spot_img
Thursday, March 13, 2025
spot_imgspot_img

ಗೃಹೋದ್ಯಮವಾಗಿ ಬೆಳೆಯಿತು ಆರೋಗ್ಯವರ್ಧಕ ಆಹಾರ ಧಾನ್ಯಗಳ ಮಿಶ್ರಣ, ಬೆಳ್ತಂಗಡಿಯ ಮಹಿಳೆಯ ಸಾಧನೆ

ರಾಧಾಕೃಷ್ಣ ತೊಡಿಕಾನ

ಭಾರತೀಯ ಆಹಾರ ಪದ್ಧತಿಯಲ್ಲಿ ಆಹಾರವು ಔಷಧಿಯಾಗಿ ಪರಿಣಮಿಸುವುದನ್ನು ಎಲ್ಲರು ಬಲ್ಲರು. ತಿನ್ನುವ ಉಣ್ಣುವ ಪ್ರತಿಯೊಂದು ಆಹಾರ ಪದಾರ್ಥಗಳು ಹೊಟ್ಟೆ ತುಂಬುವುದಕ್ಕೆ ಅಷ್ಟೇ ಅಲ್ಲ; ಅದರಲ್ಲಿ ಔಷಧೀಯ ಗುಣವಿರುವುದನ್ನು ಜನಪದರು ಕಂಡುಕೊಂಡಿದ್ದರು. ಸಿರಿಧಾನ್ಯಗಳ ಐಸಿರಿ ಏನೆಂಬುದು ಅದನ್ನು ಬೆಳೆದು ಉಪಯೋಗಿಸುತ್ತಿದ್ದ ಕೃಷಿಕರು ಅರಿತಿದ್ದರು. ಆದರೆ ಬಡವರ ಆಹಾರವಾಗಿ ಬದಿಗೆ ಸರಿದಿದ್ದ ಸಿರಿಧಾನ್ಯಗಳ ಮೌಲ್ಯವನ್ನು ತಿಳಿಯುತ್ತಿದ್ದಂತೆ ಅದೀಗ ಬಡವರ ಕೈಗೆಟಕದಂತೆ ಎತ್ತರಕ್ಕೇರಿದೆ. ಬೇಳೆ ಕಾಳು, ದವಸ ಧಾನ್ಯ, ಹಣ್ಣು ಹಂಪಲುಗಳು ಎಲ್ಲವೂ ಅದರದೇ ಆದ ಮೌಲ್ಯಗಳನ್ನು ಒಳಗೊಂಡಿದೆ ಪ್ರಕೃತಿಯಲ್ಲಿ ಬೆಳೆಯುತ್ತಿದ್ದ ಇವೆಲ್ಲವೂ ಆಹಾರ ಔಷಧವೆಂಬುದನ್ನು ಪ್ರಯೋಗ ಶೀಲರು ಮನಗಂಡಿದ್ದರು.

ಇತ್ತೀಚಿನ ದಿನಗಳಲ್ಲಿ ವಿವಿಧ ಸಿರಿಧಾನ್ಯಗಳು ಹಾಗೂ ಬೇಳೆ ಕಾಳುಗಳ ಮಿಶ್ರಣದಿಂದ ತಯಾರಿಯಾಗುವ ಪೋಷಕಾಂಶಗಳ ಮಿಶ್ರಣಗಳು ಹೆಚ್ಚು ಪ್ರಚಲಿತದಲ್ಲಿವೆ. ಇಂತಹ ಪೌಷ್ಠಿಕಾಂಶದ ಮಿಶ್ರಣವನ್ನು ತಯಾರಿಸಿ ಗೃಹೋದ್ಯಮದಲ್ಲಿ ಯಶಸ್ಸು ಕಂಡಿದ್ದಾರೆ ರೋಹಿಣಿ. ಜೀವನದಲ್ಲಿ ಹಲವಾರು ಏಳುಬೀಳುಗಳನ್ನು ಕಂಡು ನಂತರ ಕೈ ಹಾಕಿದ ಉದ್ಯಮ-ಅವರಿಗೆ ಯಶಸ್ಸಿನ ಪಥವನ್ನು ತೋರಿಸಿದೆ.

ಬೆಳ್ತಂಗಡಿ ತಾಲೂಕಿನ ಪಡ್ಡ್ಯಾರ ಬೆಟ್ಟದ ಸಮೀಪದ ನಿವಾಸಿ ರೋಹಿಣಿಯವರು ಮೂಡಬಿದ್ರೆಯ ಕ್ಲಿನಿಕ್ ಒಂದರಲ್ಲಿ ಉದ್ಯೋಗಿಯಾಗಿದ್ದರು. ಅವರ ಪತಿ ಉಮೇಶ ಕೆ. ರಾವ್ ಅವರು ಮುಂಬೈಯಲ್ಲಿ ಕ್ಯಾಂಟೀನ್ ನಡೆಸುತ್ತಿದ್ದರು. ಮಕ್ಕಳಿಬ್ಬರ ವಿದ್ಯಾಭ್ಯಾಸ ಮುಗಿದ ನಂತರ ರೋಹಿಣಿಯವರು ಉದ್ಯೋಗ ಬಿಟ್ಟು ಮುಂಬೈಗೆ ಹೋಗಿ ಪತಿಯ ನೆರವಿಗೆ ನಿಂತರು. ಆ ಸಂದರ್ಭದಲ್ಲಿ ಕೊರೊನಾ ದಾಂಗುಡಿಯಿಟ್ಟಿತು. ಹಲವರ ಬದುಕನಿಲ್ಲಿ ಚೆಲ್ಲಾಡಿತು.

