spot_img
Wednesday, October 30, 2024
spot_imgspot_img
spot_img
spot_img

ನೋವು, ಊತ ಮತ್ತು ಗಾಯಕ್ಕೆ ಅಡಿಕೆ ಒಳ್ಳೆಯ ಮದ್ದು!

ಡಾ. ಸರ್ಪಂಗಳ ಕೇಶವ ಭಟ್ 

ಗಾಯವು ನಮ್ಮ ಹಾಗೂ ಇತರ ಪ್ರಾಣಿಗಳ ಚರ್ಮದ ಮೇಲೆ ಸಂಭವಿಸುವ ಒಂದು ಸಾಮಾನ್ಯ ಸಮಸ್ಯೆ. ಅದನ್ನು ಸಮಯಕ್ಕೆ ಸರಿಯಾಗಿ ಗುಣಪಡಿಸದಿದ್ದರೆ ಹಲವಾರು ಇತರ ತೊಂದರೆಗಳಿಗೆ ಕಾರಣವಾಗುತ್ತವೆ. ಆಧುನಿಕ ವೈದ್ಯಕೀಯ ಪದ್ಧತಿಯಲ್ಲಿ ಆಂಟಿಬಯೋಟಿಕ್ ಚಿಕಿತ್ಸೆಗಳನ್ನು ಇಂತಹ ಗಾಯಗಳಿಗೆ ಸಾಮಾನ್ಯವಾಗಿ ಕೊಡಲಾಗುತ್ತವೆ.  ಆದರೆ, ಆಂಟಿಬಯೋಟಿಕ್ ಗಳ ಬಳಕೆಯಿಂದ ಉಂಟಾಗುವ ಹಲವಾರು ಅಡ್ಡ ಪರಿಣಾಮಗಳು ಮತ್ತು ಅಂತಹ ಆಂಟಿಬಯೋಟಿಕ್ ಗಳ ವಿರುದ್ಧ ಕೆಲವು ಬ್ಯಾಕ್ಟೀರಿಯಾ ತಳಿಗಳ ಪ್ರತಿರೋಧ ಬೆಳವಣಿಗೆಗಳಿಂದಾಗಿ, ಮಾನವಕುಲಕ್ಕೆ ಅಗ್ಗದ ಮತ್ತು ತುಲನಾತ್ಮಕವಾಗಿ ಸುರಕ್ಷಿತವಾಗಿರುವ ಸಸ್ಯ ಮೂಲದ ಕೆಲವು ಪರ್ಯಾಯ ಮತ್ತು ಪರಿಣಾಮಕಾರಿ ಚಿಕಿತ್ಸಕಗಳನ್ನು ಅನ್ವೇಷಿಸುವ ಅವಶ್ಯಕತೆಯಿದೆ.

