spot_img
Friday, October 18, 2024
spot_imgspot_img
spot_img
spot_img

ಕಸದಿಂದ ರಸ: ಮನ ಸೆಳೆಯುತ್ತದೆ ಇವರ ಬಾಟಲ್ ಗಾರ್ಡನ್!

-ರಾಧಾಕೃಷ್ಣ ತೊಡಿಕಾನ 

ಖಾಲಿಯಾದ ನೀರಿನ ಬಾಟಲ್‌ಗಳು, ಪ್ಲಾಸ್ಟಿಕ್ ಡಬ್ಬಗಳು, ಎಣ್ಣೆ ಕ್ಯಾನ್‌ಗಳು, ಅಲ್ಲಲ್ಲಿ ರಸ್ತೆ ಬದಿಯಲ್ಲಿ ಬಿದ್ದುಕೊಂಡಿರುವುದು ಸಾಮಾನ್ಯ. ಕೆಲವು ಗುಜಿರಿ ಅಂಗಡಿ ಅಥವಾ ತ್ಯಾಜ್ಯದ ರಾಶಿಯನ್ನು ಸೇರಿರುತ್ತದೆ. ಆದರೆ ತ್ಯಾಜ್ಯವೆಂದು ಬಿಸಾಡುವ ಬಾಟಲಿಗಳು ಅದರ ಮೂಲ ಸ್ವರೂಪದಲ್ಲೇ ಅಲಂಕಾರಿಕ ವಸ್ತುಗಳಾಗಬಹುದೆಂಬುದು ಬಹುತೇಕರಿಗೆ ತಿಳಿದಿರಲಾರದು. ಒಂದು ವೇಳೆ ತಿಳಿದಿದ್ದರೆ ಅದನ್ನು ಬಿಸಾಡುವ ಗೋಜಿಗೆ ಹೋಗಲಾರರು. ತಮ್ಮಲ್ಲಿರುವ ಖಾಲಿ ಡಬ್ಬಗಳು, ಬೇಡವೆಂದಾದರೆ ಅದನ್ನು ಬಿಸಾಡುವುದಾಗಲಿ, ತ್ಯಾಜ್ಯದ ರಾಶಿಗೆ ಎಸೆಯದೆ ಅವುಗಳನ್ನು ಅತ್ಯಾಕರ್ಷಕವಾದ ಹೂ ಕುಂಡಗಳನ್ನು ಮಾಡಬಹುದು

ಪರಿಸರ ಅಂದಗೆಡಿಸುವ ಹಾಗೂ ಮಾರಕವಾಗಬಹುದೆನ್ನಬಹುದಾದ ಪ್ಲಾಸ್ಟಿಕ್ ಬಾಟಲಿಗಳನ್ನೇ ಪರಿಸರ ಸಹ್ಯವಾಗುವಂತೆ ಬಳಸಿಕೊಂಡು “ಕಸದಿಂದ ರಸ ತೆಗೆಯುವ” ಕೆಲಸವನ್ನು ಸದ್ದಿಲ್ಲದೆ ಮಾಡುತ್ತಾ ಬಂದವರು ಯತೀಶ್ ಕಿದಿಯೂರು.

ಇತ್ತೀಚೆಗೆ ಉಚ್ಚಿಲದ ಶ್ರೀ ಮಹಾಲಕ್ಷ್ಮೀ ದೇವಿ ಸನ್ನಿಧಿಯಲ್ಲಿ ನಡೆದ ದಸರಾ ಉತ್ಸವದ ಸಂದರ್ಭ ಪ್ರದರ್ಶನಗೊಂಡ ವರ ಬಾಟಲ್ ಗಾರ್ಡನ್ ಕಣ್ಮನ ಸೆಳೆಯಿತು. ಅರೆ!! ಬೇಡವಾದ ಬಾಟಲಿಗಳನ್ನು ಬಳಸಿಕೊಂಡು ಹೀಗೂ ಮಾಡಬಹುದಲ್ಲ… ಜನರನ್ನು ಚಿಂತನೆಗೆ ಹಚ್ಚುವಂತೆ ಮಾಡಿತು.

