spot_img
Monday, August 31, 2026
spot_imgspot_img

ತರಕಾರಿ ಕೃಷಿಯೇ ಇವರ ಬದುಕಿಗೆ ಖುಷಿ: ಸಮೃದ್ಧ ತರಕಾರಿ ಬೆಳೆದು ಗೆದ್ದ ದಂಪತಿಯ ಕತೆ ಇದು!

ಬರಹ-ರಾಧಾಕೃಷ್ಣ ತೊಡಿಕಾನ -ಪ್ರಸಾದ್ ಶೆಣೈ ಕಾರ್ಕಳ

ಕೃಷಿಕರು ಮನೆ ಹಿಂದಿನ ಹಿತ್ತಲಲ್ಲಿ ಸೊಪ್ಪು ತರಕಾರಿ ಗೆಡ್ಡೆ ಗೆಣಸು ಬೆಳೆಯುತ್ತಿದ್ದರು. ಹಿತ್ತಲಿನ ಕಥೆಯು ಸ್ವಾರಸ್ಯಕರವಾಗಿರುತ್ತಿತ್ತು. ತರಕಾರಿ ಬೆಳೆಸಿ ಬಳಸುವುರಿಂದ ಹಿಡಿದು ರೋಗ ತಗುಲಿ ಹಾಳಾಗುವವರೆಗೆ ಮನೆಯವರ ಮಾತು ಮುಂದುವರಿಯುತ್ತಿತ್ತು. ನವಿಲು ಬಂದು ತರಕಾರಿ ತಿಂದದ್ದು, ಇಲಿ ಹೆಗ್ಗಣಗಳು ಗಡ್ಡೆಗೆಣಸು ತಿಂದು ಹಾಳು ಮಾಡಿದ್ದು….ಕಾಡು ಹಂದಿ ಬಂದು ಲಗಾಡಿ ಮಾಡಿದ್ದು, ಹೀಗೆ ಹಲವು ವಿಷಯಗಳು ಮಾತಿನ ಮಧ್ಯೆ ಹಿತ್ತಲಿನ ತರಕಾರಿ ಬೆಳೆಗಳು ಹಾದು ಹೋಗುತ್ತಿದ್ದವು. ಜೊತೆಗೆ ಮನೆಗೆ ಬಂದವರಿಗೆ ಒಂದಿಷ್ಟು ತರಕಾರಿಯನ್ನು ಚೀಲದಲ್ಲಿ ತುಂಬಿಸಿ ಕಳಿಸುತ್ತಿದ್ದರು. ನೆರೆಹೊರೆಯಲ್ಲಿ ತರಕಾರಿಯನ್ನು ಕೊಡುಕೊಳ್ಳುವ ಪದ್ಧತಿಯಿತ್ತು. ಆದರೆ ಈಗ ಹಿತ್ತಲ ಸಂಪ್ರದಾಯ ದೂರವಾಗಿದೆ. ಮನೆಗೆ ಬೇಕಾದ ತರಕಾರಿಗೆ ಪೇಟೆಯನ್ನೇಅವಲಂಭಿಸಬೇಕಾಗಿದೆ. ಮೊದಲಿನಂತೆ ತರಕಾರಿ ಆಗುವುದಿಲ್ಲ ಎಂದು ಹೇಳಿ ಬೇರೆಯವರಿಗೂ ನಿರಾಸೆ ಹುಟ್ಟಿಸುತ್ತಾರೆ. ಆದರೂ ತರಕಾರಿ ಬೆಳೆಯುವ ಹಲವು ಕುಟುಂಬಗಳಿವೆ. ಅದಷ್ಟೇ ಅಲ್ಲ. ಮಳೆಗಾಲದಲ್ಲಿ ತರಕಾರಿ ಬೆಳೆಸಿ ಅದರಿಂದ ತಮ್ಮ ಖರ್ಚುವೆಚ್ಚಗಳನ್ನು ನಿಭಾಯಿಸಿ ಕಂಡುಕೊಂಡವರಿದ್ದಾರೆ.

