spot_img
Wednesday, December 18, 2024
spot_imgspot_img
spot_img
spot_img

ಇಲ್ಲಿದೆ ಸುಂದರವಾದ ಕೃತಕ ಕಾಡು, ಕುಬ್ಜ ಮರಗಳ ಹಸಿರು ಲೋಕ: ಬೊನ್ಸಾಯ್ ಅನ್ನೋ ಜೀವಂತ ಕಲೆ

ಪ್ರಾಕೃತಿಕವಾಗಿ ಬೃಹತ್ ಗಾತ್ರದಲ್ಲಿ ಬೆಳೆಯುವ ಮರಗಳು ವಿಸ್ತಾರವಾಗಿ ಕೊಂಬೆರೆಂಬೆಗಳನ್ನು ಚಾಚಿಕೊಂಡಿರುತ್ತವೆ. ಅಂತಹ ದೊಡ್ಡ ದೊಡ್ಡ ಎರಡು ಕೈಗಳಿಂದ ತಬ್ಬಿಕೊಳ್ಳಲಾರದಂತ ಮರಗಳು ಇಲ್ಲಿ ಕುಬ್ಜವಾಗಿವೆ. ಈ ಮರಗಳನ್ನು ಒಂದೆಡೆಯಿAದ ಇನ್ನೊಂದೆಡೆಗೆ ಬರಿ ಕೈಗಳಿಂದ ಹಿಡಿದು ಸುಲಭವಾಗಿ ಸಾಗಿಸಬಹುದಾಗಿದೆ. ಇಲ್ಲಿರುವುದು ಸುಂದರವಾದ ಕೃತಕ ಕಾಡು, ಕುಬ್ಜ ಮರಗಳ ಹಸಿರು ಲೋಕ

ನಿರ್ಜೀವ ಕಲ್ಲು, ಕಟ್ಟಿಗೆ ಕಲಾವಿದನ ಕೈಚಳಕದಿಂದ ಕಲಾತ್ಮಕವಾಗಿ ರೂಪು ಪಡೆಯಬಹುದು. ಅದಕ್ಕೆ ಜೀವಂತಿಕೆ ತುಂಬಲಾಗದು. ಆದರೆ ಬೊನ್ಸಾಯ್ ಎಂಬುದು ಜೀವಂತ ಕಲೆ. ಜಪಾನಿ ತಂತ್ರಜ್ಞಾನ. ಮರಗಳನ್ನು ವಿವಿಧ ಆಕಾರಗಳಲ್ಲಿ ಕುಬ್ಜವಾಗಿ ಬೆಳೆಸಬಹುದು. ತುಂಬಾ ತಾಳ್ಮೆ ಮತ್ತು ಅಷ್ಟೇ ಆಸಕ್ತಿವಹಿಸಿದರೆ ಈ ಜೀವಂತ ಕಲೆ ಕರಗತ ಎನ್ನುತ್ತಾರೆ ಹನುಮಂತ ಪ್ರಕಾಶ ರಾವಳ

ಬಾಗಲಕೋಟ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಮಹಾಲಿಂಗಪುರದ ಹನುಮಂತ ಪ್ರಕಾಶ ರಾವಳ ಅವರು ವಿವಿಧ ಜಾತಿಯ ಗಿಡಗಳನ್ನು ಕುಬ್ಜವಾಗಿಸಿ ಮನೆಯ ಸುತ್ತಮುತ್ತ ಬೆಳೆಸಿದ್ದಾರೆ. ಹಸಿರವನ ತಮ್ಮ ಮನೆ ಪರಿಸರದಲ್ಲಿ ಸೃಷ್ಟಿಸಿದ್ದಾರೆ. ಗುಡ್ಡ ಬೆಟ್ಟಗಳಲ್ಲಿ ಎಷ್ಟೋ ಜಾಗಗಳನ್ನು ಆಕ್ರಮಿಸಿಕೊಂಡು ಬೆಳೆಯಬಹುದಾಗಿದ್ದ ಮರ ಗಿಡಗಳು ಅವರ ಮನೆ ನಿವೇಶನಗಳಲ್ಲಿ ಕುಬ್ಜವಾಗಿ ಆಶ್ರಯ ಪಡೆದುಕೊಂಡಿವೆ.