ಯತೀಶ್ ಕಿದಿಯೂರು ಮತ್ತು ಅಶ್ವಿತಾ ದಂಪತಿ ನಿರುಪಯುಕ್ತವಾದ ಬಾಟಲಿಗಳನ್ನು ಉಪಯೋಗಿಸಿಕೊಂಡು ಅದರಲ್ಲಿ ಅಲಂಕಾರಿಕ ಗಿಡಗಳನ್ನು ನೆಟ್ಟು ಅತ್ಯಾಕರ್ಷಕವಾದ ಹೂ ತೋಟವನ್ನು ನಿರ್ಮಿಸಿರುವುದು ಮನಸೆಳೆಯಿತು. ಯತೀಶ್ ಕಿದಿಯೂರು ಅವರು ಉಡುಪಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಎಡಿಸಿ ಅವರ ಆಪ್ತ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸರಕಾರಿ ಉದ್ಯೋಗದೊಂದಿಗೆ ಪರಿಸರ ಕಾಳಜಿಯನ್ನು ಹೊಂದಿದವರು.

ಹಳ್ಳಿಯಾಗಲಿ, ಪೇಟೆಯಾಗಲಿ ಎಲ್ಲೆಂದರಲ್ಲಿ ಬಿದ್ದಿರುವ ಬಾಟಲಿಗಳು, ಡಬ್ಬಗಳು, ಹಾಲಿನ ತೊಟ್ಟೆಗಳು, ಪರಿಸರವನ್ನು ಅಂದಗೆಡಿಸುತ್ತವೆ. ಅವುಗಳನ್ನು ಮನೆಯ ಅಂದ ಹೆಚ್ಚಿಸಲು ಮರುಬಳಕೆ ಮಾಡಿದರೆ ಹೇಗೆ ಎಂಬ ಯೋಚನೆ ಯತೀಶ್ ಅವರಿಗೆ ಹೊಳೆದಾಗ ತಮ್ಮ ಪರಿಸರದಲ್ಲಿ ಸುಲಭವಾಗಿ ಸಿಗಬಹುದಾದ ಔಷಧಿಯ ಗಿಡಗಳನ್ನು ಆ ಬಾಟಲಿಗಳಲ್ಲಿ ನೆಡಲು ಪ್ರಾರಂಭಿಸಿದರು. ಅವುಗಳು ಬೇರೊಡೆದು ಬಾಟಲಿಗಳಲ್ಲಿ ಅಸ್ತಿತ್ವ ಕಂಡುಕೊಳ್ಳಲು ಆರಂಭಿಸಿದಾಗ ಹುಟ್ಟಿಕೊಂಡದ್ದು “ಬಾಟಲಿ ಗಾರ್ಡನ್” ಕಲ್ಪನೆ. ತಮ್ಮ ಮನೆಗೆ ತಂದ ಬಾಟಲಿಗಳನ್ನಾಗಲಿ, ಡಬ್ಬಗಳನ್ನಾಗಲಿ ಬಿಸಾಡಲು ಹೋಗಲಿಲ್ಲ. ಅವುಗಳ ಮರುಬಳಕೆಯತ್ತ ಕಾರ್ಯಪ್ರವೃತರಾದರು. ಅವರ ಪತ್ನಿ ಅಶ್ವಿತಾ ಅವರಿಗೂ ಅದೇ ಆಸಕ್ತಿ ಇತ್ತು.

ಅಲ್ಲಿರುವ ಬಾಟಲಿಗಳ ಬಣ್ಣ ಬದಲಾದವು. ಹೊಸ ರೂಪ ಪಡೆದು ಬಾಟಲಿಗಳೇ ಹೂವಾಗಿ ಅರಳಿದವು. ಕೆಲವು ಕುಂಡಗಳಾದರೆ ಮತ್ತೆ ಕೆಲವು ಕುಂಡಗಳ ತಳಹದಿಯಾದವು. ನೀರು ಮತ್ತು ತಂಪು ಪಾನೀಯದ ದೊಡ್ಡ ಬಾಟಲುಗಳು, ಉಪ್ಪಿನಕಾಯಿ ಡಬ್ಬ, ಎಣ್ಣೆ ಕ್ಯಾನ್‌ಗಳು, ಚಿಕ್ಕಿ, ಚಾಕಲೇಟ್ ಡಬ್ಬಗಳು, ವಿವಿಧ ಬಾಟಲುಗಳು, ಹಾಲಿನ ತೊಟ್ಟೆ ಇವರು ಗಿಡ ಬೆಳೆಸಲು ಬಳಸುವ ಪರಿಕರಗಳು.

