-ಗಣಪತಿ ಹಾಸ್ಪುರ ಚವತ್ತಿ
ಕೃಷಿಕರು ಇಂದು ತಮ್ಮ ಗದ್ದೆ – ತೋಟಗಳನ್ನು ಆಧುನಿಕ ವ್ಯವಸ್ಥೆ ಯ ಅಡಿಯಲ್ಲಿ ವೈಜ್ಞಾನಿಕ ವಿಧಾನದಲ್ಲಿಯೇ ಅಭಿವೃದ್ಧಿ ಮಾಡುತ್ತಿದ್ದಾರೆ.ಅದ್ರಲ್ಲಿಯೂ ಆರ್ಥಿಕವಾಗಿ ಸದೃಢವಾಗಿ ಇದ್ದವರು, ಹೊಸ ಹೊಸ ಪದ್ದತಿ ಬಂದಾಕ್ಷಣ ಅದು ತಮ್ಮ ಭೂಮಿಗೆ ಸೂಕ್ತ ಏನಿಸಿದರೇ ; ತಮ್ಮಗೆ ಅನುಕೂಲ ಆಗುವಂತಿದ್ದರೇ,ಅದ್ರ ಬಗ್ಗೆ ಸಾಕಷ್ಟು ಮಾಹಿತಿಯನ್ನು ಪಡೆದುಕೊಂಡು ಆ ವ್ಯವಸ್ಥೆ ಯನ್ನು ಅಳವಡಿಸಿಕೊಳ್ಳಲು ಆಸಕ್ತಿ ವಹಿಸುತ್ತಾರೆ.
ಅದು ನೀರಾವರಿ ಆಗಿರಬಹುದು,ತಮ್ಮ ಸಾಗುವಳಿ ಕೃಷಿ ಭೂಮಿಯ ಸುತ್ತ ಓಡಾಡಲು ರಸ್ತೆಯಾಗಿರಬಹುದು, ಬಸಿ ಕಾಲುವೆಯ ವಿಚಾರವಾಗಿರಬಹುದು,ಯಂತ್ರಗಳನ್ನು ಬಳಕೆ ಮಾಡುವ ಪದ್ದತಿ ಆಗಿರಬಹುದು….ಹೀಗೆ ಯಾವುದನ್ನೆ ಆದರೂ ಆ ವ್ಯವಸ್ಥೆ ತಮಗೆ ಸೂಕ್ತ ಏನಿಸಿದರೇ, ಅದ್ನ ಅಳವಡಿಸಿಕೊಳ್ಳಲು ಈಗೀನ ಕೃಷಿಕರು ಹೆಚ್ಚಿನ ಆಸಕ್ತಿ, ಕಾಳಜಿಯಿಂದ ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ.
ಅದೇ ರೀತಿಯಲ್ಲಿ ತಮ್ಮ ಗದ್ದೆ – ತೋಟ ದಲ್ಲಿ ಅವಶ್ಯಕತೆ ಇರುವಲ್ಲಿ “ಸಂಕ” ವನ್ನು ಹಾಕಿಕೊಳ್ಳಿವಲ್ಲಿಯೂ ಬಹಳ ಮುತುವರ್ಜಿಯಿಂದ ಅಳವಡಿಸಿಕೊಳ್ಳುತ್ತಾರೆ. ಸಂಕದಲ್ಲಿಯೂ ವೈವಿಧ್ಯತೆ! ಬಹುಶಃ ಮಲೆನಾಡಿನ ಅಡಿಕೆ ಬೆಳೆಗಾರರು ಹಾಕಿಕೊಳ್ಳುವಷ್ಟು ‘ಸಂಕ’ಗಳು ಬೇರೆಯಲ್ಲಿಯೂ ಕಾಣಲು ಸಿಗಲಾರದೇನೋ ? ಏಕೆಂದರೇ ಇಲ್ಲಿನ ತೋಟಪಟ್ಟಿ , ಭತ್ತದ ಭೂಮಿ ಇರುವ ಬೆಳೆಗಾರರು ತಮ್ಮ ಕೃಷಿ ಭೂಮಿಯಲ್ಲಿ ಹೊರಗಿನ ನೀರು ಸರಾಗವಾಗಿ ಹರಿದುಹೋಗಲು ತಲೆಗಾಲುವೆ, ಮಂಡಗಾಲುವೆ,ಚೀಫ್ ಕಾಲುವೆ..ಹೀಗೆ ವಿವಿಧ ಹೆಸರಿನಿಂದ ಕರೆಯುವ ಕಾಲುವೆಗಳನ್ನು ಮಾಡಿಕೊಂಡಿರುತ್ತಾರೆ.
