-ಗಣಪತಿ ಹಾಸ್ಪುರ
ಮಲೆನಾಡಿನಲ್ಲಿ ಅಡಿಕೆ ಬೇಸಾಯವೇ ಪ್ರಧಾನ ಕಸುಬಾದರೂ, ಬಹುವಿಧವಾದ ಕೃಷಿ ಬೆಳೆ ಮಾಡುವ ಕೃಷಿಕರು ಹೇರಳವಾಗಿ ಇದ್ದಾರೆ. ಆದ್ರೆ, ಒಂದೊಂದು ಪ್ರದೇಶದ ಕೃಷಿಕರಲ್ಲಿ ಕೆಲವೊಂದು ವಿಶೇಷತೆ ಇದ್ದಂತೆ, ಸೂಕ್ಷ್ಮವಾಗಿ ನೋಡಿದರೇ ಉ.ಕ ಜಿಲ್ಲೆಯಲ್ಲಿ ಪ್ರತಿಯೊಬ್ಬರ ತೋಟದಲ್ಲಿಯಲ್ಲಿಯೂ ಬಗೆಬಗೆಯ ವೈವಿಧ್ಯತೆಗಳಿವೆ. ಇಲ್ಲಿ ಪ್ರಧಾನವಾಗಿ ಅಡಿಕೆ ಬೆಳೆದರೂ ಸಹಾ, ಇಲ್ಲಿನ ಕೃಷಿಕರು ಆ ಬೆಳೆಗೆ ಅನುಸರಿಸುವ ಕ್ರಮ, ನಿರ್ವಹಣಾ ವಿಧಾನ.. ಹೀಗೆ ಪ್ರತಿಯೊಂದು ಕೆಲಸಗಳಲ್ಲಿಯೂ ವ್ಯತ್ಯಾಸ,ವೈವಿಧ್ಯತೆಗಳನ್ನು ಕಾಣಬಹುದು. ಈಗೀಗ ಇಲ್ಲಿಯ ತೋಟಪಟ್ಟಿ ಹೊಂದಿದ ಕೃಷಿಕರು ನೂರೆಂಟು ಬಗೆಯ ಸಮಸ್ಯೆ, ಸವಾಲುಗಳನ್ನು ಏದುರಿಸುತ್ತಿದ್ದಾರೆ.ಹೀಗಾಗಿ ಮಲೆನಾಡಿನ ಹಲವಾರು ಕೃಷಿಕರು ಇಂದು “ಅಡಿಕೆ ಬೆಳೆಯೊಂದೇ ಸಾಕು ಮಾರಾಯ್ಯ! ಮೊದ್ಲೆ ಜನ ಸಿಕ್ತ್ವಿಲ್ಲೆ; ನನ್ನ ಒಬ್ನ ಹತ್ತಿರ ಕೆಲ್ಸ ಮಾಡಲು ಹರಿಯಾ; ಕೊಟ್ಟಿಗೆ ಚಾಕರಿ ಬಿಟ್ಟೆ ಮೂರ್ ನಾಲ್ಕು ವರುಷ ಆಗೋತು. ವರ್ಷಕ್ಕೊಮ್ಮೆ ಅಡಿಕೆ ಕೊಯ್ಲು ಮುಗಿಸದೇ ಈಗ ಕಷ್ಟ ಆಗೋಜು…”ಎಂದು ಇಲ್ಲಿನ ರೈತರೇ ಹೇಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ವಾಸ್ತವಿಕ ಸ್ಥಿತಿ, ಪ್ರಸ್ತುತ ಸನ್ನಿವೇಷ ಹೀಗಿದ್ದರೂ ಸಹಾ ಈ ಭಾಗದ ಹಲವಾರು ಅಡಿಕೆ ಬೆಳೆಗಾರರು ಕೇವಲ ಅದೋಂದೆ ಕೃಷಿಯನ್ನು ಮಾಡುತ್ತಿಲ್ಲ. ಬಹುವಿಧದ ಉಪಕೃಷಿಯನ್ನು,ಪ್ರಧಾನ ಬೆಳೆಯಂತೆ ಉಪಬೆಳೆಗಳನ್ನು ಸಹಾ ಆಸಕ್ತಿಯಿಂದ ಬೆಳೆದು,ವ್ಯವಸ್ಥಿತವಾಗಿ ಆರೈಕೆ – ನಿರ್ವಹಣೆ ಮಾಡುತ್ತಿರುವುದು ನಿಜಕ್ಕು ಹೆಮ್ಮೆಯ ಸಂಗತಿ.ಪ್ರಧಾನ ಬೆಳೆಯಂತೆ,ತಮ್ಮ ತೋಟದಲ್ಲಿ ಆಗಬಹುದಾದ ವಿಭಿನ್ನ ಉಪ ಬೆಳೆಗಳನ್ನು ನೆಟ್ಟು ಪೋಷಿಸಿ ಉತ್ಪನ್ನ ಪಡೆಯುತ್ತಿರುವ ಹಲವಾರು ರೈತರು ಉ.ಕ.ಜಿಲ್ಲೆಯ ಮಲೆನಾಡಿನ ಭಾಗದಲ್ಲಿ ಇದ್ದಾರೆ. ಅಂಥಹ ಅಸಾಮಾನ್ಯ ಕೃಷಿಕರಲ್ಲಿ ಔಡಾಳ ಸಮೀಪದ ಅರಗಿಮನೆಯ ಉತ್ಸಾಹಿ ಕೃಷಿಕ,ಸದಾ ನಗುಮುಖದಲ್ಲಿ ಇರುವ ರೈತ ಮಹೇಶ ಹೆಗಡೆ ಬಹಳ ವಿಶಿಷ್ಟವಾಗಿ ಕಾಣುತ್ತಾರೆ.
