spot_img
Wednesday, December 31, 2025
spot_imgspot_img
spot_img

ಹೊಸ್ಮನೆಯ ಶ್ರೀಧರ ಭಟ್ರು, ಕಾಳುಮೆಣಸಿನ ಹೆಡ್ ಮಾಸ್ಟರ್! 

ಬರಹ: ಗಣಪತಿ ಹಾಸ್ಪುರ 
ಮಲೆನಾಡಿನ ಅಡಿಕೆ ಬೆಳೆಗಾರರು ತಮ್ಮ ತೋಟದ ಬೆಳೆಗಳನ್ನು  ಸುಧಾರಿತ ಪದ್ದತಿಯಲ್ಲಿಯೋ, ಸಾಂಪ್ರದಾಯಿಕ ವಿಧಾನದಲ್ಲಿಯೋ ಅಚ್ಚುಕಟ್ಟಾಗಿ ನಿರ್ವಹಣೆ ಮಾಡುತ್ತಿರುವ ಹಲವಾರು ಬೆಳೆಗಾರರು ನಮ್ಮುಂದೆಯೇ ಇದ್ದಾರೆ.ಅವರೇಲ್ಲ ಸ್ವ-ಪರಿಶ್ರಮದಿಂದ ತಮನಿಷ್ಟದಂತೆ ನಿರ್ವಹಣೆ ಮಾಡಿ; ವಿಜ್ಞಾನಿಗಳ ಮಾರ್ಗದರ್ಶನದಲ್ಲಿ ಅಭಿವೃದ್ಧಿ ಮಾಡುವುದೋ, ಅಥವಾ ಉತ್ತಮ ಕೃಷಿಕರ ನಿರ್ದೇಶನದಲ್ಲಿ ಅಡಿಕೆ ತೋಟವನ್ನು ಸಾಗುವಳಿ ಮಾಡುವುದೋ. ..ಹೀಗೆ ಅವರಿಚ್ಛೆ, ಆಸಕ್ತಿಗೆ ಅನುಗುಣವಾಗಿ  ಜಮೀನನ್ನು  ಸಾಗುವಳಿ ಮಾಡುವ ಕೃಷಿಕರು ಇದ್ದಾರೆ. ಯಾವುದೇ ಬೆಳೆಯನ್ನು ಬೆಳೆಯುತ್ತಿರುವ ಕೃಷಿಕನಾಗಿರಲಿ ಅವರಿಂದ ಬೇರೆಯವರು ತಿಳಿದುಕೊಳ್ಳುವುದು ಬಹಳಷ್ಟು ವಿಚಾರಗಳು ಇದ್ದೇ ಇರುತ್ತವೆ. “ನಾನು ಪರಿಪೂರ್ಣ ಕೃಷಿಕ” ಎನ್ನುವುದಕ್ಕಿಂತ; “ನಾನು ಕಲಿಯುತ್ತಿರುವ ಕೃಷಿಕ” ಎಂದು ಹೇಳಿಕೊಳ್ಳುವ ಕೃಷಿಕರು  ಸಹಾ ನಮ್ಮ ಮುಂದಿದ್ದಾರೆ.ಇಂಥಹ ಸಾಮಾನ್ಯ ಕೃಷಿಕರಲ್ಲಿ ಹೊಸ್ಮನೆಯ ಶ್ರೀಧರ ಭಟ್ ಭಿನ್ನವಾಗಿಯೇ ಕಾಣುತ್ತಾರೆ.
ಉ.ಕ.ಜಿಲ್ಲೆಯ ಯಲ್ಲಾಪುರ ತಾಲೂಕಿನ ಚವತ್ತಿ ಸಮೀಪದ  ಹೊಸ್ಮನೆಯ ನಿವಾಸಿಯಾಗಿರುವ  ಶ್ರೀಧರ ಗೋವಿಂದ ಭಟ್ ಮೂಲತಃ ಶಿರಸಿ ತಾಲೂಕಿನ ಕಕ್ಕೋಡಿನವರು.1960 ರಲ್ಲಿ ಚವತ್ತಿ ಹೊಸ್ಮನೆಯ ಜಮೀನು ಖರೀದಿ ಮಾಡಿದಾಗ ಇವರ ತಂದೆಯವರು  ಅವಿಭಕ್ತ ಕುಟುಂಬದಲ್ಲಿ ವಾಸವಾಗಿದ್ದರು.ಕ್ರಮೇಣ ಹಿಸೆ ಪಡೆದಾಗ ಇವರ ಪಾಲಿಗೆ ಸುಮಾರು ಐದು ಎಕರೆ ಭೂಮಿ ಲಭಿಸಿತ್ತು.ಆ ದಿನದಲ್ಲಿ  ಕೈಯಲ್ಲಿ ಆಗುವಷ್ಟು ಭೂಮಿಯನ್ನು ಭತ್ತದ ಬೇಸಾಯ ಮಾಡುತ್ತಾ ಜೀವನದ ಬಂಡಿ ಓಡಿಸುವುದು ಅನಿವಾರ್ಯವೇ ಆಗಿತ್ತು.ಇವರ ಭೂಮಿಯ ಮದ್ಯ ಹಳ್ಳವಿದ್ದ ಕಾರಣ, ಆ ಹಳ್ಳದ ಅತ್ತ, ಇತ್ತ ಮಾತ್ರ ಸುಮಾರು ಎರಡು ಎಕರೆಯಷ್ಟು ಭೂಮಿಯಲ್ಲಿ ಭತ್ತದ ಕೃಷಿ ಮಾಡಿದರೇ; ಸುಮಾರು ಮೂರು ಎಕರೆಯಷ್ಟು  ಭೂಮಿ ( ಎಲ್ಲ ಭೂಮಿಯನ್ನು ಸಾಗುವಳಿ ಮಾಡಲು ಆರ್ಥಿಕ ಬಲವಿರಲಿಲ್ಲ)ಪಾಳು ಬಿಟ್ಟಿದ್ದು ಉಂಟು.
