spot_img
Wednesday, January 22, 2025
spot_imgspot_img
spot_img
spot_img

ನೀವು ಜೇನು ಕೃಷಿ ಮಾಡುವವರೇ?ಯಶಸ್ವಿ ಜೇನು ಕೃಷಿಕರಾಗಬೇಕೆಂದರೆ ರಾಣಿ ಜೇನಿನ ಈ ಗುಣಗಳನ್ನು ತಿಳಿದುಕೊಳ್ಳಲೇಬೇಕು


ಒಂದು ಜೇನು ಕುಟುಂಬಕ್ಕೆ ಒಂದೇ ರಾಣಿ ದೇಶಕ್ಕೆ ಒಬ್ಬನೇ ಪ್ರಧಾನಿ ಇದ್ದಂತೆ. ಒಳ್ಳೆಯ ಪ್ರಧಾನಿಯಿಂದ ದೇಶ ಅಭಿವೃದ್ಧಿ. ಒಳ್ಳೆಯ ರಾಣಿಯಿಂದ ಜೇನು ಕುಟುಂಬ ಅಭಿವೃದ್ಧಿಯಾಗಿ ಹೆಚ್ಚಿನ ಜೇನು ಇಳುವರಿ ಪಡೆಯಬಹುದು. ಜೇನು ಕುಟುಂಬ ಎನ್ನುವುದು ಒಂದು ಬೃಹತ್ ಕಾರ್ಖಾನೆ ಇದ್ದಂತೆ. ಅಲ್ಲಿ ಅಧಿಕಾರಿ ಮಾರ್ಗಸೂಚಕ. ಇಲ್ಲಿ ರಾಣಿನೊಣ ಮಾರ್ಗ ನಿಯಂತ್ರಕಿ. ಒಳ್ಳೆಯ ಮಾರ್ಗದಲ್ಲಿ ಅಪಘಾತವಿಲ್ಲದೇ ವಾಹನ ಓಡಿಸಬಹುದು. ರಸ್ತೆ ಕೆಟ್ಟರೆ ಅಪಾಯ ಕಟ್ಟಿಟ್ಟಬುತ್ತಿ. ಜೇನುಕೃಷಿಯಲ್ಲಿ ಕೃಷಿಕರಿಗೆ ರಾಣಿ ಜೀವನದ ಬಗ್ಗೆ ಅರಿವಿರಲೇಬೇಕು. ನೂರಾರು ಜೇನುಕುಟುಂಬಗಳನ್ನು ಸಾಕುವ ಮಂದಿಗೆ ಅಂತೂ ರಾಣಿಯ ಬಗ್ಗೆ ಸರಿಯಾದ ಮಾಹಿತಿ ಅಗತ್ಯ

ನೈಸರ್ಗಿಕವಾಗಿ ಬೆಳೆದು ಜನ್ಮಕ್ಕೆ ಬಂದ ರಾಣಿ ನೊಣದ ಆಯುಷ್ಯ ಮೂರರಿಂದ ನಾಲ್ಕು ವರ್ಷ ಕಾಲ. ಈ ಸಂದರ್ಭದಲ್ಲಿ ಎರಡರಿಂದ ಮೂರು ವರ್ಷ ಹೆಚ್ಚು ಮೊಟ್ಟೆಗಳನ್ನಿಟ್ಟು ಸಂಸಾರದ ಸಂಖ್ಯೆ ಹೆಚ್ಚಾಗಿ ಕುಟುಂಬ ಸದೃಢವಾಗಿರುತ್ತದೆ. ಹೊಸ ರಾಣಿ ಜನ್ಮಕ್ಕೆ ಬಂದ ಎರಡನೇ ವರ್ಷಕ್ಕೆ ಮತ್ತೆ ಹೊಸ ರಾಣಿಗಳ ಜನನವಾಗುತ್ತದೆ. ಆಗ ಹಿಂದಿನ ವರ್ಷದ ರಾಣಿನೊಣ ಮರಿ ಮಕ್ಕಳ ಜೊತೆಗೆ ಮಗಳಿಗೆ ಮನೆ ಬಿಟ್ಟು ಹೊಸ ಮನೆ ಸೇರುತ್ತದೆ. ಕುಟುಂಬ ಮತ್ತಷ್ಟು ಬಲಯುತವಾದರೆ ಇನ್ನೊಮ್ಮೆ ಹೊಸದಾಗಿ ಬಂದ ರಾಣಿ ತಂಗಿಗೆ ಮನೆಬಿಟ್ಟು ಇತರ ಕೆಲಸಗಾರರ ಮರಿಗಳೊಂದಿಗೆ ಹೊಸಮನೆ ಸೇರಬಹುದು. ಇದನ್ನು ಕೃಷಿಕ ಅರಿತಿರುವುದು ಅತಿ ಅಗತ್ಯ.