ಮಹಾಲಿಂಗಪುರದ ಹನುಮಂತ ಪ್ರಕಾಶ ರಾವಳರವರು ಸಿವಿಲ್ ಇಂಜಿನಿಯರ್. ಮನೆ ಕಟ್ಟಡಗಳ ನಿರ್ಮಾಣದಲ್ಲಿ ನಿರತರು. ಅವರಿಗೆ ಬೊನ್ಸಾಯಿಯ ಕಡೆಗೆ ಆಸಕ್ತಿ ಮೂಡಿರುವುದು ವಿಶೇಷ. ಕೃಷಿಕ ಕುಟುಂಬದ ಹಿನ್ನಲೆ ಅದಕ್ಕೆ ಪೂರಕ, ಪ್ರೇರಕವಾಯಿತು. ಹವ್ಯಾಸಕ್ಕಾಗಿ ಆರಂಭಿಸಿದ ಬೊನ್ಸಾಯಿ ಕೃಷಿ ಈಗ ಇಡೀ ಮನೆ, ನಿವೇಶನ ಪರಿಸರವನ್ನು ಆವರಿಸಿಬಿಟ್ಟಿದೆ. ಅವರಲ್ಲಿದ್ದ ಏಳು ನಿವೇಶನಗಳಲ್ಲಿ ಒಂದರಲ್ಲಿ ಮನೆ ಇದ್ದರೆ ಉಳಿದ ಆರು ನಿವೇಶನಗಳಲ್ಲಿ ಬೊನ್ಸಾಯಿ ಕಾಡು ಬೆಳೆದಿದೆ. ಎಕರೆಗಟ್ಟಲೆ ಪ್ರದೇಶವನ್ನು ಆವರಿಸಿಕೊಳ್ಳಬಹುದಾದ ಮರಗಿಡಗಳು ಇವರ ನಿವೇಶನಗಳಲ್ಲಿ ಕುಳಿತು ಬಿಟ್ಟಿವೆ.

2010 ರಿಂದ ಆರಂಭಿಸಿದಾಗ ಸುತ್ತಮುತ್ತಲಿನ ಪರಿಸರದ ಜನರಲ್ಲಿ ಇದೇನು ಎಂಬ ಕುತೂಹಲದ ಜೊತೆಗೆ ಇದೆಂಥ ಕೃಷಿ ಎಂಬ ಕುತೂಹಲದ ಮನೋಭಾವನೆಯಿತ್ತು. ಬರಬರುತ್ತಾ ಬೊನ್ಸಾಯಿಯ ಅರಿವು ಮೂಡುತ್ತಿದ್ದಂತೆ ಈಗ ತಮ್ಮ ತಮ್ಮ ಮನೆ ಮುಂದೆಯೂ ಒಂದೆರಡು ಅಲಂಕಾರಿಕ ಗಿಡವಿರಲಿ ಎಂಬ ಭಾವನೆ ಬಹತೇಕರಲ್ಲಿ ಮೂಡಿದೆ.

ಮಾನವಾಕೃತಿಯಂತೆ ಕಾಣುವ, ಪ್ರಾಣಿಗಳನ್ನು ಹೋಲುವ, ನವಿಲಿನಂತೆ ಆಕರ್ಷಿಸುವ, ಹಲವು ಮರಗಳನ್ನು ಕಣ್ತುಂಬಿಕೊಳ್ಳಬಹುದು. ಆಲ ಅಡೆನಿಯಮ ಅರಳಿ, ಬಸುರಿ, ಬೆಳವಲ್ಲ ದೇವ ಕಣಗಿಲೆ, ಹುಣಸೆ, ಬೇವು, ಗುಲ್‌ಮೊಹರ್, ಕಾಗದ ಹೂ, ಆ್ಯಪಲ್ ಚರ‍್ರಿ, ಕ್ಯಾಕ್ಟಸ್, ಸೆಕ್ಯೂಲೆಂಟ್ ಮತು ಔಷಧೀಯ ಗಿಡಮರಗಳು ಕುಬ್ಜವಾಗಿ ಬೆಳೆದು ನಿಂತಿವೆ.

16 ವರ್ಷದ ಆಲದ ಮರ ಬೆಳೆದು ನಿಂತಿರುವುದು ಒಂದೆಡೆಯಿಂದ ಇನ್ನೊಂದೆಡೆ ಕೈಯಲ್ಲಿ ಹಿಡಿದು ಸಾಗಿಸುವಷ್ಟು ಮಾತ್ರ . ಸುಮಾರು 30-40  ಜಾತಿಯ 3೦೦ಕ್ಕೂ ಹೆಚ್ಚು ಮರಗಳಿವೆ. ಅವುಗಳಲ್ಲಿ ಫಲ ಬಿಡುವ ಹಣ್ಣಿನ ಮರಗಳಿವೆ. ಹೂ ಬಿಡುವ ಗಿಡಗಳಿವೆ. ಔಷಧೀಯ ಸಸ್ಯಗಳಿವೆ. ೫೦ರೂಪಾಯಿಂದ 25,೦೦೦ ರೂ ವರೆಗೆ ಮೌಲ್ಯವುಳ್ಳ ಕುಬ್ಜ ಮರ ಗಿಡಗಳಿವೆ.

