-ಡಾ. ಕೃಷ್ಣಮೂರ್ತಿ ಎ.ಟಿ
ಕೃಷಿ ಕ್ಷೇತ್ರದಲ್ಲಿ ಬಹಳಷ್ಟು ಮಹಿಳೆಯರು ಪ್ರಧಾನ ಭೂಮಿಕೆಯಲ್ಲಿ ಕೆಲಸ ಮಾಡುತ್ತಿರುತ್ತಾರೆ. ಯಶಸ್ಸಿನಲ್ಲಿ ಮಹಿಳೆಯರು ಭಾಗೀಧಾರರಾಗುವುದು ಬಹಳ ಕಡಿಮೆ. ತೋಟಗಾರಿಕೆ, ಪಶುಸಂಗೋಪನೆ ಮೊದಲಾದವುಗಳೊಂದಿಗೆ ಕೃಷಿಯನ್ನು ಉಸಿರಾಗಿಸಿಕೊಂಡು ದುಡಿಯುತ್ತಿರುವ ಶ್ರೀಮತಿ ರಚಿತ, “ಪ್ರಗತಿಪರ ರೈತ ಮಹಿಳೆ” ಎಂಬ ಸಾಧನೆಗೆ ಪಾತ್ರರಾಗಿದ್ದಾರೆ.
ಜಮೀನು ಎಷ್ಟಿದೆ ಎಂಬುದಕ್ಕಿಂತ ಜಮೀನಿನಲ್ಲಿ ಎಷ್ಟು ಬೆಳೆಯಿದೆ ಎಂಬುದು ಮುಖ್ಯ. ರಚಿತ ಅವರ ಸಾಧನೆಯ ಹಿಂದಿರುವುದು. ಹಿಂಡು ಬೆಳೆ. ಸಮಗ್ರ ಕೃಷಿಯ ಅಳವಡಿಕೆ. ಪ್ರಗತಿಪರ ಚಿಂತನೆಯ ಪ್ರತೀಕ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೆಸವಳಲು ಜಯರಾಮ್ ಅವರ ಪತ್ನಿ ಶ್ರೀಮತಿ ರಚಿತ ಅವರು ತನ್ನದಾದ ಕೃಷಿ ಭೂಮಿಯಲ್ಲಿ ಬೇರೆ ಬೇರೆ ಬೆಳೆಯ ಪ್ರಯೋಗಗಳನ್ನು ಮಾಡುತ್ತಾ ಯಶಸ್ಸಿನ ಮೆಟ್ಟಿಲೇರಿದವರು. ಅವರು ಒಂದೇ ಬೆಳೆಗೆ ಜೋತುಬೀಳದೆ ಸಮಗ್ರ ಕೃಷಿಯಿಂದಲೇ ಸೈ ಎನಿಸಿಕೊಂಡವರು.
ಕುಟುಂಬಕ್ಕೆ ಸಂಬಂಧಿಸಿದಂತೆ ಹೆಚ್ಚು ಭೂಮಿಯಿದ್ದರೂ ಅವರು ಹೊಂದಿರುವುದು ಮೂರು ಎಕರೆ ಹಿಡುವಳಿಯನ್ನು. ಈ ಭೂಮಿಯಲ್ಲಿ ಸಾಂಪ್ರದಾಯಿಕವಾಗಿ ಕಾಫಿ ಪ್ರಧಾನ ಬೆಳೆಯಾದರೂ ಅದನ್ನಷ್ಟೇ ನೆಚ್ಚಿ ಕುಳಿತವರಲ್ಲ. ಅದರೊಂದಿಗೆ ಉಪಬೆಳೆಯಾಗಿರುವ ಅಡಿಕೆ ಒಂದಿಷ್ಟು ಆದಾಯ ತರುವ ಬೆಳೆಯಾಗಿದೆ. ಕಾಳುಮೆಣಸು ಅವರಿಗೆ ಭರವಸೆಯ ಬೆಳೆ. ನೆಟ್ಟು ಬೆಳೆದುದಕ್ಕೆ ಮೋಸವಾಗದ ಏಲಕ್ಕಿ, ನಿಂಬೆ, ಜಾಯಿಕಾಯಿ, ಲವಂಗ, ದಾಲ್ಚಿನ್ನಿ ಮೊದಲಾದ ಸಾಂಬಾರು ಬೆಳೆಗಳು ಅವರ ಆದಾಯವನ್ನು ಹೆಚ್ಚಿಸುವಲ್ಲಿ ತನ್ನದಾದ ಪ್ರತಿಫಲವನ್ನು ನೀಡುತ್ತಾ ಬಂದಿವೆ. ಉದ್ಯಮ ಸ್ವರೂಪ ಪಡೆಯುತ್ತಿರುವ ನರ್ಸರಿಯನ್ನು ಹೊಂದಿದ್ದು ಇವರಿಗೆ ಆದಾಯ ತರುವ ಮತ್ತೊಂದು ಮೂಲ
ನೆಟ್ಟು ಬೆಳೆಸುವ ಬೆಳೆಗಳಿಗಷ್ಟೇ ಅವರ ಕೃಷಿಕ್ಷೇತ್ರ ಸೀಮಿತವಾದುದಲ್ಲ. ಪಶು ಸಂಗೋಪನೆಯೂ ಅವರ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿದೆ. ಹೈನುಗಾರಿಕೆಯೆಂದರೆ ಹಾಲಿನ ಲೆಕ್ಕಚಾರದಲ್ಲಿ ಮುಳುಗಿ ಅದು ಲಾಭದಾಯಕವಲ್ಲವೆಂದು ಕಡೆಗಣಿಸುವವರೆ ಹೆಚ್ಚು. ಹಾಲಿನ ಉದ್ದೇಶಕ್ಕಾಗಿ ದನ ಸಾಕಾಣೆಯನ್ನು ಕೇಂದ್ರೀಕರಿಸಿಕೊಂಡವರಲ್ಲ. ಅದರ ಜೊತೆಗೆ ತೋಟಕ್ಕೆ ಬೇಕಾದ ಗೊಬ್ಬರ ಸಿಗುವುದರಿಂದ ರಾಸಾಯಿನಿಕ ಗೊಬ್ಬರದ ಹೊರೆಯನ್ನು ಕಡಿಮೆ ಮಾಡಿದೆ. ಹಾಲಿನ ಉಪ ಉತ್ಪನ್ನಗಳು ಹೈನುಗಾರಿಕೆಯ ದೃಷ್ಟಿಕೋನವನ್ನು ಬದಲಾಯಿಸಿದೆ. ಕುರಿ, ಮೇಕೆ ಸಂಚಾರಿ ಎಟಿಎಮ್ ಎಂದೇ ಪ್ರತೀತಿ. ಕುರಿ ಮೇಕೆ ,ಕೋಳಿ,ನಾಯಿ ಸಾಕಾಣಿಕೆಯಲ್ಲೂ ಪ್ರವೃತ್ತರು. ತೋಟವೆಂದ ಮೇಲೆ ಅಲ್ಲಲ್ಲಿ ಕೃಷಿಹೊಂಡಗಳು, ಸಾಂಪ್ರದಾಯಿಕ ಕೆರೆಗಳು ಸಾಮಾನ್ಯ. ಮನಸ್ಸಿದ್ದರೆ ಕೆರೆಗಳೂ ಆದಾಯ ತಂದುಕೊಡುವ ಮೂಲಗಳಾಗಬಹುದು. ಅದನ್ನು ಮನಗಂಡು ಮೀನುಕೃಷಿಯನ್ನು ಮಾಡುತ್ತಿದ್ದಾರೆ. ಜೊತೆಗೆ ತೋಟದ ಬೆಳೆಗಳಿಗೆ ಪರಾಗ ಸ್ಪರ್ಶಕ್ಕೆ ಅನುಕೂಲವಾಗುವಂತೆ ಜೇನುಕೃಷಿಯನ್ನು ಹಮ್ಮಿಕೊಂಡಿದ್ದಾರೆ.
