ಡಾ. ರಶ್ಮಿ ಆರ್. ಮತ್ತು ಡಾ. ಟಿ. ಜೆ. ರಮೇಶ
ವಿಜ್ಞಾನಿಗಳು ತೋಟಗಾರಿಕೆ, ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರು
ತರಕಾರಿ ಬೆಳೆಗಳಲ್ಲಿ ಎರಡು ರೀತಿ ಬಿತ್ತನೆ ವಿಧಾನಗಳನ್ನು ಅನುಸರಿಸಲಾಗುತ್ತದೆ. ತರಕಾರಿ ಬೀಜಗಳು ದುಬಾರಿಯಾಗಿರುವುದರಿಂದ, ಬೀಜದ ವೆಚ್ಚವನ್ನು ಕಡಿಮೆ ಮಾಡಲು ಸಸಿ ಮಡಿ ಮಾಡಿ, ನಂತರ ನಾಟಿ ಮಾಡುವುದು ಮತ್ತು ನೇರವಾಗಿ ಬೀಜ ಬಿತ್ತುವುದು.
ಸಸಿ ಮಡಿ ಮಾಡಿ, ನಂತರ ನಾಟಿ ಮಾಡುವ ಬೆಳೆಗಳೆಂದರೆ ಬದನೆ, ಮೆಣಸಿನಕಾಯಿ, ದೊಣ್ಣೆ ಮೆಣಸಿನಕಾಯಿ, ಟೊಮೊಟೋ, ಹೂಕೋಸು, ಎಲೆಕೋಸು, ನವಿಲುಕೋಸು ಮುಂತಾದವು. ಟ್ರೇನಲ್ಲಿ ಪಾತಿಗಳನ್ನು ಚೆನ್ನಾಗಿ ಸಿದ್ಧಗೊಳಿಸಿ ಬೀಜ ಬಿತ್ತಿ ನೀರು ಹಾಕುತ್ತಿದ್ದಲ್ಲಿ ಸಸಿಗಳು ೩-೪ ವಾರಗಳಲ್ಲಿ ನಾಟಿ ಮಾಡಲು ಸಿದ್ಧವಿರುತ್ತವೆ.
ನೇರವಾಗಿ ಬೀಜ ಬಿತ್ತುವು ತರಕಾರಿಗೆಳೆಂದರೆ: ತಿಂಗಳ ಹುರುಳಿ, ಬಟಾಣಿ, ಗೋರಿಕಾಯಿ, ಅಲಸಂದಿ, ಬೆಂಡೆ, ಕುಂಬಳ, ಹಾಗಲ, ಹೀರೆ, ಸೋರೆ, ಪಡವಲ, ಕಲ್ಲಂಗಡಿ, ಕರಬೂಜ, ತುಪ್ಪದಹೀರೆ, ಬೂದುಗುಂಬಳ, ಸೌತೆ, ಮೂಲಂಗಿ ಕ್ಯಾರೆಟ್, ಬೀಟ್‌ರೂಟ್, ದಂಟು, ಕೊತ್ತಂಬರಿ ಇತ್ಯಾದಿಗಳ ಬೀಜ ಅಥವಾ ಕಾಳುಗಳನ್ನು ನೇರವಾಗಿ ಬಿತ್ತಬೇಕು. ಬೀಜ ದೊಡ್ಡವಿದ್ದರೆ ಬಿತ್ತುವ ಆಳ 1 ಸೆಂ. ಮೀ. ಯಿಂದ 2 ಸೆಂ. ಮೀ. ಇರುತ್ತದೆ.
ದಂಟು ಸೊಪ್ಪಿನ ಬೀಜವನ್ನು ಪುಡಿ ಗೊಬ್ಬರ ದೊಂದಿಗೆ ಬೆರೆಸಿ ಬಹು ಮೇಲೆಯೇ ಬೀಳುವಂತೆ ಬಿತ್ತಬೇಕು. ಕುಂಬಳ, ಸೌತೆ ಮುಂತಾದುವುಗಳಲ್ಲಿ ಪ್ರತಿ ಗುಣೆಗೆ ಒಂದು ಅಥವಾ ಎರಡು ಸಸಿಗಳಿದ್ದರೆ ಸಾಕು. ತಿಂಗಳ ಹುರುಳಿ ಇದ್ದಲ್ಲಿ ನಾಲ್ಕು ಸಸಿಗಳಿದ್ದರೆ ಸಾಕು. ಮೂಲಂಗಿ, ಕ್ಯಾರೆಟ್ ಮುಂತಾದವುಗಳಲ್ಲಿ ಒಂದು ಗುಣಿಯಲ್ಲಿ ಐದಾರು ಗಿಡಗಳಿದ್ದರೆ ಸಾಕು. ಬೆಂಡೆಗೆ ಒಂದು ಕುಂಡಕ್ಕೆ ಒಂದೇ ಸಸಿ ಸಾಕು.
