spot_img
Monday, November 25, 2024
spot_imgspot_img
spot_img
spot_img

ಕತ್ತೆಗೊಂದು ಕಾಲ! ಉದ್ಯಮ ರೂಪ ಪಡೆದ ಕತ್ತೆ ಸಾಕಾಣೆ: ಹಾಲು ಹಾಗೂ ಉಪ ಉತ್ಪನ್ನಗಳಿಗೆ ಕುದುರಿತು ಬೇಡಿಕೆ

-ರಾಧಾಕೃಷ್ಣ ತೊಡಿಕಾನ

“ಏ ಕತ್ತೆ…” ಸಲುಗೆಯ ನುಡಿ ಮತ್ತು ಬೈಗುಳ ಕೇಳಿಸಿಕೊಂಡಿರಬಹುದು. ಚಿಕ್ಕಂದಿನಲ್ಲಿ ಕೆಲವರಾದರೂ ಕತ್ತೆಯೆಂದು ಹೇಳಿಸಿಕೊಂಡಿರಬಹುದು. “ಕತ್ತೆಗೇನು ಗೊತ್ತು ಕಸ್ತೂರಿ ಪರಿಮಳ” ಎಂದು ಅದರ ಬುದ್ಧಿಮತ್ತೆಯನ್ನು  ಹೀಗೆಳೆವ,  “ಕತ್ತೆ ದುಡ್ದಂಗೆ ದುಡೀತಾನೆ” ಅದರ ಶ್ರಮಿಕ ಗುಣವನ್ನು ಪ್ರತಿಪಾದಿಸುವ,  “ಸಂತೆಗೆ ಹೋದನು ಭೀಮಣ್ಣ ಹಿಂಡಿಯ ಕೊಂಡನು ಹತ್ತು ಮಣ, ಕತ್ತೆಯ ಬೆನ್ನಿಗೆ ಹೇರಿಸಿದ ಕುದುರೆಯ ಜತೆಯಲಿ ಸಾಗಿಸಿದ…..”ಹೀಗೆ ಕತ್ತೆಯ ಉದಾಹರಣೆಗಳು ಹಲವು. ಕತ್ತೆಯನ್ನೇ ಪ್ರತಿಭಟನೆಗೆ  ಮುಂದಿರಿಸಿ ಗೇಲಿ ಮಾಡುವ ಪ್ರಸಂಗಗಳು ಇಲ್ಲದಿಲ್ಲ.

ಕಠಿಣ ಪರಿಸ್ಥಿತಿಯನ್ನೂ ಎದುರಿಸಿ ಬದುಕಬಲ್ಲ ತಾಕತ್ತು ಹೊಂದಿರುವ ಕತ್ತೆಗಳು  ಕೃಷಿ ಮತ್ತು ಸರಕು ಸಾಗಾಟದ ವಲಯದಿಂದ ಹಿಂದೆ ಸರಿಯುತ್ತಾ ಬಂದ ಮೇಲೆ ನಿರ್ಲಕ್ಷö್ಯಕ್ಕೆ ಒಳಗಾದವು. ಅಲ್ಲದೆ ಅವುಗಳ ಸಂತತಿಯೂ ನಶಿಸಲಾರಂಭಿಸಿತ್ತು. ಆದರೆ ಈಗ “ಕತ್ತೆಗೂಂದು ಕಾಲ” ಬಂದಿದೆ. ಕತ್ತೆಯ ಬದುಕೇ ಕತ್ತಲಾದ ಹೊತ್ತಿಗೆ ಅದರ ಮಹತ್ವ ಮತ್ತು ಮೌಲ್ಯದ ಅರಿವಾಗಿದೆ. ಅದರ ಬದುಕಿನಲ್ಲಿ ಹೊಸ ಬೆಳಕು ಕಾಣಿಸಲಾರಂಭಿಸಿದೆ.

