spot_img
Tuesday, September 17, 2024
spot_imgspot_img
spot_img
spot_img

ದೇಶಿಯ ತರಕಾರಿ ಬೀಜೋತ್ಪಾದನೆ, ಸಂರಕ್ಷಣೆಯಲ್ಲಿ ಇವರು ಎತ್ತಿದ ಕೈ !

-ರಾಧಾಕೃಷ್ಣ ತೊಡಿಕಾನ, ಪ್ರಸಾದ್ ಶೆಣೈ- ಚಿತ್ರ : ರಾಮ್ ಅಜೆಕಾರ್

ದೇಶದ ಮೂಲೆಮೂಲೆಗಳಲ್ಲಿ ಬೆಳೆಯುವ ವಿವಿಧ ಜಾತಿಯ ತರಕಾರಿ ಬೀಜಗಳನ್ನು ಸಂಗ್ರಹಿಸಿ ತಂದು ತನ್ನ ಕೃಷಿ ಕ್ಷೇತ್ರದಲ್ಲಿ ಬೆಳೆಸಿ ಅದರಿಂದ ಖುಷಿಪಟ್ಟವರು, ದೇಶೀಯ ತರಕಾರಿ ಬೀಜೋತ್ಪಾದನೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಸಂತೃಪ್ತರಾದವರು ಮತ್ತು ಅದರಲ್ಲಿಯೇ ಬದುಕು ಕಟ್ಟಿಕೊಂಡವರು ಅಫ್ತಾಬ್ ಎಂ.ಬಿ ದಂಡಿನಪೇಟೆ

ಕೊಡಗು ಜಿಲ್ಲೆಯ ಕುಶಾಲನಗರದ ದಂಡಿನಪೇಟೆಯ ಅಫ್ತಾಬ್ ಎಂ.ಬಿ ಅವರು ಅಪೂರ್ವವಾದ ದೇಶೀಯ ತರಕಾರಿ ಬೀಜ ಸಂಗ್ರಹಕರು. ಕೃಷಿಗೆ ಉತ್ತಮ ಗುಣಮಟ್ಟದ ಬೀಜ ಮುಖ್ಯ. “ಕ್ಷಿತಿ- ಗವ್ಯಕೃಷಿ” ಸಂಸ್ಥೆ ಹುಟ್ಟು ಹಾಕಿ ಸಾವಯವದಲ್ಲೇ ದೇಶಿಯ ತರಕಾರಿ ಬೀಜಗಳನ್ನು ಉತ್ಪಾದಸುವ ಅವರು ಸಾವಯವ ಕೃಷಿಗೆ ತನ್ನದಾದ ಕೊಡುಗೆ ನೀಡುತ್ತಿದ್ದಾರೆ. ಅಫ್ತಾಬ್ ಅವರ ದೇಶೀ ತರಕಾರಿ ಬೀಜಗಳ ಉತ್ಪಾದನೆಯ ಕೃಷಿಕ್ಷೇತ್ರ ಅನನ್ಯ ತರಕಾರಿ ಹಾಗೂ ಬೀಜಗಳನ್ನು ಅನಾವರಣ ಮಾಡಿದೆ.

ಚಿಕ್ಕಂದಿನಲ್ಲಿ ಗಿಡ ಮರಗಳ ಆಸಕ್ತಿ ಹೊಂದಿದ್ದ ಅವರಿಗೆ ಕೃಷಿಯತ್ತ ಒಲವು ಹರಿದಿತ್ತು. 1990 ರಿಂದ ಬಿತ್ತನೆ ಬೀಜ ತಯಾರಿಯತ್ತ ಗಮನ ಹರಿಸಿದರು. ಆಗ ಅದೆಷ್ಟೂ ನಮೂನೆಯ ತರಕಾರಿಗಳು ಮತ್ತು ಬೀಜಗಳ ಪರಿಚಯವಾಯಿತು. ಒಂದೊAದು ತರಕಾರಿಯಲ್ಲಿಯೂ ಹಲವಾರು ತಳಿ ವೈವಿಧ್ಯತೆಗಳು. ದೇಶಿಯ ಬೀಜ ಸಂಗ್ರಹದ ಆಳಕ್ಕಿಳಿಯುತ್ತಿದ್ದಂತೆ ಈ ತಳಗಳ ಸಂರಕ್ಷಣೆ ವಿಸ್ತರಣೆಗೆ ಪೂರಕವಾಗಿ ಬೀಜೋತ್ಪಾದನೆಗೆ ಮುಂದಾದರು.

