-ಅಡ್ಡೂರು ಕೃಷ್ಣ ರಾವ್
ಬಾಲ್ಯದಲ್ಲಿ ಹೂವಿನ ಕೃಷಿಯ ಒಡನಾಟ; ಈಗ ಹೂವಿನ ಕೃಷಿಯಿಂದ ತಿಂಗಳಿಗೆ 50 ಲಕ್ಷ ರೂಪಾಯಿಗಳ ವಹಿವಾಟು – ಇದು ಪಶ್ಚಿಮ ಬಂಗಾಳದ ಪೂರ್ವ ಮಿಡ್ನಾಪುರ ಜಿಲ್ಲೆಯ ಕೋಲಾಘಾಟ್ ಪಟ್ಟಣದ ಅರುಪ್ ಕುಮಾರ್ ಘೋಷ್ ಅವರ ಬದುಕಿನ ಸಾಧನೆ.
ಈ ಸಾಧನೆಯ ಹಾದಿ ಸುಲಭವಾಗಿರಲಿಲ್ಲ. ಹಂತಹಂತವಾಗಿ ಹೂವಿನ ಕೃಷಿ ಮತ್ತು ಹೂವಿನ ಫಸಲಿನ ಮಾರಾಟ ಜಗತ್ತಿನ ಅನುಭವ ಗಳಿಸುತ್ತಾ ಮುನ್ನಡೆದವರು ಆರ್. ಕೆ. ಘೋಷ್.
ಅವರು ಒಂದೇಟಿಗೆ ಪುಷ್ಪ ಕೃಷಿ ಶುರು ಮಾಡಲಿಲ್ಲ. 2010ರಲ್ಲಿ ಬಿ.ಕಾಮ್. ಶಿಕ್ಷಣವನ್ನು ಅರ್ಧದಲ್ಲೇ ತೊರೆದ ನಂತರ 2011ರಲ್ಲಿ ಹೈದರಾಬಾದಿನ ಗುಡಿಮಲ್ಕಾಪುರ ಹೂವಿನ ಮಾರುಕಟ್ಟೆಯಲ್ಲಿ ಕೆಲಸ ಮಾಡಿದರು. ಮುಂಜಾನೆ 6 ಗಂಟೆಯಿಂದ ಸಂಜೆ 4 ಗಂಟೆ ತನಕ ದುಡಿದು ಅವರು ಗಳಿಸುತ್ತಿದ್ದದ್ದು ತಿಂಗಳಿಗೆ ರೂ. 3,500. ಅಲ್ಲಿ ಚೆಂಡುಮಲ್ಲಿಗೆ, ಸುಗಂಧರಾಜ ಇತ್ಯಾದಿ ಹೂಗಳ ಮಾರಾಟದಲ್ಲಿ ಸಹಾಯ ಮಾಡುತ್ತಿದ್ದರು. “ಆಗ ನನಗೆ ತಿಳಿದ ಸಂಗತಿ ನನ್ನ ಊರು ಕೋಲಾಘಾಟ್^ನಲ್ಲಿ ಬೆಳೆದ ಹೂಗಳು ಹೈದರಾಬಾದಿನ ಹೂವಿನ ಮಾರುಕಟ್ಟೆಗೆ ಬಂದು ಮಾರಾಟವಾಗುತ್ತವೆ ಅನ್ನೋದು. ಇದರಿಂದಾಗಿ ನನ್ನ ಊರಿಗೆ ಹಿಂತಿರುಗಿ ಪುಷ್ಪೋದ್ಯಮ ಶುರು ಮಾಡಬಹುದೆಂಬ ಯೋಚನೆ ಬಂತು” ಎನ್ನುತ್ತಾರೆ ಆರ್. ಕೆ. ಘೋಷ್.