ಹಲವಾರು ವರುಷದ ಬಳಿಕ ಅಡಿಕೆ ಬೇಸಾಯ ಮಾಡಿದರೂ, ಭತ್ತದ ಕೃಷಿಯನ್ನು  ಮಾಡುವ ಪದ್ದತಿಯೂ ಚಾಲ್ತಿಯಲ್ಲಿ ಇತ್ತು. ಈ ಕಾಲದಂತೆ ಅಡಿಕೆ ತೋಟ ಮಾಡಲು  ಯಾವುದೇ ಸೌಲತ್ತು, ಮಾರ್ಗದರ್ಶಕರು,ಯಂತ್ರೋಪಕರಣಗಳು ಇರದೇ ಹೋದ ದಿನದಲ್ಲಿ,ನಮ್ಗೆ ತಿಳಿದ ಪದ್ದತಿಯಲ್ಲಿ ಮಾನವನ ಶ್ರಮದಲ್ಲಿಯೇ ಒಂದಿಷ್ಟು ( ಸುಮಾರು ಎರಡು ಎಕರೆ ಕ್ಷೇತ್ರ) ಜಾಗವನ್ನು  1975 ರಲ್ಲಿ ಅಡಿಕೆ ತೋಟವಾಗಿ ಇವರ ತಂದೆಯವರು ಪರಿವರ್ತಿಸಿದರು. ದಡ್ಡಿ ಗೊಬ್ಬರ ಹಾಕಿ, ಬೆಟ್ಟದ ಸೊಪ್ಪನ್ನು ಮುಚ್ಚುವ  ಸಾಂಪ್ರದಾಯಿಕ ಪದ್ದತಿಯೇ  ಸರಿಯೆಂದು ಅನುಸರಿಸಿದ್ದರು.ಮನೆ ಎದುರಿನ ತಗ್ಗಿನ ಜಾಗವನ್ನು ಮೂವತ್ತು ವರುಷದ ಹಿಂದೆ ತೋಟವಾಗಿ ಮಾಡಿದರೇ, 2002 ರಲ್ಲಿ ಹಾಕಿದ ತೋಟವೂ ಇಲ್ಲಿದೆ. ಇತ್ತಿಚೆಗೆ ಹಾಕಿದ ತೋಟವೆಲ್ಲವೂ ಸುಧಾರಿದ ಪದ್ದತಿಯಲ್ಲಿ  ಹಾಕಿದ್ದಾರೆ. ಸಾಕಷ್ಟು ಅಂತರದಲ್ಲಿ ಸಸಿಗಳನ್ನು ನೆಟ್ಟು ಚನ್ನಾಗಿ ಆರೈಕೆ ಮಾಡಿ ಪೋಷಿಸಿದ್ದಾರೆ. ಶ್ರೀಧರ ಭಟ್ರ ಕುಟುಂಬವೂ ಹಂತ ಹಂತವಾಗಿ ಹಾಕಿದ ತೋಟವು ಆಯಾ ಕಾಲಘಟ್ಟದಲ್ಲಿ, ಆಗೀನ ತಿಳುವಳಿಕೆ , ಚಾಲ್ತಿಯಲ್ಲಿ ಇದ್ದ ಪದ್ದತಿಯಲ್ಲಿಯೇ ಹಾಕಿ ಪೋಷಿಸಿದ ತೋಟವಾಗಿದ್ದರಿಂದ ,ಆದಿನದಲ್ಲಿ ಅದು ವ್ಯವಸ್ಥಿತವಾಗಿ ಇರುವ ವಿಧಾನವೂ ಆಗಿದ್ದರಿಂದ ಆ ಸಿಸ್ಟಂನ್ನೆ ಅನುಸರಿಸಿದ್ದರು. ಅವರ ಹಳೆ ತೋಟವನ್ನು ಹಾಕುವಾಗ ಮೆಟ್ಟಿನ ಲೆಕ್ಕದಲ್ಲಿ ಬರಣ ಮಾಡಿದ್ದರಂತೆ! ಈ ಕಾಲದಲ್ಲಿ ಅದು ಸರಿಯಾದ ವಿಧಾನ ಅಲ್ಲವೆಂದು ಸುಲಭವಾಗಿ ಹೇಳಬಹುದು. ಆದ್ರೆ, ಆ ಕಾಲದ ಜನರಿಗೆ  ಅದೇ ಸರಿಯಾದ ವಿಧಾನ ಆಗಿರಬಹುದು ಎಂದು ಶ್ರೀಧರ ಭಟ್ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಸುಧಾರಿತ ಬಸೀಗಾಲುವೆ!   
  ಹೊಸ್ಮನೆಯ ಶ್ರೀಧರ ಭಟ್ರು ತಮ್ಮ ಹಳೆಯ ತೋಟವನ್ನು ಸುಧಾರಿತ ಪದ್ದತಿಯಲ್ಲಿ ಮಾಡಬೇಕೆಂದು ಸಂಕಲ್ಪಿಸಿದರು. ಹೇಗೆ ಮಾಡಬೇಕು ಎಂಬುದಕ್ಕೆ ಬೇರೆ ಬೇರೆ ವ್ಯಕ್ತಿಗಳನ್ನು, ಅನುಭವಿಗಳನ್ನು ಸಂಪರ್ಕ ಮಾಡಿದರು. ಅಂತರ್ ಬಸೀಗಾಲುವೆ ಮಾಡಿದರೇ ತೋಟಕ್ಕೆ ಅನುಕೂಲ, ಹೆಚ್ಚು ಇಳುವರಿ ಪಡೆಯಬಹುದು ಎಂಬ ಮಾಹಿತಿ ಕಲೆಹಾಕಿದರು. ಈ ಹಳೆ ತೋಟದ  ಶುರುವಿನಲ್ಲಿ ಇದ್ದ ಬೃಹತ್ ಕೆರೆಯನ್ನು (ಬೇಸಿಗೆಯಲ್ಲಿ ಬತ್ತಿ ಹೋಗುತಿತ್ತು)ಆಗಲೇ ಮುಚ್ಚಿದ್ದರಿಂದ, ಕೆಳ ಭಾಗದ ಅಡಿಕೆ ತೋಟದಲ್ಲಿ ಜವಳು ಹೆಚ್ಚಾಗಿತ್ತು. ಇದ್ಕೆ ಡ್ರೈನೇಜ್ ಮಾಡಿದರೇ ತೋಟ ಬದಲಾವಣೆ ಆಗಿ, ಸುಧಾರಿಸಬಹುದು ಎಂದು ಅನಿಸಿತ್ತು. ಅಂದು ಈ ಅಂತರ್ ಬಸೀಗಾಲುವೆ ಈಗಿನಂತೆ ಪ್ರಚಲಿತದಲ್ಲಿಯೂ ಇರಲಿಲ್ಲ. ಕೆಲವೊಂದು ದೊಡ್ಡ ಬೆಳೆಗಾರರು ಆ ಬಗೆಯ ಕಾಲುವೆಯನ್ನು ಮಾಡಿದ್ದರಿಂದ, ಶ್ರೀಧರ ಭಟ್ರು ತಮ್ಮ ತೋಟದಲ್ಲಿ  ಅದ್ನ ಅಳವಡಿಸಿ ಕೊಳ್ಳಲು ಸಿದ್ದತೆ ಮಾಡಲು ಉತ್ಸಾಹ ತೋರಿದರು.
