spot_img
Monday, November 25, 2024
spot_imgspot_img
spot_img
spot_img

ವೈವಿಧ್ಯದ ಹಣ್ಣುಗಳು ತುಂಬಿದ ದಯಪ್ರಸಾದರ ವನಸಿರಿ: ಇದು ಅಪೂರ್ವ ಹಣ್ಣುಗಳ ಐಸಿರಿ!

-ರಾಧಾಕೃಷ್ಣ ತೊಡಿಕಾನ

ಅಲ್ಲಿರುವುದು ಅಪೂರ್ವವಾದ ಹಣ್ಣುಗಳ ಐಸಿರಿ. ವಿವಿಧ ಜಾತಿಯ, ಉಪಪ್ರಬೇಧಗಳ ಹಣ್ಣಿನ ಗಿಡಗಳು. ಎಲ್ಲವೂ ಭಿನ್ನ ಭಿನ್ನ. ಅತ್ಯಂತ ಸಿಹಿಯ ಹಣ್ಣುಗಳು.. ಮಧ್ಯಮ ಸಿಹಿ, ಹುಳಿ ಒಗರು ಮಿಶ್ರಿತ ಹಣ್ಣು ಸೇರಿದಂತೆ ವಿಶಿಷ್ಠ ಹಣ್ಣಿನ ಲೋಕ ಅನಾವರಣ. ದೇಶ, ವಿದೇಶದ ಹೊಸ ಹೊಸ ಹಣ್ಣಿನ ಗಿಡಗಳನ್ನು ನೆಟ್ಟು ಬೆಳೆಸಿ ಅದರ ಸವಿರುಚಿಯನ್ನು ಉಣಿಸಿದವರು ವನಸಿರಿ ಫಾರ್ಮ್ನ ದಯಪ್ರಸಾದ್ ಚೀಮುಳ್ಳು.

ಸಮೃದ್ಧ ಜೀವ ವೈಧ್ಯವಿತೆಯನ್ನು ಮೈದುಂಬಿಕೊಂಡಿರುವ ಬಂಟಮಲೆಯ ಹಸಿರ ಸಿರಿ. ಅದರ ಬುಡದಲ್ಲಿ ಅರಳಿದ ಪುಟ್ಟ ಹಳ್ಳಿ ಪಂಬೆತ್ತಾಡಿ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಪಂಬೆತ್ತಾಡಿ ಕೃಷಿಯನ್ನೇ ಹಚ್ಚಿಕೊಂಡ ನೆಚ್ಚಿಕೊಂಡ ಹಳ್ಳಿಯಿದು. ಕೃಷಿಯೇ ಬದುಕಿನ ಜೀವಾಳ. ಸುಬ್ರಹ್ಮಣ್ಯ-ಪುತ್ತೂರು ರಾಜ್ಯ ಹೆದ್ದಾರಿಯಲ್ಲಿ ಪಂಜ ಎಂಬಲ್ಲಿಂದ ಕೂತ್ಕುಂಜ ರಸ್ತೆಯಲ್ಲಿ ಮುಂದೆ ಹೋದರೆ ದಯಪ್ರಸಾದರ ವನಸಿರಿ.

ದಯಪ್ರಸಾದ್ ಚೀಮುಳ್ಳು ಯುವ ಕೃಷಿಕರು. ಪದವಿ ಶಿಕ್ಷಣ ಮುಗಿಸಿದ ನಂತರ ಇತರ ಯುವ ಸಮುದಾಯದಂತೆ ಉದ್ಯೋಗಕ್ಕಾಗಿ ಪೇಟೆಪಟ್ಟಣದತ್ತ ಹೋಗಬಹುದಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ. ಪರಂಪರೆಯಿಂದ ಬಂದ ಕೃಷಿ ಕ್ಷೇತ್ರವನ್ನೇ ಆಯ್ದುಕೊಂಡರು. ಅಡಿಕೆ, ರಬ್ಬರ್, ಕಾಳು ಮೆಣಸು, ತೆಂಗು ಸಾಂಪ್ರದಾಯಿಕವಾದ ಕೃಷಿ. ಇದರೊಂದಿಗೆ ಮತ್ತೇನಾದರೂ ಹೊಸತು ಬೆಳೆಯಬೇಕು ಎಂಬ ಅದಮ್ಯ ಆಸೆ, ಆಸಕ್ತಿಯಿತ್ತು. ಕೃಷಿಯಲ್ಲಿ ಒಂದಿಷ್ಟು ಪ್ರಯೋಗಶೀಲತೆಯನ್ನು ಮೈಗೂಡಿಸಿಕೊಂಡಿದ್ದ ಅವರನ್ನು ಆಕರ್ಷಿಸಿದ್ದು ಹಣ್ಣಿನ ಗಿಡಗಳು.

