spot_img
Saturday, November 23, 2024
spot_imgspot_img
spot_img
spot_img

ಉದ್ಯಮ ಕ್ಷೇತ್ರದಲ್ಲಿದ್ದರೂ ಬಿಡದ ಕೃಷಿ ನಂಟು: ಉದ್ಯಮಿಯ ಹೊಸತನದ ಅಡಿಕೆ ಕೃಷಿ

-ರಾಧಾಕೃಷ್ಣ ತೊಡಿಕಾನ -ಚಿತ್ರಗಳು:ರಾಮ್ ಅಜೆಕಾರು

ಕೃಷಿಯಲ್ಲಿ ಯಾವುದೇ ಅಂತಿಮ ಎಂಬುದಿಲ್ಲ. ಹೊಸ ಹೊಸ ಪ್ರಯೋಗಗಳು; ಅವರವರ ಚಿಂತನೆಗೆ ಅನುಗುಣವಾಗಿ ನಡೆಯುತ್ತಲೇ ಇರುತ್ತದೆ. ಆ ಪ್ರಯೋಗಳು ಎಲ್ಲಾ ಕಡೆ ಎಲ್ಲರಿಗೂ ಪ್ರಯೋಜನಕಾರಿ ಎಂದು ಹೇಳುವ ಹಾಗಿಲ್ಲ. ಎನ್ನುತ್ತಾ ತನ್ನ ಅಡಿಕೆ ಕೃಷಿಯ ಹೊಸ ಅನುಭವಗಳನ್ನು ಹಂಚಿಕೊಳ್ಳಲು ಮುಂದಾದರು ಪ್ರತಾಪ್ ಹೆಗ್ಡೆ ಮಾರಾಳಿ

ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ನಾಲ್ಕೂರು ಮಾರಾಳಿಯ ಪ್ರತಾಪ್ ಹೆಗ್ಡೆಯವರು ಯುವ ಉದ್ಯಮಿ. ಕೃಷಿಕ ಕುಟುಂಬದವರು ಆದರೂ ಉದ್ಯಮ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಕೃಷಿಯ ನಂಟು ಬಿಟ್ಟವರಲ್ಲ. ಕೃಷಿಯನ್ನು ಪ್ರವೃತ್ತಿಯನ್ನಾಗಿಸಿಕೊಂಡು ಅದರಲ್ಲಿ ಖುಷಿ ಪಟ್ಟವರು.

ನೆಂಚಾರಿನಲ್ಲಿ ಕಳೆದ 2016 ರಿಂದ ಅಡಿಕೆ ಕೃಷಿ ಮಾಡುತ್ತಿರುವ ಇವರು 4೦೦೦ಕ್ಕೂ ಹೆಚ್ಚು ಅಡಿಕೆ ಮರಗಳ ತೋಟ ಇದ್ದರೆ ಸಮೀಪದ ಕಜ್ಕೆಯಲ್ಲಿ 6೦೦೦ ಊರ ತಳಿಯ ಗಿಡಗಳಿವೆ. ಅಡಿಕೆ ಕೃಷಿ ಮಾಡುವ ಕರಾವಳಿ ಜಿಲ್ಲೆಗಳಲ್ಲಿ ಗುಂಡಿಗಳನ್ನು ತೋಡಿ ಗಿಡ ನೆಡುವುದು ಸಾಮಾನ್ಯ. ಪ್ರತಾಪ್ ಹೆಗ್ಡೆ ಅವರು ಹಾಗೆ ಮಾಡಲಿಲ್ಲ. ಸಾಂಪ್ರದಾಯಿಕ ಪದ್ಧತಿಯನ್ನು ಬಳಸದೆ ತನ್ನದಾದ ಹೊಸ ತಂತ್ರವನ್ನು ಬಳಸಿಕೊಂಡರು. ಭೂಮಿ ಸಜ್ಜುಗೊಳಿಸಿದ ಮೇಲೆ ಗಿಡ ನೆಡುವುದಕ್ಕೆ ಎಷ್ಟು ಬೇಕೋ ಅಷ್ಟೇ ಗುಂಡಿ ತೋಡಿ ನೆಟ್ಟಿದ್ದಾರೆ. ಅರೆ! ಹಾಗಾದರೆ ಬುಡಕ್ಕೆ ಗೊಬ್ಬರ ಹಾಕುವುದು ಹೇಗೆ ಎಂಬ ಪ್ರಶ್ನೆ ಮೂಡುವುದು ಸಹಜ.

