spot_img
Tuesday, September 17, 2024
spot_imgspot_img
spot_img
spot_img

ಅಡಿಕೆ ಕೊಳೆಯ ಬಗ್ಗೆ ಅಡಿಕೆ ಬೆಳೆಗಾರರು ಓದಲೇಬೇಕಾದ ಬರಹವಿದು!

-ಪ್ರಬಂಧ ಅಂಬುತೀರ್ಥ
ನಮ್ಮ ಮಲೆನಾಡಿನ ಅತಿ ಮಳೆ ಬೀಳುವ ಪ್ರದೇಶಗಳಲ್ಲಿ ಪ್ರತಿ ವರ್ಷವೂ ಅಡಿಕೆ ಗೆ ಕೊಳೆ ಗ್ಯಾರಂಟಿ.
ಅಡಿಕೆಗೆ ಕೊಳೆ ಏಕೆ ಬರುತ್ತದೆ..? ವೈಜ್ಞಾನಿಕ ವಿಶ್ಲೇಷಣೆ ಹೊರತಾಗಿ ನಮ್ಮಂಥ ಸಾಮಾನ್ಯ ಅಡಿಕೆ ಬೆಳೆಗಾರರ “ಜನಪದ  ಅನುಭವ”  ಏನೆಂದರೆ ನಿರಂತರವಾಗಿ ವಾರ ಗಟ್ಟಲೇ ಬಿಡುವು ಕೊಡದೇ ಬಂದಾಗ ಅಡಿಕೆ ಮರದ ಬುಡ ಸಂಪೂರ್ಣ ಶೀತ ವಾಗಿ ಅಡಿಕೆ ಮರಕ್ಕೆ ಪ್ರಾಣವಾಯು ಅಂಶ ಕಡಿಮೆ ದಕ್ಕಿ ಅಡಿಕೆ ಮರದ ಬುಡ ದಲ್ಲಿ ಆದ ಈ ಎಫೆಕ್ಟ್ ಮೊದಲು ಅಡಿಕೆ ಮರದ ಫಸಲಿನ ಮೇಲೆ ದುಷ್ಪರಿಣಾಮ ಬೀರಿ ಅಡಿಕೆ ಕಾಯಿ ಉದುರುತ್ತದೆ.
ಕೊಳೆಗಳಲ್ಲಿ ಅತಿ ಮಳೆಗೆ ಉದುರುವ ಅಡಿಕೆಗೆ ಮಲೆನಾಡಿನ ಕಡೆಯಲ್ಲಿ ನೀರು ಗೊಳೆ ಎಂದು ಕರೀತಾರೆ.
ಅಡಿಕೆ ಕಾಯಿಗಳು ಮರದಿಂದ ಬಿದ್ದಾಗ ಬೂದುಬಣ್ಣಕ್ಕೆ ತಿರುಗಿದ್ದರೆ ಬೂದುಗೊಳೆ ಅಂತಾರೆ. “ನೀರು ಗೊಳೆ ” ಮಳೆ ಕಮ್ಮಿ ಆದ ಮೇಲೆ ನಿಯಂತ್ರಣವಾದರೆ “ಬೂದು ಗೊಳೆ” ಗೆ ಔಷಧ ಸಿಂಪಡಣೆ ಮಾಡಿದ ಮೇಲೆ ನಿಯಂತ್ರಣ ವಾಗುತ್ತದೆ ಅಥವಾವಾಗಬಹುದು.
ಅಡಿಕೆಗೆ ಕೊಳೆ ಬರಲು ಮಳೆಯ ಜೊತೆಯಲ್ಲಿ ಮಂಗ ಮತ್ತು ಇತರೆ ಪ್ರಾಣಿ ಪಕ್ಷಿಗಳ ದಾಳಿ , ಕಾಯಿಗಳ ಮೇಲೆ ದಾಳಿ ಮಾಡಿ  ಅಡಿಕೆ ಕಾಯಿಗೆ ಗಾಯ ಮಾಡು ವುದೂ,  ಕೋಗಿನ ತೋಟ ವಾದರೆ ಪಕ್ಕದ ತೋಟದಲ್ಲಿ ಔಷಧ ಸಿಂಪಡಣೆ ಮಾಡ ದಿದ್ದಲ್ಲಿ ಒತ್ತಿನ ತೋಟಕ್ಕೂ ಗಾಳಿ ಮಳೆ ಯಲ್ಲಿ ಕೊಳೆ ಫಂಗಸ್ ಮರದಿಂದ ಮರಕ್ಕೆ ಸಲೀಸಾಗಿ ದಾಟಿ ಬಿಡುತ್ತದೆ.
