spot_img
Sunday, December 14, 2025
spot_imgspot_img
spot_img

ಬಿದಿರಿನ ಬುಟ್ಟಿಯೇ ಇವರಿಗೆ ಬದುಕಿನ ಬುತ್ತಿ

-ರಾಧಾಕೃಷ್ಣ ತೊಡಿಕಾನ

ಬಿದಿರು, ಬೆತ್ತ, ಬೀಳು ಬಳ್ಳಿಗಳಿಂದ ಹೆಣೆದ ಬುಟ್ಟಿಗಳು ಕೃಷಿಕರ ಮನೆಗಳಲ್ಲಿರುತ್ತಿದ್ದವು. ಮಾರುಕಟ್ಟೆಯಲ್ಲಿರುತ್ತಿದ್ದವು. ಈಗ ಬಹುತೇಕ ಕಡೆಗಳಲ್ಲಿ ಪ್ಲಾಸ್ಟಿಕ್ ಬುಟ್ಟಿಗಳು ಬಂದಿವೆ. ಈ ಬುಟ್ಟಿಗಳು ಬರುವ ಮುನ್ನ ನೈಸರ್ಗಿಕವಾದ ಮತ್ತು ಕರಕೌಶಲದಿಂದಲೇ ತಯಾರಾದ ಬುಟ್ಟಿಗಳದ್ದೇ ಪಾರಮ್ಯ

ಹುಟ್ಟಿನಿಂದ ಸಾವಿನವರೆಗೆ ನಾನಾ ರೂಪದಲ್ಲಿ ಬಳಕೆಯಾಗುವ ಬಿದಿರಿಗೆ ಬಹಳಷ್ಟು ಮಹತ್ವವಿದೆ. ಬಿದಿರನ್ನೇ ನಂಬಿ ಜೀವನದ ಬುತ್ತಿ ಕಟ್ಟಿಕೊಳ್ಳುವ ಹಲವಾರು ಕುಟುಂಬಗಳು ಇವೆ, ಬದುಕು -ಭವಣೆಯ ನಡುವೆ ಬಳಲಿದರೂ ಕಾಯಕವನ್ನು ಬಿಡದೆ ಪಾರಂಪರೆಯಿಂದ ಬಂದ ಕುಲಕಸುಬು ಮುಂದುವರಿಸುತ್ತಿರುವವರಿದ್ದಾರೆ. ಅವರಲ್ಲಿ ಬಹಳಷ್ಟು ಮಂದಿಗೆ ಗಟ್ಟಿ ನೆಲೆಯಿಲ್ಲ. ಇರಲು ಸರಿಯಾದ ಸೂರುಗಳಿಲ್ಲ. ಒಂದಿಷ್ಟು ವಿದ್ಯಾಭ್ಯಾಸ ಪಡೆದ ಮಂದಿ ಸಣ್ಣಪುಟ್ಟ ಉದ್ಯೋಗ ಮಾಡಿಕೊಂಡಿದ್ದರೆ ಉಳಿದವರಿಗೆ ಕರಕೌಶಲ್ಯದ ಪ್ರತಿಫಲದಿಂದಲೇ ಜೀವನ ನಿರ್ವಹಣೆಯ ದಾರಿ. ದಕ್ಕಿದಷ್ಟಕ್ಕೇ ತೃಪ್ತಿ. ಆದರೂ ಕಾಡುಮೇಡು ಹಾಗೂ ರೈತರ ಜಮೀನಿನಲ್ಲಿದ್ದ ಬಿದಿರನ್ನು ತಂದು ವಿವಿಧ ಬಗೆಯ ಬುಟ್ಟಿ ತಯಾರಿಸುವ ಕಲೆ ಜೀವಂತ.