ಗಿಡಗಳ ಮಧ್ಯೆ ಕಾಂಪೋಸ್ಟ್ ಗುಂಡಿ
ಅಡಿಕೆ ಮರಗಳಗಳ ಬುಡ ಬಿಡಿಸುವುದು, ಹೊಸ ಮಣ್ಣಿನ ಹೊದಿಕೆ ಹಾಕುವುದು ಸಾಮಾನ್ಯ. ಆದರೆ ಇವರ ತೋಟದಲ್ಲಿ ಬುಡಬಿಡಿಸುವ ಸಂಸ್ಕೃತಿ ಇಲ್ಲ. ಬುಡ ಬಿಡಿಸಿ ಗೊಬ್ಬರ ಹಾಕಿಲ್ಲ. ಹೊಸ ಮಣ್ಣುಗಳ ಹೊದಿಕೆ ಮಾಡಿಲ್ಲ . ದೊಡ್ಡ ತೋಟಗಳಲ್ಲಿ ಇಂತಹ ಕೆಲಸಗಳು ತಿಂಗಳುಗಟ್ಟಲೆ ಮಾಡಬೇಕಾಗುತ್ತದೆ. ಆಗ ಕೂಲಿಕಾರ್ಮಿಕರ ಕೊರತೆ ಒಂದೆಡೆಯಾದರೆ ಕೂಲಿಯ ಹೆಚ್ಚಳವೂ ಹೊರೆಯಾಗುತ್ತದೆ. ಅದಕ್ಕಾಗಿ ಕಾಂಪೋಸ್ಟ್ ಗುಂಡಿ ತಂತ್ರ ಉಪಯೋಗಿಸಿದ್ದಾರೆ.

ಗಿಡಗಳ ಸಾಲಿನ ಮಧ್ಯೆ 3 ಅಡಿ ಉದ್ದ, 2 ಅಡಿ ಅಗಲ, 1.5 ಎತ್ತರದ ಗುಂಡಿಗಳನ್ನು ತೋಡಲಾಗುತ್ತದೆ. ಈ ಗುಂಡಿಗಳಿಗೆ ಹಟ್ಟಿ ಗೊಬ್ಬರ ಹಾಗೂ ತೋಟದ ಕಳೆ, ತ್ಯಾಜ್ಯಗಳನ್ನು ತುಂಬಿಸುವುದರಿಂದ ಇವು ಕೊಳೆತು ಪೋಷಕಾಂಶಗಳನ್ನು ಗಿಡಗಳಿಗೆ ನೀಡುತ್ತದೆ. ಈ ಗುಂಡಿಗಳು ನಾಲ್ಕು ವರ್ಷಗಳವರೆಗೆ ಹಾಗೆಯೇ ಇರುತ್ತದೆ. ನಂತರ ಇನ್ನೊಂದು ಸಾಲಿನಲ್ಲಿ ಬೇರೆ ಗುಂಡಿಗಳನ್ನು ತೆಗೆದು ಮತ್ತೆ ಗೊಬ್ಬರ ತುಂಬಿಸಲಾಗುತ್ತದೆ. ಈ ಮಾದರಿಯಿಂದ ನೀರು ಇಂಗುವಿಕೆಯಗುತ್ತದೆ. ಪೋಷಕಾಂಶವೂ ದೊರೆಯುತ್ತದೆ. ಮಣ್ಣು ಫಲವತ್ತಾಗಿ ಮೆದುವಾಗಿರುತ್ತದೆ. ಇದಲ್ಲದೆ ವಾರಕ್ಕೊಮ್ಮೆ ಸ್ಲರಿಯನ್ನು ಡ್ರಿಪ್ಸ್ ಮೂಲಕ ನೀಡಲಾಗುತ್ತಿದೆ.

