ಬರಹ-ಡಾ: ಕೆ. ಶಿವರಾಮು, ಹಿರಿಯ ವಾರ್ತಾತಜ್ಞರು ಮತ್ತು ಮುಖ್ಯಸ್ಥರು ಹಾಗೂ ಡಾ: ಎಂ.ಎ. ಮೂರ್ತಿ, ಸಹಾಯಕ ಪ್ರಾಧ್ಯಾಪಕರು, ಕೃಷಿ ಮಾಹಿತಿಘಟಕ, ಕೃ.ವಿ.ವಿ, ಬೆಂಗಳೂರು
ಸುಧಾರಿತ ಪದ್ದತಿಗಳನ್ನು ಸಮರ್ಪಕವಾಗಿ ಆಚರಣೆಗೆ ತಂದಿರುವ ಪ್ರಾತ್ಯಕ್ಷಿಕೆ ಕ್ಷೇತ್ರಗಳಿಗೆ ಭೇಟಿ ನೀಡಿ ವಿಷಯದ ಪ್ರತ್ಯಕ್ಷ ಅನುಭವ ಪಡೆಯುವ ವಿಧಾನವೇ ಕೃಷಿ ಮೇಳ. ಇದರಲಿ ಕ್ಷೇತ್ರ ಸಂದರ್ಶನ, ತಜ್ಞರೊಂದಿಗೆ ಚರ್ಚೆ, ವಸ್ತು ಪ್ರದರ್ಶನ ಮುಂತಾದವುಗಳು ಅಡಕವಾಗಿವೆ. ಕೃಷಿ ಮೇಳವನ್ನು ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ನಿರಂತರವಾಗಿ ಆಚರಿಸುತ್ತಾ ರೈತರು ಹಾಗೂ ವಿಸ್ತರಣಾಕಾರ್ಯಕರ್ತರಿಗೆ ಕೃಷಿ ತಾಂತ್ರಿಕತೆಯ ಜ್ಞಾನದ ವಿವಿಧ ಮಜಲುಗಳನ್ನು ಪರಿಚಯ ಮಾಡಿಕೊಡುತ್ತಾ ಬಂದಿದೆ.ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರಿನಲ್ಲಿ 1966 ರಲ್ಲಿ ಪ್ರಾರಂಭವಾದ ಕ್ಷೇತ್ರೋತ್ಸವವುಕಾಲಾನುಕ್ರಮದಲ್ಲಿ ಕೃಷಿ ಮೇಳವಾಗಿ ಪರಿವರ್ತನೆಗೊಂಡು ಅತ್ಯಂತಜನಪ್ರಿಯಗೊಂಡಿದೆ. ಈ ವರ್ಷ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ, ಕರ್ನಾಟಕ ಸರ್ಕಾರದ ಕೃಷಿ, ತೋಟಗಾರಿಕೆ, ರೇಷ್ಮೆ, ಅರಣ್ಯ, ಪಶುಸಂಗೋಪನೆ, ಮೀನುಗಾರಿಕೆ, ಕೃಷಿ ಮಾರುಕಟ್ಟೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತುಕರ್ನಾಟಕ ಹಾಲು ಮಹಾಮಂಡಳಿಗಳ ಸಂಯುಕ್ತಆಶ್ರಯದಲ್ಲಿ ಕೃ.ವಿ.ವಿ, ಬೆಂಗಳೂರಿನ, ಗಾಂಧಿ ಕೃಷಿ ವಿಜ್ಞಾನಕೇಂದ್ರದ (ಜಿಕೆವಿಕೆ) ಆವರಣದಲ್ಲಿ ಕೃಷಿ ಮೇಳವನ್ನು ನವೆಂಬರ್ 14 ರಿಂದ 17, 2024 ರವರೆಗೆ ನಾಲ್ಕು ದಿನಗಳ ಕಾಲ “ಹವಾಮಾನ ಚತುರ ಡಿಜಿಟಲ್ ಕೃಷಿ”ಎಂಬ ಘೋಷ ವಾಕ್ಯದೊಂದಿಗೆ ಆಯೋಜಿಸಲಾಗುತ್ತಿದೆ.
