ಡಾ. ಸರ್ಪಂಗಳ ಕೇಶವ ಭಟ್
ಚರ್ಮದಲ್ಲಿನ ಹುಣ್ಣು, ಬಾವು, ಊತ, ತುರಿಕೆ, ಗುಳ್ಳೆ, ಮೊದಲಾದ ಸಮಸ್ಯೆಗಳಿಗೆ ಮುಖ್ಯ ಕಾರಣ ಸ್ಟಾಫಿಲೋಕೋಕಸ್ ಆರಿಯಸ್ (Staphylococcus aureus) ಎನ್ನುವ ಒಂದು ಬ್ಯಾಕ್ಟೀರಿಯಾ. ಇಂತಹ ತೊಂದರೆಗಳು ಹೆಚ್ಚಾಗಿ ಶುಚಿಯಾಗಿರದ ಮಕ್ಕಳಲ್ಲಿ ಕಂಡುಬರುತ್ತವೆ. ಈ ಸೋಂಕುಗಳನ್ನು ಹೋಗಲಾಡಿಸಲು ಶುಚಿತ್ವಕ್ಕೆ ಮೊದಲನೇ ಆದ್ಯತೆ. ಹಾಗೆಯೇ, ಬ್ಯಾಕ್ಟೀರಿಯಾ ನಿರೋಧಕ ಸಾಬೂನುಗಳ ಬಳಕೆ ಕೂಡ ಸೂಕ್ತ. ನಾವು ಬೆಳೆಸುವ ಅಡಿಕೆಯಲ್ಲಿ ಇಂತಹ ಬ್ಯಾಕ್ಟೀರಿಯಾ ನಿವಾರಕ ಗುಣಗಳು ಬಹಳಷ್ಟಿವೆ ಎಂಬುದಾಗಿ ಈಗಾಗಲೇ ವೈಜ್ಞಾನಿಕವಾಗಿ ಸಾಬೀತಾಗಿದೆ. ಅದರಲ್ಲೂ, ಸ್ಟಾಫಿಲೋಕೋಕಸ್ ಆರಿಯಸ್ ಬ್ಯಾಕ್ಟೀರಿಯಾ ನಿರ್ಮೂಲನೆಯಲ್ಲಿ ಅಡಿಕೆ ಇನ್ನೂ ಒಂದು ಹೆಜ್ಜೆ ಮುಂದೆ ಎಂಬುದಾಗಿ ಹಲವಾರು ವಿಜ್ಞಾನಿಗಳು ಮಾಡಿದ ಸಂಶೋಧನೆಗಳಲ್ಲಿ ಕಂಡುಕೊಂಡಿದ್ದಾರೆ.
ಬ್ಯಾಕ್ಟೀರಿಯಾ ನಿವಾರಣೆಗೆ ಅಡಿಕೆಯಲ್ಲಿನ ಪಾಲಿಫಿನೋಲ್ ಅಂಶ ಕಾರಣ ಬದಲಾಗಿ ಅದರ ಅರೆಕೋಲಿನ್ ಅಂಶ ಅಲ್ಲ ಎಂಬುದಾಗಿ ಡಾ. ಅಮುಧಾನ್ ಅವರು 2012 ರಲ್ಲಿ ಕಂಡುಕೊಂಡಿದ್ದಾರೆ. ಹಾಗೆಯೇ, ಡಾ. ಸಲುತಾನ್ ಮತ್ತು ಬಿಲಕೂರ 2015 ರಲ್ಲಿ ನಡೆಸಿದ ಒಂದು ಸಂಶೋಧನೆಯಲ್ಲಿ ಡಾ. ಅಮುಧಾನ್ ಅವರ ಹೇಳಿಕೆಯನ್ನು ಸಮರ್ಥಿಸಿ ಅಡಿಕೆಯಲ್ಲಿನ ಟ್ಯಾನಿನ್ / ಪಾಲಿಫಿನೋಲ್ ಅಂಶ ಆಂಟಿಬಯೋಟಿಕ್ ‘ಆಂಪಿಸಿಲಿನ್ ‘ (Ampicillin) ನಂತೆಯೇ ಬ್ಯಾಕ್ಟೀರಿಯಾ ನಿವಾರಣೆಯಲ್ಲಿ ಸಹಕರಿಸುವುದು ಎಂಬುದಾಗಿ ಹೇಳಿರುತ್ತಾರೆ.