ಅಡಿಕೆ ತೋಟ ಮುಂಬೆಳಸು ಎಂದರೆ ಸೆಪ್ಟೆಂಬರ್ ಅಕ್ಟೋಬರ್ ಹೊತ್ತಿಗೆ ಕೊನೆ ತೆಗೆಯಲು ಬೆಳೆಯುವ ಅಡಿಕೆ ಗೊನೆ ಕಾಯಿ ಇರುವ ಅಡಿಕೆ ತೋಟಗಳು ಅಡಿಕೆ ಗೆ ಮೊದಲು ಕೊಳೆ ರೋಗ ಬಾಧಿಸುತ್ತದೆ.
ಮಲೆನಾಡಿನ ಸಸಿ ತೋಟ ಮಾಡಲು ಸಾಮಾನ್ಯವಾಗಿ ಎರಡನೇ ಕೊಯ್ಲಿನಲ್ಲಿ ಬೀಜಕ್ಕೆ  ಕೊನೆ ಬಿಟ್ಟು ಅಂತಹ ಕೊನೆಯ ಬೀಜದಿಂದ ಅಡಿಕೆ ಸಸಿ ಮಾಡಿದರೆ ಅಂತಹ ಸಸಿ ತೋಟದ ಫಸಲು ಮೊದಲ ಕೊಯ್ಲು ಡಿಸೆಂಬರ್ ಜನವರಿ ತಿಂಗಳಲ್ಲಿ ಮಾಡಬಹುದು. ಹೀಗೆ ತಡವಾಗಿ ಫಸಲು ಕೊಯ್ಲು ಮಾಡುವ ಸಸಿ ತೋಟಗಳ ಅಡಿಕೆ ಕೊನೆಗಳು ಬಲಿಯಲು‌ ಶುರು ವಾಗುವುದೇ ಆಗಷ್ಟ್ ತಿಂಗಳ ಮಧ್ಯದಿಂದ
ಸಾಮಾನ್ಯವಾಗಿ ಸಸಿ ತೋಟಗಳಲ್ಲಿ  ಅಡಿಕೆ ಮರದ ಮರದ ನಡುವೆ ವೈಜ್ಞಾನಿಕ ಲೆಕ್ಕಾಚಾರದ ಅಂತರ ಚೆನ್ನಾಗಿರುತ್ತದೆ. ಉತ್ತಮ ವಾಗಿ ಗಾಳಿ ಬೆಳಕಾಡುತ್ತದೆ , ಆಳದ ಬಸಿಗಾಲುವೆ ಇರುತ್ತದೆ ಜೊತೆಯಲ್ಲಿ ಅಡಿಕೆ ಕಾಯಿ ಬಲಿಯುವ ಸಮಯ ತಡ. ಅಡಿಕೆ ಮುಂಗೋಟು ಅಥವಾ ಬೇಗ ಕೊನೆ ತೆಗೆಯುವ ತೋಟಗಳಲ್ಲಿ ಜುಲೈ ಆಗಷ್ಟ್ ಮತ್ತು ಸೆಪ್ಟೆಂಬರ್ ತಿಂಗಳ ಕಾಲ ಅಡಿಕೆ ಕೊಳೆಗಾಲ.
ಬೋರ್ಡೋ ದ್ರಾವಣ ಮೊದಲ ಬಾರಿಗೆ ಹೊಳುವಿದ್ದಾಗ ಔಷಧ ಸಿಂಪಡಣೆ ಮಾಡಿದರೆ ಸುಮಾರು ನಲವತ್ತು ದಿವಸಗಳ ಕಾಲ ಬಾಳಿಕೆ ಬರುತ್ತದೆ.  ಎರಡನೇ ,ಮೂರು ಮತ್ತು ನಾಲ್ಕು ಬಾರಿ ಔಷಧ ಸಿಂಪಡಣೆ ಮಾಡುವಾಗ ಅಡಿಕೆ ಕಾಯಿ ಅತ್ಯಂತ ವೇಗವಾಗಿ ಬೆಳೆಯುವು ದರಿಂದ ಔಷಧದ ಬಾಳಿಕೆ ತಾಳಿಕೆ ಕಮ್ಮಿ.
ಬಯೋ ಫೈಟು .. ಫಾಟ್.. ಬಯೋ ಸೀರೀಸ್ ಕೊಳೆ  ಔಷಧಗಳು..
