-ರಾಧಾಕೃಷ್ಣ ತೊಡಿಕಾನ
ಸುತ್ತಮುತ್ತ ಯಾರೂ ಇಲ್ಲ. ಹೊಲದಲ್ಲಿ ಯಂತ್ರವೊಂದು ಚಲಿಸುತ್ತಿರುತ್ತದೆ. ಯಾರೋ ಯಂತ್ರ ಚಾಲನೆಯಲ್ಲಿಟ್ಟು ಹೋಗಿರಬೇಕೆಂಬ ಅನುಮಾನ ಬರಬಹುದು. ಆ ಯಂತ್ರವನ್ನು ಚಾಲನೆ ಮಾಡುವವರು ಅಲ್ಲಿಲ್ಲ. ಪೆಟ್ಟಿಗೆಯಂತೆ ಕಾಣುವ ಯಂತ್ರ ಬ್ಯಾಟರಿ ಚಾಲಿತ. ದೂರದಲ್ಲೆಲ್ಲೋ ಕುಳಿತು ರಿಮೋಟಿನಿಂದಲೇ ನಿರ್ವಹಿಸಬಲ್ಲ ಯಂತ್ರವಿದು.
ಬೆಂಗಳೂರಿನ ಜಿಕೆವಿಕೆಯಲ್ಲಿ ನಡೆದ ಕೃಷಿಮೇಳದಲ್ಲಿ ಪ್ರದರ್ಶಿಸಲಾದ ಈ ಯಂತ್ರ ನೆಲಗಡಲೆ ಬೀಜ ಬಿತ್ತನೆ ಯಂತ್ರ. ಈ ಯಂತ್ರದಲ್ಲಿ ಅನುಕೂಲಕ್ಕೆ ತಕ್ಕಂತೆ ಅಂತರವಿರಿಸಿ ನೆಲಗಡಲೆ ಬೀಜ ಬಿತ್ತನೆ ಮಾಡಬಹುದು . ಅದಕ್ಕೆ ಬೇಕಾದ ಪ್ರಮಾಣದಲ್ಲಿ ಗೊಬ್ಬರ ಏಕಕಾಲದಲ್ಲಿ ನೀಡಬಹುದು. ಟರ‍್ರಾ ಕ್ರೊಫ್ಟ್ ಸಂಸ್ಥೆಯ ತಂತ್ರಜ್ಞರ ತಂಡವು ಈ ಯಂತ್ರವನ್ನು ಅವಿಷ್ಕರಿಸಿ ” ಕೃಷಿಬೋಟ್ “ಎಂಬ ಹೆಸರಿನಲ್ಲಿ ಕೃಷಿಕ್ಷೇತ್ರಕ್ಕೆ ಪರಿಚಯಿಸಿದೆ.
ನೆಲಗಡಲೆ ಬೀಜ ಬಿತ್ತನೆಯ ಈ ಯಂತ್ರವು ಡಿಜಿಟಲ್ ಕೃಷಿ ಮಾದರಿ ಯಂತ್ರವಾಗಿದೆ. ಬ್ಯಾಟರಿ ಚಾಲಿತವಾದ ಈ ಯಂತ್ರ ಐಒಟಿ ಆಧಾರಿತ ಸ್ವಯಂ ನಿಯಂತ್ರಣ ವ್ಯವಸ್ಥೆ ಹೊಂದಿದೆ. ಇಲ್ಲಿ ಕೃಷಿ ಕೂಲಿ ಕಾರ್ಮಿಕರನ್ನು ನೆಚ್ಚಿಕೊಳ್ಳುವ ಅವಶ್ಯಕತೆಯಿಲ್ಲ. ರೈತರು ಹೊಲದ ಯಾವುದೋ ಮೂಲೆಯಲ್ಲಿ ಆರಾಮವಾಗಿ ಕುಳಿತು ರಿಮೋಟ್ ಸಹಾಯದಿಂದ ಈ ಯಂತ್ರವನ್ನು ನಿಯಂತ್ರಿಸಬಹುದು. ಚಲಾಯಿಸಬಹುದು.