ಈಗಾಗಲೇ ಸಸ್ಯ ಮೂಲದ ಕೆಲವು ಪರಿಣಾಮಕಾರಿ ಔಷಧಿಗಳು ಹಲವಾರು ಹಳ್ಳಿಗಳಲ್ಲಿ ಚಾಲ್ತಿಯಲ್ಲಿವೆ. ಅಡಿಕೆ ಮರವು ಕೂಡಾ ಅಂತಹ ಒಂದು ಔಷಧೀಯ ಸಸ್ಯ.  ಎಳೆ ಅಡಿಕೆಯನ್ನು ಸಿಪ್ಪೆಸಹಿತ ಗಾಯಗಳ ಚಿಕಿತ್ಸೆಗಾಗಿ ಹಲವು ವರ್ಷಗಳಿಂದ ಮನೆ ಮದ್ದಾಗಿ ಬಳಸಲಾಗುತ್ತಿದೆ. ಅಡಿಕೆಯ ನೋವು ನಿವಾರಕ ಗುಣ, ಉರಿಯೂತ ಮತ್ತು ಗಾಯಗಳನ್ನು ಗುಣಪಡಿಸುವ ಗುಣಲಕ್ಷಣಗಳು ಈಗ ಹಲವಾರು ವೈಜ್ಞಾನಿಕ ಅಧ್ಯಯನಗಳಿಂದ ದೃಢೀಕರಿಸಲ್ಪಟ್ಟಿವೆ.  ಪ್ರಸ್ತುತ ಲೇಖನವು ನಮ್ಮಲ್ಲಿ ಹಾಗೂ ದಕ್ಷಿಣ ಮತ್ತು ಆಗ್ನೇಯ ಏಷ್ಯಾದ ಹಲವಾರು ಇತರ ದೇಶಗಳಲ್ಲಿ ಹೇರಳವಾಗಿ ಬೆಳೆಯುವ ಈ ಔಷಧೀಯ ಸಸ್ಯದ ಅಂತಹ ವೈಜ್ಞಾನಿಕ ಸಾಹಿತ್ಯಗಳನ್ನು ಸಂಗ್ರಹಿಸಿ ನಿಮ್ಮ ಮುಂದೆ ತಂದು ಅಡಿಕೆಯ ಮೌಲ್ಯ ವರ್ಧನೆಗೆ ಹೀಗೆಯೂ ಅವಕಾಶಗಳಿವೆ ಎಂಬುದನ್ನು ತಿಳಿಯಪಡಿಸುತ್ತದೆ.

.ನೋವು ನಿವಾರಕವಾಗಿ

ಅಡಿಕೆಯಲ್ಲಿನ ನೋವು ನಿವಾರಕ ಗುಣ ಈಗ ವೈಜ್ಞಾನಿಕವಾಗಿ ಸಾಬೀತಾಗಿದೆ. ಅದರಲ್ಲೂ, ನೋವು ಕಡಿಮೆ ಮಾಡುವಲ್ಲಿ ಅಡಿಕೆಯ ಸಾರ ಮತ್ತು ವಾಣಿಜ್ಯ ನೋವು ನಿವಾರಕವಾದ ‘ಆಸ್ಪಿರಿನ್‌’, ಇವೆರಡೂ,  ಸಾಮಾನ್ಯವಾಗಿ ಒಂದೇ ರೀತಿಯಾಗಿದೆ ಎಂದು ಕರಾಚಿ ವಿಶ್ವವಿದ್ಯಾಲಯದ ಡಾ. ಖಾನ್ ಮತ್ತು ಅವರ ಬಳಗ 2011 ರಲ್ಲಿ   ಚಿಕ್ಕಿಲಿಗಳ ಮೇಲೆ ಮತ್ತು ಇಲಿಗಳ ಮೇಲೆ ಪ್ರಯೋಗ ಮಾಡಿ ಹೇಳಿದ್ದರು.  ಮೊದಲ 15 ರಿಂದ 45 ನಿಮಿಷಗಳ ಚಿಕಿತ್ಸೆಯ ಅವಧಿಯಲ್ಲಿ ಅಡಿಕೆಯ ಸಾರವನ್ನು ಒಂದು ಕೆ. ಜಿ. ದೇಹದ ತೂಕಕ್ಕೆ 100 ಮಿಲಿ ಗ್ರಾಂ ಪ್ರಕಾರ ಚಿಕ್ಕಿಲಿಗಳಿಗೆ ಸೇವನೆ ಮಾಡಿಸಿದಾಗ ಅವುಗಳಲ್ಲಿನ ‘ಕ್ಯಾರೇಜಿನನ್’ ಚುಚ್ಚುಮದ್ದಿನಿಂದ ಉಂಟಾದ ಗಾಯಗಳ ನೋವು ಶೇಕಡಾ 46.3 ರಷ್ಟು ಕಡಿಮೆಯಾಗಿತ್ತು. ಅದೇ ಡೋಸ್‌ನ ‘ಆಸ್ಪಿರಿನ್‌’ ನಲ್ಲಿ ನೋವು  ನಿವಾರಣೆಯು ಶೇಕಡಾ 52.9 ಆಗಿತ್ತು ಎಂಬುದಾಗಿ  ಅವರು ಗಮನಿಸಿದ್ದರು. ಹೀಗೆಯೇ ಇಲಿಗಳಲ್ಲಿ ಅಸಿಟಿಕ್ ಆಸಿಡ್ ನಿಂದ ಉಂಟಾದ ನೋವು ‘ಆಸ್ಪಿರಿನ್‌’ ಒಂದು ಕೆ. ಜಿ. ದೇಹದ ತೂಕಕ್ಕೆ 100 ಮಿಲಿ ಗ್ರಾಂ ಪ್ರಕಾರ ಕೊಟ್ಟಾಗ ಶೇಕಡಾ 49.3 ರಷ್ಟು ಕಡಿಮೆಯಾಗಿತ್ತು. ಆದರೆ ಅದೇ ಪ್ರಮಾಣದಲ್ಲಿ ಅಡಿಕೆಯ ಸಾರವನ್ನು ಕೊಟ್ಟಾಗ ನೋವು ಶೇಕಡಾ 65.2 ರಷ್ಟು ಕಡಿಮೆಯಾಗಿತ್ತು ಎಂಬುದಾಗಿಯೂ ಅವರು ಹೇಳಿದ್ದಾರೆ.