ಅಡಿಕೆಯ ಸಾಬೂನಿನಲ್ಲಿ ಬ್ಯಾಕ್ಟೀರಿಯಾ ನಿಯಂತ್ರಣ: ಅಡಿಕೆಯಲ್ಲಿ ಬ್ಯಾಕ್ಟೀರಿಯಾಗಳನ್ನು ನಿಯಂತ್ರಿಸುವ ಗುಣಗಳಿರುವಾಗ ಅದರನ್ನು ಉಪಯೋಗಿಸಿ ತಯಾರಿಸಿದ ಸಾಬೂನುಗಳಲ್ಲಿ ಅಂತಹ ಗುಣಗಳು ಇರಲೇ ಬೇಕಲ್ಲವೇ? ಇದರನ್ನು ಸಾಬೀತು ಪಡಿಸಲು ಇಂಡೋನೇಷ್ಯಾದ ಜಾಂಬಿ ವಿಶ್ವವಿದ್ಯಾಲಯದ ಫಾರ್ಮಸಿ ವಿಭಾಗದ ಡಾ. ರಹ್ಮಾನ್ ಮತ್ತು ಪೂರ್ವಕಾಂತಿಯವರು 2020 ರಲ್ಲಿ ಒಂದು ಪ್ರಯೋಗ ಮಾಡಿದ್ದರು. ಅವರು ಅಡಿಕೆ ಸಾಬೂನನ್ನು ತಯಾರಿಸಲು ತೆಂಗಿನ ಎಣ್ಣೆ 60 ಮಿಲಿ ಲೀ, ಆಲಿವ್ ಎಣ್ಣೆ 2.5 ಮಿಲಿ ಲೀ, ಶೇಕಡಾ 5 ರ ಸೋಡಿಯಂ ಹೈಡ್ರಾಕ್ಸೈಡ್ ದ್ರಾವಣ 25 ಮಿಲಿ ಲೀ, ಸ್ಟಿಯರಿಕ್ ಆಸಿಡ್ 2 ಮಿಲಿ ಗ್ರಾಂ ಮತ್ತು ಅಡಿಕೆಯನ್ನು ವಿಧವಿಧವಾಗಿ ಬಳಸಿ 50 ಗ್ರಾಂ ತೂಕದ ಸಾಬೂನನ್ನು ಮಾಡಿದ್ದರು. ಅಡಿಕೆಯನ್ನು ಬಳಸುವಾಗ ಅಡಿಕೆ ಹುಡಿ ಮತ್ತು ಅಡಿಕೆಯ ಸಾರವನ್ನು ಬೇರೆ ಬೇರೆ ಸಾಂದ್ರತೆಗಳಲ್ಲಿ ಬಳಸಿ ಅವುಗಳ ಮರಿಣಾಮಗಳನ್ನು ಕೂಡ ನೋಡಿದ್ದಾರೆ.
ಮೊದಲನೇ ವಿಧದ 50 ಗ್ರಾಂ ತೂಕದ ಸಾಬೂನಿನಲ್ಲಿ ಅಡಿಕೆ ಹುಡಿಯ ಪ್ರಮಾಣ 1.5 ಗ್ರಾಂ ಇತ್ತು. ಎರಡನೆಯದರಲ್ಲಿ ಅಡಿಕೆ ಹುಡಿಯ ಪ್ರಮಾಣ 2.3 ಗ್ರಾಂ ಮತ್ತು ಮೂರನೆಯದರಲ್ಲಿ 3.0 ಗ್ರಾಂ ಇತ್ತು. ನಾಲ್ಕನೆಯ ಸಾಬೂನಿನಲ್ಲಿ ಅಡಿಕೆ ಹುಡಿಯ ಬದಲಾಗಿ 1.5 ಗ್ರಾಂ ನಸ್ಟು ಎಥನಾಲ್ ಉಪಯೋಗಿಸಿ ತೆಗೆದ ಅಡಿಕೆಯ ಸಾರವನ್ನು ಬಳಸಿದ್ದರು.