ತಮ್ಮ ತರಕಾರಿ ತೋಟದಲ್ಲಿ ಉಮೇಶ್-ಸುಜಾತಾ ದಂಪತಿ

ನೆಲ್ಲಿಕಾರಿನ ಉಮೇಶ್ ಮತ್ತು ಸುಜಾತ ದಂಪತಿ ತರಕಾರಿ ಕೃಷಿಯಿಂದಲೇ ಪರಿಚಿತರು. ಜೀವನಕ್ಕೆ ಬೇಕಾದ ಆದಾಯದ ದಾರಿ ಹುಡುಕಿಕೊಂಡು ಇದ್ದುದರಲ್ಲೇ ಖುಷಿಪಟ್ಟವರು. ಬೆಂಡೆ, ಸೌತೆ, ಹೀರೆ ಕಾಯಿ ಕೃಷಿ ಅವರಿಗೆ ಗೌರವದ ಬದುಕು ನೀಡಿದೆ. “ನಾನು ಶೂನ್ಯ ಬಂಡವಾಳದಿಂದಲೇ ಕೃಷಿಯಲ್ಲಿ ತೊಡಗಿಕೊಂಡವನು. ನಮ್ಮ ಇತಿಮಿತಿಗೆ ಆಗುವಷ್ಟು ದುಡಿಯುತ್ತೇವೆ, ಕೃಷಿಯಲ್ಲಿ ಸೋಲು ಎಂಬುದಿಲ್ಲ, ಶ್ರದ್ಧೆ ಮತ್ತು ಆಸಕ್ತಿ ಬೇಕು. ಎಂದು ಹೇಳುವ ಉಮೇಶ ಅವರು ದೃಢವಿಶ್ವಾಸದಿಂದಲೇ ಹೆಜ್ಜೆಯಿಟ್ಟವರು. ಕಾಡಂಚಿನ ಪರಿಸರದಲ್ಲಿ ಹಾದು ಹೋಗುವ ರಸ್ತೆಯ ಇಕ್ಕೆಲಗಳಲ್ಲಿ ಕಾಣುವ ಅವರ ತರಕಾರಿ ಕೃಷಿ ಕ್ಷೇತ್ರ ಹೊಸ ಅನುಭವವನ್ನು ತೆರೆದಿಡುತ್ತದೆ.

ಉಮೇಶ್ ಅವರ ಪತ್ನಿ ಸುಜಾತಾ, ಬೆಳೆದ ತರಕಾರಿಗಳ ಜೊತೆ
ತೋಟದ ನಡುವೆ ಉಮೇಶ್

ಕಣ್ಣೆದುರು ಬಿಚ್ಚಿಕೊಳ್ಳುವ ತರಕಾರಿಯ ಲೋಕ:

