-ಎಂ.ಟಿ. ಶಾಂತಿಮೂಲೆ, ಪೈಲಾರ್
ಜೇನು ಮತ್ತು ಮಾನವ ನಂಟು ಸಾವಿರಾರು ವರ್ಷಗಳ ಹಿಂದಿನದು. ವೇದ ಕಾಲದಲ್ಲೇ ಉಲ್ಲೇಖಿಸಲಾದ ವಿಚಾರ. ಆಯುರ್ವೇದದಲ್ಲಿ ಮೊದಲ ಪ್ರಾಶಸ್ತö್ಯ. ಸಂಸ್ಕೃತಿಯಲ್ಲಿ ಮಗು ಹುಟ್ಟಿದ ಆರಂಭದಲ್ಲಿ ಮನೆಯವರು-ನೆಂಟರು ಬಂದಾಗ ಮಗುವಿಗೆ ಜೇನು ನೆಕ್ಕಿಸಲು ಮರೆಯುವುದಿಲ್ಲ. ತಾಯಿ ಹಿರಿಯರಿಗೆ ಮಗುವನ್ನು ನೀಡುವಾಗ ಜೇನು ನೆಕ್ಕಿಸಿ ಉಡುಗೊರೆ ಕೊಡುವ ಸಂಸ್ಕೃತಿ ಇನ್ನೂ ಜೀವಂತವಾಗಿದೆ.
ಮುಂದುವರಿದ ಮಾನವ ಜೇನನ್ನು ತನ್ನ ಮನೆ ಪಕ್ಕದಲ್ಲೇ ತಂದಿಟ್ಟು ಸಾಕಿ ಜೇನು ಪಡೆಯಲು ಆರಂಭಿಸಿದ. ಮುಂದೆ ಮುಂದುವರಿದ ರಾಷ್ಟ್ರಗಳಲ್ಲಿ ಪೆಟ್ಟಿಗೆಯಲ್ಲಿ ಜೇನು ಸಾಕಣೆ ಆರಂಭಿಸಿದರು. ಅದು ಭಾರತಕ್ಕೂ ಕಾಲಿಟ್ಟು ಆಧುನಿಕ ಜೇನು ಕೃಷಿಗೆ ನಾಂದಿ ಹಾಡಿತ್ತು. ರಾಷ್ಟ್ರದ ಅನೇಕ ರಾಜ್ಯಗಳಲ್ಲಿ ಕೃಷಿಕರೇ ಜೇನು ಕೃಷಿ (ಸಾಕಣೆ) ಮಾಡುತ್ತಿರುವುದು. ಕೃಷಿಕನು ಆದರಿಂದ ದ್ವಿಮುಖ ಲಾಭ ಪಡೆಯುವುದು ಸಂತಸದ ವಿಷಯ. ಗಳಿಕೆ ಹೆಚ್ಚಾದರೆ ಖರ್ಚು ವೆಚ್ಚವನ್ನು ನಿಭಾಯಿಸುವುದು ಸುಲಭ ಎನ್ನುವುದನ್ನು ಕೃಷಿಕ ಮರೆಯಬಾರದು
ಜೇನು ಸಾಕಾಣಿಕೆಯ ಹುಚ್ಚು ನನ್ನ ಬಾಲ್ಯದ ೨೦ನೇ ವರ್ಷದಿಂದ ಆರಂಭ. ಯಾವುದೇ ತರಬೇತಿ ಪಡೆದಿರಲಿಲ್ಲ. ಅವರಿವರಲ್ಲಿ ಕೇಳಿ ಕಲಿತದ್ದು ಕಡಿಮೆ. ಮುಂದೆ ಕಲಿತದ್ದು ಜೇನ್ನೊಣಗಳಿಂದಲೇ. ಜೇನು ಸಾಕಾಣಿಕೆ ಎಂದರೆ ಜೇನು ನೊಣಗಳನ್ನು ಉಪಾಯದಿಂದ ಪೆಟ್ಟಿಗೆಗೆ ತುಂಬಿ ಅವುಗಳಿಂದ ಬಾಡಿಗೆ ರೂಪದಲ್ಲಿ ಜೇನು ಪಡೆಯಬಹುದು. ನೊಣಗಳ ಸ್ವಭಾವ ಅವುಗಳ ಜೀವನ ವಿಧಾನ ಮುಖ್ಯವಾಗಿ ನಾವು ಅಭ್ಯಾಸ ಮಾಡಬೇಕಿದೆ. ನೋಣಗಳಿಂದ ಕಲಿಯಲು ಏನಿದೆ?