ಇವರಿಬ್ಬರನ್ನು ಮಹಾನಗರದಿಂದ ಮರಳಿ ಊರಿಗೆ ಕಳುಹಿಸಿ ಬಿಟ್ಟಿತು. ಜೀವನಕ್ಕಿದ್ದ ಕ್ಯಾಂಟೀನ್ ಮುಚ್ಚಿ ಊರ ದಾರಿ ಹಿಡಿದರು.ಊರಲ್ಲಿ ಕೃಷಿ ಮಾಡದೆ ಪಾಳುಬಿದ್ದ ಭೂಮಿಗೆ ಹೊಸ ರೂಪ ಕೊಡಲು ಹೊರಟರು. ಗಿಡ ಗಂಟಿಗಳನ್ನು ತೆಗೆದು ಭೂಮಿ ಹಸನುಗೊಳಿಸಲು ಯಂತ್ರೋಪಕರಣ ಬಳಸಿದರೆ ಅಡಿಕೆ ತೋಟದ ಕೃಷಿ ಸಂಬಂಧಿಸಿದ ಇತರ ಕೆಲಸಗಳನ್ನು ಯಾವುದೇ ಜನರನ್ನು ಸೇರಿಸದೆ ಅವರಿಬ್ಬರೇ ಮಾಡಿದರು. ಕಳೆದ ನಾಲ್ಕು ವರ್ಷಗಳ ಶ್ರಮದ ಫಲವಾಗಿ ಈಗ ಅಡಿಕೆ ಗಿಡಗಳು ಫಲ ನೀಡುವ ಹಂತಕ್ಕೆ ಬೆಳೆದು ನಿಂತಿವೆ.

ಕೊರೊನಾ ಸಂದರ್ಭದಲ್ಲಿ ಆರೋಗ್ಯವರ್ಧಕ ಮಿಶ್ರಣದ ಆಹಾರ ಪಾನೀಯ ತಯಾರಿಸುತ್ತಿದ್ದಾಗ ಇದನ್ನು ಇನ್ನಷ್ಟು ಅಭಿವೃದ್ಧಿಪಡಿಸಿ ಗೃಹ ಉದ್ಯಮವಾಗಿ ಮಾಡಬೇಕೆಂಬ ಆಲೋಚನೆ ರೋಹಿಣಿಯವರಲ್ಲಿ ಮೂಡಿತ್ತು. ಹಾಗೆ ಆರಂಭವಾದ ರೋಶಿನಿಯ ನ್ಯೂಟ್ರಿಮಿಕ್ಸ್ ಈಗ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಒಣ ಹಣ್ಣುಗಳು, ಗೋಡಂಬಿ. ಸಿರಿಧಾನ್ಯಗಳು, ಬೇಳೆ ಕಾಳುಗಳು ಸೇರಿದಂತೆ ಸುಮಾರು ೪೦ ಬಗೆಯ ಆಹಾರ ಧಾನ್ಯಗಳ ಮಿಶ್ರಿಣ ರೋಶಿನಿಯ ನ್ಯೂಟ್ರಿಮಿಕ್ಸ್.

