-ನವಜಾತ ಕಾರ್ಕಳ
ನಾಯಿ, ಬೆಕ್ಕು ಬಹುತೇಕ ಮನೆಗಳಲ್ಲಿ ಒಡನಾಡಿಗಳು, ಮತ್ತೆ ಕೆಲವು ಮನೆಗಳಲ್ಲಿ ಅವುಗಳೊಂದಿಗೆ ಗಿಳಿ, ಪಾರಿವಾಳ ಸಹಭಾಗಿಗಳು. ಇನ್ನು ಕೆಲವೆಡೆ ಅಲಂಕಾರಿಕಾ ಮೀನುಗಳು ಮನೆಯೊಳಗಡೆ ಸ್ಥಾನ ಪಡೆದುಕೊಂಡರೆ ಈಗೀಗ ಮೊಲ ಸಾಕಾಣೆಯೂ ಅವುಗಳ ಸಾಲಿಗೆ ಸೇರಿದೆ. ಪ್ರಾಣಿಪಕ್ಷಿಗಳ ಸಹವಾಸ, ಅವು ಮನೆಮಂದಿಯೊAದಿಗೆ ಪ್ರತಿಕ್ರಿಯಿಸುವ ರೀತಿ ಜೀವನೋತ್ವವನ್ನು ಹೆಚ್ಚಿಸುತ್ತದೆ. ಮುಗ್ಧ ಹಾಗೂ ಮುದ್ದಾದ ಮೊಲಗಳು ಕೆಲವೆಡೆ ಆಕರ್ಷಣೆಯ ಕೇಂದ್ರಗಳು.
ಮೊಲ ಸಾಕಾಣೆ ಇತ್ತೀಚೆಗಿನ ದಿನಗಳಲ್ಲಿ ಉದ್ಯಮ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ. ಹಳ್ಳಿಗಳಲ್ಲಿ ಮೊಲ ಸಾಕಾಣೆಗೆ ಉತ್ತಮ ವಾತಾವರಣವಿದೆ. ಆಹಾರಕ್ಕಾಗಿ ನೈಸರ್ಗಿಕ ಮತ್ತು ಕೃಷಿ ತ್ಯಾಜ್ಯಗಳು ಲಭ್ಯವಿದೆ. ಸ್ಥಳಾವಕಾಶಗಳು ಸಾಕಷ್ಟಿದೆ. ಆದರೆ ಮಾರಾಟ ಮಾಡುವುದೇ ಸಮಸ್ಯೆ. ಮೊಲ ಸಾಕಿ ಮಾರುಕಟ್ಟೆ ವ್ಯವಸ್ಥೆಯಲ್ಲಿ ಸೋತು ನಷ್ಟವನ್ನು ಅನುಭವಿಸಿ ಅದರ ಸಹವಾಸದಿಂದ ದೂರವಾದವರು ಇದ್ದಾರೆ. ದೊಡ್ಡ ಮಟ್ಟದಲ್ಲಿ ಸಾಕಲು ಹೋಗಿ ಒಂದೇ ವರ್ಷದಲ್ಲಿ ಪಂಜರ ಖಾಲಿ ಮಾಡಿಕೊಂಡವರಿದ್ದಾರೆ. ಇದರ ನಡುವೆಯೂ ಮತ್ತೆ ಕೆಲವರು ಯಶಸ್ಸಿನ ಗರಿ ಮೂಡಿಸಿಕೊಂಡವರಿದ್ದಾರೆ. ಎಲ್ಲಾ ಸಮಸ್ಯೆಗಳನ್ನು ಮೆಟ್ಟಿ ನಿಂತು ಮೊಲ ಸಾಕಾಣೆಯನ್ನು ಉದ್ಯಮವಾಗಿ ರೂಪಿಸಿಕೊಳ್ಳುತ್ತಿರುವುದು ಇತ್ತೀಚೆಗಿನ ದಿನಗಳಲ್ಲಿ ಹೆಚ್ಚಾಗಿದೆ. ಲಾಭದಾಯಕವಾಗಿ ಸ್ವ ಉದ್ಯೋಗವಾಗಿದೆ. ಆದರೆ ಹವ್ಯಾಸಕ್ಕಾಗಿ ಸಾಕುವವರಿಗೆ ಅದೊಂದು ಲಾಭನಷ್ಟದ ವ್ಯವಹಾರವಲ್ಲ. ಆತ್ಮ ತೃಪ್ತಿ. ಮತ್ತು ಮನೋಲ್ಲಾಸ