ಅಡಿಕೆ ಅಲ್ಲದೆ ಅಡಿಕೆ ಮರದ ಹಸಿರು ಕಾಂಡ ಮತ್ತು ಎಲೆ (ಸೋಗೆ) ಗಳು ಕೂಡಾ ನೋವು ನಿವಾರಕ ಗುಣಗಳನ್ನು ಹೊಂದಿವೆ ಎಂದು ಢಾಕಾ ವಿಶ್ವವಿದ್ಯಾಲಯದ ಡಾ. ಬರ್ಮಾನ್ ಮತ್ತು ಅವರ ತಂಡ 2011 ರಲ್ಲಿ ವರದಿ ಮಾಡಿದ್ದಾರೆ.  ಅವರು ಪ್ರಯೋಗಾಲಯದ ಇಲಿಗಳ ಮೇಲೆ ಅಡಿಕೆಯ ಕಾಂಡ ಮತ್ತು ಎಲೆಗಳೆರಡರ ಮೆಥನಾಲ್ ಸಾರದ ನೋವು ನಿವಾರಕ ಗುಣಗಳನ್ನು ಅಧ್ಯಯನ ಮಾಡಿ ಅವನ್ನು ‘ಆಸ್ಪಿರಿನ್‌’ ನ ಅಂತಹ ಗುಣಗಳಿಗೆ ಹೋಲಿಸಿದ್ದಾರೆ. ಅದರಲ್ಲಿ, ಅಡಿಕೆ ಕಾಂಡದ ಸಾರ  ‘ಆಸ್ಪಿರಿನ್‌’ ನಸ್ಟೇ ಪರಿಣಾಮಕಾರಿಯಾಗಿತ್ತು ಆದರೆ ಅಡಿಕೆ ಎಲೆಯ ಸಾರ ‘ಆಸ್ಪಿರಿನ್‌’ ಗಿಂತಲೂ ಹೆಚ್ಚಿನ ಪರಿಣಾಮಕಾರಿಯಾಗಿತ್ತು ಎಂಬುದಾಗಿ ಅವರು ಕಂಡುಕೊಂಡಿದ್ದಾರೆ. 