4-5 ಎಕ್ರೆ ಜಾಗವನ್ನು ಅಪರೂಪದ ಹಣ್ಣಿನ ಗಿಡಗಳಿಗಾಗಿಯೇ ಮೀಸಲಿಟ್ಟು 500ಕ್ಕೂ ಹೆಚ್ಚು ಹಣ್ಣಿನ ಗಿಡಗಳನ್ನು ಬೆಳೆದಿದ್ದಾರೆ. ರಾಜ್ಯ ಹಾಗೂ ಹೊರ ರಾಜ್ಯಗಳ ರೈತರು, ಕೃಷಿ ಆಸಕ್ತರು, ಪ್ರಯೋಗಶಿಲರ ಗಮನ ಸೆಳೆಯುವಂತೆ ಮಾಡಿದೆ.ದೂರದಲ್ಲೆಲ್ಲೋ ಹಣ್ಣಿನ ಗಿಡಗಳನ್ನು ನೋಡಿ ಇದೆಲ್ಲ ನಮ್ಮ ಮಣ್ಣಿನಲ್ಲಿ ಆಗುವುದಿಲ್ಲ, ಎಂದು ಸುಮ್ಮನಿರುವವರಿಗೆ “ಭೂಮಿ ಬಂಜೆಯಲ್ಲ ಮಣ್ಣು ಯಾವುದಾದರೇನು. ಎಲ್ಲಾ ಮಣ್ಣಿನಲ್ಲಿ ಸತ್ವವಿದೆ, ಸಾರವಿದೆ, ಫಲಕೊಡುವ ಗುಣವಿದೆ. ನೆಟ್ಟು ಬೆಳೆಸುವವರಿಗೆ ಮನಸ್ಸು, ಶ್ರದ್ದೆ, ಶ್ರಮ, ಬೇಕಷ್ಟೇ ಎಂಬುದನ್ನು ಮನಗಾಣಿಸಿದ್ದಾರೆ..

ಹಣ್ಣಿನ ಗಿಡಗಳು ಬೆಳೆಯುವುದು ನನ್ನ ಹವ್ಯಾಸ. ಈ ಹಣ್ಣುಗಳನ್ನು ಲಾಭ ಗಳಿಸುವ ಉದ್ದೇಶದಿಂದ ಬೆಳೆಯುತ್ತಿಲ್ಲ. 2-3 ವಿಧದ ಹಣ್ಣುಗಳನ್ನು ಸ್ಥಳೀಯವಾಗಿ ಮಾರಾಟ ಮಾಡುತ್ತೇನೆ. ಅದಕ್ಕಾಗಿ ಮಾರುಕಟ್ಟೆ ಅರಸಿ ಹೋಗಬೇಕಾಗಿಲ್ಲ ಎನ್ನುತ್ತಾರೆ ದಯಪ್ರಸಾದ್.

ಇಲ್ಲಿ ಬೆಳೆದಿರುವ ಹಣ್ಣಿನ ಗಿಡಗಳಲ್ಲಿ ಕೆಲವು ಸಿಹಿ, ಮತ್ತೆ ಕೆಲವು ಹುಳಿ-ಸಿಹಿ ಇನ್ನು ಕೆಲವು ಚೊಗರು. ಕೆಲವೊಂದು ಗಿಡಗಳು ವರ್ಷದಲ್ಲಿ ಮೂರು ನಾಲ್ಕು ಬಾರಿ ಹಣ್ಣು ನೀಡಿ ಸಾರ್ಥಕತೆ ಕಂಡಿದೆ. ಮತ್ತೆ ಕೆಲವು ವಾರ್ಷಿಕ ಫಸಲಿಗೆ ಸೀಮಿತ.