I. ನೂತನ ತಳಿಗಳು: ಕೃಷಿ ವಿಶ್ವವಿದ್ಯಾನಿಲಯ ಅಭಿವೃದ್ಧಿಪಡಿಸಿರುವ ಒಟ್ಟುನಾಲ್ಕು ತಳಿಗಳನ್ನು ಕೃಷಿಮೇಳದಲ್ಲಿ ಬಿಡುಗಡೆ ಮಾಡಲಾಗುವುದು.
-ಮುಸುಕಿನ ಜೋಳ ಸಂಕರಣ ತಳಿ: ಎಂ.ಎ.ಹೆಚ್.15.84- ಎಂಎಹೆಚ್-15.84 ಏಕ ಸಂಕರಣ ತಳಿಯು ಮಧ್ಯಮಾವಧಿಯಾಗಿದ್ದು (120-125 ದಿನಗಳು), ಈ ಸಂಕರಣ ತಳಿಯು ಎಂಎಹೆಚ್-14.5 (81-85 ಕ್ವಿಂ/ಹೆ) ಗಿಂತ ಶೇ.14.2 ರಷ್ಟುಅಧಿಕ ಇಳುವರಿ (92-95 ಕ್ವಿಂ/ಹೆ) ನೀಡುತ್ತದೆ. ಎಲೆ ಅಂಗಮಾರಿರೋಗಕ್ಕೆ ನಿರೋಧಕತೆ ಹಾಗೂ ಕೇದಿಗೆ ರೋಗಕ್ಕೆ ಸಾಧಾರಣ ಸಹಿಷ್ಣುತೆ ಹೊಂದಿದೆ. ಆಕರ್ಷಕ ಕಾಳಿನ ಕಿತ್ತಳೆ ಬಣ್ಣದ ಕಾಳಿನಿಂದ ಮಾರುಕಟ್ಟೆಯಲ್ಲಿಉತ್ತಮ ಬೆಲೆ. ಹೆಣ್ಣು ಪೋಷಕದಲ್ಲಿ ಉತ್ತಮ ಬೀಜೋತ್ಪಾದನಾ ಸಾಮರ್ಥ್ಯ ಹಾಗೂ ಗಂಡು ಪೋಷಕದಲ್ಲಿಉತ್ತಮ ಪರಾಗ ಸಾಮರ್ಥ್ಯ ಹೊಂದಿವೆ. ವಲಯ 5 ಮತ್ತು ವಲಯ 6 ಕ್ಕೆ ಶಿಫಾರಸ್ಸು ಮಾಡಲಾಗಿದೆ.
– ಅಲಸಂದೆ ತಳಿ: ಕೆ.ಬಿ.ಸಿ-12 :- ಕೆಬಿಸಿ-12ತಳಿಯು ಜುಲೈ-ಆಗಸ್ಟ್-ಸೆಪ್ಟೆಂಬರ್ ಮತ್ತು ಜನವರಿ-ಫೆಬ್ರವರಿ ಬಿತ್ತನೆಗೆ ಸೂಕ್ತವಾಗಿರುವ ೮೦-೮೫ ದಿನಗಳ ಅವಧಿಯ ತಳಿಯಾಗಿದ್ದು ಹೆಕ್ಟೇರಿಗೆ 13-14 ಕ್ವಿಂಟಾಲ್ ಇಳುವರಿಯನ್ನು ನೀಡುತ್ತದೆ. ನೇರವಾಗಿರುವ ಸಸ್ಯ ಪ್ರಕಾರವಿದ್ದುದಪ್ಪ ಮತ್ತು ಹಸಿರು ಬಣ್ಣದ ಕಾಯಿಗಳು ಹಾಗು ಮಧ್ಯಮದಪ್ಪ ಮತ್ತು ತಿಳಿ ಕಂದು ಬಣ್ಣದ ಬೀಜಗಳನ್ನೊಂದಿರುತ್ತದೆ. ದುಂಡಾಣು ಎಲೆ ಅಂಗಮಾರಿರೋಗ, ನಂಜಾಣು ರೋಗ ಹಾಗೂ ಒಣ ಬೇರು ಕೊಳೆ ರೋಗಕ್ಕೆ ನಿರೋಧಕ ಶಕ್ತಿ ಹೊಂದಿದೆ. ವಲಯ 5 ಮತ್ತು ವಲಯ 6 ಕ್ಕೆ ಶಿಫಾರಸ್ಸು ಮಾಡಲಾಗಿದೆ.
