-ಹರಿದಾಸ ಬಿ.ಸಿ. ರಾವ್ ಶಿವಪುರ ಹೆಬ್ರಿ
ಸನಾತನ ಭಾರತೀಯ ಸಂಸ್ಕೃತಿಯಲ್ಲಿ ವೇದಗಳ ಕಾಲದಿಂದಲೂ ವೀಳ್ಯದೆಲೆಗೆ ಮಹತ್ವವಿದೆ. ಇದು ನಾಗಲೋಕದಿಂದ ಭೂಲೋಕಕ್ಕೆ ಬಂತು ಎಂಬುದಾಗಿ ನಮ್ಮ ನಂಬಿಕೆ. ಹಾಗಾಗಿ ಇದನ್ನು ನಾಗವಲ್ಲಿ ಎಂದು ಕರೆಯುತ್ತಾರೆ. ಇಂದಿಗೂ ದೇವರ ನೈವೇದ್ಯಕ್ಕೆ ವೀಳ್ಯದೆಲೆ ಅಡಿಕೆ ಬೇಕು. ಇದರಿಂದ ಅಡಿಕೆ ಮತ್ತು ವೀಳ್ಯದೆಲೆಯ ಪ್ರಾಚೀನತೆ ಎಷ್ಟು ಎಂಬುದು ನಮಗೆ ತಿಳಿಯುತ್ತದೆ. ತಾಂಬೂಲ ಎಂಬ ಹೆಸರು ಇದೆ. ಅಡಿಕೆಗೆ ಕ್ರಮಕ ಎಂಬ ಹೆಸರಿದೆ. “ಕ್ರಮಕ, ತಾಂಬೂಲಮ್ ಸಮಾರ್ಪಯಾಮಿ” ಎಂಬುದಾಗಿ ಹೇಳಿ ಅರ್ಪಿಸುತ್ತಾರೆ.
“ವೀಳ್ಯ” ಎಂಬ ಹೆಸರೂ ಇದೆ. ಮದುವೆ ಸಮಾರಂಭದ ಮೊದಲು ಸಂಬAಧ ಗಟ್ಟಿಯಾಗಿ ವಧು-ವರರು ಕಡೆಯವರು ನಿರ್ದಿಷ್ಟ ಸಂಖ್ಯೆಯಲ್ಲಿ ಯಾವಾಗ? ಎಲ್ಲಿ? ಹೇಗೆ? ವರೋಪಚಾರ ಏನು? ಹೀಗೆ ಗುರು-ಹಿರಿಯರಿದ್ದು ನಿಶ್ಚಯಿಸುವ ಕಾರ್ಯಕ್ರಮವಿರುತ್ತಿತ್ತು. ಇದಕ್ಕೆ “ನಿಶ್ಚಿತಾರ್ಥ” ಯಾ ನಿಶ್ಚಲ ತಾಂಬೂಲ ನಿಶ್ಚಲ ಎಂದು ಕರೆಯುತ್ತಿದ್ದರು. ಈಗ ನಮ್ಮ ಆಧುನಿಕತೆಯಿಂದ ಇದನ್ನು ಆಂಗ್ಲ ಭಾಷೆಯ “ಎಂಗೇಜ್ಮೆಂಟ್” ಎಂದು ಕರೆದು ಒಂದು ಸಣ್ಣ ಮದುವೆಯ ತರವೇ ಮಾಡುತ್ತಾರೆ. ಇಲ್ಲಿ ವಿವಾಹದ ಅರ್ಥಕ್ಕಿಂತಲೂ ಆಡಂಬರವೇ ಜಾಸ್ತಿ. ಗರಿಷ್ಠ ಸಂಖ್ಯೆಯ ಜನ ಸೇರುವುದರಿಂದ ಗಡದ್ದು ಊಟೋಪಚಾರವಿರುವುದರಿಂದ, ವಧುವಿನ ಮನೆಯಲ್ಲೇ ಆಗುತ್ತಿದ್ದ ಈ ಶುಭ ಸಂಪ್ರದಾಯ, ಕಲ್ಯಾಣ ಮಂಟಪ, ಹೋಟೆಲುಗಳ ಭವನದಲ್ಲಿ ನಡೆಯುತ್ತದೆ. ಏನು ಮಾಡುವಂತಿಲ್ಲ, ಕಾಲ ಮಹಿಮೆ