ಮಲೆನಾಡಿನಲ್ಲಿ ಮೇ ಹದಿನೈದರ ನಂತರ ಕೆಲವರು ಬಯೋ ಔಷಧ ವನ್ನು ಸಿಂಪಡಣೆ ಮಾಡುತ್ತಾರೆ. ಇದು ಅಡಿಕೆ ಕೊಳೆಯಿಂದ ರಕ್ಷಣೆ ಮಾಡುತ್ತದೆ ಎಂದು ಕೆಲವು ಅಡಿಕೆ ಬೆಳೆಗಾರರು ನಂಬುತ್ತಾರೆ.
ಆದರೆ ವಾಸ್ತವ ವೇನೆಂದರೆ ಅಡಿಕೆ ಗೆ ಔಷಧ ಬೇಕಾಗುವುದೇ ಜುಲೈ ಮೊದಲ ವಾರದಲ್ಲಿ  ಮೇ ಇಪ್ಪತ್ತು ಜೂನ್ ಒಂದು  ಹತ್ತು ದಿನ +ಜೂನ್ ಮೂವತ್ತೊಂದು = ಒಟ್ಟು ನಲವತ್ತು ದಿನ . ಈ ಸಮಯದಲ್ಲಿ ಮಳೆಯ ಕಾರಣಕ್ಕೆ ” ಬಯೋ ಔಷಧ”  ಸಿಂಪಡಣೆ ಮಾಡಲಾಗೋಲ್ಲ….!! ಮತ್ತೆ ಬಯೋ ಔಷಧ ಸಿಂಪಡಣೆ ಮಾಡಿ ಏನು ಪ್ರಯೋಜನ….!?  ಬಯೋ ಔಷಧ ತಯಾರಿಕಾ ಕಂಪನಿಗಳನ್ನು ಕೋಟ್ಯಾದೀಶ ರನ್ನಾಗಿ ಮಾಡುವುದಾ…?
ಈ ಬಯೋ ಔಷಧ ವನ್ನು ಇವತ್ತಿನ ವರೆಗೂ ಸರ್ಕಾರದ ಕೃಷಿ ಸಂಶೋಧನಾ ಕೇಂದ್ರಗಳು, ಅಡಿಕೆ ಸಂಶೋಧನಾ ಕೇಂದ್ರ ಗಳೂ ಪುರಸ್ಕರಿಸಿಲ್ಲ ಮತ್ತು ಖಂಡಿಸಿಲ್ಲ…!!!
ಅತಿ ಮಳೆ ಬೀಳುವ ಆಗುಂಬೆ – ಯಡೂರು  – ನಗರ ಭಾಗದ ರೈತರಿಗೆ ಈ ಬಯೋ ಔಷಧ ವರದಾನವಾಗಬೇಕಿತ್ತು. ಒಂದೊಮ್ಮೆ ಈ ಬಯೋ ಔಷಧ ವನ್ನು ಈ ಭಾಗದ ಅಡಿಕೆ ಬೆಳೆಗಾರರು ಸಿಂಪಡಣೆ ಮಾಡಿ ಪೂರ್ಣ ಅಡಿಕೆ ಫಸಲು ಕಳೆದುಕೊಂಡಿದ್ದರು ಈ ಔಷಧ ದಂಡ. ಕೊಳೆ ರೋಗಕ್ಕೆ ಕೋಲ್ಮನ್ ಸಂಯೋಜಿತ ಬೋರ್ಡೊ ದ್ರಾವಣವೇ ಅತ್ಯುತ್ತಮ.
ಅಡಿಕೆ ಗೆ ಕೊಳೆ ಬರಲು ಅತಿಮುಖ್ಯ ಕಾರಣ ಆ ತೋಟದ ಭೂ ವಿನ್ಯಾಸ ಮತ್ತು ಮುಂಬೆಳಸಿನ ಅಡಿಕೆ ತೋಟಗಳು ಕಾರಣ.  ಅಡಿಕೆ ತೋಟ ಕಂದಕದಲ್ಲಿದ್ದು ಅತಿ ಮಳೆಗೆ ಬೇಗ ಶೀತಕ್ಕೊಳಗಾದರೆ. ಅಡಿಕೆ ತೋಟದ ಬಸಿಗಾಲುವೆ ಕಟ್ಟಿದರೆ. ಅಡಿಕೆಗೆ ಔಷಧ ವನ್ನು ಸರಿಯಾಗಿ ನಾಲ್ಕೂ ದಿಕ್ಕಿನಲ್ಲೂ ಸಿಂಪಡಣೆ ಮಾಡಿ ಔಷಧ ದಲ್ಲಿ ಸಂಪೂರ್ಣ ಅಡಿಕೆ ಕೊನೆ ಒದ್ದೆ ಮಾಡದಿದ್ದಲ್ಲಿ  ಅಡಿಕೆ ಕೊಳೆ ಮುಂದುವರಿಯುತ್ತದೆ.
