spot_img
Monday, March 30, 2026
spot_imgspot_img
spot_img

ಸ್ವದೇಶಕ್ಕೆ ಮರಳಿ ಪಾನೀಯ ಉದ್ಯಮ ಕಟ್ಟಿದ ದಂಪತಿ: ಕಾಳುಮೆಣಸು ನಿಂಬೆ ಮೌಲ್ಯವರ್ಧಿತ ಸಾರದಿಂದ ತಯಾರಾಯ್ತು ತಂಪು ಪಾನೀಯ:

-ರಾಧಾಕೃಷ್ಣ ತೊಡಿಕಾನ

ಭಾರತೀಯ ಸಂಸ್ಕೃತಿ, ಪರಂಪರೆ ಮತ್ತು ಅರ್ಥವ್ಯವಸ್ಥೆಗೆ ಕೃಷಿ ಕ್ಷೇತ್ರ ಅಡಿಗಲ್ಲು. ಕೃಷಿ ಉತ್ಪಾದನೆಯ ಕೆಲವು ವಲಯಗಳಲ್ಲಿ ಭಾರತವೇ ದೊಡ್ಡಣ್ಣ. ಆದರೂ ರೈತರು ಹಲವು ಸವಾಲುಗಳನ್ನು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಬೆಳೆದ ಬೆಳೆಗೆ ಅರ್ಹವಾದ ಬೆಲೆಯಿಲ್ಲದಿರುವುದು, ತಮ್ಮ ಬೆಳೆಗಳಿಗೆ ತಾವೇ ಬೆಲೆ ನಿರ್ಧರಿಸಲಾಗದಿರುವುದು ಬಹಳಷ್ಟು ರೈತರ ಮನದಾಳದ ನೋವು. ಇಂತಹ ಸಂದರ್ಭದಲ್ಲಿ ಆಹಾರ ಪದಾರ್ಥಗಳಿರಲಿ, ವಾಣಿಜ್ಯ ಬೆಳೆಗಳೇ ಇರಲಿ ಅವುಗಳ ಮೌಲ್ಯ ವರ್ಧನೆಯತ್ತ ಗಮನ ಹರಿಸಿದರೆ ತಮ್ಮ ಉತ್ಪನ್ನಗಳಿಗೆ ತಾವೇ ಬೆಲೆ ನಿರ್ಧರಿಸಲು ಸಾಧ್ಯವಾಗುತ್ತದೆ. ಕೃಷಿ ಮೂಲದಿಂದ ಬೇರೆ ಬೇರೆ ಕಾರಣಗಳಿಂದ ದೂರವಾದವರಲ್ಲಿ ಕೆಲವರು ಮರಳಿ ಕೃಷಿಗೆ ಬಂದು . ಮೌಲ್ಯ ವರ್ಧನೆಯ ದಾರಿಗಳನ್ನು ಕಂಡುಕೊಳ್ಳುತ್ತಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ಪೆರುವಾಜೆ ಗ್ರಾಮದ ನರಸಿಂಹ ತೇಜಸ್ವಿ ಕಾನಾವು ಮತ್ತು ಶ್ವೇತ ಕಾನಾವು ದಂಪತಿ ವಿದೇಶದಲ್ಲಿದ್ದರು. ಹೊರದೇಶಕ್ಕೆ ಹೋದ ಮೇಲೆ ಬಹಳಷ್ಟು ಮಂದಿ ಅಲ್ಲಿಯ ಪ್ರಜೆಗಳಾಗುವುದಕ್ಕೆ, ಅಲ್ಲಿದ್ದುಕೊಂಡೇ ಹೆಚ್ಚು ಹೆಚ್ಚು ಗಳಿಕೆಗೆ ಉತ್ಸುಕರಾಗಿರುತ್ತಾರೆ. ಉದ್ಯೋಗ ಬಿಟ್ಟು ಊರಿಗೆ ಮರಳುವುದು ಬಹಳ ಅಪರೂಪ. ಆದರೆ ಇವರು ವಿದೇಶ ತೊರೆದು ಬೆಂಗಳೂರಿಗೆ ಬಂದು ಉದ್ಯೋಗದಲ್ಲಿ ತೊಡಗಿಕೊಂಡರು. ನಗರವಾಸಿಗಳಾಗಿದ್ದರೂ ಅವರಲ್ಲಿ ಊರ ಸೆಳೆತ ಕಡಿಮೆಯಾಗಿರಲಿಲ್ಲ. ಕೃಷಿಯ ಮೂಲ ಬೇರುಗಳು ಅವರನ್ನು ಬಲವಾಗಿ ಆವರಿಸಿದ್ದವು. ಬೆಂಗಳೂರಿನ ಮನೆಯಲ್ಲಿದ್ದ ಜಾಗದಲ್ಲಿಯೇ ಅಕ್ವಾ ಫೋನ್ಸ್ ಮೂಲಕ ಸೊಪ್ಪು ತರಕಾರಿಗಳನ್ನು ಬೆಳೆದು ಪ್ರಶಸ್ತಿಗೂ ಪಾತ್ರರಾದರು. ಈ ನಡುವೆ ಅನಿವಾರ್ಯವಾಗಿ ಅವರು ಊರಿಗೆ ಮರಳಬೇಕಾಯಿತು. ನರಸಿಂಹ ತೇಜಸ್ವಿ ಕಾನಾವು ಹಾಗೂ ಶ್ವೇತಾ ಕಾನಾವು ದಂಪತಿಗೆ ಕೃಷಿಯ ಬಗ್ಗೆ ಒಲುಮೆಯಿತ್ತು. ಊರಿಗೆ ಬಂದು ಕೃಷಿಯಲ್ಲಿ ತೊಡಗಿಕೊಂಡರು. ಪ್ರಧಾನ ಬೆಳೆ ಅಡಿಕೆಯಾದರೂ ತೆಂಗು, ಕಾಳುಮೆಣಸು ರಬ್ಬರ್, ಬಾಳೆ ಮೊದಲಾದ ಮಿಶ್ರ ಬೆಳೆಗಳಿದ್ದವು. ಬೆಳೆಯುವುದಷ್ಟೇ ಅವರ ಉದ್ದೇಶವಾಗಿರಲಿಲ್ಲ. ಉತ್ಪನ್ನಗಳನ್ನು ಸಂಸ್ಕರಿಸಿ ಮೌಲ್ಯವರ್ಧನೆ ಮಾಡುವುದು ಅವರ ಗುರಿಯಾಗಿತ್ತು.

