಾ 58.17 ರಷ್ಟು ಹೆಚ್ಚಾಗಿತ್ತು. ಆದರೆ ಇಥನಾಲ್ ಉಪಯೋಗಿಸಿ ತೆಗೆದ ಅಡಿಕೆ ಸಾರವನ್ನು ಒಂದು ಕೆಜಿ ದೇಹದ ತೂಕಕ್ಕೆ 40 ಮಿಲಿ ಗ್ರಾಂ ಪ್ರಮಾಣದಲ್ಲಿ ಚಿಕ್ಕಿಲಿಗಳಿಗೆ 10 ದಿವಸಗಳವರೆಗೆ ಚುಚ್ಚಿದಾಗ ಅಂತಹ ಚಿಕ್ಕಿಲಿಗಳಲ್ಲಿ ಆತಂಕ ವಿರೋಧಿ ಗುಣ ಅಡಿಕೆ ಸಾರ ಚುಚ್ಚದ ಚಿಕ್ಕಿಲಿಗಳಿಗೆ ಹೋಲಿಸಿದಾಗ ಶೇಕಡಾ 83.33 ರಷ್ಟು ಹೆಚ್ಚಾಗಿತ್ತು ಎಂಬುದಾಗಿ ಡಾ. ಭಟ್ ಮತ್ತು ಅವರ ಬಳಗ 2016 ರಲ್ಲಿ ಇಂಡಿಯನ್ ಜರ್ನಲ್ ಆಫ್ ಫಾರ್ಮಸಿ ಮತ್ತು ಫಾರ್ಮಕಾಲಜಿ ಎಂಬ ನಿಯತಕಾಲಿಕದಲ್ಲಿ ಪಬ್ಲಿಷ್ ಮಾಡಿದ್ದಾರೆ.

ಬಾಯಿಯ ಮೂಲಕ ಸೇವಿಸಿದಾಗಲೂ ಅಡಿಕೆಯ ಸಾರ ಚಿಕ್ಕಿಲಿಗಳಲ್ಲಿ ಆತಂಕ ವಿರೋಧಿ ಗುಣವನ್ನು ತೋರ್ಪಡಿಸಿದೆ ಎಂಬುದಾಗಿ ಡಾ. ರುಕ್ಮಣಿ  ಮತ್ತು ಅವರ ಬಳಗ 2014 ರಲ್ಲಿ ವರ್ಲ್ಡ್ ಜರ್ನಲ್ ಆಫ್ ಫಾರ್ಮಸಿಟಿಕಲ್ ರಿಸರ್ಚ್ ಎನ್ನುವ ನಿಯತಕಾಲಿಕದಲ್ಲಿ ಪ್ರಕಟಿಸಿದ್ದಾರೆ.  ಆದರೆ ಅಡಿಕೆ ಸಾರದ ಪ್ರಮಾಣ ಮಾತ್ರ ಒಂದು ಕೆಜಿ ದೇಹದ ತೂಕಕ್ಕೆ 250 ಮಿಲಿ ಗ್ರಾಂ ಆಗಿತ್ತು. ಆ ಪ್ರಮಾಣದಲ್ಲಿ ಚಿಕ್ಕಿಲಿಗಳ ಚಲನವಲನ ಸಾಧಾರಣವಾಗಿ ಇಮಿಪ್ರಮೈನ್ (ಒಂದು ಕೆಜಿ ದೇಹದ ತೂಕಕ್ಕೆ 10 ಮಿಲಿ ಗ್ರಾಂ ಪ್ರಮಾಣದಲ್ಲಿ) ಸೇವಿಸಿದ ಚಿಕ್ಕಿಲಿಗಳಷ್ಟೇ ಆಗಿತ್ತು. ಅಡಿಕೆ ಸಾರವನ್ನು ಸೇವಿಸಿದಾಗ ಚಿಕ್ಕಿಲಿಗಳ ಚಲನವಲನ ಅಡಿಕೆ ಸಾರ ಸೇವಿಸದ ಚಿಕ್ಕಿಲಿಗಳಿಗಿಂತ ಶೇಕಡಾ 44.7 ರಷ್ಟು ಹೆಚ್ಚಾಗಿತ್ತು.  ಆದರೆ, ಇಮಿಪ್ರಮೈನ್ ಸೇವಿಸಿದಾಗ ಚಿಕ್ಕಿಲಿಗಳ ಚಲನವಲನ ಅದರನ್ನು ಸೇವಿಸದವುಗಳಿಗಿಂತ ಶೇಕಡಾ 45.1 ರಷ್ಟು ಹೆಚ್ಚಾಗಿತ್ತು ಎಂಬುದಾಗಿ ಅವರು ಹೇಳಿದ್ದಾರೆ.

ಮಾನವನ ಮೇಲಿನ ಅಧ್ಯಯನ:

ಅಡಿಕೆ ಜಗಿಯುವವರ ಅಭಿಪ್ರಾಯ ಸಂಗ್ರಹಿಸಿದಾಗ  ‘ಅಡಿಕೆ ಜಗಿಯುವುದರಿಂದ  ಮಾನವನಲ್ಲಿ ಆಲಸ್ಯ ಮತ್ತು ಆತಂಕ ಕಡಿಮೆಯಾಗುವುದು’ ಎಂಬುದು ಹೆಚ್ಚಿನವರ ಅಭಿಪ್ರಾಯವಾಗಿತ್ತು ಎಂಬುದಾಗಿ ಡಾ. ಶ್ರೀಹರಿ ಮತ್ತು ಅವರ ಬಳಗ ದಕ್ಷಿಣ ಕನ್ನಡದಲ್ಲಿ ಮಾಡಿದ ಒಂದು ಅಧ್ಯಯನದಲ್ಲಿ ಕಂಡುಕೊಂಡಿದ್ದಾರೆ. ಆ ವಿಷಯವನ್ನು ಅವರು UK ಇಂದ ಪಬ್ಲಿಷ್ ಆಗುವ ಅಡಿಕ್ಷನ್ (Addiction) ಎನ್ನುವ ವೈಜ್ಞಾನಿಕ ನಿಯತಕಾಲಿಕದ 2010 ರ ಸಂಚಿಕೆಯಲ್ಲಿ ಪ್ರಕಟಿಸಿದ್ದಾರೆ. 

ಅನಿಸಿಕೆ: ಈ ಮೇಲಿನ ಎಲ್ಲಾ ಅಧ್ಯಯನಗಳು ಅಡಿಕೆಯಲ್ಲಿ ಆತಂಕ ನಿವಾರಿಸುವ ಗುಣವಿದೆ ಎಂಬುದನ್ನು ಸಾಬೀತುಪಡಿಸಿವೆ.   ಈ ದಿಶೆಯಲ್ಲಿ ಇನ್ನೂ ಹೆಚ್ಚಿನ ಅಧ್ಯಯನವನ್ನು ನಡೆಸಿ ಅಡಿಕೆಯಿಂದ ಒಂದು ಉಪಯುಕ್ತವಾದ ಸಸ್ಯಜನ್ಯ ಆತಂಕ ನಿವಾರಕ ಔಷಧಿಯನ್ನು ಅಭಿವೃದ್ಧಿ ಪಡಿಸುವಲ್ಲಿ ವಿಜ್ಞಾನಿಗಳು,  ಔಷಧ ಶಾಸ್ತ್ರಜ್ಞರು, ಮೊದಲಾದವರು ಕೈಜೋಡಿಸಬೇಕಾಗಿದೆ.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group