ಹರಕೆಯ ಆಟ, ವಾಲಗ, ಅಡುಗೆ, ಕೋಲ ಇನ್ನಿತರ ಕಲಾ ಪ್ರಕಾರಗಳಲ್ಲಿ ಮುಂಗಡ ಧನ ನೀಡಿ ಅವರ ಜವಾಬ್ದಾರಿಯನ್ನು ದೃಢಪಡಿಸುವುದಕ್ಕೆ ವೀಳ್ಯ ಕೊಡುವುದು ಎಂದು ಕರೆಯುತ್ತಾರೆ. ಆದರೆ ಈಗಿನ ಕಾಲದಲ್ಲಿ ಇದು ಅಡ್ವಾನ್ಸ್ ಕೊಡುವುದು ಎಂದು ಕರೆಯಲ್ಪಡುತ್ತದೆ. ಹಿಂದಿನ ಕಾಲದಲ್ಲಿ ವೀಳ್ಯದೆಲೆ ಅಡಿಕೆಯ ಜೊತೆಗೆ ಕೊಟ್ಟು ದೃಢಪಡಿಸುವುದು ಕ್ರಮವಾಗಿತ್ತು.
ಇನ್ನೀಗ ವೀಳ್ಯದೆಲೆಯ ಧಾರ್ಮಿಕ ಮಹತ್ವವನ್ನು ತಿಳಿಯೋಣ
ನಮ್ಮ ಪ್ರಾಚೀನರು ಉಪಯುಕ್ತ ವಸ್ತುಗಳಲ್ಲಿರುವ ದಿವ್ಯತೆಯನ್ನು ಗುರುತಿಸಿ ಅದರಲ್ಲಿ ದೈವಿಪ್ರಜ್ಞೆಯನ್ನು ತಾಳುತ್ತಿದ್ದರು. *ವೀಳ್ಯದೆಲೆಯ ತುದಿಯಲ್ಲಿ ಲಕ್ಷ್ಮಿವಾಸ * ವೀಳ್ಯದೆಲೆಯ ಬಲಭಾಗದಲ್ಲಿ ಬ್ರಹ್ಮದೇವರ ವಾಸ * ವೀಳ್ಯದೆಲೆಯ ಎಡ ಭಾಗದಲ್ಲಿ ಪಾರ್ವತಿ ದೇವಿ ವಾಸ. *. ವೀಳ್ಯದೆಲೆಯ ಸಣ್ಣ ದಂಟಿನಲ್ಲಿ ಮಹಾ ವಿಷ್ಣುವಿನ ವಾಸ. * ವೀಳ್ಯದೆಲೆಯ ಮಧ್ಯದಲ್ಲಿ ಸರಸ್ವತಿ ದೇವಿ * ವೀಳ್ಯದೆಲೆಯ ಹಿಂಭಾಗದಲ್ಲಿ ಚಂದ್ರನ ವಾಸ *. ವೀಳ್ಯದೆಲೆಯಲ್ಲಿ ಎಲ್ಲಾ ಮೂರ್ತಿಗಳಲ್ಲಿ ಮೂತಿ ಶಿವನವಾಸ * ವೀಳ್ಯದೆಲೆಯ ಬುಡದಲ್ಲಿ ಮೃತ್ಯು ದೇವತೆಯ ವಾಸ (ಈ ಕಾರಣಕ್ಕೆ ತಾಂಬೂಲ ಹಾಕಿಕೊಳ್ಳುವಾಗ ಬುಡದ/ತೊಟ್ಟಿನ ಭಾಗವನ್ನು ತೆಗೆದು ಹಾಕಿಕೊಳ್ಳುತ್ತಾರೆ
* ವೀಳ್ಯದೆಲೆಯ ತುದಿ ಭಾಗದಲ್ಲಿ ಅಹಂಕಾರ ದೇವತೆ ಮತ್ತು ದಾರಿದ್ರö್ಯ ದೇವತೆ ಇರುತ್ತಾರೆ. (ಆದುದರಿಂದ ವೀಳ್ಯ ಹಾಕುವಾಗ ತುದಿಯ ಮುರಿದು ಹಾಕುತ್ತಾರೆ, ಅಹಂಕಾರ ಹಾಗೂ ದಾರಿದ್ರö್ಯ ಲಕ್ಷ್ಮಿ ಬರಲೇಬಾರದು ಎಂಬ ಅರ್ಥ) * ವೀಳ್ಯದೆಲೆಯ ಮಧ್ಯಭಾಗದ ನಂತರ ಮನ್ಮಥನ ವಾಸ. ಈ ಎಲ್ಲಾ ದೇವತೆಗಳು ಇರುವುದರಿಂದಲೇ ವೀಳ್ಯದೆಲೆ ತಾಂಬೂಲಕ್ಕೆ ಇಷ್ಟು ಮಹತ್ವ. ದೇವರಿಗೆ ಪೂರ್ವ ಮತ್ತು ಉತ್ತರ ದಿಕ್ಕಿಗೆ ತುದಿ ಬರುವ ತರಹ ಇಟ್ಟು ನೈವೇದ್ಯ ಮಾಡಬೇಕು.