ದನ ಸಾಕಾಣೆಯಿಂದ ಹೈನೋದ್ಯಮಕ್ಕೆ ಬೆಲೆ ಬಂದಂತೆ ಕತ್ತೆ ಸಾಕಾಣೆಯೂ ಕೆಲವು ಕಡೆಗಳಲ್ಲಿ ಸ್ವ ಉದ್ಯೋಗ ಹಾಗೂ ಉದ್ಯಮವಾಗಿ ರೂಪುಗೊಳ್ಳುತ್ತಿದೆ.  ತನ್ನ ಉನ್ನತ ಉದ್ಯೋಗವನ್ನು ಬಿಟ್ಟು ಕತ್ತೆ ಸಾಕಾಣೆಯನ್ನೇ ಹವ್ಯಾಸ ಮತ್ತು ವೃತ್ತಿಯನ್ನಾಗಿಸಿಕೊಂಡವರಲ್ಲಿ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ವೆಂಕಟಾಪುರದ ಡಾ| ರಂಗೇಗೌಡ.ಆರ್ ಪ್ರಮುಖರು. ಕತ್ತೆಯ ಮೇಲಿನ ಮೌಢ್ಯವನ್ನು ಬದಿಗೆ ಸರಿಸಿ ಕತ್ತೆಗೂ ಮೌಲ್ಯ ಮತ್ತು ಮಹತ್ವವಿರುವುದನ್ನು ಸಾರ ಹೊರಟವರು.

ಡಾ| ರಂಗೇಗೌಡ ಆರ್ ಅವರು ಹಲವು ಪದವಿಗಳ ಸರದಾರ. ಬಿಎಸ್ಸಿ ಅಗ್ರಿ ಪದವಿ ಪಡೆದ ನಂತರ ಧಾರವಾಡ ಕೃಷಿ ವಿವಿಯಲ್ಲಿ ಎಂಸ್ಸಿ ಅಗ್ರಿ ಎಕನಾಮಿಕ್ಸ್ ಸ್ನಾತಕೋತ್ತರ ಪದವಿ, ಆನಂತರ ಡಾಕ್ಟರೇಟ್ ಪದವಿ ಪಡೆದರು. ಈ ಸಂದರ್ಭದಲ್ಲಿ ನಾಲ್ಕು ಚಿನ್ನದ ಪದಕಗಳನ್ನು ಪಡೆದ ಹೆಗ್ಗಳಿಕೆ ಅವರದು. ಬೆಂಗಳೂರಿನ ಡೈರಿ ಸೈನ್ಸ್ ಕಾಲೇಜಿನಲ್ಲಿ ಸಹಾಯಕ ಸಂಯೋಜಕರಾಗಿ ಒಂದು ವರ್ಷ  ಕಾರ್ಯನಿರ್ವಹಣೆ ಮಾಡಿದ್ದು ಬೆಂಗಳೂರಿನ ಖಾಸಗಿ  ವಿವಿ ಪ್ರೆಸಿಡೆನ್ಸಿ ಬಿಜಿನೆಸ್ ಸ್ಕೂಲಿನಲ್ಲಿ ಕಾರ್ಯನಿರ್ವಹಿಸಿದ್ದಾರೆ. ಎಂಬಿಎ ವಿದ್ಯಾರ್ಥಿಗಳಿಗೆ ವ್ಯವಹಾರಿಕ ಜ್ಞಾನದ ಕುರಿತು ಮಾಹಿತಿ, ಕೃಷಿ ವ್ಯವಹಾರಕ್ಕೆ  ಸಂಬಂಧಿಸಿದಂತೆ ಪುಸ್ತಕದ ಹೊರತಾದ ಪ್ರಾಯೋಗಿಕ ಜ್ಞಾನ ನೀಡುತ್ತಾ ಬಂದವರು.