ಕೃಷಿಯಲ್ಲಿ ಹೊಸ ಪ್ರಯೋಗಗಳನ್ನು ನಡೆಸಿ ಯಶಸ್ಸು ಕಂಡ ಸುಭಾಸ್ ಪಾಳೆಕರ್ ಅವರನ್ನು ಭೇಟಿಯಾದರು. ಅವರ ಕೃಷಿ ಪದ್ಧತಿಗೆ ಆಕರ್ಷಿತರಾದ ಅಫ್ತಾಬ್ ತನ್ನ ಕೃಷಿಕ್ಷೇತ್ರದಲ್ಲಿ ಸಾವಯವದ ಮೂಲಕವೇ ತರಕಾರಿ ಬೀಜ ಬೆಳೆದು ಸಾವಯವದ ಸಾಧ್ಯತೆಗಳನ್ನು ಸುತ್ತಮುತ್ತ ಪರಿಚಯಿಸಿದರು. ಪಶ್ಚಿಮ ಬಂಗಾಲ, ನಾಗಾಲ್ಯಾಂಡ್, ಛತ್ತೀಸ್‌ಗಡ, ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು, ಕೇರಳ ಸೇೆರಿದಂತೆ ಭಾರತದ ವಿವಿಧಡೆಯಲ್ಲಿ ಇರುವ ಬೇರೆ ಬೇರೆ ತರಹದ ತರಕಾರಿ ಬೀಜ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ ನಾನಾ ತಳಿಯ ತರಕಾರಿ ಬೀಜ ಸಂಗ್ರಹಿಸಿದರು. ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ಹಲವು ಪ್ರಾದೇಶಿಕ ತಳಿಗಳು ಇವರಲ್ಲಿವೆ.

 

8೦೦ಕ್ಕೂ ಮಿಕ್ಕಿದ ತಳಿಗಳ ಸಂಗ್ರಹ

ತರಕಾರಿ ಬೀಜಗಳ ಸಂಗ್ರಹ ಹೆಚ್ಚುತ್ತಲೇ ಇದ್ದು ಇದೀಗ 8೦೦ಕ್ಕೂಮಿಕ್ಕಿ ತರಕಾರಿ ಬೀಜದ ತಳಿಯಿದೆ. 350ಕ್ಕೂ ಹೆಚ್ಚು ತರಕಾರಿ ತಳಿಗಳ ಬಿಜವನ್ನು ಮಾರಾಟ ಮಾಡುತ್ತಿದ್ದಾರೆ. ಬದನೆ ಎಂದ ಕೂಡಲೇ ಪಕ್ಕನೆ ನೆನಪಿಗೆ ಬರುವುದು ಮಟ್ಟುಗುಳ್ಳ. ಅದಕ್ಕೆ ಅದರದೇ ಆದ ಆಸ್ಮಿತೆಯಿದೆ. ಉಳಿದಂತೆ ಸ್ಥಳೀಯವಾದ ಬದನೆ, ಬಳ್ಳಿಯಂತಿರುವ ನಾಳಿ ಬದನೆ, ಸೀಮೆ ಬದನೆ ಸೇರಿದಂತೆ ಎರಡು ಮೂರು ಬಗೆಯ ಬದನೆಗಳು ನಮ್ಮ ನೆನಪಿನಂಗಳದಲ್ಲಿ ಹಾದು ಹೋಗುತ್ತವೆ. ಆದರೆ ಇವರಲ್ಲಿ 213 ಬದನೆ ತಳಿಗಳಿವೆ. 8೦ಕ್ಕೂ ಮಿಕ್ಕಿದ ಬದನೆ ತಳಿಗಳ ಬೀಜಗಳನ್ನು ಮಾರಾಟ ಮಾಡುತ್ತಿದ್ದಾರೆ. ಅದರಲ್ಲೂ ದಪ್ಪದ ಹಗ್ಗದಂತಿರುವ ಹಸಿರು ಹೊರಮೈಯ ಉದ್ದ ಬದನೆ, ಅಲ್ಲದೆ ಮನಾಕರ್ಷಕ ಹಾಗೂ ರುಚಿಕರವಾದ ಹಲವು ಬಗೆಯ ಬದನೆಯಿದೆ. ಮಧ್ಯಪ್ರದೇಶದ ನರ್ಮದಾ ನದಿಯ ತಟದಲ್ಲಿರುವ ಅಪೂರ್ವವಾದ ಬರ್ಮನ್ ಬದನೆಯೂ ಇದೆ. ಒಂದು ಬದನೆ 5ರಿಂದ 1೦ಕೆಜಿಯಷ್ಟು ತೂಕ ಹೊಂದಿರುವುದು ಇದರ ವಿಶೇಷತೆ. ಈ ಬದನೆಯ 2೦ ಬೀಜಗಳ ಒಂದು ಪ್ಯಾಕೆಟ್ಟಿಗೆ 250 ರೂಪಾಯಿ. ದ.ಕ. ಜಿಲ್ಲೆಯ ಉಳ್ಳಾಲ ತಾಲೂಕಿನ ಕೈರಂಗಳದಲ್ಲಿ ನಡೆದ ಕೃಷಿ ಮೇಳದಲ್ಲಿ 5 ಪ್ಯಾಕೆಟ್ ಮಾರಿರುವುದಾಗಿ ಅಫ್ತಾಬ್ ಅಭಿಮಾನದಿಂದ ಹೇಳುತ್ತಾರೆ.

