-ಪ್ರಬಂಧ ಅಂಬುತೀರ್ಥ
ಒಂದು ಚರ್ಚೆಯಲ್ಲಿ ಕೃಷಿಕರು ಖಾತಾಬುಕ್ ಮಾದ್ಯಮದಲ್ಲಿ ಲೆಕ್ಕ ಬರೀಬೇಕು. ಕೃಷಿಕ ಲೆಕ್ಕಾಚಾರದಲ್ಲಿ ಕೃಷಿ ಮಾಡಬೇಕು ಅಂತೆಲ್ಲಾ ಚರ್ಚೆ ಆಯಿತು. ಆದರೆ ಕೃಷಿಕರಿಗೆ ತಮ್ಮ ಕೃಷಿ ಉತ್ಪನ್ನ ಗಳಿಗೆ ನಿಜವಾದ ಬೆಲೆ ಮಾರುಕಟ್ಟೆ ಯಲ್ಲಿ ಸಿಗುತ್ತಿದೆಯಾ ? ಒಂದು ಪುಟ್ಟಬಾಳೆ ಗೊನೆ ಕಿಲೋ ಒಂದಕ್ಕೆ ಇವತ್ತು ರಿಟೈಲ್ ಮಾರುಕಟ್ಟೆಯಲ್ಲಿ ತೊಂಬತ್ತರಿಂದ ನೂರು ರೂಪಾಯಿಯಿದ್ದರೆ ಆ ಪುಟ್ಟ ಬಾಳೆ ಬೆಳೆದ ರೈತರಿಗೆ ಕಿಲೋಗೆ ಹತ್ತು ರೂಪಾಯಿ ಯಿಂದ ಹದಿನೈದು ರೂಪಾಯಿ ದೊರೆಯುತ್ತಿದೆ. ಪುಟ್ಟ ಬಾಳೆಗೊನೆ ಬೆಳೆದ ರೈತರು ತಾವು ಬೆಳೆದ ಬಾಳೆಗೊನೆಗೆ ತಮ್ಮ ಖರ್ಚು ಕಳೆದು ಲಾಭಾಂಶ ಸೇರಿ ಇಷ್ಟು ಬೆಲೆ ಎಂದು ಆಗಬೇಕು. ಆದರೆ ನಮ್ಮ ಯಾವುದೇ ಕೃಷಿ ಉತ್ಪನ್ನ ಬೆಲೆಗೆ ರೈತ ಬೆಲೆ ಕಟ್ತಿಲ್ಲ.
ಲೆಕ್ಕಾಚಾರ ಮಾಡಿ ಕೃಷಿ ಮಾಡುವ ಬಗೆ ಹೇಗೆ?
ಕೃಷಿಕನ ಶ್ರಮ ಕೃಷಿ ಖರ್ಚು ವೆಚ್ಚಗಳನ್ನು ಕೃಷಿ ಮಾಡದ ವ್ಯಾಪಾರಿ ವ್ಯವಸ್ಥೆ ನಿಗದಿ ಮಾಡುವುದಾದಲ್ಲಿ “ಕೃಷಿ ಲೆಕ್ಕಾಚಾರ ಅಥವಾ ಲೆಕ್ಕಾಚಾರದ ಕೃಷಿ ” ಹೇಗೆ ಮಾಡಲು ಸಾದ್ಯ? ಉದ್ಯಮಿಯ ಆಧಾರದ ಲೆಕ್ಕಾಚಾರ ಕೃಷಿಗೆ ಸಾದ್ಯವಿಲ್ಲ. ಕೃಷಿ ಒಂದು ಜೀವನ ಕ್ರಮ, ಕೃಷಿ ಒಂದು ಭಾವನಾತ್ಮಕ ಕೃಷಿ ಒಂದು ಖುಷಿ ಆದರೆ ಕೃಷಿ ಗೆ ಇಷ್ಟು ಬಂಡವಾಳ ಹಾಕಿ ಇಷ್ಟು ಲಾಭ ತೆಗೆಯುತ್ತೇವೆ ಎಂಬ ಖಾತ್ರಿಯ ಲೆಕ್ಕಾಚಾರ ಹಾಕಲು ಬರೋಲ್ಲ!
