spot_img
Tuesday, July 7, 2026
spot_imgspot_img

ಮುದ ನೀಡುವ ಫಲ ರಾಂಬುಟಾನ್ :ಯಾಕೆ ಈ ಹಣ್ಣಿಗೆ ಭಾರೀ ಡಿಮ್ಯಾಂಡ್?

✍ಆಶಾ ನೂಜಿ

ಕೃಷಿಯೆಂಬುದು ಒಬ್ಬ ವ್ಯಕ್ತಿಯ ಕೈಯಲ್ಲಿ ನಡೆಯುವ ಕಾರ್ಯವಲ್ಲ. ಎರಡು ಕೈಗಳು ಒಂದಾದಾಗಲೇ ಕೆಲಸಕ್ಕೆ ಸಾರ್ಥಕತೆ ದೊರೆಯುತ್ತದೆ. ಇಂದಿನ ಐಟಿ ಯುಗದಲ್ಲಿ ಕೃಷಿಯನ್ನು ಮುಂದುವರಿಸುವುದು ಸುಲಭದ ಸಂಗತಿಯಲ್ಲ. ಬಹುತೇಕರು ನಗರ, ಉದ್ಯೋಗ ಹಾಗೂ ತಂತ್ರಜ್ಞಾನದತ್ತ ಮುಖಮಾಡುತ್ತಿರುವ ಕಾಲವಿದು. ಆದಾಗ್ಯೂ ಕೃಷಿಯೆಂಬುದು ನಮ್ಮ ಬಾಲ್ಯದಿಂದಲೂ ಜೀವನದ ಅವಿಭಾಜ್ಯ ಅಂಗವಾಗಿ ಬೆಸೆದುಕೊಂಡಿದೆ. ಹಿರಿಯರಿಂದ ಬಳುವಳಿಯಾಗಿ ಬಂದ ಈ ಕಸುಬನ್ನು ತ್ಯಜಿಸಲು ಮನಸ್ಸೂ ಒಪ್ಪದು, ಪರಿಸ್ಥಿತಿಯೂ ಒಪ್ಪದು.

ಕೊಡ್ಲಮೊಗರು ಗ್ರಾಮದ ಸುಣ್ಣಂಗುಳಿ ಎಂಬಲ್ಲಿರುವ ರವಿಶಂಕರ ಭಟ್ಟರು ಕೃಷಿಕರು. ಅವರ ತೋಟವು ಪ್ರಕೃತಿಯ ಸೊಬಗಿಗೆ ಸಾಕ್ಷಿಯಾಗಿದೆ. ಅಡಿಕೆ, ತೆಂಗು, ತೆಂಗು, ಕಾಳುಮೆಣಸು, ರಬ್ಬರ್ ಅವರ ಮುಖ್ಯ ಬೆಳೆಯಾದರೂ ಬಾಳೆ, ಹಲಸು ಮೊದಲಾದುವು ಸೇರಿದಂತೆ ಹಲವು ಹಣ್ಣಿನ ಗಿಡಗಳು ಅವರಲ್ಲಿವೆ. ತಮ್ಮ ತೋಟದಲ್ಲಿ ವಿವಿಧ ಬೆಳೆಗಳೊಂದಿಗೆ ರಾಂಬುಟಾನ್ ಬೆಳೆಸಿದ್ದಾರೆ. ಅವರ ತೋಟದಲ್ಲಿರುವ ರಾಂಬುಟಾನ್ ಹಸಿರು-ಕೆಂಪು ಬಣ್ಣಗಳಿಂದ ಗೊಂಚಲು ಗೊಂಚಲಾಗಿ ತೂಗಾಡುವ ಆ ಫಲಗಳನ್ನು ನೋಡುವಾಗ ಮನಸ್ಸು ಮುದಗೊಳ್ಳತ್ತದೆ. ಅವುಗಳ ಸೊಬಗು ಎಷ್ಟೆಂದರೆ, ದೃಷ್ಟಿಯನ್ನು ಅಲ್ಲಿಂದ ಬೇರೆಡೆಗೆ ತಿರುಗಿಸಲು ಮನಸ್ಸೇ ಬರುವುದಿಲ್ಲ.

ಪ್ರತಿದಿನ ಆ ಮರವನ್ನು ನೋಡುವಾಗ, “ಒಂದೆರಡು ಹಣ್ಣು ಸವಿಯುವ ಭಾಗ್ಯ ದೊರೆತರೆ ಎಷ್ಟು ಚೆನ್ನಾಗಿರುತ್ತದೆ!” ಎಂಬ ಆಸೆ ಮನಸ್ಸಿನಾಳದಲ್ಲಿ ಮೂಡುತ್ತಿತ್ತು. ಆದರೆ ಕೇಳಲು ಸಂಕೋಚವಾಗುತ್ತಿತ್ತು. ಒಂದು ದಿನ ಮಕ್ಕಳಿಗಾಗಿ ಹಣ್ಣು ಪಡೆಯಲು ಬಂದಿದ್ದ ನೆರೆಹೊರೆಯವರೊಂದಿಗೆ ಹಣ್ಣು ಕೊಯ್ಯುವ ಕಾರ್ಯ ನಡೆಯುತ್ತಿದ್ದಾಗ, ಶ್ರೀಮತಿ ಕೀರ್ತಿ ಅವರ ಆತ್ಮೀಯತೆಯಿಂದ ನನ್ನನ್ನೂ ಕರೆದು ಹಣ್ಣುಗಳನ್ನು ನೀಡಿದರು. ಆ ಕ್ಷಣದಲ್ಲಿ ನನಗಾದ ಸಂತೋಷ ಅಷ್ಟಿಷ್ಟಲ್ಲ.

