ದ.ಕ.ಜಿಲ್ಲೆ: ಸಹಕಾರಿ ರಂಗದಲ್ಲಿ ಹಲವು ಸಹಕಾರಿ ಸಂಘಗಳು ಉತ್ತಮ ಕಾರ್ಯ ಸಾಧನೆಯೊಂದಿಗೆ ಗಮನ ಸೆಳೆದಿವೆ ತಮ್ಮ ಕಾರ್ಯವ್ಯಾಪಿಯಲ್ಲಿ ಗ್ರಾಮೀಣ ಉದ್ಯೋಗ ಮತ್ತು ಆದಾಯದ ಅವಕಾಶಗಳನ್ನು ಸೃಷ್ಠಿಸಿದೆ. ಸುಳ್ಯ ತಾಲೂಕಿನ ಕಲ್ಮಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ತನ್ನ ಕಾರ್ಯವ್ಯಾಪ್ತಿಯ ಕಲ್ಮಡ್ಕ ಗ್ರಾಮದ ಕಾಚಿಲ ಎಂಬಲ್ಲಿ ಎರಡು ಎಕರೆ ಕೃಷಿ ಜಮೀನನ್ನು ಹೊಂದಿದೆ. ಈ ಜಾಗದಲ್ಲಿ ಸಂಘವು ಕೃಷಿಯಲ್ಲಿ ತೊಡಗಿಕೊಂಡು ಗಮನ ಸೆಳೆದಿದೆ.
ಈ ಜಮೀನಿನಲ್ಲಿ ಅಡಿಕೆ ಕೃಷಿಗೆ ಮುಂದಾದ ಸಂಘವು ಊರಿನ ವಿವಿಧ ಸಂಘ ಸಂಸ್ಥೆಗಳು, ಸಂಘದ ಸದಸ್ಯರು, ನವೋದಯ ಸ್ವಸಹಾಯ ಗುಂಪುಗಳ ಸಹಭಾಗಿತ್ವದಲ್ಲಿ ಅಡಿಕೆ ಗಿಡ ನಾಟಿ ಕಾರ್ಯಕ್ರಮವನ್ನು ಇತ್ತೀಚೆಗೆ ಹಮ್ಮಿಕೊಂಡಿತು.
ಪ್ರಗತಿಪರ ಕೃಷಿಕ ಗೋವಿಂದ ಭಟ್ ಅಮೈ, ಕೈಲಾರು ಈಶ್ವರ ಭಟ್, ಬಾಲಕೃಷ್ಣ ಗೌಡ ಕುಳ್ಸಿಗೆ ಅವರು ಜೊತೆಯಾಗಿ ಪ್ರಥಮ ಗಿಡ ನಾಟಿ ಮಾಡುವುದರೊಂದಿಗೆ ಚಾಲನೆಯಿತ್ತರು. ಇದೇ ಸಂದರ್ಭದಲ್ಲಿ ಗ್ರೀನ್ ಲೀಪ್ ಆಗ್ರೋ ಟೆಕ್ನಾಲಜಿ ಬೆಂಗಳೂರು, ಕರಾವಳಿ ಎಂಟರ್ ಪ್ರೈಸಸ್ ಸುಳ್ಯ ಇದರ ವತಿಯಿಂದ ಅಡಿಕೆ, ಕಾಳುಮೆಣಸು, ಕೊಕ್ಕೋ ಬೆಳೆಗಳಲ್ಲಿ ಎಲೆ ಚುಕ್ಕಿ ರೋಗ, ಹಿಂಗಾರ ಕೊಳೆರೋಗ ಮತ್ತು ಸೂಕ್ಷ್ಮ ಪೋಷಕಾಂಶಗಳ ಕುರಿತು ಮಾಹಿತಿ ಕಾರ್ಯಾಗಾರ ನಡೆಯಿತು. ಗ್ರೀನ್ ಲೀಪ್ ಆಗ್ರೋ ಟೆಕ್ನಾಲಜಿ ಕಂಪನಿಯ ಮುಖ್ಯ ತಾಂತ್ರಿಕ ಅಧಿಕಾರಿ ಗಿರೀಶ್ , ಸುಳ್ಯ ಕರಾವಳಿ ಎಂಟರ್‌ಪ್ರೈಸಸ್ ಮಾಲಕ ಚೆನ್ನಪ್ಪ ಗೌಡ ಕುಕ್ಕುಜೆ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾಹಿತಿಯಿತ್ತರು.