ಈ ರೀತಿ ತಯಾರು ಮಾಡಿದ ಸಾಬೂನುಗಳ ಬ್ಯಾಕ್ಟೀರಿಯಾ ನಿಯಂತ್ರಣ ಸಾಮಾರ್ಥ್ಯಗಳನ್ನು ತುಲನಾತ್ಮಕವಾಗಿ ಅಧ್ಯಯನ ಮಾಡಿದಾಗ 1.5 ಗ್ರಾಂ ಅಡಿಕೆ ಹುಡಿಯನ್ನು ಸೇರಿಸಿ ತಯಾರಿಸಿದ ಸಾಬೂನಿನಲ್ಲಿ ಬ್ಯಾಕ್ಟೀರಿಯಾ ನಾಶಕ ಗುಣ ಅತಿ ಹೆಚ್ಚು ಎಂಬುದಾಗಿ ಕಂಡು ಬಂದಿತ್ತು. ಸ್ಟಾಫಿಲೋಕೋಕಸ್ ಆರಿಯಸ್ ನ ನಿಯಂತ್ರಣ ವಲಯ 1.5 ಗ್ರಾಂ ಅಡಿಕೆ ಹುಡಿಯನ್ನು ಸೇರಿಸಿ ತಯಾರಿಸಿದ ಸಾಬೂನನ್ನು ಉಪಯೋಗಿಸಿದಾಗ 24.28 ಮಿಲಿ ಮೀ ಆಗಿತ್ತು. ಆದರೆ 2.3 ಮತ್ತು 3.0 ಗ್ರಾಂ ಅಡಿಕೆ ಹುಡಿಗಳನ್ನು ಬಳಸಿ ತಯಾರಿಸಿದ ಸಾಬೂನುಗಳಲ್ಲಿ ಈ ರೀತಿಯ ನಿಯಂತ್ರಣ ವಲಯಗಳು ಕ್ರಮವಾಗಿ 23.96 ಮತ್ತು 23.87 ಮಿಲಿ ಮೀ ಗಳಾಗಿತ್ತು, ಅಲ್ಲದೆ ಅಡಿಕೆ ಹುಡಿಯ ಬದಲು ಅಡಿಕೆ ಸಾರವನ್ನು 1.5 ಗ್ರಾಂ ನಸ್ಟು ಬಳಸಿದಾಗ ಅಂತಹ ಸಾಬೂನಿನಲ್ಲಿ ಸ್ಟಾಫಿಲೋಕೋಕಸ್ ಆರಿಯಸ್ ನ ನಿಯಂತ್ರಣ ವಲಯ 24.08 ಮಿಲಿ ಮೀ ಆಗಿತ್ತು ಎಂಬುದಾಗಿ ಅವರು ಹೇಳಿರುತ್ತಾರೆ. ಇದಲ್ಲದೆ, ಇಂಡೋನೇಷ್ಯಾದ ಮಾರುಕಟ್ಟೆಗಳಲ್ಲಿ ಸಿಗುವ ಎರಡು ಬೇರೆ ಬೇರೆ ಬ್ರಾಂಡೆಡ್ ನಂಜು ನಿರೋಧಕ (Antiseptic) ಸಾಬೂನುಗಳನ್ನು ಡಾ. ರಹ್ಮಾನ್ ಮತ್ತು ಪೂರ್ವಕಾಂತಿ ಅವರು ಪರೀಕ್ಷೆಗೆ ಒಡ್ಡಿದಾಗ ಅವುಗಳಲ್ಲಿ ಯಾವುದೇ ರೀತಿಯ ಬ್ಯಾಕ್ಟೀರಿಯಾ ನಿಯಂತ್ರಣ ಗೋಚರಿಸಲಿಲ್ಲ ಎಂಬುದಾಗಿಯೂ ಅವರು ಹೇಳಿರುವುದು ಒಂದು ಗಮನಾರ್ಹವಾದ ವಿಚಾರ.