ರಾಂಬುಟಾನ್ ಉಷ್ಣವಲಯದ ಅಪರೂಪದ ಫಲವೃಕ್ಷಗಳಲ್ಲಿ ಒಂದಾಗಿದೆ. ಇದರ ಹೊರಚರ್ಮ ಕೆಂಪು ಬಣ್ಣದಿಂದ ಕೂಡಿದ್ದು, ಮೃದುವಾದ ಕೂದಲಿನಂತಹ ಮುಳ್ಳುಗಳನ್ನು ಹೊಂದಿರುತ್ತದೆ. ಒಳಭಾಗದಲ್ಲಿ ಬಿಳಿಯ, ರಸಭರಿತವಾದ ತಿರುಳು ಇರುತ್ತದೆ. ಇದರ ರುಚಿ ಅತ್ಯಂತ ಸಿಹಿಯಾಗಿದ್ದು, ಲಿಚಿ ಹಣ್ಣನ್ನು ನೆನಪಿಗೆ ತರುತ್ತದೆ. ಕಣ್ಣಿಗೆ ಆಕರ್ಷಕವಾಗಿರುವ ಈ ಹಣ್ಣು ಆರೋಗ್ಯಕ್ಕೂ ಬಹಳ ಉತ್ತಮವಾಗಿದೆ. ಇದರಲ್ಲಿ ವಿಟಮಿನ್‌ಗಳು, ಖನಿಜಾಂಶಗಳು ಸಮೃದ್ಧವಾಗಿದ್ದು ದೇಹದ ಆರೋಗ್ಯವನ್ನು ವೃದ್ಧಿಸಲು ಸಹಕಾರಿಯಾಗಿದೆ.

ರವಿಶಂಕರ ಭಟ್ಟರ ಮಾಹಿತಿಯಂತೆ, ರಾಂಬುಟಾನ್‌ವನ್ನು ಮಿಶ್ರಬೆಳೆಯಾಗಿ ಬೆಳೆಯಬಹುದು. ಇದರ ಬುಡಕ್ಕೆ ವರ್ಷಕ್ಕೆ ಎರಡು ಬಾರಿ ಕೊಟ್ಟಿಗೆ ಗೊಬ್ಬರ ಅಥವಾ ಸಾವಯವ ಗೊಬ್ಬರವನ್ನು ನೀಡಿದರೆ ಉತ್ತಮ ಬೆಳವಣಿಗೆ ಕಂಡುಬರುತ್ತದೆ. ಆಡಿನ ಹಿಕ್ಕೆ, ಕೋಳಿಹಿಕ್ಕೆ ಮೊದಲಾದ ಸಾವಯವ ಗೊಬ್ಬರಗಳನ್ನೂ ಬಳಸಬಹುದು. ನೀರು ಸರಾಗವಾಗಿ ಹರಿದು ಹೋಗುವ ಮಣ್ಣಿನಲ್ಲಿ ಈ ಮರ ಉತ್ತಮವಾಗಿ ಬೆಳೆಯುತ್ತದೆ ಹಾಗೂ ವರ್ಷಕ್ಕೊಮ್ಮೆ ಉತ್ತಮ ಇಳುವರಿಯನ್ನು ನೀಡುತ್ತದೆ.

ಪ್ರಸ್ತುತ ರಾಂಬುಟಾನ್ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯನ್ನು ಹೊಂದಿದೆ. ಆದಾಗ್ಯೂ ರವಿಶಂಕರ ಭಟ್ಟರು ಇದನ್ನು ಕೇವಲ ವ್ಯಾಪಾರದ ದೃಷ್ಟಿಯಿಂದ ನೋಡುವವರಲ್ಲ. “ಮೊದಲು ಮನೆಯವರು, ಬಂಧು-ಬಳಗ ಹಾಗೂ ಸ್ನೇಹಿತರು ಸವಿಯಲಿ; ಉಳಿದರೆ ಮಾತ್ರ ಮಾರಾಟ ಮಾಡುತ್ತೇನೆ” ಎಂಬ ಅವರ ಮಾತು ಅವರ ಉದಾರ ಮನೋಭಾವಕ್ಕೆ ಸಾಕ್ಷಿಯಾಗಿದೆ.

ಇಂದಿನ ದಿನಗಳಲ್ಲಿ ಎಲ್ಲವನ್ನೂ ಹಣದ ಲೆಕ್ಕದಲ್ಲಿ ಅಳೆಯುವ ಮನೋಭಾವ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ, ತಮ್ಮ ತೋಟದ ಫಲವನ್ನು ಮೊದಲು ಹಂಚಿಕೊಂಡು ನಂತರ ಮಾರಾಟ ಮಾಡುವಂತಹ ಮನಸ್ಸು ಅಪರೂಪವೆನಿಸುತ್ತದೆ. ನನಗಂತೂ ರಾಂಬುಟಾನ್ ಹಣ್ಣಿನ ಸಿಹಿಗಿಂತಲೂ, ಅದನ್ನು ನೀಡಿದ ಆತ್ಮೀಯತೆ, ಪ್ರೀತಿ ಹಾಗೂ ನೆರೆಹೊರೆಯ ಬಾಂಧವ್ಯದ ಸಿಹಿಯೇ ಹೆಚ್ಚು ಕಾಲ ಮನಸ್ಸಿನಲ್ಲಿ ಉಳಿಯಲಿದೆ. ನಿಜವಾಗಿಯೂ ರಾಂಬುಟಾನ್ ಕಣ್ಣಿಗೂ ಮನಸ್ಸಿಗೂ ಹರ್ಷವನ್ನುಂಟು ಮಾಡುವ, ಆರೋಗ್ಯವರ್ಧಕ ವಿಶಿಷ್ಟ ಫಲವಾಗಿದೆ.

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group