-ರಾಧಾಕೃಷ್ಣ ತೊಡಿಕಾನ
ಘಮಘಮಿಸುವ ಮಲ್ಲಿಗೆ ಮಾಲೆಯಾಗಿ ಗುಡಿಗೋ ಮುಡಿಗೋ ಸೇರಿ ಹುಟ್ಟಿನ ಸಾರ್ಥಕತೆಯನ್ನು ಪಡೆಯುತ್ತದೆ. ಮನಸ್ಸು ಅರಳಿಸುವ, ಪರಿಸರ ಮುದಗೊಳಿಸುವ ಮಲ್ಲಿಗೆಗೆ ಮಾರು ಹೋಗದವರು ವಿರಳ. ರಾಜ್ಯದಲ್ಲಿ ಬೆಳೆಯುವ ಮಲ್ಲಿಗೆಗಳಲ್ಲಿ ಉಡುಪಿ ಮಲ್ಲಿಗೆಗೆ ಮಹತ್ವವಿದೆ. ಹಸಿರು ಗಿಡದ ತುಂಬಾ ಬಿಳಿಯ ಮೊಗ್ಗುಗಳು …. ಹೂವಿನ ಮಾಲೆಯಾಗಿ ಬೆಳೆಗಾರರ ಮನೆಯಿಂದ ಮಾರುಕಟ್ಟೆಗೆ ಬಂತೆಂದರೆ ಅದರ ಮೌಲ್ಯವೇ ಬೇರೆ
ಕಷ್ಟಪಟ್ಟ ಮಲ್ಲಿಗೆ ಬೆಳೆಗಾರನಿಗೆ ಇಷ್ಟಪಟ್ಟಷ್ಟು ಅಲ್ಲವಾದರೂ ಪ್ರತಿಫಲಕ್ಕೆ ತಕ್ಕ ಬೆಲೆ ಸಿಕ್ಕರೆ ಮನಸ್ಸು ಹೂವಿನ ಹಾಗೆ ಅರಳುತ್ತದೆ. ಸಂತೃಪ್ತಿಯ ಭಾವ ಮೂಡುತ್ತದೆ. ವೃತ್ತಿ ಅಥವಾ ಪ್ರವೃತ್ತಿಯ ಬದುಕು ಹಸನಾಗುತ್ತದೆ. ಅದಿಲ್ಲವಾದರೆ ಬೆಳೆಗಾರನ ಮನೆಯಿಂದ ಮಲ್ಲಿಗೆ ಮೆಲ್ಲಮೆಲ್ಲನೆ ದೂರವಾಗುತ್ತದೆ. ಹೂವು ದುಬಾರಿಯಾಗುತ್ತದೆ. ತನ್ನ ಪರಿಸರದ ಮಲ್ಲಿಗೆ ಕೃಷಿಕರ ಹಿತ ಕಾಪಾಡುವ ಮಲ್ಲಿಗೆ ಬೆಳೆಗಾರನಿಗೆ ಅರ್ಹ ದರ ದೊರಕಿಸುವ ಪ್ರಯತ್ನದೊಂದಿಗೆ ಉಡುಪಿ ಮಲ್ಲಿಗೆ ಕಟ್ಟೆಯಿಂದಲೇ ಮೆಲ್ಲನೆ ಮೇಲೇರಿದ ಜೀವನ-ಯಶಸ್ಸು ಕಂಡವರು
ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ 34 ನೇ ಕುದಿಗ್ರಾಮದ ಬೈದೆಬೆಟ್ಟು, ಕೊಕ್ಕರ್ಣೆ, ಮಂದಾರ್ತಿ ಆಸುಪಾಸಿನ ಊರುಗಳ ಕೃಷಿಕರು ಪಾರಂಪರಿಕವಾದ ಭತ್ತದ ಕೃಷಿ, ತರಕಾರಿ, ಮಲ್ಲಿಗೆ, ತೋಟಗಾರಿಕಾ ಬೆಳೆಗಳೊಂದಿಗೆ ಪ್ರಗತಿಯ ಪಥ ಕಂಡುಕೊಂಡವರು. ಗದ್ದೆಗಳನ್ನು ಪಾಳುಬಿಡದೆ ಅದರಲ್ಲಿಯೇ ಒಂದಿಷ್ಟು ಕಸುವು ತೋರುತ್ತಾ ಬಂದವರು. ಭೌಗೋಳಿಕ ಮಾನ್ಯತೆಯನ್ನು ಪಡೆದ ಉಡುಪಿ ಮಲ್ಲಿಗೆ ಕೃಷಿಗೆ ಆದ್ಯತೆ ಇತ್ತವರು. ಆದರೇನು ಬೆಳೆದವರ ಕೈಯಲ್ಲಿ ಹೂವಿದೆ. ಸರಿಯಾದ ಬೆಲೆಯಿಲ್ಲ ಸಿಗುತ್ತಿಲ್ಲ. ಬೆಲೆಯಿಲ್ಲದೆ ಬೆಳೆಗಾರ ಸೊರಗಿದ್ದ.