ಎಪ್ಪತ್ತೈದು ಗ್ರಾಮ್ ನ ಒಂದು ಸೋಪ್ ನ ಗ್ರಾಹಕ ಕೊಳ್ಳುವ ಬೆಲೆ ಇಪ್ಪತ್ತೆರಡು ರೂಪಾಯಿ ಇದ್ದರೆ ಆ ಇಪ್ಪತ್ತೆರೆಡು ರೂಪಾಯಿ ಯಲ್ಲಿ ತಯಾರಿಕನ ಖರ್ಚು, ಜಾಹೀರಾತು, ರವಾನೆ ವೆಚ್ಚ , ಸವಕಳಿ ಹೀಗೆ ಪ್ರತಿಯೊಂದು ಈ ಬೆಲೆಯಲ್ಲಿ ಅಡಕ ವಾಗಿರುತ್ತದೆ. ಆದರೆ ಇದೇ ಕೃಷಿ ಉತ್ಪನ್ನ ಗಳ ವಿಚಾರ ಬಂದಾಗ ಉಲ್ಟಾ ಆಗುತ್ತದೆ.
ಇನ್ನೊಂದು ಉದಾಹರಣೆ.
ಒಂದು ಕೆಜಿ ಟೊಮ್ಯಾಟೊ ಗೆ ಮಂಡಿಯಲ್ಲಿ ನಾಲ್ಕು ಐದು ಆರು ರೂಪಾಯಿ ಕೂಗುವವ ವ್ಯಾಪಾರಿ. ಆ ವ್ಯಾಪಾರಿ ಒಂದು ಕೆಜಿ ಟೊಮ್ಯಾಟೊ ದಲ್ಲಿ ಕಟ್ಟ ಕಡೆಯ ಗ್ರಾಹಕರಿಗೆ ತಲುಪುವಾಗ ಒಂದು ಕೆಜಿ ಟೊಮ್ಯಾಟೊ ಹಣ್ಣಿನಲ್ಲಿ ಕೊಳೆತು ಹೋಗುವ “ನೂರು ಗ್ರಾಮು” ಟೊಮ್ಯಾಟೊ ಹಣ್ಣು, ಮಂಡಿಯಿಂದ ಸಗಟು ಮಳಿಗೆಗೆ ಮಾಡುವ ರವಾನೆ ವೆಚ್ಚ, ಹಮಾಲಿ , ಒಂದು ವೇಳೆ ನಿರ್ದಿಷ್ಟ ಸಮಯದಲ್ಲಿ ಟೊಮ್ಯಾಟೊ ಮಾರಾಟ ಆಗದಿದ್ದಲ್ಲಿ ವ್ಯಾಪಾರಿಗಾಗುವ ಸಾಂಭಾವ್ಯ ನಷ್ಟ. ಎಲ್ಲವನ್ನೂ ಆ ಟೊಮ್ಯಾಟೊ ಖರೀದಿ ದಾರ “ಲೆಕ್ಕಾಚಾರ ಹಾಕಿ” ಟೊಮ್ಯಾಟೊ ಬೆಲೆ ಕಟ್ತಾನೆ. ದುರಂತ ಎಂದರೆ ಇದೇ ಟೊಮ್ಯಾಟೊ ಬೆಳೆವ ರೈತರು ಹೊಲ ಉತ್ತಿದ್ದು , ಗಿಡ ನೆಟ್ಟದ್ದು, ಔಷಧ ಸಿಂಪಡಣೆ ಮಾಡಿದ್ದು, ಕಾದದ್ದು, ನೀರುಣಿಸಿದ್ದು, ಮದ್ಯೆ ಮದ್ಯೆ ಗೊಬ್ಬರ ಹಾಕಿದ್ದು , ಮಾರುಕಟ್ಟೆ ಗೆ ಕೊಂಡೊಯ್ದದ್ದು ಯಾವುದೂ ಲೆಕ್ಕಾಚಾರ ಹಾಕದೆ ಕೃಷಿಕ ತನ್ನ ಬಂಡವಾಳ ತನ್ನ ಶ್ರಮಕ್ಕೆ ವ್ಯಾಪಾರಿ ಕೊಟ್ಟ ಕಿಲುಬು ಕಾಸನ್ನೇ ಪಡೆದು ಧನ್ಯೋಸ್ಮಿ ಅಂತಾನೆ. ಆದರೆ ಮಾರುಕಟ್ಟೆಯಲ್ಲಿ ಇವನೇ ಬೆಳೆದ ಟೊಮ್ಯಾಟೊ ಇವನೇ ಖರೀದಿ ಮಾಡಿದರೆ ಒಂದು ಕೆಜಿ ಟೊಮ್ಯಾಟೊ ಗೆ ನಲವತ್ತು ರೂಪಾಯಿ!
ಕೃಷಿ ಬೆಲೆ ಆಯೋಗ ಅಂತ ಸರ್ಕಾರ ಏನೋ ಪ್ರಯತ್ನ ಮಾಡಿತ್ತು. ಅದೇನಾಯಿತು ಅಂತ ಗೊತ್ತಿಲ್ಲ.
