– ರಾಧಾಕೃಷ್ಣ ತೊಡಿಕಾನ
ತೋಟದಲ್ಲಿ ಕೃಷಿ ತ್ಯಾಜ್ಯಗಳು ನೆಲಕ್ಕೆ ಹಾಸಿದಂತೆ ಬಿದ್ದುಕೊಂಡಿವೆ. ಎಲ್ಲೂ ತೆಗೆದು ಸ್ವಚ್ಛಗೊಳಿಸಿಲ್ಲ. ತೋಟದ ಮರಗಿಡಗಳ ಬುಡಕ್ಕೆ ಗೊಬ್ಬರ ನೀಡಿದಂತಿಲ್ಲ. ಆದರೂ ಅವು ಸೊರಗಿದ ಕುರುಹುಗಳಿಲ್ಲ. ತಮ್ಮ ಸಾಮರ್ಥ್ಯಕ್ಕೆ ಅನುಗುಣ ಬೆಳೆದು ನಿಂತಿವೆ. ತಮ್ಮಿಂದಾದ ಫಲಗಳನ್ನು ನೀಡಿದ ಸಾರ್ಥಕತೆ. ಮೇಲ್ನೋಟಕ್ಕೆ ಇದೊಂದು ನಿರ್ಲಕ್ಷಿತ ತೋಟ. ಒಡೆಯನೆ ಕಾಲಿಡದ ತೋಟದಂತೆ ಭಾಸವಾಗುತ್ತದೆ. ಆದರೆ ಈ ತೋಟದ ಸುತ್ತು ತಿರುಗಾಡುತ್ತಿದ್ದಂತೆ ಸಹಜ ಕೃಷಿಯ ಒಳನೋಟಗಳು ಒಂದೊಂದೇ ತೆರೆದುಕೊಳ್ಳುತ್ತದೆ.
ಸಹಜ ಕೃಷಿಯಲ್ಲಿ ತೊಡಗಿಕೊಂಡ, ಇದ್ದುದರಲ್ಲಿ ಸಂತೃಪ್ತ ಜೀವನ ನಡೆಸುತ್ತಿರುವ ಹಿರಿಯ ಜೀವ ಮಾಳಂಗಾಯಿ ತಿರುಮಲೇಶ್ವರ ಭಟ್ಟರ ಸಹಜ ಕೃಷಿ ಪ್ರಯೋಗದ ತೋಟವಿದು. ಎಂ.ಟಿ. ಶಾಂತಿಮೂಲೆ ಎಂದೇ ಪರಿಚಿತರಾದ ತಿರುಮಲೇಶ್ವರ ಭಟ್ಟರು ತನ್ನ ಕೃಷಿ ಕ್ಷೇತ್ರದಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಲೇ ಬೆಳೆದವರು. ಈ ನೆಲದ, ಪ್ರಕೃತಿಗೆ ಅನುಗುಣವಾದ ಕೃಷಿ ಚಿಂತನೆಯನ್ನು ಪ್ರಯೋಗ ರೂಪಕ್ಕಿಸಿದವರು. ತನ್ನ ಪ್ರಯೋಗದಿಂದಲೇ ಕಲಿತವರು. ಇತರರಿಗೂ ಕಲಿಸಿದವರು. ಈ ನೆಲ ಜಲದ ಮಹತ್ವವನ್ನು ಅರಿತೇ ಅದರಂತೆ ಅನುಸರಿಸಿಕೊಂಡು ಹೋದವರು. 81 ರ ಈ ಹರೆಯದಲ್ಲೂ ಬತ್ತದ ಉತ್ಸಾಹ, ಕೃಷಿಯಲ್ಲಿ ಮತ್ತು ಪ್ರಯೋಗ ಶೀಲತೆಯಲ್ಲಿ ಅವರಿಸಿದ ಅಪಾರ ಪ್ರೀತಿಯೇ ಕಾರಣ. ಎಲೆ ಚುಕ್ಕಿ ರೋಗ, ಬೇರು ಹುಳ, ಹಳದಿ ರೋಗಗಳು ಅತ್ತಿತ್ತಾ ಸುಳಿದಾಡುತ್ತಿದ್ದರೂ ಅದಾವುದರ ಬಾಧೆ ಇಲ್ಲದೆ ಸಹಜವಾಗಿ ಬೆಳೆದು ನಿಂತ ಅಡಿಕೆ ಮರಗಳು ಸಹಜ ಕೃಷಿಯ ಸಾಮರ್ಥ್ಯ ಅಚ್ಚರಿಯನ್ನು ಮೂಡಿಸುತ್ತದೆ.