ಆದರೆ ಅವರು ಶುರು ಮಾಡಿದ್ದು ಹೂಗಳ ಕೃಷಿಯನ್ನಲ್ಲ, ಬದಲಾಗಿ ಹೂಗಳ ವ್ಯಾಪಾರವನ್ನು! ಯಾಕೆಂದರೆ, ಯಾವ ಹೂಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿದೆ; ಹೂವಿನ ದರಗಳು ಹೇಗೆ ಬದಲಾಗುತ್ತವೆ; ಗ್ರಾಹಕರೊಂದಿಗೆ ಮತ್ತು ಮಧ್ಯವರ್ತಿಗಳೊಂದಿಗೆ ವ್ಯವಹರಿಸುವುದು ಹೇಗೆ? ಇವನ್ನೆಲ್ಲ ತಿಳಿದುಕೊಳ್ಳುವುದು ಅಗತ್ಯವಾಗಿತ್ತು. ಜೊತೆಗೆ ತನ್ನೂರು ಕೊಲಾಘಾಟಿನಿಂದ ರೂ.120 ದರದಲ್ಲಿ ಖರೀದಿಸಿದ ಚೆಂಡುಮಲ್ಲಿಗೆ ಹೂವಿನ ಹಾರಗಳನ್ನು ರೂ.140 – 150 ದರಕ್ಕೆ ಮಾರಿ, ಸಣ್ಣ ಲಾಭ ಗಳಿಸ ತೊಡಗಿದರು. ಈ ವಹಿವಾಟಿನಲ್ಲಿ ಲಾಭ ಸಣ್ಣದಾದರೂ ಇದರಿಂದ ಹೂವಿನ ವ್ಯವಹಾರದ ಒಳಹೊರಗನ್ನು ತಿಳಿಯಲು ಅವರಿಗೆ ಸಹಾಯವಾಯಿತು. ಹೂವಿನ ಕೃಷಿ ಶುರು ಮಾಡಬೇಕೆಂಬ ಇರಾದೆ ಇರುವವರಿಗೆ ಇದು ಮೊದಲ ಪಾಠ.
ಚೆಂಡುಮಲ್ಲಿಗೆ ಹೂಗಳನ್ನು ಬೆಳೆಸಬೇಕೆಂದು ನಿರ್ಧರಿಸಿದ ಘೋಷ್ ತನ್ನ ಪ್ರಯೋಗಕ್ಕಾಗಿ ಕೃಷಿ ಭೂಮಿ ಖರೀದಿಸಲಿಲ್ಲ. ಬದಲಾಗಿ ಸುಮಾರು ಅರ್ಧ ಎಕರೆ ಜಮೀನನ್ನು ಗೇಣಿಗೆ (ಲೀಸ್) ಪಡೆದರು. ಇದರಿಂದಾಗಿ ಅವರ ಆರಂಭದ ಭಂಡವಾಳ ಕೇವಲ ರೂ.12,000ಕ್ಕೆ ಸೀಮಿತವಾಯಿತು (ಲೀಸ್ ಬಾಡಿಗೆ, ಹೂವಿನ ಸಸಿಗಳ ವೆಚ್ಚ ಮತ್ತು ಸಾಗಾಟದ ಖರ್ಚು). ಹೂವಿನ ಕೃಷಿಗೆ ಕೈಹಾಕಬೇಕೆಂಬವರಿಗೆ ಇದು ಎರಡನೆಯ ಪಾಠ.
ಆರ್. ಕೆ. ಘೋಷ್ ತನ್ನೂರಿನ ಹೂವಿನ ಕೃಷಿ ಸುಧಾರಿಸಲು ಏನು ಮಾಡಬಹುದೆಂದು ಯೋಚಿಸಿದರು. ಯಾಕೆಂದರೆ ಕೋಲಾಘಾಟಿನಲ್ಲಿ ಪಾರಂಪರಿಕವಾಗಿ ಬೆಳೆಯುತ್ತಿದ್ದ ಚೆಂಡುಮಲ್ಲಿಗೆ ಹೂಗಳು ಗಾತ್ರದಲ್ಲಿ ಸಣ್ಣವು. ಅವಕ್ಕೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇರಲಿಲ್ಲ. ಹಾಗಾಗಿ ಹೂವಿನ ಕೃಷಿಯಲ್ಲಿ ಹೆಸರು ಮಾಡಿದ್ದ ಥೈಲ್ಯಾಂಡಿಗೆ ಹೋಗಿ, ಅಲ್ಲಿ ಆರು ತಿಂಗಳು ತರಬೇತಿ ಪಡೆದರು: ಚೆಂಡುಮಲ್ಲಿಗೆ ಸುಧಾರಿತ ತಳಿಗಳು ಮತ್ತು ಕೃಷಿ ವಿಧಾನಗಳ ಬಗ್ಗೆ. ಅವರು ಉತ್ತಮ ಗುಣಮಟ್ಟದ “ಟೆನ್ನಿಸ್ ಬಾಲ್” ಚೆಂಡುಮಲ್ಲಿಗೆ ತಳಿ ಆಯ್ದು, ಅದರ 25 ಗ್ರಾಮ್ ಬೀಜ ತನ್ನೂರಿಗೆ ತಂದರು. ಇದು ಹೊಳಪಿನ ಬಣ್ಣದ, ದುಂಡಗಿನ ಹೂಗಳ ತಳಿ. ದೂರದ ಊರುಗಳಿಗೆ ಸಾಗಾಟ ಮಾಡಿದಾಗಲೂ ಇದರ ಹೂಗಳಿಗೆ ಹಾನಿ ಆಗುವುದಿಲ್ಲ. ಹೂವಿನ ಕೃಷಿಯಲ್ಲಿ ತೊಡಗುವವರಿಗೆ ಇಂತಹ ತರಬೇತಿ ಮೂರನೆಯ ಪಾಠ, ಅಲ್ಲವೇ?