1992-93 ನೇ ಸಾಲಿನಲ್ಲಿ ಮಂಗಳೂರು  ಹಂಚನ್ನು ( ಜಿರೋ ಕ್ಲಾಸ್) ತಂದು, ನಾಲ್ಕುವರೆ ಅಡಿ ಆಳದ ಕಾಲುವೆಯನ್ನು ಜನರೇ ತೆಗೆದು ವ್ಯವಸ್ಥಿತವಾಗಿ ಹಂಚನ್ನು ಹೊಂದಿಸಿ  ಮೇಲಿಂದ ತೆಂಗಿನಸಿಪ್ಪೆ ಹಾಗೂ ಅಡಿಕೆಸಿಪ್ಪೆ ಹಾಕಿ ಮಣ್ಣನ್ನು ತುಂಬಿದರು. ಆಗ ಅಂತರ್ ಬಸೀಗಾಲುವೆಯನ್ನು ಪ್ರತಿ ಬರಣಕ್ಕು ಮಾಡಲಿಲ್ಲ‌! ಅಷ್ಟೊಂದು  ಅನುಕೂಲವೂ ಇರಲಿಲ್ಲ; ಸಾಕಷ್ಟು ಅಂತರದಲ್ಲಿ ಡ್ರೈನೇಜ್ ಮಾಡಿದರೂ ಸಾಕಾಗಬಹುದು ಎಂಬ ಉದ್ದೇಶ ದಿಂದ ಒಂದಿಷ್ಟು ಕಾಲುವೆಗೆ ಮಾತ್ರ ಅಂತರ ಬಸೀಗಾಲುವೆ ಮಾಡಿದರು. ಆದ್ರೇ ಕೇಲವೆ ವರುಷದಲ್ಲಿ ಈ ಹಂಚಿನ ಡ್ರೈನೇಜ್ ಬ್ಲಾಕ್ ಆದ ಕಾರಣ,ಪುನಃ 2000 ನೇ ಇಸ್ವಿಯಲ್ಲಿ ಪಿ.ಯು.ಸಿ.ಪೈಪ್ ನಿಂದ  ಅಲ್ಲಲ್ಲಿ ಕಡಿಮೆ ಖರ್ಚಿನಲ್ಲಿ ಉತ್ತಮ ಕೆಲಸದ ಜೊತೆಗೆ ವ್ಯವಸ್ಥಿತ ಕೆಲ್ಸ ಆಗಬೇಕೆಂಬ ಗುರಿಯನ್ನು ಇಟ್ಟುಕೊಂಡು ನೂತನ ಡ್ರೈನೇಜ್ ನ್ನು ಸುವ್ಯವಸ್ಥಿತವಾಗಿ ಮಾಡಿದರು. ಈ ಅಂತರ್ ಬಸೀಗಾಲುವೆ ಇದ್ದರೂ ಒಪನ್ ಕಾಲುವೆಯನ್ನು ಇಟ್ಟುಕೊಂಡಿರುವ ಶ್ರೀಧರ ಭಟ್ರು ನಮ್ಮಲ್ಲಿಯ ಭೂಮಿಯ ತೋಟಕ್ಕೆ ; ಅದ್ರಲ್ಲಿಯೂ ಕಾಳುಮೆಣಸು ಇರುವ ಕಾರಣಕ್ಕೆ ಒಂದು ಅಡಿಯಷ್ಟು ಒಪನ್ ಕಾಲುವೆ ಇರಲೇಬೇಕು ಎಂದು ಪ್ರತಿಪಾದಿಸುತ್ತಾರೆ.ಈವಾಗ  ಈ ಪ್ರಗತಿಪರ ಕೃಷಿಕರು ಒಪನ್ ಕಾಲುವೆಗೆ ಅವಶ್ಯಕತೆ ಇದ್ದಲ್ಲಿ ಪ್ಲಾಸ್ಟಿಕ್ ಕವರ್ ನ್ನು ಮುಚ್ಚಿಕೊಳ್ಳುತ್ತಾರೆ. ಇದರಿಂದ ಕಾಲುವೆ ಹಿಸಿಯುವುದು ಹಾಗೂ ಅನಶ್ಯಕ ಕಳೆ ಬೆಳೆಯುವುದನ್ನು  ತಡೆಯಲು ಸಾಧ್ಯವೆನ್ನುತ್ತಾರೆ.
ಅಡಿಕೆ ತೋಟದ ಸೊಬಗು
ಆ ಭಾಗದ ಪ್ರಗತಿಪರ ಕೃಷಿಕರಲ್ಲಿ ಒಬ್ಬರಾದ ಶ್ರೀಧರ ಭಟ್ರು ಕೇವಲ ಕೃಷಿಕರಲ್ಲ. ಆಸಕ್ತರಿಗೆ ಕೃಷಿಯ ಬಗ್ಗೆ ಮಾಹಿತಿ ನೀಡುವ ಕೃಷಿ ಮಾರ್ಗದರ್ಶಕರು ಹೌದು. ಈ ಕೃಷಿಕರು ಈಗ ಸಾಂಪ್ರದಾಯಿಕ ಕೃಷಿಯ ಬದಲಾಗಿ, ಸಂಪೂರ್ಣ ವೈಜ್ಞಾನಿಕ ಕೃಷಿಯನ್ನು ಅಳವಡಿಸಿಕೊಂಡಿದ್ದಾರೆ.
ಇದರಿಂದ ಅಡಿಕೆ ತೋಟವು ಸುಧಾರಿಸಿದೆ, ತೋಟದ ಉತ್ಪನ್ನವೂ ಹೆಚ್ಚಿದೆ ಎಂಬುದು ಅವ್ರ ಮನದಾಳ ಮಾತು.  2002 ರಲ್ಲಿ ಡಾ. ವಿ.ಎಮ್ ಹೆಗಡೆ ಅವರ ಸಂಪರ್ಕ ಶುರುವಾದ ಮೇಲಿಂದ ಅವರ ಮಾರ್ಗದರ್ಶನದಲ್ಲಿ ಸುಧಾರಿತ ಪದ್ದತಿ ಹಾಗೂ ವೈಜ್ಞಾನಿಕ ವಿಧಾನದಲ್ಲಿ  ಕೃಷಿ ಭೂಮಿ ಅಭಿವೃದ್ಧಿ ಮಾಡುತ್ತಾ ಬಂದಿರುವ ಇವರು, ಅಡಿಕೆ ಹಾಗೂ ಕಾಳುಮೆಣಸಿನ ಕೃಷಿಯನ್ನು ಸಮನಾಗಿ ಪರಿಗಣಿಸಿ ಉತ್ತಮವಾಗಿ ನಿರ್ವಹಣೆ ಮಾಡುತ್ತಿದ್ದಾರೆ.ಈ ಕೃಷಿ ಬೆಳೆಯಿಂದ  ಯೋಗ್ಯವಾದ ಫಲ ಪಡೆದುಕೊಂಡು ಕೃಷಿಯ ಬದುಕನ್ನು ಕಟ್ಟಿಕೊಂಡಿರುವ ಈ ರೈತರು ಸಂತೃಷ್ತಿಯಿಂದ ಜೀವನದ ಬಂಡಿ ಸಾಗಿಸುತ್ತಿದ್ದಾರೆ.