ಸುಳ್ಯ ತಾಲೂಕಿನ ತೀರಾ ಹಳ್ಳಿಯಾದ ಪೈಲಾರಿನ ಕಾಡು-ನಾಡಿನ ಮಧ್ಯೆಯಿರುವ ಪ್ರಶಾಂತ ಸ್ಥಳವಾದ ಶಾಂತಿಮೂಲೆಯನ್ನೆ ತನ್ನ ಕೃಷಿ ಪ್ರಯೋಗ ಶಾಲೆಯನ್ನಾಗಿ ಮಾಡಿಕೊಂಡ ಎಂ.ಟಿ. ಶಾಂತಿಮೂಲೆ ಹಿಂದಿ ಪಂಡಿತರು. ಅದರೊಂದಿಗೆ ಸಾವಯವ ಕೃಷಿ, ಸಹಜ ಕೃಷಿಯ ಪಾಠ ಮಾಡಿದ ಅವರು ಕೃಷಿ ಪಂಡಿತರು.
ಮೂಲತಃ ಕಾಸರಗೋಡಿನವರಾದ ಭಟ್ಟರು ಎಸ್.ಎಸ್.ಎಲ್.ಸಿ ವಿದ್ಯಾಭ್ಯಾಸದ ನಂತರ ಅನಿವಾರ್ಯವಾಗಿ ಮದ್ರಾಸಿಗೆ ತೆರಳಿ ಹೋಟೆಲಿನಲ್ಲಿ ಸ್ವಲ್ಪ ಸಮಯ ಕೆಲಸ ಮಾಡಬೇಕಾಯಿತು. ಅಲ್ಲೇ ಇದ್ದಿದ್ದರೆ ಅವರ ದಾರಿ ಯಾವುದಿತ್ತೋ ಏನೋ?.. ಆದರೆ ಅವರು ಊರಿಗೆ ಮರಳಿ ಬಂದರು. ಕಾಸರಗೋಡಿನಿಂದ ದೊಡ್ಡತೋಟದ ಸಮೀಪದ ನಾರ್ಣಕಜೆಗೆ ವಲಸೆ ಬಂದು ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡರು. ಈ ಸಂದರ್ಭದಲ್ಲಿ ಹಿಂದಿ ಪಂಡಿತರಾಗಿದ್ದ ಅವರು ನಾರ್ಣಕಜೆ ಶಾಲೆಯಲ್ಲಿ ಅಧ್ಯಾಪಕರಾಗಿ ಸೇರಿದರು. ಆ ನಂತರ 1972-73 ರ ಅವಧಿಯಲ್ಲಿ ಚೊಕ್ಕಾಡಿ ಪ್ರೌಢಶಾಲೆ ಆರಂಭವಾದಾಗ ಅಲ್ಲಿ ಸೇರಿ ಸುದೀರ್ಘ ಅವಧಿಯವರೆಗೆ ಸೇವೆ ಸಲ್ಲಿಸಿದರು.
ರಾಸಾಯನಿಕ ಗೊಬ್ಬರ ಬಳಕೆ, ಅಧಿಕ ಇಳುವರಿ ಚರ್ಚೆಗಳು ಒಂದೆಡೆಯಾದರೆ, ರಾಸಾಯನಿಕ ಗೊಬ್ಬರಗಳಿಂದ ಭವಿಷ್ಯದ ಕೃಷಿಯ ಮೇಲೆ ಬೀರಬಹುದಾದ ದುಷ್ಪರಿಣಾಮ, ರಾಸಾಯಿನಿಕ, ಕೀಟನಾಶಕಗಳಿಂದ ಮಣ್ಣು ಸತ್ವ ಹೀನವಾಗುತ್ತಿರುವುದರ ಬಗ್ಗೆ ಮತ್ತೊಂದೆಡೆ ಗಂಭೀರ ಚಿಂತನೆಗಳಾಗುತ್ತಿದ್ದವು. ಕೆಲವರು ಸಾವಯುವ ಕೃಷಿಗೆ ಮರಳಿದರು. ಭಟ್ಟರ ಆಸಕ್ತಿಯು ಸಾಂಪ್ರದಾಯಿಕ ಮತ್ತು ಸಾವಯವದತ್ತ ಹರಿಯಿತು.