ಹಣ್ಣಿನ ತೋಟದ ಬದಿಯ ಪಾತಿ ಹಲಸಿನದು. ಹಣ್ಣುಗಳಲ್ಲಿ ದೊಡ್ಡದಾದ ಹೊಟ್ಟೆ ತುಂಬಿಸಬಹುದಾದ ಹಣ್ಣು ಹಲಸು. ವಿವಿಧ ಹಲಸು ಇಲ್ಲಿ ಸ್ಥಾನ ಪಡೆದುಕೊಂಡಿದೆ. ರಾಜ್ಯದಲ್ಲಿ ಹೆಚ್ಚು ಸುದ್ದಿ ಮಾಡಿದ ಸಿದ್ದು ಹಲಸು, ಥಾಯ್ ಹಲಸು, ಸರ್ವಋತು ಹಲಸು, ರಾಮಚಂದ್ರ, ಭೈರಚಂದ್ರ, ಏವಿಯರ್, ಸಿಂಗಾಪುರ್, ವಾಡಾಸಿಂಗಾಪುರ್, ಹನಿಜಾಕ್, ಪ್ರಕಾಶ್‌ಚಂದ್ರ, ಥೈಲ್ಯಾಂಡ್ ಹಾಗೂ ಇತರ ತಳಿಯ ಹಲಸುಗಳಿವೆ. ಕೆಲವೊಂದು ಗಿಡಗಳು ಫಲ ಬಿಟ್ಟು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿವೆ. ಮುಂಬರುವ ಎರಡು-ಮೂರು ವರ್ಷಗಳಲ್ಲಿ ವೈವಿಧ್ಯ ಹಲಸಿನ ಸವಿ ಸವಿಯಬಹುದು.

ಹಲಸಿನ ಆನಂತರದ ಸುತ್ತಿನಲ್ಲಿರುವುದು ಮಾವು. ವಿಶ್ವದ ಅತ್ಯಂತ ದುಬಾರಿ ಬೆಲೆಯ ಮಾವು ಜಪಾನಿನ ಮಿಯಾಜಾಕಿ. ಈ ಮಾವಿನ ತಳಿ ಇವರ ತೋಟದಲ್ಲಿದೆ. ಅದಲ್ಲದೆ ಕಟಿಮಾನ್ ಮ್ಯಾಂಗೋ, ನಾಮಡಕ್, ಯಲ್ಲೋ ಮ್ಯಾಂಗೋ, ಥಾಯ್ಲೆಂಡ್ ರೆಡ್, ವೆರಿಗೇಟೆಡ್ ಮ್ಯಾಂಗೋ, ಸೂಪರ್ ಕ್ವೀನ್, ಬ್ಯೂಟಿ ಪ್ರಿನ್ಸಸ್, ಚಿಲ್ಲಿ ಹಾಗೂ ಇತರ ತಳಿಯ ಮಾವಿದೆ.

ತೋಟದ ಕಸಿಮಾವಿನ ಮರವೊಂದು ಕಳೆದ ವರ್ಷ ಬಹಳಷ್ಟು ಫಸಲು ನೀಡಿತ್ತು. ನೆಂಟರಿಷ್ಟರಿಗೆ ನೆರೆಕೆರೆಯವರಿಗೂ ಹಂಚಿದ ನಂತರವೂ ಮತ್ತೂ ಉಳಿದಿತ್ತು. ಏನು ಮಾಡುವುದೆಂದು ತೋಚಲಿಲ್ಲ ಕೊನೆಗೆ ಸಾಮಾಜಿಕ ಜಾಲತಾಣದ ಮೂಲಕ ಮಾವು ಮಾರಾಟಕ್ಕಿರುವುದನ್ನು ಹರಿಬಿಟ್ಟರು. 3ಕ್ವಿಂಟಾಲಿಗಿಂತ ಹೆಚ್ಚು ಮಾರಾಟವಾಯಿತು ಎಂದು ದಯಪ್ರಸಾದ್ ಹೇಳಿದ್ದಾರೆ. ಕಳೆದ ಬಾರಿ ಕಾಡುಮಾವು ಫಸಲು ಸಾಕಷ್ಟಿತ್ತು. ಮಿಡಿ ಮಾವಿನ ಉಪ್ಪಿನಕಾಯಿ ಹಾಕಿದ್ದೆ ಎನ್ನುತ್ತಾರೆ ತುಳಸಿ ದಯಪ್ರಸಾದ್.

