ಬಾಳೆಹೊನ್ನೂರಿನ ಸೀಗೋಡಿನಲ್ಲಿರುವ ಕೇಂದ್ರೀಯ ಕಾಫಿ ಸಂಶೋಧನಾ ಕೇಂದ್ರವು ಸ್ಥಾಪನೆಯಾಗಿ ನೂರು ವರುಷ. ಶತಮಾನೋತ್ಸವವನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ ಕಾಫಿ ಬಯೋ ಕ್ಯಾಪ್ಸುಲ್ ತಂತ್ರಜ್ಞಾನವನ್ನು ಕಾಫಿ ಬೆಳೆಗಾರರಿಗೆ ಪರಿಚಯಿಸಿದೆ ಆರೋಗ್ಯಕರ ಹಾಗೂ ರೋಗಮುಕ್ತವಾದ ಕಾಫಿ ಗಿಡಗಳನ್ನು ಬೆಳೆಸುವ ತಂತ್ರಜ್ಞಾನವಾಗಿ ಕಾಫಿ ಕ್ಯಾಪ್ಸುಲ್ ರೂಪುಗೊಂಡಿದೆ.
ಏನಿದರ ಪ್ರಯೋಜನ
“ಬೆಳೆವ ಸಿರಿ ಮೊಳಕೆಯಲ್ಲಿ” ಎಂಬಂತೆ ಕಾಫಿ ಬೆಳೆಯಲು ಉತ್ತಮ ಗುಣಮಟ್ಟದ ಬೀಜದ ಆಯ್ಕೆ, ನಂತರ ಸರಿಯಾದ ಬೀಜೋಪಚಾರ, ಪಾತಿ ಮಾಡಿ ಬೀಜ ಬಿತ್ತನೆ, ಮೊಳಕೆ ಒಡೆದ ನಂತರ ಬೀಜವನ್ನು ಟೋಪಿ ಹಂತದಲ್ಲಿ ಪಾಲಿಥಿನ್ ಬುಟ್ಟಿಗಳಿಗೆ ವರ್ಗಾಯಿಸಿ ಗಿಡಗಳನ್ನು ಬೆಳೆಸಿ ನಾಟಿ ಮಾಡುವುದು ಸಾಮಾನ್ಯವಾಗಿ ಬೆಳೆಗಾರರು ಅನುಸರಿಸುತ್ತಿರುವ ಕ್ರಮ. ಆದರೆ ಕಾಫಿ ಬಯೊ ಕ್ಯಾಪ್ಸುಲ್ ತಂತ್ರಜ್ಞಾನ ಸ್ವಲ್ಪ ಭಿನ್ನವಾಗಿದೆ.
ಸಾವಯುವ ಕೃಷಿಗೆ ಪೂರಕವಾದ ಹಸಿರು ತಂತ್ರಜ್ಞಾನವಾಗಿದೆ. ರಾಸಾಯಿನಿಕ ಮುಕ್ತವಾದುದು.ಅಲ್ಲದೆ ಸೂಕ್ಷ್ಮಜೀವಿಗಳ ಅಧಾರಿತವಾದ ಹೊಸ ಮಾದರಿಯಿದು.ಸರಳ ಹಾಗೂ ಕಡಿಮೆ ವೆಚ್ಚದಲ್ಲಿ ಆರೋಗ್ಯಕರವಾದ ಕಾಫಿ ಸಸಿಗಳನ್ನು ಉತ್ಪಾದಿಸಲು ಸಹಕಾರಿಯಾಗಿದೆ.

ಪ್ರಾಥಮಿಕವಾದ ಹಂತವನ್ನು ಅಂದರೆ ಸಸಿ ಮಡಿ ತಯಾರಿಸುವ ಕೆಲಸ ಕ್ಯಾಪ್ಸುಲ್ ಬಳಸಿದರೆ ಇಲ್ಲವಾಗುತ್ತದೆ.
ಪ್ರಥಮ ಹಂತದಲ್ಲಿ ಮಾಡಬೇಕಾದ ಕೆಲಸ, ಶ್ರಮ, ಸಮಯ, ಆರಂಭಿಕ ವೆಚ್ಚವನ್ನು ಕಡಿಮೆ ಮಾಡುತ್ತದೆ.ಈ ತಂತ್ರಜ್ಞಾನದಿಂದ ಎರಡನೆಯ ಹಂತ ಅಂದರೆ ಪಾಲಿಥಿನ್ ಬುಟ್ಟಿಗಳಿಗೆ ನೇರವಾಗಿ ಕ್ಯಾಪ್ಸುಲ್ ಬಿತ್ತನೆ ಮಾಡಿ ಸಸಿಗಳನ್ನು ತಯಾರಿಸಿಕೊಳ್ಳಬಹುದು.ಈ ತಂತ್ರಜ್ಞಾನದಿಂದ ಆರೋಗ್ಯಕರವಾದ ಉತ್ತಮ ಗಿಡಗಳನ್ನು ಪಡೆಯಬಹುದು.