ಕಾಳುಮೆಣಸು ಮೌಲ್ಯವರ್ಧನೆ:  ಕಾಳುಮೆಣಸು ಕಪ್ಪು ಬಂಗಾರವೆಂದೇ ಪ್ರಸಿದ್ಧ. ಕಾಳುಮೆಣಸು ಅಡುಗೆಗೆ ಮಾತ್ರವಲ್ಲ. ಔಷಧಿಯಲ್ಲೂ ಬಳಕೆಯಿದೆ. ಅದರ ಉಪಯೋಗ ಹಲವು. ಕಾಳುಮೆಣಸನ್ನು ಸಂಸ್ಕರಿಸಿ ಅದರ ಸಾರವನ್ನು ತೆಗೆಯುವುದು ಅವರ ಮೊದಲ ಆದ್ಯತೆಯಾಗಿತ್ತು. ಕಾಳುಮೆಣಸು ಸಂಸ್ಕರಿಸಿ ತೆಗೆದ ಸಾರವನ್ನು ಮಾರಾಟ ಮಾಡಲಿಲ್ಲ. ಆ ಸಾರವನ್ನು ಬಳಸಿಕೊಂಡು ಕಾಳುಮೆಣಸು ನಿಂಬೆ ಮಿಶ್ರಣದ ಪಾನೀಯದ ದ್ರವ ತಯಾರಿಕೆಗೆ ಮುಂದಾದರು. ಪ್ರಾಯೋಗಿಕವಾಗಿ ತಮ್ಮ ಪರಿಸರದಲ್ಲಿಯೇ ಪರಿಚಯಿಸಿದಾಗ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಸಭೆ ಸಮಾರಂಭಗಳಿಗೆ ಪಾನಿಯದ ಅಂಗಡಿಗಳಲ್ಲಿ ಸುಲಭವಾಗಿ ತಯಾರಿಸಿ ಗ್ರಾಹಕರಿಗೆ ನೀಡಬಹುದಾದ ಮಿಶ್ರಣವಿದು. ಬೇಸಿಗೆಯಲ್ಲದೆ ಇತರ ಸಮಯದಲ್ಲೂ ಇದರ ಪಾನೀಯ ಸೇವನೆ ಆರೋಗ್ಯಕ್ಕೂ ಉತ್ತಮವಾದುದರಿಂದ ಇದನ್ನು ಮಾರುಕಟ್ಟೆ ಮಾಡುವ ಯೋಚನೆ ಹುಟ್ಟಿತು