ಮೂಡಬಿದ್ರೆ ತಾಲೂಕಿನ ನೆಲ್ಲಿಕಾರು ಗ್ರಾಮದ ಜ್ಯೋತಿನಗರದಲ್ಲಿರುವ ಉಮೇಶ್ ತನ್ನ ಮೂರು ಎಕ್ರೆ ಭೂಮಿಯಲ್ಲಿ ಬಹುತೇಕ ಜಾಗವನ್ನು ತರಕಾರಿ ಕೃಷಿಗಾಗಿಯೇ ಮೀಸಲಿಟ್ಟಿದ್ದಾರೆ. ತಂದೆ ಶಂಭು ಅವರ ಪಾಲಿನಿಂದ ಬಂದ ಈ ಜಾಗದಲ್ಲಿ ಹತ್ತು ವರ್ಷದ ಹಿಂದೆ ಯಾವ ಕೃಷಿಯೂ ಇರಲಿಲ್ಲ. ಗಿಡಗಂಟಿಗಳು ಬೆಳೆದುಕೊಂಡಿದ್ದವು. . ಅರಣ್ಯ ಬದಿಯಲ್ಲಿದ್ದ ಈ ಜಾಗದಲ್ಲಿ  ನೀರಿನ ಅನುಕೂಲತೆಗಳು ಇರಲಿಲ್ಲ. ಮಳೆಗಾಲ ಸಣ್ಣ ತೋಡಿನಲ್ಲಿ ನೀರು ಹರಿಯುತ್ತಿದ್ದರೂ ಬೇಸಿಗೆಗೆ ಬತ್ತಿ ಹೋಗುತ್ತಿತ್ತು. ಉಮೇಶ್ ಅವರು ನೆಲ್ಲಿಕಾರಿನ ಬೋರುಗುಡ್ಡೆ ಎಂಬಲ್ಲಿ ವಾಸ್ತವ್ಯ ಮಾಡಿಕೊಂಡು ಮರದ ವ್ಯವಹಾರ ಮಾಡುವವರ ಜತೆಗೆ ಕೆಲಸ ಮಾಡುತ್ತಿದ್ದರು. ಈ ಕೆಲಸವನ್ನು ಬಿಟ್ಟು ಬೇರೆ ಸ್ವಂತ ಉದ್ಯೋಗ ಮಾಡಬೇಕು ಎಷ್ಟೋ ಬಾರಿ ಅವರಿಗೆ ಅನಿಸಿತ್ತು. ತನ್ನ ಸ್ವಂತ ಜಮೀನು ಪಾಳು ಬಿದ್ದಿರುವಾಗ ಬೇರೆ ಕೆಲಸ ಹುಡುಕುವ ಬದಲು ಒಂದಿಷ್ಟು ಕೃಷಿ ಮಾಡುವುದಕ್ಕೆ ಮನಸ್ಸು ಮಾಡಿದರು. ಕಾಡು ಗಿಡಗಳು ತುಂಬಿಕೊಂಡಿದ್ದ ಜಾಗವನ್ನು ಸ್ವಚ್ಛಗೊಳಿಸಿದರು. ನೀರಿಗಾಗಿ ಸಣ್ಣ ಕೆರೆಯೊಂದನ್ನು ಮಾಡಿ ಸುಮಾರು 2೦೦ ಅಡಿಕೆ ಗಿಡ ನೆಟ್ಟರು. ಅಡಿಕೆಗಳಿಗೆ ನೆರಳಿಗೆ ಅನುಕೂಲವಾಗಲಿ ಎಂದು ಬಿಳಿ ಬೆಂಡೆ ಬೆಳೆದರು. ಉತ್ತಮವಾಗಿ ಬೆಳೆದು ಬಂದ ಬಿಳಿ ಬೆಂಡೆ ಅವರ ಸಣ್ಣಪುಟ್ಟ ಅವಶ್ಯಕತೆಯ ಖರ್ಚುವೆಚ್ಚಗಳನ್ನು ಸರಿದೂಗಿಸಿತು. ಅದು ಅವರ ಯೋಚನೆಯ ಮಗ್ಗುಲನ್ನು ಬದಲಾಯಿಸುವಂತೆ ಮಾಡಿತು.