ಪೂರ್ತಿ ಜೇನು ಕುಟುಂಬದಲ್ಲಿ ರಾಣಿ ಒಬ್ಬಳೇ ಇದ್ದರೂ ಸಾವಿರಾರು ಕೆಲಸಗಾರ ನೊಣಗಳು ಇರುತ್ತವೆ. ಈ ಕೆಲಸಗಾರ ನೊಣಗಳೇ ಜೇನು ಕುಟುಂಬದ ಎಲ್ಲ ರೀತಿಯ ವೈವಿಧ್ಯಮಯ ಕೆಲಸಗಳನ್ನು ನಿರ್ವಹಿಸುವ ಕಾರ್ಮಿಕರು. ಕಾರ್ಮಿಕರಿಲ್ಲದೆ ಕಾರ್ಖಾನೆ ಇಲ್ಲ. ಕಂಪ್ಯೂಟರ್‌ಗಳು ಕಾರ್ಮಿಕರ ಕೆಲಸವನ್ನು ಸರಳಗೊಳಿಸಬಹುದೇ ಹೊರತು ಅವರಿಲ್ಲದೆ ಏನೂ ಆಗದು. ಜೇನು ಕುಟುಂಬದ ಕೆಲಸಗಾರ ನೊಣಗಳು ನಿರಂತರ ಕನ್ಯೆಯರು. ಅಪೂರ್ಣ ಬೆಳೆದ ಹೆಣ್ಣು ನೊಣಗಳು. ಇವುಗಳ ಆಯುಷ್ಯವೂ ಕಡಿಮೆ. ಒತ್ತಡದ ಕೆಲಸ ಕಾರ್ಯಗಳಿದ್ದರೂ ಮೂರು ತಿಂಗಳಲ್ಲೇ ಸಾಯಬಹುದು. ಒತ್ತಡ ಕಡಿಮೆ ಇದ್ದರೆ (ಮಳೆಗಾಲ) ನಾಲ್ಕು ತಿಂಗಳು ಪೂರ್ತಿ ಬದುಕು. ಪೂರ್ತಿ ಕುಟುಂಬದ ಎಲ್ಲಾ ಕೆಲಸ ಕಾರ್ಯಗಳೂ ಇವುಗಳ ನಿಯಂತ್ರಣಕ್ಕೆ ಒಳಪಟ್ಟಿರುವುದು ವಿಶೇಷ. ಸ್ವಚ್ಛತೆ, ರಕ್ಷಣೆ, ಪರಾಗ ಸಂಗ್ರಹ, ಮಧು ಸಂಗ್ರಹ, ಆಹಾರ ವಿತರಣೆ ಇತ್ಯಾದಿ ಕೆಲಸಗಳು ಪ್ರಾಯವಾದ ಎಲ್ಲಾ ನೊಣಗಳ ವಿಭಿನ್ನ ಹಂಚಿಕೆಯಿಂದ ನೆರವೇರಿದರೆ ಮರಿಗಳು ಎರಿಕಟ್ಟುವುದು, ಆಹಾರ ಸಂಗ್ರಹಿಸಿ ಬಂದ ನೊಣಗಳಿಂದ ಸ್ವೀಕರಿಸಿ ಎರಿಗಳಿಗೆ ತುಂಬುವ ಕೆಲಸಗಳನ್ನು ಮಾಡುತ್ತವೆ. ಇದು ಒಂದು ರೀತಿಯಲ್ಲಿ ಒಂದು ಸುಸಜ್ಜಿತ ಕಾರ್ಖಾನೆಯ ಕಾರ್ಮಿಕರ ಕೆಲಸದಂತೆ. ಆಸ್ಪತ್ರೆಯ ಸಿಬ್ಬಂದಿಗಳ ಕೆಲಸದಂತಲ್ಲವೇ? ಇದನ್ನೆಲ್ಲಾ ತನ್ನ ಅಮೋಘ ಶಕ್ತಿಯ ವಸ್ತುಸಾರ ದ್ರವ (ಪೆರಮೊನ್)ದ ಮೂಲಕ ರಾಣಿ ನೊಣ ನಿಯಂತ್ರಿಸುತ್ತದೆ. ಇದು ಪರೋಕ್ಷ ನಿಯಂತ್ರಿತ ಕೇಂದ್ರದಂತೆ.