ಮಣ್ಣಿನ ಕುಂಡ, ಸೆರಾಮಿಕ್ ಹಾಗೂ ಪ್ಲಾಸ್ಟಿಕ್ ಕುಂಡಗಳಲ್ಲಿ ಬೊನ್ಸಾಯಿ ಗಿಡಗಳನ್ನು ಬೆಳೆಸುತ್ತಾರೆ. ಸಮಯ ಸರಿಯಾಗಿ ಸವರಬೇಕು. ವರ್ಷ ವರ್ಷ ಕುಂಡಗಳನ್ನು ಬದಲಾಯಿಸಿ ಬೇಕಾದಷ್ಟು ಪ್ರಮಾಣ ಮಣ್ಣು ಗೊಬ್ಬರ ನೀಡಬೇಕು. ಗಿಡಗಳನ್ನು ಅನುಕೂಲಕ್ಕೆ ತಕ್ಕಂತೆ ಬಗ್ಗಿಸಿ ಸರಿಯಾದ ಆಕಾರ ನೀಡಬೇಕು. ನಗರ ಪ್ರದೇಶದಲ್ಲಿರುವವರು, ಮನೆಯ ಬಳಿ ಹೆಚ್ಚು ಜಾಗವಿಲ್ಲದವರು ಬೊನ್ಸಾಯಿ ಗಿಡಗಳನ್ನು ಅಲಂಕಾರಿಕವಾಗಿ ಬೆಳೆಸಬಹುದಾಗಿದೆ. ನಗರ ಪ್ರದೇಶದಲ್ಲಿ ಇವುಗಳಿಗೆ ಬೇಡಿಕೆಯಿದ್ದು ಇದನ್ನು ಹವ್ಯಾಸಕ್ಕೂ ಬೆಳೆಸಿಕೊಳ್ಳಬಹುದು ಎನ್ನುತ್ತಾರೆ ಹನುಮಂತ ಪ್ರಕಾಶ ರಾವಳ. ತಾರಸಿ ತೋಟವನ್ನು ನಿರ್ಮಿಸಿಕೊಂಡಿರುವ ಇವರದು ಒಂದು ರೀತಿಯ ಹವ್ಯಾಸ. ಅದರಲ್ಲಿ ತೃಪ್ತಿ

ಬೆಳಗಾವಿ ಫಲಪುಷ್ಪ ಪ್ರದರ್ಶನದಲ್ಲಿ ಬೊನ್ಸಾಯಿ ಕೃಷಿಯಲ್ಲಿ ಎರಡು ಬಾರಿ ಸತತವಾಗಿ ಪ್ರಥಮ ಬಹುಮಾನ ಗಳಿಸಿದ ಹೆಗ್ಗಳಿಕೆ ಅವರದು. ಆಂದ್ರಪ್ರದೇಶದ ಡಾ| ವೈಎಸ್ಆರ್ ಹಾರ್ಟಿಕಲ್ಚರ್ ವಿವಿಯ ಉಪಕುಲಪತಿ ಡಾ| ಟಿ. ಜಾನಕಿ ರಾಮ್ ಅವರು ಇವರ ಬೊನ್ಸಾಯಿ ತೋಟಕ್ಕೆ ಭೇಟಿಯಿತ್ತು ಮೆಚ್ಚುಗೆ ನುಡಿಯಾಡಿ ಪ್ರೋತ್ಸಾಹಿದ್ದಾರೆ. ಬಾಗಲಕೋಟೆ ತೋಟಗಾರಿಕೆಯವರು, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಇವರಲ್ಲಿಗೆ ಭೇಟಿ ನೀಡಿ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದಾರೆ. ಬೊನ್ಸಾಯಿ ಮರಗಳನ್ನು ಹೊಸಮನೆ ನಿರ್ಮಿಸಲಿರುವವರು ಹಾಗೂ ಇತರರು ಮನೆಗೆ ಬಂದು ಕೊಂಡು ಹೋಗುತ್ತಾರೆ. ಸ್ವಯಂ ಉದ್ಯೋಗವಾಗಿಯೂ ಇದನ್ನು ಬೆಳೆಸಬಹುದು ಮಾಹಿತಿಗೆ ಮೊ.9538338838

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group