ಇವರ ತಂದೆ ರಂಗನಾಥ ಎಸ್.ಎನ್. ಭೂಗರ್ಭ ಶಾಸ್ತçಜ್ಞರು. ಇವರು ದೇಶದಾದ್ಯಂತ ೫೦೦೦ಕ್ಕೂ ಹೆಚ್ಚು ಜಲಮೂಲ ಕೇಂದ್ರಗಳನ್ನು ಗುರುತಿಸಿದ್ದಾರೆ.  ಅದೆಲ್ಲವೂ ನಿಖರವಾಗಿ ಶೇಕಡ ನೂರರಷ್ಟು ಯಶಸ್ವಿಯಾಗಿದೆ. ದಕ್ಷಿಣ ಆಫ್ರಿಕಾ ಹಾಗೂ ಇತರ ದೇಶಗಳಲ್ಲಿ ಸುತ್ತಾಡಿ ಗಣಿಗಾರಿಕೆ ಸಾಧ್ಯತೆಗಳನ್ನು ಪತ್ತೆಹಚ್ಚಿದ್ದಾರೆ, ಹೊರದೇಶಗಳಲ್ಲಿ ಮೈನಿಂಗ್ ಸ್ಪೆಷಲಿಸ್ಟ್ ಆಗಿಯೂ ಕಾರ್ಯನಿರ್ವಹಿಸಿದ್ದರು.

“ಎಲ್ಲಾ ಬಿಟ್ಟ ಭಂಗಿ ನೆಟ್ಟ” ಎಂಬ ಗಾದೆ ಜನಜನಿತವಾದುದು. ಸಾಲು ಸಾಲು ಪದವಿಗಳನ್ನು ಪಡೆದುಕೊಂಡ ರಂಗೇಗೌಡರು ಉನ್ನತ ಹುದ್ದೆಯಲ್ಲಿ ಆರಾಮವಾಗಿರಬಹುದಿತ್ತು.  ಉತ್ತಮ ಸಂಪಾದನೆಯೂ ಇರುತ್ತಿತ್ತು. ಆದರೆ ಅವರು ಅದೆಲ್ಲವನ್ನು ಬಿಟ್ಟು ಕತ್ತೆ ಸಾಕಲು ಹೊರಟರು. ಊರವರಿಗೂ ಇದೇನು ಹುಚ್ಚಾಟ ಅನ್ನಿಸಿತ್ತು.

ಆದರೂ ಅವರ ನಿರ್ಧಾರ ಬದಲಾಗಲಿಲ್ಲ. ಕತ್ತೆಯ ಮೇಲಿನ ವ್ಯಾಮೋಹ ಹೆಚ್ಚಾಯಿತು. ಕತ್ತೆ ಸಂತತಿ, ಜೀವನ ಚಕ್ರಗಳ ಅಧ್ಯಯನಕ್ಕಾಗಿ ಊರೂರು ಅಲೆದರು. ಕತ್ತೆ ಕುತೂಹಲ ಹಾಗೂ ಅಧ್ಯಯನಶೀಲತೆ ಅವರನ್ನು ಬೆರಗುಗೊಳಿಸಿತು.  ಈ ಸಂದರ್ಭಗಳಲ್ಲಿ ಹರಿಯಾಣದಲ್ಲಿರುವ ಕತ್ತೆ ಕುದುರೆ ಸಂಶೋಧನಾ ಕೇಂದ್ರದ ಹಿರಿಯ ವಿಜ್ಞಾನಿ ಡಾಕ್ಟರ್ ಅನುರಾಧ ಭಾರದ್ವಾಜ್ ಮತ್ತು ತಜ್ಞರಾದ ರಾಯಚೂರಿನ ಜಗಜೀವನ್ ರಾಮ್ ಅವರಿಂದ  ಮಾರ್ಗದರ್ಶನ ಮಾಹಿತಿಯನ್ನು ಪಡೆದರು.