15೦೦ಲೀಟರ್ ಸಾಮರ್ಥ್ಯದ ಟ್ಯಾಂಕನ್ನು ಇದಕ್ಕಾಗಿ ನಿರ್ಮಿಸಿಕೊಂಡಿದ್ದಾರೆ. ಸ್ಲರಿಗೆಬೇಕಾದ ಸೆಗಣಿಯನ್ನು ಹೈನುಗಾರರಿಂದ ಖರೀದಿಸಲಾಗುತ್ತದೆ. ಉತ್ತಮ ಫಸಲನ್ನು ಪಡೆಯುತ್ತಿದ್ದಾರೆ. ಅವರು ಅಡಿಕೆ ಒಣಗಿಸಿ ಚಾಲೀ ಅಡಿಕೆ ತಯಾರಿಸುವುದಿಲ್ಲ. ಬೇರೆ ಬೇರೆ ತಾಂತ್ರಿಕ ಕಾರಣಗಳಿಂದ ಹಸಿ ಅಡಿಕೆಯನ್ನು ಮಾರಾಟ ಮಾಡುತ್ತಾರೆ. ಫಸಲು, ಗೊಬ್ಬರ ಸಾಗಾಟಕ್ಕೆ ಅನುಕೂಲವಾಗುವಂತೆ ರಸ್ತೆಗಳನ್ನು ನಿರ್ಮಿಸಿಕೊಂಡಿದ್ದಾರೆ.

ಮಿಶ್ರ ಬೆಳೆ ಕಾಳುಮೆಣಸು
ಕೆಲವರು ಅಡಿಕೆ ತೋಟ ಮಾತ್ರ ಮಾಡುತ್ತಾರೆ. ಅಲ್ಲಿ ಮತ್ತೇನು ಇರುವುದಿಲ್ಲ. ಮತ್ತೆ ಕೆಲವು ಕಡೆ ಎಡೆ ಬೆಳೆಯಿರುತ್ತದೆ.
ಇವರು ಮಿಶ್ರ ಬೆಳೆಯಾಗಿ ಕಾಳುಮೆಣಸು ಬೆಳೆಸಿದ್ದಾರೆ. ಬಿಸಿಲು ಬೀಳುವ ಪ್ರದೇಶದಲ್ಲಿ ಅಡಿಕೆ ಮರಗಳು ಬಿಸಿಲಿಗೆ ಹಾನಿಯಾಗದಂತೆ ಕಾಳು ಮೆಣಸು ನೆಟ್ಟರೆ ತೋಟದ ನಾಲ್ಕು ಅಡಿಕೆ ಗಿಡಗಳ ಮಧ್ಯೆ ಸುಮಾರು 15-20 ಅಡಿ ಎತ್ತರದ ಸಿಮೆಂಟ್ ಪೈಪ್ಗಳನ್ನು ಅಳವಡಿಸಿ ಅದಕ್ಕೆ ಕಾಳುಮೆಣಸು ನೆಟ್ಟಿದ್ದಾರೆ. ಅವುಗಳಿಗೆ ಕಾಳುಮೆಣಸು ಬಳ್ಳಿಗಳನ್ನು ನೆಟ್ಟಿದ್ದು ಇಳುವರಿ ನೀಡುತ್ತಿದೆ.

