ಕೊಯ್ಲು ಮಾಡಿದ ಫಸಲನ್ನು ಗಾಳಿಗೆ ತೂರಿ ಹಸನುಗೊಳಿಸುವುದು ಸಾಮಾನ್ಯವಾದ ಸಾಂಪ್ರದಾಯಿಕ ಪದ್ಧತಿ. ಅದೂ ಸುಲಭದ ಕೆಲಸವಲ್ಲ. ಕಾಳುಗಳನ್ನು ಸ್ವಚ್ಛಗೊಳಿಸುವುದಕ್ಕೆ ಕೆಲಸದಾಳುಗಳು ಬೇಕು. ಅದಕ್ಕಾಗಿ ಒಂದಿಷ್ಟು ಹಣ ಖರ್ಚು ಮಾಡಬೇಕಾಗುತ್ತದೆ.. ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಖರ್ಚು ವೆಚ್ಚಗಳನ್ನು ಉಳಿಸಿಕೊಳ್ಳುವುದಕ್ಕೆ ಯಾವುದಾದರೂ ಉಪಯುಕ್ತವಾಗುವ ಕಡಿಮೆ ಖರ್ಚಿನ ಉಪಕರಣಗಳು ಬೇಕಾಗುತ್ತದೆ. ರೈತರ ಸಮಸ್ಯೆಗಳನ್ನು ಅರಿತು ಧಾರವಾಡ ಕೃಷಿ ವಿವಿಯ ಪದವಿ ವಿದ್ಯಾರ್ಥಿಗಳು ರೈತರೇ ತಯಾರಿಸಿಕೊಳ್ಳಬಹುದಾದ ಸುಲಭದ ಸಾಧನಗಳನ್ನು ತಯಾರಿಸಿದ್ದಾರೆ.
ಈ ಬಾರಿ ನಡೆದ ವಿವಿಯ ಕೃಷಿಮೇಳದಲ್ಲಿ ಕಾಳುಗಳನ್ನು ಸ್ವಚ್ಛಗೊಳಿಸುವ, ತೊಗರಿ ಚಿಗುರು ಕತ್ತರಿಸುವ ಸಾಧನಗಳನ್ನು ವಿದ್ಯಾರ್ಥಿಗಳು ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆಗೆ ಇರಿಸಿದ್ದರು. ಇವು ರೈತರನ್ನು ಆಕರ್ಷಿಸುವಲ್ಲಿ ಯಶಸ್ವಿಯಾದವು.
ಕಾಳು ಸ್ವಚ್ಛಗೊಳಿಸುವ ಸಾಧನ ಹೆಚ್ಚಿನ ಖರ್ಚುವೆಚ್ಚದಲ್ಲ. ಪ್ಲಾಸ್ಟಿಕ್ ಡ್ರಮ್, ಮನೆಯಲ್ಲಿರಬಹುದಾದ ಟೇಬಲ್ ಪ್ಯಾನ್, ಕಬ್ಬಿಣದ ಸ್ಟ್ಯಾಂಡ್ ಇದ್ದರೆ ಸಾಕು. ಮುಚ್ಚಳವಿಲ್ಲದ ಡ್ರಮ್ಮಿನ ತಳ ಭಾಗವನ್ನು ವೃತ್ತಾಕಾರವಾಗಿ ಕತ್ತರಿಸಿ ನಂತರ ಕಬ್ಬಿಣದ ಸ್ಟಾöಡ್ ಅಥವಾ ಅನುಕೂಲಕರವಾದ ಸುಲಭದ ಇನ್ನಾವುದೆ ಉಪಕರಣದಲ್ಲಿ ಇಳಿಜಾರಾಗಿ ಇರಿಸಿಕೊಳ್ಳಬೇಕು. ಮನೆಯಲ್ಲಿದ್ದ ಟೇಬಲ್ ಫ್ಯಾನ್ ಡ್ರಮ್ಮಿನ ಕತ್ತರಿಸಿದ ಭಾಗದಲ್ಲಿ ಸರಿ ಹೊಂದುವಂತೆ ಇರಿಸಿ ಸ್ವಿಚ್ ಹಾಕಿದರೆ ಸಾಕು.
ಡ್ರಮ್ಮಿಗೆ ಹಾಕಿದ ಕಾಳುಗಳು ಜಾರುತ್ತಾ ಹೋದಂತೆ ಕಸ ಕಡ್ಡಿಗಳು, ಜೊಳ್ಳು ಫ್ಯಾನ್ ಗಾಳಿಯ ರಭಸಕ್ಕೆ ಹಾರಿ ಹೋದರೆ ಸ್ವಚ್ಛ ಕಾಳುಗಳು ಕೆಳಗಿರಿಸಲಾದ ಶೇಖರಣಾ ಬುಟ್ಟಿ ಅಥವಾ ಚೀಲಗಳಲ್ಲಿ ತುಂಬಿಕೊಳ್ಳುತ್ತವೆ. ಮನೆಯಲ್ಲಿರುವ ಹಿರಿಯರು ಕಿರಿಯರು ಯಾರೂ ಬೇಕಾದರೂ ಕಾಳುಗಳನ್ನು ಅನಾಯಾಸವಾಗಿ ಸ್ವಚ್ಛಗೊಳಿಸಬಹುದು. ಆಳುಕಾಳುಗಳನ್ನು ನೆಚ್ಚಿಕೊಳ್ಳಬೇಕೇಂದಿಲ್ಲ. ಹೆಚ್ಚು ಶ್ರಮ ಮತ್ತು ಖರ್ಚುವೆಚ್ಚಗಳಿಲ್ಲದೆ ಕೃಷಿಕರೇ ಇದನ್ನು ಮನೆಯಲ್ಲಿ ತಯರಿಸಿಕೊಂಡು ಕಾಳುಗಳನ್ನು ಸ್ವಚ್ಛ ಮಾಡಿಕೊಳ್ಳಬಹುದು.