ಅಂಕಿ ಅಂಶಗಳ ಪ್ರಕಾರ 1992 ರಲ್ಲಿ ಭಾರತದಲ್ಲಿ ಅಂದಾಜು 9 ಲಕ್ಷ ಕತ್ತೆಗಳಿದ್ದವು.  2019 ರ ಸರ್ವೆಯಲ್ಲಿ ಅವುಗಳ ಸಂಖ್ಯೆ 1.24 ಲಕ್ಷಕ್ಕೆ ಇಳಿದಿತ್ತು.  2024ರ ಹೊತ್ತಿಗೆ 50, ೦೦೦ಕ್ಕೆ ಕುಸಿಯಲೂ ಬಹುದು ಎನ್ನಲಾಗುತ್ತಿದೆ. ಇತ್ತೀಚೆಗೆ ಹೆಚ್ಚಿದ ಯಾಂತ್ರಿಕರಣ ದಿನನಿತ್ಯದ ಕೆಲಸಗಳಲ್ಲಿ ಕತ್ತೆಯ ಬಳಕೆ ಕಡಿಮೆಯಾಗುತ್ತಿರುವುದರಿಂದ ಸಾಕುವವರ ಸಂಖ್ಯೆಯು ವಿರಳ. ಕತ್ತೆ ಸಾಕಿದರೆ ಪ್ರಯೋಜನವಿಲ್ಲವೆಂಬ ಅಸಡ್ಡೆ. ಕತ್ತೆಯ ಮಾಂಸ ಚರ್ಮವನ್ನು ರಫ್ತು, ಗರ್ಭಾವಧಿ ದೀರ್ಘವಾಗಿರುವುದು, ಮೊದಲಾದ ಕಾರಣಗಳಿಂದ  ಸಂತತಿ ಕಡಿಮೆಯಾಗಿರಬಹುದು ಎಂಬ ಅಭಿಪ್ರಾಯಗಳಿವೆ.

ಈ ಬಗ್ಗೆ ಕುತೂಹಲ ಹೆಚ್ಚಿಸಿಕೊಂಡ ರಂಗೇಗೌಡರು ಕತ್ತೆ ಸಂತಾನ ಅಭಿವೃದ್ಧಿಗೆ ಯೋಜನೆಯನ್ನು ರೂಪಿಸತೊಡಗಿದರು. ಮಹಾರಾಷ್ಟç, ಗುಜರಾತ್, ರಾಜಸ್ಥಾನ ಮತ್ತಿತರ ಕಡೆ ಸುತ್ತಾಡಿ ಅಲ್ಲಿರುವ ಕತ್ತೆಯ ತಳಿಗಳನ್ನು ಸಂಗ್ರಹಿಸತೊಡಗಿದರು. ಅಲಾರಿ, ಕಾತ್ಯೆವಾಡಿ ಸೇರಿದಂತೆ ಚೀನಾ, ಇತಿಯೋಪಿಯಾ ಮೂಲದ ತಳಿಗಳನ್ನು ಖರೀದಿಸಿದರು.

“ಕ್ಷೀರ್‌ಸಾಗರ್ ಡೋಂಕಿ ಫಾರ್ಮ್” ಹುಟ್ಟುಹಾಕಿದರು. ಕೆಲವೇ ಕೆಲವು ಕತ್ತೆಗಳಿಂದ ಆರಂಭಿಸಿದ ಅವರ ಕತ್ತೆ ಫಾರ್ಮಿನಲ್ಲಿ ಈಗ ಹೆಣ್ಣು ಮತ್ತು ಗಂಡು ಸೇರಿದಂತೆ 120ಕ್ಕೂ ಹೆಚ್ಚು ಕತ್ತೆಗಳಿವೆ. ಕೆಲವು ತಳಿಗಳನ್ನು 30-40 ಸಾವಿರ ರೂಪಾಯಿ ನೀಡಿ ಖರೀದಿಸಿದ್ದುಂಟು.