ಬಾಟಲಿಗಳನ್ನು ನಾಜೂಕಿನಿಂದ ಕತ್ತರಿಸಿ ಅವುಗಳಿಗೆ ಬಣ್ಣ ಬಳಿದು ಹಗ್ಗಗಳಲ್ಲಿ ನೇತುಹಾಕಿದ ಕುಂಡಗಳ ಜಾಲರಿ. ಬಾಟಲಿಗಳನ್ನು ಮಧ್ಯದಿಂದ ತುಂಡರಿಸಿ ಹಗ್ಗದಿಂದಲೇ ಅವುಗಳನ್ನು ಜೋಡಿಸಿ ರಚಿಸಿದ ಹೂ ಕುಂಡಗಳು… ಒಂದಕ್ಕೊಂದು ಪೋಣಿಸಿದ ಬಾಟಲಿಗಳಿಗೆ ಅಂಟುಗಳನ್ನು ಹಾಕಿಲ್ಲ. ಕೆಲವೊಂದು ಮುಚ್ಚಳವೇ ಅಂಟು ನಂಟಿನ ಬೆಸೆಯುವಂತೆ ಮಾಡಿವೆ

ಬಾಟಲಿ ಕುಂಡಗಳಲ್ಲಿ ನಾನಾ ಬಗೆಯ ಚಿತ್ರಗಳು. ಕೆಲವು ಪ್ಲಾಸ್ಟಿಕ್ ಡಬ್ಬಗಳು ಹೂವಿನಂತೆ ಅರಳಿವೆ. ಕ್ಯಾನುಗಳ ಹೂ ಕುಂಡಕ್ಕೆ ಆನೆಯ ಮುಖವರ್ಣ. ರೆಕ್ಕೆ ಬಿಚ್ಚಿದ ಹಕ್ಕಿ. ಹೂವಿಂದ ಹೂವಿಗೆ ಹಾರುವ ಪಾತರಗಿತ್ತಿ. ಕಾಡುವ ಕಣ್ಣುಗಳು… ಅರಳುವ ಹೂಗಳ ಚಿತ್ರಗಳು. ಕುಂಡದ ಹೂವುಗಳಿಗೆ ಪ್ರತಿಸ್ಪರ್ಧಿಯಂತೆ. ಸೇವಂತಿಗೆ, ಮಲ್ಲಿಗೆ, ಬಯ್ಯಮಲ್ಲಿಗೆ, ಕಿಸ್ಕಾರ ತನ್ನಷ್ಟಕ್ಕೇ ಅರಳಿ ಪ್ರಕೃತಿಯೊಂದಿಗೆ ಲೀನವಾಗುವ ಹಲವು ಕಾಡು ಹೂವುಗಳು ಈ ಬಾಟಲಿಗಳ ಚೆಲುವನ್ನು ಹೆಚ್ಚಿಸಿದವು. ಬಣ್ಣ ಬಣ್ಣದ ಕ್ರೋಟನ್ ಗಿಡಗಳು ಅಲೆವೆರ, ಅನಾನಸು, ಸುಗಂಧ ಬೀರುವ ಗಿಡಗಳು, ಗರಿಕೆ, ತಿಮರೆ, ನೆಲನೆಲ್ಲಿ. ಗ್ರಾಮೀಣ ಜನರ ಬದುಕಿನಲ್ಲಿ ಹಾಸು ಹೊಕ್ಕಾಗಿರುವ ಸಸ್ಯ ಮೂಲಿಕೆಗಳು ಈ ಬಾಟಲಿಗಳಲ್ಲಿ ನೆಲೆಕಂಡಿವೆ.

 