ಇದಲ್ಲದೆ 2೦ ಅಡಿಯ ಪಿವಿಸಿ ಪೈಪು ಅಳವಡಿಸಿ ಅದಕ್ಕೆ ಗೋಣಿಯ ಪಟ್ಟಿ ಸುತ್ತಿ ಕಾಳಮೆಣಸು ಹಬ್ಬುವಂತೆ ಮಾಡಿದ್ದಾರೆ. ಕೃಷಿ ಅವರ ಪ್ರವೃತ್ತಿಯಾದರೂ ಹೊಸ ಯೋಚನೆ, ಪ್ರಯೋಗಗಳು ಯಶಸನ್ನು ಕಂಡಿವೆ. ನಾನು ಮಾಡಿದಂತೆ ಎಲ್ಲರೂ ಮಾಡಬೇಕೆಂದಿಲ್ಲ. ಒಬ್ಬರ ಯೋಚನೆಗಳು ಇನ್ನೊಬ್ಬರಿಗೆ ಸಹ್ಯವಾಗಬೇಕಾಗಿಲ್ಲ. ಇತರರಿಗೆ ಅವುಗಳಿಂದ ಬೇರೆ ಸಮಸ್ಯೆಗಳು ಎದುರಾಗಬಹುದು. ಆದರೆ ನನ್ನ ಹೊಸತನಗಳು ನನಗೆ ಅನುಕೂಲವಾಗಿದೆ ಎನ್ನುತ್ತಾರೆ ಪ್ರತಾಪ್ ಹೆಗ್ಡೆ.

ಕಜ್ಕೆಯಲ್ಲಿ ಕಲ್ಲು ಗಿಡಗಂಟಿಗಳಿಂದ ತುಂಬಿ ಪಾಳುಬಿದ್ದಿದ್ದ ಭೂಮಿಯಲ್ಲಿ ಅಡಿಕೆ ಗಿಡಗಳನ್ನು ನೆಟ್ಟು ಹಸಿರು ಸೃಷ್ಟಿಸಿದ್ದಾರೆ. ಇಳಿಜಾರು ಭೂಮಿಯನ್ನು ಸಮತಟ್ಟು ಗೊಳಿಸಲು ಹೋಗದೆ ಇದ್ದ ರೀತಿಯಲ್ಲೇ ಬಳಸಿಕೊಂಡು ತೋಟ ನಿರ್ಮಾಣ ಮಾಡಿದ್ದಾರೆ. ಗಿಡಗಳಿಗೆ ನೀರುಣಿಸಲು ಡ್ರಿಪ್ಸ್, ಅಳವಡಿಸಿಕೊಂಡಿದ್ದಾರೆ.

ನರ್ಸರಿ
ಅಡಿಕೆ ಹಾಗೂ ಕಾಳುಮೆಣಸು ನರ್ಸರಿ ಮಾಡುವ ಉದ್ದೇಶವನ್ನು ಹೊಂದಿದ್ದು ಈಗಾಗಲೇ ಅದಕ್ಕೆ ಬೇಕಾದ ತಯಾರು ಮಾಡಿಕೊಂಡಿದ್ದಾರೆ. ಗೇರುಬೀಜ ಉದ್ಯಮ ನಡೆಸುತ್ತಿರುವ ಹೆಗ್ಡೆಯವರು ಗ್ರಾಮೀಣ ಜನತೆಗೆ ಉದ್ಯೋಗಾವಕಾಶವನ್ನು ಒದಗಿಸಿದ್ದಾರೆ. ಹಳ್ಳಿ ಪ್ರದೇಶದಲ್ಲಿ ಶಾಲೆಯೊಂದನ್ನು ಮುನ್ನಡೆಸುತ್ತಿದ್ದು ಗ್ರಾಮೀಣ ಭಾಗದ ಹಲವಾರು ವಿದ್ಯಾರ್ಥಿಗಳಿಗೆ ತಮ್ಮ ಪರಿಸರದಲ್ಲಿಯೇ ಉತ್ತಮ ಶಿಕ್ಷಣ ದೊರೆಯಲು ಅನುವು ಮಾಡಿಕೊಟ್ಟಿದ್ದಾರೆ.

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group