ಈಗೀಗ ಟೊಮೆಟೊ ಬಳಸದ ಸಾರು, ಸಾಂಬಾರು ಕಡಿಮೆ. ಈ ಟೊಮೆಟೊದಲ್ಲೂ 1೦೦ಕ್ಕೂ ಹೆಚ್ಚಿನ ತಳಿಗಳು ಅವರಲ್ಲಿವೆ. 8೦ ತಳಿಯ ಬೀಜವನ್ನು ಮಾರಾಟ ಮಾಡುತ್ತಾರೆ. 14 ತರಹದ ಮೂಲಂಗಿ, 25 ಜಾತಿಯ ಬೆಂಡೆಯಿದೆ. ಮೆಣಸು ಎಂದಾಗ ಅದರ ಖಾರದ ಅನುಭವ ತಿಳಿಯುತ್ತದೆ. ಅತ್ಯಂತ ಖಾರದ ನಾಗಾ ಮೆಣಸು, ದಾವಣಗೆರೆಯ ದೊಡ್ಡ ಖಾರ ಮತ್ತು ಕಡಿಮೆ ಖಾರದ 6೦ ಬಗೆಯ ಮೆಣಸಿನ ತಳಿಯಿದೆ. ಹರಿವೆ, ಹೀರೆ, ಸೋರೆ, ಬೀನ್ಸ್, ಬಸಳೆ, ಪಡವಲ, ಸಿಹಿಕುಂಬಳ (ಚೀನಿಕಾಯಿ, ಕೆಂಬುಡೆ)ಮೊದಲಾದವುಗಳು ಸೇರಿದಂತೆ ವಿವಿಧ ತಳಿಗಳನ್ನು ಬೀಜದ ಉದ್ದೇಶದಿಂದ ಬೆಳಯುತ್ತಾರೆ. ತೊಗರಿ ಬೆಳೆಯೂ ಇಲ್ಲಿ ಪ್ರಾಮುಖ್ಯತೆ ಪಡೆದಿದೆ. 12 ತಳಿಯ ತೊಗರಿ ಬೆಳೆಯುತ್ತಾರೆ.. ಅಲಸಂಡೆ ಕೃಷಿ ಹೆಚ್ಚಿನವರು ಮಾಡುತ್ತಾರೆ. ಒಂದೆರಡು ತಳಿಯ ಅಲಸಂಡೆ ಅವರಿವರಲ್ಲಿ ಇರಬಹುದು.