ಇವತ್ತಿನ ಜಂಜಾಟದ ಕೃಷಿ ಜೀವನದಲ್ಲಿಯೂ ನೆಮ್ಮದಿಯಿಂದ ಕೃಷಿ ಚಟುವಟಿಕೆಗಳನ್ನು ಲವಲವಿಕೆಯಿಂದ ಮೇನೇಜ್ ಮಾಡುತ್ತಿರುವ ಇವರು,ತಮ್ಮ ಫಲವತ್ತಾದ ಭೂಮಿಯಲ್ಲಿ ಆಗಬಹುದಾದ ಕೃಷಿ ಬೆಳೆಗಳನ್ನು ವ್ಯವಸ್ಥಿತವಾಗಿ ಮಾಡಬಹುದು.ಸುಧಾರಿತ ಪದ್ದತಿಯಲ್ಲಿಯೇ ಅವುಗಳನ್ನು ಆರೈಕೆ ಮಾಡಿ, ಮನಸ್ಸಿಗೆ ತೃಪ್ತಿ ನೀಡುವಷ್ಟು ಫಲ ಪಡೆಯಬಹುದು ಎನ್ನುವುದಕ್ಕೆ ಈ ಕೃಷಿಕರು ಮಾದರಿ ಆಗಿದ್ದಾರೆ.
ಹೌದು,ಶಿರಸಿ ತಾಲೂಕಿನ ವಾದೀರಾಜ ಮಠ ಸಮೀಪದ ಅರಗಿಮನೆಯ ನಿವಾಸಿಯಾದ ಮಹೇಶ ಹೆಗಡೆ ಆ ಭಾಗದ ಪ್ರಗತಿಪರ ಕೃಷಿಕರು.ಅವರು ಪ್ರಧಾನವಾಗಿ ಅಡಿಕೆ ಬೆಳೆದರೂ,ಕಾಳುಮೆಣಸು, ಬಾಳೆ, ಕಾಫಿ, ಏಲಕ್ಕಿಯ ಕೃಷಿಯ ಜೊತೆಗೆ ಹೈನೋದ್ಯಮ, ನರ್ಸರಿ ಉದ್ಯಮವೂ ಉಂಟು.ಮಹೇಶ ಹೆಗಡೆ ಮನೆಯಲ್ಲಿ ಒಬ್ಬರೇ ಆದರೂ ಬಹುವಿಧದ ಬೆಳೆಗಳನ್ನು ವ್ಯವಸ್ಥಿತವಾಗಿ, ವೈಜ್ಞಾನಿಕ ಪದ್ದತಿಯಲ್ಲಿಯೇ ನಿರ್ವಹಣೆ ಮಾಡುತ್ತಾ ಇರುವುದು ನಿಜಕ್ಕು ಸಾಹಸದ ಕೆಲಸ.
ವಿಭಿನ್ನ ಉಪಬೆಳೆಗಳಿದ್ದರೇ ತನ್ನಲ್ಲಿ ಅದ್ನ ನಿರ್ವಹಣೆ ಮಾಡಲು ಆಗಲ್ಲ ಎಂದು ಅವಲತ್ತು ಕೊಳ್ಳುವ ರೈತರೇ ಹೆಚ್ಚಾದ ಈ ಸಂಕಟದದ ಸಮಯದಲ್ಲಿ,ಮಹೇಶ ಹೆಗಡೆಯವರು ಕೃಷಿಯಲ್ಲಿ ತೋಡಗಿಕೊಂಡಿರುವ ಪರಿ, ಆಸಕ್ತಿಯಿಂದ ಕೃಷಿ ಕೆಲಸಗಳನ್ನು ಮಾಡಿಸುವ ಅಚ್ಚುಕಟ್ಟಿನ ವಿಧಾನ,ಒಬ್ಬನೇ ಅದೇಲ್ಲವನ್ನು ಮೇನೇಜ್ ಮಾಡುವ ಕೌಶಲ್ಯ ನಿಜಕ್ಕು ಮೆಚ್ಚಬೇಕಾದ ಸಂಗತಿ.ಹೊಸದಾಗಿ ಕೃಷಿ ಕಾಯಕವನ್ನು ಮಾಡುವಂತವರಿಗೆ,ಕೇವಲ ಒಂದೇ ಬೆಳೆ ನಿರ್ವಹಣೆ ಮಾಡುವುದೇ ಕಷ್ಟ ಎಂದು ನಿರಾಶೆಯಿಂದ ಹೇಳಿಕೊಳ್ಳುವವರಿಗೆಲ್ಲ ಬಹುಬೆಳೆಗಳನ್ನು ಹೊಂದಿರುವ ಅರಗಿನಮನೆಯ ತೋಟವನ್ನು ಪ್ರತ್ಯಕ್ಷವಾಗಿ ನೋಡಿ ಮನನ ಮಾಡಿಕೊಳ್ಳಬೇಕು. ಹಲವಾರು ವಿಷಯ, ಅನುಭವಗಳನ್ನು ಮುಕ್ತವಾಗಿ ತೆರೆದಿಡುವ ಈ ತೋಟ “ಕೃಷಿ ಪಾಠಶಾಲೆ” ಎಂದರೂ ಅತಿಶಯೋಕ್ತಿ ಆಗಲಾರದು.