ಆಗ ನಾನು ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದೆ. ಅದೊಂದು ಮಳೆಗಾಲ ಕೊನೆಯಾಗುವ ಸಂದರ್ಭ. ಶಾಲೆಯಿಂದ ಮರಳುವಾಗ ಹನಿ ಮಳೆಗೆ ಕೊಡೆ ಬಿಡಿಸಿ ಕಾಡು ದಾರಿಯಲ್ಲಿ ಸಂಚರಿಸಿ ಮನೆಗೆ ಬರುವಾಗ ದೊಡ್ಡ ಮರವನ್ನು ಆವರಿಸಿದ್ದ ಪಲ್ಲೆ ಕಾಯಿ ಬಳ್ಳಿಯ ದಪ್ಪನೆಯ ಬಾಗಿದ ಜಾಗದಲ್ಲಿ ತೊಡುವೆ ಜೇನು ನೊಣಗಳ ಹಿಂಡು ಕುಳಿತಿತ್ತು. ಜೇನು ಕುಟುಂಬವನ್ನು ಕಂಡು ಸಂತಸವಾಯಿತು. ನನ್ನಲ್ಲಿ ಆಗ ಇದ್ದಿದ್ದು ಎರಡೇ ಜೇನು ಗೂಡು. ಒಂದರಲ್ಲಿ ಆಗಲೇ ಹುತ್ತದಿಂದ ತುಂಬಿದ ನೊಣಗಳ ಕುಟುಂಬವಿತ್ತು. ಇನ್ನೊಂದು ಖಾಲಿ. ಕುಟುಂಬವನ್ನು ಕಂಡು ಹೇಗಾದರೂ ಅವುಗಳನ್ನು ಮನೆಗೆ ತಂದು ಗೂಡಿಗೆ ವರ್ಗಾಯಿಸಬೇಕೆಂದು ಯೋಚನೆಯಾಯಿತು. ಮಳೆ ಬೀಳುತ್ತಿತ್ತು. ಹೇಗೆ ಕುಟುಂಬವನ್ನು ಒಯ್ಯುವುದು ಯೋಚಿಸಿದೆ.
ತಕ್ಷಣ ತಲೆಯೋಡಿಸಿ ಕೊಡೆಯ ಒಂದು ಬದಿಯನ್ನು ಜೇನು ಕುಟುಂಬ ಕುಳಿತಿದ್ದ ಭಾಗಕ್ಕೆ ಸರಿಸಿ ಹಿಡಿದೆ. ಇನ್ನೊಂದು ಕೈಯಲ್ಲಿ ಮೃದುವಾಗಿ ಅವುಗಳನ್ನು ಕೊಡೆಯೊಳಗೆ ನೇವರಿಸಿದಾಗ ನೊಣಗಳೆಲ್ಲಾ ಹಿಂಡು ಹಿಂಡಾಗಿ ಕೊಡೆಯೊಳಗೆ ಆಶ್ರಯ ಪಡೆದವು. ಮಳೆ ನೀರಿನಿಂದ ಅಲ್ಪ-ಸ್ವಲ್ಪ ಒದ್ದೆಯಾದವುಗಳಿಗೆ ಸಂತಸವಾಗಿರಬೇಕು. ಕೊಡೆಯನ್ನು ಹಾಗೆಯೇ ಮೆತ್ತಗೆ ಅಲುಗಾಡದಂತೆ ಹಿಡಿದು ಮನೆ ಕಡೆಗೆ ಧಾವಿಸಿದೆ. ಮನೆಗೆ ಬಂದ ಬಂದವನೇ ಖಾಲಿ ಪೆಟ್ಟಿಗೆಯನ್ನು ತಂದು ಮುಚ್ಚಳ ತೆರೆದು ಕೊಡೆಯ ನೊಣಗಳಿಂದ ಭಾಗವನ್ನು ಪೆಟ್ಟಿಗೆ ಬದಿಗಿಟ್ಟು ಕೊಡೆಯನ್ನು ಅಲುಗಾಡಿಸಿದೆ. ಪೆಟ್ಟಿಗೆಯ ಒಳಭಾಗ ಕತ್ತಲಾಗಿತ್ತು. ಕಾರಣ ಕೊಡೆಯ ನೆರಳು. ನೊಣಗಳೆಲ್ಲಾ ಪೆಟ್ಟಿಗೆಯೊಳಗೆ ಸೇರಿದವು. ಮುಚ್ಚಳ ಮುಚ್ಚಿ ಗೇಟು ಹಾಕಿದೆ. ನನ್ನ ಕೆಲಸ ಆಯ್ತು. ಇನ್ನು ಏನಿದ್ದರೂ ನಿಮ್ಮದು ಎಂದಿದ್ದೆ ಮನದಲ್ಲಿ. ತೊಡುವೆ ಜೇನ್ನೊಣಗಳು ಕತ್ತಲವಾಸಿಗಳು. ಸೂರ್ಯ ಕಿರಣಗಳಿಂದ ಎಚ್ಚರಗೊಂಡು ತಮ್ಮ ಸಂಘಟನೆಯಲ್ಲಿ ಕೆಲಸ ಮಾಡುವ ಜೀವಿಗಳು. ಎನ್ನುವುದು ವೇದ್ಯವಾಗುತ್ತದೆ.
ಅದೊಂದು ಭಾನುವಾರದ ರಜೆಯಲ್ಲಿ ಮನೆಯಲ್ಲಿ ಕೆಲಸ ಮಾಡುತ್ತಿದ್ದೆ. ಅಂಗಳದಲ್ಲಿ ಅಡಿಕೆ ಹರಡಿಕೊಂಡಿದ್ದೆ. ಜೇನ್ನೊಣಗಳ ಝೇಂಕಾರ ಕೇಳಿಸಿತು.ಆಕಡೆ ಗಮನ ಹರಿಸಿದರೆ ನೊನಗಳು ತಗ್ಗಿನಲ್ಲೇ ಹಾರಾಡಿ ಬಂದು ಮನೆ ಮುಂದಿನ ಮಾವಿನ ಮರದ ಕೊಂಬೆಯಲ್ಲಿ ಸೇರಿಕೊಂಡವು. ಅಷ್ಟರಲ್ಲೇ ಇನ್ನೊಂದು ಭಾಗದ ದಿಕ್ಕಿನಿಂದಲೂ ನೊಣಗಳು ಬಂದು ಅವುಗಳ ಜತೆ ಸೇರಿದ್ದವು. ಬಹುಶಃ ದಿಕ್ಕು ತಪ್ಪಿ ಬಂದ ನೋಣಗಳೆಂದು ತಿಳಿದೆ. ಜಗಲಿಯ ಬದಿಯಲ್ಲಿ ಇಟ್ಟಿದ್ದ ಖಾಲಿ ಪೆಟ್ಟಿಗೆ ತಂದು ಮುಚ್ಚಳ ತೆಗೆದಿಟ್ಟು ಸ್ವಲ್ಪ ಜೇನು ತಂದು ಮೇಲ್ಬಾಗಕ್ಕೆ ಸಿಂಪಡಿಸಿದೆ. ಜೇನಿನ ವಾಸನೆಗೆ ಅವುಗಳು ಬೇಗ ಆಕರ್ಷಿತವಾಗಿ ಪೆಟ್ಟಿಗೆ ಸೇರಬಹುದು. ಎನ್ನುವ ಆಶಯ. ಪೆಟ್ಟಿಗೆಯ ಮೇಲ್ಬಾಗಕ್ಕೆ ಒಂದಿಂಚು ಖಾಲಿ ಬಿಟ್ಟು ಬೈರಾಸಿನಿಂದ ಮುಚ್ಚಿದೆ. ಎತ್ತರ ಸ್ಟೂಲ್ ತಂದು ಪೆಟ್ಟಿಗೆ ಹಿಡಿದು ಹತ್ತಿದೆ. ನೊಣಗಳಿದ್ದ ಕೊಂಬೆಯ ಒಂದು ಬದಿಗೆ ತೆರೆದ ಭಾಗವನ್ನು ಸೇರಿಸಿ ನೊಣಗಳನ್ನು ಒಳ ಸೇರುವಂತೆ ಸ್ವಲ್ಪ ಸರಿಸಿದೆ. ಎಲ್ಲ ನೊಣಗಳು ಒಳ ಬರಲಾರಂಬಿಸಿದವು.