ಹೀಗೆ ಕರೆಯಲ್ಪಡುವ ಕಾಲುವೆಗಳ ಆಕಾರ, ಗಾತ್ರಗಳು ಸಹ ಭಿನ್ನ ಭಿನ್ನವಾಗಿ ಇರುತ್ತವೆ. ಗದ್ದೆ ಅಥವಾ ತೋಟದಲ್ಲಿ ನೀರು ಬಸೀದು ಹೋಗಲು ಮಾಡಿಕೊಂಡ ಈ ಬಗೆಯ ಕಾಲುವೆಗಳನ್ನು ಸರಾಗವಾಗಿ ದಾಟಲು ರೈತರು ಸಂಕವನ್ನು ಹಾಕಿಕೊಳ್ಳುವುದು ಅನಿವಾರ್ಯ. ಹಿಂದೆಲ್ಲ ಅಡಿಕೆ ಮುಂಡಿಯನ್ನೊ, ಭರಣಿ ಮರದ ಒಡಪೆ, ಕಾಡು ಜಾತಿಯ ಮರದ ತುಂಡು …ಹೀಗೆ ಅತೀ ಸುಲಭದಲ್ಲಿ, ಕಡಿಮೆ ಖರ್ಚಿನಲ್ಲಿ ಆಗಬಹುದಾದ , ತುಸು ಬಾಳಿಕೆ ಬರುವ ವಸ್ತುಗಳನ್ನೇ ವ್ಯವಸ್ಥಿತವಾಗಿ ಹಾಕಿಕೊಂಡು ಬಳಕೆ ಮಾಡುತ್ತಿದ್ದರು.ಗಿಡಮರಗಳನ್ನು ಉಳಿಸಿ ಬೆಳೆಸಬೇಕೆಂಬ ಕಾರಣಕ್ಕೊ, ಸಮೀಪದಲ್ಲಿ ತಮಗೆ ಬೇಕಾದ ಸೈಜಿನ ಗಿಡಗಳು ಸಿಗದೇ ಇರುವ ಕಾರಣಕ್ಕೊ ಏನೊ ಇಂದು ಕಾಲುಸಂಕಕ್ಕೆ ಪರ್ಯಾಯ ವ್ಯವಸ್ಥೆ ಬರಲು ಆರಂಭವಾಯ್ತು.
ಕ್ರಮೇಣ ರೈತರು ಆರ್ಥಿವಾಗಿ ಸದೃಢವಾದಂತೆ, ಸಮಾಜದಲ್ಲಿಯೂ ಸುಧಾರಣೆ ಪರ್ವ ಆರಂಭ ಆದಂತೆ ಸಿಮೆಂಟ್ ನಿಂದ ಸಿದ್ದಗೊಂಡ ಸಂಕವನ್ನೊ,ವಿವಿಧ ಗಾತ್ರದ ಕಲ್ಲುಕಂಬವನ್ನೊ,ಚಪ್ಪಡಿ ಕಲ್ಲುಗಳನ್ನೊ ,.ಹೀಗೆ ಅವರಿಗೆ ಅನುಕೂಲ ,ಇಷ್ಟವಾದ ಸಂಕಗಳ ಬಳಕೆ ಮಾಡುವುದು ರೂಢಿಗೆ ಬಂದಿತು.ಬಾಳಕೆ ದೃಷ್ಟಿಯಿಂದ ಆಗಿರಲಿ, ಅದ್ರ ಸಾಮರ್ಥ್ಯ ,ಸೇಫ್ಟಿ ಯಿಂದ ನೋಡಿದರೂ ಈ ಸುಧಾರಿತ ಸಂಕಗಳು ಉತ್ತಮ ಎಂಬುದು ಹಲವಾರು ಕೃಷಿಕರ ಅನುಭವದ ಮಾತು.
ಒಟ್ಟಿನಲ್ಲಿ ಈಗ ಎಲ್ಲರ ಮನೆಯ ತೋಟ – ಗದ್ದೆಗಳಲ್ಲಿ ಇರುವ “ಕಾಲುಸಂಕ” ಗಳು,ವಾಹನಗಳು ಓಡಾಡುವ ರಸ್ತೆಗಳು ಬರುವ ಕಾಲುವೆಗಳಿಗೂ ಸಹಾ ಆಧುನಿಕ ಸ್ಪರ್ಶ ಪಡೆದುಕೊಂಡಿದ್ದು ಸುಳ್ಳಲ್ಲ. ರಸ್ತೆಯಲ್ಲಿಯೂ ಸುಧಾರಣೆ! ಮಲೆನಾಡಿನ ಕೃಷಿಕರು ತಮ್ಮ ಮನೆ – ಕೃಷಿಭೂಮಿಯ ಸುತ್ತ ಮುತ್ತ ಇರುವ ಬೆಟ್ಟ – ಗುಡ್ಡಗಳಿಂದ ಹರಿದು ಬರುವ ನೀರಿನಿಂದ ಮನೆಗಾಗಲಿ, ಕೃಷಿ ಭೂಮಿಗಾಗಲಿ ಅಪಾಯ ಆಗಬಾರದು ಎನ್ನುವ ಉದ್ದೇಶದಿಂದ “ಅಗಳ”( ದೊಡ್ಡ ಕಾಲುವೆ)ವನ್ನು ಮಾಡಿಕೊಳ್ಳುತ್ತಾರೆ.