ಬೆಂಗಳೂರಿನ ಯಲಹಂಕದಲ್ಲಿರುವ ಚಂದನ್ ಗೌಡ ಅವರು ಬೆಸ್ಕಾಮಿನಲ್ಲಿ ಉದ್ಯೋಗಿ. ಮೊಲವೆಂದರೆ ಮಮತೆ. ಅವರ ತಂದೆ ಮಂಜು ಅವರು ಮನೆಯಲ್ಲಿ ಮೊಲಗಳನ್ನು ಸಾಕಿದ್ದರಿಂದ ಚಿಕ್ಕಿನಂದಿನಿಂದಲೂ ಅವುಗಳ ಒಡನಾಟ . ಈ ಹಿನ್ನಲೆಯಲ್ಲಿ ಚಂದನ್ ಅವರಿಗೆ ಮತ್ತಷ್ಟು ಮೊಲಗಳನ್ನು ಸಾಕುವುದಕ್ಕೆ ಆಸಕ್ತಿ ಮೂಡಿತು. ಮೊಲ ಸಾಕಾಣೆ ಪ್ರವೃತ್ತಿಯಾಗಿ ಬೆಳೆಯಿತು.

ನಗರ ಜೀವನದ ನಡುವೆ ಮೊಲ ಸಾಕಾಣೆಗೆ ಒಂದಿಷ್ಟು ಸ್ಥಳಾವಕಾಶವನ್ನು ಕಲ್ಪಿಸಿಕೊಂಡು ಆರಂಭಿಸಿದ ಶ್ರೀ ಮಾರುತಿ ರ್ಯಾಬಿಟ್ ಫಾರ್ಮ್ನಲ್ಲಿ ಈಗ ಸುಮಾರು 2೦೦ರಷ್ಟು ಮೊಲಗಳಿವೆ. ರೈತ ಮಾಧ್ಯಮ ಚಂದನ್ ಎಂದೇ ಗುರುತಿಸಿಕೊಂಡ ಅವರು ತನ್ನಲ್ಲಿರುವ ಮೊಲಗಳನ್ನು ಮಾಂಸಕ್ಕಾಗಿ ಮಾರಾಟ ಮಾಡುವುದಿಲ್ಲ. ಆದರೆ ಸಾಕಾಣೆಗಾಗಿ ಮರಿಗಳನ್ನು ಮಾರಾಟ ಮಾಡುತ್ತಾರೆ. ಜಿಲ್ಲೆ ಹಾಗೂ ಹೊರಜಿಲ್ಲೆಯವರೂ ಬಂಧು ಇವರಲ್ಲಿ ಮರಿ ಖರೀದಿಸಿದ್ದಾರೆ.
ವಿವಿಧ ತಳಿಗಳು
ಇವರಲ್ಲಿ ಹಲವು ತಳಿಗಳಿವೆ. ಅವುಗಳಲ್ಲಿ ಜರ್ಮನಿಯ ಅಂಗೋರಾ ತಳಿ ಬಹಳಷ್ಟು ಗಮನ ಸೆಳೆದಿರುವಂತಹದ್ದು. ದೊಡ್ಡಗಾತ್ರ, ಉದ್ದ ಕೂದಲಿನ ಮಾನವ ಸ್ನೇಹಿ. ಪಂಜರದ ಹೊರಗಡೆಯೇ ಆರಾಮವಾಗಿ ಕುಳಿತು ಹೊರಗಿನ ಜಂಜಾಟ ಗೌಜುಗದ್ದಲಗಳಿಗೆ ಏನೂ ಅಲ್ಲದಂತಿರುತ್ತದೆ. ಅಲ್ಲದೆ ತನ್ನೊಡೆಯನ ಕೈಗಳಲ್ಲಿ ಕುಳಿತು ಚೆಂದದ ಫೋಟೊಗಳನ್ನು ಕ್ಲಿಕ್ಕಿಸಿಕೊಳ್ಳುವುದಕ್ಕೂ ಅಂಜುವುದಿಲ್ಲ. ನ್ಯೂಜಿಲೇಂಡ್ ವೈಟ್, ಬ್ಲಾö್ಯಕ್ ಜೈಂಟ್ಸ್, ಸೋವಿಯತ್ ಚಿಂಚಲಾ ಮೊದಲಾದುವು ಅವರು ಸಾಕುತ್ತಿರುವ ತಳಿಗಳು.