ರಾಣಿ ನೊಣ ಚುರುಕಾಗಿತ್ತು. ಕಣ್ಣಿಗೆ ಕಾಣುತ್ತಿದ್ದಂತೆ ಗೂಡು ಸೇರಿತು. ಜತೆಗೆ ಮತ್ತೊಂದು ರಾಣಿ ಕೂಡಾ ಮುಖದ್ವಾರಾದಲ್ಲಿ ಕಂಡಿತು. ಅಚ್ಚರಿ ಪಡುವುದು ನನ್ನ ಪಾಲಿಗೆ ಒಂದು ಹೊಸ ಪಾಠವಾಗಿತ್ತು. ಏನೇ ಆಗಲಿ ಎಂದು ನಿಶ್ಚಯಿಸಿ ರಾಣಿ ಪಂಜರ ತಂದು ರಾಣಿಯನ್ನು ರೆಕ್ಕೆಯಲ್ಲಿ ಹಿಡಿದು ಪಂಜರ ಸೇರಿಸಿದೆ. ಮೆಲ್ಲ ಮುಚ್ಚಳ ತೆಗೆದು ಪಂಜರವನ್ನು ಒಳಗಿಟ್ಟೆ. ಮುಚ್ಚಿದ ಬೈರಾಸನ್ನು ನಿಧಾನವಾಗಿ ತೆಗೆದೆ. ಒಂದು ಕುಟುಂಬ ಗೂಡಿಗೆ ಸೇರಿದ ಸಂತೋಷ ಒಂದು ಕಡೆಯಾದರೆ ಎರಡು ರಾಣಿ ನೊಣಗಳು ಹೇಗೆ ಬಂದವು ಎನ್ನುವ ಸಮಸ್ಯೆಗೆ ಉತ್ತರ ಕಂಡುಕೊಳ್ಳಲು ಆಗಲಿಲ್ಲ. ನನ್ನ ಮಿತ್ರರೊಬ್ಬರನ್ನು ಹೋಗಿ ಭೇಟಿಯಾಗಿ ವಿಷಯ ತಿಳಿಸಿದೆ. ಅವರ ಹೇಳಿಕೆಯು ನನಗೊಂದು ಪಾಠವಾಗಿತ್ತು.