ಇದ್ರಲ್ಲಿ ಜನ ದಾಟಲು ಕಾಲುಸಂಕ, ವಾಹನ ದಾಟಲು ಸಿಮೆಂಟ್ ಪೈಫ್ ಹಾಕಿಕೊಳ್ಳುತ್ತಾರೆ.ಅದ್ರಲ್ಲಿಯೂ ದೊಡ್ಡ ಕಾಲುವೆ ಮೂಲಕ ಮನೆಗೆ ಬರುವ ದಾರಿಗೆ ಈಗ ಕಬ್ಬಿಣದ ಪೈಫ್ ನ್ನು ಹಾಕಿಕೊಳ್ಳುವುದೋ, ಅಥವಾ ಕಲ್ಲುಕಂಬಗಳನ್ನು ಜೋಡಿಸಿ ಹಾಕಿಕೊಳ್ಳವುದನ್ನು ಕಾಣಬಹುದು. ಈ ವ್ಯವಸ್ಥೆ ಅವರವರ ಆರ್ಥಿಕ ಬಲ, ಸಾಮರ್ಥ್ಯ, ಆಸಕ್ತಿಯ ಮೇಲೆ ಅವಲಂಬಿತವಾಗಿದೆ.
ಮನೆಗೆ ಬರುವ/ ತೋಟಗಳಿಗೆ ಹೋಗುವ ದೊಡ್ಡ ಕಾಲುವೆಗಳಿಗೆ ಸಿಮೆಂಟ್ ನ ಪೈಫ್/ ಚಪ್ಪಡಿ ಕಲ್ಲು ಗಳನ್ನು ನಾಜೂಕಿನಿಂದ ಹಾಕಿ ಅದ್ರ ಮೇಲೆ ಸಾಕಷ್ಟು ಪ್ರಮಾಣದಲ್ಲಿ ಮಣ್ಣುಗಳನ್ನು ಹಾಕಿಕೊಂಡು ವಾಹನ ಓಡಾಡಲು ವ್ಯವಸ್ಥೆ ಮಾಡಿಕೊಳ್ಳುತ್ತಾರೆ. ಆದರೇ, ಅದ್ಕೆ ಸರಗೋಲು/ ಕಬ್ಬಿಣದ ಗೇಟು ಮಾಡಿಕೊಳ್ಳಲೆ ಬೇಕು.ಈ ವ್ಯವಸ್ಥೆ ಮಾಡಿಕೊಂಡರೇ ಹೆಚ್ಚುವರಿ ಖರ್ಚು ಮಾಡುವುದು ಅನಿವಾರ್ಯ. ಇದ್ರ ಬದಲಾಗಿ ಕಬ್ಬಿಣದ ರೌಂಡ್ ಪೈಫ್ ಗಳನ್ನು ವ್ಯವಸ್ಥಿತ ವಾಗಿ ಹಾಕಿಕೊಂಡರೇ ಪ್ರತ್ಯೇಕ ಗೇಟ್ ಮಾಡಿಕೊಳ್ಳುವ ಅವಶ್ಯಕತೆಯೂ ಇಲ್ಲ, ಪ್ರಾಣಿಗಳು ಸಹಾ ಸುಲಭವಾಗಿ ದಾಟಿ ಬರಲು ಸಾಧ್ಯವಾಗಲಾದು ಎಂಬುದು ಅನೇಕ ಕೃಷಿ ಮಿತ್ರರ ಅಂಬೋಣ.ಒಟ್ಟಾರೆ ಆಧುನಿಕ ಯುಗದಲ್ಲಿ ಮಲೆನಾಡಿನ ಕೃಷಿಕರು ಕೇವಲ ಕೃಷಿ ಭೂಮಿಯನ್ನು ಸುಧಾರಣೆಯ ಪದ್ದತಿಯಲ್ಲಿ ಅಭಿವೃದ್ಧಿ ಮಾಡಿದಂತೆ, ತಮಗೆ ನಿತ್ಯ ಬಳಕೆಗೂ ಬೇಕಾಗುವ ಸಂಕಗಳನ್ನು ಸಹಾ ಸುಧಾರಿತ ವಿಧಾನದಲ್ಲಿ ಅಳವಡಿಕೊಳ್ಳಲು ಪ್ರಯತ್ನ ಮಾಡಿರುವುದು ನಿಜಕ್ಕು ಹೆಮ್ಮೆಯ ಸಂಗತಿ.