ಆದರೆ ಅಫ್ತಾಬ್ ಅವರಲ್ಲಿ 2೦ಕ್ಕೂ ಹೆಚ್ಚಿನ ಅಲಸಂಡೆ ತಳಿಯಿದೆ. ಕಪ್ಪು ,ಬಿಳಿ, ಕೆಂಪು ಹಾಗೂ ಬಣ್ಣ ಬಣ್ಣದ ಅಲಸಂಡೆ ಬೀಜಗಳು ಲಭ್ಯವಿವೆ. ಆರಡಿ ಎತ್ತರ ಹಾಗೂ ಎರಡು ಅಡಿ ದಪ್ಪವಿರುವ ಉತ್ತರ ಪ್ರದೇಶ ಮೂಲಂಗಿಯನ್ನು ನೆನಪಿಸುವ ಅವರಲ್ಲಿ ಸುಮಾರು 1೦ ಬಗೆಯ ಮೂಲಂಗಿಯಿದೆ. ಮಹಾರಾಷ್ಟ್ರ ಮೂಲದ ನೆಲಗಡಲೆ ಕೂಡ ಬೆಳೆದಿದ್ದಾರೆ. ಜಗಳೂರು ಮೂಲದ ರಾಗಿಯನ್ನು ಬೆಳೆಯುತ್ತಿದ್ದು ಈ ರಾಗಿ ಬೀಜಕ್ಕೆ ಬೆಂಗಳೂರು ಪರಿಸರದ ಜಿಲ್ಲೆಗಳಲ್ಲಿ ಬೇಡಿಕೆಯಿದೆ. ಪೌಷ್ಟಕಾಂಶಗಳಿಂದ ಕೂಡಿದ ಈ ರಾಗಿ ಕೆಲ ವರ್ಷಗಳ ಕಾಲ ಶೇಖರಿಸಿಟ್ಟರೂ ಹಾಳಾಗಾದು. ಅರಸಿನದಲ್ಲಿಯೂ ನಾನಾ ಬಗೆಯಿದೆ. ಹುರುಳಿಯಲ್ಲಿಯೂ ವಿವಿಧ ತಳಿಯಿದೆ. ಅದಲ್ಲದೆ ವಿದೇಶಿ ಮೂಲದ ತರಕಾರಿ ಬೀಜಗಳಿವೆ

ಶಾಲೆಗಳಲ್ಲಿ ಕೃಷಿ ಪಾಠ ಅಗತ್ಯ

ಶಾಲೆಗಳಲ್ಲಿ ಮಕ್ಕಳಿಗೆ ಬೇರೆ ಬೇರೆ ಪಠ್ಯಗಳಿವೆ ಆದರೆ ತಲೆತಲಾಂತರಗಳಿಂದ ಬಂದ ಕೃಷಿಯ ಬಗ್ಗೆ ಪಠ್ಯವಿಲ್ಲ. ಕೃಷಿ ವಿಷಯಗಳನ್ನು ಪಠ್ಯದಲ್ಲಿ ಸೇರಿಸಿದರೆ ಚಿಕ್ಕ ಮಕ್ಕಳಿಂದಲೇ ಕೃಷಿಯ ಬಗ್ಗೆ ಆಸಕ್ತಿ ಮೂಡುತ್ತದೆ. ಆಹಾರ ಪದಾರ್ಥಗಳ ಉತ್ಪಾದನೆ, ಜೀವವೈವಿಧ್ಯತೆ ಬಗ್ಗೆ ತಿಳಿಯಲು ಸಾಧ್ಯವಾಗುತ್ತದೆ ಎನ್ನುತ್ತಾರೆ ಅಫ್ತಾಬ್. ಈಗ ಕಾರ್ಯ ಚಟುವಟಿಕೆಗಳೆಲ್ಲವೂ ವಿಷಮಯವಾಗುತ್ತಿದೆ. ಬೀಜದಿಂದ ಉತ್ಪಾದನೆಯವರೆಗೆ ರಾಸಾಯನಿಕ ಸುರಿಯಲಾಗುತ್ತದೆ ಅದರಿಂದ ಬೆಳೆದ ಆಹಾರ ಉತ್ಪನ್ನಗಳನ್ನು ದುಡ್ಡು ಕೊಟ್ಟು ತಂದು ತಿಂದಾಗ ನಮಗೆ ನಾವೇ ವಿಷವಿಕ್ಕಿಕೊಂಡಂತಾಗುತ್ತದೆ.