ಒಂದು  ಕೆ. ಜಿ. ದೇಹದ ತೂಕಕ್ಕೆ 200 ಮತ್ತು 400 ಮಿಲಿ ಗ್ರಾಂ ಪ್ರಮಾಣದಲ್ಲಿ ಆಸ್ಪಿರಿನ್ ಕ್ರಮವಾಗಿ ಶೇಕಡಾ 42.3 ಮತ್ತು 55.8 ರಷ್ಟು ನೋವನ್ನು ಕಡಿಮೆ ಮಾಡಿತ್ತು. ಅದೇ ಪ್ರಮಾಣದಲ್ಲಿ ಅಡಿಕೆಯ ಕಾಂಡದ ಸಾರ ಕೂಡಾ ನೋವನ್ನು ಕ್ರಮವಾಗಿ ಶೇಕಡಾ 40.9 ಮತ್ತು 59.6 ರಷ್ಟು ಕಡಿಮೆ  ಮಾಡಿತ್ತು.  ಆದರೆ, ಅಡಿಕೆ ಎಲೆಯ ಸಾರಕ್ಕೆ ಸಂಬಂಧಿಸಿದಂತೆ ಈ ಅಂಕಿಅಂಶಗಳು ಕ್ರಮವಾಗಿ ಶೇಕಡಾ 86.5 ಮತ್ತು 88.5 ನಷ್ಟು ಅಧಿಕ ಎಂಬುದಾಗಿತ್ತು. ಒಂದು  ಕೆ. ಜಿ. ದೇಹದ ತೂಕಕ್ಕೆ 50 ಮಿಲಿ ಗ್ರಾಂ ಪ್ರಮಾಣದಲ್ಲಿ ಅಡಿಕೆ ಎಲೆಯ ಸಾರವು 400 ಮಿಲಿ ಗ್ರಾಂನ ಆಸ್ಪಿರಿನ್‌ನಸ್ಟೇ ಪರಿಣಾಮಕಾರಿಯಾಗಿದೆ ಎಂದೂ ಅವರಿಗೆ ಕಂಡುಬಂದಿತ್ತು.

ಬಾವು ಶಮನಕ್ಕೆ

ಅಡಿಕೆ ಸಾರವನ್ನು ಬಾವು ಅಥವಾ ಉರಿಯೂತದ ಔಷಧವಾಗಿಯೂ ಬಳಸಬಹುದು. ಕರಾಚಿ ವಿಶ್ವವಿದ್ಯಾಲಯದ ಡಾ. ಖಾನ್ ಮತ್ತು ಅವರ ತಂಡ 2011 ರಲ್ಲಿ ಇಲಿಗಳ ಮೇಲೆ ನಡೆಸಿದ ಪ್ರಯೋಗದಲ್ಲಿ ಇದು ಸಾಬೀತಾಗಿದೆ. ಅಡಿಕೆ ಸಾರವು ‘ಆಸ್ಪಿರಿನ್’ ಗಿಂತ ಹೆಚ್ಚು ಪರಿಣಾಮಕಾರಿಯಾಗಿ  ಉರಿಯೂತವನ್ನು ಕಡಿಮೆ ಮಾಡುತ್ತದೆ  ಎಂಬುದಾಗಿ ಅವರು ಕಂಡುಕೊಂಡರು. ಎರಡು ಗಂಟೆಗಳ ಚಿಕಿತ್ಸೆಯ ನಂತರ ಒಂದು ಕೆ. ಜಿ. ದೇಹದ ತೂಕಕ್ಕೆ 100 ಮಿಲಿ ಗ್ರಾಂ ಪ್ರಮಾಣದಲ್ಲಿ ಅಡಿಕೆ ಸಾರದೊಂದಿಗೆ ಚಿಕಿತ್ಸೆ ನೀಡಿದಾಗ ಉರಿಯೂತದ ಗಾತ್ರ ಶೇಕಡಾ 59.5 ರಷ್ಟು ಕಡಿಮೆ  ಆಗಿತ್ತು,  ಆದರೆ ಅದೇ ಪ್ರಮಾಣದ ‘ಆಸ್ಪರಿನ್’ ನಲ್ಲಿ  ಉರಿಯೂತದ ಗಾತ್ರ ಆ ಸಮಯದಲ್ಲಿ ಕೇವಲ ಶೇಕಡಾ 47.2 ರಷ್ಟು ಕಡಿಮೆ ಆಗಿತ್ತಸ್ಟೇ.