ಈ ನಡುವೆ ಸಾವಯುವ ಕೃಷಿ ಸಾಧಕರಾದ ಮೇಲುಕೋಟೆ ಸಂತೋಷ ಕೌಜಲಗಿ, ವರ್ತೂರು ನಾರಾಯಣ ರೆಡ್ಡಿ, ಭರಮ ಗೌಡ, . ತೀರ್ಥಹಳ್ಳಿ ಪುರುಷೋತ್ತಮ ರಾವ್ ಮೊದಲಾದವರ ಪರಿಚಯ ಎಂ.ಟಿ.ಯವರ ಸಾವಯುವ ಕೃಷಿಗೆ ಮತ್ತಷ್ಟು ಬಲ ತುಂಬಿದವು. ಚೊಕ್ಕಾಡಿ ಪರಿಸರದಲ್ಲಿ ಸಾವಯವ ಶಿಬಿರಗಳು ನಡೆದು ಸಾವಯವದ ಗಾಳಿ ಬೀಸಿತು. ಶಿವರಾಮ ಪೈಲೂರು, ಸುರೇಶ್ ಕಂಜರ್ಪಣೆ ಮತ್ತಿತರರು ಈ ಊರಿನಲ್ಲಿ ಸಾವಯವದ ಹವಾ ಸೃಷ್ಟಿಸಿದರು.
ಕಳಿತ ಗೊಬ್ಬರ, ಕೃಷಿ ತ್ಯಾಜವನ್ನು ತಿಂದು ಮಣ್ಣಿನ ಆರೋಗ್ಯವನ್ನು ಸದೃಢಗೊಳಿಸುವ ಜೀವಿಗಳು ಎರೆಹುಳುಗಳು. ಕತ್ತಲೆ ಇವುಗಳ ಜಗತ್ತು. ತಮ್ಮ ಜೀವನ ಆಡಂಬೋಲ. ಪ್ರಾಕೃತಿಕ ಹಾಗೂ ಕೃತಕವಾಗಿ ಸೃಷ್ಟಿಯಾದ ಕೊಳೆಗಳನ್ನು ತಿಂದು ಪರಿಸರ ಸ್ವಚ್ಛಗೊಳಿಸುವ ಕರ್ಮ ಜೀವಿಗಳು. ಅವು ವಿಸರ್ಜಿಸುವ ತ್ಯಾಜ್ಯವಾದ ಎರೆ ಗೊಬ್ಬರವೇ ಈ ಭೂಮಿಯಲ್ಲಿರುವ ಎಲ್ಲಾ ಗಿಡಮರಗಳಿಗೆ ದಕ್ಕುವ ಪೋಷಕಾಂಶಗಳು ಎಂದು ಅರಿತ ಅವರು ಎರೆಗೊಬ್ಬರ ತಯಾರಿತ್ತ ಗಮನ ಹರಿಸಿದರು. ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರಕ್ಕೆ ಗೆ ತೆರಳಿ ಅಲ್ಲಿಂದ ಎರೆಹುಳುಗಳನ್ನು ತಂದು ಎರೆಗೊಬ್ಬರ ತಯಾರಿಸಿ ತಮ್ಮ ತೋಟಕ್ಕೆ ಬಳಸಿ ಯಶಸ್ಸು ಕಂಡರು. ಎರೆಹುಳು ಮತ್ತು ಎರೆಗೊಬ್ಬರವನ್ನು ಇತರಿಗೂ ನೀಡಿ ಅದರ ಪ್ರಯೋಜನವನ್ನು ಪ್ರಚುರಪಡಿಸಿದರು.