ಬೆಂಡೆಕಾಯಿ ಲೋಕ

ಇನ್ನಷ್ಟು ಖಾಲಿ ಜಾಗವನ್ನು ಸ್ವಚ್ಛಗೊಳಸಿ ಬೆಂಡೆ ಕೃಷಿ ವಿಸ್ತರಿಸಿದರು. ಈಗ ಅವರ ಬಿಳಿ ಬೆಂಡೆಯ ಕೃಷಿ ಮುಕ್ಕಾಲು ಎಕ್ರೆಗೆ ತಲುಪಿದೆ. ಹೂವು ಕಾಯಿಗಳಿಂದ ಹುಲುಸಾದ ಗಿಡಗಳು ತೊನೆದಾಡುತ್ತವೆ. ಬೀಜ ಮೊಳಕೆಯೊಡೆದು ಗಿಡವಾಗಿ 40-45 ದಿನಗಳ ಒಳಗೆ ಫಸಲು ಆರಂಭವಾಗುತ್ತದೆ . ಮೂರು ನಾಲ್ಕು ತಿಂಗಳು ಆದಾಯವನ್ನು ತಂದುಕೊಡುತ್ತದೆ. ಕೈಯಲ್ಲಿ ಕಾಸಿಲ್ಲವೆಂದಾದರೆ ಒಂದು ಕೊಯ್ಲು ಬೆಂಡೆ ತರಕಾರಿ ಅಂಗಡಿಗೆ ತಲುಪಿದರಾಯಿತು. ಒಮ್ಮೆಗಿನ ಆವಶ್ಯಕತೆಯನ್ನು ಪೂರೈಸುತ್ತದೆ. ಬೆಂಡೆ ಎರಡು ದಿನಕ್ಕೊಮ್ಮೆ ಕಟಾವು ಮಾಡುತ್ತಾರೆ. ಗಿಡವೊಂದರಿಂದ ಸುಮಾರು 5 ಕೆಜಿವರೆಗೆ ಅವರು ಕೊಯ್ಲು ಮಾಡಿದ್ದಿದೆ. ಹೆಚ್ಚು ಕವಲುಗಳನ್ನು ಹೊಂದಿದ್ದರೆ ಬೆಳೆಯು ಹೆಚ್ಚು. ಕಡಿಮೆ ಅವಧಿಯಲ್ಲಿ ಉತ್ಪತ್ತಿ ಕೈಗೆ ಸಿಗುತ್ತದೆ. ಬೆಂಡೆ ಗಿಡಗಳಿಗೆ ರೋಗವೇ ಬರುವುದಿಲ್ಲವೆಂದಲ್ಲ. ಆದರೆ ರೋಗ ಬಾಧೆ ತೀರಾ ಕಡಿಮೆ. ಸಣ್ಣಪುಟ್ಟ ಸಮಸ್ಯೆಗಳಿದ್ದರೆ ಅವುಗಳನ್ನು ಗಮನಿಸಿ ನಿವಾರಿಸಿಕೊಳ್ಳಬೇಕಾಗುತ್ತದೆ.

ಮುಳ್ಳು ಸೌತೆ : ಒಂದೆಡೆ ಬೆಂಡೆ ಸಾಲು ಇದ್ದರೆ ಮತ್ತೊಂದೆಡೆ ಸೌತೆಯ ಸಾಲು. ನೀರು ಸೌತೆ, ಮುಳ್ಳು ಸೌತೆ, ಮಿಡಿಸೌತೆ, ತೆಕ್ಕರೆ ಇನ್ನಿತರ ಹೆಸರಿನಲ್ಲಿ ಕರೆಸಿಕೊಳ್ಳುವ ಸೌತೆ ಆರೋಗ್ಯ ದಾಯಕ. ಪಾನೀಯವಲ್ಲದೆ ಹಲವಾರು ಬಗೆಯ ಖಾದ್ಯಗಳಿಗೂ ಹೆಸರುವಾಸಿ. ಉಮೇಶ್ ಅವರು ಈ ಸೌತೆಯನ್ನು ಆದ್ಯತೆಯಿಂದ ಬೆಳೆದಿದ್ದು ಅವರ ಆದಾಯವನ್ನು ಹೆಚ್ಚಿಸಿದೆ. ಸುಮಾರು 6೦ ಸೆಂಟ್ಸ್ ಜಾಗದಲ್ಲಿ ಬೆಳೆದ ಸೌತೆ ಮಾರುಕಟ್ಟೆಯಲ್ಲಿ ಬೇಡಿಕೆಯಿರುವ ತರಕಾರಿ. ಮೊದಲು ಸೌತೆ ಬಳ್ಳಿ ಹಬ್ಬುವಿಕೆಗೆ ಚಪ್ಪರ ಹಾಕುತ್ತಿದ್ದರು. ಈ ಬಾರಿ ಕಂಬಗಳನ್ನು ಬಳಸಿ ಹಗ್ಗವನ್ನು ಇಳಿಬಿಟ್ಟು ಬಳ್ಳಿ ಹಬ್ಬಿಸಿದ್ದಾರೆ. ಇದರಲ್ಲಿ ಕೊಯ್ಲಿಗೆ ಅನುಕೂಲವಾಗುತ್ತದೆ. ಸೌತೆಯನ್ನು ದಿನಾ ಕೊಯ್ಲು ಮಾಡುತ್ತಾರೆ. ಎಳೆಯ ಮಿಡಿ ತಿನ್ನವುದಕ್ಕೆ ಅನುಕೂಲವಾದ ಹಸಿ ತರಕಾರಿ. ಮೂರು ನಾಲ್ಕು ತಿಂಗಳವರೆಗೆ ಸೌತೆ ಕೊಯ್ಲಿಗೆ ಸಿಗುತ್ತದೆ.