ರಾಣಿನೊಣ ಆಕಸ್ಮಿಕವಾಗಿ ಮರಣ ಹೊಂದಿದರೆ ಹೊಸ ರಾಣಿಯನ್ನು ಪಡೆಯಲು ತಮ್ಮಿಂದಾದ ಎಲ್ಲಾ ಪ್ರಯತ್ನವನ್ನು ಕೆಲಸಗಾರ ನೊಣಗಳು ಕೈಗೊಳ್ಳುತ್ತವೆ. ಒಂದು ವೇಳೆ ಈ ಪ್ರಯತ್ನದಲ್ಲಿ ಅವು ಸಫಲವಾದರೆ ಗೂಡಿನ ಎಲ್ಲಾ ಕಾರ್ಯಚಟುವಟಿಕೆಗಳು ನಿಯಂತ್ರಣಕ್ಕೆ ಬರುತ್ತವೆ. ಹೊಸ ರಾಣಿ ಕೋಶದಿಂದ ಹೊರಗೆ ಬಂದು ಆರೇಳು ದಿನಗಳಲ್ಲಿ ಗಂಡಿನ ಸಂಪರ್ಕಕ್ಕೆ ಹೊರಹೋದಾಗ ಗಂಡು ನೊಣಗಳು ಸಿಗದಿದ್ದರೆ ಅದು ಬಂಜೆಯಾಗುವುದಿಲ್ಲ. ಬದಲಿಗೆ ಶಿಖಂಡಿ ನೊಣಗಳಿಗೆ ಜನ್ಮ ನೀಡುತ್ತದೆ. ಜೇನು ಕುಟುಂಬದ ಕೆಲಸಗಾರ ನೊಣಗಳು ರಾಣಿ ಇಲ್ಲದೆ ಹೆಚ್ಚುದಿನ ದೈನಂದಿನ ಕೆಲಸ ಕಾರ್ಯ ನಿರ್ವಹಿಸಲಾರವು. ಕಾರಣ ಪೆರಮೊನ್(ವಸ್ತುಸಾರ) ಅಲಭ್ಯತೆ. ಈ ಸಂದರ್ಭದಲ್ಲಿ ಜೇನು ಕುಟುಂಬದ ಹಿರಿಯ ನೊಣಗಳು ಹುಚ್ಚು ಹಿಡಿದವರಂತೆ ಗೂಡಿನ ಹೊರಗೆ ಬಂದು ಗಾಳಿಯಲ್ಲಿ ಕುಳಿತಿರುತ್ತವೆ. ಯಾವುದೇ ಕೆಲಸ ಮಾಡುವ ಆಲೋಚನೆ ಅವುಗಳಿಗಿಲ್ಲ.ಬಳಿಕ ನಾಲ್ಕೈದು ದಿನಗಳಲ್ಲಿ ಆಹಾರದ ಬದಲಾವಣೆಯಿಂದ ಆಂಡಾಶಯ ಬೆಳೆದು ಗೂಡಿಗೆ ಹೋಗಿ ಒಂದೇ ಕಣದಲ್ಲಿ ನಾಲ್ಕೈದು ಮೊಟ್ಟೆಯಿಡುತ್ತವೆ. ಆಹಾರ ಹಂಚುವ ನೊಣಗಳು ರಾಣಿಗೆಂದು ತಯಾರಿಸಿದ ಪರಾಗ ಮಿಶ್ರಿತ ಜೇನನ್ನು ಈ ನೊಣಗಳಿಗೆ ಹಂಚಿರುವುದೇ ಈ ರೀತಿಯ ಅನರ್ಥಕ್ಕೆ ಮುಖ್ಯ ಕಾರಣ.

ದಿನಗಳೆದಂತೆ ಇತರ ಪ್ರಾಯಭರಿತ ನೊಣಗಳು ಇವುಗಳ ಸಾಲಿಗೆ ಸೇರುತ್ತವೆ. ರಾಣಿ ಇಲ್ಲದಾಗ ಕೊನೆಯ ಸಂದರ್ಭದಲ್ಲಿ ಹುಟ್ಟಿಕೊಂಡ ಮರಿ ನೊಣಗಳು ಗೂಡಿನಿಂದಲೇ ಹೊರಬಂದು ಆಕಾಶದಲ್ಲಿ ಹಾರಾಡುವ ಕುಟುಂಬಗಳ ಜೊತೆ ಸೇರಿಕೊಳ್ಳುವುದೂ ಇದೆ. ಪಕ್ಕದಲ್ಲಿ ಬೇರೆ ಕುಟುಂಬ ಗಳಿದ್ದರೆ ಸ್ವಲ್ಪ ಹೊತ್ತು ಅಂದರೆ ಹತ್ತು ನಿಮಿಷ ಬಿಟ್ಟು ಆ ಕುಟುಂಬಕ್ಕೆ ಸೇರಿಕೊಳ್ಳುವುದು ನಡೆಯುತ್ತದೆ. ಗಾಳಿಯಲ್ಲಿ ಹಾರಾಡಿದಾಗ ಅವುಗಳ ಮೈ ವಾಸನೆ ಗಾಳಿಯಲ್ಲಿ ಲೀನವಾಗಿ ಇತರ ಕುಟುಂಬದ ನೊಣಗಳಿಗೆ ಪತ್ತೆಹಚ್ಚಲು ಅಸಾಧ್ಯವಾದ ಕಾರಣ ಆ ಕುಟುಂಬದ ನೊಣಗಳು ಇವುಗಳನ್ನು ತಮ್ಮವರೆಂದೇ ತಿಳಿದು ಸ್ವೀಕರಿಸುತ್ತವೆ. ಜೇನು ಕೃಷಿಕರು ಈ ವಿಚಾರದಲ್ಲಿ ಎಚ್ಚರದಿಂದ ಮುಂದಿನ ಕಾರ್ಯ ಕೈಗೊಂಡರೆ ಒಂದು ಕುಟುಂಬವನ್ನು ಉಳಿಸಬಹುದು. ತಮ್ಮ ಗೂಡಿನ ಕೆಲಸಗಾರ ನೊಣಗಳು (ಹಿರಿಯ) ಗೂಡಿನ ಹೊರಭಾಗ ಮುಖ ದ್ವಾರದ ಮೇಲ್ಭಾಗದಲ್ಲಿ ಧರಣಿ ಕುಳಿತು ತಮ್ಮ ಶರೀರದಿಂದ ಒಸರುವ ಅಲ್ಪ ಮೇಣವನ್ನು ಅಲ್ಲೇ ಅಂಟಿಸಿರುವುದು ಕಾಣಬಹುದು. ಈ ಸಂಕೇತವೇ ಗೂಡಿನಲ್ಲಿ ರಾಣಿ ಇಲ್ಲ ಎನ್ನುವುದಕ್ಕೆ ಸಾಕ್ಷಿ. ಮುಂದೆ ಸೂಕ್ತಕ್ರಮ ನಿರ್ವಹಿಸಿದರೆ ಒಂದು ಕುಟುಂಬವನ್ನು ಉಳಿಸಬಹುದು.