ವಿಶಿಷ್ಠ ಬಾಳೆ:

ಕೃಷಿಕರ ತೋಟದಲ್ಲಿ ಸ್ಥಳೀಯ ಬಾಳೆಗಳಿರುತ್ತವೆ. ವನಸಿರಿಯಲ್ಲಿ ಸಾಂಪ್ರದಾಯಿಕ ತಳಿಗಳಲ್ಲದೆ ಹಲವು ಬಗೆಯ ವಿಶೇಷ ತಳಿಗಳಿವೆ. ಗ್ರೋ ಬ್ಯಾಗುಗಳಲ್ಲಿ ಮನೆಯಂಗಳದಲ್ಲಿ, ತಾರಸಿಯ ಮೇಲೆ ಬೆಳೆಯಬಹುದಾದ ಕುಬ್ಜ ಬಾಳೆ ಒಂದೆಡೆಯಾದರೆ ಬಿಳಿ ಹಸಿರು ಬಣ್ಣದ ಎಲೆಯ ಬಾಳೆ ಮತ್ತೊಂದೆಡೆ. ಅಲ್ಲದೆ ಮರದಂತೆ ಎತ್ತರಕ್ಕೆ ಬೆಳೆಯುವ ಸ್ನೋ ಬನಾನ್ ಎಂಬ ಬಾಳೆಯಿದೆ. ವಿಶೇಷವೆಂದರೆ ಇದರಲ್ಲಿ ಗಡ್ಡೆಗಳಿಂದ ಕಂದುಗಳು ಬರುವುದಿಲ್ಲ. ಅದರ ಬೀಜದಿಂದಲೇ ಗಿಡಗಳನ್ನು ಮಾಡಿಕೊಳ್ಳಬೇಕು.

ಪೊಪ್ಲು ಬಾಳೆ:

ಅವರಲ್ಲಿರುವ ವಿಶೇಷ ಬಾಳೆಗಳಲ್ಲಿ ಪೊಪ್ಲು ಕೂಡ ಒಂದು. ಸಾಧಾರಣ ಎತ್ತರದ ಬಾಳೆಯಿದು. ಹೆಚ್ಚು ಉದ್ದವಲ್ಲದ ದಪ್ಪ ಕಾಯಿಗಳು. ಈ ಬಾಳೆ ಕಾಯಿಯ ಚಿಪ್ಸ್ ಅತ್ಯಂತ ರುಚಿಕರ. ಆಲೂಗಡ್ಡೆ ಚಿಪ್ಸ್ ತಿಂದಂತಾಗುತ್ತದೆ. ಬಾಳೆಕಾಯಿ ಪೋಡಿ (ಬಜ್ಜಿ) ಹಾಗೂ ಇತರ ಖಾದ್ಯಗಳಿಗೂ ಅನುಕೂಲ. ಈ ಬಾಳೆಕಾಯಿಯನ್ನು ಒಣಗಿಸಿ ಪುಡಿ ಮಾಡಿ ಇರಿಸಿಕೊಂಡು ವಿವಿಧ ನಮೂನೆಯ ತಿಂಡಿಗಳನ್ನೂ ತಯಾರಿಸಿಕೊಳ್ಳಬಹುದು. ಕೆಂಪು ಚಂದ್ರ ಬಾಳೆ ಹೋಲುವ ಬಾಳೆಯಾದರೂ ಅದಕ್ಕಿಂತ ಭಿನ್ನ ರುಚಿಯ ಹಣ್ಣು ನೀಡುವ ಬಾಳೆಯಿದೆ. ಕಾವೇರಿ, ಕರ್ಪೂರವಲ್ಲಿ ಉತ್ತಮ ರುಚಿಯುಳ್ಳದ್ದು. ಸಾವಿರ ಕದಳಿ ಸಣ್ಣ ಸಣ್ಣ ಸಾವಿರಾರು ಕಾಯಿಗಳ ಸರದಾರ. ಇನ್ನೂ ಹಲವಾರು ಬಗೆ ಬಾಳೆ ಅವರ ತೋಟದಲ್ಲಿದೆ.

