spot_img
Monday, October 13, 2025
spot_imgspot_img
spot_img

ಲಂಟಾನಾ – ಕಳೆಗಿಡದ ಕಾಂಡದಿಂದ ಬಗೆಬಗೆಯ ಪೀಠೋಪಕರಣಗಳು!

-ಅಡ್ಡೂರು ಕೃಷ್ಣ ರಾವ್

ದಕ್ಷಿಣ ಭಾರತದ ಹಲವೆಡೆಗಳಲ್ಲಿ ಕಂಡು ಬರುವ ಆಕ್ರಮಣಕಾರಿ ಕಳೆಗಿಡ ಲಂಟಾನಾ. ದಕ್ಷಿಣ ಅಮೇರಿಕಾ ಮೂಲದ ಇದನ್ನು 19ನೇ ಶತಮಾನದಲ್ಲಿ ಅಲಂಕಾರಿಕ ಗಿಡವಾಗಿ ಭಾರತಕ್ಕೆ ತಂದವರು ಬ್ರಿಟಿಷರು. ಇದೀಗ ಪಶ್ಚಿಮ ಘಟ್ಟಗಳ ಶೇಕಡಾ 40ರಷ್ಟು ಭಾಗದಲ್ಲಿ ಹಬ್ಬಿದೆ!

ಜನವರಿ 2022ರಲ್ಲಿ “ಭಾರತದ ಅರಣ್ಯ ಸ್ಥಿತಿಗತಿ ವರದಿ 2021” ಬಿಡುಗಡೆಯಾಗಿದೆ. ಅದರಲ್ಲಿ ನಮ್ಮ ದೇಶದ 29 ಆಕ್ರಮಣಕಾರಿ ಸಸ್ಯಗಳ ರಾಜ್ಯವಾರು ಮಾಹಿತಿ ಮೊದಲ ಬಾರಿ ಪ್ರಕಟವಾಗಿದೆ. ಅದರ ಅನುಸಾರ, 9,793 ಚದರ ಕಿಮೀ ಪ್ರದೇಶದಲ್ಲಿ (ಸಿಕ್ಕಿಂನಷ್ಟು ವಿಸ್ತಾರ ಪ್ರದೇಶ) ಲಂಟಾನಾ ಹಬ್ಬಿದೆ. ಇದರಲ್ಲಿ ಅತ್ಯಧಿಕ ಪ್ರದೇಶ(2,852 ಚ. ಕಿಮೀ) ಮಧ್ಯಪ್ರದೇಶದಲ್ಲಿದ್ದರೆ, ಕರ್ನಾಟಕದಲ್ಲಿ ಲಂಟಾನಾ ಬಾಧಿತ ಪ್ರದೇಶ (1,432 ಚ. ಕಿಮೀ) ಎರಡನೇ ಸ್ಥಾನದಲ್ಲಿದೆ. ಎಲ್ಲ 28 ಆಕ್ರಮಣಕಾರಿ ಸಸ್ಯಗಳು ವ್ಯಾಪಿಸಿರುವ ಒಟ್ಟು ಪ್ರದೇಶದಲ್ಲಿ ಬಹುಪಾಲು ಪ್ರದೇಶವನ್ನು (11,975 ಚ. ಕಿಮೀ) ಲಂಟನಾ ಕಬಳಿಸಿದೆ.

ಲಂಟಾನಾ (ಸಸ್ಯಶಾಸ್ತ್ರೀಯ ಹೆಸರು ಲಂಟಾನಾ ಕಮರಾ) ದಕ್ಷಿಣ ಭಾರತದಲ್ಲಿ ವೇಗವಾಗಿ ಹಬ್ಬುತ್ತಿದೆ. ಅಶೋಕಾ ಟ್ರಸ್ಟ್ ಫಾರ್ ರೀಸರ್ಚ್ ಇನ್ ಇಕಾಲಜಿ ಆಂಡ್ ಎನ್ವಿರಾನ್ಮೆಂಟ್ (ಅತ್ರೀ) ಎಂಬ ಲಾಭರಹಿತ ಸಂಸ್ಥೆ ನಡೆಸಿದ ಒಂದು ಅಧ್ಯಯನ ಇದನ್ನು ಖಚಿತಪಡಿಸಿದೆ. ಅದರ ಅನುಸಾರ, ಬಿಳಿಗಿರಿ ರಂಗನ ಬೆಟ್ಟಗಳ “ಹುಲಿ ಸಂರಕ್ಷಣಾ ಅರಣ್ಯ”ದಲ್ಲಿ 1997ರಲ್ಲಿ ಶೇ. 96 ಪ್ರದೇಶದಲ್ಲಿ ಸ್ಥಳೀಯ ಸಸ್ಯಜಾತಿಗಳಿದ್ದು, ಶೇ. 4 ಪ್ರದೇಶದಲ್ಲಿ ಲಂಟಾನಾ ಇತ್ತು; 2018ರಲ್ಲಿ ಸ್ಥಳೀಯ ಸಸ್ಯ ಜಾತಿಗಳಿರುವ ಪ್ರದೇಶ ಶೇ. 53ಕ್ಕೆ ಇಳಿಕೆಯಾಗಿದ್ದರೆ, ಲಂಟಾನಾ ಆಕ್ರಮಿತ ಪ್ರದೇಶ ಶೇ. 47ಕ್ಕೆ ಏರಿಕೆಯಾಗಿತ್ತು.

