-ಎಂ.ಟಿ. ಶಾಂತಿ ಮೂಲೆ
ದಿನಾ ನೀವು ಎಷ್ಟು ಸಲ ತಿನ್ನುತ್ತಿರೋ ಅಷ್ಟೂ ಸಲ ಶುಚಿಯಾದರೆ ಆರೋಗ್ಯಕ್ಕೆ ಕೆಡುವುದಿಲ್ಲ. ಆಗಾಗ ತಿಂದರೂ ಕೆಲವರಿಗೆ ಮಲವಿಸರ್ಜನೆ ಆಗುತ್ತಿಲ್ಲ. ದಿನಕೊಮ್ಮೆ, ಎರಡು ದಿನಕ್ಕೊಮ್ಮೆ ಮಲ ವಿಸರ್ಜನೆಯಾಗುತ್ತದೆ. ಅದೂ ಕಷ್ಟದಲ್ಲಿ. ೧೫-೨೦ ನಿಮಿಷ ಕುಳಿತು. ಮತ್ತೆ ಕೊಕ್ಕೆ ಹುಳದ ಬಾಧೆ ಆರಂಭ. ಯಾರು ಇದ್ದಾರೆ ಅನ್ನೋ ಪರಿವೇ ಇಲ್ಲದೆ ಮಲದ್ವಾರಕ್ಕೆ ಕೈ ಹಾಕಿ ಕೆರೆಯುತ್ತಾರೆ. ಈ ಪರಿಸ್ಥಿತಿಗೆ ನಮ್ಮ ಆಹಾರ ವಿಧಾನವೂ ಒಂದು ಮುಖ್ಯ ಕಾರಣ. ಮಲಬದ್ಧತೆ ಇರುವವರು ದಿನಾ ೫-೬ ಬಾರಿ ಒಂದು ಲೋಟ (ದೊಡ್ಡ) ನೀರು ಸೇವಿಸಬೇಕು. ಅಗ್ನಿ ಬಲ ಕಡಿಮೆ ಆದರೆ ದ್ರವಾಹಾರ-ಹಣ್ಣು ಹಂಪಲು ಸೇವನೆ ಉತ್ತಮ. ಹೆಚ್ಚಾಗಿ ವಯಸ್ಸಾದ ಮಂದಿ ಆಹಾರದಲ್ಲಿ ಜಾಗ್ರತೆ ವಹಿಸುವುದು ಒಳ್ಳೆಯದು. ಪಪ್ಪಾಯಿ- ಸ್ಥಳೀಯವಾಗಿ ಬೆಳೆಯುವ ಪಪ್ಪಾಯಿ ಹಣ್ಣು ಒಂದು ರೀತಿಯ “ಅಮೃತ ಫಲ”. ಯಾಕೆಂದರೆ ಅಗ್ನಿ ಬಲ ಹೆಚ್ಚಿಸುತ್ತದೆ. ಜಂತುಹುಳುಗಳ ಹುಟ್ಟಡಗಿಸುತ್ತದೆ. ಮಲಬದ್ಧತೆ ನಿವಾರಿಸುತ್ತದೆ.
ಇದರಲ್ಲಿರುವ “ಪೈಪರಿನ್” ಕ್ರಿಮಿನಾಶಕ ಗುಣ ಹೊಂದಿದ್ದು ಇದರ ಹಾಲನ್ನು ಬತ್ತಿಸಿದರೆ ಸಿಗುವ ಬಿಳಿ ಪುಡಿಯನ್ನು ಜಂತು ಹುಳ ನಿವಾರಣೆಗೆ ಪೈಪರಿನ್ ಸಿರೇಟ್ ಎನ್ನುವ ಔಷಧವನ್ನು ತಯಾರಿಸುತ್ತಾರೆ ಮಕ್ಕಳಿಂದ ಆರಂಭಿಸಿ ವಯೋವೃದ್ಧರ ತನಕ ಪಪ್ಪಾಯಿ ಒಂದು ಸುಲಭದ ಔಷಧವಾಗಿದೆ. ಊಟದ ಬಳಿಕ ಪಪ್ಪಾಯದ ಒಂದು ಹೋಳು ತಿಂದು ಮಲಗಿದರೆ ಮತ್ತೆ ಬೆಳಿಗ್ಗೆ ಆಹಾರಕ್ಕೆ ಮುನ್ನ ಒಂದು ಲೋಟ ನೀರು ಕುಡಿದು ಹತ್ತು ಹೆಜ್ಜೆ ಆ ಕಡೆ-ಈ ಕಡೆ ಚಲಿಸಿದರೆ ಸಾಕು. ನಿಮ್ಮನ್ನು ಬಹಿರ್ದೆಸೆಗೆ ಆಮಂತ್ರಿಸುತ್ತದೆ, ನಿಮ್ಮ ಹೊಟ್ಟೆಯಲ್ಲಿರುವ ಕಸವನ್ನು ಕಳಿಸಿಕೊಟ್ಟ ಮೇಲೆ ಆಗುವ ಉಲ್ಲಾಸ ಅನುಭವಿಸಿದವರಿಗೆ ಗೊತ್ತು.
ಕೆಲವು ಮಂದಿ ಬಾಳೆಹಣ್ಣು ತಿನ್ನಲು ಸಲಹೆ ಮಾಡುತ್ತಾರೆ. ಊಟದ ಬಳಿಕ ಬಾಳೆಹಣ್ಣು ತಿನ್ನುವುದಕ್ಕಿಂತ ಆಹಾರಕ್ಕೆ ಮೊದಲು ಕದಳೀ ಫಲ ಸೇವಿಸಿ ಅಥವಾ ಗಾಳಿ ಬಾಳೆಹಣ್ಣು, ಬೂದಿ ಬಾಳೆಹಣ್ಣು ಇತ್ಯಾದಿ… ನೇಂದ್ರ ಬಾಳೆಹಣ್ಣನ್ನು ಬೇಯಿಸಿ ತಿನ್ನವುದು ಉತ್ತಮ ವಿಧಾನ. ಹಸಿರು ಪೂರ್ತಿ ಮಾಗದಿರುವ, ಗಟ್ಟಿಯಾದ ನೇಂದ್ರ ಹಣ್ಣು ಹಸಿವನ್ನೇ ಕೊಲ್ಲುತ್ತದೆ. ಚೆನ್ನಾಗಿ ಕಳಿತರೆ ತಿನ್ನಬಹುದು. ನಮ್ಮ ಜಠರ ಮುನಿಸಿಪಾಲಿಟಿ ಡಬ್ಬವಾಗದೆ ದೇವರ ಹುಂಡಿಯಾಗಿರಲಿ.