ಅಡಿಕೆ ಮರದ ಎಲೆ (ಸೋಗೆ) ಗಳು ಸಹ ಪ್ರಬಲವಾದ ಉರಿಯೂತ ನಿವಾರಕ ಗುಣಗಳನ್ನು ಹೊಂದಿವೆ.  ದಕ್ಷಿಣ ಕೊರಿಯದ ಸಿಯೋಲ್ ವಿಶ್ವವಿದ್ಯಾಲಯದ ಡಾ. ಲೀ ಮತ್ತು ಅವರ ತಂಡ 2014 ರಲ್ಲಿ ಇಲಿಗಳ ಮೇಲೆ ನಡೆಸಿದ ಪ್ರಯೋಗಗಳಲ್ಲಿ ಇದು ಸಾಬೀತಾಗಿದೆ. ಒಂದು ಕೆ. ಜಿ. ದೇಹದ ತೂಕಕ್ಕೆ 10 ಮಿಲಿ ಗ್ರಾಂ ಪ್ರಮಾಣದಲ್ಲಿ ಎಲೆಯ ಸಾರವನ್ನು ಕೊಟ್ಟ ಇಲಿಗಳ ಪಾದಲ್ಲಿನ ಕ್ಯಾರೇಜಿನನ್ ಚುಚ್ಚುಮದ್ದಿನಿಂದ ಉಂಟಾಗುವ ಉರಿಯೂತದ ಗಾತ್ರ, ಎಲೆಯ ಸಾರವನ್ನು ಕೊಡದ ಇಲಿಗಳ ಉರಿಯೂತಕ್ಕೆ ಹೋಲಿಸಿದಾಗ, ಕೇವಲ 27.3% ಆಗಿತ್ತು.

ಗಾಯಕ್ಕೆ ಮದ್ದು

ಅಡಿಕೆಯಲ್ಲಿ ಗಾಯವನ್ನು ಗುಣ ಮಾಡುವ ಅಂಶ ಇದೆ ಎಂಬುದಾಗಿ  ಸಾಕಷ್ಟು ವೈಜ್ಞಾನಿಕ ದಾಖಲೆಗಳು ಹೇಳುತ್ತವೆ. ಅಡಿಕೆಯಲ್ಲಿನ ಪಾಲಿಫಿನಾಲ್‌ ಅಂಶದಲ್ಲಿ ಗಾಯವನ್ನು  ಗುಣಪಡಿಸುವ  ಅಂಶವಿದೆ ಎಂಬುದಾಗಿ ಸಿ.ಪಿ.ಸಿ.ಆರ್.ಐ. ಕಾಸರಗೋಡಿನ ವಿಜ್ಞಾನಿಯಾಗಿದ್ದ ಡಾ. ಪದ್ಮಜ ಅವರು 1994 ರಲ್ಲಿ ಹೇಳಿದ್ದಾರೆ. ಮತ್ತೊಂದು ಅಧ್ಯಯನದಲ್ಲಿ, ಅಡಿಕೆಯಲ್ಲಿನ ಅರೆಕೋಲಿನ್ ಮತ್ತು ಪಾಲಿಫಿನಾಲ್ ಸಂಯೋಜನೆಯು ಇಲಿಗಳ ಗಾಯದ ಮಾಸುವ ಶಕ್ತಿಯನ್ನು ಹೆಚ್ಚಿಸಿದೆ ಎಂದು ಸಿ.ಪಿ.ಸಿ.ಆರ್.ಐ. ಕಾಸರಗೋಡು ಮತ್ತು  ಕೆ.ಯಂ.ಸಿ. ಮಣಿಪಾಲದ  ಡಾ. ಶಮ್ನ ಅಜ್ಜೀಜ್ ಮತ್ತು ಅವರ ತಂಡ 2007 ರಲ್ಲಿ ಹೇಳಿದ್ದಾರೆ.  ಅಡಿಕೆ ಸಾರವು 4 ನೇ ಮತ್ತು 16ನೇ ದಿವಸಗಳಲ್ಲಿ ಗಾಯದ ಸಂಕೋಚನವನ್ನು ಗಣನೀಯವಾಗಿ ಹೆಚ್ಚಿಸಿವೆ ಎಂಬುದಾಗಿ ಅವರು ಕಂಡುಕೊಂಡಿದ್ದಾರೆ. ಸುಟ್ಟ ಗಾಯಗಳು, ಕಾಲಿನ ಹುಣ್ಣುಗಳು ಮತ್ತು ಚರ್ಮದ ಕಸಿ ಶಸ್ತ್ರಚಿಕಿತ್ಸೆಗಳಲ್ಲಿ ಗಾಯಗಳ ಗುಣಪಡಿಸುವ ಪ್ರಮಾಣವನ್ನು ಹೆಚ್ಚಿಸಲು ಅಡಿಕೆಯ ಆಲ್ಕಲಾಯ್ಡ್ ಮತ್ತು ಪಾಲಿಫಿನಾಲ್‌ಗಳನ್ನು ಬಳಸಬಹುದು ಎಂದೂ ಅವರು ಸಲಹೆಯನ್ನು ನೀಡಿದ್ದಾರೆ.