ಲಂಟಾನಾ ಆಕ್ರಮಣದಿಂದಾಗಿ ಅರಣ್ಯವಾಸಿಗಳಿಗೆ ಜೀವನೋಪಾಯಕ್ಕೇ ಸಂಕಟ ಎದುರಾಗಿದೆ. ಯಾಕೆಂದರೆ ಅವರು ಅರಣ್ಯ ಉತ್ಪನ್ನಗಳನ್ನು (ಮೋಪಿನ ಹೊರತಾಗಿ) ಸಂಗ್ರಹಿಸುವ ಅರಣ್ಯ ಪ್ರದೇಶದ ವ್ಯಾಪ್ತಿ ಕುಂಠಿತವಾಗುತ್ತಾ ಸಾಗಿದೆ.

ಉದಾಹರಣೆಗೆ, ಸೋಲಿಗರ ಸಮುದಾಯ. ಇವರ ಪಡಿಪಾಟಲನ್ನು ಕಂಡ ಅತ್ರೀ ಸಂಸ್ಥೆ ಇವರ ಸಮಸ್ಯೆಗೆ ಸ್ಪಂದಿಸಿದೆ. ಲಂಟಾನಾ ಕರಕುಶಲ ಕೇಂದ್ರವನ್ನು ಸ್ಥಾಪಿಸಿದೆ. ಇದು ಮಲೆಮಹದೇಶ್ವರ ಬೆಟ್ಟದ ಸೋಲಿಗ ಕರಕುಶಲ ವ್ಯಕ್ತಿಗಳ ನೋಂದಾಯಿತ ಕಿರುಉದ್ಯಮ. ಈ ವರೆಗೆ 650 ಸೋಲಿಗರಿಗೆ ಕರಕುಶಲ ಕಲೆಯ ತರಬೇತಿ ನೀಡಿದೆ. ಇವರಲ್ಲಿ ಶೇ. 40 ಮಹಿಳೆಯರು. ಲಂಟಾನಾದ ಪೀಠೋಪಕರಣಗಳನ್ನು ತಯಾರಿಸಿ ಮಾಸ್ಟರ್ ಕುಶಲಕರ್ಮಿಗಳು ತಿಂಗಳಿಗೆ ರೂ. 25,000 ಮತ್ತು ಕುಶಲಕರ್ಮಿಗಳು ತಿಂಗಳಿಗೆ ರೂ. 8,000ದಿಂದ ರೂ.10,000 ಆದಾಯ ಗಳಿಸುತ್ತಿದ್ದಾರೆ.

ಲಂಟಾನಾದ ಕಾಂಡಗಳು ಬಿದಿರಿನಂತೆಯೇ ಇವೆ. ಅವು ಗಟ್ಟಿಯಾಗಿದ್ದು, ಭಾರವನ್ನು ತಡೆಯಬಲ್ಲವು; ಗೆದ್ದಲು ನಿರೋಧ ಗುಣವನ್ನೂ ಹೊಂದಿವೆ. ಇವುಗಳನ್ನು ಬಾಗಿಸಿ ಸೋಲಿಗ ಕುಶಲಕರ್ಮಿಗಳು ಕುರ್ಚಿ, ಟೀಪಾಯ್, ಸ್ಟೂಲ್, ಬುಟ್ಟಿ, ಇತ್ಯಾದಿ ಪೀಠೋಪಕರಣ ಹಾಗೂ ಆನೆಯ ಪ್ರತಿರೂಪ ಇತ್ಯಾದಿ ಕಲಾಕೃತಿಗಳನ್ನು ರಚಿಸುತ್ತಿದ್ದಾರೆ.

