ಬೆಳೆದ ಪಸಲು ಮನೆ ತುಂಬಿದ ಹೊತ್ತಿಗೆ ಮಾರುಕಟ್ಟೆಯಲ್ಲಿ ದಿಢೀರ್ ಬೆಲೆ ಕುಸಿಯುತ್ತದೆ. ಪ್ರತಿ ಬೆಳೆಯೂ ರೈತರ ಕೈಗೆ ಬಂದಾಗ ಇದೇ ಪರಿಸ್ಥಿತಿ. ತೆಂಗು ಬೆಳೆಗಾರರ ಸಂಕಷ್ಟವೂ ಇದರಿಂದ ಹೊರತಾದದ್ದಲ್ಲ. ಕೊಬ್ಬರಿ ಇದೆ. ಆದರೆ ಮಾರುಕಟ್ಟೆಯಲ್ಲಿ ಬೆಲೆ ಇಲ್ಲ. ಕಡಿಮೆ ಬೆಲೆಗೆ ಮಾರಾಟ ಮಾಡಿದರೆ ನಷ್ಟದ ಹೊರೆ.
ಅಂತಹ ಸಂದರ್ಭದಲ್ಲಿ ಕೆಲವೊಮ್ಮೆ ಕೃಷಿಕರ ನೆರವಿಗೆ ಬರುವಂತದ್ದು ಬೆಂಬಲ ಬೆಲೆ. ಈ ಬೆಂಬಲ ಬೆಲೆಗೂ ಹತ್ತಾರು ಕಟ್ಟುಪಾಡುಗಳು. ಆದರೂ ಬೆಂಬಲ ಬೆಲೆ ರೈತರಲ್ಲಿ ಹೊಸ ಭರವಸೆಯನ್ನು ಮೂಡಿಸುವುದು ಮಾತ್ರ ಸುಳ್ಳಲ್ಲ.
ತೆಂಗು ಬೆಳೆಗಾರರು ದರ ಕುಸಿತದಿಂದ ಸಂಕಷ್ಟದಲ್ಲಿದ್ದರು. ಅರ್ಹ ಬೆಂಬಲ ಬೆಲೆ ನೀಡುವಂತೆ ಸರಕಾರವನ್ನು ಒತ್ತಾಯಿಸಿದ್ದರು. ಕೇಂದ್ರ ಸರಕಾರವು ಉಂಡೆ ಕೊಬ್ಬರಿಗೆ ಕ್ವಿಂಟಾಲಿಗೆ 12,೦೦೦ ಬೆಂಬಲ ಬೆಲೆ ಘೋಷಿಸಿದರೆ ರಾಜ್ಯ ಸರ್ಕಾರವು ಅದಕ್ಕೆ ಪೂರಕವಾಗಿ 15೦೦ರೂ ಪ್ರೋತ್ಸಾಹ ಧನ ನೀಡಿದೆ. ಇದೀಗ ಉಂಡೆ ಕೊಬ್ಬರಿಗೆ ಒಟ್ಟಾಗಿ ಕ್ವಿಂಟಾಲಿಗೆ ರೂಪಾಯಿ 13,5೦೦ ಬೆಂಬಲ ಬೆಲೆ ಸಿಕ್ಕಂತಾಗಿದೆ. ಉತ್ಕ್ರಷ್ಟ ಗುಣಮಟ್ಟದ ಕೊಬ್ಬರಿಗೆ ಮಾತ್ರ ಈ ಬೆಂಬಲ ಬೆಲೆ ಭಾಗ್ಯ. ಇದರಿಂದ ಮುಕ್ತ ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆ ಸ್ವಲ್ಪ ಏರಿಕೆಯಾಗಬಹುದು.