ಈ ಮೇಲಿನ ಎಲ್ಲಾ ಮಾಹಿತಿಗಳನ್ನು ಆಧರಿಸಿ ಕೆ.ಯಂ.ಸಿ. ಮಣಿಪಾಲದ ಡಾ. ವರ್ಮಾ ಮತ್ತು ಅವರ ತಂಡ 2012 ರಲ್ಲಿ 2% ಅಡಿಕೆಯ ಸಾರವನ್ನು ಉಪಯೋಗಿಸಿ ಗಾಯಕ್ಕೆ ಹಚ್ಚುವ ಒಂದು ಮುಲಾಮನ್ನು ತಯಾರಿಸಿದ್ದಾರೆ. ಈ ಮುಲಾಮು ಪ್ರಮಾಣೀಕೃತ ಗಾಯಕ್ಕೆ ಹಚ್ಚುವ  1% ಸಾಂದ್ರತೆಯ ವಾಣಿಜ್ಯ ಔಷಧವಾದ ‘ಸಿಲ್ವರ್ ಸಲ್ಫಾಡಿಯಾಜಿನ್’ ಗೆ ಸಮಾನವಾಗಿ ಪರಿಣಾಮಕಾರಿಯಾಗಿದೆ ಎಂದು ಅವರು ಕಂಡುಕೊಂಡಿದ್ದಾರೆ.  ಇಲಿಗಳ ಸುಟ್ಟ ಗಾಯಗಳ ಮೇಲೆ ಅಂತಹ ಅಡಿಕೆ ಸಾರದ ಮುಲಾಮನ್ನು ಪ್ರಾಸಂಗಿಕವಾಗಿ ಹಚ್ಚಿದಾಗ  ಹಚ್ಚಿದ 16 ನೇ ದಿನದಲ್ಲಿ ಗಾಯಗಳು ಸಂಪೂರ್ಣ ವಾಸಿಯಾದವು. ಸಿಲ್ವರ್ ಸಲ್ಫಾಡಿಯಾಜಿನ್ ಕೂಡಾ  ಗಾಯ ವಾಸಿಯಾಗಲು ಬಹುತೇಕ ಇದೇ ಅವಧಿಯನ್ನು ತೆಗೆದುಕೊಂಡಿತ್ತು (15.67 ದಿನಗಳು). ಏನೂ ಔಷಧ ಹಚ್ಚದ ಇಲಿಗಳಲ್ಲಿ ಗಾಯ ವಾಸಿಯಾಗಲು 24.33 ದಿನಗಳು ಬೇಕಾದವು.