ಕೇರಳದ ಜುಟ್ಟಿಲ್ಲದ ಅನಾನಸು, ಕಿರೀಟ ಮಾದರಿಯ ಅನಾನಸು, ಮುಳ್ಳಿಲ್ಲದ ಅನಾನಸು, ನೇರಳೆ, ಪೇರಳೆ, ಚಿಕ್ಕು ನೀರೇ ಇಲ್ಲದ ನಿಂಬೆ, ನಿಂಬೆಯನ್ನೇ ಹೋಲುವ ಮುಸುಂಬಿ ಎಲ್ಲವೂ ಒಂದಕ್ಕೊಂದು ಭಿನ್ನ. ಹಲವು ಬಗೆ ತೋಟದ ಪ್ರತಿಯೊಂದು ಹಣ್ಣಿನ ವಿಶೇಷತೆಯನ್ನು ವಿವರಿಸುತ್ತಲೇ ಮುಂದೆ ಸಾಗುತ್ತಿದ್ದ ದಯಪ್ರಸಾದ್ ಆ ಚಿಕ್ಕ ಹಣ್ಣಿನ ಗಿಡವನ್ನು ತೋರಿಸುತ್ತಾ ಈ ಹಣ್ಣನ್ನು ತಿಂದು ನೋಡಿ, ತುಂಬಾ ರುಚಿಯಾಗಿದೆ. ಹಣ್ಣುಗಳನ್ನು ಹಕ್ಕಿಗಳು ನೋಡಿದರೆ ಒಂದೂ ಬಿಡುವುದಿಲ್ಲ . ಬೆಳಗಾದರೆ ಸಾಕು  ಸುತ್ತಮುತ್ತ ಹಕ್ಕಿಗಳದ್ದೆ ಚಿಲಿಪಿಲಿ ರಾಗ ಎಂದು ಅನುಭವಗಳನ್ನು ಹಂಚಿಕೊಳ್ಳುತ್ತಾರೆ.

ಮಿರಾಕಲ್ ಫ್ರುಟ್ ಅದ್ಭುತವಾದ ಹಣ್ಣು. ಈ ಹಣ್ಣು ತಿಂದು ಎಂತಹ ಹುಳಿ ತಿಂದರೂ ಸಿಹಿಯ ಅನುಭವ. ಬ್ರೆಜಿಲ್ ದೇಶದ ಜಬೊಟಿಕಾ ಉತ್ತಮ ಸಿಹಿಯುಳ್ಳ ಹಣ್ಣು. ಕುಂಡಗಳಲ್ಲಿ, ಗ್ರೋ ಬ್ಯಾಗುಗಳಲ್ಲಿ ಮನೆಯಂಗಳದಲ್ಲೂ ಅಂದ ಚೆಂದಕ್ಕೆ ಬೆಳೆಸಿಕೊಳ್ಳಬಹುದು. ಹತ್ತು ಹಲವು ಹಣ್ಣಿನ ತಳಿಗಳು.

ಈ ಸೊಪ್ಪು ತಿಂದು ನೋಡಿ ಎಂದು ಗಿಡದ ಎಲೆಯೊಂದನ್ನು ಕಿತ್ತು ತಿನ್ನಲು ಕೊಟ್ಟರು. ಜಗಿಯುತ್ತಿದ್ದಂತೆ ಎಲ್ಲಾ ಸಾಂಬಾರು ಪದಾರ್ಥಗಳನ್ನು ಸೇರಿಸಿ ಕುಟ್ಟಿ ಪುಡಿಮಾಡಿದ ಮಸಾಲೆ ಪರಿಮಳ ಅದರಲ್ಲಿತ್ತು. ಇದೇ ಸೋಂಪು ಸೊಪ್ಪು. ಕರಿಬೇವು ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಇರುವಂತದ್ದು. ಇವರಲ್ಲೂ ಕರಿಬೇವಿದೆ. ಆದರೆ ಆ ತಳಿ ನಮ್ಮಲ್ಲಿರುವಂತದ್ದಲ್ಲ. ಅದು ಬ್ಯಾಂಕಾಕಿನದು. ಸಣ್ಣ ಸಣ್ಣ ಎಲೆಗಳು ಘಮಘಮಿಸುವ ಪರಿಮಳ. ತೋಟದ ಒಳಗೊ ಅಥವಾ ಬದಿಯಲ್ಲಿಯೋ ನುಗ್ಗೆ ಇದ್ದೇ ಇರುತ್ತದೆ. ಅವರಲ್ಲಿಯೂ ನುಗ್ಗೆ ಇದೆ. ಆದರೆ ಅದು ಮಾಮೂಲಿಯದಲ್ಲ ಕೆಂಪು ಬಣ್ಣದ ನುಗ್ಗೆ.