ತೆಂಗಿನಕಾಯಿಯನ್ನು ತುರಿದ ಮೇಲೆ ಗೆರಟೆ ಹಳ್ಳಿಗಳಲ್ಲಿ ಬಚ್ಚಲು ಒಲೆ ಸೇರುತ್ತದೆ. ನಗರಗಳಲ್ಲಿ ಕಸದ ಬುಟ್ಟಿ ತುಂಬುತ್ತದೆ. ಆದರೆ ಯತೀಶ್ ಮತ್ತು ಅಶ್ವಿತಾ ಹಾಗೆ ಗೆರಟೆ ಬಿಸಾಡಲಿಲ್ಲ. ಆ ಗೆರಟೆಗೆ ದಾರ ಪೋಣಿಸಿ ಹಳೆಯ ಸೈಕಲ್ಲಿನ ಚಕ್ರಕ್ಕೆ ತೂಗು ಹಾಕಿ ಅದರಲ್ಲಿ ಗೊಂಚಲಿನ ಆಕಾರದಲ್ಲಿ ಆಕರ್ಷಕವಾದ ಹೂ ಬಳ್ಳಿ….ಬೆಳೆಸಿದರು..ಹಳೆಯ ಟೈರುಗಳು ಬಣ್ಣ ತುಂಬಿಕೊಂಡು ಬಾಟಲಿ ಕುಂಡಗಳ ಸ್ಟ್ಯಾಂಡುಗಳಾದವು. ಹಾಲಿನ ತೊಟ್ಟೆಗಳು ಗಿಡಗಳ ಅಭಿವೃದ್ಧಿಗಾಗಿ ಬಳಸಿಕೆಯಾದವು. ಕಳೆದ ಆರು ವರ್ಷಗಳಿಂದ ಯತೀಶ್ ಕಿದಿಯೂರು ಮತ್ತು ಅವರ ಪತ್ನಿ ಅಶ್ವಿತಾರವರು ಬಾಟಲಿ ಗಾರ್ಡನ್ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ. ಒಂದು ಸಾವಿರಕ್ಕೂ ಹೆಚ್ಚು ವೈವಿಧ್ಯತೆಯುಳ್ಳ ಬಾಟಲ್ ಗಿಡಗಳಿವೆ.

ಅಲ್ಲಲ್ಲಿ ಪ್ಲಾಸ್ಟಿಕ್ ಬಾಟಲಿಗಳನ್ನು ಎಸೆದು ಪರಿಸರವನ್ನು ಹಾಳು ಮಾಡು ಬದಲು ಅದರ ಮರುಬಳಕೆ ಹೇಗೆ ಮಾಡಬಹುದೆಂಬ ಯೋಚನೆ ಹುಟ್ಟಿಕೊಂಡಾಗ ಆರಂಭವಾದದ್ದು “ಬಾಟಲಿ ಗಾರ್ಡನ್” ಎನ್ನುತ್ತಾರೆ ಯತೀಶ್ ಕಿದಿಯೂರು. ಇದರ ಮೂಲಕ ಮಕ್ಕಳಲ್ಲಿ ಮತ್ತು ದೊಡ್ಡವರಲ್ಲಿ ಪರಿಸರ ಜಾಗೃತಿಯ ಸಂದೇಶವನ್ನು ಮೂಡಿಸಲಾಗುತ್ತಿದೆ. ಇಂಥ ಗಾರ್ಡನ್ ಯಾರೂ ಕೂಡ ಮಾಡಬಹುದು. ತಮ್ಮ ಮನೆಯ ಮುಂದೆ ಅಲಂಕಾರಿಕವಾಗಿ ಬಳಸಿಕೊಂಡರೆ ಸುಂದರ ಪರಿಸರ ತಮ್ಮಿಂದಲೇ ನಿರ್ಮಾಣವಾಗುತ್ತದೆ.

ಎಷ್ಟೋ ಮಂದಿಗೆ ಹೂ ಗಿಡ ಬೆಳೆಸುವ ಆಸೆಯಿರುತ್ತದೆ. ಆದರೆ ಜಾಗವೇ ಇಲ್ಲವಲ್ಲ!! ಎಂಬ ಕೊರಗು. ಅವರೆಲ್ಲ ಇಂಥ ಬಾಟಲಿ ಗಿಡಗಳನ್ನು ನಿರ್ಮಾಣ ಮಾಡಿಕೊಳ್ಳಲಿಕ್ಕೆ ಸಮಸ್ಯೆ ಏನೂ ಇಲ್ಲ. ಖಾಲಿ ಬಾಟಲಿಯನ್ನು ತಮಗೆ ಬೇಕಾದ ಆಕಾರಕ್ಕೆ ಕತ್ತರಿಸಿ ಪೈಂಟಿಂಗ್ ಮಾಡಿಕೊಂಡರೆ ಸಾಕು. ಪ್ಲಾಟುಗಳಲ್ಲಿರುವವರೂ ಸುಂದರವಾದ ಬಾಟಲಿ ಗಾರ್ಡನ್‌ಗಳನ್ನು ನಿರ್ಮಿಸಿಕೊಂಡು ಖುಷಿಪಡಬಹುದು.