ಈರುಳ್ಳಿ ಮತ್ತು ಬೆಳ್ಳುಳ್ಳಿ ಬಿತ್ತುವ ಕ್ರಮಗಳೆಂದರೆ, ಬೀಜವನ್ನು ನೆಲ್ಲದಲ್ಲಿ ಬಿತ್ತಿ, 4 ರಿಂದ 6 ವಾರಗಳ ನಂತರ ಸಸಿಗಳನ್ನು ಜೋಪಾನವಾಗಿ ಕಿತ್ತು ಬೇರೆ ಕಡೆ ಒಂದೇ ಸಸಿ ನಾಟಿ ಮಾಡುವುದು ಮತ್ತು ಇನ್ನೊಂದು ವಿಧಾನವೆಂದರೆ ಮೊಳಕೆಯೊಡೆದ ಗೆಡ್ಡೆಗಳನ್ನು ನೇರವಾಗಿ ನಾಟಿ ಮಾಡಬಹುದು.
ಗುಣಮಟ್ಟದ ತರಕಾರಿ ಸಸಿಗಳ ಉತ್ಪಾದನೆಗೆ ಪ್ರೋಟ್ರೇ ವಿಧಾನವು ಒಂದು ಉತ್ತಮ ತಂತ್ರಜ್ಙಾನ. ಪ್ರೋಟ್ರೇ ವಿಧಾನದಲ್ಲಿ ನೆರಳು ಪರದೆ ಅಡಿಯಲ್ಲಿ ಸಸಿಗಳನ್ನು ಉತ್ಪತ್ತಿಮಾಡಲಾಗುತ್ತದೆ ಅದುದರಿಂದ ಅಂತಹ ಸಸಿಗಳು ಉತ್ತಮ ಮೊಳಕೆಯೊಡೆದು ಆರೋಗ್ಯಕರವಾಗಿರುತ್ತದೆ, ರೋಗ ಕೀಟಗಳಿಂದ ಮುಕ್ತಿ ಹೊಂದಿರುತ್ತದೆ ಮತ್ತು 25-30 ದಿನಗಳಲ್ಲಿ ಉತ್ತಮ ಬೇರಿನ ಅಭಿವೃದ್ಧಿಯನ್ನು ಹೊಂದಿರುತ್ತದೆ.
ಪ್ರೋಟ್ರೇ ವಿಧಾನದಲ್ಲಿ ಸಸಿಗಳ ಉತ್ಪಾದನೆ ಮಾಡುವ ಪ್ರಯೋಜನಗಳೆಂದರೆ ರೋಗ ಕೀಟಗಳಿಂದ ಮುಕ್ತ ಗುಣಮಟ್ಟದ ಸಸಿಗಳ ಉತ್ಪಾದನೆ, ಪ್ರತಿ ಬೀಜಕ್ಕೆ ಸ್ವತಂತ್ರ ಪ್ರದೇಶ, ಸುಧಾರಿತ ಬೀಜ ಮೊಳಕೆಯೊಡೆಯುವಿಕೆ, ಉತ್ತಮ ಬೇರಿನ ಅಭಿವೃದ್ಧಿ, ಮೊಳಕೆ ಮರಣವನ್ನು ಕಡಿಮೆಗೊಳಿಸುವುದು, ಏಕರೂಪ, ಆರೋಗ್ಯಕರ, ಸುಲಭ ನಿರ್ವಹಣೆ ಮತ್ತು ಸಾರಿಗೆ ವೆಚ್ಚ ಕಡಿಮೆಯಾಗಿರುತ್ತದೆ. ಹೈಬ್ರಿಡ್ ಬೀಜಗಳು ದುಬಾರಿಯಾಗಿರುವುದರಿಂದ, ಈ ವಿಧಾನವು ಬೀಜದ ವ್ಯರ್ಥವನ್ನು ಕಡಿಮೆ ಮಾಡುವ ಮೂಲಕ ವೆಚ್ಚವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಪ್ರೋಟ್ರೇ ವಿಧಾನದಲ್ಲಿ ಸಸಿಗಳ ಉತ್ಪಾದನೆ: ಒಂದು ಪ್ರೋಟ್ರೇಗೆ 1 ರಿಂದ 1.25 ಕಿ.