-ಸೂರ್ಯಕಾಂತಿ ಸಂಕರಣ ತಳಿ: ಕೆ.ಬಿ.ಎಸ್.ಹೆಚ್-9೦ :- ಪ್ರಸ್ತಾಪಿತ ಸಂಕರಣ ತಳಿಯ 80-82 ದಿನಗಳ ಅಲ್ಪಾವಧಿ ತಳಿಯಾಗಿದ್ದು ಮಧ್ಯಮಎತ್ತರವನ್ನು ಹೊಂದಿದೆ. ಈ ಸಂಕರಣ ತಳಿಯು ಕೆಬಿಎಸ್‌ಹೆಚ್-78 ತಳಿಗಿಂತ ಶೇ.21 ರಷ್ಟುಅಧಿಕ ಬೀಜದ ಇಳುವರಿ (23-24 ಕ್ವಿಂ/ಹೆ) ಹಾಗು ಶೇ.26 ರಷ್ಟುಅಧಿಕ ತೈಲದ ಇಳುವರಿಯನ್ನು ನೀಡುತ್ತದೆ. ವಲಯ 5 ಮತ್ತು ವಲಯ 6 ಕ್ಕೆ ಶಿಫಾರಸ್ಸು ಮಾಡಲಾಗಿದೆ.
– ಬಾಜ್ರ ನೇಪಿಯರ್ ಸಂಕರಣತಳಿ : ಪಿಬಿಎನ್-342 :- ಈ ಸಂಕರಣ ತಳಿಯು ಬಿಎನ್‌ಹೆಚ್-1೦ತಳಿಗಿಂತ ಶೇ. 14 ರಷ್ಟು ಹೆಚ್ಚಿನ ಹಸಿರು ಮೇವಿನ ಇಳುವರಿ ನೀಡಿರುತ್ತದೆ. ಈ ಸಂಕರಣ ತಳಿಯು ಹೆಚ್ಚಿನ ಒಣಮೇವಿನ ಇಳುವರಿ ಹೆಚ್ಚಿನ ಎಲೆಕಾಂಡ ಅನುಪಾತ ಹಾಗೂ ಹೆಚ್ಚಿನ ಕಚ್ಚಾ ಸಸಾರಜನಕದ ಇಳುವರಿ ಹಾಗೂ ಉತ್ತಮ ಗುಣಮಟ್ಟದ ಪೌಷ್ಠಿಕಾಂಶವನ್ನು ದಾಖಲಿಸಿದೆ. ವಲಯ 6 ಕ್ಕೆ ಅನುಮೋದಿಸಲಾಗಿದೆ.
II. ಕೃಷಿ ಸಾಧಕರಿಗೆ ಪುರಸ್ಕಾರ
ಅ) ರಾಜ್ಯ ಮಟ್ಟದ ಪ್ರಶಸ್ತಿಗಳು:ಕೃಷಿಯಲ್ಲಿಉತ್ತಮ ಸಾಧನೆ ಮಾಡಿದ ರೈತರಿಗೆಮಾಜಿ ಪ್ರಧಾನಮಂತ್ರಿ ಶ್ರೀ ಹೆಚ್.ಡಿ. ದೇವೇಗೌಡ ರಾಜ್ಯ ಮಟ್ಟದಅತ್ಯುತ್ತಮರೈತ ಪ್ರಶಸ್ತಿ,ಡಾ: ಎಂ.ಹೆಚ್. ಮರೀಗೌಡ ರಾಜ್ಯ ಮಟ್ಟದ ಅತ್ಯುತ್ತಮ ತೋಟಗಾರಿಕೆ ರೈತ ಪ್ರಶಸ್ತಿ,ಕ್ಯಾನ್ ಬ್ಯಾಂಕ್ ರಾಜ್ಯ ಮಟ್ಟದ ಅತ್ಯುತ್ತಮ ರೈತ ಪ್ರಶಸ್ತಿ,ಕ್ಯಾನ್ ಬ್ಯಾಂಕ್‌ರಾಜ್ಯ ಮಟ್ಟದ ಅತ್ಯುತ್ತಮ ರೈತ ಮಹಿಳೆ ಪ್ರಶಸ್ತಿ ಮತ್ತುಡಾ: ಆರ್. ದ್ವಾರಕೀನಾಥ್ ಅತ್ಯುತ್ತಮ ರೈತ ಪ್ರಶಸ್ತಿಗಳನ್ನು ನೀಡಿ ಸನ್ಮಾನಿಸಲಾಗುವುದು
-ಜಿಲ್ಲಾ ಮಟ್ಟದ ಪ್ರಶಸ್ತಿಗಳು