2024 ರಲ್ಲಿ ರಾಷ್ಟ್ರೀಯ ಮಟ್ಟದ ಸಿರಿಧಾನ್ಯ ಮೇಳದ ಅಂಗವಾಗಿ ನಡೆದ ಸಿರಿಧಾನ್ಯದ ಹಾಗೂ ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆದಿರುವುದು ರೋಹಿಣಿಯವರ ಹೆಗ್ಗಳಿಕೆ. ಹೈದರಾಬಾದಿನಲ್ಲಿ ನಡೆದ ಸಮಾವೇಶವೊಂದರಲ್ಲಿ ಎಸ್‌ಇಆರ್‌ಟಿ ಹೈದರಾಬಾದಿನ ಪ್ರಾಜೆಕ್ಟ್ ಮ್ಯಾನೇಜರ್ ನಾಗರಾಜ್ ಅವರು ರೋಶಿನಿಯ ಮಿಶ್ರಣವನ್ನು ಖರೀದಿಸಿ ಗಣ್ಯರಿಗೆ ಉಡುಗೊರೆಯಾಗಿ ನೀಡಿರುವುದನ್ನು ರೋಹಿಣಿಯವರು ಸದಾ ನೆನಪಿಸಿಕೊಳ್ಳುತ್ತಾರೆ. ಅದಲ್ಲದೆ ಈ ಉತ್ಪನ್ನದ ಬಗ್ಗೆ ದ.ಕ ಜಿಲ್ಲೆಯ ವರಿಷ್ಠ ಅಧಿಕಾರಿಗಳೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರೋಶಿನಿಯ ಮಿಶ್ರಣವು ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುವುದರಿಂದ ಆರೋಗ್ಯ ವೃದ್ಧಿಗೂ ಸಹಕಾರಿ. 1೦೦ಗ್ರಾಮ್ ಮಿಶ್ರಣದಲ್ಲಿ 11 ಗ್ರಾಮ್‌ಪ್ರೋಟೀನ್‌ಗಳಿದ್ದು ಸ್ನಾಯುಗಳ ಬೆಳವಣಿಗೆಗಳಿಗೆ ಪೂರಕ. ನೂರು ಗ್ರಾಮ್ ಮಿಶ್ರಣದಲ್ಲಿ  379.2 ಕ್ಯಾಲೋರಿ ಇರುವುದರಿಂದ ದಿನವಿಡೀ ಶಕ್ತಿ ಒದಗಿಸಬಲ್ಲದು. ಕಡಿಮೆ ಕೊಬು,್ಬ ಅಗತ್ಯವಾದ ಖನಿಜಗಳು ಆರೋಗ್ಯಕ್ಕೆ ಪೂರಕವಾಗಿವೆ. ಹೃದಯದ ಆರೋಗ್ಯ, ರೋಗ ನಿರೋಧಕ ಶಕ್ತಿ ವೃದ್ಧಿ, ಎಲುಬು ಹಾಗೂ ಸ್ನಾಯುಗಳ ಬಲ ಹೆಚ್ಚಳ ಸೇರಿದಂತೆ ಹಲವು ಆರೋಗ್ಯವರ್ಧಕ ಗುಣಗಳು. ಈ ಮಿಶ್ರಣದಲ್ಲಿದೆ ಎನ್ನುತ್ತಾರೆ ರೋಹಿಣಿ ರಾವ್.

ಒಂದು ಪ್ಯಾಕೆಟಿಗೆ 160 ರೂ. ಒಂದು ಲೋಟ ಹಾಲಿಗೆ ಒಂದು ಚಮಚ ಈ ಮಿಶ್ರಣ ಸೇರಿಸಿ ಸೇವಿಸಬಹುದು. ಹಾಲಿಲ್ಲದೆಯೂ ಬಿಸಿನೀರಿಗೆ ಹಾಕಿ ಕುದಿಸಿ ಕುಡಿಯಬಹುದು. ಈ ಮಿಶ್ರಣಕ್ಕೆ ಯಾವುದೇ ಬಣ್ಣ ಪರಿಮಳದ ವಸ್ತುಗಳನ್ನು ಬಳಸಿಲ್ಲ. ನೈಸರ್ಗಿಕವಾದ ಆಹಾರ ಪದಾರ್ಥಗಳ ಮಿಶ್ರಣವಾಗಿದೆ.

ಮೂಡಬಿದ್ರೆ, ಮಂಗಳೂರಿನ ಕೆಲ ಅಂಗಡಿಗಳಲ್ಲಿ ಮಾರಾಟಕ್ಕೆ ಲಭ್ಯವಿದೆ. ಕೆಲವು ಪ್ರದರ್ಶನ ಮಳಿಗೆಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣ ಮೂಲಕ ನೇರಾ ಮಾರಾಟ ಮಾಡುತ್ತಾರೆ. ಸಂಜೀವಿನಿ ಸ್ವಸಹಾಯ ಸಂಘವು ಇವರಿಗೆ ಮಾರುಕಟ್ಟೆ ವ್ಯವಸ್ಥೆಗೆ ಸಹಕರಿಸಿದರೆ ಹೊಸಂಗಡಿ ಗ್ರಾಮ ಪಂಚಾಯತ್, ಸ್ತ್ರೀ ಶಕ್ತಿ ಸಂಘದ ಸದಸ್ಯರು ಪ್ರೋತ್ಸಾಹಿಸಿದ್ದಾರೆ. ಇವರ ಪುತ್ರರಾದ ರಿತೇಶ್ ಮತ್ತು ನಿತೀಶ್ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದು ಇವರ ಸಹಕಾರವೂ ರೋಹಿಣಿಯವರ ಸಾಧನೆಗೆ ಸಹಾಯಕವಾಗಿದೆ. ಸಿರಿಧಾನ್ಯದ ಬೇರೆ ಬೇರೆ ಆಹಾರ ಪದಾರ್ಥಗಳನ್ನು ತಯಾರಿಸುವ ಉದ್ದೇಶವನ್ನು ಹೊಂದಿದ್ದಾರೆ.

ಕೃಷಿಕರು ಬೆಳೆಯುವ ಆಹಾರ ಧಾನ್ಯಗಳನ್ನು ಬಳಸಿಕೊಂಡು ಹಳ್ಳಿಗಳಲ್ಲಿ ಇಂತಹ ಗೃಹ ಉದ್ಯಮಗಳು ಹುಟ್ಟಿಕೊಂಡರೆ ಗ್ರಾಮೀಣ ಭಾಗದಲ್ಲಿ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ.  ಮಾಹಿತಿಗೆ :9972590208

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group