ಆಧುನಿಕ ಪದ್ದತಿಯಲ್ಲಿ ಅಡಿಕೆ ತೋಟವನ್ನು ನಿರ್ವಹಣೆ ಮಾಡಲು ಆರಂಭ ಮಾಡಿದಾಗ  ಸಾವಯವ ಗೊಬ್ಬರದ ಜೊತೆ  ರಾಸಾಯನಿಕ ಗೊಬ್ಬರವನ್ನು ಕೃಷಿ ತಜ್ಞರ ಶಿಪಾರಸ್ಸಿನಂತೆ ಸಕಾಲಕ್ಕೆ ಹಾಕುತ್ತಿದ್ದೇನೆ. ಮನೆಯ ದಡ್ಡಿ ಗೊಬ್ಬರ ಬಂದಷ್ಟು ಮರಕ್ಕೆ ಹಾಕಿ ಆರೈಕೆ ಮಾಡುತ್ತಾರೆ. ಮಳೆ ಶುರುವಾಗುವ ಮೊದಲೇ  ವ್ಯವಸ್ಥಿತವಾಗಿ ಮುಚ್ಚಿಗೆ ,ಬೇಸಿಗೆಯಲ್ಲಿ ಸಾಕಷ್ಟು ನೀರನ್ನು ಹಾಯಿಸುತ್ತಾರೆ.ಹಿಂದೆ ಸಾಂಪ್ರದಾಯಿಕ ಕೃಷಿ ಪದ್ದತಿ ಅನುಸರಿಸಿದಾಗ ಎಕರೆಗೆ  8-10 ಕ್ವಿಂಟಲ್ ಅಡಿಕೆ ಫಸಲು ಲಭಿಸುತಿತ್ತು. ಆದ್ರೆ ಈಗ ಸುಧಾರಿತ ಪದ್ದತಿಯಲ್ಲಿ ತೋಟದ ನಿರ್ವಹಣೆ ಮಾಡ್ತಾ ಇರುವುದರಿಂದ  ಸರಾಸರಿ ಎಕರೆಗೆ 20-22ಕ್ವಿಂಟಲ್  ಇಳುವರಿ ಪಡೆಯುತ್ತಿದ್ದೇನೆ ಹೆಮ್ಮೆಯಿಂದ ಹೇಳುತ್ತಾರೆ. ಇವರ ತೋಟದಲ್ಲಿ ಅಡಿಕೆಯ ಹಿಡಿಪು ಚನ್ನಾಗಿ ಬರುವ ಹಲವಾರು ಮರಗಳಿದ್ದು,ಆ ಮರಗಳ ಬೀಜದ ಅಡಿಕೆಯೂ ಅನೇಕರು ಒಯ್ದಿದ್ದಾರೆ. ಜಿಲ್ಲೆಯ ಆಚೆಗೂ ಹೋಗಿದೆ. ತೋಟಗಾರಿಕಾ ಇಲಾಖೆಯವರು ಈ ರೈತರ ಬೀಜದ ಅಡಿಕೆಯನ್ನು ಪಡೆದು ಸಸಿ ಮಾಡಿರುವುದು ಗಮನಾರ್ಹ ಸಂಗತಿ.
ಕಾಳುಮೆಣಸಿನ ಸಾಮ್ರಾಜ್ಯ! 
ಹೊಸ್ಮನೆಯ ಶ್ರೀಧರ ಭಟ್ರು ಕೇವಲ ವಾಣಿಜ್ಯ ಬೆಳೆಗೆ ಮಾತ್ರ ಅಂಟಿಕೊಂಡವಲ್ಲ.ಅವರು ಸಾಂಬಾರು ಬೆಳೆಯ ಕೃಷಿಗೂ ಆದ್ಯತೆ ಕೊಟ್ಟವರು.  1973-74 ರಲ್ಲಿ  ಕಾಳು ಮೆಣಸನ್ನು ತೋಟದಲ್ಲಿ ಬೆಳೆಸಬೇಕು ಅಂತ ಅನಿಸಿದಾಗ, ಮೂಲ ಮನೆಯಿಂದ ಒಂದಿಷ್ಟು ಬಳ್ಳಿಯನ್ನು ತಂದು ನೆಟ್ಟರು. ಅಲ್ಲದೇ,ಬೇರೆ ಬೇರೆ ಕಡೆಯಿಂದ ಸಿಕ್ಕಿದ ತಳಿ ಮೆಣಸಿನ ಕುಡಿ ತಂದು ಪೋಷಣೆ ಮಾಡಿದರು.ಈಗೀನಂತೆ ವಿಶೇಷ ಆರೈಕೆಯೂ ಇರಲಿಲ್ಲ; ರೋಗ ಭಾದೆನು ಕಡಿಮೆ ಇತ್ತು.ತುತ್ತ – ಸುಣ್ಣ ಸಿಂಪಡಿಸುವ ಪದ್ದತಿಯೂ  ಇರಲಿಲ್ಲ . ಆದಿನದಲ್ಲಿ ಮೆಣಸಿನ ಬೆಳೆ ಧರ್ಮದ ಬೆಳೆಯಾಗಿತ್ತು.ವಿಶೇಷ ಆರೈಕೆ ಇಲ್ಲದಿದ್ದರೂ ಏಳೆಂಟು ಕ್ವಿಂಟಲ್ ಕಾಳುಮೆಣಸಿನ ಇಳುವರಿ ಪಡೆದಿದ್ದೆವು. ಬಹುಷಃ 1980 ರಲ್ಲಿ ಸುಧಾರಿತ ತಳಿ ಪಣಿಯೂರ  ಬಂದ್ಮೇಲೆಯೇ ಕಾಳು ಮೆಣಸಿಗೆ ಹೆಚ್ಚು ರೋಗ ಕಾಣಿಸಲು ಆರಂಭ ಆಯ್ತು ಎನ್ನುತ್ತಾರೆ  ಶ್ರೀಧರ ಭಟ್.
ಕಾಳುಮೆಣಸಿನ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ಹೊಸ್ಮನೆಯ ಶ್ರೀಧರ ಭಟ್ರು ಹನ್ನೆರಡುಕ್ಕು ಹೆಚ್ಚುಬಗೆಯ ಸ್ಥಾನೀಕ ತಳಿಯನ್ನು ಉಳಿಸಿ, ಬೆಳೆಸಿದ್ದಾರೆ.ಅಲ್ಲದೇ, ಇವರ ತೋಟದಲ್ಲಿ ಪಣಿಯೂರ, ಕರಿಮುಂಡ, ತೇವಂ,ಮಲ್ಲಿಸರ,ಕುರಿಮಲೆ…ಹೀಗೆ ಭಿನ್ನಭಿನ್ನವಾದ ತಳಿಗಳನ್ನು ಬೆಳೆಸಿದ್ದಾರೆ. ಈಗ ಸುಮಾರು ಮೂರು ಸಾವಿರ ಬಳ್ಳಿಗಳು ಇವರ ತೋಟದಲ್ಲಿದ್ದು,ಅವುಗಳನ್ನು ಮಕ್ಕಳಂತೆ ಬೆಳೆಸಿದ್ದಾರೆ.ಹಲವು ಕಡೆ ಮೆಣಸಿನ ಬುಡಕ್ಕೆ ಪ್ಲಾಸ್ಟಿಕ್ ಕವರನ್ನು ಹಾಕಿ ಸಂರಕ್ಷಿಸಿದ್ದಾರೆ.ಅವರ ತೋಟದಲ್ಲಿರುವ ಮೆಣಸಿ ಬಳ್ಳಿಗಳು ಮುಗಿಲೆತ್ತರಕ್ಕೆ ಹಬ್ಬಿದ್ದು, ಅವುಗಳನ್ನು ನೋಡುವುದೇ ಕಣ್ಣಿಗೊಂದು ಹಬ್ಬವಾಗಿದೆ.ಕೇವಲ ಅಡಿಕೆ ಮರಕ್ಕೆ ಒಂದೆಯಲ್ಲ ಏರಿಯ ಮೇಲಿದ್ದ ತೆಂಗಿನ ಮರವೂ ಸೇರಿದಂತೆ ಅನೇಕ ಕಾಡಿನ ಮರಗಳಿಗೂ ಮೆಣಸಿನ ಮರಗಳಿದ್ದು ಅವೆಲ್ಲ ಹುಲುಸಾಗಿ ಬೆಳೆಸಿದ್ದಾರೆ. ಅಲ್ಲದೇ,ಈ ರೈತರು ಕೃಷಿ ವಿಜ್ಞಾನಿ ಡಾ. ವೇಣುಗೋಪಾಲ ಅವರ ಮಾರ್ಗದರ್ಶನದಲ್ಲಿ (ಶ್ರೀಧರ ಭಟ್ರ ತೋಟದಲ್ಲಿದ್ದ )ವಿಶೇಷ ಮೆಣಸಿನ ತಳಿಯನ್ನು ಗುರುತಿಸಿದ್ದು ಈಗಾಗಲೇ ” ಶಾಲ್ಮಲಾ” ಹಾಗೂ ” “ಸೂರ್ಯ” ಎನ್ನುವ ಎರಡು ತಳಿಯನ್ನು ಸ್ವರ್ಣವಲ್ಲಿ ಮಠದಲ್ಲಿ ಬಿಡುಗಡೆ ಮಾಡಿದ ಹೆಗ್ಗಳಿಕೆ ಇವರದ್ದು.