ಜಿಲ್ಲಾ ಮಟ್ಟದ ಪ್ರಗತಿಪರರೈತ ಪ್ರಶಸ್ತಿ ಮತ್ತುರೈತ ಮಹಿಳಾ ಪ್ರಶಸ್ತಿ: ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರಿನ ವ್ಯಾಪ್ತಿಗೆ ಒಳಪಡುವ ೧೦ ಜಿಲ್ಲೆಗಳಲ್ಲಿ ಪ್ರಗತಿಪರರೈತ ಪ್ರಶಸ್ತಿ ಮತ್ತು ಪ್ರಗತಿಪರರೈತ ಮಹಿಳಾ ಪ್ರಶಸ್ತಿಗಳನ್ನು ಅರ್ಹ ಪ್ರಗತಿ ಪರರೈತ ಮತ್ತುರೈತ ಮಹಿಳೆಯರಿಗೆ ನೀಡಲಾಗುವುದು.
-ತಾಲ್ಲೂಕು ಮಟ್ಟದ ಪ್ರಶಸ್ತಿಗಳು
ತಾಲ್ಲೂಕು ಮಟ್ಟದ ಪ್ರಗತಿಪರಯುವರೈತ ಪ್ರಶಸ್ತಿ ಮತ್ತುಯುವರೈತ ಮಹಿಳಾ ಪ್ರಶಸ್ತಿ: ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರಿನ ವ್ಯಾಪ್ತಿಗೆ ಒಳಪಡುವ ೬೧ ತಾಲ್ಲೂಕುಗಳಲ್ಲಿ ಪ್ರಗತಿಪರ ಯುವರೈತ ಪ್ರಶಸ್ತಿ ಮತ್ತು ಪ್ರಗತಿಪರಯುವರೈತ ಮಹಿಳಾ ಪ್ರಶಸ್ತಿಗಳನ್ನು ಅರ್ಹ ಪ್ರಗತಿಪರ ಯುವ ರೈತ ಮತ್ತು ಪ್ರಗತಿಪರ ಯುವ ರೈತ ಮಹಿಳೆಯರಿಗೆ ನೀಡಲಾಗುವುದು. ಅಭ್ಯರ್ಥಿಗಳ ವಯಸ್ಸು ೩೫ ವರ್ಷ ಮೀರಿರಬಾರದು.
ಕೃಷಿ ವಸ್ತು ಪ್ರದರ್ಶನ
ಸುಮಾರು ೭೦೦ ಮಳಿಗೆಗಳಲ್ಲಿ ಕೃ.ವಿ.ವಿ, ಬೆಂಗಳೂರಿನ ಮಳಿಗೆಗಳ, ಕೃಷಿ ಸಂಬಂಧಿ ವಿಶ್ವವಿದ್ಯಾನಿಲಯಗಳು / ಸಂಸ್ಥೆಗಳು, ಅಭಿವೃದ್ಧಿ ಇಲಾಖೆಗಳ ಮಳಿಗೆಗಳು, ಕೃಷಿ ಪರಿಕರಗಳ ಮಳಿಗೆಗಳು, ಕೃಷಿ ಇಂಜಿನಿಯರಿಂಗ್ ಮತ್ತು ಪಶುಸಂಗೋಪನೆ ಮಳಿಗೆಗಳಲ್ಲಿ ನೂತನ ತಂತ್ರಜ್ಞಾನಗಳನ್ನು ಪ್ರದರ್ಶಿಸಲಾಗುವುದು. ರೈತರ ಕೃಷಿ ಸಮಸ್ಯೆಗಳಿಗೆ ತಜ್ಞರಿಂದ ವೈಜ್ಞಾನಿಕ ಸಲಹೆ, ತಜ್ಞ ವಿಜ್ಞಾನಿಗಳ ತಂಡದಿಂದ ಕೃಷಿ ಸಂಬಂಧಿ ಪ್ರಶ್ನೆಗಳಿಗೆ ಬೌತಿಕವಾಗಿ ಮತ್ತು ಜೂಮ್ ಸಭೆ ಮೂಲಕ ನೇರ ಪರಿಹಾರ, ಪ್ರಾತ್ಯಕ್ಷಿಕಾ ತಾಕುಗಳು, ಮಳಿಗೆಗಳು ಮತ್ತು ಕೃಷಿ ಮೇಳದ ಕಾರ್ಯಕ್ರಮವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ.