ಎಲ್ಲವೂ ಸ್ವಯಂ ಚಾಲಿತ.. ಯಾವ ಮೂಲೆಗೂ ಯಾವ ಕೋನಗಳಿಗೂ ಅನುಕೂಲಕ್ಕೆ ತಕ್ಕಂತೆ ಇದರ ಪಥವನ್ನು ಬದಲಾಯಿಸಿಕೊಳ್ಳಬಹುದು. ನಾಲ್ಕು ಚಕ್ರಗಳನ್ನು ಹೊಂದಿರುವ 18 ಅಶ್ವಶಕ್ತಿ ಸಾಮರ್ಥ್ಯವಿರುವ ಈ “ಕೃಷಿಬೋಟ್” ನಾಲ್ಕು ಬ್ಯಾಟರಿಗಳನ್ನು ಹೊಂದಿದೆ. ಸುಮಾರು 750 ಕೆಜಿ ತೂಕದ 2೦೦ ಕೆಜಿ ಬಿತ್ತನೆ ಬೀಜ ಮತ್ತು ಗೊಬ್ಬರ ಹೊರುವ ಸಾಮರ್ಥ್ಯದ ಈ ಯಂತ್ರದ ಒಳಗೆ ಎರಡು ವಿಭಾಗಗಳಿವೆ. ಒಂದು ಬದಿಯಲ್ಲಿ ನೆಲಗಡಲೆ ಬಿತ್ತನೆ ಬೀಜ ಮತ್ತೊಂದು ಬದಿಯಲ್ಲಿ ಗೊಬ್ಬರ ಹಾಕಬಹುದು. ಕೈಯಲ್ಲಿ ಬಿತ್ತನೆ ಮಾಡುವ ಸಂದರ್ಭದಲ್ಲಿ ಒಂದೇ ಸಮಾನಾಂತರದಲ್ಲಿ ಬಿತ್ತನೆ ಮಾಡಲು ಸಾಧ್ಯವಾಗದು. ಬೀಜದ ಮೊಳಕೆ ಒಡೆಯುವ ಸಾಮರ್ಥ್ಯಗಳು ಹೆಚ್ಚು ಕಡಿಮೆಯಾಗಿರುತ್ತದೆ. ಆದರೆ ಈ ಯಂತ್ರದಲ್ಲಿ ಹಾಗಲ.್ಲ ಏಕ ರೀತಿಯಲ್ಲಿ ಕರಾರುವಕ್ಕಾಗಿ ಒಂದೇ ಅಂತರದಲ್ಲಿ ಬಿತ್ತನೆ ಮಾಡಬಹುದು, ಗೊಬ್ಬರವನ್ನು ಹರಡಬಹುದು. ಪ್ರತಿ ಎರಡು ಬೀಜದ ನಡುವೆ ನಿಯಂತ್ರಿತ ರಸಗೊಬ್ಬರ ಹಾಕಬಹುದು.