ಸಮೃದ್ಧ ಅಡಿಕೆ ತೋಟ
ಅರಗಿಮನೆಯ ಮಹೇಶ ಹೆಗಡೆ ಅವರಿಗೆ ಹಳೆಯ ತೋಟ ಒಂದು ಎಕರೆ ಹಾಗೂ ಹೊಸ ತೋಟ ಐದು ಎಕರೆ ಸೇರಿ ಒಟ್ಟು ಆರು ಎಕರೆ ಅಡಿಕೆ ತೋಟದ ಒಡೆಯರು.ಈ ಎಲ್ಲ ತೋಟವೂ ಹಳೆಯ ಹಾಗೂ ಹೊಸ ಪದ್ದತಿಯಲ್ಲಿ ಹಾಕಿದ ತೋಟವಾಗಿದೆ.ಇಲ್ಲಿ 18 ಅಡಿ ಅಗಲದ ಬರಣ ಮಾಡಿ 9*9 ಅಡಿ ಅಂತರದಲ್ಲಿ ಸಸಿ ನಟ್ಟಿದ್ದು ಇದೆ. ಅಲ್ಲದೇ 14 ಅಡಿ ಅಗಲದ ಬರಣ ಮಾಡಿ 10*10 ರ ಅಂತರದಲ್ಲಿ ಸಸಿ ನೆಟ್ಟ ತೋಟವೂ ಉಂಟು. ಇವರ ಎಲ್ಲ ತೋಟಕ್ಕು ನೀರಾವರಿ ವ್ಯವಸ್ಥೆ ಇದ್ದು, ಹಳೆ ತೋಟ ಹಾಗೂ ಬೆಟ್ಟದಲ್ಲಿ ಹಾಕಿದ ತೋಟದಲ್ಲಿ ಒಪನ್ ಬಸೀಗಾಲುವೆ ಇದ್ದು, ಉಳಿದ ಎಲ್ಲ ತೋಟಗಳಿಗೆ ಅಂತರ್ ಬಸೀಗಾಲುವೆ ಮಾಡಿದ್ದಾರೆ.
ಪ್ರತಿ ಅಡಿಕೆ ಮರಕ್ಕೆ ಸ್ವತಃ ಸಿದ್ದ ಮಾಡಿಕೊಂಡ ಕೊಟ್ಟಿಗೆ ಗೊಬ್ಬರವನ್ನು ಅಡಿಕೆ ಕೊಯ್ಲು ಮುಗಿದ ಮೇಲೆ ( ಸಾಮಾನ್ಯವಾಗಿ ಫೆಬ್ರುವರಿ ಸಮಯದಲ್ಲಿ) ಒಂದು ಚೂಳಿಯಷ್ಟು ಕೊಡುತ್ತಾರೆ.ಅಲ್ಲದೇ ಜೂನ್ ಹಾಗೂ ಸಪ್ಟೆಂಬರ್ ನಲ್ಲಿ ಕೃಷಿ ತಜ್ಞರು ಶಿಪಾರಸ್ಸು ಮಾಡಿದ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರವನ್ನು ಕೊಟ್ಟು ಆರೈಕೆ ಮಾಡುವ ಈ ಕೃಷಿಕರು, ಮಳೆ ಶುರುವಾಗುವ ಮೊದಲೇ ತೆರಕ್ಕು ಹಾಕಿ ಜಬರ್ದಸ್ತ ಮುಚ್ಚಿಗೆ ಮಾಡುತ್ತಾರೆ.ಒಪನ್ ಕಾಲುವೆಗಳಿಗೆ ಪ್ಲಾಸ್ಟಿಕ್ ಕವರ್ ಗಳನ್ನು ಹಾಕಿ ಕಾಲುವೆಗಳನ್ನು ಸುಭದ್ರವಾಗಿ ಇಟ್ಟುಕೊಳ್ಳಲು ಇವರು ಮುಂಜಾಗ್ರತೆ ವಹಿಸುತ್ತಾರೆ. ಸಕಾಲದಲ್ಲಿ ಮಾಡಬಹುದಾದ ಕೆಲಸಗಳನ್ನು ಕಚ್ಚುಕಟ್ಟಾಗಿ ಶಿಸ್ತಿನಿಂದ ಮಾಡಿ,ವ್ಯವಸ್ಥಿತವಾಗಿ ವೈಜ್ಞಾನಿಕ ಪದ್ದತಿಯಲ್ಲಿಯೇ ಅಡಿಕೆ ತೋಟವನ್ನು ನಿರ್ವಹಣೆ ಮಾಡುತ್ತಿರುವ ಮಹೇಶ ಹೆಗಡೆಯವರ ಅಡಿಕೆ ತೋಟ ಸಂಪತ್ ಭರಿತವಾಗಿದೆ.ಅವರ ಪರಿಶ್ರಮ, ಅತೀವ ಕಾಳಜಿಯಿಂದ,ಆರೈಕೆ ಮಾಡಿ ಪೋಷಿಸಿದ ಪರಿಣಾಮ ಎಕರೆಗೆ ಸರಾಸರಿ 18ರಿಂದ 20 ಕ್ವಿಂಟಲ್ ವರೆಗೂ ಇಳುವರಿ ಪಡೆಯುತ್ತಿದ್ದಾರೆ.