ನೀರು ನಿಂತು ಕೊಳೆಯದಂತೆ ಬಾಟಲಿಗಳ ಕೆಳಗೆ ಸಣ್ಣ ತೂತುಗಳನ್ನು ಮಾಡಲಾಗುತ್ತದೆ. ಕೆಂಪು ಮಣ್ಣು ತುಂಬಿಸಿ ಗಿಡಗಳ ಜೀವಂತಿಕೆ ಹಾಗೂ ಬೆಳವಣಿಗೆಗೆ ಪೂರಕವಾಗಿ ತೆಂಗಿನ ನಾರಿನ ಪುಡಿಯನ್ನು ಹಾಕಲಾಗುತ್ತದೆ. ಇವಿಷ್ಟರಲ್ಲಿಯೇ ತಮ್ಮ ಸಾಮರ್ಥ್ಯಕ್ಕನುಗುಣವಾಗಿ ಗಿಡ ಬಳ್ಳಿಗಳು ಬೆಳೆದು ಹೂವುಗಳಿಂದ ಮೈದುಂಬಿಕೊಳ್ಳುತ್ತವೆ.

ಜಿಲ್ಲಾ ಕಂದಾಯ ಇಲಾಖೆಯ ವರಿಷ್ಠ ಅಧಿಕಾರಿಗಳು ಇವರ ಬಾಟಲಿ ಗಾರ್ಡನ್ ನೋಡಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಜನರು ಆಗಾಗ ಭೇಟಿಯಿತ್ತು ಗಿಡಗಳನ್ನು ಮಾರಾಟ ಮಾಡುತ್ತೀರಾ ಕೇಳುತ್ತಿರುತ್ತಾರೆ. ಅವರೆಂದೂ ಗಿಡಗಳನ್ನು ಮಾರಾಟ ಮಾಡುವುದಿಲ್ಲ. ಆಸಕ್ತಿಯಿಂದ ಕೇಳಿದವರಿಗೆ ಉದಾರವಾಗಿ ನೀಡಿದ್ದಾರೆ. ಪೇಟೆ ಪಟ್ಟಣವಿರಲಿ, ಹಳ್ಳಿಯೇ ಇರಲಿ ಎಲ್ಲೂ ಬೆಳೆದುಕೊಳ್ಳಬಹುದು. ಮನೆ ಮತ್ತು ಸುತ್ತು ಮುತ್ತಲ ಅಂದ ಹೆಚ್ಚಿಸಿಕೊಳ್ಳಬಹುದು. ಯಾವುದೇ ಖರ್ಚು ವೆಚ್ಚಗಳಿಲ್ಲ ಎನ್ನುತ್ತಾರೆ ಯತೀಶ್ ಕಿದಿಯೂರು. ಈ ಬಾರಿಯ ದೇವಿ ಸನ್ನಿಧಿಯಲ್ಲಿ ಇವರ ಬಾಟಲ್ ಗಾರ್ಡನ್ ಬಹಳಷ್ಟು ಜನರನ್ನು ಸೆಳೆದಲ್ಲದೆ ಅದು ಸೆಲ್ಪಿಯ ತಾಣವಾಯಿತು. ಕೆಲವರಿಗೆ ಅರೆ!!…ತಾವು ಕೂಡಾ ಇಂತದೇ ಪ್ರಯತ್ನಗಳನ್ನು ಮಾಡಬಹುದಲ್ಲ! ಎಂಬ ಪ್ರೇರಣೆ ಮೂಡಿಸಿತು.

ಯತೀಶ್ ಅವರು ಹಳೆಯ ಡ್ರಮ್ಮು ಹಾಗೂ ಬಕೆಟ್‌ಗಳನ್ನು ಬಳಸಿಕೊಂಡು ಬೆಂಡೆ, ಹೀರೇಕಾಯಿ, ಅಲಸಂಡೆ, ಬಸಳೆ, ಪೇರಳೆ, ಸೀತಾಫಲ, ನಕ್ಷತ್ರ ಹಣ್ಣು, ಮಿರಾಕಲ್ ಪ್ರುಟ್ ಸೇರಿದಂತೆ ತಮ್ಮ ಮನೆ ಬಳಕೆಗೆ ಬೇಕಾಗುವ ತರಕಾರಿಗಳನ್ನು, ಕೆಲವು ಹಣ್ಣುಗಳನ್ನು ಬೆಳೆಸಿಕೊಂಡಿದ್ದಾರೆ.

-ಚಿತ್ರ : ರಾಮ್ ಅಜೆಕಾರ್

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group