ತೋಟಗಾರಿಕೆ ಬೆಳೆಯತ್ತ ಹೆಚ್ಚು ಹೆಚ್ಚು ವಾಲಿದಂತೆಲ್ಲಾ ಪರಂಪರೆಯಿಂದ ಬಂದ ಭತ್ತದ ಕೃಷಿ ಮಾಯವಾಗುತ್ತಾ ಬರುತ್ತಿದೆ. ಆದರೆ ರಚಿತ ಅವರು ಭತ್ತದ ಕೃಷಿ ಬಿಟ್ಟಿಲ್ಲ. ಇದರಿಂದ ಮನೆ ಬಳಕೆಗೆ ಬೇಕಾದಷ್ಟು ಅಕ್ಕಿ ಮಾಡಿದ ನಂತರ ಉಳಿದುದನ್ನು ಮಾರಾಟ ಮಾಡುತ್ತಾರೆ. ದನಕರುಗಳಿಗೆ ಬೈಹುಲ್ಲು ಭತ್ತದ ಬೆಳೆಯಿಂದ ಬಂದರೆ ಹಸಿರು ಮೇವಿಗಾಗಿ ಹೈಬ್ರಿಡ್ ಹುಲ್ಲನ್ನು ಬೆಳೆಯುತ್ತಿರುವುದರಿಂದ ಪಶುಆಹಾರದ ವೆಚ್ಚವನ್ನು ಕಡಿಮೆ ಮಾಡಿಕೊಳ್ಳಲಾಗಿದೆ. ಇವರು ನಾಲ್ಕು ಮಂದಿಗೆ ಉದ್ಯೋಗದಾತರು.
ತೋಟಗಾರಿಕೆ, ಪಶಸಂಗೋಪನೆ, ಸಾಂಬಾರು ಬೆಳೆ ಸೇರಿದಂತೆ ವಿವಿಧ ಮೂಲಗಳಿಂದ ಅವರು ಗಳಿಸುವ ಆದಾಯ ಸುಮಾರು 8 ಲಕ್ಷ. ತನ್ನದಾದ ಮೂರು ಎಕ್ರೆ ಜಮೀನಿನಲ್ಲಿ ಮಿಶ್ರ ಕೃಷಿ ,ಸಮಗ್ರ ಬೆಳೆ ಪದ್ಧತಿಗಳನ್ನು ಅಳವಡಿಸಿಕೊಂಡು ಯಶಸ್ಸಿನ ಪಥ ಕಂಡುಕೊಡು ಮಾದರಿಯಾಗಿದ್ದಾರೆ.
ಅವರ ಶ್ರಮ ಹಾಗೂ ಸಾಧನೆಯನ್ನು ಗುರುತಿಸಿ ಹಲವು ಪ್ರಶಸ್ತಿ ಪುರಸ್ಕಾರಗಳು ಅವರಿಗೆ ಸಂದಿವೆ. ಚಿಕ್ಕಮಗಳೂರು ಜಿಲ್ಲಾ ಮಟ್ಟದ ಪ್ರಗತಿಪರ ರೈತ ಮಹಿಳೆ, ಜಿಲ್ಲಾ ಹಾಗೂ ರಾಜ್ಯಮಟ್ಟದ ವಿಜಯ ಕರ್ನಾಟಕ ಸೂಪರ್ ಸ್ಟಾರ್ ರೈತ ಮಹಿಳೆ ಪ್ರಶಸ್ತಿಗಳು ದೊರೆತಿವೆ. ಇವರ ಸಾಧನೆಗೆ ಪತಿ ಜಯರಾಮ್ ಬೆಂಬಲ ಪ್ರೋತ್ಸಾಹ ನೀಡಿದರೆ, ಮೂಡಿಗೆರೆ ಕೃಷಿ ವಿಜ್ಞಾನ ಕೇಂದ್ರವು ಸಲಹೆ, ಮಾಹಿತಿ, ಮಾರ್ಗದರ್ಶನಗಳನ್ನು ನೀಡಿ ಅವರ ಯಶಸ್ಸಿಗೆ ಸಹಕರಿಸಿದೆ. ಮಾಹಿತಿಗೆ 9686091772
ನಿರೂಪಣೆ : ರಾಧಾಕೃಷ್ಣ ತೊಡಿಕಾನ