ಹಾಗೇ ನೋಡಲು ಹೋದರೇ ಅರಗಿಮನೆಯ ಪ್ರಗತಿಪರ ಕೃಷಿಕರಾದ ಮಹೇಶ ಹೆಗಡೆ ಅವರಿಗೆ ಅಡಿಕೆ ಉತ್ಪನ್ನದಿಂದಲೇ ಸಂಸಾರದ ನೌಕೆಯನ್ನು ಸಾಗಿಸಬಹುದಾಗಿತ್ತು.ಅವರು ಕೇವಲ ಅಡಿಕೆ ಕೃಷಿ ಒಂದನ್ನೇ ಮಾಡದೇ, ತಮ್ಮ ತೋಟದಲ್ಲಿ ಆಗಬಹುದಾದ ವಿವಿಧ ಉಪ ಬೆಳೆಗಳನ್ನು ಸಹಾ ಆಸಕ್ತಿ, ಛಲದಿಂದ ಮಾಡ್ತಾ ಇರುವುದು ವಿಶೇಷ. ಕೃಷಿ ಕ್ಷೇತ್ರದಲ್ಲಿ ಇಂಥಹ ಪರಾಕ್ರಮಿ, ಪರಿಶ್ರಮ ಪಡುವ ರೈತರು ಕಾಣಲು ಸಿಗುವುದು ಕಷ್ಟ.
ಕಪ್ಪು ಬಂಗಾರ
ಅರಗಿಮನೆಯ ಮಹೇಶ ಹೆಗಡೆ ಅವರು ಸ್ವಖಾಸುಮ್ಮನೆ ಕುರುವವರಲ್ಲ. ಬೇಕಾಬಿಟ್ಟಿ ಅಡ್ಡಾಡುವ ಅಭ್ಯಾಸವೂ ಗೊತ್ತಿಲ್ಲ.ತಾನಾಯಿತು ತಮ್ಮ ಕೃಷಿ ಭೂಮಿಯಲ್ಲಿ ವಿವಿಧ ಚಟುವಟಿಕೆಯಲ್ಲಿ ಸದಾ ಮಗ್ನರಾಗುತ್ತಾರೆ.ಕೆಲವು ವರುಷಗಳ ಹಿಂದೆ ಬೇರೆ ಬೇರೆಯ ಅಡಿಕೆ ತೋಟವನ್ನು ಸುತ್ತಾಡುತ್ತಾ ಇರುವಾಗ ಅಲ್ಲಿ ಕಪ್ಪುಬಂಗಾರದ ಕೃಷಿ ಇವರನ್ನು ಸೂಜಿಗಲ್ಲಿನಂತೆ ಆಕರ್ಷಿಸಿತು. ತಾನು ಆ ಕೃಷಿಯನ್ನು ಮಾಡಬೇಕೆಂಬ ಹೆಬ್ಬಯಕೆ ಆಕ್ಷಣವೇ ಅರಿವು ಆಗಿತ್ತು.ಬೇರೆಯವರ ತೋಟದಲ್ಲಿ ಮೆಣಸಿನ ಕೃಷಿಯ ವೈಯ್ಯಾರವನ್ನು ಪ್ರತ್ಯಕ್ಷವಾಗಿ ನೋಡಿದ್ದೆ ಇವರು ಕಾಳುಮೆಣಸು ಬೆಳೆಯಲು ಸ್ಫೂರ್ತಿ ನೀಡಿತ್ತು.
ಅದೇ ವರುಷವೇ ಸುಮಾರು ನೂರು ಬಳ್ಳಿಗಳನ್ನು ಹಚ್ಚಿ ಆರೈಕೆ ಮಾಡಿದರು.ಕ್ರಮೇಣ ಬಳ್ಳಿಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡ ಇವರು, ಅದಕ್ಕು ವ್ಯವಸ್ಥಿತವಾಗಿ ಪೋಷಣೆ ಮಾಡ ತೊಡಗಿದರು.ಈಗ ಅವರ ತೋಟದಲ್ಲಿ ಎರಡು ಸಾವಿರಕ್ಕು ಹೆಚ್ಚು ಕಾಳುಮೆಣಸಿನ ಬಳ್ಳಿಗಳಿದ್ದು, ಅವೆಲ್ಲ ಹುಲುಸಾಗಿ ಬೆಳೆದು ನಿಂತಿವೆ.ಕೃಷಿ ಮಾರ್ಗದರ್ಶಕರ ಶಿಪಾರಸ್ಸಿನಂತೆ ಇದ್ಕು ವ್ಯವಸ್ಥಿತವಾಗಿ ಆರೈಕೆ ಮಾಡುತ್ತಾರೆ.ಇವರು ಈ ಕಪ್ಪು ಬಂಗಾರದ ಬಳ್ಳಿಗಳಿಂದ ಎಕರೆಗೆ ಸದ್ಯ ಏಳೆಂಟು ಕ್ವಿಂಟಲ್ ಫಸಲನ್ನು ಪಡೆಯುತ್ತಿದ್ದಾರೆ.