ಕತ್ತೆಗಳೇನೋ ಹೆಚ್ಚಾದವು. ಅವುಗಳಿಗೆ ಆಹಾರವಾಗಿ ನೇಪಿಯರ್, ರೋಡ್ ಗ್ರಾಸ್, ಜೋಳದಂಟು, ರಾಗಿಹುಲ್ಲು, ಕುದುರೆಮೆಂತೆ, ಹುರುಳಿ ನೀಡುತ್ತಾರೆ. ಅಲ್ಲದೆ ಫಾರ್ಮ್ ಪರಿಸರದಲ್ಲಿ ಕತ್ತೆಗಳನ್ನು ಮೇಯಲು ಬಿಡುತ್ತಾರೆ. ಆಹಾರ ಹಾಗೂ ನಿರ್ವಹಣೆ ವೆಚ್ಚಗಳು ಹೆಚ್ಚಾದವು. ಅವುಗಳನ್ನು ಸಾಕುವ ಆದಾಯದ ಬೇರೆ ದಾರಿಗಳಿರಲಿಲ್ಲ. ರಂಗೇಗೌಡರು ಕತ್ತೆ ಸಾಕಿ ಸಾಧಿಸುವುದೇನು ಎಂಬ ಕುತೂಹಲ ಜನರಲ್ಲಿತ್ತು.

ಈಜಿಷ್ಟಿನ ರಾಣಿ ಸುರ ಸುಂದರಿ ಕ್ಲಿಯೋಪಾತ್ರ ತನ್ನ ಸೌಂದರ್ಯವರ್ಧನೆಗಾಗಿ ೭೦೦ ಕತ್ತೆ ಹಾಲನ್ನು ಸ್ನಾನಕ್ಕಾಗಿ ಬಳಸಿಕೊಳ್ಳುತ್ತಿದ್ದಳಂತೆ. ಆಯುರ್ವೇದದಲ್ಲೂ  ಕತ್ತೆ ಹಾಲನ್ನು ಔಷಧಿಯಾಗಿ ಬಳಸುತ್ತಿದ್ದರಂತೆ. ಎನ್ನುವ ರಂಗೇಗೌಡರು  ಅಂತಾರಾಷ್ಟ್ರೀಯ ಮಟ್ಟದಲ್ಲಿ ಕತ್ತೆ ಹಾಲಿಗೆ ಬೇಡಿಕೆಯಿರುವುದರಿಂದನ್ನು ಮನಗಂಡಿದ್ದರು.  ಆದರೆ ಹಸು, ಎಮ್ಮೆಯಂತೆ ಕತ್ತೆ  ಲೀಟರ್‌ಗಟ್ಟಲೆ ಹಾಲು ಕೊಡುವುದಿಲ್ಲ.  ಹಾಲಿನ ಪ್ರಮಾಣ ತೀರಾ ಕಡಿಮೆ. ಅತ್ಯಂತ ಹೆಚ್ಚು ಅಂದರೆ ಒಂದು ಲೀಟರ್. ಅದೂ ಅಲಾರಿ ತಳಿಯಲ್ಲಿ ಮಾತ್ರ.  ಉಳಿದವು ಅದಕ್ಕಿಂತಲೂ ಕಡಿಮೆ. ಅರ್ಧಲೀಟರಿಗಷ್ಟೇ ಸೀಮಿತ. ಆದರೆ ಒಂದು ಲೀಟರ್ ಕತ್ತೆ ಹಾಲಿಗೆ 2500 ರೂಪಾಯಿ ದರವಿದೆ. ಪ್ರತಿದಿನ 20-30 ಲೀಟರ್ ಹಾಲು ನೀಡುತ್ತವೆಯಾದರೂ ಮರಿಗಳ ಪೋಷಣೆಗೆ ಹೆಚ್ಚು ಬಳಕೆಯಾಗುತ್ತಿದೆ.   ಕತ್ತೆಯ ಆಯುಷ್ಯ ಸುಮಾರು 30-45 ವರ್ಷ. ಮರಿಗಳು ಎರಡುವರೆ ವರ್ಷದ ನಂತರ ಸಂತಾನೋತ್ಪತ್ತಿಗೆ ಅಣಿಯಾಗುತ್ತದೆ. ಇವುಗಳ ಗರ್ಭಾವಧಿ 11ರಿಂದ14 ತಿಂಗಳು. ಮರಿಹಾಕಿದ ಮೇಲೆ 1೦ ತಿಂಗಳು ಹಾಲು ನೀಡಬಲ್ಲವು.