ಈ ಯಂತ್ರವು ಬದಲಾಯಿಸಬಹುದಾದ ನಾಲ್ಕು ಬ್ಯಾಟರಿಯನ್ನು ಹೊಂದಿದ್ದು ಸತತ ಆರು ಗಂಟೆಗಳ ಕಾಲ ಚಾಲನೆಯಲ್ಲಿರಿಸಿ ಬೀಜ ಬಿತ್ತನೆ ಮಾಡಬಹುದು. ಈ ಯಂತ್ರದ ಬಳಕೆಯಿಂದ ಶೇ.3೦ರವರೆಗೆ ವೆಚ್ಚ ಕಡಿಮೆ ಮಾಡಿಕೊಳ್ಳಬಹುದು. ಕೂಲಿ ಕಾರ್ಮಿಕರ ಸಮಸ್ಯೆ ನಿವಾರಿಸಿಕೊಳ್ಳಬಹುದು. ಶೇ. 25-3೦ರಷ್ಟು ಬೀಜದ ಉಳಿತಾಯ ಮಾಡಬಹುದು. ಭೂಮಿಯನ್ನು ಸಮರ್ಪಕವಾಗಿ ಬಳಸಿಕೊಳ್ಳಬಹುದು, ಬ್ಯಾಟರಿ ಬಾಳಿಕೆಯ ಮಾಹಿತಿ ನೀಡುವುದಲ್ಲದೆ ಯಂತ್ರದಲ್ಲಿ ವೈಫಲ್ಯವಾದರೆ ಸ್ವಯಂ ಆಗಿ ಪತ್ತೆ ಹಚ್ಚುತ್ತದೆ.. ಭವಿಷ್ಯದ ತಂತ್ರಜ್ಞಾನ ಇದಾಗಿದೆ. ಈಗ ನೆಲಗಡಲೆ ಬೀಜ ಬಿತ್ತನೆಗೆ ಅನುಕೂಲವಾಗುವಂತೆ ಸಿದ್ಧಪಡಿಸಲಾಗಿದೆ. ಇದನ್ನೇ ಮತ್ತಷ್ಟೂ ಸಾಧ್ಯತೆಗಳತ್ತ ತೆರೆದುಕೊಳ್ಳುವಂತೆ ಮಾಡಿದರೆ ಮುಂದಿನ ದಿನಗಳಲ್ಲಿ ಎಲ್ಲಾ ಕೃಷಿ ಬಿತ್ತನೆ ಬೀಜಗಳನ್ನು ಈ ಯಂತ್ರದ ಸಹಾಯದಿಂದಲೇ ಬಿತ್ತುವುದಕ್ಕೆ ಸಾಧ್ಯವಾಗಬಹುದು. ಕೃಷಿಯ ಖರ್ಚು ವೆಚ್ಚಗಳನ್ನು ಇನ್ನಷ್ಟು ಕಡಿಮೆ ಮಾಡಿಕೊಳ್ಳಲು ಸಹಕಾರಿಯಾದೀತು.
ಭವಿಷ್ಯದ ತಂತ್ರಜ್ಞಾನವೆಂದೆ ಬಿಂಬಿತವಾಗಿರುವ “ಕೃಷಿ ಬೋಟ್” ಕೃಷಿಕರ ಗಮನ ಸೆಳೆದಿದೆ. ಈಗ ಈ ಯಂತ್ರದ ಬೆಲೆ ಮೂರುವರೆ ಲಕ್ಷರೂಪಾಯಿ. ಈ ಯಂತ್ರದಿಂದ ರೈತರು ತಮ್ಮ ಹೊಲದಲ್ಲಿ ಬಿತ್ತನೆ ಮಾಡಿಕೊಳ್ಳುವುದಲ್ಲದೆ ಇತರ ಹೊಲಗದ್ದೆಗಳಿಗೆ ಬಿತ್ತನೆ ಮಾಡಲು ಬಾಡಿಗೆಗೂ ನೀಡಬಹುದು. ಇದರಿಂದ ಆದಾಯವೂ ಬರುವುದಲ್ಲದೆ ಇತರ ರೈತರಿಗೂ ಅನುಕೂಲವಾಗಬಹುದು. ಮುಂದಿನ ದಿನಗಳಲ್ಲಿ ಇತರ ಬಿತ್ತನೆ ಬೀಜಗಳಿಗೂ ಪೂರಕವಾಗಿ ಇನ್ನಷ್ಟು ಸುಧಾರಿತ ಯಂತ್ರವನ್ನು ತಯಾರಿಸಲಾಗುವುದು .ಎಂದು ಕೃಷಿಬೋಟ್ ಅವಿಷ್ಕರಿಸಿದ ತಂತ್ರಜ್ಞ ರು ದೃಢವಿಶ್ವಾಸದಿಂದ ಹೇಳುತ್ತಾರೆ.
ಮಾಹಿತಿಗೆ ಮೊಬೈಲ್. 8056865012