ಕಾಫಿಯೂ ಉಂಟು
ಈಗೀಗ ಈ ಭಾಗದ ಹಲವಾರು ಕೃಷಿಕರು ಕಾಫಿ ಗಿಡಗಳನ್ನು ಅಡಿಕೆ ತೋಟದಲ್ಲಿ ನೆಡುತ್ತಿದ್ದಾರೆ.ಅದೇಲ್ಲವನ್ನು ಸೂಕ್ಷ್ಮವಾಗಿ ಗಮನಿಸಿದ ಮಹೇಶ ಹೆಗಡೆ ಅವರಿಗೆ ಈ ಬೆಳೆಯು ನಮ್ಮ ತೋಟಕ್ಕೆ ಸೂಕ್ತ ಎನಿಸಿದ್ದರಿಂದ ಮೂರು ವರುಷದ ಹಿಂದೆ ಚಂದ್ರಗಿರಿ ತಳಿಯನ್ನು ತಂದು ಹೂಳಿದರು.ಇಂದು ಅವರ ತೋಟದಲ್ಲಿ ಎರಡುವರೆ ಸಾವಿರ ಕಾಫಿ ಗಿಡಗಳಿದ್ದು, ಅವೆಲ್ಲ ಚನ್ನಾಗಿ ಬಲಿತು ನಿಂತಿವೆ. ಸದ್ಯ ಎರಡುವರೆ ಕ್ವಿಂಟಲ್ ಫಸಲು ಪಡೆಯುತ್ತಿದ್ದಾರೆ. ಈ ಕಾಫಿ ಬೆಳೆಯ ಉತ್ಪನ್ನಕ್ಕಿಂತಲೂ ,ಇದರ “ಏಲೆ” ತೋಟಕ್ಕೆ ಉತ್ತಮವಾದ ಮುಚ್ಚಿಗೆ ನೀಡುತ್ತದೆ.ಕಳೆ ನಿಯಂತ್ರಿಸಲು ಈ ಕಾಫಿ ಕೃಷಿ ಅಡಿಕೆ ಬೆಳೆಗಾರಿಗೆ ವರದಾನ ಎಂದು ಪ್ರತಿಪಾದಿಸುತ್ತಾರೆ ಮಹೇಶ ಹೆಗಡೆ.ಸಾಕಷ್ಟು ಪ್ರಮಾಣದಲ್ಲಿ ಬಾಳೆಯೂ ಉಂಟು. ಏಲಕ್ಕಿ ಕೃಷಿಯನ್ನು ಸಹಾ ಮಾಡುತ್ತಿದ್ದಾರೆ.ಜೇನಿನ ಕೃಷಿಯಲ್ಲಿ( ಸದ್ಯ 15 ಪೆಟ್ಟಿಗೆಯಿದ್ದು, ಸುಮಾರು 30 ಕೆ.ಜಿ ತುಪ್ಪ ಪಡೆಯುತ್ತಾರೆ)ಯೂ ತಮ್ಮನ್ನು ತೊಡಗಿಸಿಕೊಂಡಿರುವ ಅರಗಿಮನೆಯ ಮಹೇಶ ಹೆಗಡೆ ಅವರ ಕೃಷಿ ಕಾಯಕದ ಸಾಹಸ- ಸಾಧನೆ ಸಣ್ಣದೇನು ಅಲ್ಲ.
ಹೈನು ಉದ್ಯಮ
ಬಹುತೇಕ ಕೃಷಿಕರು ಲೆಕ್ಕಾಚಾರ ಮಾಡುತ್ತಾ,ಕೃಷಿ ಭೂಮಿಯನ್ನು ನಿರ್ವಹಣೆ ಮಾಡಿ ಜೀವನ ಮಾಡುವವರು ಇದ್ದಾರೆ.ಅವರೆಲ್ಲ ಕ್ಯಾಲ್ಕುಲೇಟರ್ ಹಿಡಿದಷ್ಟು ಸಮಯ ಕೃಷಿ ಭೂಮಿಯಲ್ಲಿ ಶ್ರಮ ಪಟ್ಟಿದ್ದರೆ,ಅವರು ಶ್ರದ್ಧೆ, ಪರಿಶ್ರಮದಿಂದ ಮಾಡಿದ ಕೃಷಿಯಿಂದಲೂ ಉತ್ತಮವಾದ ಫಲ ಪಡೆಬಹುದಾಗಿತ್ತು.ಅದ್ನ ಲಾಭದಾಯಿಕ ಕೃಷಿ ಅಂತ ಮಾಡಿ ತೊರಿಸಬಹುದಾಗಿತ್ತು.ಆದ್ರೆ, ಅವರಿಗೆ ಕೃಷಿಯ ಕೆಲವು ಕಾರ್ಯಗಳಲ್ಲಿ ಆಸಕ್ತಿ ಇರದೇ ಇರುವ ಕಾರಣದಿಂದ ಇಂದು ಹೈನುಗಾರಿಕೆ ಕಸುಬು ಲಾಭದಾಯಿಕ ಕೃಷಿಯಲ್ಲ ಎಂದು ಅನ್ನಿಸಿರಬಹುದು.ಆದ್ರೆ ಅರಗಿಮನೆಯ ಮಹೇಶ ಹೆಗಡೆಯವರ ಅನುಭವದ ಪ್ರಕಾರ ಸರಿಯಾಗಿ ಮಾಡಿದರೇ ಹೈನೋದ್ಯಮ ನಷ್ಟವೇನು ಅಲ್ಲ ಎನ್ನುತ್ತಾರೆ.
ಇವರ ಕೊಟ್ಟಿಗೆಯಲ್ಲಿ ಸದ್ಯ ಹತ್ತು ಹಸುಗಳಿದ್ದು, ದಿನಕ್ಕೆ ಸುಮಾರು 50 ಲೀಟರ್ ಹಾಲು ಹಿಂಡುತ್ತಾರೆ.ಇವಿಷ್ಟು ದನಗಳು ಇರುವುದರಿಂದಲೇ ಈ ಕೃಷಿಕರು ತಮ್ಮ ಆರು ಎಕರೆಗೆ ಬೇಕಾಗುವಷ್ಟು ಉತ್ಕೃಷ್ಟವಾದ ಗೊಬ್ಬರವನ್ನು ಸ್ವತಃ ಸಿದ್ದ ಮಾಡಿಕೊಳ್ಳುತ್ತಾರೆ. ಮನೆ ಬಳಕೆಗೆ ಹೆಚ್ಚಾದ ಹಾಲನ್ನು ಡೇರಿಗೆ ಹಾಕುತ್ತಾರೆ.ಕೊಟ್ಟಿಗೆ ತೊಳೆದ ಗಂಜಳವನ್ನು ವೆಷ್ಟ ಮಾಡದ ಇವರು,ಗೊಬ್ಬರದ ಗುಂಡಿಗೆ ಬೇಕಾಗುವಷ್ಟು ಸ್ಲರಿಯನ್ನು ಬಳಸಿಕೊಂಡು, ಉಳಿದಿದ್ದನ್ನು ತೋಟಕ್ಕೆ ಹಾಯಿಸುತ್ತಾರೆ.