ಹೊಸ್ಮನೆಯ ಈ ಪ್ರಗತಿಪರ ಮೆಣಸು ಬೆಳೆಗಾರರು ವ್ಯವಸ್ಥಿತವಾಗಿ ಕಾಳುಮೆಣಸು ಬೆಳೆಸುವುದರ ಜೊತೆಗೆ, ಮೆಣಸಿನ ಕೊಯ್ಲು ಹಾಗೂ ಪ್ಲಾಸ್ಟಿಕ್ ಕವರ್ ಮುಚ್ಚಿಸಿ ಒಣಗಿಸುವ ಕ್ರಮವನ್ನು ಕಚ್ಚುಕಟ್ಟಾಗಿ ಮಾಡುತ್ತಾರೆ.  ಗುಣಮಟ್ಟದ ಮೆಣಸಿನ ಕಾಳು ಸಿದ್ದ ಮಾಡುವುದ್ರಲ್ಲಿ ಶ್ರೀಧರ ಭಟ್ರ ಕಾಳಜಿ,ಪರಿಶ್ರಮ ಮೆಚ್ಚಲೇಬೇಕು. ಅವರು ಕೇವಲ ಕಪ್ಪು ಕಾಳು ಒಂದೇಯಲ್ಲ ಬಿಳಿ ಕಾಳು ( ಬೊಳಕಾಳು) ಸಿದ್ದ ಮಾಡುವುದ್ರಲ್ಲಿಯೂ ಎತ್ತಿದ ಕೈ. ಕೇವಲ ಮೆಣಸಿನ ಬೆಳೆ ಬೆಳೆಯುವುದಲ್ಲ, ಗುಣಮಟ್ಟದ ಕಾಳು ಸಿದ್ದ ಮಾಡುವುದಕ್ಕು ರೈತರು ಆದ್ಯತೆ ಕೊಡಬೇಕು  ಅಂತ ಪ್ರತಿಪಾದನೆ ಮಾಡುತ್ತಾರೆ.
ಇವರು ಸ್ವಖಾಸುಮ್ಮನೆ ಯಾವುದೇ ಬೆಳೆಯನ್ನು ಮಾಡುವವರಲ್ಲ.ಆ ಬೆಳೆಯ ಬಗ್ಗೆ ಒಂದಿಷ್ಟು ಮಾಹಿತಿ ತಿಳಿದುಕೊಳ್ಳುತ್ತಾರೆ. ಅದರಂತೆ ಕೃಷಿ ಮಾಡಲು ಅತೀವ ಪ್ರಯತ್ನ ಮಾಡುತ್ತಾರೆ. ಈ ಮೆಣಸಿನ ಕೃಷಿಯಲ್ಲಿಯೂ ಸಹಾ ಈ ರೈತರು  ಒಂದು ಬಳ್ಳಿಯಲ್ಲಿ ಈ ವರುಷ ಏಷ್ಟು ಇಳುವರಿ ಬರುತ್ತೆ ಅಂತ ಲೆಕ್ಕಚಾರವನ್ನು ಮಾಡುತ್ತಾರೆ. ಇವರ ತೋಟದಲ್ಲಿ ಉತ್ತಮ ಫಲ ಬಂದರೇ ಒಂದು ಬಳ್ಳಿಯಲ್ಲಿ  ಎರಡುವರೆ ಕೆ.ಜಿ ಒಣ ಕಾಳು ಲಭಿಸಿದೆ. ಕಡಿಮೆ ಎಂದರೂ ಒಂದು ಮೂಕ್ಕಾಲು ಕೆ.ಜಿ ವರೆಗೂ ಒಣಗಿದ ಕಾಳು ಒಂದೇ ಬಳ್ಳಿಯಿಂದ ಲಭಿಸಿದ್ದು ಉಂಟು ಅಂತ ಖಚಿತವಾಗಿ ಹೇಳುತ್ತಾರೆ. ಈವರ ತೋಟದಲ್ಲಿ ಲೋಕಲ್ ತಳಿಗಳೆ ಹೆಚ್ಚಿನ ಪ್ರಮಾಣದಲ್ಲಿ ಇದ್ದರೂ   ಸಹಾ 47 ಕ್ವಿಂಟಲೂ ವರೆಗೂ ಇಳುವರಿ ಪಡೆದಿದ್ದಾರೆ. ಒಂದೆರಡು ವರುಷದ ಹಿಂದೆ ಅನೇಕ ಬಳ್ಳಿಗಳು ಡೈಮೇಜ್ ಆಗಿದ್ದರೂ ಸಹಾ ಕಳೆದ ಸೀಜನ್ನಿನಲ್ಲಿ ಇಪ್ಪತ್ತೈದು ಕ್ವಿಂಟಲ್ ಕಾಳುಮೆಣಸಿನ ಫಲ ಸಿಕ್ಕಿದೆ ಎನ್ನುತ್ತಾರೆ ಶ್ರೀಧರ ಭಟ್.