ತಾನು ತಂದಿದ್ದ ಬೀಜಗಳಿಂದ ಸಸಿ ಮಾಡಿ, ನಂತರ ಆ ಸಸಿಗಳಿಂದ ಬೀಜ ಉತ್ಪಾದಿಸಲು ಶುರುವಿಟ್ಟರು ಆರ್. ಕೆ. ಘೋಷ್. ಅವರು ಬೆಳೆಸಿದ ಚೆಂಡುಮಲ್ಲಿಗೆ ಸಸಿಗಳ ಹೂಗಳು ಗಾತ್ರದಲ್ಲಿ ದೊಡ್ಡದಾಗಿದ್ದು ಆಕರ್ಷಕವಾಗಿದ್ದವು. ಇದರಿಂದಾಗಿ ಅವು ಭಾರತದ ಉದ್ದಗಲದಲ್ಲಿ ಗ್ರಾಹಕರ ಗಮನ ಸೆಳೆದವು. “ನಾನು ಬೆಳೆಸಿದ ಹೂಗಳನ್ನು ಹೈದರಾಬಾದ್, ಲಕ್ನೋ, ಕಾನ್ಪುರ, ಡೆಲ್ಲಿ, ಅಯೋಧ್ಯಾ, ಅಲಹಾಬಾದ್ ಮತ್ತು ಗುಜರಾತ್ ಹಾಗೂ ರಾಜಸ್ಥಾನದ ನಗರಗಳಿಗೆ ಕಳಿಸಿದೆ. ಮಾರುಕಟ್ಟೆಯಲ್ಲಿ ಈ ಹೂಗಳಿಗೆ ಬೇಡಿಕೆ ಹೆಚ್ಚುತ್ತಲೇ ಹೋಯಿತು. ಭಾರತದ ಉದ್ದಗಲದಿಂದ ರೈತರು ಆ ಚೆಂಡುಮಲ್ಲಿಗೆಯ ಬೀಜ ಮತ್ತು ಸಸಿಗಳಿಗಾಗಿ ನನ್ನನ್ನು ಸಂಪರ್ಕಿಸತೊಡಗಿದರು” ಎಂದು ತಿಳಿಸುತ್ತಾರೆ ಘೋಷ್. ಅವರು ಮುಂದಿನ ಹಂತದಲ್ಲಿ ಚೆಂಡುಮಲ್ಲಿಗೆಯ ಬೀಜ ಮತ್ತು ಸಸಿಗಳನ್ನು ಮಾರಾಟ ಮಾಡಲು ಆರಂಭಿಸಿದರು. ಹೀಗೆ ಉತ್ತಮ ಗುಣ ಮಟ್ಟದ ಹೂಗಳನ್ನು ಮತ್ತು ಬೀಜಗಳನ್ನು ಉತ್ಪಾದಿಸುವುದು ಹೂವಿನ ಕೃಷಿಯ ಯಶಸ್ಸಿಗೆ ಮತ್ತೊಂದು ಪಾಠ.