ನರ್ಸರಿಯಲ್ಲೂ ಸಾಧನೆ
ಮಹೇಶ ಹೆಗಡೆ ಅವರು ಕೃಷಿ ಕಸುಬಿನಲ್ಲಿ ಯಾವುದು ತನ್ನಲ್ಲಿ ಆಗಲ್ಲ ಎನ್ನುವವರೇ ಇಲ್ಲ. ಯಾವುದಾದರೂ ಹೊಸ ವಿಚಾರವೊಂದು ಇವರ ತಲೆಯೊಳಗೆ ಹೊಕ್ಕಿದರೇ ಅದ್ನ ಮಾಡಲು ಉತ್ಸಾಹ ತೊರುತ್ತಾರೆ.ಅದನ್ನು ವ್ಯವಸ್ಥಿತವಾಗಿ ಮಾಡಲು ಪ್ರಯತ್ನ ಮಾಡುತ್ತಿದ್ದಾರಲ್ಲ ಆ ಕಾರಣಕ್ಕೆ ಇವರನ್ನು ಅಭಿನಂದಿಸಲೇ ಬೇಕು. ತೋಟದ ತುಂಬಾ ನಾನಾ ಕೃಷಿ ಬೆಳೆಗಳನ್ನು ದೊಡ್ಡ ಪ್ರಮಾಣದಲ್ಲಿಯೇ ಮಾಡುತ್ತಿರುವ ಈ ಕೃಷಿಕರು, ಛಲ,ಉಮೇದಿಯಿಂದ ನರ್ಸರಿ ಉದ್ಯಮವನ್ನು ಸಹಾ ಮಾಡ್ತಾ ಇದ್ದಾರೆ.
ತಮ್ಮ ತೋಟದಲ್ಲಿಯೇ ಸಾಕಷ್ಟು ಮೆಣಸಿನ ಕುಡಿಗಳು ಸಿಗುತ್ತವೆ. ಅದ್ನ ಸದ್ಬಳಕೆ ಮಾಡಬೇಕು, ಅದರಿಂದ ಆದಾಯವೂ ಸಿಗಬೇಕು ಎನ್ನುವ ಕಾರಣಕ್ಕೆ ಆಸಕ್ತಿ, ಉತ್ಸಾಹದಿಂದ ಕಳೆದ ಮೂರು ವರುಷಗಳಿಂದ ಕಾಳುಮೆಣಸಿನ ನರ್ಸರಿಯಲ್ಲಿ ತೊಡಗಿಕೊಂಡಿದ್ದಾರೆ.ಇವರು ಬೇರೆ ಬೇರೆ ನರ್ಸರಿ ಉದ್ಯಮ ಮಾಡ್ತಾ ಇರುವ ಹಿರಿಯರಿಂದಲೂ ಸಾಕಷ್ಟು ಅನುಭವ ಪಡೆದುಕೊಂಡು ಆ ಕ್ಷೇತ್ರದಲ್ಲಿಯೂ ಮುನ್ನಡೆ ಸಾಧಿಸುತ್ತಾ ಇರುವ ಮಹೇಶ ಹೆಗಡೆಯವರ ಸಾಹಸ, ಪರಿಶ್ರಮವನ್ನು ಮೆಚ್ಚಲೇಬೇಕು.ಅಲ್ಲದೇ, ಬೃಹತ್ ಚಾಲಿ ಸುಲಿಯುವ ಯಂತ್ರವನ್ನು ಅಳವಡಿಸಿಕೊಂಡಿದ್ದು, ಅವಶ್ಯಕತೆ ಇದ್ದವರಿಗೆ ಅಡಿಕೆ ಸುಲಿದು ಕೊಡುತ್ತಾರೆ. ಔಡಾಳ ಸಮೀಪದ ಮಹೇಶ ಹೆಗಡೆ ಅವರ “ಅರಗಿಮನೆ ಕೃಷಿ ತೋಟ” ಎನ್ನುವುದು ಹೊಸದಾಗಿ ಕೃಷಿ ಚಟುವಟಿಕೆ ಶುರು ಮಾಡಿದವರಿಗೆ, ಮಾಹಿತಿ ವಿನಿಮಯ ಮಾಡಿಕೊಳ್ಳುವ ಆಸಕ್ತ ಕೃಷಿಕರಿಗೆ, ಕೃಷಿ ಅಧ್ಯಯನ ಮಾಡುವವರಿಗೆಲ್ಲ ” ಕೃಷಿ ಪಾಠ”ವನ್ನು ಬೋಧನೆ ಮಾಡುವ ಮಾದರಿ ಶಾಲೆಯಾಗಿದೆ ಎಂದರೂ ತಪ್ಪಾಗಲಾರದು.