ಅಡಿಕೆ ಕೊಳೆ ವಿಚಾರದಲ್ಲಿ ಎಂಥಹ ಔಷಧ ವಾದರೂ ನಿಸರ್ಗ ರೈತರಿಗೆ ಸಹಕಾರ ನೀಡದಿದ್ದಲ್ಲಿ ಅಡಿಕೆ ಉಳಿಸಿಕೊಳ್ಳಲು ಕಷ್ಟ.ಇಳಿಜಾರಿನ ಅಡಿಕೆ ತೋಟದಲ್ಲಿ ಅಡಿಕೆ ಕೊಳೆ ನಿಯಂತ್ರಣ ಸುಲಭ….
ಹಾಗೆಯೇ ಇಳಿಜಾರಿನ ಅಡಿಕೆ ತೋಟದ ಬುಡದಲ್ಲಿ ಹೇಗೆ ಜವಗು ನಿಲ್ಲುವುದಿಲ್ಲವೋ ಹಾಗೆಯೇ ಅಡಿಕೆ ಮರದ ಬುಡದಲ್ಲಿ ಪೋಷಕಾಂಶಗಳೂ ನಿಲ್ಲುವುದಿಲ್ಲ‌..!!
ಕಳೆದ ಬಾರಿ ಅಡಿಕೆ ತೋಟಗಳಲ್ಲಿ ಎಲೆಚುಕ್ಕಿ ರೋಗ ಕಾಣಿಸಿಕೊಳ್ಳಲು ಅತಿ ಮುಖ್ಯ ಕಾರಣ ಅಡಿಕೆ ಮರದ ಬುಡದಲ್ಲಿ ಸಾರ ವಿಲ್ಲದೇ ಇದ್ದದ್ದು…!! ಈಗಲೂ ಈ ಇಳಿಜಾರಿನ ತೋಟದಲ್ಲಿ ಪಸಲೂ ಕಡಿಮೆ ಮತ್ತು ಎಂಥಹ ಮಳೆಗಾಲದಲ್ಲೂ ಕೊಳೆಯೂ ಕಡಿಮೆ. ಇಂತಹ ಇಳಿಜಾರಿನ ತೋಟಗಳಿಗೆ ನಾರುಯುಕ್ತ ಬಹುಕಾಲ ಪೋಷಕಾಂಶಗಳನ್ನ ಒದಗಿಸುವ ಸಾವಯವ ಗೊಬ್ಬರ (ಯಾವುದೇ ಕಂಪನಿಯ ರಾಸಾಯನಿಕ ಗೊಬ್ಬರ ಹಾಕಿದರೂ ಈ ತಿಂಗಳಲ್ಲಿ ಮೂವತ್ತು ಇಂಚು ಮಳೆಗೆ ತೊಳೆದು ಹೊಳೆ ಸೇರುತ್ತದೆ) ಹಾಕಿದರೆ ಉತ್ತಮ ಫಸಲಿನ ಜೊತೆಗೆ ಕೊಳೆಯೂ ಕಡಿಮೆ.
ಕೊಳೆಗೆ ಬೇಸಿಗೆಯಲ್ಲಿ ಅಡಿಕೆ ತೋಟಗಳಿಗೆ ಮಿತಿಯಿಲ್ಲದ ನೀರಾವರಿ ಬಹಳ ಮುಖ್ಯ ಪಾತ್ರವಹಿಸುತ್ತದೆ. ಬೇಸಿಗೆಯಲ್ಲಿ ಯಥೇಚ್ಛವಾದ ನೀರಿದೆ ಯಂದು ಯಥೇಚ್ಛವಾಗಿ 24×7 ನಿರಂತರವಾಗಿ ನೀರು ಕೊಡುವುದು ಮತ್ತು ಈ ಕಾರಣದಿಂದ ಅಡಿಕೆ  ತೋಟ ಬೇಸಿಗೆ ಮಳೆಗಾಲ ಸದಾ ಶೀತವಾಗಿರುವ ಕಾರಣಕ್ಕೆ ಮಳೆಗಾಲದಲ್ಲಿ ಸಾದಾರಣ ಮಳೆಗೇ ಕೊಳೆ ಬಂದು ಬಿಡುತ್ತದೆ.