ಸಹಜ ಕೃಷಿ
ಈ ನಡುವೆ ಅವರ ಒಲವು ಸಹಜ ಕೃಷಿಯತ್ತ ಹೊರಳಿತು. ನೆಲದ ಸತ್ವವನ್ನು ಹೀರಿ ಗಿಡಮರಗಳು ಸಮೃದ್ಧವಾಗಿ ಬೆಳೆಯುತ್ತಿರುವುದನ್ನು ಕಂಡ ಎಂ.ಟಿ ಅವರು ತನ್ನ ಪುಟ್ಟ ತೋಟವನ್ನು ಅದರ ಪ್ರಯೋಗ ಭೂಮಿಯನ್ನಾಗಿ ಮಾಡಿದರು. ಕಳೆದ 21 ವರ್ಷಗಳಿಂದ ಇವರ ತೋಟವು ಎರೆಗೊಬ್ಬರ ಹೊರತಾಗಿ ಬೇರೆ ಗೊಬ್ಬರವನ್ನು ಕಂಡಿಲ್ಲ. ಅಡಿಕೆ ತೋಟದ ಬುಡ ಬಿಡಿಸಿಲ್ಲ. ಔಷಧಿ ಸಿಂಪಡಿಸಿಲ್ಲ. ಅಡಿಕೆ ಗೊನೆಗಳನ್ನು ಕೊಯ್ಲು ಮಾಡುತ್ತಿಲ್ಲ. ಬಿದ್ದುದ್ದನ್ನು ಹೆಕ್ಕಿ ಜೋಪಾನ ಮಾಡುವುದಷ್ಟೇ ಅವರ ಕೆಲಸ. “ಅನಾರೋಗ್ಯ ಪೀಡಿತರಿಗೆ ಮಾತ್ರ ಔಷಧಿ ಕೊಡಬೇಕು. ಆರೋಗ್ಯವಂತರಿಗೆ ಅಲ್ಲ. ಹಾಗೆಯೇ ಯಾವುದೇ ಸಮಸ್ಯೆ ಇಲ್ಲದಾಗ ಕೀಟನಾಶಕವಾಗಲಿ, ಬೋರ್ಡೋ ದ್ರಾವಣವಾಗಲಿ ಸಿಂಪಡಿಸುವುದು ಅಗತ್ಯವಿಲ್ಲ” ಎನ್ನುತ್ತಾರೆ ಎಂ.ಟಿ ಶಾಂತಿಮೂಲೆ.
ಅವರ ಅಡಿಕೆ ತೋಟಕ್ಕೆ ರೋಗವೇ ಇಲ್ಲವೆಂದಲ್ಲ. ಸಹಜವಾಗಿ ಬರುವಂತದ್ದು ಬರುತ್ತದೆ. ಮತ್ತೆ ಅದರಷ್ಟಕ್ಕೇ ಹೋಗುತ್ತದೆ. ಅವರು ಅಡಿಕೆ ಸೋಗೆ ಮತ್ತು ಹಾಳೆಯನ್ನು ಅಲ್ಲೇ ತುಂಡರಿಸಿ ನೆಲಕ್ಕೆ ಹಾಸುತ್ತಾರೆ. ಆ ಮರಗಳಿಗೆ ಎಷ್ಟು ಫಸಲು ನೀಡಲು ಸಾಧ್ಯವೋ ಅಷ್ಟನ್ನು ನೀಡುತ್ತದೆ. ಎರೆಹುಳು ಗೊಬ್ಬರ, ಬೇಸಿಗೆಯಲ್ಲಿ ನೀರು ಹರಿಸುವುದನ್ನು ಬಿಟ್ಟರೆ ಉಳಿದೆಲ್ಲ ಸಾರವನ್ನು ಪ್ರಕೃತಿಯಿಂದಲೇ ಹೀರಿ ಬೆಳೆಯಬೇಕು. ತೆಂಗು, ಕೊಕ್ಕೊ, ಪುನರ್ಪುಳಿ, ಕಾಳುಮೆಣಸು, ಏಲಕ್ಕಿ, ದಾಲ್ಚಿನ್ನಿ, ಮಾವು, ಹಲಸು ಮೊದಲಾದುವು ಅವರ ತೋಟದಲ್ಲಿದೆ. ಅದರ ಮೊದಲ ವಾರಸುದಾರ ಮಂಗಗಳೇ. ಭಟ್ಟರಿಗೆ ಬರಬಹುದಾದ ಆದಾಯಕ್ಕೆ ಅವು ಪಾಲುದಾರರು. ಏನು ಮಾಡಿದರೂ ಮಂಗಗಳ ಹಾವಳಿಯಿಂದ ಬೆಳೆ ರಕ್ಷಿಸಿಕೊಳ್ಳಲಾಗುತ್ತಿಲ್ಲ. ಎಂಬ ಕೊರಗು ಅವರನ್ನು ಕಾಡುತ್ತದೆ.