ಹಾಲಿನ ಮಹತ್ವ

ಕತ್ತೆ ಹಾಲು ಯಾರು ಕುಡಿಯುತ್ತಾರೆ… ಎಂಬ ತಾತ್ಸಾರ ಬೇಡ. ಈ ಹಾಲಿಗೆ ಮೌಲ್ಯವಿದೆ.  ಅಂತಾರಾಷ್ಟಿಯ ಮಟ್ಟದಲ್ಲಂತೂ ಬೇಡಿಕೆಯಿದೆ. ರಾಜ್ಯದಲ್ಲೂ ಕುಡಿಯುವವರಿದ್ದರೆ, ಕೊಳ್ಳುವವರು ಇದ್ದಾರೆ.  ಈ ಹಾಲಿನಲ್ಲಿ  ಔಷಧಿಯ ಗುಣವಿರುವುದರಿಂದ ಚರ್ಮರೋಗಗಳಾದ ಇಸುಬು, ಗಜಕರ್ಣ, ಸೋರಿಯಾಸಿಸ್ ಮೊದಲಾವುಗಳನ್ನು ಗುಣಪಡಿಸುವ ಶಕ್ತಿಯಿದೆ. ಸಂಧಿವಾತ, ಸೊಂಟ ಮಂಡಿ ನೋವು, ಮೂಲವ್ಯಾಧಿ, ನಿಶಕ್ತಿ, ನರದೌರ್ಬಲ್ಯ ಹೀಗೆ ಹಲವು ಕಾಯಿಲೆಗಳಿಗೆ ಕತ್ತೆ ಹಾಲು ಸಂಜೀವಿನಿಯಂತೆ ಪರಿಣಾಮಕಾರಿ. ರಕ್ತಶುದ್ಧಿಯಾಗುತ್ತದೆ. ಉಸಿರಾಟದ ಸಮಸ್ಯೆ ಕಡಿಮೆಯಾಗುತ್ತದೆ. ಶೀತ, ಕೆಮ್ಮು ನೆಗಡಿ, ಜ್ವರ, ಕಫ, ಅಲರ್ಜಿ ನಿವಾರಣೆ ಸಂಶೋಧನೆಯಿಂದ ತಿಳಿದ ವಿಚಾರ. ಹಸುವಿನ ಹಾಲಿಗಿಂತ ಕಡಿಮೆ ಕೊಬ್ಬಿನಂಶ ಹೊಂದಿದೆ. ಮತ್ತು ಹೆಚ್ಚು ಪ್ರೋಟಿನ್‌ಯುಕ್ತವಾಗಿದೆ. ಮಕ್ಕಳ ಜ್ಞಾನ ಶಕ್ತಿ ವೃದ್ಧಿಗಾಗಿ ಈ ಹಾಲನ್ನು ಖರೀದಿಸುವವರಿದ್ದಾರೆ ಎಂದು ಹೇಳುತ್ತಾರೆ ರಂಗೇಗೌಡರು.