ಕರಾವಳಿ ಎಂಟರ್‌ಪ್ರೈಸಸ್ ಮಾಲಕ ಚೆನ್ನಪ್ಪ ಗೌಡ ಕುಕ್ಕುಜೆ ಯವರು ತನ್ನ ಕಂಪನಿ ವತಿಯಿಂದ ಸಂಘದ ಕೃಷಿ ತೋಟವನ್ನು ವೈಜ್ಞಾನಿಕವಾಗಿ ಕಾಲ ಕಾಲಕ್ಕೆ ನಿರ್ವಹಣೆ ಮಾಡಿ ಮಾದರಿ ತೋಟವನ್ನಾಗಿ ರೂಪಿಸಲು ಬೇಕಾಗುವ ತಾಂತ್ರಿಕ ಮಾಹಿತಿ ಮತ್ತು ಗೊಬ್ಬರವನ್ನು ಉಚಿತವಾಗಿ ನೀಡುವುದಾಗಿ ಘೋಷಿಸಿದರು.
ಸುಮಾರು 1,100 ನಾಟಿ ಮಾಡಿರುವ ಅಡಿಕೆ ಗಿಡಗಳಿಗೆ ಸಂಪೂರ್ಣವಾಗಿ ಸ್ವಯಂ ಚಾಲಿತವಾಗಿ ಡ್ರಿಪ್ ಮೂಲಕ ನೀರು ಮತ್ತು ಗೊಬ್ಬರ ಸರಬರಾಜು ಮಾಡುವ ವ್ಯವಸ್ಥೆಯನ್ನು ಜೈನ್ ಡ್ರಿಪ್ ಇರಿಗೇಷನ್ ಕಂಪನಿಯ ಡೀಲರ್ ಕಿಸಾನ್ ಆಗ್ರೋ ಟೂಲ್ಸ್ ಪುತ್ತೂರು ಇದರ ಮಾಲಕ ಅಭಿಜಿತ್ ಅಳವಡಿಸಿ ಕೊಟ್ಟಿರುತ್ತಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2 ಎಕರೆಗಿಂತಲೂ ಹೆಚ್ಚು ವಿಸ್ತೀರ್ಣದ ಕೃಷಿ ಭೂಮಿಯನ್ನು ಹೊಂದಿದ ಏಕೈಕ ಸಹಕಾರ ಸಂಘ ನಮ್ಮದು ಈ ಜಮೀನಿನಲ್ಲಿ ಮುಖ್ಯ ಬೆಳೆಯಾಗಿ ಅಡಿಕೆ ಮತ್ತು ವಿವಿಧ ಉಪ ಬೆಳೆ, ಹಣ್ಣಿನ ಬೆಳೆಗಳನ್ನು ಬೆಳೆದು ಮಾದರಿ ತೋಟವನ್ನಾಗಿ ಅಭಿವೃದ್ಧಿ ಪಡಿಸಲಾಗುವುದು”. ಎಂದು ಸಂಘದ ಅಧ್ಯಕ್ಷ ಉದಯ ಕುಮಾರ್ ಬೆಟ್ಟ ತಿಳಿಸಿ ಸಂಘದ ಯಶಸ್ಸಿಗೆ ಎಲ್ಲರ ಸಹಕಾರ ಕೋರಿದರು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಲಕ್ಷ್ಮೀ ನಾರಾಯಣ ನಡ್ಕ, ನಿರ್ದೇಶಕರಾದ ಮಹಾಬಲ ಕೆರೆಕ್ಕೋಡಿ, ನಾರಾಯಣ ಹೊಳಕ್ಕೆರೆ, ಶ್ರೀಮತಿ ಸುಧಾ ಎಸ್ ಭಟ್, ಕರುಣಾಕರ ಜೆ, ರಾಮನಾಯ್ಕ ಉಡುವೆಕೋಡಿ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರಶಾಂತ್ ಜೆ ನವೋದಯ ಗುಂಪುಗಳ ಪ್ರೇರಕ ಗಂಗಾಧರ ಪೊಳೆಂಜ, ಸಂಘದ ಸದಸ್ಯರು ಪಾಲ್ಗೊಂಡಿದ್ದರು