ಕೃಷಿಕ ಅಥವಾ ಕೃಷಿಕ ಉತ್ಪಾದಕನಿಗೆ ಹೋಲ್ ಸೇಲ್ ವ್ಯಾಪಾರಿ ತೊಂಬತ್ತು ಪ್ರತಿಶತ ಉಳಿದ ಹತ್ತು ಪ್ರತಿಶತ ಸವಕಳಿ ಅಂಶವನ್ನು ರಿಟೈಲ್ ವ್ಯಾಪಾರಿಗೆ ಹಾಕಿ ತಾನು ಮಾತ್ರ ಕುಳಿತಲ್ಲೇ ದುಂಡಗಾಗುತ್ತಾನೆ.
ಯಾಕೆ ಹೀಗೆ?
ಒಂದು ಕೆಜಿ ಹಲಸಿನ ಕಾಯಿ ಬೆಲೆ ಒಂದು ರೂಪಾಯಿ, ಗ್ರಾಹಕ ಖರೀದಿ ಬೆಲೆ ಇಪ್ಪತ್ತೈದು ರೂಪಾಯಿ,
ಒಂದು ಕೆಜಿ ಮಾವಿನ ಬೆಲೆ ಐದು ರೂಪಾಯಿ, ಗ್ರಾಹಕ ಬೆಲೆ ನೂರೈವತ್ತು ರೂಪಾಯಿ. ಒಂದು ಕೆಜಿ ಬಾಳೆಕಾಯಿ ಬೆಲೆ ಆರು ರೂಪಾಯಿ > ಗ್ರಾಹಕ ಬೆಲೆ ಅರವತ್ತು ರೂಪಾಯಿ. ಒಂದು ಕೆಜಿ ಬತ್ತ ದ ರೈತ ಉತ್ಪಾದಕನ ವೆಚ್ಚ ಮಲೆನಾಡಿನ ಭಾಗದಲ್ಲಿ ನೂರಿಪ್ಪತ್ತು ರೂಪಾಯಿಗಳಾದರೆ ವ್ಯಾಪಾರಿ ಖರೀದಿ ಬೆಲೆ ಐವತ್ತು ರೂಪಾಯಿ !
ಹೀಗೆ ಕಬ್ಬು ಜೋಳ ಉದ್ದು ತೊಗರಿ ತರಕಾರಿ ಹಣ್ಣಿನ ಬೆಳೆ ಕೃಷಿಕ ಉತ್ಪಾದಕರಿಗೆ ಮಾರುಕಟ್ಟೆ ವ್ಯವಸ್ಥೆ ಇರು ವುದು.
ಇದ್ದದರಲ್ಲಿ ಅಡಿಕೆ ಉತ್ಪನ್ನಕ್ಕೊಂದು ಗೌರವಯುತ ಮಾರುಕಟ್ಟೆ ಬೆಲೆ ಇದೆ ಅನಿಸುತ್ತದೆ. ಆದರೆ ಅಡಿಕೆಗೂ ಈಗಿರುವ ನ್ಯಾಯಯುತ ಎಂದೇನಲ್ಲ. ಅಡಿಕೆ ಒಣ ಉತ್ಪನ್ನ ವಾಗಿರುವುದರಿಂದ “ಸವಕಳಿ ಅಥವಾ ಕೊಳೆಯುವ ಅಥವಾ ಹಗುರವಾಗುವ ” ಸಾದ್ಯತೆ ಕಡಿಮೆ ಇರುವುದು ಮುಖ್ಯ ಕಾರಣ. ಕಾಳುಮೆಣಸು, ಕಾಫಿ ಉತ್ಪನ್ನ ಗಳೂ ಈ ಕಾರಣಕ್ಕೆ ಬಹುತೇಕ ಎಲ್ಲ ಕೃಷಿ ಉತ್ಪನ್ನ ಗಳ ನಡುವೆ ಉತ್ತಮ ಬೆಲೆ ಇದೆ.
ಒಂದು ಚಿಂತನಾರ್ಹ ವಿಚಾರವೇನೆಂದರೆ ಕೃಷಿ ಉತ್ಪನ್ನಗಳಲ್ಲಿ ನೇರ ಖರೀದಿಯಾಗಿ ಗ್ರಾಹಕ ಬಳಕೆಯಾಗುವವು ಮತ್ತು ಮೌಲ್ಯವರ್ಧಿತ ಉತ್ಪನ್ನಗಳಾಗುವ ಕೃಷಿ ಉತ್ಪನ್ನಗಳ ವಿಂಗಡಿಸಿ ತದನಂತರ ಮೌಲ್ಯವರ್ಧಿತ ಉತ್ಪನ್ನಗಳ ಬೆಲೆಯ ಲೆಕ್ಕಾಚಾರದಲ್ಲಿ ಕೃಷಿ ಉತ್ಪನ್ನಗಳ ಬೆಲೆ ವೃದ್ದಿಸಬಹುದು.