ಹೀರೇಕಾಯಿ:

ಹೀರೇಕಾಯಿ ಹೆಚ್ಚು ಬೇಡಿಕೆಯಿರುವ ಇನ್ನೊಂದು ತರಕಾರಿ. ಪಲ್ಯ ಸಾಂಬಾರು ಸೇರಿದಂತೆ ಹಲವು ರುಚಿಕರವಾದ ಖಾದ್ಯಗಳು ತಯರಿಸಲಾಗುತ್ತದೆ. ಉಮೇಶ್ ಅವರು ರಸ್ತೆ ಬದಿಯ ಜಮೀನಿನಲ್ಲಿ ಹಾಕಿದ ಚಪ್ಪರದ ತುಂಬೆಲ್ಲಾ ನೇತಾಡುವ ಹಸಿರು ಕಾಯಿಗಳು ಮನಸೆಳೆಯುತ್ತವೆ. ಸುಮಾರು 75 ಕೆಜಿಯಷ್ಟು ಎರಡು ದಿನಕ್ಕೊಮ್ಮೆ ಕೊಯ್ಲು ಮಾಡುತ್ತಾರೆ. ಈ ತರಕಾರಿಗೆ ಮಾರುಕಟ್ಟೆಯಲ್ಲಿ ಉತ್ತಮ ದರವಿದೆ. ಹೀರೆಕಾಯಿಯೂ ಎರಡು ಮೂರು ತಿಂಗಳು ಆದಾಯವನ್ನು ನೀಡಬಲ್ಲುದು. ಇಷ್ಟೆಲ್ಲಾ ತರಕಾರಿ ಬೆಳೆದು ಮಾಡುವುದೇನು? ಕೊಡುವುದೆಲ್ಲಿ? ಎಂಬ ಚಿಂತೆ ಇಲ್ಲ. ತರಕಾರಿಗೆ ಮಾರುಕಟ್ಟೆ ಮಾಡುವ ಸಮಸ್ಯೆ ಕಡಿಮೆ. ಈ ಎಲ್ಲಾ ತರಕಾರಿಯನ್ನು ಕಾರ್ಕಳದ ತರಕಾರಿ ಅಂಗಡಿಯೊಂದಕ್ಕೆ ಮಾರಾಟ ಮಾಡುತ್ತಾರೆ.