ಮಲ್ಲಿಗೆ ಕೃಷಿಯ ಬಗ್ಗೆ ಹೆಚ್ಚು ಆಸಕ್ತಿ ಮೂಡಿಸಿಕೊಂಡ ಬೈದೆಬೆಟ್ಟು ಜೀವನ್ ಪೂಜಾರಿ ಅವರು ಹೂವಿನ ಕೃಷಿಕರನ್ನು ಸಂಘಟಿಸಿ ಶ್ರಮಕ್ಕೆ ತಕ್ಕುದಾದ ಬೆಲೆ ಒದಗಿಸುವ ನಿಟ್ಟಿನಲ್ಲಿ ಯೋಚಿಸುತ್ತಿದ್ದರು. ಈ ಸಂದರ್ಭದಲ್ಲಿ ಮಲ್ಲಿಗೆ ಕೃಷಿ ಕುರಿತಂತೆ ಮಾಹಿತಿ ತರಬೇತಿ ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ಕೃಷಿಕ ಸಂಘವು ಮಂದಾರ್ತಿಯಲ್ಲಿ ಹಮ್ಮಿಕೊಂಡಿತ್ತು. ಮಲ್ಲಿಗೆ ಕೃಷಿಯಿಂದಲೇ ಖ್ಯಾತರಾಗಿದ್ದ ಬಂಟಕಲ್ಲು ರಾಮಕೃಷ್ಣ ಶರ್ಮಅವರು ಮಾಹಿತಿ ನೀಡುತ್ತಿದ್ದಾಗ ಮಲ್ಲಿಗೆಗೆ ಬೆಲೆಯಿದ್ದರೂ ಈ ಪರಿಸರದಲ್ಲಿ ಬೆಳೆದವನಿಗೆ ಹೆಚ್ಚು ಪ್ರಯೋಜನವಾಗದಿರುವುದು ಪ್ರಸ್ತಾವವಾಯಿತು. ರೈತರೇ ಸೇರಿ ಮಲ್ಲಿಗೆ ಕಟ್ಟೆಯನ್ನು ನಿರ್ಮಿಸಿ ನಿರ್ವಹಿಸುವ ಚರ್ಚೆಯಾದಾಗ ಆ ಜವಾಬ್ದಾರಿ ವಹಿಸಲು ಜೀವನ್ ಪೂಜಾರಿ ಮುಂದಾದರು. ತನ್ನ ವಿದ್ಯಾಬ್ಯಾಭ್ಯಾಸದ ನಂತರ ಉದ್ಯೋಗ ನಿಮಿತ್ತ ಪೇಟೆ ಸೇರುವ ಬದಲು ತಮಗಿರುವ ಕೃಷಿ ಭೂಮಿಯಲ್ಲಿ ಕೃಷಿಕಾಯಕಕ್ಕೆ ತೊಡಗಿದ್ದರು

ಜೀವನ್ ಅವರ ತಂದೆ ಜಯರಾಮ ಪೂಜಾರಿ ತಾಯಿ ಗುಲಾಬಿ ಮಲ್ಲಿಗೆ ಕೃಷಿಕರಾಗಿದ್ದರು. ಮಲ್ಲಿಗೆ ಹಾರ ಮಾಡಿ ಹೆಬ್ರಿ ಮತ್ತು ಬ್ರಹ್ಮಾವರಕ್ಕೆ ಕಳುಹಿಸಿಸುತ್ತಿದ್ದರು. ಆದರೆ ಹೇಳಿಕೊಳ್ಳುವಂತಹ ದರವೇನೂ ಸಿಗಲಿಲ್ಲ. ಮಲ್ಲಿಗೆ ಕೃಷಿ ಬದಲು ಇತರ ಕೃಷಿಯತ್ತ ಹೊರಳಿದ್ದರು. ಭತ್ತ, ಅಡಿಕೆ, ತೆಂಗು, ಕಾಳುಮೆಣಸು, ಹೈನುಗಾರಿಕೆ ಮೊದಲಾದ ಸಮ್ಮಿಶ್ರ ಕೃಷಿ ಬದುಕಿನ ಖುಷಿಗೆ ಆಧಾರವಾಗಿದೆ.