ಒಂದು ಖಾಲಿ ಸಂಸಾರ ಕೋಣೆಯಿರುವ ಜೇನು ಪೆಟ್ಟಿಗೆಯ ಒಂದೆರಡು ಚೌಕಟ್ಟನ್ನು ತೆಗೆದು ಬೇರೆ ಕುಟುಂಬದ ಹುಳ ಮೊಟ್ಟೆಗಳಿರುವ (ಕಡ್ಡಿ ಆಕಾರದ ಮೊಟ್ಟೆ) ಎರಡು ಏರಿಗಳನ್ನು ತೆಗೆದು ಖಾಲಿ ಪೆಟ್ಟಿಗೆ ಅಳವಡಿಸಬೇಕು. ತೆಗೆಯುವಾಗ ನೊಣಗಳಿದ್ದರೆ ಅವುಗಳನ್ನು ಕೊಡವಿಕೊಂಡು ಎರಿ ಚೌಕಟ್ಟನ್ನು ಮಾತ್ರ ಅಳವಡಿಸಬೇಕು.

ಆ ಬಳಿಕ ಧರಣಿ ಕುಳಿತ ಗೂಡನ್ನು ಅಲ್ಲಿಂದ ೭-೮ ಅಡಿ ದೂರದಲ್ಲಿಟ್ಟು ಆ ಜಾಗದಲ್ಲಿ ಖಾಲಿ ಪೆಟ್ಟಿಗೆ ಇಟ್ಟಾಗ ಕಾಡಿಗೆ ಹೋಗಿ ಆಹಾರ ಸಂಗ್ರಹಿಸುವ ನೊಣಗಳು ಖಾಲಿ ಪೆಟ್ಟಿಗೆಗೆ ಸೇರಿಕೊಂಡು ಇದು ತಮ್ಮ ಗೂಡೆಂದು ಭಾವಿಸಿ ರಾಣಿ ಇಲ್ಲದೆ ಇದ್ದರೂ ಆ ಎರಿಗಳಲ್ಲಿರುವ ಒಂದು ಅಥವಾ ಎರಡು ದಿನದ ಹುಳಕ್ಕೆ ರಾಣಿ ಕೋಶಕ್ಕೆ ನೀಡುವ ಆಹಾರ ನೀಡಿ ಆ ಕೋಶವನ್ನು ರಾಣಿಕೋಶವನ್ನಾಗಿ ಬದಲಾಯಿಸುತ್ತವೆ. ಏಳೆಂಟು ದಿನಗಳಲ್ಲಿ ಹೊಸ ರಾಣಿ ಜನ್ಮಕ್ಕೆ ಬಂದು ಏರಿಯಲ್ಲಿ ಸುತ್ತಾಡಿ ತನ್ನ ಗ್ರಂಥಿಗಳಿಂದ ಒಸರುವ ವಸ್ತು ಸಾರವನ್ನು ಎರಿಗಳ ಮೇಲೆ ಉಗುಳಿದಾಗ ಆ ಗೂಡಿನ ಕೆಲಸಗಾರರ ನೊಣಗಳಿಗೆ ಅಂಡಾಶಯ ಬೆಳೆಯದಂತೆ ತಡೆಯುಂಟಾಗುತ್ತದೆ.ಆ ಜಾಗದಲ್ಲಿದ್ದ ಹಳೆಯ ಪೆಟ್ಟಿಗೆಯಲ್ಲಿರುವ ನೊಣಗಳನ್ನು ದೂರಕ್ಕೆ ಒಯ್ದು ಕೊಡವಿ ಅದರಲ್ಲಿರುವ ಎರಿಗಳನ್ನು ಪರಿಶೀಲಿಸಿ ಕೆಲಸಗಾರ ನೊಣಗಳನ್ನಿಟ್ಟ ಮೊಟ್ಟೆಗಳನ್ನು ತೆಗೆದು(ಕೊಡವಿ) ಹೊಸ ಪೆಟ್ಟಿಗೆಗೆ ನೋಡಬಹುದು

-ಎಂ.ಟಿ. ಶಾಂತಿಮೂಲೆ

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group