ಗ್ರಾಂ. ಕೊಕೊಪೀಟ್ ಬೇಕಾಗುತ್ತದೆ. ಈ ಕೊಕೊಪೀಟ್‌ಗೆ ತಲಾ 1೦ ಗ್ರಾಂ. ನಂತೆ ಅಜೋಸ್ಪರಿಲಂ ಅಥವಾ ಅಜಟೋಬ್ಯಾಕ್ಟರ್, ಸುಡೋಮೊನಾಸ್ ಪ್ಲೂರೊಸೆನ್ಸ್ ಮತ್ತು ಟ್ರೆöÊಕೋಡರ್ಮಾ ಹಾರ್ಜಿಯಾನಮ್‌ನಿಂದ ಉಪಚರಿಸಿದ ನಂತರ ಟ್ರೇಗಳನ್ನು ಕೊಕೊಪೀಟ್‌ನಿಂದ ತುಂಬಿ, ಸಣ್ಣ ಗುಳಿಗಳನ್ನು ಮಾಡಿ ಪ್ರತಿ ಗುಣಿಗೆ ಒಂದು ಬೀಜದಂತೆ ಬೀಜವನ್ನು ಬಿತ್ತಬೇಕು. ಹೀಗೆ ಬಿತ್ತಿದ ನಂತರ ನಿರ್ಜಲೀಕರಿಸಿದ ಕೊಕೊಪಿಟ್‌ನಿಂದ ಮುಚ್ಚಿ, ಒಂದರ ಮೇಲೊಂದರಂತೆ ಒಟ್ಟು 5 ರಿಂದ 1೦ ಟ್ರೇಗಳನ್ನು ಒಂದರ ಮೇಲೊಂದು ಜೋಡಿಸಿ 4೦ ಗೇಜ್ ದಪ್ಪದ ಪಾಲಿಥಿನ್ ಹಾಳೆಯಿಂದ ಮುಚ್ಚಿ ಪಾಲಿಹೌಸ್/ನೆರಳುಪರದೆ ಮನೆಯಲ್ಲಿ ಇಡಬೇಕು. ಇದರಿಂದ ಬೀಜಗಳು ಸಮಾನವಾಗಿ ಮತ್ತು ಶೀಘ್ರವಾಗಿ ಮೊಳಕೆಯೊಡೆಯುತ್ತವೆ. 3 ಅಥವಾ 4ನೇ ದಿನದಂದು ಟ್ರೇಗಳನ್ನು ಹರಡಿ ಪ್ರತಿದಿನ 2 ಬಾರಿ ನೀರುಣಿಸಬೇಕು. 6 ರಿಂದ 7 ನೇ ದಿನಕ್ಕೆ ಬೀಜಗಳು ಮೊಳಕೆಯೊಡೆಯುತ್ತವೆ. ಬೀಜ ಬಿತ್ತಿದ 15 ದಿನಗಳ ನಂತರ ನೀರಿನಲ್ಲಿ ಕರಗುವ 19:19 ರಸಗೊಬ್ಬರವನ್ನು (3 ಗ್ರಾಂ./ಲೀ.) ಸಿಂಪಡಿಸಬೇಕು.
ಜಿಫಿ ಪ್ಲಗ್ ವಿಧಾನ: ಪ್ಲಾಸ್ಟಿಕ್ ಪ್ರೋಟ್ರೇಗಳನ್ನು ಬಳಸಿ ಸಸ್ಯೋತ್ಪಾದನೆ ಮಾಡಲಾಗುತ್ತದೆ. 48 ಗುಣಿಗಳುಳ್ಳ ಪ್ಲಾಸ್ಟಿಕ್ ಪ್ರೋಟ್ರೇಗಳಿಗೆ ನಿರ್ಜಲೀಕರಿಸಿದ ಕೋಕೋ ನಾರನ್ನು ನೈಸರ್ಗಿಕವಾಗಿ ಕರಗಿಹೋಗುವ ಜಿಫಿ ಪ್ಲಗ್ ಕವರ್‌ಗಳಲ್ಲಿ ತುಂಬಿ ಬೀಜ ಬಿತ್ತನೆ ಮಾಡಬೇಕು. ನಂತರ ಈ ಜಿಫಿ ಪ್ಲಗ್ ಕವರ್‌ಅನ್ನು ಪ್ಲಾಸ್ಟಿಕ್ ಪ್ರೋಟ್ರೇ ಗುಣಿಗಳಿಗೆ ವರ್ಗಾಯಿಸಿ. ಬೀಜ ಮೊಳಕೆ ಹೊಡೆದ ನಂತರ ಕಾಲ ಕಾಲಕ್ಕೆ ನೀರು ಮತ್ತು ಪೋಷಕಾಂಶಗಳನ್ನು ನೀಡಿ ಸಸಿಗಳನ್ನು ನಾಟಿಗೆ ಬಳಸುವುದು. ಈ ರೀತಿ ಉತ್ಪಾದಿಸಿದ ಸಸಿಗಳನ್ನು ಜಿಫಿ ಪ್ಲಗ್ ಸಮೇತ ಪ್ರೋಟ್ರೇಗಳಿಂದ ತೆಗೆದು ಬೇರುಗಳಿಗೆ ತೊಂದರೆ ಆಗದೆ ಸಾಗಾಟ ಮಾಡಲು ಸುಲಭವಾಗುವುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರು
ಭಾ. ಕೃ. ಅ. ಪ. – ಕೃಷಿ ವಿಜ್ಞಾನ ಕೇಂದ್ರ
ಮೀನುಗಾರಿಕಾ ಕಾಲೇಜು ಆವರಣ, ಎಕ್ಕೂರು, ಕಂಕನಾಡಿ ಅಂಚೆ