ಈ ಬಾರಿ ಈ ದಿವಸಗಳಲ್ಲಿ ಅಡಿಕೆ ತೋಟದ ಔಷಧ ಸಿಂಪಡಣೆ ಮಾಡು ವವರು ಅಡಿಕೆ ತೋಟದ ಔಷಧ ಸಿಂಪಡಣೆ ಮುಗಿದ ತಕ್ಷಣ ಬಸಿಗಾಲುವೆ ಯಾನೆ ತೋಟದ ಕಪ್ಪು ಗಳನ್ನು ಇನ್ನೊಮ್ಮೆ ಕೀಸಿ ಅಥವಾ clean ಮಾಡಿ. ಎಲ್ಲರ ತೋಟದಲ್ಲೂ ಮೊನ್ನಿನ ಮಳೆಗೆ ಆರಾರು ಇಂಚು ಮಣ್ಣಿನ ಗೋಡ ಅಥವಾ ಕೆನೆ ಮಣ್ಣು ಕಪ್ಪಿಗೆ  ಬಂದು ಕೂತಿದೆ. ಈ ಮಣ್ಣನ್ನು ಕಪ್ಪಿನಿಂದ ಹೆರದು ತೆಗದರೆ ಅಡಿಕೆ ಮರದ ಶೀತಾಂಶ ಕಡಿಮೆ ಯಾಗಿ ಬರುವ ಮಳೆಗೆ‌ ಮತ್ತೆ ಕೊಳೆ ರೋಗ ಹೆಚ್ಚಾಗದಂತೆ ಕಾಪಾಡುತ್ತದೆ.
ಕೊಳೆ ಬಂದು ಉದುರಿದ ಕಾಯಿ ಹೆಕ್ಕಿಸುವುದೊಳಿತು, ಮುಂಗೋಟಿನ ಮರ ಅಡಿಕೆ ಕೊಳೆಗೆ ಮೊದಲ ಮಾರಿ. ಎರಡನೇ ಮಾರಿ ಎತ್ತರದ ಮರದ ಸರಿಯಾಗಿ ಔಷಧ ಸಿಂಪಡಣೆ ತಾಗದ ಅಡಿಕೆ ಗೊನೆಗಳು..‌‌ ಈ ಬಗ್ಗೆ ಅಡಿಕೆ ಬೆಳೆಗಾರರು ಗಮನ ಹರಿಸಿ. ಈ ವಾರದಲ್ಲಿ ಬೋರ್ಡೋ ದ್ರಾವಣವನ್ನು ಸಿಂಪಡಣೆ ಮಾಡಿದ ಕೂಡಲೇ ಮತ್ತಷ್ಟು ಅಡಿಕೆ ಉದುರುತ್ತದೆ. ಅದು ಈಗಾಗಲೇ ಕೊಳೆ ಬಂದ ಅಡಿಕೆ. ಆ ಬಗ್ಗೆ ಚಿಂತೆ ಬೇಡ.
ಅಡಿಕೆ ಫಸಲು ಭಾಗಶಃ ಉದುರಿದ್ದರೂ ಅಡಿಕೆ ಮರದ ತುಂಡೆಗಾದರೂ ಬೋರ್ಡೋ ದ್ರಾವಣವನ್ನು ಸಿಂಪಡಣೆ ಮಾಡಲೇ ಬೇಕು. ಅಡಿಕೆ ಕೊಳೆ ಬರಿ ಅಡಿಕೆ ಫಸಲನ್ನು ಮಾತ್ರ ವಲ್ಲದೇ ಅಡಿಕೆ ಮರವನ್ನು ಅಪೋಷಣ ತೆಗೆದುಕೊಳ್ಳುವ ಸಾದ್ಯತೆ ಇರುತ್ತದೆ. ಬಹಳಷ್ಟು ಕಡೆಯಲ್ಲಿ ಈ ವರ್ಷ ಅಡಿಕೆ ಕೊಳೆ ರೋಗದ ತೀವ್ರತೆಗಾಗಿ ಅಡಿಕೆ ಮರಗಳು ಸತ್ತು ಹೋಗುತ್ತದೆ.  ಅಡಿಕೆ ಬೆಳೆಗಾರರು ಈ ವರ್ಷ ದ ಫಸಲಿನ ದೃಷ್ಟಿಯಿಂದ ಮಾತ್ರ ಬೋರ್ಡೋ ದ್ರಾವಣವನ್ನು ಸಿಂಪಡಣೆ ಮಾಡದೇ ಭವಿಷ್ಯದ ಅಡಿಕೆ ಮರದ ಉಳಿವಿಗಾಗಿ ಕಡ್ಡಾಯವಾಗಿ ಸಿಂಪಡಣೆ ಮಾಡಿಸಿ. ಈ ಕೊಳೆ ರೋಗದಿಂದ ತೀವ್ರ ಹಾನಿಯಾದ ಅಡಿಕೆ ಮರಗಳು ಸಾಮಾನ್ಯವಾಗಿ ಬೇಸಿಗೆ ಶುರುವಾದ ಕೂಡಲೇ ಸಾಯತೊಡಗುತ್ತದೆ.