ಪ್ರಧಾನ ಬೆಳೆ ಅಡಿಕೆಯಂತೆಯೇ ಕಾಳುಮೆಣಸಿನ ಕೃಷಿಯನ್ನು ಮಾಡ್ತಾ ಇರುವ ಶ್ರೀಧರ ಭಟ್ರು, ಹತ್ತಾರು ಊರುಗಳನ್ನು ತಿರುಗಿ ಮೆಣಸಿ ಕೃಷಿಯ ಬಗ್ಗೆ ಸಾಕಷ್ಟು ಮಾಹಿತಿಯನ್ನು  ಕಲೆಹಾಕಿದ್ದಾರೆ. ತಾನು ನೋಡಿ, ಸಂಗ್ರಹ ಮಾಡಿದ ಮಾಹಿತಿಯನ್ನು ಆಸಕ್ತರಿಗೆ ಮುಕ್ತವಾಗಿ ಹಂಚಿಕೊಳ್ಳುತ್ತಾರೆ. ಈ ಆತ್ಮೀಯತೆ, ಮಾಹಿತಿ ವಿನಿಮಯ ಮಾಡಿಕೊಳ್ಳಲು ಎಲ್ಲರಿಂದಲೂ ಸಾಧ್ಯವಿಲ್ಲ.ಅನೇಕರು ಮಾಹಿತಿಯನ್ನು ಮುಕ್ತವಾಗಿ ತೆರೆದು ಇಡುವುದು ಇಲ್ಲ. ಜೊತೆಗೆ, ಈ ರೈತರು ಮೆಣಸಿನ  ತಳಿಯ ಬಗ್ಗೆ ಅದ್ಯಯನ ಮಾಡಲು ತಮ್ಮ ಮೆಣಸಿನ ತೋಟವನ್ನೇ  ತಜ್ಞ ರಿಗೆ ನೀಡಿ ಪ್ರೋತ್ಸಾಹ, ಸಹಕಾರ ನೀಡಿದ್ದು ಉಂಟು. ಆತ್ಮೀಯರಿಗೆ, ಆಸಕ್ತಿಯಿಂದ ಬಂದವರಿಗೆ ಅಡಿಕೆ ಹಾಗೂ ಮೆಣಸಿನ ಕೃಷಿಯ ಬಗ್ಗೆ ಸಾಕಷ್ಟು ಮಾಹಿತಿಯನ್ನು ನೀಡುವ ಸಾಮರ್ಥ್ಯ ಇವರಲ್ಲಿ ಅಡಕವಾಗಿದೆ. ಈ ಎಲ್ಲ ಕಾರಣಕ್ಕೆ  ಶ್ರೀಧರ ಭಟ್ರನ್ನು   ” ಕಾಳುಮೆಣಸಿನ ಹೆಡ್ ಮಾಸ್ಟರ್ ” ಎಂದು ಕರೆದರು ಅತೀಶಯೋಕ್ತಿ ಆಗಲಾರದು.
ಇವರ ತೋಟದಲ್ಲಿ ಸುಮಾರು ಒಂದು ಸಾವಿರ ಕಾಫಿ ಗಿಡಗಳನ್ನು ಹಚ್ಚಿದ್ದಾರೆ. ಇದರಿಂದ ಕೇವಲ ಒಂದಿಷ್ಟು ಆದಾಯ ಬರಲಿ ಎನ್ನುವ ಕಾರಣವೊಂದೆ ಅಲ್ಲ.ತೋಟದ ಕಳೆ ನಿಯಂತ್ರಣ ಮಾಡುವುದರ ಜೊತೆಗೆ ಮಣ್ಣಿನ ಸವಕಳಿಯನ್ನು ತಪ್ಪಿಸುತ್ತದೆ.ಕಾಫಿ ಸೀಮೆಯ ರೈತರ ಒಡನಾಟ, ಆ ಕೃಷಿಯ ಬಗ್ಗೆ  ಸಾಕಷ್ಟು ಮಾಹಿತಿ ಪಡೆದಿರುವ ಶ್ರೀಧರ ಭಟ್ರು ಇದ್ನ ಉಪಬೆಳೆಯಂತ ನಿರ್ಲಕ್ಷ ಮಾಡದೇ ಉತ್ಸಾಹದಿಂದ ಕಾಫಿ ಕೃಷಿಯನ್ನು ಸಂರಕ್ಷಣೆ ಮಾಡಿದ್ದಾರೆ. ಖಾಲಿ ಜಾಗ ಇದ್ದಲೆಲ್ಲ  ಆ ಕೃಷಿಯನ್ನು ವಿಸ್ತರಣೆ ಮಾಡುತ್ತಲೆ ಇದ್ದಾರೆ.
ಪಾಠ ಮಾಡಲೂ ಸೈ.. 
ಹೊಸ್ಮನೆಯ ಶ್ರೀಧರ ಭಟ್ರು ಕೇವಲ ನಮ್ಮದೊಂದೆ ತೋಟದ ಜಾಗವನ್ನು ನೋಡಿಕೊಂಡು ಸುಧಾರಿತ ಪದ್ದತಿಯನ್ನು ಅನುಸರಿಸಿದವರಲ್ಲ.ಅವರು ಬೇರೆ ಬೇರೆ ಪ್ರದೇಶದ ಹಲವಾರು ಕೃಷಿಕರ ಸಂಪರ್ಕ, ಒಡನಾಟ  ನಿರಂತರ ಇಟ್ಟುಕೊಂಡವರು. ಬೇರೊಂದು ಊರಿನಲ್ಲಿ ಹೊಸ ಪದ್ದತಿಯನ್ನು ತೋಟಕ್ಕೆ ಅಳವಡಿಸಿಕೊಂಡ ಮಾಹಿತಿ ಲಭಿಸಿದರೇ, ಅದ್ನ ಖುದ್ದಾಗಿ ನೋಡಿ ಬರುವ ಅಭ್ಯಾಸ ಇವಾಗಲೂ ಇಟ್ಟುಕೊಂಡಿದ್ದಾರೆ. ಹಾಗೇ ಹೋಗುವಾಗೆಲ್ಲ ತಾನು ಒಬ್ಬನೇ ಆ ಜಾಗಕ್ಕೆ ಹೋಗದೆ, ತಮ್ಮ ಆತ್ಮೀಯರನ್ನು ಜೊತೆಗೂಡಿಸಿಕೊಂಡು ಹೋಗುತ್ತಾರೆ.ಅಲ್ಲಿನ ಹೊಸ ವಿಧಾನ ನನಗೆ ಒಬ್ಬನಿಗೆ ಪ್ರಯೋಜನ ಆಗುವುದಕ್ಕಿಂತ; ನಮ್ಮವರಿಗೂ  ಲಭಿಸಲಿ ,ಅವ್ರು ಉತ್ತಮ ಕೃಷಿಕರಾಗಿ ಹೊರಹೊಮ್ಮಲಿ  ಎನ್ನುವ ಆಶಯ, ಮಾನವೀಯತೆಯ ಗುಣ ,ಕಳಕಳಿ ಅವರಲ್ಲಿ ಅಡಕವಾಗಿದೆ.ಹೀಗಾಗಿಯೇ ಶ್ರೀಧರ ಭಟ್ರ ಬಳಿ ಕೃಷಿ ಕಾಯಕದ ಬಗ್ಗೆ ತಿಳಿದುಕೊಳ್ಳಲು ಈಗಲೂ ಒಂದಿಷ್ಟು ಜನ ಬರುತ್ತಾರೆ,ಮಾಹಿತಿ ವಿನಿಮಯ ಮಾಡಿಕೊಳ್ಳುತ್ತಾರೆ.ಈ ರೈತರು ಉತ್ತಮವಾಗಿ ಕೃಷಿ ಮಾಡುವುದರ ಜೊತೆಗೆ ಮುಕ್ತವಾಗಿ ಕೃಷಿ ಪಾಠ ಮಾಡುದಕ್ಕು ಸೈ ಎನಿಸಿಕೊಂಡಿದ್ದಾರೆ.ಒಂದಿಷ್ಟು ರೈತರ ಪ್ರೀತಿ, ವಿಶ್ವಾಸವನ್ನು ಗಳಿಸಿಕೊಂಡಿದ್ದಾರೆ.