ಆನೆ ಕಬ್ಬು : ಬಲು ಅಪರೂಪದ ಕಬ್ಬಿನ ತಳಿಯಿದು. 20ಅಡಿಗೂ ಹೆಚ್ಚು ಎತ್ತರ ಬೆಳೆಯುತ್ತದೆ. ಎರಡು ಇಂಚಿಗೂ ಹೆಚ್ಚು ವ್ಯಾಸವುಳ್ಳದು. ಕಬ್ಬು ಬೆಳೆಗಾರರಿಗೆ ಅನುಕೂಲವಾಗಬಲ್ಲ ತಳಿ. ಇದರ ಬೀಜಕ್ಕಾಗಿ ಕಬ್ಬು ಬೆಳೆಯುವ ಬೆಳಗಾವಿ, ಬಾಗಲಕೋಟೆ, ಮಂಡ್ಯ ಜಿಲ್ಲೆಯ ಕೆಲ ರೈತರು ಇವರಲ್ಲಿಗೆ ಬಂದು ಬೀಜ ಸಂಗ್ರಹಿಸಿಕೊಂಡು ಹೋಗಿದ್ದಾರೆ.

ಸ್ವರ್ಣ ಚಂಪಕ: ಇದೊಂದು ಬಗೆಯ ಸಂಪಿಗೆ. ಸಂಜೆಯಾಗುವಾಗ ಪರಿಸರದ ತುಂಬೆಲ್ಲಾ ಪರಿಮಳವೋ ಪರಿಮಳ.

ಲಾಂಗೋನ್ : ಎಡಿವ್ಯು, ಡೈಮಂಡ್ ರಿವರ್, ರೆಡ್ ಲಾಂಗೋನ್, ವೈಟ್ ಲಾಂಗೊನ್, ಸೀಡ್ಲೆಸ್, ಪುನಾಗ್ರೇ, ಪಿಂಕ್ ಇತ್ಯಾದಿ. ಡೈಮಂಡ್ ರಿವರ್ ಲಾಂಗೋನ್ ಒಂದೇ ವರ್ಷದಲ್ಲಿ ಹೂ ಬಿಟ್ಟು ಫಲನೀಡಲು ಸಿದ್ಧವಾಗಿದೆ.

ಚಿಕ್ಕು :

ಥೈಲ್ಯಾಂಡ್ ರೆಡ್, ಬನಾನ, ಕಾಳಪತ್ತಿ, ಕ್ರಿಕೆಟ್ ಬಾಲ್, ಜಂಬೊ ಥೈಲ್ಯಾಂಡ್, ಮೆಮೆ ಸಪೋಟೆ, ಬ್ಲಾಕ್ ಸಪೋಟೆ ಇತ್ಯಾದಿ ಸೀ ಗ್ರೆಪ್, ಪುಲಸಾನ್, ವೈಟ್ ಸಪೋಟೆ, ಸುರಿನಾಮ್ ಚೆರಿ, ಮನಿಲಾ ಟೆನಿಸ್ ಬಾಲ್ ಚೆರಿ, ಕೋಕೋ ಪ್ಲಾಮ್, ಸ್ವೀಟ್ ಲೋವಿ, ಓಲೋಸಾಪ್, ಕಾಕ್‌ಜಾಮ್, ಲೆಪಿಸಂತಾಸ್, ಅರೆಕಾವುನಾ, ಆಲ್ ಸೀಸನ್ ಲಾಂಗೋನ್, ಅಭಿಯು ಮತ್ತು ಉಪತಳಿಗಳು, ಚೆರಿ ಕೋಟ್, ಕಟ್‌ನಟ್, ಡುರಿಯನ್, ಅಚ್ಚಾಚೆರು, ಸಂತೊಲ್, ಮಿಲ್ಕ್ ಫ್ರೂಟ್ ಮತ್ತು ಉಪತಳಿಗಳು, ಮಟೋವಾ ಮತ್ತು ಉಪತಳಿಗಳು, ಮಲ್ಬೇರಿ ಮತ್ತು ಉಪತಳಿಗಳು, ಪ್ಲಮ್ ತಳಿಗಳು, ರೋಸ್ ಸಪೋಟ, ವಿವಿಧ ಪೇರಳೆ, ರಾಮ್‌ಬುಟಾನ್, ಮ್ಯಾಂಗೋಸ್ಟಿನ್, ತಳಿಗಳು, ವಿವಿಧ ಅನಾನಸು, ಜಬೊಟಿಕಾಬಾ ಮತ್ತು ಉಪ ತಳಿಗಳು, ವಿವಿಧ ಬಗೆಯ ಮಾವು, ವಿವಿಧ ಜಾತಿಯ ಹಲಸು ಅವರ ಹಣ್ಣಿನ ತೋಟದಲ್ಲಿದೆ.