ಇತ್ತೀಚೆಗೆ ಜೀವನ್ ಪೂಜಾರಿಯವರು ಮಲ್ಲಿಗೆ ಕೃಷಿಯತ್ತ ಒಲವು ಮೂಡಿಸಿಕೊಂಡು ಮಲ್ಲಿಗೆ ಕಟ್ಟೆ ನಿರ್ವಹಣೆಗೆ ಮುಂದಾದಾಗ ಅವರಲ್ಲಿಯೂ ಮಲ್ಲಿಗೆ ಮತ್ತೆ ಅರಳಿತು. ಈಗ 2೦೦ಕ್ಕೂ ಹೆಚ್ಚು ಮಲ್ಲಿಗೆ ಗಿಡವಿದೆ. ಜತೆಗೆ ಮಲ್ಲಿಗೆ ಗಿಡವನ್ನು ತಯಾರಿಸಿ ಮಾರಾಟ ಮಾಡುತ್ತಾರೆ.

ಜೀವನ್ ನಾಲ್ಕೈದು ಮಲ್ಲಿಗೆ ಕೃಷಿಕರನ್ನು ಸೇರಿಸಿಕೊಂಡು ಮಂದಾರ್ತಿ ಬಳಿಯ ಸುರ್ಗಿಕಟ್ಟೆಯಲ್ಲಿರುವ ಪ್ರಕೃತಿ ನರ್ಸರಿಯಲ್ಲಿ ಮಲ್ಲಿಗೆ ಕಟ್ಟೆ ರಚಿಸಿದರು. ಕೃಷಿಕರೇ ಒಳಗೊಂಡ ಪ್ರಥಮ ಮಲ್ಲಿಗೆ ಕಟ್ಟೆಯಿದು. ಜೀವನ್ ಪೂಜಾರಿ ನಿರ್ವಹಣೆಯ ಹೊಣೆ ಹೊತ್ತರೂ ಮಲ್ಲಿಗೆ ಕಟ್ಟೆಯ ಮಲ್ಲಿಗೆ ವ್ಯವಹಾರ ಹೂವಿನಷ್ಟು ಸುಲಭವಾಗಿರಲಿಲ್ಲ. ಆರಂಭದಲ್ಲಿ ನಷ್ಟದ ಹಾದಿ ಹಿಡಿಯಿತು. ಹಿಂಜರಿದರೆ ನಗೆ ಪಟಾಲು, ಮುಂದುವರಿದರೆ ಎದುರಿದೆ ಸವಾಲುಗಳು . ಆದರೂ ಧೃತಿಗೆಡದೆ ಕಟ್ಟೆಯ ವ್ಯವಹಾರ ಮುಂದುವರಿಸಿದಾಗ ಮೆಲ್ಲನೆ ಚೇತರಿಸಿಕೊಳ್ಳಲಾರಂಭಿಸಿತು. ಜೊತೆಗಿದ್ದ ಮಲ್ಲಿಗೆ ಬೆಳೆಗಾರರಲ್ಲಿಯೂ ಭರವಸೆ ಬೆಳಕು ಹರಿಯಿತು. ಮಲ್ಲಿಗೆಗೆ ಮಾರುಕಟ್ಟೆ ನಿಗದಿತ ದರದಲ್ಲಿ ಪ್ರತೀ ವಾರ ಕೈಗೆ ಹಣ ಬರಲು ಆರಂಭಿಸಿದಾಗ ಮತ್ತಷ್ಟು ಮಂದಿಯಲ್ಲಿ ಮಲ್ಲಿಗೆ ಕೃಷಿ ಮಾಡುವವಂತೆ ಪ್ರೇರೇಪಿಸಿತು.