ಕೆ.ಯಂ.ಸಿ. ಮಣಿಪಾಲದ ಇನ್ನೊಂದು ಅಧ್ಯಯನದಲ್ಲಿ ಡಾ. ಭರತ್ ಮತ್ತು ಅವರ ತಂಡ 2014 ರಲ್ಲಿ ಅಡಿಕೆಯ ಸಾರವನ್ನು ಸೇವಿಸುವ ಮೂಲಕವೂ ಗಾಯವನ್ನು ಗುಣಮಾಡಬಹುದು ಎಂಬುದಾಗಿ ಹೇಳಿದ್ದಾರೆ. ಅವರು ಅಡಿಕೆಯ ಇಥನೋಲಿಕ್ ಸಾರವನ್ನು 100 ಮಿಲಿ ಗ್ರಾಂ ಪ್ರಮಾಣದಲ್ಲಿ ಪ್ರತಿದಿನವೂ ಇಲಿಗಳಿಗೆ ಸೇವನೆ ಮಾಡಿಸಿದಾಗ ಅವುಗಳಲ್ಲಿನ ಚರ್ಮದ ಸುಟ್ಟ ಗಾಯಗಳು 16.33 ದಿವಸಗಳಲ್ಲಿ ಸಂಪೂರ್ಣವಾಗಿ ಗುಣವಾದವು. ಗಾಯಕ್ಕೆ ಹಚ್ಚುವ ಪ್ರಮಾಣೀಕೃತ ವಾಣಿಜ್ಯ ಔಷಧವಾದ ‘ಸಿಲ್ವರ್ ಸಲ್ಫಾಡಿಯಾಜಿನ್’ ನನ್ನು ಗಾಯಕ್ಕೆ ಹಚ್ಚಿದಾಗ ಕೂಡಾ ಬಹುತೇಕ ಇದೇ ರೀತಿಯ ಫಲಿತಾಂಶವನ್ನು ಒದಗಿಸಿದೆ. ಅದನ್ನು ಗಾಯಕ್ಕೆ ಹಚ್ಚಿದಾಗ ಗಾಯವು 15.67 ದಿವಸಗಳಲ್ಲಿ  ಗುಣವಾದವು.  ಆದರೆ, ಏನೂ ಔಷಧ ನೀಡದ ಇಲಿಗಳಲ್ಲಿ ಗಾಯ ಗುಣವಾಗಲು 23.67 ದಿವಸಗಳು ಬೇಕಾಗಿತ್ತು ಎಂಬುದಾಗಿ ಅವರು ಹೇಳಿದ್ದಾರೆ.

 ಅಡಿಕೆ ಎಲೆ (ಸೋಗೆ) ಯ ಸಾರವನ್ನು ಬಳಸಿ ಕೂಡಾ ಗಾಯವನ್ನು ಗುಣಮಾಡುವ ಮುಲಾಮನ್ನ ಪರಿಣಾಮಕಾರಿಯಾಗಿ ತಯಾರಿಸಬಹುದು ಎಂಬುದಾಗಿ ಇಂಡೋನೇಷ್ಯಾದ ಡಾ. ಅಬ್ಬಾಸಿ ಮತ್ತು ಅವರ ತಂಡ 2021ರಲ್ಲಿ ಹೇಳಿದ್ದಾರೆ.  ಅವರು ಶೇಕಡಾ 5.0 ಮತ್ತು 10.0 ರ ಪ್ರಮಾಣದಲ್ಲಿ ಅಡಿಕೆ ಎಲೆಯ ಸಾರವನ್ನು ಉಪಯೋಗಿಸಿ ಮಾಡಿದ ಮುಲಾಮನ್ನು ಇಲಿಗಳ ಸುಟ್ಟ ಗಾಯಗಳಿಗೆ ಹಚ್ಚಿದಾಗ ಶೇಕಡಾ 10.0 ರ ಮುಲಾಮಿನಲ್ಲಿ ಗಾಯವು ಸಂಪೂರ್ಣ ವಾಗಿ 14 ನೇ ದಿನದಲ್ಲಿ ಗುಣವಾಯಿತು. ಆದರೆ, ಶೇಕಡಾ 5.0 ರ ಅಡಿಕೆ ಎಲೆಯ ಸಾರದಿಂದ ತಯಾರಿಸಿದ ಮುಲಾಮು ಮತ್ತು ಗಾಯಕ್ಕೆ ಹಚ್ಚುವ ಪ್ರಮಾಣೀಕೃತ ಔಷಧವಾದ ‘ಸಿಲ್ವರ್ ಸಲ್ಫಾಡಿಯಾಜಿನ್‘ ಬಳಸಿದಾಗ ಅವುಗಳೆರಡೂ ಆ ಸಮಯದಲ್ಲಿ ಶೇಕಡಾ 90 ರಷ್ಟು ಮಾತ್ರ ಪರಿಣಾಮಕಾರಿಯಾಗಿತ್ತು ಎಂದು ಅವರು ತಿಳಿಸಿದ್ದಾರೆ. ಹಾಗಾಗಿ ಶೇಕಡಾ 10.0 ರ ಪ್ರಮಾಣದ ಅಡಿಕೆ ಎಲೆಯ ಸಾರ ಮುಲಾಮನ್ನು  ಮಾಡಲು ಸೂಕ್ತ ಎಂಬುದು ಅವರ ಹೇಳಿಕೆ.