ಹಾಲಿನ ಮೌಲ್ಯವರ್ಧನೆ

ಕತ್ತೆಯಲ್ಲಿ  ಹಾಲಿನ ಪ್ರಮಾಣ ಕಡಿಮೆ ಇರುವುದರಿಂದ ಉತ್ಪಾದನೆ ಹೆಚ್ಚಿಲ್ಲ.  ಆದಾಯವು ದೊಡ್ಡ ಮಟ್ಟದ್ದಲ್ಲ. ಆದರೆ ಅದನ್ನು ಮೌಲ್ಯವರ್ಧನೆಗೊಳಿಸಿದರೆ ಆದಾಯವನ್ನು ಒಂದಿಷ್ಟು ಹೆಚ್ಚಿಸಿಕೊಳ್ಳಬಹುದು. ಕತ್ತೆ ಹಾಲನ್ನು ಉಪಯೋಗಿಸಿಕೊಂಡು  ಸ್ನಾನದ ಸಾಬೂನು ತಯಾರಿಸುತ್ತಾರೆ.  ಆರೋಗ್ಯ ಹಾಗೂ ಸೌಂದರ್ಯ ದೃಷ್ಟಿಯಿಂದ ಉತ್ತಮ. ಬೆಲೆ 250 ರೂಪಾಯಿ.  ಅನಂತರ ಸೌಂದರ್ಯವರ್ಧಕ ಕ್ರೀಮ್, ನೈಲ್ ಪಾಲಿಶ್ ಮೊದಲಾದಗಳನ್ನು ತಮ್ಮ ಡೈರಿಯಲ್ಲೇ ತಯಾರಿಸುತ್ತಾರೆ.

ಕತ್ತೆ ಗಂಜಲವೂ ಉಪಯೋಗಕ್ಕೆ ಬರುತ್ತದೆ. ಅದರಿಂದ ಕ್ರಿಮಿನಾಶಕಗಳನ್ನು ತಯಾರಿಸುತ್ತಾರೆ. ನರ್ಸರಿ ಗಿಡಗಳಲ್ಲಿ ಕಾಣುವ ರೋಗಗಳ ತಡೆಗೆ ಹಾಗೂ ಗಿಡಗಳ  ಬೆಳವಣಿಗೆಗೆ ಪೂರಕವಾಗಿ ಬಳಸಲಾಗುತ್ತಿದೆ

ಸಾವಯುವ ಗೊಬ್ಬರ

ಕತ್ತೆಯ ಸಗಣಿ ಅಥವಾ ಅದು ಹೊರ ಹಾಕುವ ತ್ಯಾಜ್ಯವನ್ನು ಬಿಸಾಡಿ ಸುಮ್ಮನಾದರೆ ಅದರಿಂದ ನಷ್ಟವೇ ವಿನಃ ಬೇರೇನೂ ಅಲ್ಲ. ಇದರ ತ್ಯಾಜ್ಯದಲ್ಲಿ ಸಾವಯವ ಗೊಬ್ಬರ ತಯಾರಿಸುತ್ತಾರೆ. ಮೈಕ್ರೊ ನ್ಯೂಟ್ರೆಂಟ್‌ಗಳು ಇದರಲ್ಲಿ ಹೆಚ್ಚಿರುವುರಿಂದ ವಾಣಿಜ್ಯ ಬೆಳೆಗಳಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ.  ಅಡಿಕೆ, ಕಾಫಿ, ತೆಂಗು, ದಾಳಿಂಬೆ, ಮಾವು, ಹೂವು ಮೊದಲಾದ ತೋಟಗಾರಿಕಾ ವಾಣಿಜ್ಯ ಬೆಳೆಗಳಿಗೆ ಅತ್ಯಂತ ಪರಿಣಾಮಕಾರಿ.  ಪರಿಸರ ಸ್ನೇಹಿ ಸಾವಯುವ ಗೊಬ್ಬರವಾಗಿದೆ. ಒಂದು ಕೆಜಿ ಗೊಬ್ಬರಕ್ಕೆ  ನೂರು ರೂಪಾಯಿ ಬೆಲೆಯಿದೆ.  ಉತ್ತಮವಾದ ಫಸಲು ಪಡೆಯಬಹುದಲ್ಲದೆ. ಇದರಲ್ಲಿ ಬೆಳೆದ ಸಾವಯವ  ಉತ್ಪನ್ನಗಳು ಆರೋಗ್ಯ ವೃದ್ಧಿಗೂ  ಸಹಕಾರಿ ಆಗುತ್ತದೆ.  ಮೌಲ್ಯವರ್ಧನೆ ಸ್ಥಳೀಯವಾದ ಉದ್ಯೋಗ ಅವಕಾಶಗಳನ್ನು ಹೆಚ್ಚಿಸುತ್ತದೆ.  ಕತ್ತೆಗಳ ಅಭಿವೃದ್ಧಿಗೂ ಸಹಕಾರಿ.