ಖುಷ್ಕಿ ಬೇಸಾಯಕ್ಕೆ ಸೂಕ್ತವಾದ ಬೆಳೆ ಪದ್ಧತಿಗಳು, ನೂತನವಾಗಿ ಬಿಡುಗಡೆಯಾದ ವಿವಿಧ ಬೆಳೆ ತಳಿಗಳ ಪ್ರಾತ್ಯಕ್ಷಿಕೆ, ತೋಟಗಾರಿಕೆ ಬೆಳೆಗಳ ಮತ್ತು ನಿಖರ ಕೃಷಿ ಪ್ರಾತ್ಯಕ್ಷಿಕೆ, ಸಮಗ್ರ ಬೇಸಾಯ ಪದ್ಧತಿ ಪ್ರಾತ್ಯಕ್ಷಿಕೆ, ಸಿರಿಧಾನ್ಯಗಳು ಹಾಗೂ ಮಹತ್ವ, ಔಷಧೀಯ ಮತ್ತು ಸುಗಂಧದ್ರವ್ಯ ಸಸ್ಯಗಳು, ಜಲಾನಯನ ನಿರ್ವಹಣೆ, ಸಾವಯವ ಕೃಷಿ ಪದ್ಧತಿಗಳು, ಸಮಗ್ರ ಪೋಷಕಾಂಶಗಳು ಹಾಗೂ ಪೀಡೆ ನಿರ್ವಹಣೆ, ಮಣ್ಣು ಪರೀಕ್ಷೆಗನುಗುಣವಾಗಿ ಬೆಳೆ ಸ್ಪಂದನೆ ಪ್ರಾತ್ಯಕ್ಷಿಕೆ, ಹನಿ ಮತ್ತುತುಂತುರು ನೀರಾವರಿ ಪದ್ಧತಿಗಳು, ಮಳೆ ಹಾಗೂ ಮೇಲ್ಛಾವಣಿ ನೀರಿನಕೋಯ್ಲು, ಸುಧಾರಿತ ಕೃಷಿ ಯಂತ್ರೋಪಕರಣಗಳ ಪ್ರದರ್ಶನ, ಕೊಯ್ಲಿ ನೋತ್ತರ ತಾಂತ್ರಿಕತೆ, ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ಮೌಲ್ಯವರ್ಧನೆ, ಬಿತ್ತನೆ ಬೀಜಗಳ ಪರೀಕ್ಷೆ ಹಾಗೂ ಶೇಖರಣೆ, ಪಶುಸಂಗೋಪನೆ, ಹೈನುಗಾರಿಕೆ, ಕುರಿ, ಕೋಳಿ ಹಾಗೂ ಮೀನು ಸಾಕಣೆ, ಮಾರುಕಟ್ಟೆ ನೈಪುಣ್ಯತೆ ಮಾಹಿತಿ, ಹವಾಮಾನ ಚತುರ ಕೃಷಿ, ಕೃಷಿಯಲ್ಲಿ ನೂತನ ಮಾಹಿತಿತಂತ್ರಜ್ಞಾನ, ಜೈವಿಕ ಹಾಗೂ ನವೀಕರಿಸಲ್ಪಡುವ ಇಂಧನ, ರೈತರಿಂದ ರೈತರಿಗಾಗಿ ಚರ್ಚಾಗೋಷ್ಠಿ, ಕೃಷಿ ಪರಿಕರಗಳ ಹಾಗೂ ಪ್ರಕಟಣೆಗಳ ಮಾರಾಟ ವ್ಯವಸ್ಥೆ ಮಾಡಲಾಗುವುದು.