ಅಡಿಕೆ ಬೆಳೆಗಾರರೇ ಇಲ್ಲಿ ಕೇಳಿ:
ಈ ಬೇಸಿಗೆಯಲ್ಲಿ ಅಡಿಕೆ ಗೊನೆ ತೆಗೆಯು ವಾಗ ಅಡಿಕೆ ಕೊಳೆ ಬಂದು ಸತ್ತು ಹೋಗಿ ಒಣಗಿದ ಅಡಿಕೆ ಕೊನಮಟ್ಟೆ (ಕೊನೆ) ಯನ್ನು ಮರದಿಂದ ತೆಗೆಸಿ ಅದನ್ನು ಒಟ್ಟು ಮಾಡಿ ಸುಟ್ಟು ಹಾಕಿ. ಈ ಸತ್ತ ಕೊನೆ ಅಡಿಕೆ ಮರದಲ್ಲಿ ಉಳಿದರೆ ಈ ಕೊನೆಯಲ್ಲೇ ಕೊಳೆ ರೋಗದ ಫಂಗಸ್ ಗಳು ಉಳಿದಿರುತ್ತದೆ. ಆದ್ದರಿಂದ ಅಡಿಕೆ ಬೆಳೆಗಾರರು ಅಡಿಕೆ ಕೊನೆ ತೆಗೆಯುವಾಗ ಮರೆಯದೇ ಈ ಸತ್ತ ಕೊನೆಯನ್ನ ಮರದಿಂದ ತೆಗದು ಹಾಕಿ….
ಔಷಧ ತಯಾರಿ…
ನಮ್ಮಲ್ಲಿ ಬಹಳ ಜನ ರೈತರು “ಭಾರಿ” ಕೊಳೆ ಬಂದಿದೆ ಎಂದು ನಾಲ್ಕು ಕೆಜಿ ತುತ್ತ ನಾಲ್ಕು ಕೆಜಿ ಸುಣ್ಣ ಒಂದು ಲೀಟರ್ ರಾಳ ಹಾಕಿ ಔಷಧ ಸಿಂಪಡಣೆ ಮಾಡ್ತಾರೆ. ಹೆಚ್ಚಿನ ಪ್ರಮಾಣದಲ್ಲಿ ಔಷಧ ಸಂಯೋಜನೆ ಮಾಡಿದರೆ ರೋಗ ಸುಟ್ಟು ನಾಶವಾಗುತ್ತದೆ ಎಂಬ ತಪ್ಪು ತಿಳಿದಿದ್ದಾರೆ.  ಆದರೆ ಈ ಪ್ರಮಾಣ ತಪ್ಪು.  ಸಾಮಾನ್ಯವಾಗಿ ಇನ್ನೂರು ಲೀಟರ್ ಗೆ  ಎರಡು  ಕೆಜಿ‌ ತುತ್ತ ಎರಡು ಕೆಜಿ ಸುಣ್ಣ ಮತ್ತು ಅರ್ಧ ಲೀಟರ್ ರಾಳ ದ ಮಿಶ್ರಣ ಸರಿಯಾದದ್ದು
ಶುದ್ದವಾದ ನೀರಿನಲ್ಲಿ ಮೊದಲು ತುತ್ತವನ್ನ ನಿಗದಿಪಡಿಸಿದ ಪ್ರಮಾಣದಲ್ಲಿ ತೂಕ ಮಾಡಿ ಡ್ರಂ ನ ತುದಿಯಲ್ಲಿ ಆ ತುತ್ತ ವನ್ನು ಬಟ್ಟೆ ಯಲ್ಲಿ ಗಂಟು ಕಟ್ಟಿ ಕೋಲಿಗೆ ತೂಗು ಹಾಕಿ ತುತ್ತ ಕರಗಿಸಬೇಕು. ಇವತ್ತು ವೇಗದ ಯುಗ ಸಾವಿರ ಸಾವಿರ ಲೀಟರ್ ಔಷಧ ಸಿಂಪಡಣೆ ಮಾಡುವ ಕಾಲ..ಬಹಳಷ್ಟು ಔಷಧ ಸಿಂಪಡಣೆಗಾರರು ತುತ್ತವನ್ನ ನೇರವಾಗಿ ಡ್ರಂ ಗೆ ಸುರಿದು ಕೋಲು ಹಾಕಿ ಗುಟಾರಾಯಿಸಿ (ಅಲ್ಲಾಡಿಸಿ) ನೀರು ನೀಲಿ ಬಣ್ಣಕ್ಕೆ ತಿರುಗಿದ ನಂತರ ಔಷಧ ಸಿದ್ದವಾಯಿತು ಅಂತ ರಾಳ ಸುಣ್ಣ ಬೆರೆಸಿ ಬಿಡ್ತಾರೆ.