ಖುಷಿ ನೀಡುವ ತೋಟ!  
ಇವತ್ತಿನ ದಿನಮಾನದಲ್ಲಿ ಒಂದಿಷ್ಟು ಜಮೀನು ಒಂದೇ ಕಡೆಯಲ್ಲಿ ಇದ್ದರೂ ವ್ಯವಸ್ಥಿತವಾಗಿ ಅಭಿವೃದ್ಧಿ ಮಾಡುವುದೇ ಕಷ್ಟ ಅಂತ ಹೇಳುವವರೆ ಹೆಚ್ಚು. ಅದ್ರಲ್ಲಿಯೂ ಬೇರೆ ಬೇರೆ ಊರಿನಲ್ಲಿ  ಜಮೀನು ಇದ್ದರೇ, ಸಾಗುವಳಿ ಮಾಡಲು ಆಗದೇ ಪಾಳು ಬಿಟ್ಟವರು ಇದ್ದಾರೆ. ಆದ್ರೆ, ಈ ರೈತರು ಎಪ್ಪರ ಇಳಿ ವಯಸ್ಸಿನಲ್ಲಿಯೂ ಇನ್ನಷ್ಟು ಜಮೀನು ಮಾಡಬೇಕು , ನನ್ನ ಕಲ್ಪನೆಯಲ್ಲಿ ಇರುವ ಕನಸನ್ನು ಸಾಕಾರಗೊಳಿಸಬೇಕೆಂಬ ಉತ್ಸಾಹದಿಂದ ಈ ಪ್ರಗತಿಪರ ಕೃಷಿಕರಾದ ಹೊಸ್ಮನೆಯ ಶ್ರೀಧರ ಭಟ್ರು  2014 ರಲ್ಲಿ ಉಮ್ಮಚ್ಗಿ ಸಮೀಪದ ಗಿಡಗಮನೆಯಲ್ಲಿ ಹೊಸ ಜಮೀನು ಖರೀದಿ ಮಾಡಿ ಅಲ್ಲಿಯೂ ವ್ಯವಸ್ಥಿತವಾಗಿ ಜಮೀನು ಅಭಿವೃದ್ಧಿ ಮಾಡ್ತಾ ಇದ್ದಾರೆ. ಅಲ್ಲಿ ಅಸ್ಥವ್ಯಸ್ಥವಾಗಿದ್ದ ಜಮೀನನ್ನು ಮನಸ್ಸಿಗೂ ಖುಷಿಯಾಗುವಷ್ಟು ಬದಲಾವಣೆಯನ್ನು ಕೇವಲ ಏಳೆಂಟು ವರುಷದಲ್ಲಿ ಮಾಡಿದ್ದು ದೊಡ್ಡ ಸಾಧನೆ.ಸುಮಾರು ಎರಡು ಎಕರೆ ಜಾಗದಲ್ಲಿ ಅಡಿಕೆ ತೋಟ ಮಾಡಿರುವ ಇವರು, ತೋಟದೊಳಗೆ  ಕಾಫಿ, ಮೆಣಸು, ವೆನಿಲ್ಲಾ,ದಾಲ್ಚಿನ್ನಿ…ಇವನ್ನೇಲ್ಲ ಕೃಷಿಯನ್ನು ಯಥೇಚ್ಛವಾಗಿ ಬೆಳೆದಿದ್ದಾರೆ.ವಿಶೇಷವಾಗಿ ಅಲ್ಲಿನ ಬೆಟ್ಟದಲ್ಲಿ ಸಿಲ್ವರ್ ಗಿಡ ಹಾಗೂ ಗೊಬ್ಬರ ಗಿಡಕ್ಕೆ ಕಪ್ಪು ಬಂಗಾರ ಬೆಳೆಯುತ್ತಿರುವ ಇವರು, ಎರಡು ಬೃಹತ್ ಪಾಲಿಹೌಸ್ ಗಳನ್ನು ನಿರ್ಮಿಸಿ ಕೊಂಡು ಅದ್ರಲ್ಲಿ ಕಾಳುಮೆಣಸು ,ಕಾಫಿ ಸಸಿಯ  ನರ್ಸರಿಯನ್ನು ದೊಡ್ಡ ಪ್ರಮಾಣದಲ್ಲಿ ಮಾಡುತ್ತಿರುವುದು ವಿಶೇಷ!
 ಇವರು ತಮ್ಮ ಕಾಳುಮೆಣಸಿನ  ನರ್ಸರಿಗೆ ಕುಡಿಗಳನ್ನು ಏಲ್ಲಿಂದಲೊ ತಂದು ನರ್ಸರಿ ಮಾಡುವುದಿಲ್ಲ. ತಮ್ಮ ತೋಟದಲ್ಲಿಯಲ್ಲಿದ್ದ ಹಬ್ ಕುಡಿಗಳನ್ನು ಮಳೆಗಾಲದ ಸಮಯದಲ್ಲಿ ಏತ್ತಿಟ್ಟುಕೊಂಡು, ಸಂರಕ್ಷಿಸುತ್ತಾರೆ. ಆಮೇಲೆ ಬೇಸಿಗೆಯಲ್ಲಿ  ನರ್ಸರಿಗೆ ಸಂರಕ್ಷಿಸಿಟ್ಟ ಹಬ್ ಕುಡಿಗಳನ್ನೇ  ಬಳಕೆ ಮಾಡುತ್ತಾರೆ. ಇಲ್ಲಿ ಸಿದ್ದಗೊಂಡ ನರ್ಸರಿ ಗಿಡಗಳು ಹಾಸನ, ಚಿಕ್ಕಮಗಳೂರು ಕಡೆಗೆ ಹೆಚ್ಚು ಸೇಲ್ ಆಗ್ತಾಯಿದೆ. ಒಟ್ಟಾರೇ ಹೊಸ್ಮನೆಯ ಶ್ರೀಧರ ಭಟ್ರ ಎರಡು ಊರಿನಲ್ಲಿರುವ ಕೃಷಿ ತೋಟವೂ ಹೊಸದಾಗಿ ಕೃಷಿ ಮಾಡುವವರಿಗೆ, ಕೃಷಿ ಬೆಳೆಗಳ ಬಗ್ಗೆ ಅಧ್ಯಯನ ಮಾಡುವವರಿಗೆಲ್ಲ ಹೊಸ ಅನುಭವನ್ನೇ ತೆರೆದಿಡುವ “ಮಿನಿ ಕೃಷಿ ವಿಶ್ವವಿದ್ಯಾಲಯ” ಎಂದರೂ ತಪ್ಪಾಗಲಾರದು. 