ಬೆಂಗಳೂರಿನ ಕೃಷಿ ವಿವಿ, ಜಿಕೆವಿಕೆ ಆವರಣದಲ್ಲಿ ಇತ್ತೀಚೆಗೆ ನಡೆದ ಕೃಷಿಮೇಳದಲ್ಲಿ ಬಿದಿರನ್ನು ಸೀಳಿ ಎಳೆಎಳೆಯಾಗಿ ಬಿಡಿಸುವುರಲ್ಲಿ ಮಗ್ನರಾಗಿದ್ವರು ಚಿಕ್ಕಯಳಿಯಪ್ಪ ಮತ್ತು ಆತನ ಸೋದರ ಸಂಬಂಧಿ. ಇವರು ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಸಮದೇವನ ಹಳ್ಳಿಯ ಜೇನ್ಕಲ್ ಪಾಳ್ಯದವರು. ಆ ಪರಿಸರದಲ್ಲಿ ಅವರ ಸಮುದಾಯದ 3೦ಕ್ಕೂ ಹೆಚ್ಚು ಕುಟುಂಬಗಳು ಆ ವೃತ್ತಿಯಲ್ಲಿ ತೊಡಗಿಕೊಂಡಿವೆ ಸಮುದಾಯದ ಎಲ್ಲರಂತೆ ಚಿಕ್ಕ ಯಳಿಯಪ್ಪ ಕುಟುಂಬಕ್ಕೂ ಬಿದಿರಿನ ಬುಟ್ಟಿಗಳೇ ಬದುಕಿನ ಬುತ್ತಿ. ಕಚ್ಛಾ ಬಿದಿರು ಇಲ್ಲವೆಂದಾದರೆ ಅವರ ಸ್ವಾವಲಂಬನೆಯ ದುಡಿಮೆಗೆ ಕುತ್ತು. ಚಿಕ್ಕಯಳಿಯಪ್ಪ ಹೆಚ್ಚು ಓದಿದವರಲ್ಲ. ಓದುವ ಅವಕಾಶಗಳೂ ಹೆಚ್ಚಿರಲಿಲ್ಲ. ಹೊಟ್ಟೆಪಾಡು. ತನ್ನ ತಂದೆ ಬರಿಯಪ್ಪ ಮತ್ತು ಕುಟುಂಬ ಸದಸ್ಯರೊಂದಿಗೆ ಕಾಡುಮೇಡುಗಳನ್ನು ಅಲೆದು ಬಿದಿರನ್ನು ತಂದು ಅದಕ್ಕೊಂದು ಸ್ವರೂಪ ನೀಡಿ ಬದುಕಿಗೊಂದು ಆಧಾರ ಕಂಡುಕೊಂಡವರು. ಚಿಕ್ಕ ಯಳಿಯಪ್ಪ ಅವರಿಗೆ ಕಳೆದ 25 ವರ್ಷಗಳಿಂದ ಇದೇ ದುಡಿಮೆ ಮತ್ತು ಬದುಕು.

ಚಿಕ್ಕ ಯಳಿಯಪ್ಪ ಕುಟುಂಬ ಬೇರೆಬೇರೆ ವಿಧದ ಬುಟ್ಟಿಗಳನ್ನು ತಯಾರಿಸುತ್ತಾರೆ. ಕೃಷಿಕಾಯಕಕ್ಕೆ ಬೇಕಾದ ಸಣ್ಣ ದೊಡ್ಡ ಬುಟ್ಟಿಗಳು, ಪಂಜರ, ಹಣ್ಣು ,ತರಕಾರಿ, ಸೊಪ್ಪು ಹಾಕುವ ಬುಟ್ಟಿ, ಜನರ ದಿನ ನಿತ್ಯ ಉಪಯೋಗಿ ಬುಟ್ಟಿಗಳಲ್ಲದೆ ದೇವರ ಗುಡಿಗೆ ಪೂಜಾದಿ ಸಾಮಾಗ್ರಿಗಳನ್ನು ಒಯ್ಯುವ ಬುಟ್ಟಿಗಳನ್ನು ತಯಾರಿಸುತ್ತಾರೆ. ಹೊಟ್ಟೆಗೆ ಹಿಟ್ಟು ಇದ್ದರೂ ಬಟ್ಟೆ ಬರೆ ಇನ್ನಿತರ ಖರ್ಚುವೆಚ್ಚಗಳ ನಿಭಾವಣೆಗೆ ಬುಟ್ಟಿಯೇ ಸಂಪತ್ತು. ದೊಡ್ಡ ಆಕಾಂಕ್ಷೆಗಳಿಲ್ಲದ ಸರಳ ಬದುಕು.