ಯಾರ ಮನೆಯಲ್ಲೇ ತಾಂಬೂಲ ಕೊಟ್ಟರೂ ದೇವರ ಮುಂದೆ ಇಟ್ಟು ನಮಸ್ಕಾರ ಮಾಡಿ ಆನಂತರ ಉಪಯೋಗಿಸಬೇಕು. ಮಂಗಳವಾರ, ಶುಕ್ರವಾರದಂದು ಯಾವುದೇ ಕಾರಣಕ್ಕೂ ವೀಳ್ಯದೆಲೆ ಹೊರಕ್ಕೆ ಹಾಕಬಾರದು. ಹಸಿರಾಗಿರುವ ಅಂದವಾಗಿ ಹಸ್ತದ ಆಕಾರದಲ್ಲಿರುವ ಎಳೆಯ ವೀಳ್ಯದೆಲೆಯು ನೈವೇದ್ಯಕ್ಕೆ ಶ್ರೇಷ್ಠವಾದುದು.
ಹಿಂದೆ ಬಹುತೇಕ ಕೃಷಿಕರು ತಮ್ಮ ಕೃಷಿ ಭೂಮಿಯಲ್ಲಿ ಕೃಷಿ ಮಾಡುತ್ತಿದ್ದರು. ಅಲ್ಲದೆ ವೀಳ್ಯದೆಲೆ, ಸುಣ್ಣ, ಅಡಿಕೆಯೊಂದಿಗೆ ತಾಂಬೂಲ ಸೇವನೆ ಮಾಡುತ್ತಿದ್ದರು. ವೀಳ್ಯದೆಲೆಯ ಬಳ್ಳಿಯನ್ನು ಅಡಿಕೆ ತೋಟ, ತೆಂಗು, ಮಾವು ಮೊದಲಾದ ಮರದ ಕೆಳಗೆ ನೆಡುತ್ತಿದ್ದರು. ಆ ಮರಗಳನ್ನು ಅವಲಂಬಿಸಿ ವೀಳ್ಯದ ಬಳ್ಳಿಯು ಬೆಳದು ಎಲೆ ನೀಡುತ್ತಿತ್ತು. ಆನಂತರ ಸುಮಾರು ಆರು ಅಡಿಗಳ ಗೂಟವನ್ನು ನೆಟ್ಟು ಇಂತಹ ಹತ್ತು ಹಲವು ಗೂಟಗಳ ಮೇಲೆ ಅಡ್ಡ ಮರದ ತುಂಡುಗಳನ್ನು ಇಟ್ಟು ಬೆಳೆಯುತ್ತಿದ್ದರು. ಇದಕ್ಕೆ ಚಪ್ಪರದ ಎಲೆ ಎಂದು ಕರೆಯುತ್ತಾರೆ. ಇದರ ಬೆಳೆಗೆ ಯಾವುದೇ ರಾಸಾಯನಿಕ ಗೊಬ್ಬರ ಬೇಕಾಗಿಲ್ಲ. ಸಾವಯುವ ಗೊಬ್ಬರವೇ ಸಾಕು. ಬೇರೆ ಬೇರೆ ತಳಿಗಳಿವೆ. ಅತ್ಯಂತ ಮೃದುವಾಗಿರುವ ಅಂಬಾಡಿ ಇದೆ. ಕಲ್ಕತ್ತದ ಎಲೆಯೇ ವಿಭಿನ್ನ