ಮುಂದಿನ ದಿನಗಳಲ್ಲಿ ಸರಕಾರದಿಂದ ಸಹಾಯ ಸಹಕಾರ ದೊರೆತರೆ ಸಹಕಾರಿ ಸಂಘಗಳನ್ನು ಸ್ಥಾಪಿಸುವ ಅಲೋಚನೆಯನ್ನು ರಂಗೇಗೌಡರು ಹೊಂದಿದ್ದಾರೆ. ಹಳ್ಳಿಗಳಲ್ಲಿ ಕತ್ತೆ ಸಾಕಾಣೆಗೆ ಉತ್ತೇಜನ ದೊರೆತರೆ ಹಾಲಿನ ಸಹಕಾರಿ ಸಂಘಗಳಿದ್ದಂತೆ ಕತ್ತೆ ಸಾಕಾಣೆಯ ಸಹಕಾರಿ ಸಂಘಗಳು ತಲೆಯೆತ್ತಬಹುದು. ಅದರೊಂದಿಗೆ ಗ್ರಾಮೀಣ ಭಾಗಗಳಲ್ಲಿ ಉದ್ಯೋಗಕ್ಕೆ ಕತ್ತೆಗಳ ಕೊಡುಗೆಯೂ ಹೆಚ್ಚಬಹುದು.

ಮಾರುಕಟ್ಟೆ

ಹಾಲು ಮತ್ತು ಅದರ ಉತ್ಪನ್ನಗಳನ್ನು ಮಾರಾಟ ಮಾಡಲು ಸಾಮಾಜಿಕ ಜಾಲ ತಾಣಗಳನ್ನೇ ಹೆಚ್ಚು ನೆಚ್ಚಿಕೊಂಡಿದ್ದಾರೆ. ನೇರಾ ಮಾರಾಟ ವ್ಯವಸ್ಥೆ. ಕೃಷಿ ಮೇಳ, ವಸ್ತು ಪ್ರದರ್ಶನ ಮತ್ತು ಮಾರಾಟ ಮಳಿಗೆಗೆಗಳಲ್ಲಿ ಕತ್ತೆ ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡಿದರೆ ಬಾಯ್ದೆರೆ ಮಾಹಿತಿ ಪಡೆದು ಬಂದು ಕೊಂಡುಕೊಳ್ಳುವವರಿದ್ದಾರೆ. ಗೊಬ್ಬರವನ್ನು ನರ್ಸರಿ ಉದ್ಯಮ ಮಾಡುವವರು, ಕಾಫಿ ಮತ್ತು ಇತರ ತೋಟಗಾರಿಕಾ ಬೆಳೆಗಾರರಿಗೆ ಮಾರಾಟ ಮಾಡುತ್ತಾರೆ.

ಕ್ಷೀರ್‌ಸಾಗರ್ ಡೋಂಕಿ ಫಾರ್ಮಿನ ಆಡಳಿತ ನಿರ್ದೇಶಕರಾಗಿ ರಂಗೇಗೌಡರು ಸಾರಥ್ಯ ವಹಿಸಿದ್ದರೆ ಅವರ ಪತ್ನಿ ಮೇಘಾ ಎಸ್. ಅಕ್ಕಿ ಅವರು ಕೂಡ ಅಗ್ರಿಕಲ್ಚರ್ ಪದವಿ ಪಡೆದಿದ್ದು ಫಾರ್ಮಿನ ಕಾರ್ಯನಿರ್ವಹಣಾಧಿಕಾರಿಯಾಗಿದ್ದಾರೆ.  ಕತ್ತೆ ಸಾಕಾಣೆ ಮತ್ತು ನಿರ್ವಹಣೆಯಲ್ಲಿ ಸಹಕಾರಿಗಳಾಗಿದ್ದಾರೆ.

ಮಾಹಿತಿಗೆ ಮೊಬೈಲ್   9164647133

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group