ಈ ರಾಸಾಯನಿಕ, ವಿಷಕಾರಕ ಕೀಟನಾಶಕಗಳು ದೇಶದಿಂದ ದೂರವಾಬೇಕು. ವಿಷ ಹೋಗಬೇಕಾದರೆ ಅದೊಂದು ಆಂದೋಲನವಾಗಬೇಕು ಎಂಬುದು ಅವರ ನಿಲುವು. ವಿಷಮುಕ್ತ ಆಹಾರ ನಮಗೆ ಬೇಕಾದಲ್ಲಿ ಸಾವ ಯುವವೇ ಪರಿಹಾರ. ನಮ್ಮ ಭೂಮಿಯ ಮಣ್ಣನ್ನು ಚೆನ್ನಾಗಿ ನೋಡಿಕೊಳ್ಳಬೇಕಾದುದು ನಮ್ಮ ಜವಾಬ್ದಾರಿ. ಕೃಷಿಕರು ಜ್ಞಾನ- ವಿಜ್ಞಾನ-ತಂತ್ರಜ್ಞಾನಗಳನ್ನು ತಿಳಿದುಕೊಳ್ಳಬೇಕು. ವಾಣಿಜ್ಯೀಕರಣ ಉತ್ಪಾದನೆಯತ್ತ ದೃಷ್ಟಿ ಹರಿಸಿದಾಗ ಸಮಸ್ಯೆಗಳು ತನ್ನಿಂದ ತಾನಾಗಿ ಬರುತ್ತವೆ. ಭಾರತದ ಟೀ ಪುಡಿಗೆ ಲಕ್ಷದ ಮೌಲ್ಯವಿದೆ. ಹಾಲು ಶುಂಠಿ ಮೊದಲಾದವುಗಳ ಉತ್ಪಾದನೆಯಲ್ಲಿ ಭಾರತವು ಅಗ್ರಸ್ಥಾನದಲ್ಲಿದೆ. ನಾನು ಅರಸಿನ, ಶುಂಠಿ ಮೊದಲಾದುವುಗಳನ್ನು ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡಿದ್ದೇನೆ.

ಉತ್ತಮ ಗುಣಮಟ್ಟದ ಸಾವಯವ ಉತ್ಪನ್ನಗಳಿಗೆ ಗ್ರಾಹಕರಿದ್ದಾರೆ. ನಾಟಿ ಬೀಜಗಳಿಂದ ಬೆಳೆದ ಗಿಡಗಳಿಗೆ ರೋಗ ರುಜಿನಗಳು ಕಡಿಮೆ, ರುಚಿ ಹೆಚ್ಚು. ಕೆಲವು ತಳಿಗಳು ಅದ್ಭುತವಾಗಿವೆ. ಮಂಗಳೂರಿನ ಮುಳ್ಳು ಸೌತೆಗೆ ಭಾರಿ ಬೇಡಿಕೆ ಇದೆ. ಆಯಾ ಪ್ರದೇಶಕ್ಕೆ ಹೊಂದಿಕೊಂಡಂತೆ ಕೆಲವು ತರಕಾರಿ ಬೆಳೆಗಳು ಇವೆ. ಎನ್ನುತ್ತಾರೆ ಅಫ್ತಾಬ್. ಇವರ ಬೆಳೆಗಳಿಗೆ ಜೀವಾಮೃತವೇ ಮುಖ್ಯ ಆಹಾರ. ರೋಗಗಳು ಹೆಚ್ಚು ಕಾಡದಂತೆ ಚೆಂಡು ಹೂವಿನ ಮೊರೆ ಹೋಗಿದ್ದಾರೆ. ಹುಳಿ ಮಜ್ಜಿಗೆ, ಅಗ್ನಿ ಅಸ್ತ್ರವನ್ನೂ ಬಳಕೆ ಮಾಡುತ್ತಾರೆ.

ಆಳುಕಾಳುಗಳನ್ನು ಅವಲಂಭಿಸಿಲ್ಲ

ವಿವಿಧ ತರಕಾರಿ ಬೀಜ ಉತ್ಪಾದನೆ, ಸಂರಕ್ಷಣೆ ಕೆಲಸಕ್ಕೆ ಅವರು ಆಳು ಕಾಳುಗಳನ್ನು ಅವಲಂಬಸಿಲ್ಲ. ಅವರೊಬ್ಬರೇ ಈ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಯಂತ್ರೋಪಕರಣಗಳನ್ನು ಬಳಸಿಕೊಳ್ಳುತ್ತಾರೆ. ತನ್ನ ಅನ್ನ ತಾನೇ ಸೃಷ್ಟಿಸಿಕೊಳ್ಳಬೇಕೆಂಬ ಹಂಬಲ. ಆದ್ದರಿಂದ ತಾನೇ ಎಲ್ಲವನ್ನು ನಿರ್ವಹಿಸುತ್ತಾರೆ. ಬಹಳಷ್ಟು ಕೃಷಿಕರಿಗೆ ರಾಸಾಯನಿಕ ಗೊಬ್ಬರ ಬಳಸಿ ಹೆಚ್ಚು ಇಳುವರಿ ಪಡೆಯಬಹುದೆಂಬ ಭ್ರಮೆ ಇದೆ. ಆದರೆ ಸಾವಯುವದಲ್ಲಿ ಅದಕ್ಕಿಂತ ಅಧಿಕ ಇಳುವರಿ ಪಡೆಯಬಹುದು. ಮಣ್ಣನ್ನು ಆರೋಗ್ಯಪೂರ್ಣವಾಗಿ ನೋಡಿಕೊಳ್ಳಬೇಕು. ಕೃಷಿಯಲ್ಲಿ ನೀರು-ನಿರ್ವಹಣೆ ಅದಕ್ಕೆ ಪೂರಕವಾದ ಆಹಾರ (ಗೊಬ್ಬರ) ನೀಡುವುದು ಮುಖ್ಯವಾಗುತ್ತದೆ. ಉತ್ತಮವಾದುದನ್ನು ನೀಡಿದರೆ ಜನರು ಸ್ವೀಕರಿಸುತ್ತಾರೆ. ನಾವು ಅವರನ್ನು ತಲುಪಬೇಕು. ಎಂಬುದಕ್ಕೆ ಅವರು ಸಾಕ್ಷಿಯಾಗಿದ್ದಾರೆ