ಜ್ಞಾನಾರ್ಧನೆಗೆ ಕೃಷಿ ಪ್ರವಾಸ…
ಹೊಸ್ಮನೆಯ ಶ್ರೀಧರ ಭಟ್ರು ಸದಾ ಕೃಷಿಯ ಬೆಳೆ,ಅದರ ಯೋಗಕ್ಷೇಮ,ಪೋಷಣೆಯ ಬಗ್ಗೆ ನಿರಂತರ ಚಿಂತನೆ ,ಚರ್ಚೆ ಮಾಡುತ್ತಲೇ ಇರುತ್ತಾರೆ. ನೂರಾರು ಕೃಷಿಕರ ಸಂಪರ್ಕವನ್ನು ಇಟ್ಟುಕೊಂಡಿದ್ದಾರೆ. ಇವರು ನಮ್ಮ ಜಿಲ್ಲೆಯ ಹಲವಾರು ತಾಲೂಕಿನ ಬೇರೆ ಬೇರೆ ಕೃಷಿಕರಲ್ಲದೇ ಚಿಕ್ಕಮಗಳೂರು, ಬೆಳಗಾವಿ,ಹಾಸನ, ಚಿತ್ರದುರ್ಗ, ಹೊಸನಗರ, ಪುತ್ತೂರು…ಹೀಗೆ ಹೊರ ಜಿಲ್ಲೆಯ ದೊಡ್ಡ ದೊಡ್ಡ ಬೆಳೆಗಾರರ ಒಡನಾಟ ಇಟ್ಟುಕೊಂಡವರು.ಅವರು ಬೆಳೆಯುತ್ತಿರುವ ಅಡಿಕೆ,ಕಾಳುಮೆಣಸು, ಕಾಫಿ…ಮುಂತಾದ ಬೆಳೆಗಳನ್ನು  ಕಣ್ಣಾರೇ ನೋಡಿ ಮನನ ಮಾಡಿಕೊಂಡವರು.ಕೃಷಿ ಬೆಳೆಗಳ ಬಗ್ಗೆ ಜ್ಞಾನ ಪಡೆಯಬೇಕಾದರೇ ಬೇರೆ ಬೇರೆ ಪ್ರದೇಶದ ಕೃಷಿಕರ ಬೆಳೆಗಳ‌ನ್ನು ಖುದ್ದಾಗಿ ನೋಡಲು ಓಡಾಡಲೇಬೇಕು ಎಂಬುದು ಅವ್ರ ಅನುಭವದ ಮಾತು. ಅದ್ರಲ್ಲಿಯೂ ಕಳೆದ ಹದಿನಾಲ್ಕು ವರುಷದಿಂದ ಹಾಸನದ ಬಾಳೂರುಪೇಟೆಯ ದೊಡ್ಡ ಕಾಳುಮೆಣಸಿನ ಬೆಳೆಗಾರ  ಮಹೇಶಕುಮಾರ ಅವರ ಒಡನಾಟ,ಪ್ರೀತಿ, ವಿಶ್ವಾಸವನ್ನು ಇವರು  ಗಿಟ್ಟಿಸಿಕೊಂಡವರು. ಅಲ್ಲಿನ ಬೆಳೆ, ನಿರ್ವಹಣೆಯ ಕ್ರಮ,ಕೊಯ್ಲಿನ ವಿಧಾನ,ಬೆಳೆ ಪೋಷಿಸುವ ಪದ್ದತಿ..  ಹೀಗೆ ಎಲ್ಲವನ್ನು ಸೂಕ್ಷ್ಮವಾಗಿ ಕಂಡು ಮೆಚ್ಚಿಕೊಂಡವರು. ಪ್ರತಿಯೊಂದು ಪ್ರವಾಸದ ಓಡಾಟದಲ್ಲಿಯೂ ಹೊಸ ಹೊಸ ಮಾಹಿತಿಯನ್ನು ಸಂಗ್ರಹ ಮಾಡಿಕೊಂಡು ಬಂದು, ಇಗಲೂ ತಮ್ಮ ಆತ್ಮೀಯರೊಂದಿಗೆ ಹಂಚಿಕೊಂಡು ಸಂಭ್ರಮಿಸುತ್ತಾರೆ. ಎಪ್ಪತರ ವಯಸ್ಸಿನಲ್ಲಿಯೂ ನವ ತರುಣರಂತೆ ಕೃಷಿ ಪ್ಲಾಟ್ ಗಳನ್ನು ಸುತ್ತಾಡಿ ,ಅವರ ಕೃಷಿ ವಿಶೇಷತೆಗಳ ಮಾಹಿತಿಯನ್ನು ಕಲೆ ಹಾಕುವ ಪರಿ ,ತಿಳಿದುಕೊಳ್ಳುವ ಉತ್ಸಾಹ ನಿಜಕ್ಕು ಮೆಚ್ಚಲೇಬೇಕು.
ಉತ್ಸಾಹಿ ಕೃಷಿಕರಿಗೆ  ಕಿವಿಮಾತು.ನಾವು ಅಡಿಕೆ ತೋಟದಲ್ಲಿ  ಪ್ರತಿ ಮರಗಳಿಗೆ ಮೆಣಸಿನ ಬಳ್ಳಿಗಳನ್ನು ಹಚ್ಚಿ, ಸಂಖ್ಯೇಯನ್ನು ಹೆಚ್ಚಿಸಿಕೊಳ್ಳುವುದಕ್ಕಿಂತ, ಇರುವಷ್ಟು ಬಳ್ಳಿಗಳನ್ನೆ ಚನ್ನಾಗಿ ಆರೈಕೆ ಮಾಡಿದರೇ ಉತ್ತಮ ಫಲ ಪಡೆಯಬಹುದು.ಅದ್ರಲ್ಲಿಯೂ ಪ್ರತಿ ಬರಣದಲ್ಲಿ ಒಂದು ಸಾಲಿನ ಮರ ಖಾಲಿ ಬಿಟ್ಟಿದರೇ ಇನ್ನು ಉತ್ಕೃಷ್ಟ ವಾಗಿ  ಮೆಣಸಿನ ಉತ್ಪನ್ನ ಪಡೆಯಲು ಸಾಧ್ಯವಿದೆ ಏನ್ನುತ್ತಾರೆ ಶ್ರೀಧರ ಭಟ್. ಇಂದು ಕೂಲಿ ಸಮಸ್ಯೆ, ಮನೆಯಲ್ಲಿ ಕೃಷಿ ಭೂಮಿ ನೋಡುವವರಿಲ್ಲ….ಇಂಥಹ ಸಂಗತಿಗಳ ಬಗ್ಗೆ ಚಿಂತನೆ ಮಾಡಿದರೇ, ನಿತ್ಯ ಕೆಲಸ ಮಾಡಲು ಉತ್ಸಾಹವೇ ಇರುವುದಿಲ್ಲ!  ಹೀಗಾಗಿ ನಮ್ಮ ಖುಷಿಗಾಗಿ ಪ್ರಧಾನ ಬೆಳೆ ಅಡಿಕೆಯ ಜೊತೆಗೆ ಕಾಳುಮೆಣಸು, ಕಾಫಿ ಇಂಥಹ ಉಪಬೆಳೆಗಳನ್ನು ಬೆಳೆದುಕೊಂಡರೇ ನೆಮ್ಮದಿಯಿಂದ ಬದುಕನ್ನು ಕಟ್ಟಿಕೊಳ್ಳಬಹುದು ಎಂದು ಶ್ರೀಧರ ಭಟ್ರು  ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group