ಹೀರೇಕಾಯಿ ತೋಟದಲ್ಲಿ

ಕಾಡು ಪ್ರಾಣಿಗಳ ಹಾವಳಿ: ಕಾಡಂಚಿನ ಪ್ರದೇಶವಾದುದರಿಂದ ಕಾಡು ಪ್ರಾಣಿಯ ಹಾವಳಿ ತಪ್ಪಿದ್ದಲ್ಲ. ನವಿಲು, ಮಂಗ ಇನ್ನಿತರ ಪ್ರಾಣಿಗಳು ಅವರ ತರಕಾರಿ ಕೃಷಿಗೆ ಸವಾಲಾಗಿದ್ದವು. ಇತ್ತೀಚೆಗೆ ಈ ಪರಿಸರದಲ್ಲಿ ಕಾಣಿಸಿಕೊಂಡ ಚಿರತೆಯಿಂದಾಗಿ ಮಂಗಗಳ ಧಮ್ ಇಲ್ಲದಂತಾಗಿದೆ. ಮಂಗಗಳ ಉಪಟಳ ಪ್ರಾಕೃತಿಕವಾಗಿಯೇ ತಾತ್ಕಾಲಿಕ ನಿಯಂತ್ರಣಕ್ಕೆ ಬಂದಿದೆ.ಗಿಡಗಳಿಗೆ ಸಾವಯುವ ಗೊಬ್ಬರವನ್ನು ಹೆಚ್ಚು ಬಳಸುತ್ತಾರೆ. ಸಗಣಿ ಗೊಬ್ಬರ, ನೆಲಗಡಲೆ ಹಿಂಡಿ, ಬೇವಿನ ಹಿಂಡಿಯನ್ನು ಮಿಶ್ರಣ ಮಾಡಿ ಡ್ರಮ್ಮಿನಲ್ಲಿ ಕೊಳೆಯಲು ಬಿಟ್ಟು ಅದರ ಸಾರವನ್ನು ಗಿಡಗಳಿಗೆ ಹಾಕುತ್ತಾರೆ.

ತೋಟದಲ್ಲಿ ತೂಗಿಕೊಂಡಿರುವ ಹುಲುಸಾದ ಹೀರೆ

ತರಕಾರಿಗಳ ನಡುವೆ ಅರಳಿತು “ಮಲ್ಲಿಗೆ ಕೃಷಿ”

ಹೂವಿನಲ್ಲಿ ಮಲ್ಲಿಗೆಗೆ ವಿಶೇಷ ಸ್ಥಾನವಿದೆ. ಹಾಲಿನಂತಹ ಬಿಳುಪಿನ ಮೊಗ್ಗುಗಳು ಗಿಡದಲ್ಲಿದ್ದರೂ ಚೆಂದವೇ. ಘಮಘಮಿಸುವ ಮಲ್ಲಿಗೆ ಮಹಿಳೆಯರ ಮುಡಿಗೇರುತ್ತದೆ. ಅಲಂಕಾರಕ್ಕಾಗಿ ದೇವರ ಗುಡಿ ಸೇರುತ್ತದೆ.. ಸುಗಂಧ ದ್ರವ್ಯಗಳಿಗೂ ಬಳಕೆಯಾಗುತ್ತದೆ. ಮಲ್ಲಿಗೆಗೆ ಬೇಡಿಕೆಯಿರುವುದನ್ನು ಮನಗಂಡು ಉಮೇಶ ಅವರು ಮಲ್ಲಿಗೆ ಕೃಷಿಯನ್ನು ಹಲವು ವರ್ಷಗಳಿಂದ ಮಾಡುತ್ತಾ ಬಂದಿದ್ದಾರೆ. ತರಕಾರಿ ಕೃಷಿಯ ನಡುವೆ ಮಲ್ಲಿಗೆ ಹೂವು ಪ್ರಾಶಸ್ತö್ಯ ಪಡೆದಿದೆ. ಮಲ್ಲಿಗೆ ಸಾಲಿನ ಮಧ್ಯೆ ಅಂತರ ಬೆಳೆಯಾಗಿ ಬೆಂಡೆಯನ್ನು ಬೆಳೆಸಿದ್ದಾರೆ. ಮಳೆ ಕಡಿಮೆಯಾಗುತ್ತಿದ್ದಂತೆ ಗಿಡಗಳ ಬುಡಗಳನ್ನು ಸ್ವಚ್ಛ ಗೊಳಿಸಿ ಅನುಪಯುಕ್ತ ಕಡ್ಡಿಗಳನ್ನು ಕತ್ತರಿಸಿ ತೆಗೆಯುತ್ತಾರೆ. ಏಳೆಂಟು ಚೆಂಡು ಹೂವು ಕಟ್ಟುತ್ತಿದ್ದರು. ಕಾಲಾವಕಾಶ ಕಡಿಮೆಯಿದ್ದಾಗ ಹೂಗಳನ್ನೇಮಾರಾಟ ಮಾಡುತ್ತಾರೆ. . ಮಲ್ಲಿಗೆ ಹಾರ ಮಾಡಿಕೊಟ್ಟರೆ ಉತ್ತಮ ದರವಿದೆ. ಕೆಲವೊಮ್ಮೆ ಉತ್ತಮ ದರ ಸಿಕ್ಕಿದೆ ಕಡಿಮೆ ಬೆಲೆಗೂ ಹೋಗಿದೆ, ತರಕಾರಿ ಕೃಷಿಯಲ್ಲದೆ ತೋಟಗಾರಿಕಾ ಬೆಳೆಯಿದೆ. ಅಡಿಕೆಯೊಂದಿಗೆ ಕಾಳುಮೆಣಸು, ಹಲವಾರು ವಿದೇಶಿ ಹಣ್ಣಿನ ಗಿಡಗಳು ಅವರ ತೋಟದಲ್ಲಿ ನೆಲೆ ಕಂಡಿವೆ.