ಅಡಿಕೆಯಿಂದ ತಯಾರಿಸಿದ ಘನ ರೂಪದ ಸಾಬೂನು ಅಲ್ಲದೆ ದ್ರವ ರೂಪದ ಸಾಬೂನು ಕೂಡ ಸ್ಟಾಫಿಲೋಕೋಕಸ್ ಆರಿಯಸ್ನ ನಿಯಂತ್ರಣದಲ್ಲಿ ಬಹಳ ಪ್ರಯೋಜನಕಾರಿ ಎಂಬುದಾಗಿ ಇಂಡೋನೇಷ್ಯಾದ ಡಾ. ಸ್ಟಿಯಾನಿ ಮತ್ತು ಅವರ ಬಳಗ 2022 ರಲ್ಲಿ ಕಂಡುಕೊಂಡಿದ್ದಾರೆ.
ಅಡಿಕೆಯ ಸಾಬೂನು ನಮ್ಮಲ್ಲಿ ಇದೆಯೇ? ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನದ (ಎ ಆರ್ ಡಿ ಎಫ್) ಸ್ಥಾಪಕ ಟ್ರಸ್ಟಿಯವರಲ್ಲಿ ಒಬ್ಬರಾದ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಸಮೀಪದ ಮಂಗಳ ಹರ್ಬಲ್ ಪಾರ್ಕ್ ನ ಶ್ರೀಯುತ ಬದನಾಜೆ ಶಂಕರ ಭಟ್ ಅವರು ಪ್ರಪ್ರಥಮವಾಗಿ ಅಡಿಕೆಯ ಸಾರವನ್ನು ಸೇರಿಸಿ ಮೂರು ವಿಧದ ಸುವಾಸನೆಯ (ಗುಲಾಬಿ, ಮಲ್ಲಿಗೆ ಮತ್ತು ತುಳಸಿ,) ಸಾಬೂನುಗಳನ್ನು 2011 ರಲ್ಲಿ ಕ್ಯಾಂಪ್ಕೊದವರ ಸಹಯೋಗದಲ್ಲಿ ತಯಾರಿಸಿ ‘ಪೂಗ ಸಿಂಗಾರ್’ ಎನ್ನುವ ಹೆಸರಿನಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಾರೆ. ಅವರು ಇಂತಹ ಸಾಬೂನುಗಳನ್ನು ಅಡಿಕೆಯ ಜಲೀಯ ಸಾರವನ್ನು ಬಳಸಿ ಮಾಡುತ್ತಾರೆ. Mob: 9535620288
ಹಾಗೆಯೇ, ಬೆಳ್ತಂಗಡಿ ಸಮೀಪದ ಪಿಲಿಗೂಡಿನ ಮಧುವನದ ರವಿರಾಜ್ ರವರು ‘ಹವ್ಯ’ ಎನ್ನುವ ಹೆಸರಿನಲ್ಲಿ ಅಡಿಕೆಯ ಚೊಗರನ್ನು ಸೇರಿಸಿ ಕೊಲ್ಡ್ ಪ್ರೋಸೆಸ್ ವಿಧಾನದಲ್ಲಿ ಸಾಬೂನನ್ನು 2021 ರಲ್ಲಿ ತಯಾರು ಮಾಡಿ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಾರೆ. Mob: 7760545001
