-ರಾಧಾಕೃಷ್ಣ ತೊಡಿಕಾನ
ಉದ್ಯಮ –ಉದ್ಯೋಗಗಳು ಹಳ್ಳಿಗಳಲ್ಲಿ ಸೃಷ್ಟಿಯಾದರೆ ನಗರಗಳ ಮೇಲಿನ ಒತ್ತಡ ಕಡಿಮೆಯಾಗಲಿದೆ. ನಗರದತ್ತ ಉದ್ಯೋಗ ಅರಸಿ ವಲಸೆ ಹೋಗುವಂತಹ ಪ್ರಮೇಯವೂ ಹೆಚ್ಚು ಬರುವುದಿಲ್ಲ. ನಗರ ಸೇರುವ ಮಂದಿ ಹೆಚ್ಚಾದರೆ ನೀರು , ಸೂರು, ಮೊದಲಾದ ಸೌಲಭ್ಯಗಳು ಒದಗಿಸಬೇಕಾದ ಹೊಣೆಗಾರಿಕೆ ಅಲ್ಲಿಯ ಆಡಳಿತ ವ್ಯವಸ್ಥೆಯ ಮೇಲೆ ಪರಿಣಾಮಗಳು ಬೀರುತ್ತವೆ. ಕಿರು ಉದ್ಯಮ- ವ್ಯವಹಾರಗಳು ಗ್ರಾಮಾಂತರದಲ್ಲಿ ಆರಂಭವಾದರೆ ಬಹಳಷ್ಟು ಮಂದಿ ಹಳ್ಳಿಗಳಲ್ಲಿ ಉದ್ಯೋಗ ಅವಕಾಶಗಳನ್ನು ಕಂಡುಕೊಳ್ಳುತ್ತಾರೆ. ಹಳ್ಳಿಗಳ ಬೆಳವಣಿಗೆಗೂ ಪೂರಕವಾಗಿರುತ್ತದೆ.

ಆದರೆ ಗ್ರಾಮೀಣದಲ್ಲಿ ಇರಬಹುದಾದ ಸೌಲಭ್ಯ ಸಂಪನ್ಮೂಲಗಳನ್ನು ಬಳಸಿಕೊಂಡು ಗ್ರಾಮಾಂತರದಲ್ಲಿ ಉದ್ಯಮ ವ್ಯವಹಾರದಲ್ಲಿ ತೊಡಗಿಕೊಳ್ಳುವ ಮನಸ್ಸು ಮಾಡುವವರು ಕಡಿಮೆ. ಅಪರೂಪಕ್ಕೆ ಕೆಲವರು ನಮ್ಮ ಉನ್ನತ ಹುದ್ದೆಗಳನ್ನು ತೊರೆದು ಹಳ್ಳಿಗಳಿಗೆ ಬಂದು ಕೃಷಿಕಾಯಕದಲ್ಲಿ, ಕಿರು ಉದ್ಯಮದಲ್ಲಿ ತೊಡಗಿಕೊಳ್ಳುವ ಧೈರ್ಯ ತೋರಿದ್ದಾರೆ. ಅಂತಹ ಯುವ ಸಮುದಾಯದಲ್ಲಿ ಆದರ್ಶ ಸುಬ್ರಾಯ ಒಬ್ಬರು.
ಮೂಲಿಕಾವನ ಕೈಲಾರು ಇದರ ಮೂಲಕ ಗಿಡ ಮೂಲಿಕಾ ಔಷಧಿ ಹಾಗೂ ಹಳ್ಳಿಯಲ್ಲಿ ಸಿಗುವ ಹಣ್ಣುಗಳನ್ನು ಮೌಲ್ಯವರ್ಧನೆಗೊಳಿಸಿ ಕೈಲರ‍್ಸ್ ನೇಚುರಲ್ ಐಸ್‌ಕ್ರೀಮ್‌ಗಳನ್ನು ತಯಾರಿಸುತ್ತಿರುವ ಆದರ್ಶ ಸುಬ್ರಾಯ ಅವರು ನಗರದ ವ್ಯಾಮೋಹ ಹೊಂದಿರುವ ಯುವಕರ ನಡುವೆ ಆದರ್ಶರಾಗಿದ್ದಾರೆ. ಆದರ್ಶ ಸುಬ್ರಾಯ ಅವರು ಬೆಂಗಳೂರಿನ ಐಟಿ ಕಂಪೆನಿಯೊಂದರಲ್ಲಿ ಉದ್ಯೋಗದಲ್ಲಿದ್ದರು. ನಗರದ ಐಷಾರಾಮಿ ಜೀವನಕ್ಕೆ ಬೇಕಾದಷ್ಟು ಸಂಪಾದನೆಯೂ ಇತ್ತು. ಆದರೆ ನಗರದ ಗೌಜು ಗದ್ದಲದ ನಡುವೆ ಒಬ್ಬರಾಗಿ ಇರುವುದಕ್ಕೆ ಅವರು ಇಷ್ಟಪಡದೆ ತನ್ನ ಹಳ್ಳಿಯನ್ನೇ ಯಶಸ್ಸಿನ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡರು.

ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಇಳಂತಿಲದವರಾದ ಆದರ್ಶ ಸುಬ್ರಾಯ ಅವರ ತಂದೆ ಗಣಪತಿ ಭಟ್ ಅವರು ನಾಟಿ ವೈದ್ಯರು. ಸಕ್ಕರೆ ಕಾಯಿಲೆ, ಕಿಡ್ನಿಸ್ಟೋನ್, ಮೊದಲಾದುವುಗಳಿಗೆ ಗಿಡಮೂಲಿಕಾ ಔಷಧಿಗಳನ್ನು ನೀಡುತ್ತಾ ಆ ಪರಿಸರದಲ್ಲಿ ಹೆಸರುವಾಸಿಯಾಗಿದ್ದರು. ಆದರ್ಶ ಸುಬ್ರಾಯ ಅವರ ಮೇಲೆ ಇವು ಪ್ರಭಾವ ಬೀರಿದ್ದವು. ಆದುದರಿಂದ ಕಂಪೆನಿ ಉದ್ಯೋಗ ತೊರೆದು ಊರಿಗೆ ಬಂದು ಬಿಟ್ಟರು. ಉನ್ನತ ಉದ್ಯೋಗದಲ್ಲಿದ್ದಾತ ಊರಿಗೆ ಬಂದು ಮಾಡುವುದಾರೂ ಏನು? ಎಂದು ಜನರಾಡಿಕೊಳ್ಳುತ್ತಿದ್ದಂತೆಯೇ ಅವರು ತಂದೆಯ ಗಿಡಮೂಲಿಕಾ ಔಷಧಿಗಳಿಗೆ ಹೊಸ ಸ್ಪರ್ಶ ನೀಡಲು ಮುಂದಾದರು.

2017 ರಲ್ಲಿ ಈ ಮೂಲಿಕಾ ಔಷಧಿಗಳನ್ನು ದೊಡ್ಡಮಟ್ಟದಲ್ಲಿ ತಯಾರಿಸುಲು ಮುಂದಾದರು. ಇದಲ್ಲದೆ ಕಿಡ್ನಿ ಸ್ಟೋನ್, ಒಂದೆಲಗ, ಬಿಲ್ವಾದಿ ತೈಲ, ಮೂಲಿಕಾ ವನ ನೋವಿನ ತೈಲ, ಗಜಕರ್ಣ ಔಷಧಿಗಳಿಗೆ ಮಾರುಕಟ್ಟೆ ಮಾಡಲು ಶ್ರಮವಹಿಸಿದರು. ಇವುಗಳೆಲ್ಲವೂ ಈಗ ಅಮೆಜಾನ್, ಇಂಡಿಯಾ ಮಾರ್ಟ್ಮೊದಲಾದ ಮಾರುಕಟ್ಟೆ ಜಾಲಗಳಲ್ಲಿ ಲಭ್ಯವಿದೆ. ಬೆಂಗಳೂರು, ಮಂಗಳೂರು ಮೊದಲಾದ ಔಷಧಿ ಅಂಗಡಿಗಳಲ್ಲಿ ದೊರೆಯುತ್ತವೆ. ಇದಿಷ್ಟೇ ಅವರ ಉದ್ದೇಶವಾಗಿರಲಿಲ್ಲ. ತಮ್ಮ ಹಾಗೂ ಇತರರ ತೋಟಗಳಲ್ಲಿ ಹಾಳಾಗಿ ಹೋಗಬಹುದಾದ ಹಲಸಿನ ಹಣ್ಣನ್ನು ಮೌಲ್ಯ ವರ್ಧನೆಗೆ ಗಮನ ಹರಿಸಿದರು. ಹಲಸಿನ ಐಸ್‌ಕ್ರೀಮ್ ತಯಾರಿಯಲ್ಲಿ ತೊಡಗಿದರು. ಇದು ಯಶಸ್ಸನ್ನು ತಂದುಕೊಟ್ಟಿತು. ಅದರಂತೆ ಮಾವು, ಇತರ ಹಣ್ಣಿನ ಐಸ್‌ಕ್ರೀಮ್‌ಗಳು ಜನಪ್ರಿಯತೆ ಪಡೆದುಕೊಂಡವು.