ಮಲ್ಲಿಗೆ ಕೃಷಿ :ಸ್ವ ಉದ್ಯೋಗ ಸೃಷ್ಟಿ
ಹೂವಿನ ಕೃಷಿಯಲ್ಲಿ ಹೂ ಕೊಯ್ಲು, ಮಲ್ಲಿಗೆ ಮಾಲೆ ತಯಾರಿ, ಮಾರಾಟ ಎಲ್ಲವೂ ಬೆಳಗಿನ ಹೊತ್ತೇ. ಈ ಕೆಲಸ ಮುಗಿಸಿದ ನಂತರ ಇತರ ಕೃಷಿ ಕೆಲಸ ಅಥವಾ ಬೇರೆ ಉದ್ಯೋಗ ವ್ಯವಹಾರದಲ್ಲಿ ತೊಡಗಿಕೊಳ್ಳಬಹುದು. ಬೈದೆಬೆಟ್ಟು ಆಸುಪಾಸಿನ ಊರುಗಳಲ್ಲಿ ಮತ್ತೆ ಬಹಳಷ್ಟು ಮಂದಿ ಮಲ್ಲಿಗೆ ಕೃಷಿಯಲ್ಲಿ ತೊಡಗಿಕೊಂಡುದರಿAದ ಒಂದಿದ್ದ ಮಲ್ಲಿಗೆ ಕಟ್ಟೆ ನಾಲ್ಕಕ್ಕೇರಿತು. ಪ್ರತೀ ಮಲ್ಲಿಗೆ ಕಟ್ಟೆ ವ್ಯಾಪ್ತಿಯಲ್ಲಿ 4೦-5೦ ಮಲ್ಲಿಗೆ ಬೆಳೆಯುವ ಕುಟುಂಬಗಳಿವೆ. 5 ಮಂದಿಯಿಂದ ಆರಂಭವಾದ ಕೃಷಿಕರ ಕೂಟ ದೊಡ್ಡದಾಯಿತು. 5 ವರ್ಷದಲ್ಲಿ 150 ಕ್ಕೂ ಹೆಚ್ಚು ಮಂದಿ ಮಲ್ಲಿಗೆ ಕೃಷಿಕರಾದರು. ಈ ಭಾಗದಲ್ಲಿ ಮಲ್ಲಿಗೆಯೇ ಸ್ವ ಉದ್ಯೋಗವನ್ನು ಸೃಷ್ಟಿಸಿತು. ವಾರಾಂತ್ಯಕ್ಕೆ ಬೆಳೆದವನ ಕೈಗೆ ದುಡ್ಡು ಬಂದಾಗುತ್ತದೆ. ಕಡಿಮೆಯೆಂದರೂ ತಿಂಗಳಿಗೆ 15-20 ಸಾವಿರ ಗಳಿಕೆ. ಕೆಲವರಿಗೆ ಹೂವು ಜೀವನಾಧಾರ. ಅದರಿಂದಲೇ ಆದಾಯ.
ಒಂದು ಸುತ್ತು ಮಲ್ಲಿಗೆಗೆ ಕಡಿಮೆಯೆಂದರೂ 125 ಮಿಟ್ಟೆ (ಮೊಗ್ಗು). ಒಂದು ಚೆಂಡು ಅಂದರೆ 6 ಸುತ್ತು .ಒಂದು ಅಟ್ಟೆಗೆ-4 ಚೆಂಡುಗಳು. ಒಂದು ಅಟ್ಟೆಗೆ ಮಾರುಕಟ್ಟೆಯಲ್ಲಿ 2100ರವರೆಗೆ ಬೆಲೆಯಿದೆ. ಮಾರುಕಟ್ಟೆಯ ಸ್ಥಿತಿಗತಿಗೆ ಅನುಗುಣವಾಗಿ ನಿತ್ಯ ದರ ಏರುಪೇರಾಗುತ್ತಿರುತ್ತದೆ. ಮಾರ್ಚ್ ಎಪ್ರಿಲ್ ತಿಂಗಳಲ್ಲಿ ಹೂವಿನ ಫಸಲು ಹೆಚ್ಚು .ಆದರೆ ದರ ಕಡಿಮೆ. ಚಳಿಗಾಲದಲ್ಲಿ ಹೂವಿನ ಇಳುವರಿ ಕಡಿಮೆ. ದರ ಹೆಚ್ಚಿರುತ್ತದೆ.
ಮಂದಾರ್ತಿಯಲ್ಲಿ ಮಾತ್ರವಿದ್ದ ಹೂವಿನ ಕಟ್ಟೆ, ಗೋಳಿಯಂಗಡಿ, ಕೊಕ್ಕರ್ಣೆ, ಬಿಲ್ಲಾಡಿ ಮೊದಲಾದ ಕಡೆಗಳಲ್ಲಿ ವಿಸ್ತರಿಸಿಕೊಂಡಿತು. ಸಿದ್ದಾಪುರ, ಶಿರಿಯಾರ, ಇಡೂರು, ಹುಣ್ಸೆಮಕ್ಕಿ ಮೊದಲಾದ ಕಡೆಗಳಲ್ಲೂ ಹೂವಿನ ವ್ಯವಹಾರ ಜೀವನ್ ಅವರ ನಿರ್ವಹಣೆಯಲ್ಲೆ ನಡೆಯುತ್ತಿದೆ. ಬಂಟಕಲ್ ಮತ್ತು ಉಡುಪಿಯ ಮಾರಾಟ ಕೇಂದ್ರಗಳಿಗೆ ಹೂವನ್ನು ಕಳುಹಿಸಲಾಗುತ್ತದೆ. ಅಲ್ಲಿಂದ ಬೇರೆಬೇರೆ ಊರುಗಳಿಗೆ ಹೊರ ರಾಜ್ಯಗಳಿಗೆ ಸರಬರಾಜು ಆಗುತ್ತದೆ.