ಹೊಸ ಮನೆಯನ್ನು ಹುಡುಕಲು ಮೂಲ ಸ್ಥಾನದಿಂದ ಹೊರಟ ಎರಡು ಕುಟುಂಬಗಳು ಆಕಾಶದಲ್ಲಿ ಹಾರಾಡುವಾಗ ಗೊತ್ತಿಲ್ಲದೆ ಒಂದಾಗಿ ಮುಂದೆ ಹೋಗಿ ಎರಡು ಒಂದಾಗಿತ್ತು. ಆಕಾಶದಲ್ಲಿ ಹಾರಾಡುವಾಗ ಮೈವಾಸನೆ ಕಳೆದು ಹೋಗಿ ಎಲ್ಲರೂ ನಮ್ಮವರೇ ಎಂದು ತಿಳಿದು ಹೀಗೆ ಒಂದಾಗುತ್ತವೆಯಂತೆ. ಮತ್ತೆ ಮುಂದೆ ಎಲ್ಲಾದರೂ ವಿಶ್ರಮಿಸಿ ಹೊಸ ಮನೆ ಹುಡುಕಿ ಬಂದು ತಮ್ಮ ಬಳಗವನ್ನು ಕರೆಯುತ್ತವೆ. ಆಗ ಒಂದು ರಾಣಿ ಆ ಬಳಗದ ಜತೆ ಸೇರಿಕೊಂಡು ಹೊಸ ಮನೆ ಸೇರುತ್ತದೆ. ಇದು ಹೆಚ್ಚಾಗಿ ಮುಂಜಾನೆ ಎಂಟು-ಒಂಬತ್ತರ ಹೊತ್ತಿಗೆ ನಡೆಯುತ್ತದೆ. ಮತ್ತೊಂದು ರಾಣಿ ನೊಣ ಉಳಿದ ನೊಣಗಳೊಂದಿಗೆ ಇನ್ನೊಂದು ವಿಭಾಗವಾಗಿ ಮುಂದೆ ಸಾಗಿ ಹೊಸ ತಾಣ ಸೇರುತ್ತದೆ. ಒಂದು ಕುಟುಂಬಕ್ಕೆ ಒಂದೇ ರಾಣಿ. ಎರಡಾದರೆ ಎರಡು ಮನೆ ನಿಯಮ. ಜೇನು ನೊಣಗಳು ತಮ್ಮ ಬದುಕಿಗೆ ತಮ್ಮದಾದ ಸಂಸ್ಕೃತಿಯ ಸಂವಿಧಾನ ರೂಪಿಸಿಕೊಂಡಿವೆ.
ಮುಂಜಾನೆ ಎದ್ದಾಗ ಹಿಂದಿನ ದಿನ ಪಂಜರದಲ್ಲಿಟ್ಟ ರಾಣಿಯ ನೆನಪಾಯಿತು. ಹೊಸ ರಾಣಿ ಚುರುಕಾಗಿದ್ದರಿಂದ ಅದು ಹೇಗೂ ಪೆಟ್ಟಿಗೆ ಸೇರಿದ್ದರಿಂದ ಆ ರಾಣಿಯನ್ನು ಏನು ಮಾಡುವುದೆಂದು ಯೋಚಿಸಿದೆ. ತಕ್ಷಣ ತಲೆಗೆ ಹೊಳೆದದ್ದು ಇನ್ನೊಂದು ಚಿಕ್ಕ ಕುಟುಂಬ ಮಾಡುವ ಯೋಚನೆ. ಮನೆಯಲ್ಲಿ ಇನ್ನೊಂದು ಖಾಲಿ ಪೆಟ್ಟಿಗೆ ಇರಲಿಲ್ಲ. ಆದರೆ ಕುಟುಂಬ ಸಾಗಿಸುವ ಚಿಕ್ಕ ಪೆಟ್ಟಿಗೆಯಿತ್ತು. ಅದನ್ನೇ ಬಳಸಿ ಇನ್ನೊಂದು ಕುಟುಂಬ ಮಾಡುವ ಯೋಜನೆಗೆ ಮನಸ್ಸು ಒಪ್ಪಿತ್ತು. ಸಾಗಾಣಿಕಾ ಪೆಟ್ಟಿಗೆಯನ್ನು ತಂದು ಒಂದು ಚೌಕಟ್ಟು ಎತ್ತಿ ನೊಣಗಳಿರುವ ಕುಟುಂಬಕ್ಕೆ ರಾಣಿ ಪಂಜರದAದ ರಾಣಿಯನ್ನು ನೊಣಗಳ ಸಮೀಪ ಬಿಟ್ಟೆ. ಈಗ ಕುಟುಂಬ ಎರಡಾಯಿತು.