ತಲೆತಲಾಂತರದಿಂದ ಬಂದ ಹಳೆಯ ಎಲ್ಲಾ ಪದ್ಧತಿಯನ್ನು ಮುಂದುವರಿಸಿಕೊಂಡು ಹೋಗುವಂತೆ ಹೇಳುತ್ತಿಲ್ಲ. ಆದರೆ ತಮ್ಮ ಪ್ರಯೋಗ ಹಾಗೂ ಜ್ಞಾನದ ಅನುಭವದಿಂದ ಹಳೆಯ ಪದ್ಧತಿಗಳಲ್ಲಿ ಸುಧಾರಣೆಯೊಂದಿಗೆ ಜ್ಞಾನ -ವಿಜ್ಞಾನ -ತಂತ್ರಜ್ಞಾನದ ಅರಿವು ಇರಬೇಕು. ರೋಗ ನಿವಾರಣೆಗೆ ಕೀಟನಾಶಕವನ್ನೇ ಅವಲಂಬಿಸಬೇಕಾಗಿಲ್ಲ. ಹಾನಿಕಾರಕವಲ್ಲದ ದೇಶಿಯವಾದ ರೋಗನಿರೋಧಕ ಕಷಾಯ ಔಷಧಿಗಳಿವೆ. ಅವುಗಳಿಂದಲೇ ಕೃಷಿ ಸಾಧ್ಯವೆನ್ನುತ್ತಾರೆ. ಇವರು ಮಾರಾಟ ಮಾಡುವ ತರಕಾರಿ ಬೀಜದ ಪ್ಯಾಕೇಟಿನಲ್ಲಿ ಇಪ್ಪತ್ತು ಬೀಜಗಳಿರುತ್ತವೆ. ಪ್ಯಾಕೇಟ್ ಒಂದಕ್ಕೆ 150 ರೂಪಾಯಿ ನಿಗದಿ ಪಡಿಸಿದ್ದಾರೆ. ಸಂಸ್ಕರಣೆ ಮತ್ತು ಮಾರುಕಟ್ಟೆ ನಿರ್ವಹಣೆಯ ಜವಾಬ್ದಾರಿಯೂ ಅವರದೇ. ತರಕಾರಿ ಬೀಜಗಳಿಗೆ ದೇಶದ ವಿವಿಧ ಮೂಲೆಗಳಿಂದ ಬೇಡಿಕೆಯಿದೆ. ಅಂತರ್ ರಾಷ್ಟ್ರೀಯ ಮಟ್ಟದಲ್ಲೂ ಗ್ರಾಹಕರಿದ್ದಾರೆ. ಅಮೇರಿಕಾಕ್ಕೂ ತರಕಾರಿ ಬೀಜ ಕಳುಹಿಸಿಕೊಟ್ಟಿದ್ದಾರೆ. ಪೂನಾದ ಅವಿನಾಶ್ ಗುನೇ, ಬೆಂಗಳೂರಿನ ಭರತ್ ಹಾಗೂ ಇತರ ಹಲವಾರು ಮಂದಿ ಸಹಾಯ, ಸಹಕಾರ ಪ್ರೋತ್ಸಾಹ ನೀಡುತ್ತಿರುವುದನ್ನು ನೆನಪಿಸಿಕೊಳ್ಳುತ್ತಾರೆ. ಪಾಳೇಕರ್ ಅವರು ಅಫ್ತಾಬ್ ಅವರ ತಳಿ ಸಂಗ್ರಹದ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಮಾಹಿತಿಗೆ ಮೊ: 8762221001

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group