ಹಿಂದಿನ ಪ್ರತಿಯೊಬ್ಬ ಕೃಷಿಕನ ಮನೆಯಲ್ಲಿಯೂ ವೀಳ್ಯದೆಲೆಯ ಹರಿವಾಣ ಇರುತ್ತಿತ್ತು. ಊಟೋಪಚಾರದ ನಂತರ ತಾಂಬೂಲದ ವ್ಯವಸ್ಥೆಯೂ ಇತ್ತು. ಆರೋಗ್ಯ ದೃಷ್ಟಿಯಿಂದಲೂ ಇದಕ್ಕೆ ಮಹತ್ವವಿದೆ. ವೀಳ್ಯದೆಲೆ ಜೀರ್ಣಕಾರಿ. ಅಡಿಕೆಗೆ ರೋಗ ನಿರೋಧಕ ಶಕ್ತಿ ಹೆಚ್ಚು. ಸುಣ್ಣದಲ್ಲಿ ಕ್ಯಾಲ್ಸಿಯಂ ಅಂಶವಿದೆ. ವಾಯು ಪ್ರಕೋಪ ನೀಗಿಸುವಲ್ಲಿ ಉಪಯುಕ್ತ. ಆದರೆ ಇಂದಿನ ಯುವ ಜನಾಂಗದಲ್ಲಿ ವೀಳ್ಯದ ಬದಲು ಗುಟ್ಕಾ ಸೇವನೆ ಪ್ರಾರಂಭವಾಗಿದೆ. ಇದು ಆರೋಗ್ಯ ದೃಷ್ಟಿಯಿಂದ ಒಳ್ಳೆಯದಲ್ಲ.
ಮುಂಬೈ, ಬೆಂಗಳೂರು, ಡೆಲ್ಲಿ ಮೊದಲಾದ ಮಹಾನಗರಗಳಲ್ಲಿ “ಪಾನ್ ಶಾಪ್” ನಡೆಸಿ ಇಂದಿಗೂ ಅದೆಷ್ಟೋ ಮಂದಿ ಜೀವನ ಸಾಗಿಸುತ್ತಾರೆ. ಬಹು ಬೆಳೆಯ ಪದ್ಧತಿಯಲ್ಲಿ ವೀಳ್ಯದೆಲೆ ಕೃಷಿ ಮಾಡಿ ವೀಳ್ಯದೆಲೆ ವ್ಯಾಪಾರದಲ್ಲಿ ಇಂದಿಗೂ ಬದುಕು ಕಟ್ಟಿಕೊಂಡವರಿದ್ದಾರೆ.
ಹಿAದೆ ರಾಜ-ರಾಜರ ನಡುವೆ ಯುದ್ಧ ನಡೆಯುವ ಮೊದಲು ವೀಳ್ಯ ಬದಲಾಯಿಸುವ ಕ್ರಮವಿತ್ತು. ಇದಕ್ಕೆ ರಣವೀಳ್ಯ ಎಂದು ಕರೆಯುತ್ತಿದ್ದರು. ಒಟ್ಟಿನಲ್ಲಿ ಭಾರತೀಯ ಕೃಷಿಕನ ಬದುಕಿನ ಅವಿನಾಭಾವ ಸಂಬಂಧ ವೀಳ್ಯದೆಲೆಗೆ ಇದ್ದದ್ದು, ಇರುವುದು ಸತ್ಯ. ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಮಹತ್ವದ ವೀಳ್ಯದೆಲೆ ಇಂದಿಗೂ ತನ್ನ ಮಹತ್ವವನ್ನು ಉಳಿಸಿಕೊಂಡಿದೆ. ಈ ಬೆಳೆಯನ್ನು ಉಳಿಸಿ ಬೆಳೆಸಿಕೊಳ್ಳುವ ದೃಷ್ಟಿಯಲ್ಲಿ ನಮ್ಮ ಕೃಷಿಕರು ಆಸ್ಥೆ, ಆಸಕ್ತಿ ವಹಿಸುವಂತಾಗಲಿ ಎಂಬುದೇ ಈ ಲೇಖನದ ಆಶಯ