ರಾಜ್ಯದಲ್ಲಿ ಹಾಸನ, ತುಮಕೂರು, ಚಿತ್ರದುರ್ಗ, ಮಂಡ್ಯ, ಮೈಸೂರು, ದಕ್ಷಿಣ ಕನ್ನಡ, ಚಾಮರಾಜನಗರ ಮೊದಲಾದ ಜಿಲ್ಲೆಗಳ ರೈತರಿಂದ 62,500 ಟನ್ ಕೊಬ್ಬರಿ ಖರೀದಿಗೆ ಆದೇಶ ನೀಡಲಾಗಿತ್ತು. ಉಂಡೆ ಕೊಬ್ಬರಿಯನ್ನು ಖರೀದಿಸಲು ಕೇಂದ್ರ ಸರಕಾರದಿಂದ ನಾಫೆಡ್ ಸಂಸ್ಥೆಯನ್ನು ಖರೀದಿ ಸಂಸ್ಥೆಯನ್ನಾಗಿಸಿ ಕರ್ನಾಟಕ ರಾಜ್ಯ ಸಹಕಾರಿ ಮಾರಾಟ ಮಹಾಮಂಡಳ ಸಂಸ್ಥೆಯನ್ನು ರಾಜ್ಯ ಸರಕಾರದ ಸಂಸ್ಥೆಯನ್ನಾಗಿಸಿ ನೇಮಿಸಲಾಗಿದೆ. ಪ್ರತಿ ಎಕರೆಗೆ ಆರು ಕ್ವಿಂಟಾಲಿನಷ್ಟು ಪ್ರತಿ ರೈತರಿಗೆ ಗರಿಷ್ಠ 20 ಕ್ವಿಂಟಾಲ್ ಖರೀದಿ ಪ್ರಮಾಣ ನಿಗದಿ ಪಡಿಸಿದೆ. ಸುಮಾರು 46,036 ರೈತರು ಹೆಸರು ನೋಂದಾಯಿಸಿಕೊಂಡಿದ್ದರು. ಆದರೆ ಇದರಲ್ಲೂ ಅಕ್ರಮ, ವಂಚನೆ ನಯವಾಗಿಯೇ ನುಸುಳಿಕೊಂಡಿತು. ಬಹುತೇಕ ರೈತರ ಕೊಬ್ಬರಿ ಮನೆಯಲ್ಲಿಯೇ ಉಳಿಯಿತು. ವಂಚನೆ ಪ್ರಕರಣ ಬಯಲಾದ ನಂತರ ಕೊಬ್ಬರಿ ಖರೀದಿಯನ್ನು ಸ್ಥಗಿತಗೊಳಿಸಲಾಯಿತು. ಇದೀಗ ರೈತರು ಹೊಸದಾಗಿ ನೋಂದಾಯಿಸಿಕೊಳ್ಳವ ಪ್ರಕ್ರಿಯೆಯೊಂದಿಗೆ ಕೊಬ್ಬರಿ ಖರೀದಿಗೆ ಚಾಲನೆ ದೊರೆತಿದೆ.
ಉತ್ತಮ ಗುಣಮಟ್ಟದ ಉಂಡೆ ಕೊಬ್ಬರಿ ಹೊಂದಿದ ರೈತರಿಗೆ ಬೆಂಬಲ ಬೆಲೆ ಯೋಜನೆ ಪ್ರಯೋಜನ ದೊರೆಯಬಹುದು. ಬಹಳಷ್ಟು ರೈತರಲ್ಲಿ ಕೊಬ್ಬರಿ ದಾಸ್ತಾನು ಇದೆ. ಆದರೇನು ಖರೀದಿಗಿರುವ ಮಿತಿ ಎಷ್ಟೋ ಮಂದಿಗೆ ಬೆಂಬಲ ಬೆಲೆಯ ಯೋಗವೇ ಇಲ್ಲದಂತೆ ಮಾಡಬಹುದು. ಈಗಿರುವ ಮಿತಿಯನ್ನು ಸಡಿಲಗೊಳಿಸಿ ಮತ್ತಷ್ಟೂ ಕೊಬ್ಬರಿ ಖರೀದಿ ಮಾಡಬೇಕು. ಸಣ್ಣಪುಟ್ಟ ರೈತರಿಗೂ ಇದರ ಪ್ರಯೋಜನ ದೊರೆಯುವಂತಾಗಬೇಕು. ಒಂದು ವೇಳೆ ಕೊಬ್ಬರಿ ಖರೀದಿ ಮಿತಿ ಮುಗಿಯಿತ್ತೆಂದು ಸರಕಾರಗಳು ಕೈಚೆಲ್ಲಿದರೆ ರೈತರು ಖಾಸಗಿ ಮಾರುಕಟ್ಟೆಯನ್ನು ಆಶ್ರಯಿಸಬೇಕಾಗುತ್ತದೆ. ಇದರಿಂದ ಮತ್ತೆ ಮಾರುಕಟ್ಟೆ ಧಾರಣೆಯಲ್ಲಿ ಕುಸಿತವಾಗಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಬಹುದು. ಈ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರ ಸೂಕ್ತ ಕ್ರಮಕೈಗೊಳ್ಳುವುದು ಅವಶ್ಯಕ