ಅವರು ಹಣ್ಣಿನ ಗಿಡಗಳನ್ನು ನೆಟ್ಟು ಬೆಳೆಸುವುದು ಮಾತ್ರವಲ್ಲ ನರ್ಸರಿಯನ್ನು ಹೊಂದಿದ್ದಾರೆ. ತನ್ನ ಕೃಷಿಕ್ಷೇತ್ರದಲ್ಲಿ ಉತ್ತಮವಾಗಿ ಫಸಲು ನೀಡುವ, ತಿನ್ನಲು ರುಚಿಕರವಾದ ಮಾರುಕಟ್ಟೆ ಮಾಡಲು ಅನುಕೂಲವಾಗುವ ಹಣ್ಣಿನ ಗಿಡಗಳನ್ನು ಕಸಿ ಮಾಡುತ್ತಾರೆ. ಇವರ ಗಿಡಗಳನ್ನು ಕೊಂಡುಕೊಳ್ಳಲು ಬಹಳಷ್ಟು ಕೃಷಿಕರು ವನಸಿರಿಗೆ ಬರುತ್ತಾರೆ. ಉತ್ತಮ ಹಣ್ಣುಗಳಾಗುವ ಗಿಡಗಳನ್ನೆ ಕೊಳ್ಳುವುದಕ್ಕೆ ಸಲಹೆ ನೀಡುತ್ತಾರೆ.

ಯಾವುದೇ ಮಣ್ಣಿಲ್ಲಿ ಹಣ್ಣಿನ ಗಿಡಗಳನ್ನು ಬೆಳೆಸಬಹುದಾದರೂ ಹವಾಮಾನವು ಅದರ ಫಸಲಿನ ಮೇಲೆ ಸ್ವಲ್ಪ ಪರಿಣಾಮವನ್ನು ಬೀರಬಹುದು ಎಂಬುದು ಅವರ ಅಭಿಪ್ರಾಯ. ಇವರ ಪತ್ನಿ ತುಳಸಿ ದಯಪ್ರಸಾದ್ ಅವರೂ ಕೃಷಿಯಾಸಕ್ತರು. ಹಣ್ಣಿನ ತೋಟ ನಿರ್ಮಾಣದಲ್ಲಿ ಅವರೂ ಕೈಜೋಡಿಸುತ್ತಾರೆ.

ಕೃಷಿ ಮಾಡಲು 4-5 ಎಕ್ರೆ ಜಮೀನು ಇದ್ದರೂ ಹಲವಾರು ಮಂದಿ ಯುವಕರು ನಗರಗಳಿಗೆ ಹೋಗಿ ಕನಿಷ್ಠ ಸಂಬಳಕ್ಕೆ ದುಡಿಯುತ್ತಿರುತ್ತಾರೆ. ಅದರ ಬದಲಾಗಿ ಊರಲ್ಲಿದ್ದುಕೊಂಡು ವೈಜ್ಞಾನಿಕವಾಗಿ ಕೃಷಿ ಮಾಡಿದರೆ ಹೆಚ್ಚು ಗಳಿಕೆ ಮಾಡಬಹುದು. ತಮಗೆ ಬೇಕಾದಂತೆ ಕೆಲಸಕಾರ್ಯಗಳನ್ನು ನಿರ್ವಹಿಸಬಹುದು ಎನ್ನುತ್ತಾರೆ ದಯಪ್ರಸಾದ್.

ಇವರ ತಂದೆ ನಾರಾಯಣ ಗೌಡ, ತಾಯಿ ತಾರಾ ಪ್ರಗತಿಪರ ಕೃಷಿಕರು. ಪಂಜಕ್ಕೆ ಸಮೀಪದ ನಿಂತಿಕಲ್ ಎಂಬಲ್ಲಿ ಅಡಿಕೆ ತೋಟವಿದೆ. ಅಲ್ಲಿಯೂ ಹಣ್ಣಿನ ಗಿಡಗಳಿವೆ. ಎರಡು ದಶಕಗಳ ಹಿಂದೆಯೇ ಡ್ರಾಗನ್ ಫ್ರುಟ್ ಬೆಳೆದು ಗಮನ ಸೆಳೆದಿದ್ದರು,ಕಸಿಗಿಡಗಳನ್ನು ತಯಾರಿಸುತ್ತಿದ್ದರು.

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group