ತೋಟದ ಒಂದು ನೋಟ

ನರ್ಸರಿ : ತರಕಾರಿ ಬೆಳೆಗೆ ಹೆಚ್ಚು ಒತ್ತು ನೀಡಿದರೂ ಅದರೊಂದಿಗೆ ನರ್ಸರಿಯನ್ನೂ ಆರಂಭಿಸಿದ್ದಾರೆ. ದಕ್ಷಣಕನ್ನಡ ಉಡುಪಿ ಜಿಲ್ಲೆಗಳಲ್ಲಿ ಕೃಷಿಕರು ಈಗೀಗ ಕಾಫಿಯತ್ತಲೂ ಗಮನ ಹರಿಸುತ್ತಿರುವುರಿಂದ ರೋಬಸ್ಟಾ ಡಾರ್ಪ್ ಕಾಫಿ, ಏಲಕ್ಕಿ ಗಿಡಗಳು ಇವರಲ್ಲಿವೆ. ವಿವಿಧ ತಳಿಯ ಹಲಸಿನ ಗಿಡಗಳು, ಮಾವಿನ ಗಿಡಗಳು, ವಿದೇಶಿ ಹಣ್ಣಿನ ಗಿಡಗಳು ಬಗೆಬಗೆಯ ಚೆರಿ ಹಣ್ಣುಗಳು, ಕಾಳುಮೆಣಸು ಕಸಿಗೆ ಬೇಕಾದ ಹಿಪ್ಪಲಿ ಗಿಡಗಳು, ದೂಪದ ಮರಗಳು. ಬುಶ್ ಪೆಪ್ಪರ್, ರಾಮ್ ಫಲ, ಸೀತಾ ಫಲ, ಹನುಮ ಫಲ, ಮೊದಲಾದುವು ಅವರ ನರ್ಸರಿಯಲ್ಲಿವೆ.

ಏಲಕ್ಕಿ ಗಿಡ

ಬೆಂಗಳೂರು, ಶಿವಮೊಗ್ಗ, ಕೊಪ್ಪಳ ಸೇರಿದಂತೆ ಹಲವು ಕಡೆಯ ನರ್ಸರಿಯವರಿಗೆ ಅವರು ಗಿಡಗಳನ್ನು ಕೊಟ್ಟಿದ್ದಾರೆ. ತರಕಾರಿ ಹಾಗೂ ಇನ್ನಿತರ ಕೃಷಿಗೆ ಪೂರಕವಾಗುವಂತೆ ಜೇನು ಕೃಷಿ ಹಾಗೂ ಮೀನು ಕೃಷಿ ಮಾಡುವ ಯೋಜನೆಯಿದೆ.