ದಿನವೊಂದಕ್ಕೆ ಹೆಚ್ಚೆಂದರೆ 4-5 ಬುಟ್ಟಿ ಹೆಣೆಯಲಾಗುತ್ತದೆ. ಬುಟ್ಟಿ ಅದರ ಗಾತ್ರ ಮತ್ತು ಕಸುರಿಗಾರಿಕೆ ಆಧಾರದ ಮೇಲೆ 12೦ರಿಂದ 25೦ರವರೆಗೂ ದರವಿದೆ. ಮಾರುಕಟ್ಟೆ ಹುಡುಕಿ ಅಲೆಯಬೇಕೆಂದಿಲ್ಲ. ಸ್ಥಳೀಯವಾಗಿಯೇ ಬುಟ್ಟಿಗಳನ್ನು ಮಾರಾಟ ಮಾಡುತ್ತಾರೆ. ಬಿದಿರು ಹಾಗೂ ಇತರ ಬುಟ್ಟಿಯ ಜಾಗವನ್ನು ಪ್ಲಾಸ್ಟಿಕ್ ಬುಟ್ಟಿಗಳು ಆವರಿಸಿಕೊಳ್ಳುತ್ತಿರುವುದು ಪಾರಂಪರಿಕ ಕಸುಬು ಮತ್ತು ಬುಟ್ಟಿಗೆ ಸವಾಲು. ಆದರೂ ಪಾರಂಪರಿಕ ಬುಟ್ಟಿಗಳನ್ನು ಪೂರ್ಣವಾಗಿ ಜನ ಮರೆತ್ತಿಲ್ಲ. ಎಲ್ಲಾ ಕಡೆಗಳಿಗೂ ಪ್ಲಾಸ್ಟಿಕ್ ಬುಟ್ಟಿ ಬಳಕೆಯಾಗುವುದಿಲ್ಲ. ಬಿದಿರಿನ ಬುಟ್ಟಿಗೆ ಅದರದೇ ಆದ ಮಹತ್ವವಿರುವುದರಿಂದ ಕೊಳ್ಳುವ ವರ್ಗವಿದೆ.

ಆ ದಿನ ಪ್ರಾತ್ಯಕ್ಷಿಕೆಗಾಗಿ ಒಂದಿಷ್ಟು ಬಿದಿರನ್ನು ಚಿಕ್ಕಯಳಿಯಪ್ಪ ಮತ್ತು ಸಹೋದರ ಸಂಬಂಧಿ ತಂದಿದ್ದರು. ಚಿಟ್ಟು ಬಿದಿರನ್ನು ಎಳೆಎಳೆಯಾಗಿ ಸೀಳಿ ಬುಟ್ಟಿ ತಯಾರಿಯ ಕೈಚಳಕ ನೋಡು ನೋಡುತ್ತಿದ್ದಂತೆ ಕಚ್ಛಾ ಬಿದಿರು ನಾಜೂಕಾಗಿ ಬುಟ್ಟಿಯ ರೂಪ ಪಡೆದುಕೊಳ್ಳುತ್ತಿತ್ತು. ಬುಟ್ಟಿ ಹೆಣೆಯುವ ಮಂದಿ ಕಡಿಮೆಯಾಗುತ್ತಿರುವ ದಿನಗಳಲ್ಲಿ ಸಾಂಪ್ರದಾಯಿಕ ಬುಟ್ಟಿಗಳನ್ನು ಪರಿಚಯಿಸುವುದರೊಂದಿಗೆ ಕೃಷಿಯಾಸಕ್ತರ ಬೇಡಿಕೆ ಅವರು ನೆಯ್ದ ಬುಟ್ಟಿಗಳನ್ನು ಖಾಲಿ ಮಾಡಿದ್ದವು.

ಅರಣ್ಯದಿಂದ ಬಿದಿರು ತರಲು ಸಮಸ್ಯೆಯಿದೆ. ರೈತರ ಜಮೀನಿನಲ್ಲಿ ಬೆಳೆದ ಬಿದಿರನ್ನೇ ಆಶ್ರಯಿಸಬೇಕಾಗಿದೆ. ಬಹಳಷ್ಟು ಮಂದಿ ಈ ಕಸುಬಿನಲ್ಲಿರುವುದರಿಂದ ಅದು ಉಳಿಯ ಬೇಕಾದರೆ ಬಿದಿರಿನ ಸಂಪನ್ಮೂಲವೂ ಬೇಕು. ಇಂತಹ ಕರಕುಶಲ ವಸ್ತುಗಳನ್ನು ತಯಾರಿಗೆ ಅರಣ್ಯ ಇಲಾಖೆ ಸಹಕಾರ ಬೇಕಾಗಿದೆ. ಬಿದಿರಿನ ಸಂಪನ್ಮೂಲ ಹೆಚ್ಚಿಸಲು ಯೋಜನೆಗಳನ್ನು ರೂಪಿಸಿಕೊಳ್ಳಬೇಕಾಗಿದೆ.

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group