ನಗರ ಪ್ರದೇಶವಾದುದರಿಂದ ಆ ಪರಿಸರದಲ್ಲಿ ಸಿಗುವ ಎಲ್ಲಾ ತರದ ಹಣ್ಣು, ತರಕಾರಿ,ಸೊಪ್ಪು, ದವಸ ಧಾನ್ಯ ಕಡ್ಡಿಗಳನ್ನು ಆಹಾರವಾಗಿ ನೀಡುತ್ತಾರೆ. ಮೊಲಗಳಿಗೆ ರೋಗ ರುಜಿನಗಳ ಬಾಧೆ ಕಡಿಮೆ. ಎಲ್ಲಾ ವಾತಾವರಣದಲ್ಲೂ ಹೊಂದಿಕೊಳ್ಳಬಲ್ಲವು ಎನ್ನುತ್ತಾರೆ ಚಂದನ್. ಇತರ ಸಾಕು ಪ್ರಾಣಿಗಳಂತೆ ಮೊಲವನ್ನೂ ಸಾಕಬಹುದು. ಅವುಗಳ ಮುಗ್ಧ ನೋಟ, ಸ್ಪಂದನೆ ಚೇತೋಹಾರಿ. ಮಾನಸಿಕ ನೆಮ್ಮದಿಗೂ ಸಹಕಾರಿ.
ಬೆಂಗಳೂರಿನ ಕೃಷಿ ವಿ.ವಿ ಮತ್ತು ಜಿಕೆವಿಕೆಯಲ್ಲಿ ನಡೆದ ಕೃಷಿ ಮೇಳದಲ್ಲಿ ಪ್ರದರ್ಶಿಸಿದ್ದ ಅವರ ಮೊಲಗಳು ಹಲವರಲ್ಲಿ ಆಸಕ್ತಿ ಮೂಡಿಸಿದ್ದವು. ಜನಜಾತ್ರೆ, ಸದ್ದು ಗದ್ದಲದ ನಡುವೆಯೂ ಪಂಜರದ ಒಳಗಡೆ ಆಹಾರವನ್ನು ಮೆಲ್ಲುತ್ತಲೋ ಅತ್ತಿತ್ತ ಓಡಾಡುತ್ತಲೋ ಕುತೂಹಲ ಕೆರಳಿಸಿದ್ದವು. ಕೃಷಿ ಮೇಳ, ಪ್ರದರ್ಶನಗಳಲ್ಲಿ ಅವಕಾಶ ದೊರೆತರೆ ಪ್ರದರ್ಶನಕ್ಕಿಡುತ್ತಾರೆ, ಶಾಲೆ ಕಾಲೇಜು, ಸಭೆ ಸಮಾರಂಭಗಳಲ್ಲಿ ಪ್ರದರ್ಶನ ಮಾಡಿ ಮೊಲಗಳ ಬಗ್ಗೆ ಮಾಹಿತಿಯನ್ನು ನೀಡುತ್ತಾರೆ. ಪ್ರಾಣಿ ಪ್ರಿಯರು ತಮ್ಮ ಮನೆಗಳಲ್ಲಿಯೂ ಹವ್ಯಾಸಕ್ಕಾಗಿ ಸಾಕಿಕೊಳ್ಳಬಹುದು
ಮಾಹಿತಿಗೆ : 7892698504