ಉದಾಹರಣೆಗೆ ಟೊಮ್ಯಾಟೊ, ಕೆಚಪ್ , ಮಾವು -ಪಲ್ಪ್ ಜ್ಯೂಸ್ , ಕಬ್ಬು- ಈಥೇನಾಲ್ , ಆಲ್ಕೋಹಾಲ್, ಬತ್ತ-ಅಕ್ಕಿ, ತೌಡು, ತೌಡೆಣ್ಣೆ, ಈಥೇನಾಲ್ , ಹೀಗೆ ಕಬ್ಬಿನ ವಿಚಾರ ಬಂದಾಗ ಕಬ್ಬಿನ ಕಾರ್ಖಾನೆಯವರು ಕೇವಲ ಕಬ್ಬಿನ ಸಕ್ಕರೆ ಇಳುವರಿ ಆಧಾರದ ಬೆಲೆ ಮಾತ್ರ ಕಬ್ಬು ಬೆಳೆಗಾರ ರೈತರಿಗೆ ನೀಡ್ತಾರೆ. ಈಥೇನಾಲ್ ಮತ್ತು ವಿದ್ಯುತ್ ಉತ್ಪಾದನೆಯ ಬೆಲೆ ನೀಡರು. ಸಕ್ಕರೆ ಕಾರ್ಖಾನೆಯವ ಕಬ್ಬಿಗೆ ಕೇವಲ ಆರು ರೂಪಾಯಿ ನೀಡಿ ಸಕ್ಕರೆ ತಯಾರಿಸಿ ಉಪ ಉತ್ಪನ್ನ ತಯಾರಿಸಿ ಮಾರಾಟ ಮಾಡಿ ಕನಿಷ್ಠ ಒಂದು ಕೆಜಿ ಕಬ್ಬಿನಲ್ಲಿ ಎಂಬತ್ತು ತೊಂಬತ್ತು ರೂಪಾಯಿ ಲಾಭ ಮಾಡ್ತಾನೆ. ಇಲ್ಲಿ ಕಬ್ಬಿನ ಇತರ ಸಂಸ್ಕರಿತ ಉತ್ಪನ್ನ ತಯಾರಿಸಲು ಉದ್ಯಮಿ ಕೋಟ್ಯಾಂತರ ಬಂಡವಾಳ ಹೂಡಿರುತ್ತಾನೆ. ಆದರೂ ಉದ್ಯಮಿ ಕೆಲವು ಪ್ರತಿಶತ ಲಾಭಾಂಶ ವನ್ನು ಕಬ್ಬು ಬೆಳೆಗಾರರಿಗೆ ನೀಡಬೇಕಾಗಿರುವುದು ಧರ್ಮ.
ಹೀಗೆ ಬಹುತೇಕ ಕೃಷಿ ಉತ್ಪನ್ನ ಗಳಿಗೆ ನೇರ ಬಳಕೆ ಅಥವಾ ಸಿಂಗಲ್ ಯೂಸ್ ಅಥವಾ ಮೌಲ್ಯವರ್ಧಿತ ಪೂರ್ವ ದರ ಮಾತ್ರ ನಿಗದಿಯಾಗುತ್ತದೆ. ಕೃಷಿ ಉತ್ಪನ್ನದ ಬೆಲೆ ನಿಗದಿಯ ವಿಚಾರದಲ್ಲಿ ಇಷ್ಟೆಲ್ಲಾ ಅಂಶಗಳು ಗಣನೆ ಗೆ ಬರುತ್ತದೆ .ಕೃಷಿಕ ತನ್ನ ಬಹುತೇಕ ಕೃಷಿ ಉತ್ಪನ್ನ ಗಳಿಗೆ ತಾನೇ ಬೆಲೆ ನಿಗದಿ ಮಾಡಲಾರ. ವ್ಯಾಪಾರಿ ವ್ಯವಸ್ಥೆ ಕೃಷಿಕ ನ ಉತ್ಪನ್ನ ಗಳಿಗೆ ಲೆಕ್ಕಾಚಾರ ಹಾಕಿ ಬೆಲೆ ನಿಗದಿ ಮಾಡುವುದಾದಲ್ಲಿ ಕೃಷಿಕ ಲೆಕ್ಕಾಚಾರ ಹಾಕುವುದು ವಿಚಿತ್ರ ಅರ್ಥಹೀನ ಎನಿಸುತ್ತದೆ.