ಜೇನು ಕೃಷಿಯಿಂದ: ಮಧು ಪ್ರಪಂಚ ಸಂಪಾದಕನವರೆಗೆ
ಕೃಷಿಗೆ ಕೈಯಕ್ಕುತ್ತಿದ್ದಂತೆ ನಿಸರ್ಗದತ್ತವಾಗಿ ಫಸಲು ಹೆಚ್ಚಿಸಲು ಸಹಕಾರ ನೀಡುವ ಜೇನಿನತ್ತಲೂ ಅವರ ಗಮನ ಹರಿಯಿತು. ಜೇನು ಕುಟುಂಬಕ್ಕೆ ಕೈಹಾಕಿ ಮೈಕೈ ಚುಚ್ಚಿಸಿಕೊಡರು. ಆನಂತರ ಭಾಗಮಂಡಲದ ಜೇನುಕೃಷಿ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದರು. ಜೀನು ಕೃಷಿಮಾಡಲು ದ.ಕ ಜಿಲ್ಲಾ ಜೇನು ವ್ಯವಸಾಯಗಾರರ ಸಹಕಾರಿ ಸಂಘವು ಆರ್ಥಿಕ ನೆರವು ನೀಡಿತು. ಆರು ಪೆಟ್ಟಿಗೆಯಿಂದ ಆರಂಭವಾದ ಜೇನು ಕೃಷಿ 4೦ಪೆಟ್ಟಿಗೆಯವರೆಗೂ ತಲುಪಿತು.
ವರ್ಷಕ್ಕೆ 350 ರಿಂದ 4೦೦ಕ್ವಿಂಟಾಲು ಜೇನು ಉತ್ಪತ್ತಿಯಾಗುತ್ತಿತ್ತು. ದ.ಕ.ಜಿಲ್ಲ ಜೇನು ವ್ಯವಸಾಯ ಸಹಕಾರಿ ಸಂಘದಿಂದ ಹೊರತರಲಾಗುತ್ತಿದ್ದ ಮಧು ಪ್ರಪಂಚ ಪತ್ರಿಕೆಯ ಸಂಪಾದಕರಾಗಿ ಸುಮಾರು 15 ವರ್ಷಕಾಲ ಕಾರ್ಯನಿರ್ವಹಿಸಿರುವುದು ಅವರ ಹೆಗ್ಗಳಿಕೆ. ಈಗ ಹಿಂದಿನಷ್ಟು ಜೇನು ಪೆಟ್ಟಿಗೆಗಳಿಲ್ಲ. ಇರುವ ಏಳೆಂಟು ಪೆಟ್ಟಿಗೆಗಳಲ್ಲಿ ಒಂದೆರಡು ಖಾಲಿ ಇವೆ. ಅದಕ್ಕೆ ಅವರಾಗಿ ಜೇನು ಕುಟುಂಬವನ್ನು ತಂದು ಕೂರಿಸುವುದಿಲ್ಲ. ಸ್ವಯಿಚ್ಛೆಯಿಂಲೇ ಜೇನು ಕುಟುಂಬ ಬಂದು ಈ ಪೆಟ್ಟಿಗೆಯಲ್ಲಿ ಸಂಸಾರ ಮಾಡುತ್ತದೆ. ಬೇಡವೆಂದಾಗ ಬಿಟ್ಟು ಹೋಗುತ್ತದೆ. ಮನೆ ಮಾಡಿ ಇಟ್ಟಿದ್ದೇನೆ. ಇಲ್ಲಿ ಬಂದು ವಾಸ್ತವ್ಯ ಮಾಡಿ ನನಗೆ ಮನೆ ಬಾಡಿಗೆ (ಜೇನು) ಕೊಟ್ಟರಾಯಿತು. ಎನ್ನುತ್ತಾರೆ ಶಾಂತಿಮೂಲೆ
ಕಂದಮೂಲಗಳು
ಹಲವು ನಮೂನೆಯ ಗೆಡ್ಡೆ ಗೆಣಸುಗಳನ್ನು ಬೆಳೆಸಿದ್ದಾರೆ. ವಿವಿಧ ಜಾತಿಯ ಕೆಸು ಇವರಲ್ಲಿದೆ. ತುರಿಕೆಯಿಲ್ಲದ ಕೆಸುವಿನ ಗಡ್ಡೆ, ಎಲೆಗಳನ್ನು ಹಾಗೆ ತಿನ್ನಬಹುದು. ತುರಿಕೆಯಿಲ್ಲ. ಕ್ಯಾರೆಟ್ ಬಣ್ಣದ ಅಪರೂಪದ ಗೆಣಸು ತಳಿಯನ್ನು ಚಟ್ಟಿಯಲ್ಲಿ ಬೆಳೆಸಿ ಪೋಷಿಸಿದ್ದಾರೆ. ಹಲವು ಮೆಣಸಿನ ತಳಿಗಳನ್ನು ಸಂಕರಣಗೊಳಿಸುವ ಪ್ರಯತ್ನದಲ್ಲಿದ್ದು, ಗಾಂಧಾರಿ ಮೆಣಸಿನಲ್ಲಿ ನಡೆಸಿದ ಪ್ರಯೋಗದಲ್ಲಿ ಯಶಸ್ಸು ಕಂಡಿದ್ದಾರೆ. ಹೊಸ ತಳಿಯ ಗಾಂಧಾರಿ ಮೆಣಸು ಈಗ ಅವರಲ್ಲಿದೆ.