ಒಂದು ನೊಣಗಳಿರುವ ಕುಟುಂಬದಿAದ ಒಂದು ಚೌಕಟ್ಟು ನೊನಗಳನ್ನು ತೆಗೆದು ಚಿಕ್ಕ ಪೆಟ್ಟಿಗೆಯ ಖಾಲಿ ಚೌಕಟ್ಟನ್ನು ನೊಣಗಳಿರುವ ಕುಟುಂಬಕ್ಕೆ ಕೊಟ್ಟು ರಾಣಿ ಪಂಜರದಿAದ ರಾಣಿಯನ್ನು ನೊಣಗಳ ಸಮೀಪ ಬಿಟ್ಟೆ. ಮುಚ್ಚಳ ಹಾಕಿ ಗೇಟು ಅಳವಡಿಸಿ ತೋಟದ ಬದಿಯಲ್ಲಿದ್ದ ಖಾಲಿ ಗೂಟದಲ್ಲಿಟ್ಟೆ. ಈಗ ಕುಟುಂಬ ಎರಡಾಯಿತು. ಜೇನು ಕೃಷಿಕ ಸಮಯಕ್ಕೆ ಸರಿಯಾಗಿ ತಲೆ ಖರ್ಚು ಮಾಡಿ ಸಮಸ್ಯೆಗೆ ತಕ್ಕ ಪರಿಹಾರ ಕಂಡುಕೊಳ್ಳಬೇಕು. ಜೇನ್ನೊಣಗಳಿಗೆ ಅವುಗಳು ಸೇವಿಸುವ ಸುಗಂಧ ಭರಿತ ಹೂವುಗಳ ಮಧುರಸದ ಶರೀರದಿಂದ ಹೊರಸೂಸುತ್ತದೆ. ಆದರೆ ಗೂಡಿನ ಹೊರಗಿನ ವಾತಾವರಣದಲ್ಲಿ ಅದು ಹೆಚ್ಚು ಪಾಲು ಗಾಳಿಯಲ್ಲಿ ವಿಲೀನವಾಗುವುದರಿಂದ ಇತರೆ ಗೂಡಿನ ನೊಣಗಳಿಗೆ ಅರಿವಿಲ್ಲದೆ ಒಂದಾಗಿ ಬಿಡುತ್ತವೆ. ಆದರೆ ಒಂದಾಗಿ ಮತ್ತೆ ಬೇರೆ ಬೇರೆ ಯಾಗಿರಲು ಮುಖ್ಯ ಕಾರಣವೇ ಅವುಗಳ ಸಂವಿಧಾನ. ಒಂದು ಕುಟುಂಬಕ್ಕೆ ಒಂದೇ ರಾಣಿ ಎನ್ನುವ ಇದನ್ನು ಚಾಚೂ ತಪ್ಪದೆ ಪಾಲಿಸುವುದು ಅವುಗಳ ಪ್ರಾಮಾಣಿಕತೆಗೆ ಸಾಕ್ಷಿ.
ನಾವು ಸಂವಿಧಾನ ಎನ್ನುವುದನ್ನು ನಮ್ಮ ಹಿತಕ್ಕಾಗಿ ಆಗಾಗ ಬದಲಾಯಿಸಿಕೊಳ್ಳುತ್ತೇವೆ. ಆದರೆ ಜೇನ್ನೊಣ ಸಂವಿಧಾನ ಹುಟ್ಟಿನಿಂದ ಬಂದಿದ್ದು ಜೀವನದ ಕೊನೆಯ ತನಕ ಪಾಲಿಸಲೇಬೇಕಾಗಿದೆ. ಕುಟುಂಬದ ವ್ಯವಸ್ಥೆ ನಮಗಿಂತ ವ್ಯವಸ್ಥೆ ನಮಗಿಂತ ಭಿನ್ನ. ರಾಣಿ ಎಂದು ನಾವು ಕರೆಯುವ ಬಲಿತ ಹೆಣ್ಣು ನೊಣ ತನ್ನ ಕರ್ತವ್ಯವಾದ ಸಂತತಿ ವರ್ಧನೆಗೆ ಮಾತ್ರ ಸೀಮಿತವಾಗಿದ್ದು ಕುಟುಂಬದ ಎಲ್ಲಾ ಅಲಿಖಿತ ಕಾನೂನನ್ನು ಕಾರ್ಮಿಕ ನೊಣಗಳು ನಿಯಂತ್ರಿಸುತ್ತದೆ ಎಂದರೆ ಅಚ್ಚರಿಯಲ್ಲವೇ