ಕಾಡಿನಲ್ಲಿ ಬೆಳೆದ ಲಂಟಾನಾ ಗಿಡಗಳನ್ನು ಕಡಿದು ಅದರ ಕಾಂಡಗಳನ್ನು ಕುಶಲಕರ್ಮಿಗಳು ಹೊತ್ತು ತರುತ್ತಾರೆ. ಅನಂತರ 24 ಗಂಟೆಗಳೊಳಗೆ ಕಾಂಡಗಳನ್ನು ಲೋಹದ ಡ್ರಮ್‌ನಲ್ಲಿ 3ರಿಂದ 4 ತಾಸು ಬೇಯಿಸುತ್ತಾರೆ. ಇದರಿಂದ ಕಾಂಡಗಳ ಸಿಪ್ಪೆ ಸುಲಿಯುವ ಕೆಲಸ ಸುಲಭವಾಗುತ್ತದೆ. ತದನಂತರ ಕಾಂಡಗಳನ್ನು ಬೇಕಾದ ಆಕಾರಕ್ಕೆ ಬಾಗಿಸಿ, ಪೀಠೋಪಕರಣಗಳನ್ನು ತಯಾರಿಸುತ್ತಾರೆ. ಆದರೆ, ದಿನ ಸರಿದಂತೆ, ಸೋಲಿಗರು ಲಂಟಾನಾ ಕಾಂಡಗಳನ್ನು ಸಂಗ್ರಹಿಸಲು ಕಾಡಿನಲ್ಲಿ ಇನ್ನಷ್ಟು ದೂರಕ್ಕೆ ಹೋಗಬೇಕಾಗುತ್ತಿದೆ. ತಯಾರಿಸಿದ ಪೀಠೋಪಕರಣಗಳನ್ನು ಹತ್ತಿರದ ನಗರಕ್ಕೆ ಸಾಗಿಸುವ ವೆಚ್ಚವೂ ಹೆಚ್ಚುತ್ತಿದೆ.


ಅದೇನಿದ್ದರೂ, ಲಂಟಾನಾ ಗಿಡದ ಶೇ.20 ಮಾತ್ರ (ಕಾಂಡ) ಪೀಠೋಪಕರಣಗಳ ತಯಾರಿಗೆ ಬಳಕೆಯಾಗುತ್ತಿದೆ. ಉಳಿದ ಭಾಗಗಳಿಂದ ಪಾರ್ಟಿಕಲ್ ಬೋರ್ಡ್ ತಯಾರಿಸುವ ಬಗ್ಗೆ ಸಂಶೋಧನೆಗಳು ಜರಗುತ್ತಿವೆ. ಲಂಟಾನಾ ಗಿಡಗಳ ಇತರ ಭಾಗಗಳನ್ನೂ ಬಳಸಿದರೆ ಮಾತ್ರ ಅರಣ್ಯಗಳಲ್ಲಿ ಲಂಟಾನಾ ಗಿಡಗಳ ಆಕ್ರಮಣ ನಿಯಂತ್ರಿಸಲು ಸಾಧ್ಯವಾಗಬಹುದು. ಎಲ್ಲದಕ್ಕಿಂತ ಮುಖ್ಯವಾಗಿ, ಅರಣ್ಯ ಪ್ರದೇಶಗಳಲ್ಲಿ ಸ್ಥಳೀಯ ಸಸ್ಯಜಾತಿಗಳ ಪುನರುಜ್ಜೀವನ ಆಗಲೇ ಬೇಕಾಗಿದೆ. ಅದಕ್ಕಾಗಿ, ಈಗಾಗಲೇ ಆಕ್ರಮಣ ಮಾಡಿರುವ ಲಂಟಾನಾ ಗಿಡಗಳನ್ನು ನಿರ್ಮೂಲ ಮಾಡಬೇಕಾಗಿದೆ. ಈ ಕೆಲಸಕ್ಕೆ ಹೆಕ್ಟೇರಿಗೆ ರೂ.15,000ದಂತೆ ಮುಂದಿನ 20 ವರುಷಗಳಲ್ಲಿ ಸುಮಾರು ರೂ. 2,000 ಕೋಟಿ ವೆಚ್ಚವಾದೀತು. ಇಷ್ಟು ದೊಡ್ಡ ಮೊತ್ತವನ್ನು ಹೊಂದಿಸಲಿಕ್ಕಾಗಿ, ಲಂಟಾನಾದ ಪೀಠೋಪಕರಣಗಳನ್ನು ಜನಪ್ರಿಯವಾಗಿಸುವ ಮತ್ತು ಅರಣ್ಯ ಆಧಾರಿತವಾಗಿ ಜೀವಿಸುತ್ತಿರುವ ಇತರ ಸಮುದಾಯಗಳನ್ನೂ ಈ ಕಾಯಕದಲ್ಲಿ ತೊಡಗಿಸುವ ಕಾರ್ಯಕ್ರಮಗಳನ್ನು ಜ್ಯಾರಿಗೊಳಿಸಬೇಕಾಗಿದೆ.

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group