ಪರಂಪರಾಗತವಾಗಿ ಬಂದ ನಾಟಿ ವೈದ್ಯ ಪದ್ಧತಿಯನ್ನು ಇವರೂ ಕಲಿತಿದ್ದು ಮನೆಯ ಸುತ್ತಮುತ್ತ ಔಷಧಿಯ ಗಿಡಗಳನ್ನು ಬೆಳೆಸಿದ್ದಾರೆ. ಕಸಿಕಟ್ಟುವ ಪರಿಣಿತಿಯಿರುವ ಅವರಲ್ಲಿ ಪ್ರಾಯೋಗಿಕ ನೆಲೆಯ ಕಸಿ ಗಿಡಗಳಿವೆ. ಇವರ ಕೃಷಿ ಚಟುವಟಿಕೆಗೆ ಪತ್ನಿ ಸತ್ಯಭಾಮ ಸಹಕರಿಸುತ್ತಾ ಬಂದಿದ್ದಾರೆ. ಶಾಂತಿಮೂಲೆ ಹಿಂದಿ ಪಂಡಿತ, ಕೃಷಿ ಪಂಡಿತ ಮಾತ್ರವಲ್ಲ ಅವರೊಬ್ಬ ಬರಹಗಾರ. ಕವಿ, ಯಕ್ಷಗಾನ ಪ್ರಸಂಗ ಕರ್ತ, ಯಕ್ಷಗಾನ ಅರ್ಥಧಾರಿ, ಕೃಷಿ ಬಿಂಬ ಪತ್ರಿಕೆಯ ಕೃಷಿ ಅಂಕಣ ಬರಹಗಾರರು. ಅವರ ಪ್ರಯೋಗಗಳನ್ನು ಬರಹದ ಮೂಲಕ ಕೃಷಿಕರ ಮುಂದಿಟ್ಟಿದ್ದಾರೆ.
ಇವರ ಸಾಧನೆಯನ್ನು ಗುರುತಿಸಿ ಹೊಸನಗರ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತಿ ಮಹಾ ಸ್ವಾಮೀಜಿಯವರು ಸಾವಯುವ ಕೃಷಿ ರತ್ನ ಪ್ರಶಸ್ತಿ ನೀಡಿ ಹರಸಿದ್ದಾರೆ. ಬೆಂಗಳೂರಿನಲ್ಲಿ ನಡೆದ ವಿಶ್ವಹವ್ಯಕ ಸಮ್ಮೇಳನದಲ್ಲಿ ಹವ್ಯಕ ಕೃಷಿ ರತ್ನ ಪ್ರಶಸ್ತಿ, ಬೆಂಗಳೂರಿನ ಗ್ರೀನ್ ಪೌಂಡೇಶನ್‌ನ ಪ್ರಶಸ್ತಿ, ತೋಟಗಾರಿಕಾ, ಜೇನು ವ್ಯವಸಾಯ ಸಹಕಾರಿ ಸಂಘ, ಕೆವಿಕೆ ಹಾಗೂ ಸ್ಥಳೀಯ ಸಂಘಸಂಸ್ಥೆಗಳ ಗೌರವಗಳನ್ನು ಪಡೆದಿದ್ದಾರೆ
ಮಾಹಿತಿಗೆ ಮೊ. 9901722681
ಚಿತ್ರ : ರಾಧಾಕೃಷ್ಣ ಭಟ್ ಪಿ.ಎಸ್