ಜೀವನ್ ಪೂಜಾರಿಯರು ಕಟ್ಟೆಗಳನ್ನು ನಿರ್ವಹಿಸುವುದಲ್ಲದೆ ಇತರೆಡೆಯಿಂದ ಸೇವಂತಿಗೆ, ಕಾನ ಕಣಗಿಲೆ ಮೊದಲಾದ ಹೂವುಗಳನ್ನು ತರಿಸಿಕೊಂಡು ಮಾಲೆಮಾಡಿ ಮಾರಾಟ ಮಾಡುತ್ತಾರೆ. . ನಾಲ್ಕೆöÊದು ಮಂದಿ ಅವರ ಮನೆಯಲ್ಲಿ ಹೂ ಮಾಲೆ ಮಾಡಿಕೊಡುವ ಕೆಲಸಗಾರರಿದ್ದಾರೆ. ಮಲ್ಲಿಗೆ ಮಾಲೆ ಕಟ್ಟುವುದಕ್ಕೆ ಹೆಚ್ಚಾಗಿ ಬಳಕೆಯಾಗುವುದು ಬಾಳೆ ನಾರು. ನೂಲಿನಿಂದಲೇ ಮಾಡಿದ ಮಾಲೆ ಬೇಕೆಂದರೆ ಅದನ್ನು ಮಾಡಿಕೊಡುತ್ತಾರೆ. ಧಾರ್ಮಿಕ ಹಾಗೂ ಶುಭಸಮಾರಂಭಗಳಿಗೆ ಬೇಕಾದ ಹೂವನ್ನು ಒದಗಿಸುತ್ತಾರೆ.
ಮಲ್ಲಿಗೆ ಕಟ್ಟೆಯನ್ನು ರೈತರಿಂದ ರೈತರಿಗಾಗಿ ಕಟ್ಟಲಾಗಿದೆ. ಇದರಿಂದ ರೈತ ಬೆಳೆದ ಮಲ್ಲಿಗೆಗೆ ಉತ್ತಮ ಬೆಲೆ ದೊರಕುತ್ತಿದೆ. ಹಣದ ವರ್ಗವಣೆ ನೇರಾನೇರ ನಡೆಯುವುದರಿಂದ ಕೃಷಿಕರಿಗೆ ಹೆಚ್ಚು ಅನುಕೂಲವಾಗಿದೆ ಎನ್ನುತ್ತಾರೆ ಜೀವನ್ ಪೂಜಾರಿ. ಮಲ್ಲಿಗೆ ಕಟ್ಟೆಗೆ ಸ್ಥಳಾವಕಾಶ ಕಲ್ಪಿಸಿದ ಸಂಪನ್ನ ಮಾಸ್ಟರ್ ಮತ್ತು ಪ್ರಕೃತಿ ನರ್ಸರಿಯ ಸುಜಾತಾ ರಂಜಿತ್ ಶೆಟ್ಟಿಯವರ ಸಹಕಾರವನ್ನು ನೆನೆಪಿಸಿಕೊಳ್ಳುತ್ತಾರೆ.
ಮುಂದಿನ ದಿನಗಳಲ್ಲಿ ಇನ್ನಷ್ಟು ಮಲ್ಲಿಗೆ ಕಟ್ಟೆಗಳನ್ನು ನಿರ್ಮಿಸುವುದು, ಮಲ್ಲಿಗೆ ಹೂ ಉತ್ಪಾದಕರ ಸಂಘವನ್ನು ಮಾಡುವ ಉದ್ದೇಶವನ್ನು ಹೊಂದಿದಾರೆ. ಮಲ್ಲಿಗೆ ಕೃಷಿಕರ ಬದುಕು ಮಲ್ಲಿಗೆಯಂತೆ ಅರಳಲಿ
ಮಾಹಿತಿಗೆ-9611052991