ಒಬ್ಬ ರೈತ ಆಸಕ್ತಿಯಿಂದ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡರೇ, ತನ್ನ ಸಾಮರ್ಥ್ಯ ದಲ್ಲಿ ಯಾವುದೇಲ್ಲ ಬೆಳೆಗಳನ್ನು ಮಾಡಬಹುದು, ಸುಧಾರಿತ ಪದ್ದತಿಯಲ್ಲಿ ಕೃಷಿ ಕೆಲಸಗಳನ್ನು ಹೇಗೆ ನಿರ್ವಹಿಸಬಹುದು, ಇರುವಷ್ಟೇ ಸಮಯವನ್ನು ಹೊಂದಿಸಿಕೊಂಡು ತಮಗಿರುವ ಭೂಮಿಯಲ್ಲಿಯೇ ಏನೇಲ್ಲ ಕೃಷಿ ಚಟುವಟಿಕೆಗಳನ್ನು ಮಾಡಬಹುದು, ನಮ್ಮಲ್ಲಿನ ಸಂಪನ್ಮೂಲಗಳನ್ನು ಹೇಗೆ ಸದ್ಬಳಕೆ ಮಾಡಿಕೊಳ್ಳಲು ಪ್ರಯತ್ನ ಮಾಡಬಹುದು ಎನ್ನುವುದಕ್ಕೆಲ್ಲ ಅರಗಿಮನೆಯ ಮಹೇಶ ಹೆಗಡೆ ಅವರ ಕೃಷಿ ಚಟುವಟಿಕೆ,ಸಾಧನೆ,ಅವರ ಸಾಹಸಗಳು ಈಗೀನ ಯುವ ಕೃಷಿಕರಿಗೆ ಸ್ಪೂರ್ತಿದಾಯಿಕವಾಗಿದೆ.
ಪಾಲಿ ಹೌಸ್!
ಮಹೇಶ ಹೆಗಡೆ ಅವರು ಈ ವರುಷ ಸುಮಾರು ಹದಿನೈದು ಲಕ್ಷ ವ್ಯಯ ಮಾಡಿ ದೊಡ್ಡದಾದ ಪಾಲಿಹೌಸ್ ನ್ನು ನಿರ್ಮಸಿಕೊಂಡಿದ್ದಾರೆ. ಇದ್ರಲ್ಲಿ ಕೆಂಪು ಅಡಿಕೆ, ಚಾಲಿ, ಕಾಳುಮೆಣಸು…ಇತ್ಯಾದಿ ಒಣಗಿಸಲು ಇದು ಅನುಕೂಲವಾಗಿದೆ.ಬೆಳೆ ಕೊಯ್ಲಿನಲ್ಲಿ ಅಕಾಲಿಕ ಮಳೆ ಸುರಿಯುತ್ತದೆ. ಅಂಥಹ ಆಪತ್ತಿನ ಕಾಲದಲ್ಲಿ ಇದ್ರ ಬಳಕೆ ಬಹಳ ಉಪಯುಕ್ತ. ಇನ್ನು ಪಾಲಿಹೌಸ್ ನ ಒಳಗೆ ಯಾವುದೇ ಕೃಷಿ ಉತ್ಪನ್ನಗಳನ್ನು ಒಣಗಿಸಿದರೇ ಇದ್ರಲ್ಲಿ ಬಹುಬೇಗ ಒಣಗುತ್ತದೆ. ಬಹುಪಯೋಗಿ ಆಗಿರುವ ಈ ಬಿಳಿಮನೆ ನನಗೆ ಅವಶ್ಯಕತೆ ಇರುವುದನ್ನು ಕಂಡೆ ಸಿದ್ದಮಾಡಿಕೊಂಡಿದ್ದೇನೆ. ಬಹುಶಃ ಎಲ್ಲ ರೈತರಿಗೂ ಈ ದಿನದಲ್ಲಿ ಪಾಲಿಹೌಸ್ ದೊಡ್ಡದು ಇಲ್ಲದೇ ಹೋದರೂ ಸಣ್ಣದಾದರೂ ಇದ್ದರೇ ಒಳ್ಳೆಯದು ಎನ್ನುತ್ತಾರೆ ಮಹೇಶ ಹೆಗಡೆ.
ಬಹುಬೆಳೆ ಇರಬೇಕು
ಮಲೆನಾಡಿನ ಕೃಷಿಕರು ಈಗೀಗ ಒಂದಕ್ಕಿಂತ ಹೆಚ್ಚು ಬೆಳೆಗಳನ್ನು ಬೆಳೆಯಲು ಹಿಂದೇಟು ಹಾಕ್ತಾಯಿದ್ದಾರೆ.ಆದರೂ ಅಲ್ಲಲ್ಲಿನ ಕೆಲವೊಂದು ರೈತರು ಅಡಿಕೆಯೊಂದಿಗೆ ಬೇರೆಬೇರೆ ಉಪ ಬೆಳೆಗಳ ಕೃಷಿ ಮಾಡುತ್ತಿದ್ದಾರೆ.ಒಂದೇ ಭೂಮಿಯಲ್ಲಿ ಭಿನ್ನಭಿನ್ನ ಬೆಳೆಗಳು ಇದ್ದರೆ ಅದ್ಕೆ ಬೇಕಾಗುವ ಪೋಷಕಾಂಶ,ನೀರು..ಹೀಗೆ ಎಲ್ಲವನ್ನು ಕೊಟ್ಟು ನಿರ್ವಹಣೆ ಮಾಡುವುದು ಸುಲಭವಾಗುತ್ತದೆ. ಒಂದು ಬೆಳೆಯ ಯೋಗಕ್ಷೇಮ ನೋಡಲು ಹೋದಾಗ, ಇನ್ನೊಂದರ ಬೆಳೆಯ ಬಗ್ಗೆಯೂ ಸ್ವಲ್ಪ ಜಾಗ್ರತೆಯಿಂದ ನೋಡಿ ಆರೈಕೆ ಮಾಡುವುದು ಸುಲಭವಾಗುತ್ತದೆ.ಹಾಗೆ ಬಹುಬೆಳೆ ಇದ್ದಾಗ ಪ್ರತಿಯೊಂದು ಬೆಳೆಯ ಬಗ್ಗೆಯೂ ಸ್ವತಃ ತಿಳಿದುಕೊಂಡು,ಆಯಾ ಬೆಳೆಗಳಿಗೆ ಬೇಕಾಗುವುದನ್ನು ವ್ಯವಸ್ಥಿತವಾಗಿ ಕೊಟ್ಟಾಗ, ಮುಖ್ಯ ಬೆಳೆಯಂತೆ ಉಪ ಬೆಳೆಗಳಿಂದಲೂ ಅಧಿಕ ಉತ್ಪನ್ನ ಪಡೆಯಲು ಸಹಾಯಕವಾಗುತ್ತದೆ.ನಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಬಹುದು.ಇಂದು ಕೇವಲ ಅಡಿಕೆಯೊಂದೆ ಬೆಳೆಯನ್ನು ನಂಬಿಕೊಂಡು ಜೀವನ ಮಾಡುವುದಕ್ಕಿಂತ, ಬಹುಬೆಳೆಯ ಪದ್ದತಿ ಅನುಸರಿಸುವುದು ಎಲ್ಲ ದೃಷ್ಟಿಯಿಂದ ಉತ್ತಮ ಎನ್ನುತ್ತಾರೆ ಅರಗಿನಮನೆಯ ಮಹೇಶ ಹೆಗಡೆ.