 ತರಕಾರಿಯಾಗಲಿ ಇತರ ಕೃಷಿಯಾಗಲಿ ಇವರ ಕೆಲಸ ಕಾರ್ಯಗಳಿಗೆ ಜೊತೆಯಾಗಿ ಕೆಲಸ ಮಾಡುವವರು ಅವರ ಪತ್ನಿ ಸುಜಾತ. ಎಲ್ಲಾ ಕೆಲಸಗಳನ್ನು ಅವರಿಬ್ಬರೇ ನಿಭಾಯಿಸುತ್ತಾರೆ. ಅನಿವಾರ್ಯವಾದರೆ ಮಾತ್ರ ಬೇರೆ ಕೆಲಸದವರನ್ನು ಸೇರಿಸಿಕೊಳ್ಳುತ್ತಾರೆ. ತರಕಾರಿ ಕೃಷಿಯಾಗಲಿ, ಇತರ ಕೃಷಿಯೇ ಇರಲಿ, ಒಮ್ಮಲೇ ದೊಡ್ಡ ಬಂಡವಾಳ ಹಾಕಿ ಕೈಸುಟ್ಟುಕೊಳ್ಳಬಾರದು. ಕೃಷಿಯಲ್ಲಿ ಅನುಭವ ಪ್ರಯೋಗಶೀಲತೆ ಪ್ರಯೋಜನಕಾರಿ. ಈ ಕೆಲಸದಲ್ಲಿ ತೊಡಗಿಕೊಂಡರೆ ಬೇರೆ ಯೋಚನೆಗಳು ಬರುವುದಿಲ್ಲ. ಅಕ್ಷರಸ್ಥರಿಂದ ವಿದ್ಯಾವಂತರವರೆಗೆ ಯಾರೂ ಕೃಷಿಯಲ್ಲಿ ತೊಡಗಿಕೊಳ್ಳಬಹುದು ಎಂಬುದು ಉಮೇಶ್ ಅವರ ಆತ್ಮ ವಿಶ್ವಾಸದ ಮಾತು. ಯುವ ಜನರು ಇತರ ಕೆಲಸಗಳನ್ನು ಹುಡುಕುವುದಕ್ಕಿಂತ ತಮ್ಮಲ್ಲಿ ಜಮೀನು ಇದ್ದರೆ ಕೃಷಿ ಕ್ಷೇತ್ರದಲ್ಲಿ ತೊಡಗಿಕೊಳ್ಳುವುದು ಒಳ್ಳೆಯದು. ಎಂಬುದು ಅವರ ಅಭಿಪ್ರಾಯವಾಗಿದೆ.

ಕಾಫೀ ಗಿಡಗಳು

ಕಳೆದ ಹತ್ತು ವರ್ಷಗಳಿಂದ ತರಕಾರಿ ಕೃಷಿಯಲ್ಲಿ ತೊಡಗಿಕೊಂಡಿರುವ ಅವರಿಗೆ ಮಂಗಳೂರು ತಾಲೂಕು ಮಟ್ಟದ ಕೃಷಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.ತಮ್ಮ ಪಾಡಿಗೆ ತಾವಿದ್ದು ಖುಷಿಯಿಂದ ತರಕಾರಿ ಕೃಷಿಯಲ್ಲಿ  ತೊಡಗಿಸಿಕೊಂಡಿರುವ ಈ ದಂಪತಿಯ ಮುಖದಲ್ಲಿ ಕೃಷಿಯಿಂದ ಸಿಗುವ ಸಾರ್ಥಕತೆಯನ್ನೂ ನೆಮ್ಮದಿಯ ಭಾವಗಳನ್ನೂ ನಾವು ಕಾಣಬಹುದು. ತರಕಾರಿ ಕೃಷಿ ಮಾಡಿ ಬದುಕು ಕಟ್ಟಿಕೊಳ್ಳಬೇಕು ಎನ್ನುವವರಿಗೆ ಇವರ ತರಕಾರಿ ಕೃಷಿ ದೊಡ್ಡ ಸ್ಪೂರ್ತಿ. ಮಾಹಿತಿಗೆ ಮೊಬೈಲ್: 9741789374

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group