ಅಡಿಕೆ ಅಲ್ಲದೆ ಹಣ್ಣು ಅಡಿಕೆಯ ಸಿಪ್ಪೆಯ ಸಾರವನ್ನು ಸೇರಿಸಿ, ಪುತ್ತೂರು ಸಮೀಪದ ಕೆದಿಲದ ‘ಹಾರ್ದಿಕ್ ಹರ್ಬಲ್ಸ್’ ಸಂಸ್ಥೆಯ ಮುಖ್ಯಸ್ಥರಾದ ಶ್ರೀಯುತ ಕೆ. ಮುರಳೀಧರ್ ಅವರು 2023 ರಲ್ಲಿ ಅವರ ‘ಸತ್ವಂ’ ಬ್ರಾಂಡ್ ನಲ್ಲಿ ಸಾಬೂನನ್ನು ತಯಾರಿಸಿ ‘ಕೊಕೊರೇಕ’ ಹೆಸರಿನಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಾರೆ. Mob: 9448260459
ಇವುಗಳಲ್ಲದೆ, ಘನ ಸಾಬೂನಿಗೆ ಬದಲಾಗಿ ದ್ರವ ರೂಪದ ಸಾಬೂನನ್ನು ಪುತ್ತೂರು ಸಮೀಪದ ಪಡ್ನೂರಿನಲ್ಲಿರುವ ಶ್ರೀಯುತ ಮಹೇಶ್ ಪುಣ್ಚತ್ತೋಡಿ ಅವರು ಅಡಿಕೆಯ ಚೊಗರನ್ನು ಸೇರಿಸಿ ಅವರದ್ದೇ ಆದ ‘ವಿಮೇಡ್’ ಬ್ರಾಂಡ್ ನಲ್ಲಿ 2023 ರ ಕ್ಯಾಂಪ್ಕೊ ಕೃಷಿ ಯಂತ್ರ ಮೇಳದಲ್ಲಿ ‘ಬಬ್ಬಲ್ ಬಾತ್’ ಎನ್ನುವ ಹೆಸರಿನಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಾರೆ. Mob: 9448770585
ಅಡಿಕೆ ಉತ್ಪಾದನೆಯಲ್ಲಿ ನಮ್ಮ ದೇಶ ಪ್ರಪಂಚದಲ್ಲೇ ಮೊದಲನೆಯದು. ನಮಗೆ ಹೆಮ್ಮೆ. ಆದರೆ, ಅಡಿಕೆಯ ಪರ್ಯಾಯ ಬಳಕೆ ವಿಷಯಕ್ಕೆ ಬಂದಾಗ, ಅದರ ಬಗ್ಗೆ ನಡೆಸಿದ ವೈಜ್ಞಾನಿಕ ಸಂಶೋಧನೆಗಳು ನಗಣ್ಯ. ಅಂತಹ ಕಾರ್ಯದಲ್ಲಿ ನಾವು ತುಂಬಾ ಹಿಂದೆ ಇದ್ದೇವೆಯೋ ಎಂದು ಅನಿಸುವುದು. ಪ್ರಪಂಚದ ಬೇರೆ ಸಣ್ಣ ಪುಟ್ಟ ರಾಷ್ಟ್ರಗಳು ಕೂಡ, ಈ ವಿಷಯದಲ್ಲಿ, ನಮ್ಮಿಂದ ಮುಂದೆ ಹೋಗಿರುವುದು ವಿಪರ್ಯಾಸ. ಇನ್ನಾದರೂ ನಮ್ಮಲ್ಲಿನ ವಿಶ್ವವಿದ್ಯಾಲಯಗಳು, ಸಂಶೋಧಕರು, ಔಷಧಿ ಕಂಪೆನಿಗಳು ಈ ನಿಟ್ಟಿನಲ್ಲಿ ಸಕ್ರಿಯ ಪಾತ್ರವನ್ನು ವಹಿಸಿದರೆ ಅಡಿಕೆಯ ಭವಿಷ್ಯ ಇನ್ನೂ ಉಜ್ವಲವಾಗುವುದರಲ್ಲಿ ಸಂಶಯವಿಲ್ಲ.