ಸವಾಲು ಏದುರಿಸಲೇಬೇಕು.
ಕೇವಲ ಕೃಷಿ ಕಾಯಕದಲ್ಲಿ ಮಾತ್ರ ಸಮಸ್ಯೆ, ಸವಾಲುಗಳಿಲ್ಲ.ಪ್ರತಿಯೊಂದು ಕೆಲಸಗಳಲ್ಲಿಯೂ ತೊಂದ್ರೆ- ತಾಪತ್ರಯ ಇದ್ದೇ ಇರುತ್ತದೆ.ಜೀವನ ಮಾಡಬೇಕು ಹೇಳಾದರೇ ಅವೇಲ್ಲವನ್ನು ಏದುರಿಸುವುದು ಅನಿವಾರ್ಯ. ಆಧುನಿಕ ಪದ್ದತಿಯಲ್ಲಿ ಕೃಷಿ ಕೆಲಸಗಳನ್ನು ಮಾಡಿಕೊಂಡರೇ ಸುಧಾರಿತ ಯಂತ್ರೋಪಕರಗಳನ್ನು ಕೃಷಿ ಕಾಯಕದಲ್ಲಿ ಅಳವಡಿಸಿಕೊಳ್ಳಬಹುದು.ನಾನು ಮೊದಲು ಮೆಣಸಿನ ಬಳ್ಳಿಗೆ ಬೋಡೋ ಸಿಂಪಡಿಸಲು ಟ್ಯಾಕ್ಟರ್ ಮೇಲೆ ದೊಡ್ಡ ಬ್ಯಾರಲ್ ನಲ್ಲಿ ನೀರು ತುಂಬಿಸಿಕೊಂಡು ಅದ್ರಲ್ಲಿ ಬೋಡೋ ಮಿಶ್ರಣ ಮಾಡಿ ತೋಟದ ಏರಿಯ ಅಲ್ಲಲ್ಲಿ ಟ್ಯಾಕ್ಟರ್ ನಿಲ್ಲಿಸಿ ಸ್ಪ್ರೇ ಮಾಡುತ್ತಿದ್ದೆ. ಈಗ ಸಾವಿರ ಲೀಟರ್ ಹಿಡಿಯುವ ಟ್ಯಾಕರ್ ನ್ನೆ ಬಳಕೆ ಮಾಡ್ತಾ ಇರುವುದರಿಂದ ಬೋಡೊ ಮಿಶ್ರಣ ಮಾಡಲು ಹಾಗೂ ಬಳ್ಳಿಗಳಿಗೆ ಸಿಂಪಡಿಸಲು ಬಹಳ ಉಪಯುಕ್ತವಾಗಿದೆ. ಅಲ್ಲದೇ,ನನಗೆ ಸ್ವಂತ ಮಿನಿ ಟ್ಯಾಕ್ಟರ್ ಇರುವುದರಿಂದ ಕೊನೆ ಹೊಡೆಯಲು,ತೆರಕು ಸಾಗಿಸಲು ಸಹಾಯವಾಗಿದ್ದು,ಕಾರ್ಮಿಕರ ಶ್ರಮ ಬಹಳ ಕಡಿಮೆ ಆಗಿದೆ. ಇವೆಲ್ಲ ವ್ಯವಸ್ಥೆ ,ಮನೆಯವರ ಸಹಕಾರ ಇದ್ದರೇ…ಕೃಷಿಯಲ್ಲಿ ಏದುರಾಗುವ ಬಗೆಬಗೆಯ ಕಷ್ಟಗಳನ್ನು ನಾವೇ ಉಪಾಯದಿಂದ ಪರಿಹರಿಸಿಕೊಂಡು,ಆಯಾ ಸಮಯದಲ್ಲಿ ಬರುವ ಸವಾಲುಗಳನ್ನು ಹಿಮ್ಮೆಟ್ಟಿಸಬಹುದು ಎಂದು ಮಹೇಶ ಹೆಗಡೆ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.