ಕೊನೆಗೆ ನೋಡಿದರೆ ಡ್ರಂ ನ ಬುಡದಲ್ಲಿ ತುತ್ತ ದ ಹರಳು ಹಾಗೆಯೇ ಉಳಿದಿರುತ್ತದೆ. ಹೀಗಾಗಬಾರದು.
ತುತ್ತ ವನ್ನು ಕೊನೆಯ ಕಾಳು ಕರಗುವ ತನಕವೂ ಕರಗಿಸಬೇಕು. ಹಾಗೆಯೇ ಸುಣ್ಣ ಡಬ್ಬಕ್ಕೆ ಹಾಕಿದಾಗ ಬೇಯಲೇ ಬೇಕು. ಬಿಸಿಯಾಗದ ಸುಣ್ಣ ವನ್ನು ಔಷಧ ತಯಾರಿಕೆಗೆ ದಯವಿಟ್ಟು ಬಳಸಬೇಡಿ. ರಾಳವನ್ನು ಚಿಕ್ಕ ಬಕೇಟ್ ಗೆ ಹಾಕಿ ನೀರಿ ನೊಂದಿಗೆ ಹಾಕಿ ತೆಳು ಮಾಡಿ ಬೆರೆಸಿ ನಂತರ ಡ್ರಂ  ಗೆ ಹಾಕಿ ಔಷಧ ಸಂಯೋಜನೆ ಮಾಡಿ‌.
ಗುಣಮಟ್ಟದ ತುತ್ತ ರಾಳ ಸುಣ್ಣ ವನ್ನು ನಿಗದಿತ ಪ್ರಮಾಣದಲ್ಲಿ ಔಷಧ ತಯಾರಿಸಿ ಸಂಯೋಜನೆ ಮಾಡಿದರೆ ಇದರ ಗುಣಮಟ್ಟ ಅಳೆಯಲು ಯಾವ ಲಿಟ್ಮಸ್ ಪೇಪರ್ರೂ ಬೇಡ. ಕೆಲವರು ಕಡುಗತ್ತಿ ಯನ್ನು ಬೋರ್ಡೋ ದಲ್ಲಿ ನೆನೆಸಿ ಆ ಕತ್ತಿ ತಾಮ್ರದ ಬಣ್ಣಕ್ಕೆ ತಿರುಗಿದರೆ ಔಷಧ ಸರಿ ಯಿಲ್ಲ ಅಂತಾರೆ. ಆದರೆ ಇದೆಲ್ಲಾ ಗೊಂದಲ ಮಾಡಿಕೊಳ್ಳುವ ಬದಲಿಗೆ ಸರಿಯಾದ ರೀತಿಯಲ್ಲಿ ಬೋರ್ಡೋ ದ್ರಾವಣವನ್ನು ಸಿದ್ದಪಡಿಸಿ ನಿಶ್ಚಿಂತೆಯಿಂದ ಬೋರ್ಡೊ ಸಿಂಪಡಣೆ ಮಾಡಿ. ಮತ್ತು ಅದಿಕೃತ ಕಂಪನಿಗಳ ನಂಬಿಕಾರ್ಹ ತುತ್ತ ರಾಳ ಸುಣ್ಣವನ್ನು ಬೋರ್ಡೋ ದ್ರಾವಣ ತಯಾರಿಕೆಯಲ್ಲಿ ಬಳಸಿ