ವಿತಾನ ನ್ಯಾಚುರಲ್ಸ್

.“ ವಿತಾನ ನ್ಯಾಚುರಲ್ಸ್” ಎಂಬ ಸಂಸ್ಥೆಯನ್ನು ಪ್ರಾರಂಭಿಸಿದರು. ಅದರಡಿಯಲ್ಲಿ ನಿಂಬೆ ಮತ್ತು ಕಾಳುಮೆಣಸು ಸಾರದ ಮಿಶ್ರಣ ತಯಾರಿಸಲಾಯಿತು. ಒಂದು ವರ್ಷ ಪ್ರಾಯೋಗಿಕ ನೆಲೆಯಲ್ಲಿದ್ದ ಈ ಸಾರವನ್ನು ಈಗ ಮಾರುಕಟ್ಟೆಗೆ ಪರಿಚಯಿಸಲಾಗಿದೆ. ಹಳ್ಳಿಯಲ್ಲಿ ಆರಂಭವಾದ ಕಿರು ಉದ್ಯಮ-ಮೌಲ್ಯ ವರ್ಧಿತ ಉತ್ಪನ್ನ ಗ್ರಾಹಕರ ಮೆಚ್ಚುಗೆ ಪಡೆದಿದೆ.

ಇದು ತಾಜಾ ನಿಂಬೆರಸ ಹಾಗೂ ಕಾಳುಮೆಣಸು ಸಾರದ ಮಿಶ್ರಣವಾಗಿದೆ. ರಾಸಾಯಿನಿಕ ಸಂರಕ್ಷಕಗಳನ್ನು ಮತ್ತು ಬಣ್ಣ ಬಳಸುತ್ತಿಲ್ಲ ಸುಮಾರು ಆರು ತಿಂಗಳ ಕಾಲ ಕಾಪಿಡಬಹುದು, ಹಾಳಾಗುವುದಿಲ್ಲ ಎನ್ನುತ್ತಾರೆ ಶ್ವೇತಾ ಕಾನಾವು.

ಉಪಯೋಗಿಸುವುದು ಹೇಗೆ?

ಒಂದು ಭಾಗ ಸಾರಕ್ಕೆ ಮೂರು ಭಾಗ ಸೋಡಾ ಅಥವಾ ನೀರನ್ನು ಸೇರಿಸಿದರೆ ಶೀಘ್ರವಾಗಿ ನಿಂಬೆ ಕಾಳುಮೆಣಸು ಪಾನೀಯ ತಯಾಯಾಗುತ್ತದೆ. ಕಾಲು ಕಪ್ ಸಾರಕ್ಕೆ ಮುಕ್ಕಾಲು ಕಪ್ ನೀರು ಸೇರಿಸಿದರೆ ದಿಢೀರ್ ಆಗಿ ಪಾನೀಯ ತಯಾರಿಸಿಕೊಳ್ಳಬಹುದು. ಬೇರೇನೂ ಸೇರಿಸಬೇಕಾಗಿಲ್ಲ. ಆರೋಗ್ಯಕರವಾದ ತಾಜಾ ರುಚಿಯನ್ನು ಪಡೆಯಬಹುದು. 750 ಎಮ್‌ಎಲ್, 5 ಲೀಟರ್ ಹತ್ತು ಲೀಟರ್ 2೦ ಲೀಟರ್ ಗಳಲ್ಲಿಯೂ ಲಭ್ಯವಿದೆ. ಕಾಳು ಮೆಣಸು ಸಾರದ ಸೋಡವಲ್ಲದೆೆ ಕಾಳು ಮೆಣಸು ಬಳಸಿ ಬೇರೆ ಹಣ್ಣುಗಳ ಮಿಶ್ರಣವನ್ನು ತಯಾರಿಸುವ ಯೋಜನೆ-ಯೋಚನೆ ಅವರದು

ಮಾಹಿತಿಗೆ  7899579024

 

 

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group