ಗಾಂಧಾರಿ ಮೆಣಸಿನ ಐಸ್‌ಕ್ರೀಮ್
ಗಾಂಧಾರಿ ಮೆಣಸು ಅಥವಾ ಸಣ್ಣಮೆಣಸು ಹೆಚ್ಚು ಆರೈಕೆಗಳನ್ನು ಬೇಡದೆ ತೋಟಗಳಲ್ಲಿ ಬೆಳೆಯುವ ಮೆಣಸು . ಹಣ್ಣಾದರೆ ಹಕ್ಕಿಗಳು ತಿಂದುಹೋಗುವ ಈ ಮೆಣಸಿಗೆ ಔಷಧಿಯ ಗುಣವಿದ್ದರೂ ಹಳ್ಳಿಯಲ್ಲಿ ಅದನ್ನು ನಿರ್ಲಕ್ಷಿಸಿರುವುದೇ ಹೆಚ್ಚು. ನಗರಗಳಲ್ಲಿ ಬೇಡಿಕೆಯಿದ್ದರೂ ಕೃಷಿಗೆ ಮುಂದಾವರು ಭಾರೀ ಕಡಿಮೆ. ಅದರ ಔಷಧಿಯ ಗುಣವನ್ನು ಅರಿತ ಆದರ್ಶ್ ಅದರಿಂದಲೂ ಐಸ್‌ಕ್ರೀಮ್ ತಯಾರಿಸಿ ಗ್ರಾಹಕರಿಗೆ ರುಚಿ ಹತ್ತಿಸಿದ್ದಾರೆ. ಹಳ್ಳಿಗರ ತೋಟದಲ್ಲಿ ಯಾವುದೇ ರಾಸಾಯಿನಿಕ ಗೊಬ್ಬರದ ಸೋಂಕೇ ಇಲ್ಲದೆ ತನ್ನಿಂದ ತಾನೇ ನೈಸರ್ಗಿಕವಾಗಿ ಬೆಳೆದ ಹಲಸು, ಮಾವು ಇನ್ನಿತರ ಹಣ್ಣುಗಳನ್ನು ಖರೀದಿಸುತ್ತಾರೆ. ಇದರಿಂದ ಕೃಷಿಕರ ತೋಟದಲ್ಲಿ ಬೆಳೆದ ಹಲಸು ಮಾವಿಗೂ ಸ್ಥಳೀಯವಾಗಿಯೇ ಬೆಲೆ ಬಂದಂತಾಗಿದೆ. ಒಂದಿಷ್ಟು ಆದಾಯವೂ ದೊರಕುವಂತಾಗಿದೆ. ಕೊಳೆತು ಹಾಳಾಗಿ ಹೋಗಬಹುದಾದ ಹಣ್ಣುಗಳೂ ಉಪಯೋಗಕ್ಕೆ ಬಂದಂತಾಗುತ್ತದೆ. ಇದೀಗ 8 ಬಗೆಯ ಐಸ್‌ಕ್ರೀಮ್‌ಗಳನ್ನು ಹಣ್ಣುಗಳಿಂದ ತಯಾರಿಸುತ್ತಿದ್ದಾರೆ. ಮನಸ್ಸಿದ್ದರೆ ಮಾರ್ಗವೆಂಬಂತೆ ಹಳ್ಳಿಗಳಲ್ಲಿಯೂ ಸ್ವ ಉದ್ಯಮ-ಉದ್ಯೋಗದ ಅವಕಾಶಗಳಿಗೆ ದಾರಿಗಳಿವೆ. ಆದರ್ಶರವರು ಸ್ವ ಉದ್ಯಮದಲ್ಲಿ ಮಾತ್ರವಲ್ಲ. ಕೃಷಿ, ಜೇನು ಕೃಷಿಯಲ್ಲೂ ತೊಡಗಿಸಿಕೊಂಡಿದ್ದಾರೆ. ಮಾಹಿತಿಗೆ-9483907376