ಅನಿಸಿಕೆ

ಹೀಗೆ ಅಡಿಕೆಯ ಕಾಯಿ, ಎಲೆ (ಸೋಗೆ) ಮತ್ತು ಹಸಿರುಕಾಂಡ ಸೇರಿದಂತೆ ಈ ಸಸ್ಯದ ಬಹುತೇಕ ಎಲ್ಲಾ ಭಾಗಗಳು ನೋವು, ಉರಿಯೂತ ಮತ್ತು ಗಾಯಗಳನ್ನು ಗುಣಪಡಿಸುವ ಗುಣಗಳನ್ನು ಹೊಂದಿವೆ  ಎಂದು ಹಲವಾರು ಅಧ್ಯಯನಗಳು ತೋರಿಸಿ ಕೊಟ್ಟಿವೆ. ನೋವು ಕಡಿಮೆ ಮಾಡುವಲ್ಲಿ ಅಡಿಕೆಯ ಸಾರವು ಆಸ್ಪಿರಿನ್‌ಗಿಂತಲೂ ಉತ್ತಮವಾಗಿದೆ ಎಂದೂ ತಿಳಿದು ಬಂದಿದೆ.  ಹಾಗೆಯೇ, ಅಡಿಕೆ ಎಲೆಯಿಂದ ತಯಾರಿಸಿದ ಮುಲಾಮು ಗಾಯಕ್ಕೆ ಹಚ್ಚಲು ಸಾಮಾನ್ಯವಾಗಿ ಬಳಸುವ ಪ್ರಮಾಣೀಕೃತ ವಾಣಿಜ್ಯ ಔಷಧವಾದ ‘ಸಿಲ್ವರ್ ಸಲ್ಫಾಡಿಯಾಜಿನ್‘ ಗಿಂತಲೂ ಉತ್ತಮವಾಗಿ ಕೆಲಸ ಮಾಡುತ್ತದೆ ಎಂಬುದಾಗಿ ಗೊತ್ತಾಗಿದೆ. ಆದ್ದರಿಂದ, ಅಡಿಕೆ ತೋಟಗಳಲ್ಲಿ ಯಥೇಷ್ಟವಾಗಿ ಸಿಗುವ, ಮತ್ತು ತುಲನಾತ್ಮಕವಾಗಿ ಕಡಿಮೆ ಬೆಲೆಯ, ಕಚ್ಚಾವಸ್ತುಗಳಾದ ಅಡಿಕೆ  ಎಲೆ (ಸೋಗೆ) ಗಳನ್ನು ಬಳಸಿ ಗಾಯಕ್ಕೆ ಹಚ್ಚುವ ಪರಿಣಾಮಕಾರಿಯಾದ ಔಷಧಗಳನ್ನು ತಯಾರಿಸಿದಲ್ಲಿ ಅಡಿಕೆ ಕೃಷಿಕರಿಗೆ ಅದರಿಂದ ತುಂಬಾ ಪ್ರಯೋಜನವಾಗುವುದರಲ್ಲಿ ಸಂದೇಹವಿಲ್ಲ.

 

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group