-ರಾಧಾಕೃಷ್ಣ ತೊಡಿಕಾನ
ಪ್ರಕೃತಿಯ ಸುಂದರ ತಾಣ, ಪ್ರಶಾಂತ ವಾತಾವರಣ, ಗುಡ್ಡಬೆಟ್ಟಗಳ ಹಸಿರು ಹೊದಿಕೆ, ಅದರ ಬುಡದಲ್ಲಿ ಹಳ್ಳಿ, ಹಳ್ಳಿಯಲ್ಲಿ ಕೃಷಿಕರ ಬೆವರ ಹನಿಯಿಂದ ಎದ್ದು ನಿಂತ ತೋಟಗಳು, ನಗರ ಜೀವನದಿಂದ ಕೊಂಚ ಬಿಡುವು ಮಾಡಿಕೊಂಡು ಹಳ್ಳಿಯ ಸೊಗಡನ್ನು ಸವಿಯಬೇಕು. ಅಲ್ಲಿಯ ಜನರೊಂದಿಗೆ ಕಲೆತು ನಿರಮ್ಮಳವಾಗಬೇಕು ಎಂಬವರಿಗೆ ಪಕ್ಕನೆ ಈಗ ನೆನಪಿಗೆ ಬರುವಂತದ್ದು ಹಳ್ಳಿಗಳಲ್ಲಿರುವ ಹೋಂ ಸ್ಟೇಗಳು. ಹಳ್ಳಿಗಾಡಿನ ಪ್ರವಾಸೋದ್ಯಮ, ಕೃಷಿ ಪ್ರವಾಸೋದ್ಯಮಕ್ಕೆ ಈ ಹೋಮ್ ಸ್ಟೇಗಳು ತಮ್ಮದಾದ ಕೊಡುಗೆ ನೀಡುತ್ತಿವೆ.
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕಡ್ತಲ ಗ್ರಾಮದ ಮರ‍್ಸಾಲು ಎಂಬಲ್ಲಿಯ ಯುವ ಕೃಷಿಕ ಸುನಿಲ್ ಕುಮಾರ್ ಹೆಗ್ಡೆ ಅವರು ಕೃಷಿಯೊಂದಿಗೆ ಹೋಂ ಸ್ಟೇಯನ್ನು ಮುನ್ನಡೆಸಿಕೊಂಡು ಹಳ್ಳಿಗಾಡಿನ ಪ್ರವಾಸೋದ್ಯಮಕ್ಕೆ ತನ್ನದಾದ ಕೊಡುಗೆಯನ್ನು ನೀಡುತ್ತಿದ್ದಾರೆ. ಹಳ್ಳಿಯಲ್ಲಿದ್ದುಕೊಂಡೇ ಉದ್ಯೋಗಾವಕಾಶಗಳನ್ನು ಸೃಷ್ಟಿಸಿಕೊಳ್ಳಬಹುದು. ಸಾಧನೆಯನ್ನು ಮಾಡಬಹುದು ಎಂಬುದಕ್ಕೆ ಸಾಕ್ಷಿಯಾಗಿದ್ದಾರೆ ಸುನಿಲ್ ಕುಮಾರ್ ಹೆಗ್ಡೆ
ಸುನಿಲ್ ಕುಮಾರ್ ಹೆಗ್ಡೆ ಅವರ ತಂದೆ ಲಿಂಗಯ್ಯ ಹೆಗ್ಡೆ ಮುಂಬೈಯಲ್ಲಿ ಹೋಟೆಲ್ ಉದ್ಯಮಿ ಆಗಿದ್ದರು. ಸಹೋದರ ಮನೋಜ್ ಹೆಗ್ಡೆ ತಂದೆಯಂತೆ ಹೋಟೆಲ್ ಉದ್ಯಮದಲ್ಲಿ ತೊಡಗಿಕೊಂಡರು. ಮನಸ್ಸು ಮಾಡಿದ್ದರೆ ಸುನಿಲ್ ಕೂಡಾ ಮುಂಬೈಯಲ್ಲಿ ಹೋಟೆಲ್ ಉದ್ಯಮದಲ್ಲಿ ತೊಡಗಿಸಿಕೊಳ್ಳಬಹುದಿತ್ತು. ಆದರೆ ಅವರು ತನ್ನ ಹಳ್ಳಿಯನ್ನು ಬಿಟ್ಟು ಹೋಗಲಿಲ್ಲ. ತಂದೆ ಮರ‍್ಸಾಲಿನಲ್ಲಿ ಖರೀದಿಸಿದ ಜಮೀನಿನ ಅಭಿವೃದ್ಧಿಯ ಜವಾಬ್ದಾರಿಯನ್ನು ಹೆಗಲೇರಿಸಿಕೊಂಡರು. ಅದರೊಂದಿಗೆ ಸಹೋದರ ಮನೋಜ್ ಹೆಗ್ಡೆೆಯವರ ಜಮೀನು ಅಭಿವೃದ್ಧಿಯಲ್ಲೂ ತನ್ನನ್ನು ತೊಡಗಿಸಿಕೊಂಡರು
ಕಳೆದ 22 ವರ್ಷಗಳಿಂದ ಕೃಷಿ ವೃತ್ತಿ-ಪ್ರವೃತ್ತಿಯಿಂದ ತೃಪ್ತಿ ಕಂಡಿದ್ದಾರೆ. ಮರ‍್ಸಾಲಿನಲ್ಲಿರುವ ಸುಮಾರು 23 ಎಕ್ರೆಯಲ್ಲೂ ಸಮ್ಮಿಶ್ರ ಬೆಳೆ ಬೆಳೆದಿದ್ದಾರೆ. ಹಸಿರು ಬಿತ್ತಿದ್ದಾರೆ. ಈ ಜಾಗದಲ್ಲಿ ಮೊದಲು ಅಡಿಕೆ ಮತ್ತು ಕಬ್ಬು ಬೆಳೆಯಿತ್ತು. ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಸ್ಥಗಿತವಾದಾಗ ಕಬ್ಬು ಕೇಳುವವರಿಲ್ಲದಂತಾಯಿತು. ಕಬ್ಬಿನ ಕೃಷಿ ನೆಲಕಚ್ಚಿತು. ಈಗ ಈ ಜಮೀನಿನಲ್ಲಿ ಅಡಿಕೆ ಪ್ರಧಾನ ಬೆಳೆ. ತೆಂಗು, ರಬ್ಬರ್, ಕಾಳುಮೆಣಸು, ಕೊಕ್ಕೋ ಮೊದಲಾದುವುಗಳಿವೆ.
ಆರಂಭದಲ್ಲಿ ಹಟ್ಟಿ ಗೊಬ್ಬರ, ಸ್ಲರಿ, ಸುಡುಮಣ್ಣು, ಸೊಪ್ಪು ಹಾಕಿ ಸಾವಯುವ ಕೃಷಿಯನ್ನು ನೆಚ್ಚಿಕೊಂಡಿದ್ದರು. ಆನಂತರ ರಾಸಾಯನಿಕ ಗೊಬ್ಬರದ ಗಾಳಿ ಬೀಸಿತು. ಈಗ ಮನ ಬದಲಾಯಿಸಿ ಸಾವಯವ ದ್ರವ ಗೊಬ್ಬರ ಬಳಸುತ್ತಿದ್ದಾರೆ.ಸಹೋದರ ಮನೋಜ್ ಹೆಗ್ಡೆಯವರು ಮರ್ಣೆಯಲ್ಲಿ ಖರೀದಿಸಿದ್ದ ಜಮೀನು ಅಭಿವೃದ್ಧಿಯ ಜವಾಬ್ದಾರಿಯೂ ಅವರದಾಯಿತು.