ಚೆನ್ನಾಗಿ ಗಾಳಿ ಆಡುವ , ಎಷ್ಟೇ ಮಳೆ ಬಂದರೂ ನೀರು ಬಸಿದು ಹೋಗುವ ಮಣ್ಣಿನ ಅಡಿಕೆ ತೋಟಗಳಿಗೆ ಒಂದು ಸರ್ತಿಯೂ ಔಷಧ ಸಿಂಪಡಣೆ ಮಾಡುವುದು ಬೇಡವಾಗುತ್ತದೆ. ನಾನು ಇಂತಹ ಹಲವಾರು ಅಡಿಕೆ ತೋಟವನ್ನ ನೋಡಿದ್ದೇನೆ. ಆದರೆ ಆ ರೈತರು ಎಲ್ಲಾ ರೈತರಂತೆ ಮಳೆಗಾಲದಲ್ಲಿ ” ವಾಡಿಕೆಗಾಗಿ ” ಬೋರ್ಡೋ ಸಿಂಪಡಣೆ ಮಾಡುತ್ತಾರೆ. ಅಂತಹ ಅಡಿಕೆ ತೋಟಗಳಿಗೆ ಬೋರ್ಡೋ ಎಪ್ಪತ್ತು ದಿನಗಳಲ್ಲ ಪೂರ್ಣ ಮಳೆಗಾಲ ಬಾಳಿಕೆ ಬರಬಹುದು. ಉಳಿ ದ ಅಡಿಕೆ ಬೆಳೆಗಾರರ ಅಡಿಕೆ ತೋಟಕ್ಕೆ ಹಾಗೆ ಬೋರ್ಡೋ ಬಾಳಿಕೆ ಬರೋಲ್ಲ..!! ಇದಕ್ಕೆ ಔಷಧ ಕಾರಣವಲ್ಲ. ಮಣ್ಣು ಬೌಗೋಳಿಕ ವಾತಾವರಣ ಕಾರಣ. ಅಡಿಕೆ ತೋಟಗಳು ಪ್ರತಿ ನಲವತ್ತು ಕಿಲೋಮೀಟರ್ ಗೂ ಒಂದೊಂದು ಬಗೆ ವಾತಾವರಣ ಲಕ್ಷಣ ಗಳಿರುತ್ತದೆ. ಹೊಸಬರು ಆ ಭಾಗದ ಅನುಭವಿ ಅಡಿಕೆ ಬೆಳೆಗಾರರ ಮಾರ್ಗದರ್ಶನ ಪಡೆಯುವುದೊಳಿತು. ಇದನ್ನು ಹೊರತಾಗಿ ಶಿರಸಿ ಸಿದ್ಧಾಪುರ ದವರ ಔಷಧ ಬೇಸಾಯ ಕ್ರಮವನ್ನು ಶೃಂಗೇರಿ ಕೊಪ್ಪದವರು ಅನುಸರಿಸಲುಬರದು.
ಬೋರ್ಡೋ ನಿಗದಿತ ಪ್ರಮಾಣದಲ್ಲಿ ತಯಾರಿಕೆ, ಮಳೆಯಿಲ್ಲದ ಕಾಲದಲ್ಲಿ ಔಷಧ ಸಿಂಪಡಣೆ ಜೊತೆಯಲ್ಲಿ ಅಡಿಕೆ ಕೊನೆಯ ನಾಲ್ಕು ದಿಕ್ಕಿಗೂ ಚೆನ್ನಾಗಿ ನೆನೆಸುವಂತೆ ಔಷಧ ಸಿಂಪಡಣೆ ಮಾಡಬೇಕು. ನಾನು ಈ ಮೇಲೆ ಹೇಳಿದ ಬೋರ್ಡೋ ಸಿಂಪಡಣೆಯ ವಿಚಾರ ಬಹುತೇಕ ಎಲ್ಲಾ ರೈತರಿಗೆ ತಿಳಿದಿರುತ್ತದೆ. ಒಂದೇ ಕಡೆಯಲ್ಲಿ ಎಲ್ಲಾ ವಿಚಾರವನ್ನು ಸೇರಿಸಿ  ಬರೆದಿದ್ದೇನೆ ಅಷ್ಟೇ.
spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group