ಘೋಷ್ ಅವರಿಗೆ ಹೂವಿನ ಕೃಷಿ ಹೂವಿನ ಹಾಸಿಗೆಯಾಗಿರಲಿಲ್ಲ. ಮಳೆಗಾಲದಲ್ಲಿ ಕೃಷಿ ಜಮೀನಿನಲ್ಲಿ ನೀರು ಬಸಿದು ಹೋಗದೆ ಸಸಿಗಳ ಬೆಳವಣಿಗೆಗೆ ಸಮಸ್ಯೆಯಾಯಿತು. ಚರಂಡಿಗಳನ್ನು ರಚಿಸಿ, ನೀರು ಬಸಿದು ಹೋಗಲು ವ್ಯವಸ್ಥೆ ಮಾಡಿ ಇದನ್ನು ಪರಿಹರಿಸಿಕೊಂಡರು. ಅವರಿಗೆದುರಾದ ಇನ್ನೊಂದು ಸಮಸ್ಯೆ: ಪೀಡೆಕೀಟಗಳ ಹಾವಳಿ. ಕೀಟಗಳ ನಿಯಂತ್ರಣಕ್ಕೆ ರಾಸಾಯನಿಕ ಕೀಟನಾಶಕಗಳನ್ನು ಬಳಸುವ ಬದಲಾಗಿ ಬೇವಿನ ಎಣ್ಣೆ ಸಿಂಪಡಿಸಿ ಅವನ್ನು ನಿಯಂತ್ರಿಸಿದರು. ಹೂವಿನ ಸಸಿಗಳಿಗೆ ಸಾಕಷ್ಟು ಪೋಷಕಾಂಶಗಳನ್ನು ಒದಗಿಸಲಿಕ್ಕಾಗಿ ಅವರು ಹಾಕುವುದು ಹಸುಗಳ ಸೆಗಣಿ ಗೊಬ್ಬರ. ವಾತಾವರಣವು ಸಸಿಗಳಿಗೆ ಹಾನಿ ಮಾಡುವಂತಿದ್ದಾಗ, ಹೂವಿನ ಹೊಲಗಳ ಮೇಲೆ ನೆಟ್^ಗಳನ್ನು ಹಾಸಿ, ಸಸಿಗಳನ್ನು ರಕ್ಷಿಸುತ್ತಾರೆ. ಇಂತಹ ಸೂಕ್ತ ಹಾಗೂ ಪರಿಣಾಮಕಾರಿ ವಿಧಾನಗಳನ್ನು ಅನುಸರಿಸುವುದು ಪುಷ್ಪ ಕೃಷಿಯ ಯಶಸ್ಸಿಗೆ ಮಗದೊಂದು ಪಾಠ.
ಕೇಸರಿ, ಹಳದಿ ಮತ್ತು ಕೆಂಪು ಬಣ್ಣದ ಚೆಂಡುಮಲ್ಲಿಗೆ ಬೆಳೆಸುವ ಅವರ ಹೂವಿನ ಹೊಲಗಳಲ್ಲಿ ದುಡಿಯುತ್ತಿರುವ ಕೆಲಸಗಾರರ ಸಂಖ್ಯೆ 80. ಇವರೆಲ್ಲರಿಗೂ ತರಬೇತಿ ನೀಡುವ ಜವಾಬ್ದಾರಿಯನ್ನೂ ಸಮರ್ಥವಾಗಿ ನಿಭಾಯಿಸಿದ್ದಾರೆ ಘೋಷ್.
ಕೇವಲ ಅರ್ಧ ಎಕರೆಯಲ್ಲಿ ಚೆಂಡುಮಲ್ಲಿಗೆ ಕೃಷಿ ಶುರು ಮಾಡಿದ ಆರ್. ಕೆ. ಘೋಷ್ (ವಯಸ್ಸು 33) ಈಗ ಅದನ್ನು 29 ಎಕರೆಗೆ ವಿಸ್ತರಿಸಿದ್ದಾರೆ. 2024ರಲ್ಲಿ ಅವರು ಮಾರಾಟ ಮಾಡಿದ್ದು ಚೆಂಡುಮಲ್ಲಿಗೆಯ ನಾಲ್ಕು ಕೋಟಿ ಸಸಿಗಳನ್ನು ಮತ್ತು 1,500 ಕಿಗ್ರಾ ಬೀಜಗಳನ್ನು (ಕಿಲೋಗೆ ರೂ.25,000 ದರ). ಇವುಗಳ ಆದಾಯದ ಜೊತೆಗೆ ಹೂಗಳ ಮಾರಾಟದ ಆದಾಯವೂ ಸೇರಿ ಅವರದು ಈಗ ವಾರ್ಷಿಕ ಕೋಟಿಗಟ್ಟಲೆ ರೂಪಾಯಿಗಳ ಬೃಹತ್ ಪುಷ್ಪೋದ್ಯಮ. “ಹಂಗಾಮಿನಲ್ಲಿ ಅತ್ಯಂತ ಹೆಚ್ಚು ಹೂಗಳು ಉತ್ಪಾದನೆಯಾಗುವ ತಿಂಗಳುಗಳಲ್ಲಿ ನನ್ನ ಹೊಲಗಳಿಂದ ಪ್ರತಿದಿನ 800ರಿಂದ 1,000 ಕಿಲೋ ಹೂಗಳನ್ನು ಕೊಯ್ಲು ಮಾಡುತ್ತೇವೆ” ಎನ್ನುವ ಘೋಷ್ ಮಾತಿನಲ್ಲಿದೆ ಅವರ ಸಾಧನೆಯ ಝಲಕ್.