ಈ ಜಮೀನು ಇರುವುದು ಸ್ವರ್ಣ ನದಿಯ ತಟದಲ್ಲಿ. ಅತ್ತ ಕಾಡು; ಇತ್ತ ನಾಡು. ಪ್ರಕೃತಿ ಪರಿಸರ ಪ್ರಿಯರಿಗೆ ಅಪೂರ್ವ ಅನುಭವ ನೀಡುವ ಪ್ರದೇಶ. ಅದೇ ಪ್ರದೇಶದಲ್ಲಿ ಸಹೋದರ ರಂಗ ಕಲಾವಿದ ಅಭಿನಯಶ್ರೀ ಉಮೇಶ್ ಹೆಗ್ಡೆ ಜತೆಗೂಡಿ ಹೋಂ ಸ್ಟೇ ಒಂದನ್ನು ಆರಂಭಿಸಿದರು. ಕಳೆದ ಆರು ವರ್ಷದಿಂದ ನಗರ ಹಾಗೂ ದೂರದ ಊರುಗಳಿಂದ ಹಲವಾರು ಮಂದಿ ಇಲ್ಲಿಗೆ ಬಂದು ಹೋಗಿದ್ದಾರೆ. ಹಳ್ಳಿ ಮನೆಯ ಖುಷಿಯನ್ನು ಅನುಭವಿಸಿದ್ದಾರೆ. ಪ್ರಕೃತಿ ರಮ್ಯತೆಯನ್ನು ಮನದುಂಬಿಕೊಂಡಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿರುವ ಇಂತಹ ಹೋಮ್ ಸ್ಟೇಗಳು ಕೆಲ ಮಂದಿಗಾದರೂ ಉದ್ಯೋಗ ನೀಡಬಲ್ಲವು. ಜೊತೆಗೆ ಪರಿಸರ ಪ್ರಿಯರಿಗೆ ಖುಷಿಯನ್ನು ನೀಡಬಲ್ಲವು ಎಂಬುದನ್ನು ಹೆಗ್ಡೆಯವರು ಮನಗಂಡಿದ್ದಾರೆ.ಹೈನುಗಾರಿಕೆ ಹೊಂದಿದ್ದ ಇವರು ಹಾಲು ಉತ್ಪಾದಕ ಸಂಘಕ್ಕೆ ಒಂದೊಮ್ಮೆ 50-60 ಲೀಟರ್ ಹಾಲು ನೀಡುತ್ತಿದ್ದರು. ಆದರೆ ಈಗ ಹೈನುಗಾರಿಕೆ ಇಲ್ಲವಾದರೂ ದನಸಾಕಾಣೆಯನ್ನು ಕೈಬಿಟ್ಟಿಲ್ಲ.
ಮರ್ಣೆಯಲ್ಲಿರುವ ಜಾಗದಲ್ಲಿ ಈಗ ಅಡಿಕೆ ಬೆಳೆಯಿದೆ. ಜತೆಗೆ ಹೋಮ್ ಸ್ಟೇ ಕೂಡ. ಸ್ಥಳೀಯವಾದ ಮಲೆನಾಡು ಗಿಡ್ಡ ಹಾಗೂ ಭಾರತೀಯ ತಳಿಗಳ ಗೋಶಾಲೆಯನ್ನು ಆರಂಭಿಸಬೇಕಾದ ಹಂಬಲ ಅವರಲ್ಲಿದೆ. ವಿವಿಧ ಹಣ್ಣು ಹಂಪಲುಗಳನ್ನು ಬೆಳೆಸುವ ಆಶಯವಿಟ್ಟುಕೊಂಡಿದ್ದಾರೆ.
ಹಳ್ಳಿಗಳಲ್ಲಿ ಇರುವ ಯುವಕರು ತಮ್ಮ ಊರುಗಳಲ್ಲಿಯೇ ಉದ್ಯೋಗದ ಹೊಸ ಹೊಸ ಸಾಧ್ಯತೆಯನ್ನು ಕಂಡುಕೊಳ್ಳುವುದರಿAದ ಊರಿನ ಅಭಿವೃದ್ಧಿಗೂ ಪೂರಕವಾಗುತ್ತದೆ. ಗ್ರಾಮೀಣ ಭಾಗದಲ್ಲಿ ಹೋಮ್ ಸ್ಟೇಗಳಿಂದಲೂ ಬದುಕು ಕಟ್ಟಿಕೊಳ್ಳಬಹುದು ಎನ್ನತ್ತಾರೆ ಸುನಿಲ್ ಕುಮಾರ್ ಹೆಗ್ಡೆ.